Friday, May 27, 2022

ಎಸೆ ವಸ್ತುಗಳಿಂದಲೂ ಅದೆಂಥ ರಂಗೋಲಿ!




 ನಿಮ್ಮ ಅಡುಗೆ ಮನೆಯಲ್ಲೋ ಹಿತ್ತಲಲ್ಲೋ ಇರುವ, ಅಥವಾ ಕೆಲವೊಮ್ಮೆ ನೀವು ಬಿಸಾಕಲು ತಯಾರಿಟ್ಟಿರುವ ವಸ್ತುಗಳಿರಬಹುದು. ನಿಲ್ಲಿ. ಸ್ವಾತಿ ಭಾಗವತ್ ಹತ್ತಿರದಲ್ಲಿ ಇದ್ದರೆ ಅವನ್ನು ಎಸೆಯಬೇಡಿ. ಕಲಾವಿದೆ ಗಂಟೆಯೊಳಗೆ ಇವುಗಳಿಂದ ನೋಡುಗರು ಅವಾಕ್ಕಾಗುವಂತಹ ರಂಗೋಲಿ ಮೂಡಿಸಬಲ್ಲರು.

ಕುಮಟಾದ ಸ್ವಾತಿ ಶ್ರೀಧರ್ ಭಾಗವತರನ್ನು ಸಮಾರಂಭಕ್ಕೆ ಆಹ್ವಾನಿಸಿ. ರಂಗೋಲಿ ಚಿತ್ತಾರ ಬಿಡಿಸಲು ವಿನಂತಿಸಿ. ಅಡುಗೆ ಮನೆಯಲ್ಲಿರುವ ಟೊಮೆಟೋ, ಹಸಿಮೆಣಸು, ಬಾಳೆ ಎಲೆ, ಬಾಳೆಕಾಯಿ - ಏನು ಲಭ್ಯವಿದೆಯೋ ಅದರಿಂದಲೇ ನಿಮ್ಮ ಕಣ್ಣೆದುರೇ ಚಿತ್ತಾಕರ್ಷಕವಾದ ಚಿತ್ತಾರ ಸೃಷ್ಟಿಸುತ್ತಾರೆ. ನಿಬ್ಬೆರಗಾಗುವ ಅನನ್ಯ ಕಲೆ ಇವರದು.

ಇದು ಉತ್ಪ್ರೇಕ್ಷೆಯ ಮಾತಲ್ಲ. ಯಾವುದೇ ಸುಲಬಲಭ್ಯ ಕಚ್ಚಾವಸ್ತು ಇವರ ಒಳಸುರಿ. ಪ್ಲಾಸ್ಟಿಕ್, ಬಾಟಲ್ ಮುಚ್ಚಳಗಳು, ತೆಂಗಿನ ಎಳೆಯ ಬೀಳುಗಾಯಿ (ಚೆಂಡೇಲು), ಹತ್ತಿ, ಎಲೆಗಳು, ಬೆಂಕಿಕಡ್ಡಿ, ಅಡಿಕೆ ಹಾಳೆ, ಕಪ್ಪೆ ಚಿಪ್ಪು, ತೆಂಗಿನ ಗರಿ, ಬಾಳೆ ಕಂದು, ಕುಂಡಿಗೆ.. ಇವ್ಯಾವುವೂ ತ್ಯಾಜ್ಯವಲ್ಲ. ಇವರು ವರೆಗೆ ಮುನ್ನೂರಕ್ಕೂ ಮಿಕ್ಕಿ ಚಿತ್ತಾರ ಬಿಡಿಸಿರಬಹುದು. 

ಸಮಾರಂಭಕ್ಕೆ ಮುಂಚಿತವಾಗಿ ಅವರನ್ನು ಬುಕ್ ಮಾಡುವುದಿದೆ. ಚಿತ್ತಾರಗಳಿಗೆ ಬೇಕಾದ ಹೂಗಳನ್ನು ಸಂಗ್ರಹಿಸಿ ತರುತ್ತಾರೆ. ಇಂತಹುದೇ ಚಿತ್ತಾರ ಎಂದು ಮೊದಲೇ ನಿಶ್ಚಯ ಮಾಡುವುದಿಲ್ಲ. ಅಂದಂದೇ ಸಿಕ್ಕಿದ ಹೂಗಳ ವರ್ಣ ಕಾಂಬಿನೇಶನ್ ಹೊಂದಿಕೊಂಡು ನಿರ್ಧಾರ. ಸಂಘಟಕರೇ ಹೂವು ಒದಗಿಸುವುದೂ ಇದೆ. ಹೂವಿನ ಬಣ್ಣಗಳನ್ನು ಗಮನಿಸಿ ವಿನ್ಯಾಸಗಳ ಆಯ್ಕೆ. ಆಪ್ತರ ಮದುವೆಗೆ ಹೋದಾಗ, 'ಒಂದು ಚಿತ್ತಾರ ಬಿಡಿಸುತ್ತೀರಾ' ಎಂದು ವಿನಂತಿಸುತ್ತಾರಂತೆ!

“ಸಮಾರಂಭದ ಮುನ್ನಾ ದಿನ ಚಿತ್ತಾರ ಬಿಡಿಸಿದರೆ ಮರುದಿನಕ್ಕೆ ಬಾಡಿಹೋಗುತ್ತದೆ. ಅಂದಂದೇ ಸಿದ್ಧಪಡಿಸಬೇಕು. ಚೆಂಡುಹೂವಿನ ಚಿತ್ತಾರ ಬಾಡುವುದಿಲ್ಲ. ಒಮ್ಮೆ ನೀರಿನ ಸಿಂಪಡಣೆ ಮಾಡಿದರೆ ಆಯಿತು. ಮಾನವಸ್ಪರ್ಶ ಇಲ್ಲದಿದ್ದರೆ ಎರಡು ದಿವಸ ತಾಜಾ ಆಗಿ ಉಳಿಯುತ್ತದೆ. ಸಮಾರಂಭದಲ್ಲಿ ಸಿಗುವ ಸಮಯ ಅನುಸರಿಸಿ ರಂಗೋಲಿಯ ಗಾತ್ರ, ವಿನ್ಯಾಸಗಳನ್ನು ನಿರ್ಧರಿಸುತ್ತೇನೆಎನ್ನುತ್ತಾರೆ. ಸಾಮಾನ್ಯವಾಗಿ ಅರ್ಧ ಗಂಟೆಯಿಂದ ಒಂದು ಗಂಟೆಯೊಳಗೆ ಮುಗಿಸುತ್ತಾರೆ.  

ಮೂರೂರಿನಲ್ಲಿ ಯಕ್ಷಗಾನದ ಮುಖವನ್ನು ಚಿತ್ರಿಸಿದ್ದರು. ಕಿಸ್ಕಾರ, ಆರತಿ ಕುಂಡಿಗೆ ಸೊಪ್ಪು, ಸಿಂಗಾರ ಬಳಸಿ ಮಾಡಿದ ಚಿತ್ತಾರ ಯಕ್ಷಪ್ರಿಯರ ಚಿತ್ತವನ್ನು ಸೆಳೆದಿತ್ತು. ಇದಕ್ಕೆ ಮೂರು ಗಂಟೆ ಬೇಕಾಯಿತಂತೆ. ಹೆಚ್ಚು ಶ್ರಮ ಬೀಳುವಲ್ಲಿ ಸಹಾಯಕರು ಬೇಕು. ಎರಡು ವರುಷ ಹಿಂದೆ ಬೆಂಗಳೂರಿನ ಹವ್ಯಕ ಸಮ್ಮೇಳನದ ರಂಗೋಲಿ ಸ್ಪರ್ಧೆಯಲ್ಲಿ ಇವರ ಯಕ್ಷಗಾನದ ಚಿತ್ತಾರಕ್ಕೆ ಪ್ರಥಮ ಬಹುಮಾನ ಬಂದಿದೆ.

ಏಳು ವರ್ಷ ಹಿಂದೆ ಕುಮಟಾದಲ್ಲಿ ಹಲಸು ಉತ್ಸವ ಜರುಗಿತ್ತು. ಸ್ವಾತಿಯವರಿಗೆ ಕರೆ. ಹಲಸಿನ ಹೊರತು ಮಿಕ್ಕೆಲ್ಲಾ ಕಚ್ಚಾವಸ್ತುವನ್ನು ಬಳಸಿ ಚಿತ್ತಾರಗಳನ್ನು ಮಾಡಿದ್ದರು. ಇದೊಂದು ಸವಾಲಾಗಿತ್ತು. ಕೊನೆಗೆ ಹಲಸಿನ ಕಾಯಿ, ಬೀಜ, ಎಲೆ, ಸಿಪ್ಪೆ ಬಳಸಿ ರಂಗೋಲಿ ಮಾಡಿದರು. ಯಶಸ್ಸಾಯಿತು. ಫೇಸ್ ಬುಕ್ಕಿನಲ್ಲಿ ವೈರಲ್ ಆಯಿತು. ಹಲಸು ಪ್ರಿಯರ ಮನ ಸೆಳೆಯಿತು. ಮೇಳದಲ್ಲದು ಸೆಳೆನೋಟವಾಯಿತು. ಸಂಘಟಕರು ಇವರನ್ನು ಸಂಮಾನಿಸಿದರು. 'ಹಲಸಿನ ರಂಗೋಲಿ' ಸ್ವಾತಿಯವರ ಮಾಸ್ಟರ್ ಪೀಸ್ಗಳಲ್ಲೊಂದು.

ಇದು ನನ್ನ ಕಲೆಗೆ ಸಂದ ಗೌರವ. ಅವರು ಸಂಮಾನ ಮಾಡ್ತಾರೆಂದು ಊಹಿಸಿರಲಿಲ್ಲ. ಸಂಮಾನದಿಂದಾಗಿ ಕಲೆ ನಾಲ್ಕು ಜನರಿಗೆ ತಿಳಿಯಿತು. ಎಂದು ಖುಷಿ ಪಟ್ಟರು. ಚಿತ್ತಾರ ಬಿಡಿಸಲು ಸಂಭಾವನೆ ಎಷ್ಟು? ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದು ನನಗೆ ಹವ್ಯಾಸ. ಕಲೆಯನ್ನು ನೀವು ಗೌರವಿಸುವುದೇ ಸಂಭಾವನೆ.

ವಿವಾಹಗಳಲ್ಲಿ ಮದುಮಗ, ಮದುಮಗಳು ಮಂಟಪಕ್ಕೆ ಬರುವಾಗ ಅಲಂಕೃತ ತೆಂಗಿನಕಾಯಿ ಹಿಡಿದುಕೊಳ್ಳುವುದು ಪದ್ಧತಿ. ಇಂತಹ ತೆಂಗಿನಕಾಯಿಗಳನ್ನು ಸ್ವಾತಿ ಚಂದಗೊಳಿಸುತ್ತಾರೆ. ತೆಂಗಿನಕಾಯಿ ಪೂರ್ತಿ ಆವರಿಸುವಂತೆ ವೆಲ್ವೆಟ್ ಬಟ್ಟೆ ಮುಚ್ಚುತ್ತಾರೆ. ನಂತರ ಅದರ ಮೇಲೆ ವಿಧವಿಧದ ಚಿತ್ತಾರಗಳ ಪೋಣಿಕೆ. ಅವರವರ ಅಪೇಕ್ಷೆಯಂತೆ ನವಿಲು, ಶಂಖದ ಆಕಾರವನ್ನು ಕೊಡುತ್ತಾರೆ. “ವಿವಾಹ ವಿಧಿಗಳಲ್ಲಿ ಕಲಶ ಕನ್ನಡಿ ಮುಖ್ಯ. ಇವೆರಡಕ್ಕೂ ಡೆಕೋರೇಶನ್ ಬಯಸುತ್ತಾರೆ. ತುಂಬಾ ಡಿಮ್ಯಾಂಡ್ ಇದೆ. ಸೀಸನ್ನಿನಲ್ಲಿ ಪೂರೈಸಲು ಕಷ್ಟವಾಗುತ್ತದೆಎನ್ನುತ್ತಾರೆ. ರೀತಿಯ ಕಲಾಕೃತಿಗಳಿಗೆ ಶುಲ್ಕ ನಿರ್ಧರಿಸಿದ್ದಾರೆ.

ಕರಕುಶಲ ಕಲೆಯಲ್ಲಿ ಹೆಚ್ಚು ಆಸಕ್ತಿ. ಅಡಿಕೆ ಹಾಳೆಯ ಹೂ, ಹೂಚೆಂಡು (ಬುಕೆ) ಮೊದಲಾದುವುಗಳಿಗೆ ಬೇಡಿಕೆಯಿದೆ. ಅಡಿಕೆ ಹಾಳೆಯ ಮೇಲ್ಪದರ ಮತ್ತು ಕೆಳಪದರದ ಮಧ್ಯದಲ್ಲಿ ತೆಳುವಾದ ಪದರ ಇದೆ. ಅದನ್ನು ಎಬ್ಬಿಸಿ ಇಸ್ತ್ರಿ ಮಾಡಿ ಸಂಗ್ರಹಿಸಿಡುತ್ತೇನೆ. ಇದು ಎರಡು ವರುಷವಾದರೂ ಹಾಳಾಗುವುದಿಲ್ಲ. ಇದು ಕ್ರಾಫ್ಟ್ಟ್ ತಯಾರಿಯ ಮೂಲವಸ್ತು. ನಂತರ ಬೇಕಾದಾಗ ಬಳಸಬಹುದು. ಎನ್ನುವ ಕಲಿಕಾ ಸೂಕ್ಷ್ಮಗಳನ್ನು ವಿವರಿಸುತ್ತಾರೆ. ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಕ್ರಾಫ್ಟ್ಟ್ ಶಿಬಿರಗಳನ್ನು ಏರ್ಪಡಿಸುತ್ತಾರೆ.

  ಬಾಳೆ ಎಲೆಯನ್ನು ಬೇರೆಬೇರೆ ರೀತಿ ಮಡಚಿ ಚಿತ್ತಾರ ಮೂಡಿಸುವುದೂ ಇದೆ. ಕರಕುಶಲ ಸ್ಪರ್ಧೆಗಳಿದ್ದಾಗ ಶಾಲಾ ವಿದ್ಯಾರ್ಥಿಗಳು ಇವರನ್ನು ಸಂಪರ್ಕಿಸುತ್ತಾರೆ. ಅಂತಹವರಿಗೆ ಬಾಳೆಲೆಯ ಚಿತ್ತಾರಗಳನ್ನು ಕಲಿಸಿ ಕೊಟ್ಟಿದ್ದಾರೆ. “ವಿದ್ಯಾರ್ಥಿಗಳಿಗೆ ಬಹುಮಾನ ಬಂದಾಗ ಇವರಿಗೂ ಖುಷಿ. ಕರಕುಶಲ ಕಲೆಗಳಿಗೆ ಕುಮಟಾದಲ್ಲಿ ಹೇಳುವಂತಹ ಪ್ರೋತ್ಸಾಹ ಕಾಣುತ್ತಿಲ್ಲಎಂಬ ಬೇಸರವಿದೆ.

ಇವರ ಎಲ್ಲಾ ವಿನ್ಯಾಸಗಳಿಗೆ ಮೊದಲಂಕ ನೀಡುವವರು ಮಾವ ರಾಮಚಂದ್ರ ಸೀತಾರಾಮ ಭಾಗವತ್ ಮತ್ತು ಮಗ ಭುವನ, ಮಗಳು ನೇಹಾ. ಕುಮಟಾದ ಬೀಚ್ ರೋಡಿನಲ್ಲಿ ಪತಿ ಶ್ರೀಧರ್ ಭಾಗವತರಿಗೆ ಪೆಟ್ರೋಲ್ ಬಂಕ್ ಇದೆ. ಕೂಡು ಕುಟುಂಬ. “ನನ್ನ ಆಸಕ್ತಿಯನ್ನು ಕುಟುಂಬ ಪ್ರೋತ್ಸಾಹಿಸಿ ಬೆಂಬಲಿಸಿದೆ. ಅದರಿಂದಾಗಿ ಹವ್ಯಾಸವನ್ನು ನಾಲ್ಕು ಮಂದಿ ಗುರುತಿಸುವಂತಾಗಿದೆಎನ್ನುತ್ತಾರೆ. 

ಸ್ವಾತಿಯವರ ತವರು ಮನೆ ಶಿರಸಿ ಬನವಾಸಿ ಸನಿಹದ ಉಂಬಳೇಕೊಪ್ಪ. ಚಿಕ್ಕಂದಿನಲ್ಲಿ ಬಣ್ಣದ ಹುಡಿಗಳಿಂದ ರಂಗೋಲಿ ಬಿಡಿಸಿದ ಅನುಭವ. ವಿವಾಹವಾಗಿ ಕುಮಟಾದಲ್ಲಿ ನೆಲೆಯಾದ ಬಳಿಕ ಹದಿನೈದು ವರುಷ ಅನ್ಯಾನ್ಯ ಕಾರಣಗಳಿಂದ ಹವ್ಯಾಸಕ್ಕೆ ರಜೆ. ಮತ್ತೆ ಪುನಃ ಹವ್ಯಾಸ ಚಿಗುರಿದೆ. ಕುಮಟಾದಲ್ಲೀಗ 'ಸ್ವಾತಿ ಅಂದರೆ ರಂಗೋಲಿ. ರಂಗೋಲಿ ಅಂದರೆ ಸ್ವಾತಿ! ಚಿತ್ತಾರ ನೋಡಿಯೇ ಇದು ಸ್ವಾತಿಯವರದು ಎಂದು ಗುರುತು ಹಿಡಿಯುವಷ್ಟು ಜನರ ಮನ ಗೆದ್ದಿದೆ. ಎನ್ನುವಾಗ ಅವರ ದನಿಯಲ್ಲಿ ಬಿಗುಮಾನವಿರಲಿಲ್ಲ, ವಿನೀತತೆಯಿತ್ತು.   

ಸ್ವಾತಿ ಭಾಗವತ್ - 96634 40230 (ಅನುಕೂಲ ಸಮಯ :  ರಾತ್ರಿ 8.30 - 9.30)

(ಅಡಿಕೆ ಪತ್ರಿಕೆ/ಜನವರಿ 2022)

0 comments:

Post a Comment