“ನಮ್ಮ ಶಾಲೆಯ ಮಕ್ಕಳು ಶೀತ, ಜ್ವರ, ತಲೆನೋವಿನಂತಹ ಚಿಕ್ಕಪುಟ್ಟ ಅಸ್ವಸ್ಥತೆಗೆ ಆಸ್ಪತ್ರೆಗೆ ಹೋಗೋದೇ ಇಲ್ಲ. 'ಕಷಾಯ ಮಾಡಿ ಕೊಡಿ' ಅಂತ ಮಕ್ಕಳೇ ಹೇಳುತ್ತಾರೆ. ಕಾಳುಮೆಣಸು, ಶುಂಠಿ, ದೊಡ್ಡಪತ್ರೆ, ಬಜೆ ಸೇರಿಸಿ ಮಾಡಿದ ಕಷಾಯ ಸೇವನೆಯಿಂದ ಒಂದೆರಡು ದಿವಸದಲ್ಲಿ ಸರಿಹೋಗುತ್ತಾರೆ.” ಗಜಾನನ ಎಂ.ಎನ್. ಅವರ ಅಭಿಮಾನದ ಮಾತು.
ಗಜಾನನ ನೀರೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು. ಇದು ಇರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ. ಇಲ್ಲಿರುವುದು ಒಂದರಿಂದ ಐದರ ತನಕದ ತರಗತಿ. ಇಪ್ಪತ್ತಾರೇ ವಿದ್ಯಾರ್ಥಿಗಳು. ಶಾಲೆ ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. ಹೊಸನಗರ-ಸಾಗರ ಮಾರ್ಗದಲ್ಲಿ ಹೊಸನಗರದಿಂದ ನೀರೇರಿಗೆ ಹದಿನೈದು ಕಿಲೋಮೀಟರ್ ದೂರ. ನೀರೇರಿಯು ಐವತ್ತೈದು ಮನೆಗಳಿರುವ ಹಳ್ಳಿ.
ಕಿರು ವಯಸ್ಸಿನಲ್ಲಿ ಮಕ್ಕಳಿಗೆ ಹಿರಿ ಜ್ಞಾನದ ಹಾದಿಯನ್ನು ತೋರಿಸುವ ಪ್ರಯತ್ನ ಇಲ್ಲಾಗುತ್ತಿದೆ. ಐದನೇ ತರಗತಿ ಮುಗಿಸಿ ಟಿಸಿ ಒಯ್ಯುವಾಗ ಒಂದಷ್ಟು ಗಿಡ, ಸಸ್ಯ, ಬೇರು, ಅವುಗಳ ಹೆಸರುಗಳು, ಬಳಕೆಗಳ ಜ್ಞಾನವನ್ನು ಕೂಡಾ ಜತೆಗೆ ಒಯ್ಯುತ್ತಾರೆ. ಎಂದರು ಗಜಾನನ.
ಮಕ್ಕಳ ಮಧ್ಯಾಹ್ನದ ಬಿಸಿಯೂಟದಲ್ಲಿ ಸೊಪ್ಪುಗಳ ಬಳಕೆ ಗಣನೀಯ. ಬಸಳೆ, ಗಿಡ ಬಸಳೆ, ಗುಡ್ಡೆ ದಾಸವಾಳ, ಗಂಧ, ಸೊರಲೆ, ಕಿರಾತಕ ಕಡ್ಡಿ, ಲಕ್ಕಿಗಿಡ, ತುಳಸಿ, ಪತ್ರೆ, ಮಜ್ಜಿಗೆ ಹುಲ್ಲು, ಹಿಪ್ಪಲಿ, ಮಧುನಾಶಿನಿ, ಕಾಮಕಸ್ತೂರಿ, ಚಕ್ರಮುನಿ, ಅರಶಿನ, ಸರ್ಪಗಂಧಿ, ಒಂದೆಲಗ... ಹೀಗೆ ಇಪ್ಪತ್ತಕ್ಕೂ ಮಿಕ್ಕಿ ಸಸ್ಯಗಳ ಪತ್ರೆಗಳು ಸಾಂಬಾರು, ಚಟ್ನಿ ಮೂಲಕ ಆಹಾರವಾಗಿ ಮಕ್ಕಳ ಉದರ ಸೇರುತ್ತಿದೆ.
ಸೂಪಜ್ಞರಾದ ಸಾವಿತ್ರಿ ಅಮ್ಮ ಮತ್ತು ಕೊಲ್ಲಮ್ಮ ಸಹೋದರಿಯರಿಗೆ ಮಕ್ಕಳೆಂದರೆ ಪ್ರೀತಿ. ಅವರೇ ಸೊಪ್ಪುಗಳನ್ನು ಆಯ್ಕೆ ಮಾಡಿಕೊಂಡು ಅಡುಗೆಯಲ್ಲಿ ಬಳಸುತ್ತಾರೆ. ಇಲ್ಲಿರುವ ಔಷಧೀಯ ಸಸ್ಯಗಳ ಗುಣವನ್ನರಿತು ಕನಿಷ್ಠ ವಾರಕ್ಕೆರಡು ಬಾರಿ ಇಂತಹ ಅಡುಗೆ ತಯಾರಿಸುತ್ತರೆ. ಮಕ್ಕಳೂ ಇಷ್ಟ ಪಡುತ್ತಾರೆ. ಜತೆಜತೆಗೆ ಎರಡು-ಮೂರು ದಿನಕ್ಕೊಮ್ಮೆ ಕಷಾಯವೂ ಕೂಡಾ.
ಗಿಡಗಳನ್ನು ನಿರ್ವಹಿಸಲು ಮಕ್ಕಳ ತಂಡಗಳಿವೆ. ಇವರಿಗೆ ಕಳೆ ತೆಗೆಯುವ, ಕಸ ಹೆಕ್ಕುವ, ಗುಡಿಸುವ.. ಕೆಲಸಗಳ ಹೊಣೆ. ನಿತ್ಯ ಕೆಲಸ ಮಾಡುತ್ತಾ, ಗಿಡಗಳೆದುರು ಹಾಕಿದ ನಾಮಫಲಕ ನೋಡುತ್ತಾ ಕೆಲಸ ಮಾಡುತ್ತಾರೆ. ಸಸ್ಯಗಳ ಪರಿಚಯ ನಾಲಿಗೆ ತುದಿಗೆ ಬಂದಿರುತ್ತದೆ. ಶಾಲೆಗೆ ಅತಿಥಿಗಳು ಬಂದಾಗ 'ಲೆಮನ್ ಟೀ'ಯೊಂದಿಗೆ ಸ್ವಾಗತ. ಮಕ್ಕಳೇ ಶಾಲಾವರಣದ ಹಸಿರು ಲೋಕವನ್ನು ಅತಿಥಿಗಳಿಗೆ ಪರಿಚಯಿಸುತ್ತಾರೆ.
ಪರಿಸರ ಅಧ್ಯಯನ ಪಠ್ಯದಲ್ಲಿ ಹಸಿರು, ಗಿಡ, ಪರಿಸರ ಮೊದಲಾದ ಪಾಠಗಳಿವೆ. ಇಲ್ಲಿ ಪ್ರಾಕ್ಟಿಕಲ್ ಆಗಿರುವುದರಿಂದ ಮಕ್ಕಳಿಗೆ ಪಾಠ ಬಹುಬೇಗ ಅರ್ಥವಾಗುತ್ತದೆ. ಎಂದರು ಮುಖ್ಯ ಗುರು.
ಶಿವಮೊಗ್ಗದ 'ಪರಿಸರ ಮಿತ್ರ' ಸಂಸ್ಥೆಯು ಹಸಿರಿನ ಅರಿವನ್ನು ಮೂಡಿಸುತ್ತಿರುವ ಶಾಲೆಗಳಿಗೆ ಪ್ರಶಸ್ತಿ ನೀಡುತ್ತಿದೆ. 2010ರಲ್ಲಿ ಪ್ರಶಸ್ತಿಯ ಪ್ರಸ್ತಾಪ ಬಂದಾಗ ಶಾಲೆಯ ಪರಿಸರ ಬರಡಾಗಿತ್ತು. ಮುಖ್ಯ ಗುರುವಿಗೆ ನಿರಾಶೆ. ಅಲಂಕಾರಿಕ ಹಾಗೂ ಔಷಧೀಯ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪಕ್ಕೆ ಬೀಜಾಂಕುರ.
ಸಂಕಲ್ಪ ಮಾಡಿದಾಗ ಕೈತೋಟ, ಧನ್ವಂತರಿ ವನದ ಕಲ್ಪನೆಯೇ ಇದ್ದಿರಲಿಲ್ಲ. ನೋಡಿ ಬರೋಣ ಎಂದರೆ ಹಸಿರೆಬ್ಬಿಸಿರುವ ಶಾಲೆಗಳೂ ಇದ್ದಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ. ನರ್ಸರಿಗಳಿಗೆ ಭೇಟಿ ನೀಡಿದರು. ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರು. ತನ್ನ ಮನೆಯಲ್ಲಿದ್ದ ಗಿಡಗಳನ್ನು ತಂದು ನೆಟ್ಟರು. ಇವರ ಆಸಕ್ತಿಯನ್ನು ನೋಡಿ ಕೆಲವರು ಗಿಡ ನೀಡಿದರು. ಮಕ್ಕಳ ಹೆತ್ತವರೂ ಸ್ಪಂದಿಸಿದರು. ನಿರಂತರ ಶ್ರಮದಿಂದ ಹತ್ತೇ ವರುಷದಲ್ಲಿ ಇನ್ನೂರಕ್ಕೂ ಮಿಕ್ಕಿ ಔಷಧೀಯ ಸಸ್ಯಗಳ ತಿಜೋರಿ ಶಾಲೆಯಲ್ಲಿ ವೃದ್ಧಿಯಾಯಿತು. ಶಾಲೆಯ ಮುಂಭಾಗ ಅಲಂಕಾರಿಕ ಗಿಡಗಳಿಗೆ, ಹಿಂಭಾಗ ಔಷಧೀಯ ಗಿಡಗಳಿಗೆ ಜಾಗ ಮೀಸಲು.
ಗಿಡಗಳನ್ನು ನೆಡುವ, ಕಳೆ ಕೀಳುವಂತಹ ಶ್ರಮದ ಕೆಲಸಗಳನ್ನು ಶ್ರಮದಾನದ ಮೂಲಕ ಮಕ್ಕಳ ಹೆತ್ತವರು ಮಾಡುತ್ತಾರೆ. ಎಲ್ಲರೂ ಅನ್ಯಾನ್ಯ ಕೆಲಸಗಳಿಗೆ ಹೋಗುವ ಕಾರಣ ಸಂಜೆಯ ಬಳಿಕವೇ ಶ್ರಮದಾನ. ವರುಷದಲ್ಲಿ ನಾಲ್ಕು ದಿವಸ ಇಂತಹ ಶ್ರಮದಾನಕ್ಕೆ ಮೀಸಲು. ಮಕ್ಕಳ ಹೆತ್ತವರೊಂದಿಗೆ ಶಾಲಾಭಿವೃದ್ಧಿ ಸಮಿತಿಯೂ ಕೈಜೋಡಿಸುತ್ತಿದೆ. ಅಧ್ಯಾಪಕರು, ಮಕ್ಕಳು ಅವಶ್ಯ ಬಿದ್ದರೆ ಗಂಟೆ, ರಜೆ ನೋಡದೆ ಶಾಲೆಯಲ್ಲಿರುತ್ತಾರೆ. ಸರ್. ನಮ್ಮದು ಬಾಗಿಲು ಹಾಕದ ಶಾಲೆ ಎಂದರು ಗಜಾನನ.
ಎರಡೆಕ್ರೆ ವಿಸ್ತೀರ್ಣದ ಶಾಲೆಯ ಆವರಣದಲ್ಲಿ ಮುಕ್ಕಾಲು ಎಕ್ರೆಯಷ್ಟು 'ಧನ್ವಂತರಿ ವನ'ವಿದೆ. ಔಷಧೀಯ ಗಿಡಗಳಲ್ಲಿ ಅವುಗಳ ಹೆಸರನ್ನು ಪರಿಚಯಿಸುವ ಚಿಕ್ಕ ಫಲಕಗಳು. ಇದನ್ನು ಕೆನರಾ ಬ್ಯಾಂಕ್ ಪ್ರಾಯೋಜಿಸಿದೆ. ದಾನಿಯೊಬ್ಬರು ಕೊಳವೆಬಾವಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ನೆರೆಕರೆಯ ಮನೆಗಳಿಗೆ, ಅಂಗನವಾಡಿಗೆ ಅಗತ್ಯಬಿದ್ದಾಗ ಜಲದಾನ ಮಾಡುತ್ತಾರೆ. ಔಷಧೀಯ ವನಕ್ಕೆ ಹನಿ ನೀರಾವರಿ, ಅಲಂಕಾರಿಕ ಉದ್ಯಾನಕ್ಕೆ ಸ್ಪ್ರಿಂಕ್ಲರ್ ವಿಧಾನದಲ್ಲಿ ನೀರಾವರಿ.
ಆಯುರ್ವೇದ ವೈದ್ಯರಾದ ಶಿವಮೊಗ್ಗದ ಡಾ.ಮೈಥಿಲಿ ಹಾಗೂ ಸ್ಥಳೀಯ ಡಾ.ಗೀತಾ ಇವರು ಪ್ರತಿ ಗಿಡಗಳ ಬಳಕೆ, ಸಸ್ಯಶಾಸ್ತ್ರೀಯ ಹೆಸರುಗಳು ಹಾಗೂ ಇಂಗ್ಲಿಷ್, ಕನ್ನಡ, ಸಂಸ್ಕೃತದ ಹೆಸರುಗಳ ದಾಖಲಾತಿಗೆ ಸಹಕರಿಸಿದ್ದಾರೆ.
ಹಲವು ಶಾಲೆಗಳು ಇಲ್ಲಿಂದ ಔಷಧೀಯ, ಅಲಂಕಾರಿಕ ಸಸ್ಯಗಳ ಕಟ್ಟಿಂಗ್ಗಳನ್ನು ಒಯ್ದಿದ್ದಾರೆ. ಮುಖ್ಯವಾಗಿ ಹಡ್ಲಬೈಲು, ಆನೆಗದ್ದೆ ರಸ್ತೆ, ಪಂಡರಹಳ್ಳಿ ಕ್ಯಾಂಪ್... ಶಾಲೆಗಳು ನೀರೇರಿ ಶಾಲೆಯನ್ನು ಅನುಸರಿಸಿದೆ. ನಿಗಾವಹಿಸಿ ಸಲಹಿದ್ದಾರೆ. ಅಲ್ಲಿನ ಮಕ್ಕಳಿಗೆ ನಮ್ಮ ಶಾಲೆ ಪ್ರೇರಣೆ ನೀಡಿದ್ದು ಖುಷಿಯಾಗುತ್ತಿದೆ. ಎನ್ನುತ್ತಾರೆ.
“ ಯಾವ ಪ್ರಶಸ್ತಿಯ ಹಿನ್ನೆಲೆಯಲ್ಲಿ ಹಸಿರೆಬ್ಬಿಸುವ ಕೆಲಸ ಶುರುವಾಯಿತೋ ಆ 'ಧನ್ವಂತರಿ ಪ್ರಶಸ್ತಿ'ಯನ್ನು ಪಡೆದುಕೊಂಡಾಗ ಮಕ್ಕಳೊಂದಿಗೆ ನಾನೂ ಖುಷಿ ಪಟ್ಟೆ. ಈ ಕೀರ್ತಿ ಎಲ್ಲವೂ ಮಕ್ಕಳಿಗೆ, ಮಕ್ಕಳ ಹೆತ್ತವರಿಗೆ ಸಲ್ಲಬೇಕು,” ಗಜಾನನ ಬೊಟ್ಟು ಮಾಡುತ್ತಾರೆ, ಪಟಪಟನೆ ಹೇಳುವುದಕ್ಕೆ ಮಕ್ಕಳಿಗೆ ಕಷ್ಟವಾಗಬಹುದು. ಅವರ ಮನೆಗಳಲ್ಲಿ ಕೂಡಾ ಹಸಿರಿನ ಪ್ರೀತಿ, ಅವುಗಳನ್ನು ಬೆಳೆಸುವ ಮನಃಸ್ಥಿತಿ ರೂಪುಗೊಂಡಿದೆ.
ಸರಕಾರಿ ಶಾಲೆಯ ಬಗ್ಗೆ ಹಗುರವಾಗಿ ಮಾತನಾಡುವವರು ಒಮ್ಮೆ ನೀರೇರಿ ಶಾಲೆಯನ್ನು ಭೇಟಿ ಮಾಡಬೇಕು. 'ಇದು ನಮ್ಮದು' ಎನ್ನುವ ಇಚ್ಛಾಶಕ್ತಿ ಇದ್ದರೆ ಸರಕಾರಿ ಶಾಲೆಯೂ ಹೇಗೆ ಮಾದರಿ ಆಗಬಹುದು ಎಂಬುದನ್ನು ನೀರೇರಿ ತೋರಿಸಿಕೊಟ್ಟಿದೆ.
ಗಜಾನನ ಎಂ.ಎನ್. 95415 52224
* ಔಷಧೀಯ ಗಿಡಗಳ ಒಣ ಎಲೆಗಳನ್ನು ಲ್ಯಾಮಿನೇಶನ್ ಮಾಡಿ ಕಾಪಿಡುವ ಯೋಜನೆ ಆರಂಭವಾಗಿದೆ. * ಚಿಕ್ಕು, ಸೀತಾಫಲ, ಪೇರಳೆ, ಬಾಳೆ ಹಣ್ಣುಗಳು ಮಕ್ಕಳ ಹೊಟ್ಟೆ ತಂಪು ಮಾಡುತ್ತಿವೆ. * ಹೆತ್ತವರು ನೀಡಿವ ಪಾಕೆಟ್ ಮನಿಯು 'ಮಕ್ಕಳ ಬ್ಯಾಂಕ್'ನಲ್ಲಿ ಸಂಗ್ರಹ. * ಸೋಲಾರ್ ಚಾಲಿನ ನೀರಿನ ಪಂಪ್ * ಗ್ರಂಥಾಲಯ * ಆಮೆ-ಮೀನು ಸಾಕಣೆ.
(ಅಡಿಕೆ ಪತ್ರಿಕೆ
/ ಫೆಬ್ರವರಿ / 2022 ಪ್ರಕಟಿತ)
0 comments:
Post a Comment