ನಾನು ಕ್ಯಾಂಪ್ಕೋದ ಪುತ್ತೂರು ಕಚೇರಿಯಲ್ಲಿ ಮಾರುಕಟ್ಟೆ ಮುಖ್ಯ ವ್ಯವಸ್ಥಾಪಕ. ಮೂಲ ಕಾಸರಗೋಡು ಜಿಲ್ಲೆಯ ಬಾಯಾರು ಸಂಜಕಿಲ. ಐದು ವರುಷಗಳಿಂದ ವೇಣೂರಿನಲ್ಲಿ ವಾಸ. ಅಲ್ಲಿನ ನಂದಿ ಬೆಟ್ಟದ ಐದೆಕ್ರೆಯಲ್ಲಿ ಕೃಷಿ. ಮಡದಿ ನಂದಾ ಭಟ್ ಕಂಪ್ಯೂಟರ್ ಸೈನ್ಸ್ ಬಿಎಸ್ಸಿ ಪದವೀಧರೆ. ಮಗಳು ವಿಧಾತ್ರಿ, ಪಿ.ಯು.ಸಿ. ಮಗ ಅತುಲ್ಯ ತೇಜ, ಐದನೇ ತರಗತಿ.
ನನಗೆ ಕೃಷಿ ಬಾಲ್ಯಾಸಕ್ತಿ. ಹಿರಿಯರ ಕೃಷಿಯನ್ನು ಹತ್ತಿರದಿಂದ ನೋಡುತ್ತಿದ್ದೆ. ಶಾಲೆಗೆ ಹೋಗುತ್ತಿರುವಾಗಲೇ ಹಿರಿಯರಿಗೆ ತಿಳಿಯದಂತೆ ಮರ ಹತ್ತಿ ತೆಂಗು ಕೊಯ್ಯುತ್ತಿದ್ದೆ! ಪದವಿಯ ನಂತರ ಒಂದೆರಡು ವರುಷ ಕೃಷಿಕನಾಗಿದ್ದೆ. ನನ್ನದೇ ತೋಟ ಬೇಕು ಎನ್ನುವುದು ಯೌವನದ ಕನಸು. ಅದು ನನಸಾದುದು ನಲವತ್ತೈದರ ಹರೆಯದಲ್ಲಿ.
ಬೆಳ್ತಂಗಡಿ ಶಾಖೆಯಲ್ಲಿದ್ದಾಗ ತೋಟದ ಹುಡುಕಾಟ ತೀವ್ರಗೊಳಿಸಿದೆ. ಕೊನೆಗೂ ಒಲಿದದ್ದು ಈ ನಂದಿಬೆಟ್ಟ. 2016ರಲ್ಲಿ ಬ್ಯಾಂಕ್ ಸಾಲ ಮಾಡಿ ಖರೀದಿಸಿದೆ. ನಾಲ್ಕೆಕ್ರೆ ಅಡಿಕೆ ತೋಟ. ನಾಲ್ಕು ವರ್ಷದ ಗಿಡಗಳಲ್ಲಿ ಇಳುವರಿ ಸುರುವಾಗಿತ್ತಷ್ಟೇ. ಸಾವಿರದ ಆರುನೂರು ಅಡಿಕೆ ಗಿಡ; ಇಪ್ಪತ್ತೈದು ತೆಂಗಿನ ಮರಗಳು.
ಸ್ವದುಡಿಮೆಯ ವಿಶ್ವಾಸ ಹೊಂದಿದ್ದೆ. ನಂದಾ ಸಾಥ್ ಆದಳು. ಅವಳಿಗೂ ಕೃಷಿಯಲ್ಲೇ ಖುಷಿ. ಮಾಡ್ತಾ ಮಾಡ್ತಾ ಕೃಷಿ ಕಲಿತಳು. ನಾವಿಬ್ಬರೇ ಕೆಲಸ ನಿರ್ವಹಿಸುತ್ತಾ ಬಂದಿದ್ದೇವೆ. ನಂದಾಳೇ ತೋಟದ ಸರ್ವಖಾತೆಗಳ ಸಚಿವೆ.
ಎರಡು ಕೊಳವೆ ಬಾವಿಗಳಿವೆ. ಖರೀದಿಸುವಾಗ ಸ್ಪ್ರಿಂಕ್ಲರ್ ವ್ಯವಸ್ಥೆಯಿತ್ತು. ನಂತರದ ದಿನಗಳಲ್ಲಿ ಸುತ್ತಲೂ ಕೊಳವೆಬಾವಿಗಳು ಜಾಸ್ತಿಯಾಗಿ, ಅಂತರ್ಜಲ ಕೆಳಗಿಳಿಯಿತು. ಹಾಗಾಗಿ ಹನಿ ನೀರಾವರಿಗೆ ಬದಲಾದೆವು.
ಮುಂಜಾವ ಐದು ಗಂಟೆಗೆ ದಿನಚರಿ ಆರಂಭ. ನನ್ನ ಕೃಷಿಕೆಲಸಗಳ ಅವಧಿ ಆರರಿಂದ ಏಳೂವರೆ, ಸಂಜೆ ಆರರಿಂದ ಒಂಭತ್ತು. ಕಚೇರಿ ತಲುಪಿದ ಮೇಲೆ ಮನೆಯ ಯೋಚನೆಯಿಲ್ಲ. ಕೃಷಿ ಕೆಲಸಕ್ಕೆಂದೇ ರಜೆ ಮಾಡಿದ್ದಿಲ್ಲ. ನಂದಾಳೇ ಸೊಗಸಾಗಿ ನಿಭಾಯಿಸುತ್ತಾಳೆ.
ಕಳೆ ತೆಗೆಯಲು ಯಂತ್ರವಿದೆ. ಹೊರೆ ಹೊರಲು ನಾಚಿಕೆಯಿಲ್ಲ. ಹೈನುಗಾರಿಕೆ ಇಲ್ಲ. ಹಟ್ಟಿಗೊಬ್ಬರದ ಬದಲು ಹರಳಿಂಡಿ, ಬೇವಿನಹಿಂಡಿ. ಇವನ್ನು ನಾನು ತೋಟಕ್ಕೆ ಸಾಗಿಸುತ್ತೇನೆ, ನಂದಾ ಬುಡಕ್ಕೆ ಸೇರಿಸುತ್ತಾಳೆ. ಬೋರ್ಡೋ ದ್ರಾವಣ ಸಿಂಪಡಣೆ ಪವರ್ ಸ್ಪ್ರೇಯರ್ ಮೂಲಕ. ಆರಂಭದಲ್ಲಿ ಗಿಡ ಚಿಕ್ಕದಿದ್ದಾಗ ನೆಲದಿಂದಲೇ ಸಿಂಪಡಣೆ ಮಾಡುತ್ತಿದ್ದೆವು. ಈಗ ವಯಸ್ಸಾಯಿತಲ್ಲಾ! ಏಣಿ ಇಟ್ಟು ಮರ ಸಿಂಪಡಿಸುತ್ತೇನೆ. ದಿನಕ್ಕೆನಾಲ್ಕು ಡ್ರಂ, ನಾಲ್ಕೆಕ್ರೆಗೆ ಎಂಟು ಡ್ರಮ್ ಬೋರ್ಡೋ ದ್ರಾವಣ.
ಎರಡು ವರುಷದ ಹಿಂದಿನ ವರೆಗೂ ಅನನುಭವದಿಂದಾಗಿ ಸಿಂಪಡಣೆ ಸರಿಯಾಗುತ್ತಿರಲಿಲ್ಲ. ಕೊಳೆ ರೋಗ ಜೋರಾಗಿತ್ತು. ತೊಂಭತ್ತು ಪಾಲು ಬೆಳೆಯೂ ನೆಲ ಕಚ್ಚುತ್ತಿತ್ತು. ಕಳೆದ ವರುಷ ರೋಗ ಬರಲಿಲ್ಲ. ಉತ್ತಮ ಇಳುವರಿ. ಕೆಲಸಗಳನ್ನು ಮಾಡ್ತಾ ಮಾಡ್ತಾ ಅನುಭವವಾಗುತ್ತದೆ. ಒಮ್ಮೆ ತಪ್ಪಾದರೆ ಮತ್ತೆ ಸರಿಪಡಿಸಬಹುದು.
ಅಡಿಕೆ ಕೊಯ್ಲಿನ ಸಮಯದಲ್ಲಿ ಸ್ವಲ್ಪ ಒತ್ತಡವಾಗುತ್ತದೆ. ಅದನ್ನು ಹಂತಹಂತವಾಗಿ ಹತ್ತು ಹದಿನೈದು ದಿನಗಳಲ್ಲಿ ಮುಗಿಸುತ್ತೇವೆ. ಬೆಳಗ್ಗಿನ ಹೊತ್ತು ಕನಿಷ್ಠ ನೂರು ಮರಗಳಿಂದ ಕೊಯ್ಲು. ನಂದಾ ಹೆಕ್ಕಿ ಗೋಣಿಗೆ ತುಂಬಿಸಿಡುತ್ತಾಳೆ. ಕಚೇರಿಯಿಂದ ಮರಳಿದ ಮೇಲೆ ತಲೆಹೊರೆಯಲ್ಲಿ ಅಂಗಳಕ್ಕೆ ಸಾಗಾಟ. ಹದಿನೈದು ದಿನದಲ್ಲಿ ಅಡಿಕೆ ಅಂಗಳಕ್ಕೆ. ಅಡಿಕೆ ಮಗುಚುವುದು, ಮಳೆಯ ಲಕ್ಷಣವಿದ್ದಾಗ ಹೊದಿಕೆ ಮುಚ್ಚುವುದು ಅವಳ ಜವಾಬ್ದಾರಿ.
ಕತ್ತಲಾಗುವ ತನಕ ತೋಟದ ಕೆಲಸ. ಅಡಿಕೆ ಸುಲಿತಕ್ಕೂ ಇದೇ ಸಮಯ. ಇಬ್ಬರೂ ಮೆಟ್ಟುಕತ್ತಿಯಲ್ಲಿ ಸುಲಿಯುತ್ತೇವೆ. ನಾನು ಗಂಟೆಗೆ ಸುಮಾರು ಎಂಟರಿಂದ ಹತ್ತು ಕಿಲೋ, ಆಕೆ ಅದರರ್ಧ ಸುಲಿಯುತ್ತಾಳೆ. ಕಳೆದ ವರುಷ ನಾವಿಬ್ಬರೇ ಮೂರು ಟನ್ ಸುಲಿದಿದ್ದೇವೆ. ಈ ವರುಷ ಸ್ವಲ್ಪ ಹೆಚ್ಚಾಗಬಹುದು. ನನಗೆ ಈಗ ಪುತ್ತೂರಿಗೆ ವರ್ಗಾವಣೆ ಆಗಿದೆ. ಪ್ರಯಾಣ ಹೆಚ್ಚು ಸಮಯ ನುಂಗುತ್ತಿದೆ.
"ಕೈತುಂಬ ಪಗಾರದ ಉದ್ಯೋಗ ಇದೆ, ಕೃಷಿ ಯಾಕೆ?” ಎಂದು ಅನೇಕರು ಪ್ರಶ್ನಿಸುತ್ತಾರೆ. ಈ ಪ್ರಶ್ನೆ ನಮ್ಮಿಬ್ಬರಲ್ಲಿ ಎಂದೂ ಉದ್ಭವಿಸಿಲ್ಲ. ಕೃಷಿ ಇಲ್ಲದೆಯೂ ಬದುಕಬಲ್ಲೆವು. ಆದರೆ `ಸ್ವದುಡಿಮೆಯ ಕೃಷಿಕ'ನಾಗುವ ಕನಸು ಇತ್ತು.
ನಾನು ಕೃಷಿಕನಾಗಿರುವುದು ನನಗಾಗಿ, ನಮಗಾಗಿ. ಪರಸ್ಪರ ಒಪ್ಪಿಕೊಂಡೇ ಸಮಾರಂಭ, ಮದುವೆಗಳನ್ನು ದೂರವಿಟ್ಟಿದ್ದೇವೆ. ಕೃಷಿ ಕೆಲಸ ಕಡಿಮೆಯಿದ್ದಾಗ ಹೋಗುತ್ತೇವೆ.
ನಂದಾ ಕೃಷಿಕೆಲಸ, ಮನೆವಾರ್ತೆಗಳನ್ನು `ಹೊರೆ'ಯೆಂದು ಕಂಡಿಲ್ಲ. ಆದರೂ ಅವಳಿಗವು ಹೊರೆಯಾಗುತ್ತಿದೆ. ಬ್ಯಾಂಕ್, ಪಂಚಾಯತ್, ಕಚೇರಿ ಓಡಾಟ ಎಲ್ಲವನ್ನೂ ನಿಭಾಯಿಸುತ್ತಾಳೆ. ನಮ್ಮ ಕೃಷಿಯ ಪೂರ್ತಿ ಕ್ರೆಡಿಟ್ ಅವಳಿಗೆ ಸಲ್ಲಬೇಕು. ನಿತ್ಯದ ದಿನಚರಿಗಳನ್ನು ಅವಳೇ ನಿರ್ಧಾರ ಮಾಡಿದ್ದಾಳೆ. ಬೇಕಾದಾಗ ವೈವಿಧ್ಯಮಯ ಖಾದ್ಯಗಳನ್ನೂ ಮಾಡುತ್ತಾಳೆ.
ನಮ್ಮ ಅನುಭವದ ಪ್ರಕಾರ ಗಂಡ-ಹೆಂಡತಿ ಸುಮಾರು ಎಂಟು ಎಕ್ರೆ ತೋಟವನ್ನು ನಿಭಾಯಿಸಬಹುದು. ದುಡಿಯುವ ಉತ್ಸಾಹ ಬೇಕಷ್ಟೇ. ಇಪ್ಪತ್ತೈದರ ಹರೆಯದಲ್ಲಿ ತೋಟದ ಜವಾಬ್ದಾರಿ ಬರಬೇಕು. ಹಾಗಾದರೆ, ಕ್ರಮೇಣ ಉತ್ತಮ ಕೃಷಿಕನಾಗಲು ಸಾಧ್ಯ. ಸ್ವಾನುಭವವೇ ಪಥದರ್ಶಕವಾಗುತ್ತದೆ.
ನನ್ನದು ಉತ್ತಮ ಅಲ್ಲದಿದರೂ, ಕಾರ್ಮಿಕರ ಹಂಗಿಲ್ಲದ ಕೃಷಿ. ತೋಟಕ್ಕಾಗಿ ಮಾಡಿದ ಸಾಲವಿದೆ. ಅದೆಲ್ಲಾ ತೀರಿದ ಮೇಲೆ ಕೆರೆ ಅಭಿವೃದ್ಧಿಯಂತಹ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು.
"ಲಾಭ ಇಲ್ಲದೆ ದುಡಿದು ಏನು ಫಲ' ಎಂದು ಹಲವರು ಕೇಳುತ್ತಾರೆ. ಉತ್ತರ ಸರಳ. ಅಡಿಕೆ ಸುಲಿತದಲ್ಲಿ ಇಪ್ಪತ್ತೈದು ಸಾವಿರ ರೂಪಾಯಿ ಉಳಿತಾಯ ಆಗುತ್ತದೆ. ಒಬ್ಬ ಆಳನ್ನು ಕೆಲಸಕ್ಕಿಟ್ಟುಕೊಂಡರೆ ದಿನಕ್ಕೆ ಕನಿಷ್ಠ ಐನೂರು ರೂಪಾಯಿ ಸಂಬಳ ಎಂದಿಟ್ಟುಕೊಳ್ಳಿ. ವರುಷಕ್ಕೆ ಲೆಕ್ಕ ಹಾಕಿ. ಅವರು ಮಾಡುವುದಕ್ಕಿಂತ ಹೆಚ್ಚು ಕೆಲಸ ನಾವಿಬ್ಬರು ಮಾಡುತ್ತೇವೆ. ನಮ್ಮ ಎಲ್ಲ ಶ್ರಮವನ್ನೂ ಹೀಗೆ ಲೆಕ್ಕ ಹಾಕಿ ನೋಡಿ.
ನನ್ನ ಸಂಪರ್ಕ ಸಂಖ್ಯೆ : 94819 17608 (ಸಂಜೆ 7 ರಿಂದ 9)
(ನಿರೂಪಣೆ : ಅಡಿಕೆ ಪತ್ರಿಕೆ)
-------------------------------------------------------------------------------------------------------------
ಕೃಷಿಯೂ ಒಂದು ಜಾಬ್! : - ನಂದಾ ಗೋವಿಂದ ಭಟ್
ನನ್ನ ಗಂಡನಿಗೆ ನಾಗಪುರ, ಬೀರೂರು, ಮುಂಬಯಿ ಹಾಗೂ ಕರ್ನಾಟಕದ ವಿವಿಧ ಭಾಗಗಳಿಗೆ ವರ್ಗಾವಣೆಯಾಗುತ್ತಿತ್ತು. ಮಕ್ಕಳ ಬೆಳವಣಿಗೆ, ವಿದ್ಯಾಭ್ಯಾಸಗಳಿಗೆ ಸಹಜವಾಗಿ ತೊಡಕಾಗುತ್ತಿತ್ತು. ಮಕ್ಕಳು ಶಾಲೆಗೆ ಹೋಗುವ ಹಂತಕ್ಕೆ ಬೆಳೆದಾಗ ಏಕಾಂಗಿಯಾಗಿ ಮನೆಯಲ್ಲಿ ಉಳಿಯಬೇಕಾಗುತ್ತಿತ್ತು. ಮನಸ್ಸಿಗೊಂದು ಕೆಲಸ ಬೇಕಿತ್ತು. ಆ ಹೊತ್ತಿಗೆ ಪತಿ ಬೆಳ್ತಂಗಡಿಯಲ್ಲಿ ಸೇವೆಯಲ್ಲಿದ್ದಾಗ ಈ ಜಾಗ ತೆಕ್ಕೊಂಡ್ರು.
ನನಗೂ ಉದ್ಯೋಗ ಬೇಕಿತ್ತು. ಯಾವ ಉದ್ಯೋಗ? ಬೇರೆಡೆ ಕೆಲಸ ಮಾಡಲು ಒಗ್ಗದು. ಮನಸ್ಸಿನ ಖುಷಿಗಾಗಿ 'ಕೃಷಿ' ಆಯ್ಕೆ ಮಾಡಿದೆ. ಟೀಚರ್, ಉಪನ್ಯಾಸಕರು, ಮ್ಯಾನೇಜರ್ ಏನೇ ಇರಲಿ.. ಇವೆಲ್ಲಾ ಒಂದು 'ಜಾಬ್' ಆಗಿರುವಾಗ 'ಕೃಷಿಯೂ ಒಂದು ಜಾಬ್' ಯಾಕಲ್ಲ?
ತವರು ಮನೆಯಲ್ಲಿದ್ದಾಗ ಕೃಷಿ ಕೆಲಸ ನೋಡಿ ಗೊತ್ತಿತ್ತು. ಆರಂಭದಲ್ಲಿ ತೋಟಕ್ಕೆ ಹೋಗಲು ಹೆದರಿಕೆಯಾಗುತ್ತಿತ್ತು. ಈಗ ಅಭ್ಯಾಸವಾಗಿದೆ. ಪತಿ ಮಾಡುತ್ತಿದ್ದ ಕೆಲಸಗಳನ್ನು ನೋಡಿ, ಆಲೋಚಿಸಿ ಮಾಡುತ್ತಿದ್ದೆ. ತಪ್ಪಾಗುತ್ತಿತ್ತು. ತಪ್ಪು ಅಂತ ಗೊತ್ತಾದಾಗ ಸರಿಪಡಿಸಿಕೊಳ್ಳುತ್ತಾ ಕೆಲಸಗಳನ್ನು ಕಲಿತೆ.
ಗಂಡ ಕಚೇರಿಗೆ ಹೋದ ಮೇಲೆ
ನಾನೊಬ್ಬಳೇ. ಹಾಗೆಂದು ಏಕಾಂತತೆ ಬಾಧಿಸುವುದಿಲ್ಲ.
ಮಕ್ಕಳು ಶಾಲೆಗೆ ಹೋದ ಮೇಲೆ
ನಾನು ತೋಟಕ್ಕೆ ಹೋಗುತ್ತೇನೆ. 'ಕೃಷಿ
ವೃತ್ತಿ'ಯಲ್ಲಿ ತುಂಬಾ ಖುಷಿಯಿದೆ.
ಮಾನಸಿಕ ನೆಮ್ಮದಿಯಿದೆ. ಬೇರೆ ಯೋಚನೆಗಳು ಹುಟ್ಟುವುದಿಲ್ಲ.
ಇದೆಲ್ಲಾ ಆದರ್ಶಕ್ಕಾಗಿ ಮಾಡಿದ್ದಲ್ಲ. ನಮಗಾಗಿ, ಇಷ್ಟಪಟ್ಟು, ಮಾನಸಿಕ
ಖುಷಿಗಾಗಿ ಮಾಡಿದ್ದು.''
0 comments:
Post a Comment