ಹೊನ್ನಾವರ ಕವಲಕ್ಕಿಯ ಸುರೇಶ್ ಹೆಗಡೆಯವರ ಫೇಸ್ಬುಕ್ ಪುಟ ನೋಡಿ. ಮೊಗ್ಗು, ಹೂ, ಧಾನ್ಯಗಳಿಂದ ರೂಪುಗೊಂಡ ಚಿತ್ತಾರಗಳ ಚೆಲುವು. ವಿವಿಧ ವರ್ಣಗಳ ತೋರಣ. ಕೋವಿಡ್ ಮನೆಯಲ್ಲಿ ಕೂರಿಸಿತ್ತು. ಆಗ ಈ ಹವ್ಯಾಸ ಅಂಟಿತು. ಈಗ ಬಿಡಲಾಗುತ್ತಿಲ್ಲ. ನನ್ನ ಖುಷಿಗಾಗಿ ಮಾಡುತ್ತಾ ಬಂದೆ. ಎಂದರು.
ಫಕ್ಕನೆ ನೋಡುವಾಗ ವಿವಿಧ ಬಣ್ಣಗಳನ್ನು ತುಂಬಿಸಿ ಮಾಡಿದವುಗಳಂತೆ ಭಾಸವಾಗುತ್ತದೆ. 'ಇದು ಹೂವಿನ ಮೊಗ್ಗಿನದಾ' ಎಂಬ ಭ್ರಮೆಗೆ ಒಳಪಡಿಸುತ್ತದೆ. ಅಷ್ಟೊಂದು ಅಂದ, ಚಂದ. ಇದನ್ನು ಯಾರೂ ಮಾಡಬಹುದು ಅಂತ ಮನಸ್ಸು ಉಲಿದರೆ, ಸುರೇಶ್ ಹೇಳುತ್ತಾರೆ, ‘ಯಾರೂ ಮಾಡಬಹುದು. ತಾಳ್ಮೆ, ಸಹನೆ, ಕಲಾ ಮನಸ್ಸು ಮತ್ತು ದೃಷ್ಟಿಕೋನ ಬೇಕು.’
ಜಾಜಿ ಮೊಗ್ಗು, ಗುಲಗುಂಜಿ ಕಾಯಿ ಮತ್ತು ಶಂಖಪುಷ್ಟದ ಜೋಡಣೆಯಿಂದ ಹೆಣ್ಣು ಮಕ್ಕಳು ಧರಿಸುವ ಕಿವಿಯಾಭರಣ 'ಜುಮ್ಕಿ' ತಯಾರಾಗಿದೆ. ಬಿಳಿ, ಕೆಂಪು, ಹಸಿರು ಬಣ್ಣದ ಗಾಂಧಾರಿ ಮೆಣಸುಗಳು ಮಕರಂದವನ್ನು ಹೀರುವ ಹಕ್ಕಿಯಾಗಿದೆ. ಬಯ್ಯಮಲ್ಲಿಗೆಯ ಬೀಜ ಮತ್ತು ಗುಲಗುಂಜಿ ಪೋಣಿಸಲ್ಪಟ್ಟು 'ರುದ್ರಾಕ್ಷಿ ಹಾರ'ವಾಗಿದೆ. ಅವಲಕ್ಕಿ, ಗುಲಗುಂಜಿಗಳಿಂದ ಅರಳಿದ ಹೂವಿನ ಚಿತ್ತಾರವಾಗಿದೆ.
ಸುರೇಶರು ತಮ್ಮ ಮನೆಯ ಹಿತ್ತಿಲು, ಅಕ್ಕಪಕ್ಕದ ಮನೆಗಳಿಂದ ಆಯಾ ದಿವಸ ಲಭ್ಯವಾಗುವ ಮೊಗ್ಗುಗಳನ್ನು ಆಯುತ್ತಾರೆ. ‘ಮೊಗ್ಗುಗಳನ್ನು ಹೊಂದಿಕೊಂಡು ಚಿತ್ರಗಳ ಆಯ್ಕೆ. ಚಿತ್ರಗಳಿಗೆ ಸಿದ್ಧ ಮಾದರಿಗಳಿಲ್ಲ. ಸ್ಕೆಚ್ ಲೈನ್ ಎಳೆಯುವುದಿಲ್ಲ. ಮೊಗ್ಗುಗಳ ಕಲರ್, ಗಾತ್ರ ಹೊಂದಿಕೊಂಡು ಅಂದು ಏನು ಹೊಳೆಯುತ್ತದೋ ಅದನ್ನು ಚಿತ್ರಿಸುತ್ತೇನೆ. ಎಲ್ಲವೂ ನನ್ನ ಖುಷಿಗಾಗಿ.’ ಎಂದರು ಸುರೇಶ್. ಇಂದು ಬಳಸಿದ ಮೊಗ್ಗು ನಾಳೆ ದೇವರ ಪೂಜೆಗೆ ಬಳಕೆ.
ಅಂದಂದಿನ ಚಿತ್ತಾರವನ್ನು ಕ್ಲಿಕ್ಕಿಸಿ, ಫೇಸ್ಬುಕ್ಕಿಗೆ ಅಪ್ಲೋಡ್ ಮಾಡುತ್ತಾರೆ. ಹೀಗೆ ಅಪ್ಲೋಡ್ ಮಾಡಿದ ಚಿತ್ರಗಳು ನೂರಾರು. ಮೆಚ್ಚಿಕೊಂಡವರು ಸಾವಿರಾರು ಮಂದಿ. ಶುಭ್ರ ಹಾಗೂ ಕಪ್ಪು ಹಿನ್ನೆಲೆಯ ನೆಲದ ಮೇಲೆ, ಮೇಜಿನ ಮೇಲೆ ಒಂದೊಂದೇ ಹೂವನ್ನೋ, ಕಾಳನ್ನು ಜೋಡಿಸುತ್ತಾ ಚಿತ್ತಾರ ತಯಾರಾಗುತ್ತಿರುವಾಗಲೇ ಕೆಲವೊಂದು ಮೊಗ್ಗುಗಳು ಅರಳುವ ಸೂಚನೆ ಕೊಟ್ಟುಬಿಡುತ್ತದಂತೆ. ‘ಕೆಲವೊಮ್ಮೆ ನಾಲ್ಕೈದು ತಾಸು ಕುಳಿತು ಚಿತ್ರ ಪೂರ್ತಿಯಾಯಿತು ಅನ್ನುವಾಗಲೇ ಹೂಗಳು ಅರಳುವ ಸೂಚನೆ ಸಿಕ್ಕಿಬಿಡುತ್ತದೆ. ಹೂಗಳ ಅರಳುವಿಕೆಯ ಜೀವನಚಕ್ರ ಗೊತ್ತಾದರೆ ಯಾವ ಹೂವಿನ ಮೊಗ್ಗನ್ನು ಯಾವಾಗ ಬಳಸಬೇಕೆನ್ನುವ ಜ್ಞಾನ ಸಿಕ್ಕಿಬಿಡುತ್ತದೆ,’ ಎನ್ನುತ್ತಾರೆ ಸುರೇಶ್.
ಇಲ್ನೋಡಿ, ಬೆಳ್ಳುಳ್ಳಿಯ ಸೀಳಿನಿಂದ ಮನುಷ್ಯನ ಮುಖ, ನೀರುಳ್ಳಿಯಿಂದ ಹಕ್ಕಿ, ಮುತ್ತು ಮಲ್ಲಿಗೆ ಮೊಗ್ಗಿನಿಂದ ವಾಜಪೇಯಿ; ಮುತ್ತುಮಲ್ಲಿಗೆ, ಕೇಪಳ ಹೂ, ಜೋಳದ ಕಾಳುಗಳಿಂದ ರಂಗೋಲಿ; ಶಂಖಪುಷ್ಟ ಮತ್ತು ಕಾಡು ಹೂವಿನ ಮೊಗ್ಗುಗಳ ಕಾಂಬಿನೇಶನ್ನಿನ ಚಿತ್ತಾರಗಳು ಮನ ಸೆಳೆಯುತ್ತವೆ. ಹೆಚ್ಚು ಅರಳದ ದಾಸವಾಳ ಹೂವಿನ ಎಸಳುಗಳಿಂದ ತಯಾರಾದ ವಿವೇಕಾನಂದರ ಚಿತ್ರ ಮೋಡಿ ಮಾಡುತ್ತದೆ.
ಚಿತ್ರವನ್ನು ನೋಡಿ ಅನೇಕ ಮಂದಿ ಖುಷಿ ಪಟ್ಟರು. ದಿವಸಕ್ಕೆ ಒಂದೊಂದೇ ಚಿತ್ರಗಳು. ಮಾಡ್ತಾ ಮಾಡ್ತಾ ಐಡಿಯಾ ಬಂತು. ಒಂದು ಮಾಡಿದಾಗ ಇನ್ನೊಂದರ ಹೊಳಹು ಮೂಡುತ್ತಿತ್ತು. ಗೋಧಿ, ಪಚ್ಚೆ ಹೆಸರು, ಅಲಸಂಡೆ ಬೀಜಗಳನ್ನೂ ಬಳಸುತ್ತೇನೆ. ಸುರೇಶ್ ಸಮಸ್ಯೆಗಳನ್ನೂ ಮುಂದಿಡುತ್ತಾರೆ, ‘ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಮೊಗ್ಗುಗಳನ್ನು ಆಯ್ಕೆ ಮಾಡುವುದು ಸೂಕ್ತ. ಚಿತ್ರ ರಚಿಸುವಾಗ ಕೆಲವೊಂದು ಮೊಗ್ಗುಗಳು ಸಹಕರಿಸುವುದಿಲ್ಲ. ಅತ್ತಿತ್ತ ಹೊರಳಾಡುತ್ತವೆ. ಇನ್ನೂ ಕೆಲವು ಬೆಂಡ್ ಮಾಡಲು ಒಗ್ಗುವುದಿಲ್ಲ. ಹಾಗಾಗಿ ಎಚ್ಚರ ಮತ್ತು ತಾಳ್ಮೆ ಮುಖ್ಯ. ಅಂಟು ಮೊದಲಾದ ಯಾವುದೇ ಕೃತಕ ಒಳಸುರಿಗಳಿಲ್ಲ.’
ಮಂಜೊಟ್ಟಿ ಹೂವಿನ ಮೊಗ್ಗನ್ನು ಕೊಯಿದ ಮೇಲೆ ಅದು ಅರಳುವ ಸಾಮಥ್ರ್ಯ ಕಳೆದುಕೊಳ್ಳುತ್ತದಂತೆ! ಕೆಲವು ಕಾಡು ಹೂಗಳನ್ನೂ ಬಳಸುತ್ತಾರೆ. ಯಾವ ಚಿತ್ರ ಬಿಡಿಸುತ್ತೇನೆ ಎಂದು ಮೊದಲೇ ನಿರ್ಧಾರ ಮಾಡಲಿಕ್ಕಾಗುವುದಿಲ್ಲ. ಅಂದು ಯಾವ ಮೊಗ್ಗು ಸಿಗುತ್ತದೋ ಅದಕ್ಕೆ ಹೊಂದಿಕೊಂಡು ಚಿತ್ತಾರದ ನಿರ್ಧಾರ. ಒಣದ್ರಾಕ್ಷಿ, ಸಾಬಕ್ಕಿ ಕಾಳು, ಕೊತ್ತಂಬರಿ ಬೀಜ.. ಇವುಗಳೆಲ್ಲವೂ ಹೂಮೊಗ್ಗಿನೊಂದಿಗೆ ಸಹಕರಿಸುತ್ತವೆ. ಒಮ್ಮೆ ಫೇಸ್ಬುಕ್ಕಿಗೆ ಒಂದು ಚಿತ್ರ ಅಂಟಿಸಿದರೆ ಮುಗಿಯಿತು. ಮತ್ತೆ ಏನಿದ್ದರೂ ಇನ್ನೊಂದು ಚಿತ್ರದತ್ತ ಹೊರಳು ನೋಟ.
ಚಿಕ್ಕ ಸ್ವ-ಉದ್ದಿಮೆ ನಡೆಸುತ್ತಿರುವ ಸುರೇಶ್ ಹೆಗಡೆಯವರು ಪ್ರಚಾರದಿಂದ ದೂರ. ಆಧ್ಯಾತ್ಮದತ್ತ ಒಲವು. ಎಲ್ಲವೂ ಸ್ವ-ಸಂತೋಷಕ್ಕಾಗಿ. ನೀವು ಮಾಡಿ. ಮಾಡ್ತಾ ರೂಢಿಯಾಗುತ್ತದೆ. ಹೆಣ್ಮಕ್ಕಳಿಗೆ ಈ ಕಲೆಯು ಬೇಗ ಒಲಿಯುತ್ತದೆ. ಎನ್ನಲು ಮರೆಯಲಿಲ್ಲ. ಇಂತಹ ಆಸಕ್ತಿಗಳಿಗೆ ಸಮಯ ಮತ್ತು ಮನಸ್ಸು ಬಂಡವಾಳ.
(ಅಡಿಕೆ ಪತ್ರಿಕೆ / ದಶಂಬರ 2021)
0 comments:
Post a Comment