ಅದು ತೆಂಗಿನ ಕಡ್ಡಿಗಳ ಬುಟ್ಟಿ ಎಂದರೆ ಯಾರೂ ನಂಬಲಾರರು. ಯಂತ್ರನೇಯ್ಗೆ ಮಾಡಿದಷ್ಟು ಅಂದ. ಮನೆಗೊಯ್ಯೋಣ ಅನ್ನುವಂತಹ ಮೋಹಕ ಕರಕಶಲತೆ.
ಇದು ಹಾಲಗಾರು ವೆಂಕಟೇಶಮೂರ್ತಿ ವಿ.ಎಸ್. ಅವರ ಕೈಚಳಕ. ಮೂರ್ತಿ ಶೃಂಗೇರಿ ಸನಿಹದವರು. ಶೃಂಗೇರಿಯಿಂದ ಇವರ ಕಲಾಗೃಹ ಎಂಟು ಕಿಲೋಮೀಟರ್ ದೂರ. “ಆರಂಭಕ್ಕೆ ನನಗಾಗಿ ಮಾಡಿದೆ. ತುಂಬಾ ಮಂದಿ ಮೆಚ್ಚಿದರು. ಬೇಡಿಕೆಯಿತ್ತರು'' ಎಂದು ನೆನೆಯುತ್ತಾರೆ.
ಇವರು ಅಡಿಕೆ ಕೃಷಿಕರು. ವೃತ್ತಿಯ ಅಗತ್ಯಕ್ಕಾಗಿ ಬಿದಿರಿನ ಬುಟ್ಟಿ ಹೆಣೆಯುತ್ತಿದ್ದರು. ತೆಂಗಿನ ಮಡಲಿನ (ಗರಿ) ಕಡ್ಡಿಗಳ ಬುಟ್ಟಿ ಇವರದೇ ಮೆದುಳಮರಿ. ಮೊದಲ ಯತ್ನದಲ್ಲೇ ಸಫಲ. ನಾಲ್ಕು ವರ್ಷದಲ್ಲಿ ನಾನೂರಕ್ಕೂ ಹೆಚ್ಚು ಮನಮೋಹಕ ಬುಟ್ಟಿ ಹೆಣೆದು ಮಾರಿದ್ದಾರೆ.
ಪೂಜೆಗೆ ಹೂ ಕೊಯ್ಯಲು, ದೇವಸ್ಥಾನಕ್ಕೆ ಹೂ -ಹಣ್ಣುಕಾಯಿ ಕೊಂಡೊಯ್ಯಲು, ಶುಭ ಸಮಾರಂಭಗಳಲ್ಲಿ ಬಳಸಲು, ಶೋ ಕೇಸಿನಲ್ಲಿ ಅಲಂಕಾರಕ್ಕಾಗಿ ಇಡಲು - ಬೇರೆಬೇರೆ ಉದ್ದೇಶಕ್ಕೆ ಪ್ರತ್ಯೇಕ ವಿನ್ಯಾಸ. ಇವನ್ನು ಸಂಮಾನ ಸಮಾರಂಭಗಳಲ್ಲೂ ಉಪಯೋಗಿಸಬಹುದು. ಆರು ಸುಲಿದ ತೆಂಗಿನಕಾಯಿ ಹಿಡಿಸುವಂಥ ಬುಟ್ಟಿಯನ್ನೂ ಮಾಡುತ್ತಾರೆ.
ಮರ ಏರಿ ಇಡಿ ಹಸಿ ಮಡಲು - ತೆಂಗಿನ ಗರಿ - ಕತ್ತರಿಸಿ ತರುತ್ತಾರೆ. ಕಡ್ಡಿಗಳನ್ನು ಬೇರ್ಪಡಿಸಿದ ನಂತರ ಚಾಕುವಿನಿಂದ ಉಳಿದಿರುವ ಜುಂಗುಗಳ ಕ್ಷೌರ. ಮತ್ತೆ ಸ್ನಾನ. ಈಗ ಬುಟ್ಟಿ ತಯಾರಿಯ ಕಚ್ಚಾವಸ್ತು ಸಿದ್ಧ.
“ನೀರು ನಿಂತು ಕಡ್ಡಿಗಳು ಕಪ್ಪಾಗಿರುವುದೂ ಇದೆ. ಅವನ್ನು ಚೂರಿ ಬಳಸಿ ಕ್ಲೀನ್ ಮಾಡದಿದ್ದರೆ ಬುಟ್ಟಿಗಳು ಅಂದಗೆಡುತ್ತದೆ. ಹಳದಿಯಾದ ಮಡಲಿನ ಕಡ್ಡಿ ಬಲಹೀನ. ಹಸಿ ಮಡಲಿನವೇ ಬೇಕು. ಅವು ಬೇಕಾದಂತೆ ಬಾಗುತ್ತವೆ, ತುಂಡಾಗುವುದಿಲ್ಲ, ಬೊಟ್ಟು ಮಾಡುತ್ತಾರೆ” ಮೂರ್ತಿ.
ಕಡ್ಡಿಗಳ ಉದ್ದ ಹೊಂದಿ ಬುಟ್ಟಿಗಳ ಗಾತ್ರ ನಿರ್ಧಾರ. ಸಣ್ಣ ಬುಟ್ಟಿಗೆ ನೂರು ಕಡ್ಡಿ, ದೊಡ್ಡದಕ್ಕೆ 150 -170 ಬೇಕು. ಒಂದು ಬುಟ್ಟಿ ಹೆಣೆಯಲು ಮೂರು ಗಂಟೆ ಬೇಕು. ತುಂಬಾ ತಾಳ್ಮೆ ಮತ್ತು ನಾಜೂಕಿನ ಕೆಲಸ. ಕಡ್ಡಿಯನ್ನು ರೆಡಿ ಮಾಡಿ ಕೊಡುವವರಿದ್ದರೆ, ದಿನಕ್ಕೆ ಮೂರು ಬುಟ್ಟಿ ಹೆಣೆಯುತ್ತಾರೆ. ಬಳಿಕ ಟಚ್ವುಡ್ ಲೇಪನ.
ಖಾಯಂ ಸಹಾಯಕರಿಲ್ಲ. ಬೇಡಿಕೆ ಹೊಂದಿ ತಯಾರಿ. ಕನಿಷ್ಠ ಮೂರು ದಿನ ಸಮಯಾವಕಾಶ ಬೇಕು. ನೀರು ಸೋಕಿದರೂ ಅದನ್ನು ಬುಟ್ಟಿ ಎಳೆಯುವುದಿಲ್ಲ. ಎಚ್ಚರದಿಂದ ಬಳಸಿದರೆ, 2 - 3 ಮೂರು ವರ್ಷ ಬರಬಹುದು.
“ಸಣ್ಣ ಬುಟ್ಟಿಗೆ ಇನ್ನೂರು, ದೊಡ್ಡದಕ್ಕೆ ಮುನ್ನೂರು ರೂಪಾಯಿ ದರ. ನಮ್ಮದು ಹಳ್ಳಿ ಅಲ್ವಾ. ರೇಟ್ ಹೇಳಲು ಮುಜುಗರವಾಗುತ್ತದೆ. 'ನೀವೇ ಕೊಡಿ' ಅನ್ನುವುದೇ ಹೆಚ್ಚು. ಬುಟ್ಟಿಯ ಅಂದ ನೋಡಿ ಐನೂರು, ಅದಕ್ಕ್ಕೂ ಹೆಚ್ಚು ರೊಕ್ಕ ನೀಡಿದವರಿದ್ದಾರೆ.” ಎನ್ನುತ್ತಾರೆ. ಇವರು ದೇವಸ್ಥಾನಗಳಿಗೆ, ಧಾರ್ಮಿಕ ಕೇಂದ್ರಗಳಿಗೆ ಉಚಿತವಾಗಿ ತನ್ನ ಕಲಾಕೃತಿ ನೀಡಿದ್ದೇ ಹೆಚ್ಚು.
ಇವರ ತೋಟದಲ್ಲಿ 35 - 40 ತೆಂಗಿನ ಮರಗಳಿವೆ. ಇವುಗಳ ಮಡಲುಗಳು ಬುಟ್ಟಿಗಳಾಗಿ ರಾಜ್ಯಾದ್ಯಂತ ಹಲವರ ಮನೆ, ಶೋ ಕೇಸುಗಳನ್ನು ಅಲಂಕರಿಸಿವೆ. ಮೂರ್ತಿ ತೆಂಗಿನ ಗರಿಯ ಕಡ್ಡಿಗೆ ಜೀವ ತುಂಬಿ ಆಯಸ್ಸು ಹೆಚ್ಚಿಸುತ್ತಿದ್ದಾರೆ. ಅಗತ್ಯವಾದರೆ ನೆರೆಯ ತೋಟದಿಂದಲೂ ಮಡಲು ಕೇಳಿ ಪಡೆಯುತ್ತಾರೆ.
'ತನಗಾಗಿ' ಆರಂಬ ಮಾಡಿದ ಈ ಹವ್ಯಾಸ ಈಗ ಪುಟ್ಟ ಮನೆ ಉದ್ಯಮವಾಗಿ ಬೆಳೆದಿದೆ. ಮೆಚ್ಚಿಕೊಂಡವರಿಂದ ಸುದ್ದಿ ಸದ್ದಿಲ್ಲದೆ ಹರಡಿದೆ. ಗ್ರಾಹಕರು ಮನೆಗೇ ಬಂದು ಒಯ್ಯುತ್ತಾರೆ. ಕಳುಹಿಸುವ ವ್ಯವಸ್ಥೆಗಳಿಲ್ಲ.
ತುಂಬಾ ಮುಜುಗರದ ವ್ಯಕ್ತಿ. ಶ್ರಮದ ಕೆಲಸ. ಆದರೂ ಬೆಲೆ ಹೇಳಲು ಹಿಂದೆಮುಂದೆ ನೋಡುತ್ತಾರೆ ಮೂರ್ತಿಯವರನ್ನು ಹತ್ತಿರದಿಂದ ಬಲ್ಲ ಶೃಂಗೇರಿಯ ಶೃಂಗೇಶ್ವರ ಅಭಿಮತ. ಶೃಂಗೇಶ್ವರರ ಬಾಳೆದಿಂಡಿನ ಮದುವೆ ಮಂಟಪಗಳು ಖ್ಯಾತಿಯವು. ಈ ಮಂಟಪಕ್ಕೆ ತೆಂಗಿನ ಗರಿಗಳ ಚಿತ್ತಾರ ವಿನ್ಯಾಸಗಳು ಮೂರ್ತಿ ಅವರದೇ.
‘ಹಳದಿ ಎಲೆ ರೋಗದಿಂದಾಗಿ ಅಡಿಕೆ ಇಳುವರಿ ನಾಮಮಾತ್ರದ್ದು. ಏನಾದರೊಂದು ಮಾಡ್ಬೇಕಲ್ವಾ’ ಎನ್ನುತ್ತಾರೆ ಮೂರ್ತಿ. ಹಾಗೆ ನೋಡಿದರೆ, ಇವರಿಗೆ ಗೊತ್ತಿಲ್ಲದ ವಿದ್ಯೆಯಿಲ್ಲ! ಗಾರೆ ಕೆಲಸ, ವಿದ್ಯುತ್ ವೈರಿಂಗ್, ಮರವೇರಿ ಬೋರ್ಡೋ ದ್ರಾವಣ ಸಿಂಪಡಣೆ ಮತ್ತು ಕೊಯಿಲು.. ಹೀಗೆ ಆಲ್ರೌಂಡರ್. ಹಳೆ ಸೀರೆಯಿಂದ ಇವರು ತಯಾರಿಸುವ ಕಾಲೊರಸಿಗೆ ಸಿದ್ಧ ಗ್ರಾಹಕರಿದ್ದಾರಂತೆ.
ಈ ಆಕರ್ಷಕ ಬುಟ್ಟಿಗಳನ್ನು ದೂರಕ್ಕೂ ಕಳಿಸುವ ವ್ಯವಸ್ಥೆ ಇದ್ದರೆ ಬೇಡಿಕೆ ಹೆಚ್ಚಬಹುದಲ್ಲಾ? “ಹೌದು. ಕೃಷಿಕೆಲಸ ಬಾಕಿಯಾಗುತ್ತದಲ್ವಾ. ಪ್ಯಾಕಿಂಗಿನ ಕೆಲಸ ನಾಜೂಕು, ಕಷ್ಟ. ಮುಂದೆ ನೋಡೋಣ. ಎಂದು ಬಾಯ್ತುಂಬಾ ನಗುತ್ತಾರೆ. 'ತುಂಬಾ ಪ್ರಚಾರ ಕೊಡ್ಬೇಡಿ' ಅನ್ನಲೂ ಮರೆಯಲಿಲ್ಲ.
ಮೂರ್ತಿ ಅವರ ಈ ಕಲೆ ಅದ್ಭುತವೇ. ಇದನ್ನು ಯಾವುದಾದರೂ ಸಂಸ್ಥೆಯವರು ಹಳ್ಳಿ ಹೆಣ್ಮಕ್ಕಳಿಗೆ ಕಲಿಸಿಕೊಡಬೇಕಿತ್ತು. ಅದೆಷ್ಟೋ ಮಂದಿಗಿದು ಭರವಸೆಯ ಉಪಕಸುಬು ಆಗಬಹುದು. ಆನ್ ಲೈನ್ ಮಾರಾಟವನ್ನೂ ಕಲಿಸಿದರೆ ಯಶಸ್ಸಿನ ಸಾಧ್ಯತೆ ಹೆಚ್ಚು.
ಮೂರ್ತಿ ಅವರ ಸಂಪರ್ಕ - 94826 99284
(ಅಡಿಕೆ ಪತ್ರಿಕೆ / ಮಾರ್ಚ್ 2022)
0 comments:
Post a Comment