“ಕಷ್ಟಪಟ್ಟು ಬೆಳೆದ ಬಾಳೆಕಾಯಿಗೆ ದರ ಕಡಿಮೆ, ಹಳ್ಳಿಗಿಂತ ಪೇಟೆಯಲ್ಲಿ ಹೆಚ್ಚು ಬೇಡಿಕೆಯಿದ್ದರೂ ಸಾಗಣೆ ಖರ್ಚೇ ದುಬಾರಿ. ನಾಲ್ಕು ಕೃಷಿಕರು ಸೇರಿದಾಗ ಮಾತುಕತೆಗಳಲ್ಲಿ ಹೊರಹೊಮ್ಮುವ ದೂರುಗಳಿವು.”
ದ.ಕ. ಜಿಲ್ಲೆಯ ಹಳ್ಳಿಮೂಲೆಯ ಒಂದು ಸೊಸೈಟಿ ಈ ಸಮಸ್ಯೆಗೆ ಸ್ವಯಂಸ್ಫೂರ್ತಿಯಿಂದ ಪರಿಹಾರ ರೂಪಿಸಿದೆ. “ನಿಮ್ಮ ಬಾಳೆಕಾಯಿ, ತೆಂಗಿನಕಾಯಿ ಸೊಸೈಟಿಗೆ ತಂದುಕೊಡಿ. ಉತ್ತಮ ದರ ಸಿಗುವಂತೆ ಮಾಡುತ್ತೇವೆ.’ ಎಂದು ಸದಸ್ಯಕೃಷಿಕರಿಗೆ ಧೈರ್ಯ ತುಂಬಿದೆ. ಊರಿನ ಈ ಕೃಷ್ಯುತ್ಪನ್ನಗಳನ್ನು ಕಳಂಜ ಬಾಳಿಲ ಸೊಸೈಟಿ (ಸುಳ್ಯ ತಾಲೂಕಿನ ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ) ಮಂಗಳೂರಿಗೆ ಕಳಿಸಿ ಮಾರಿಕೊಡುತ್ತಿದೆ.
ಕಿಲೋಗೆ ಎರಡು ರೂಪಾಯಿ ನಿರ್ವಹಣಾ ಶುಲ್ಕ. ಮಾರಿ ಸಿಕ್ಕಿದ ಉಳಿದೆಲ್ಲ ಹಣ ಕೃಷಿಕ ಸದಸ್ಯರ ಖಾತೆಗೆ. ಈ ವ್ಯವಸ್ಥೆಗೆ ಉತ್ತಮ ಕೃಷಿಕ ಸ್ಪಂದನೆ ಬರುತ್ತಿದೆ. 80 ಮಂದಿ ಈಗಾಗಲೇ ಈ ಸೌಕರ್ಯ ಬಳಸುತ್ತಿದ್ದಾರೆ. ಈ ಸೇವೆ ಆರಂಭವಾದದ್ದು ಇದೇ 2021 ಆಗಸ್ಟ್ 12ರಂದು.
ಈ ಉದ್ದೇಶಕ್ಕಾಗಿಯೇ ಸೊಸೈಟಿ ಒಂಭತ್ತು ಲಕ್ಷ್ಷ ರೂ. ಬೆಲೆಯ ಪಿಕಪ್ ಖರೀದಿಸಿದೆ. ಪ್ರತಿ ಮಂಗಳವಾರ ಹಾಗು ಶುಕ್ರವಾರ ಪಿಕಪ್ ಮಂಗಳೂರಿಗೆ ಸಾಗುತ್ತದೆ. ಬೆಳೆಗಾರರು ಹಿಂದಿನ ಸಂಜೆ ಐದು ಗಂಟೆಯ ಒಳಗೆ ಉತ್ಪನ್ನಗಳನ್ನು ತಲಪಿಸಬೇಕು. ಅವನ್ನು ತೂಕ ಮಾಡಿ ದಾಖಲಿಸಿ, ಉತ್ಪನ್ನಗಳ ಮೇಲೂ ಕೃಷಿಕರ ಹೆಸರಿನ ಗುರುತು ಬರೆಯುತ್ತಾರೆ.
“ಫಸ್ಟ್ ಗ್ರೇಡ್ ಬಾಳೆಕಾಯಿಗೆ ನಮ್ಮ ಊರಿನಲ್ಲಿ ಕಿಲೋಗೆ ಹದಿನೆಂಟು ರೂಪಾಯಿ ಇದ್ದರೆ ಮಂಗಳೂರಿನಲ್ಲಿ 30 ರಿಂದ 32 ರೂಪಾಯಿ. ತೆಂಗಿನಕಾಯಿಗೆ ಇಲ್ಲಿನ ದರ ಕಿಲೋಗೆ ರೂ. 31 ರಿಂದ 32. ಮಂಗಳೂರಿನಲ್ಲಿ 35 ರಿಂದ 36 ರೂಪಾಯಿ. ಕೃಷಿಕರಿಗೆ ನೇರವಾಗಿ ಹೆಚ್ಚು ಆದಾಯ ಸಿಗುವಂತೆ ಮಾಡುವುದು ಸೊಸೈಟಿಯ ಉದ್ದೇಶ, ಒಂದು ಬಾಳೆಗೊನೆ ತಂದರೂ ಸ್ವೀಕರಿಸುತ್ತೇವೆ” ಎನ್ನುತ್ತಾರೆ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್.
ಮಂಗಳೂರು ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆ ಎಷ್ಟಿದೆ ಎಂದು ಇಲ್ಲಿನ ಕೃಷಿಕರಿಗೆ ಗೊತ್ತಿರುವುದಿಲ್ಲ. ಸ್ಥಳೀಯ ಮಾರಾಟಗಾರರು ಹೇಳಿದ್ದೇ ದರ ಎನ್ನುವಂತಾಗಿದೆ. “ಸೊಸೈಟಿಯ ಆಡಳಿತ ಮಂಡಳಿಯಲ್ಲಿ ಇರುವವರಿಗೆ ಕೃಷಿಕರ ಕಷ್ಟ ಗೊತ್ತಿದೆ. ಸೊಸೈಟಿಯ ಮೂಲಕ ಕೃಷ್ಯುತ್ಪನ್ನಗಳಿಗೆ ಉತ್ತಮ ದರ ಸಿಗುತ್ತಿರುವುದು ಖುಷಿಯ ಸಂಗತಿ. ಎಲ್ಲಾ ಸೊಸೈಟಿಗಳೂ ಇಂತಹ ವ್ಯವಸ್ಥೆ ಆರಂಭಿಸಿದರೆ ಕೃಷಿಕರಿಗೆ ಅನುಕೂಲ.” ಎನ್ನುತ್ತಾರೆ ಸದಸ್ಯ ಈಶ್ವರಚಂದ್ರ ಮುಂಡುಗಾರು, “ಎರಡು ತಿಂಗಳಿನಲ್ಲಿ ನಾಲ್ಕುನೂರ ಐವತ್ತು ಕಿಲೋ ಬಾಳೆಕಾಯಿ ಮಾರಾಟ ಮಾಡಿದ್ದೇನೆ. ಸ್ಥಳೀಯ ದರಕ್ಕೆ ಹೋಲಿಸಿದರೆ ನನಗೆ ಕನಿಷ್ಠ 3,000 ರೂ. ಹೆಚ್ಚು ಸಿಕ್ಕಿದಂತಾಗಿದೆ” ಎನ್ನುತ್ತಾರೆ.
ನಮ್ಮ ಉತ್ಪನ್ನಕ್ಕೆ ಮಂಗಳೂರಿನ ಮಾರುಕಟ್ಟೆ ಒದಗಿಸುವುದು ಮೆಚ್ಚತಕ್ಕ ಸಂಗತಿ. ಮಂಗಳೂರಿನಲ್ಲಿ ಒಂದೇ ಕಡೆ ಮಾರುವುದರ ಬದಲು ಮೂರ್ನಾಲ್ಕು ವ್ಯಾಪಾರಿಗಳನ್ನು ಮಾತನಾಡಿಸಿ ಗರಿಷ್ಠ ದರ ಸಿಗುವಂತೆ ಮಾಡಬಹುದು. ಇನ್ನೊಬ್ಬ ಸದಸ್ಯ ಪವನ ವೆಂಕಟ್ರಮಣ ಭಟ್ ಅವರ ಮಾತಿದು. ಬಾಳೆ, ತೆಂಗು ಮಾತ್ರವಲ್ಲದೆ, ಇತರ ಕೃಷಿ ಉತ್ಪನ್ನಗಳಿಗೂ ಇದೇ ತರಹ ವ್ಯವಸ್ಥೆ ಮಾಡಿದರೆ ಉತ್ತಮ ಎನ್ನುತ್ತಾರೆ.
ಸೊಸೈಟಿಗೆ ಬಂದ ಕೃಷಿಕರ ಜತೆ ಮಾತುಕತೆ. ಸನಿಹದ ಊರುಗಳ ಕೃಷಿಕರ ಮನೆಗಳ ಭೇಟಿ. ಹೀಗೆ ಸೊಸೈಟಿ ಸದಸ್ಯರ ಮನ ಒಲಿಸುವ ಯತ್ನ ಮಾಡುತ್ತಿದೆ. ಇದಕ್ಕಾಗಿಯೇ ಅಧ್ಯಕ್ಷರು ಮುಖ್ಯಸ್ಥರಾಗಿರುವ ಆರು ಮಂದಿಯ 'ನಿರ್ವಹಣಾ ತಂಡ' ರಚನೆಯಾಗಿದೆ.
ಪಿಕಪ್ಪಿನ ಹೊರುವ ಸಾಮಥ್ರ್ಯ ಮೂರು ಟನ್. ಮಂಗಳೂರಿನ ಟ್ರಿಪ್ ಹೊರತು ಪಡಿಸಿ, ಮಿಕ್ಕ ದಿವಸಗಳಲ್ಲಿ ಪಿಕ್ಕಪ್ ಬಾಡಿಗೆ ನೆಲೆಯಲ್ಲಿ ಸ್ಥಳೀಯವಾಗಿ ಓಡುತ್ತಿದೆ.
“ಆಗಸ್ಟ್ ತಿಂಗಳಲ್ಲಿ ಸೊಸೈಟಿಗೆ ಹೇಳುವಂತಹ ಲಾಭವಾಗಲಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಪಿಕ್ಕಪ್ಪಿಗೆ ಡೀಸಿಲ್, ಆಯಿಲ್, ಚಾಲಕರ ಸಂಬಳ - ಹೀಗೆ ಎಲ್ಕ್ಲಾ ಖರ್ಚು ಕಳೆದು ಹತ್ತು ಸಾವಿರ ರೂಪಾಯಿ, ಅಕ್ಟೋಬರಿನಲ್ಲಿ ಹನ್ನೆರಡು ಸಾವಿರ ರೂಪಾಯಿ ಲಾಭ ಆಗಿದೆ. ಎರಡು ತಿಂಗಳುಗಳಲ್ಲಿ ಬಾಳೆ - ತೆಂಗು ಮಾರಿ ಕೃಷಿಕರಿಗೆ ಪಾವತಿಸಿದ ಮೊತ್ತ ರೂ. 2,62,728” ಎಂಬ ಅಂಕಿಅಂಶ ಮುಂದಿಡುತ್ತಾರೆ ರಮೇಶ್.
ಸೊಸೈಟಿಯು ಜೀನಸಿ ಅಂಗಡಿಯನ್ನೂ ನಡೆಸುತ್ತಿದೆ. ಮಂಗಳೂರಿನಿಂದ ಮರಳುವಾಗ ಪಿಕಪ್ ಅಂಗಡಿಗೆ ಬೇಕಾದ ಜೀನಸು ಹೊತ್ತು ತರುತ್ತದೆ. ಇದು ಸೊಸೈಟಿಗೆ ಪರೋಕ್ಷ ಲಾಭ. ಒಂದು ಟನ್ ಉತ್ಪನ್ನ ಇದ್ದರೆ ಸೊಸೈಟಿ ಕೃಷಿಕರ ಮನೆಗೇ ವಾಹನ ಕಳಿಸಿ ಅದನ್ನು ತರುತ್ತದೆ."ಕಾಳುಮೆಣಸು, ತರಕಾರಿಗೂ ಮಾರುಕಟ್ಟೆ ವ್ಯವಸ್ಥೆ ಮಾಡಿ' ಎನ್ನುವ ಬೇಡಿಕೆ ಇದೆಯಂತೆ.
ಅನೇಕರು ತರಕಾರಿ ಬೆಳೆಯಲು ಉತ್ಸುಕರಾಗಿದ್ದಾರೆ. ಊರಿನ ತರಕಾರಿಗೆ ದರ ಹೆಚ್ಚಾದರೂ ಗ್ರಾಹಕರಿದ್ದಾರೆ. ಸಾವಯವದಲ್ಲೇ ಬೆಳೆಯಿರಿ ಎಂದಿದ್ದೇವೆ. ಕಳೆದೆರಡು ತಿಂಗಳ ಅನುಭವದಿಂದ ಉಮೇದು ಹೆಚ್ಚಿದೆ ಎನ್ನುತ್ತಾರೆ ಸೊಸೈಟಿಯ ಅಧ್ಯಕ್ಷ ಎಂ.ಕೂಸಪ್ಪ ಗೌಡ, ಮುಗುಪ್ಪು.
ಸದಸ್ಯರ ಸಾಮೂಹಿಕ ಸಮಸ್ಯೆಗೆ ಪರಿಹಾರ ಕಾಣುವ ಈ ಥರದ ಸೇವೆ ಸಹಕಾರಿ ವಲಯದಿಂದ ಬರುವುದು ಶ್ಲಾಘನೀಯ. ಉತ್ತರ ಕನ್ನಡದ ಶಿರಸಿಯ ತೋಟಗಾರ್ಸ್ ಸೇಲ್ ಸೊಸೈಟಿಯೂ (ಟಿ.ಎಸ್.ಎಸ್.) ಕೃಷಿ ಉತ್ಪನ್ನಗಳನ್ನು ಚೆನ್ನಾಗಿ ಮಾರುಕಟ್ಟೆ ಮಾಡುತ್ತಿದೆ. ಕಳಂಜ ಸೊಸೈಟಿ ತಂಡವು ನಿಕಟ ಭವಿಷ್ಯದಲ್ಲಿ ಅಲ್ಲಿಗೆ ಅಧ್ಯಯನ ಪ್ರವಾಸ ಹೋಗಲಿದೆ. ಕೃಷಿಕ ಸದಸ್ಯರನ್ನು ಸೊಸೈಟಿಯತ್ತ ಸೆಳೆಯುವ ಉ.ಕ ಜಿಲ್ಲೆಯ ಮಾದರಿಯ ಇನ್ನಷ್ಟು ಸೇವೆ ಕರಾವಳಿಯ ಸೊಸೈಟಿಗಳಲ್ಲೂ ಬರಲಿ.
ರಮೇಶ್ ನಾಯಕ್ - 94802 64989, (08257) 200 031
--------------------------------------------------------------------------------------------------
ಕಣ್ಮರೆಯಾದ ಗೂಡ್ಸ್ ಸರ್ವೀಸ್
ದಶಕಗಳ ಹಿಂದೆ ಕೃಷಿ ಉತ್ಪನ್ನಗಳನ್ನು ಸೊಸೈಟಿ ಮತ್ತು ಸದಸ್ಯರಿದ ಗೂಡ್ಸ್ ಲಾರಿಗಳು ವಾರಕ್ಕೆರಡು ಬಾರಿ ಮಂಗಳೂರಿಗೆ ಒಯ್ಯುತ್ತಿದ್ದವು. ಎಸ್.ಕೆ.ಎ.ಸಿ.ಎಂ.ಎಸ್ ಮತ್ತ್ಯು ಖಾಸಗಿ ವ್ಯಾಪಾರಿಗಳಿಗೆ ತಳುಪಿಸುತ್ತಿದ್ದುವು. ಸೊಸೈಟಿ ಚಿಕ್ಕ ನಿರ್ವಹಣಾ ವೆಚ್ಚವನ್ನು ಕಳೆದು ಉಳಿದ ಹಣವನ್ನು ಕೃಷಿಕರಿಗೆ ಕೊಡುತ್ತಿತ್ತು. ಬೇರೆಡೆಯಿಂದ ಹಾಕಿದ ಪಾರ್ಸೆಲ್ ಗಳೂ ಹಳ್ಳಿ ಸೇರುತ್ತಿದ್ದುವು.
ಈಗ ಅಡಿಕೆ, ಕಾಳುಮೆಣಸು, ಕೊಕ್ಕೋ, ಬಾಳೆಕಾಯಿಗಳನ್ನು ಸೊಸೈಟಿಗಳು ಹಾಗೂ ಖಾಸಗಿ ವ್ಯಾಪಾರಸ್ಥರು ಸ್ಥಳೀಯವಾಗಿ ಖರೀದಿ ಮಾಡುತ್ತಾರೆ. ಅಲ್ಲಲ್ಲಿ ಕ್ಯಾಂಪ್ಕೋ ಖರೀದಿ ಕೇಂದ್ರಗಳನ್ನು ಸ್ಥಾಪಿಸಿವೆ. ಸೊಸೈಟಿಯೊಂದಿಗೆ ವ್ಯವಹಾರಗಳನ್ನು ಮಿಳಿತಗೊಳಿಸಿವೆ. ಕೃಷಿಕರಿಗೆ ಊರಲ್ಲೇ ಅಗತ್ಯ ವಸ್ತುಗಳು ಕೊಳ್ಳಲು ಸಿಗುತ್ತಿದೆ. ಸಹಜವಾಗಿ ಮಂಗಳೂರಿಗೆ ಕಳುಹಿಸುವ, ಅಲ್ಲಿಂದ ತರಿಸುವ ಉತ್ಪನ್ನಗಳ ಪ್ರಮಾಣ ಇಳಿದಿದೆ. ಲಾರಿ ಲೋಡ್ ಭರ್ತಿಯಾದರಷ್ಟೇ ಅವುಗಳಿಗೆ ಲಾಭ. ಈ ಎಲ್ಲಾ ಕಾರಣಗಳಿಂದಾಗಿ ಹಿಂದೆ ಹಳ್ಳಿಗಳಿಗೆ ಸರಕು ಸಾಗಾಟದ ಮುಖ್ಯವಾಹಿನಿಯಾಗಿದ್ದ ಗೂಡ್ಸ್ ಲಾರಿಯ ಸೇವೆ ಕ್ಷೀಣವಾಗಿದೆ.
ಆ ಗೂಡ್ಸ್ ವ್ಯವಸ್ಥೆ
ಇಲ್ಲದಾದ ಮೇಲೆ ಸಣ್ಣ ಪ್ರಮಾಣದಲ್ಲಿ
ಕೃಷಿ ಉತ್ಪನ್ನ ಮಾರಾಟದ ಕೊಂಡಿಯಾಗಿ
ಸೊಸೈಟಿ ಈಗ ಹೆಜ್ಜೆಯೂರಿದೆ ಎನ್ನುತ್ತಾರೆ
ರಮೇಶ್.
(adike Pathrike / December 2021)
0 comments:
Post a Comment