Sunday, February 8, 2009

ಒಣಭೂಮಿಯಲ್ಲಿ ಹಸಿರು`ದ್ವೀಪ'!


ಬೆಂಗಳೂರಿನ ಸುಲ್ತಾನ್ಪಾಳ್ಯದ ಎನ್.ಆರ್.ಶೆಟ್ಟಿ ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ. ಪತ್ನಿ ಸರಸ್ವತಿಕೂಡಾ ಇದೇ ಸಂಸ್ಥೆಯಲ್ಲಿದ್ದು ಈಗ ನಿವೃತ್ತರು. ಸಂಪಾದನೆಯ ಕುಟುಂಬ. ಬೊಗಸೆ ತುಂಬಾ ಕಾಂಚಾಣ!

ಸಮಯ ಕಳೆಯಲು, ನಿವೃತ್ತ ಜೀವನ ಸಾಗಿಸಲು ರಾಜಧಾನಿಯಲ್ಲಿ ಎಷ್ಟೊಂದು ವ್ಯವಸ್ಥೆಗಳಿವೆ, ಅವಕಾಶಗಳಿವೆ. ಆದರೆ ಶೆಟ್ಟಿ ದಂಪತಿಯ ಆಯ್ಕೆ 'ಕೃಷಿ' - ಅಂದ್ರೆ ನಂಬ್ತೀರಾ?
2004ರಲ್ಲಿ ಬೆಂಗಳೂರು ಶಹರಿನ ನೆಲಮಂಗಲ ಬಳಿ ಎರಡು ಲಕ್ಷಕ್ಕೆ ಒಂದೂಕಾಲೆಕ್ರೆ ಜಾಗ ಖರೀದಿ. ಒಣಭೂಮಿ, ನೀರಿಗೆ ತತ್ವಾರ. 'ಈ ಒಣಭೂಮಿಯಲ್ಲಿ ಏನು ತೆಗಿತಿಯಾ' ಕೆಲವರು ಗೇಲಿ ಮಾಡಿದರು ಎನ್ನುವ ಶೆಟ್ರು, 'ಅನಾವಶ್ಯಕ ವೆಚ್ಚ ಮಾಡದೆ, ಹೊರಗಡೆಯಿಂದ ಯಾವುದೇ ಒಳಸುರಿಗಳನ್ನು ಸುರಿಯದೆ, ಸ್ಥಳೀಯ ಲಭ್ಯ ಸಂಪನ್ಮೂಲಗಳನ್ನು ಮಳೆಯಾಧಾರಿತವಾಗಿ ಬೆಳೆಯಬೇಕು - ಎಂಬುದು ನನ್ನ ಕೃಷಿಯ ಗುಟ್ಟು'.

ಮೊದಲಿಗೆ ಆವರಣಕ್ಕೆ ಕಾಡು ಗಿಡಗಳನ್ನು ನೆಟ್ಟರು. ಇಡೀ ಭೂಮಿಯಲ್ಲಿ ಉಳುಮೆ ಮಾಡಿದರು. 8-9 ಗುಂಟೆಯಂತೆ ಆರು ತಾಕುಗಳನ್ನು ಮಾಡಿ - ಹದಿನೈದು ವಿಧದ ಮಾವು, ಸೀತಾಫಲ, ನೆಲ್ಲಿ, ಹಲಸು, ನೇರಳೆ, ನುಗ್ಗೆ. ಗಳನ್ನು ಬೇರೆಬೇರೆಯಾಗಿ ಹಚ್ಚಿದರು. ''ಚಿಕ್ಕು, ಬಾಳೆ, ವಾಣಿಜ್ಯ ಉದ್ದೇಶದವು. 'ಇವು ಆದಾಯ ಕೊಡುವಲ್ಲಿಯ ತನಕ ಉಳಿದುದು ಫಲ ಕೊಡುತ್ತಿರಬೇಕು.' ಎಂಬ ಆಶಯ.

ತಾಕುಗಳ ಹೊರತಾದ ಜಾಗದಲ್ಲಿ ಧಾನ್ಯಗಳ ಬಿತ್ತನೆ. ಕಡ್ಲೆ, ರಾಗಿ, ಮೆಣಸು, ಅವರೆ, ಹುಚ್ಚೆಳ್ಳು, ಉದ್ದು. ಹುರುಳಿ, ಕಡ್ಲೆಕಾಯಿ, ಅಲಸಂಡೆ, ಜೋಳ ಡಯಾಂಚ, ಸೆಣಬು, ನೀಲಿ, ಹರಳುಗಳ ಬೀಜಗಳನ್ನು ಎಸೆಯುವುದು. ಎಲ್ಲೆಂದರಲ್ಲಿ ಅವು ಹುಟ್ಟಿವೆ. ಇವೆಲ್ಲಾ ಹುಟ್ಟಿ ಗಿಡವಾದಾಗ ಗೊಬ್ಬರಕ್ಕೆ ಬಹಳ ಒಳ್ಳೆಯದು. ಇವುಗಳಿಂದ ಇಳುವರಿ ಪಡೆಯಬೇಕೆಂದರೆ ಪ್ರತ್ಯೇಕ ಪ್ರತ್ಯೇಕವಾಗಿ ಬಿತ್ತಿದರಾಯಿತು. ಯಾವಾಗಲೂ ಏಕಬೆಳೆಯನ್ನು ಬೆಳೆದರೆ ಮಣ್ಣಿಗೆ ಫಲವತ್ತತೆ ಕಡಿಮೆ'.

ಗೊಬ್ಬರಗಿಡ ಗ್ಲಿರಿಸೀಡಿಯ ಹೇರಳ. ವರುಷಕ್ಕೆ ನಾಲ್ಕು ಸಲ ಸವರಿ, ಗಿಡಗಳಿಗೆ ಹಾಕುತ್ತಾರೆ. ಶುರುವಿಗೆ ಮಾತ್ರ ತಿಪ್ಪೆಗೊಬ್ಬರ. ಈಗ ಸ್ವಲ್ಪ ಮಟ್ಟಿಗೆ ಕಾಂಪೋಸ್ಟ್ ಗೊಬ್ಬರ. ಸಣ್ಣ ಪ್ರಮಾಣದಲ್ಲಿ ದ್ರವಗೊಬ್ಬರ. ಜತೆಗೆ ಜೀವಾಮೃತ, ಪಂಚಾಮೃತ - ಇವಿಷ್ಟೇ ಗಿಡಗಳಿಗೆ ಆಹಾರ.

ಹಣ್ಣಿನಗಿಡಗಳಲ್ಲಿ ಬಹುತೇಕ ಕಸಿ ಗಿಡಗಳು. ಸೀತಾಫಲ, ಮಾವು, ನೆಲ್ಲಿ, ನುಗ್ಗೆ, ಚಿಕ್ಕು ಫಲ ನೀಡಲು ಆರಂಭವಾಗಿದೆ. ಚೆನ್ನಾಗಿ ಮಳೆ ಬಂದರೆ ಇನ್ನೆರಡು ವರುಷದಲ್ಲಿ ಇಲ್ಲಿನ ಕೆಲವು ಹಣ್ಣುಗಳು ನಗದಾಗಬಹುದು.

ಮಣ್ಣಿಗೆ ನಾವು ಜೀವ ಕೊಡಬೇಕು - ಸ್ನೇಹಿತರು ಸಿಕ್ಕಾಗಲೆಲ್ಲಾ ಅವರಾಡುವ ಮಾತು. ಭೂಮಿ ಫಲವತ್ತಾಗಿರಬೇಕಾದರೆ ಅದಕ್ಕೆ ಒಳ್ಳೆಯ ವಾತಾವರಣ ಕಲ್ಪಿಸಬೇಕು, ಕಾಡು ವಾತಾವರಣ ಕಲ್ಪಿಸಬೇಕು. ವಿಪರೀತ ಗೊಬ್ಬರ, ಆರೈಕೆ ಎನ್ನುತ್ತಾ ಒಳಸುರಿಗಳನ್ನು ಕಡಿಮೆ ಮಾಡಬೇಕು - ಎನ್ನುವ ಶೆಟ್ರು, ಒಂದು ಸಣ್ಣ ಕುಟುಂಬ ಹೇಗೆ ಆಳುಗಳ ಅವಲಂಬನೆಯಿಲ್ಲದೆ, ಕಡಿಮೆ ವೆಚ್ಚದಲ್ಲಿ ಜೀವಿಸಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ.

ಮಧ್ಯ ಮಧ್ಯ ಚೆಂಡುಹೂ, ಸಾಸಿವೆ ಗಿಡ, ಪುಂಡಿಗಿಡ ಬೆಳೆದಿದ್ದಾರೆ. ಕೀಟಗಳಿಗೆ ಇವು ಬಹಳ ಪ್ರೀತಿ. ಆಗ ಉಳಿದ ಬೆಳೆಗಳಿಗೆ ಅವುಗಳ ಕಾಟಕಡಿಮೆಯಾಗುತ್ತದೆೆ. ಮಣ್ಣಿನಲ್ಲಿ ಜೀವಸಾರ ಸೃಷ್ಟಿ ಆದುದರಿಂದ ಗಿಡಗಳು ಚೆನ್ನಾಗಿವೆ. ರೋಗ ಬಂದಿಲ್ಲ. ಜೀವವೈವಿಧ್ಯ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿವೆ.' ಶೆಟ್ಟರ ಈ ಮಾತುಗಳಿಗೆ ಅಲ್ಲಿನ ಗಿಡಗಳೇ ಸಾಕ್ಷಿ. ಅವರ ತೋಟದ ಅತ್ತಿತ್ತದ ಕೃಷಿಯೆಲ್ಲಾ ಒಣಒಣ-ಭಣಭಣ. ಇವರದ್ದೊಂದು ಹಸಿರು 'ದ್ವೀಪ'!

'ಮಳೆಯಾಧಾರಿತವಾಗಿ ಕೃಷಿ ಸಾಧ್ಯ ಅಂತ ಕಂಡುಕೊಂಡಿದ್ದೇನೆ. ಈಗ ಧ್ಯೆರ್ಯ ಬಂದಿದೆ' ಎನ್ನುವ ಶೆಟ್ಟರು ಒಂದು ಮಾತು ಸೇರಿಸುತ್ತಾರೆ - 'ನಿಸರ್ಗದ ಕೊಡುಗೆಯನ್ನು ಅನುಭವಿಸಲು ನಿಸರ್ಗದೊಂದಿಗೆ ಇರಬೇಕು.'

ಕೃಷಿಗೆ ಮಳೆನೀರೇ ಆಧಾರ. ಸಿಮೆಂಟ್ ಟ್ಯಾಂಕ್ನಲ್ಲಿ ನೀರನ್ನು ಹಿಡಿದಿಟ್ಟುಕೊಂಡಿದ್ದಾರೆ. ಮಳೆಯಾಧಾರಿತ ಕೃಷಿ. ಮೂರು ಪ್ರತ್ಯೇಕ ಟ್ಯಾಂಕಿಗಳಲ್ಲಿ ಸೋಸಿದ ಕುಡಿನೀರು ಸಂಗ್ರಹ. ಕೊಳವೆ ಬಾವಿ ತೋಡಿಲ್ಲ, ಬಾವಿ ತೆಗೆದಿಲ್ಲ. ಆರು ಕಲ್ಲಿನ ಕಂಬಗಳನ್ನು ಊರಿ ಚಿಕ್ಕ ಮನೆ. ಸೋಲಾರ್ ಇದೆ. ದಿನವಿಡೀ ಕೆಲಸ. ವಿಶ್ರಾಂತಿ ಸಮಯದಲ್ಲಿ ರೇಡಿಯೋ, ಓದು. ಬೆಳಕಿಗೆ ಸೋಲಾರ್ ಬಳಕೆ.

ಬೆಂಗಳೂರು ನಗರದಲ್ಲಿ ಮನೆಯಿದ್ದರೂ ಶೆಟ್ಟರು ಮತ್ತು ಅವರ ಮಡದಿ ತಿಂಗಳಲ್ಲಿ 20-25 ದಿವಸ ಇಲ್ಲೇ ವಾಸ. 'ಮಳೆಸಂಗ್ರಹದ ನೀರು ಹತ್ತು ತಿಂಗಳಿಗೆ ಸಾಕಾಗುತ್ತದೆ. ಉಳಿದ ಎರಡು ತಿಂಗಳಿಗೆ ನೀರನ್ನು ಖರೀದಿಸುತ್ತೇವೆ' ಎನ್ನುತ್ತಾರೆ ಸರಸ್ವತಿ.
ಇವರ ತೋಟಕ್ಕೆ ಸುತ್ತಲಿನವರು ಬಂದು 'ಶಹಬ್ಬಾಸ್' ಅಂತಾರಂತೆ. ಮಾಡುವ ಧ್ಯೇರ್ಯ ಮಾತ್ರ ಇಲ್ಲ! ಒಂದು ಸಣ್ಣ ರೈತ ಕುಟುಂಬ ಸುಖವಾಗಿ ಈ ಪದ್ಧತಿಯಿಂದ ಖಂಡಿತ ಜೀವಿಸಬಹುದು.

ಇಷ್ಟು ಮಾಡಿದ್ದರಿಂದ ಲಾಭ ಏನು ಅಂತ ಪ್ರಶ್ನೆ ಮೂಡುವುದು ಸಹಜ. ಐಷರಾಮದ ನಗರ ಬದುಕನ್ನು ಅಪೇಕ್ಷಿಸುವವರು ದಯವಿಟ್ಟು ಇಂತಹ ಕೃಷಿ ಮಾಡಿ ಹಾಳುಮಾಡಬೇಡಿ. ನಿಮಗೆ ನಿಸರ್ಗದಲ್ಲಿ ಪ್ರೀತಿ ಇದ್ದರೆ, ಸರಳ ಬದುಕಿನ ಆಶಯವಿದ್ದರೆ ಮಾತ್ರ ಇಂತಹ ಕೃಷಿ ಮಾಡಿ' - ಶೆಟ್ಟರ ಕಿವಿಮಾತು. 'ಆವರಣಕ್ಕೆ ನೆಟ್ಟ ಕಾಡುಗಿಡಗಳು ನನ್ನ ಫಿಕ್ಸೆಡ್ ಡಿಪೋಸಿಟ್. ಹತ್ತಿಪ್ಪತ್ತು ವರುಷದಲ್ಲಿ ಅವು ನನಗೆ ದುಡ್ಡು ಕೊಡುತ್ತದೆ!' ಎಂದಾಗ ಶೆಟ್ಟರಲ್ಲಿ ಸಂತೃಪ್ತಿ.

ನಗರದಲ್ಲಿ ವಾಸಿಸಿದ ನಿಮಗೆ ಇಂತಹ ಕಾಡುವಾಸ ಹೇಗೆ ಸಹ್ಯವಾಯಿತು?
'ರೈತರ ಜತೆ ಸೇರಿಕೊಂಡಿದ್ದಾಗ, ಪಡೆದ ಜ್ಞಾನ ಇದೆಯಲ್ಲಾ, ಅದರ ಅನುಷ್ಠಾನಕ್ಕೊಂದು ತಾಣ ಬೇಕಾಗಿತ್ತು. ಅದೀಗ ಪೂರೈಸಿದೆ. ಇಲ್ಲಿನ ವಾಸವನ್ನು ಜೀವನ ಪದ್ದತಿ ಅಂತ ಸ್ವೀಕರಿಸಿದರೆ ಏನೂ ಸಮಸ್ಯೆಯಿಲ್ಲ. ಪ್ರಕೃತಿ ಅದೇ ಕೊಡ್ತದೆ. ಒದ್ದಾಟ ಬೇಡ. ಅದನ್ನು ಅದರ ಪಾಡಿಗೆ ಬಿಟ್ಟುಬಿಡಿ. ಮಣ್ಣನ್ನು ಫಲವತ್ತತೆ ಮಾಡಿ' ಅನ್ನುವಾಗ, ಸರಸ್ವತಿಯವರು 'ಇದು ನಮ್ಮ ತೋಟದ ಕಡ್ಲೆಕಾಯಿ. ಇದು ಪ್ಯಾಶನ್ ಫ್ರುಟ್ ಹಣ್ಣು. ಈಗಷ್ಟೇ ಕಿತ್ತದ್ದು. ಒಯ್ದು, ತಿಂದು ರುಚಿಹೇಳಿ' ಎನ್ನುತ್ತಾ ಕೈಗೆ ನೀಡಿದರು.

1 comments:

kumar said...

HI, iam kumar from bangalore.

i am very much interested like propole pls provide me contact details of them

Kumar
kumarbs.bedagere@gmail.com

Post a Comment