Saturday, January 9, 2010

'ಕಣ್ಣಿಗೆ ಕಂಡರೂ ಕೈಗೆ ಸಿಗುತ್ತಿಲ್ಲ್ಲ'

ಚಿಕ್ಕಮಗಳೂರು-ಹಾಸನ ಜಿಲ್ಲೆಗಳ ಸಂಧಿ ಹಳ್ಳಿ ಅಚ್ಚನಹಳ್ಳಿ. ಪತ್ರಕರ್ತ ಮಿತ್ರ ಸುಚೇತನರ ಮನೆಗೆ ತಲಪುವಾಗ ತಡರಾತ್ರಿ. ಕಾಫಿ ಬೆಳೆ ಚೆನ್ನಾಗಿದೆ, ಬೆಲೆಯೂ ತೃಪ್ತಿದಾಯಕ, ಫಸಲು ಕೈಗೆ ಬರುವುದೊಂದೇ ಬಾಕಿ - ಮಾತಿನ ಮಧ್ಯೆ ನುಸುಳಿಹೋದ ವಿಚಾರಗಳು.

ದಶಂಬರ 27 - ಬೆಳ್ಳಂಬೆಳಿಗ್ಗೆ ದಿಢೀರಾಗಿ ಗುಡುಗು-ಮಿಂಚು. ಧಾರಾಕಾರ ಮಳೆ. ಮಲೆನಾಡಲ್ವಾ. ಥಂಡಿಯೋ.. ಥಂಡಿ! ಸುಚೇತನರ ಅಣ್ಣ ಸ್ವರೂಪ್ ಟೆನ್ಶನ್ನಲ್ಲಿ ಶತಪಥ ಹಾಕುತ್ತಾ, 'ಕಾಫಿ ಕೃಷಿಕರ ಬದುಕು ಮುಗಿದೋಯ್ತು. ಈ ರೀತಿಯ ಅಕಾಲ ಮಳೆ ಬಂದರೆ ದೇವರೇ ಗತಿ. ಕೈಗೆ ಬಂದ ತುತ್ತು ಬಾಯಿಗಿಲ್ಲ' ಎಂದರು.

ಅಂದು ಶುರುವಾದ ಮಳೆಯ ಅಬ್ಬರ ಮರುಕಳಿಸುತ್ತಿದೆ. ಕಾಫಿಯನ್ನೇ ನಂಬಿದ ಕೃಷಿಕರಿಗೀಗ ನಿದ್ದೆಯಿಲ್ಲದ ರಾತ್ರಿಗಳು. ಗಿಡದಲ್ಲಿ ಕಾಫಿ ಹಣ್ಣಾಗಿದೆ, ಕೊಯ್ಯಲು ಬಾಕಿ. ಗದ್ದೆಯಲ್ಲಿ ಭತ್ತ ಕಟಾವ್ ಆಗಿದೆ, ಅಂಗಳಕ್ಕೆ ಇನ್ನೇನು ಒಂದೆರಡು ದಿನಗಳಲ್ಲಿ ತರಬೇಕು - ಈ ಎಲ್ಲಾ ಸಿದ್ಧತೆಯಲ್ಲಿದ್ದಾಗಲೇ ಮಳೆ ವಕ್ಕರಿಸಿತು.

ಪರಿಣಾಮ, ಹಣ್ಣಾದ ಕಾಫಿ ಬೀಜಗಳು ನೆಲಕಚ್ಚಿವೆ. ಗಿಡದಲ್ಲೇ ಕೆಲವು ಬಿರಿಯುತ್ತಿದೆ. ರೊಬಸ್ಟಾ ಕಾಫಿ ಗಿಡದಲ್ಲಿ ಅಕಾಲಿಕವಾಗಿ ಹೂ ಬರಲು ಸುರುವಾಗಿದೆ. ಅರೆಬಿಕಾ ಕೊಯ್ಲು ಸಮಯ ನವೆಂಬರ್ ಆದರೂ, ಕಾರ್ಮಿಕರ ಅಭಾವದಿಂದ ಅಪೂರ್ಣಗೊಂಡು ಕೊಯ್ಲಿಗೆ ಬಾಕಿಯಿತ್ತು. ಕಣ ಸೇರಿದ ಭತ್ತ ಒದ್ದೆಯಾಗಿದೆ. ಗದ್ದೆಯಿಂದ ತರಲು ಬಾಕಿಯಾದ ತೆನೆಗಳು ನೆನೆದಿವೆ. ಎಲ್ಲಾ ಆರ್ಥಿಕ ಲೆಕ್ಕಾಚಾರಗಳು ಹೊಸಪುಟ ತೆರೆದಿವೆ.

'ಕಾಫಿ ಎಲ್ಲಾ ಕಡೆ ಚೆನ್ನಾಗಿ ಬಂದಿದೆ. ಉತ್ತಮ ದರದ ನಿರೀಕ್ಷೆಯಿತ್ತು. ಆದರೆ ಬೆಳೆಕೊಯ್ಲಿನ ಸಮಯದಲ್ಲೇ ಹೀಗಾಗಬೇಕೇ. ಅಕಾಲವಾಗಿ ಮಳೆ ಬಂದಿರುವುದರಿಂದ ಗುಣಮಟ್ಟದ ಕಾಫಿಯನ್ನು ಕೊಡುವಂತಿಲ್ಲ. ಶೇ.60ರಷ್ಟು ಬೆಳೆ ಕಣ್ಣೆದುರೇ ಹಾಳಾಗುತ್ತಿದೆಯಲ್ಲಾ' - ಸಕಲೇಶಪುರ ಸನಿಹದ ಯಡೆಹಳ್ಳಿಯ ಕೃಷಿಕ ವೈ.ಸಿ ರುದ್ರಪ್ಪ ಕೊರಗು.

ಕಾಫಿ ಕೊಯ್ಯಲು ನೂರ ಇಪ್ಪತ್ತೈದು ರೂಪಾಯಿ ಸಂಬಳ ಪಡೆಯುವ ಕಾರ್ಮಿಕರು, ನೆಲಕ್ಕೆ ಉದುರಿದ ಕಾಫಿ ಆರಿಸಲು ಇನ್ನೂರು ರೂಪಾಯಿ ಕೇಳುತ್ತಿದ್ದಾರಂತೆ. 'ಒಂದು ಕಿಲೋ ಕಾಫಿ ಕೊಯ್ಯಲು ಎರಡೂವರೆ ರೂಪಾಯಿ ನೀಡಿದರೆ ಸಾಕಾಗುತ್ತಿತ್ತು. ಈಗ ನಾಲ್ಕೂವರೆಯಿಂದ ಏಳು ರೂಪಾಯಿಗೆ ಏರಿದೆ. ಆದರೂ ಜನ ಸಿಗುತ್ತಿಲ್ಲ' ದೇವವೃಂದದ ದಿನೇಶ್ ವಾಸ್ತವದತ್ತ ಬೊಟ್ಟುಮಾಡುತ್ತಾರೆ.

ಈಗ ಹೂಬಿಟ್ಟು ಕಾಯಿ ಕಚ್ಚಿದರೆ ಮುಂದಿನ ಆಗಸ್ಟ್-ಸೆಪ್ಟೆಂಬರ್ ತಿಂಗಳಿಗೆ ಹಣ್ಣಾಗುತ್ತದೆ. ಈ ಹೊತ್ತಲ್ಲಿ ಬೆರಿಬೋರರ್ ಬಂದುಬಿಡುತ್ತದೆ. ಇದನ್ನು ತಪ್ಪಿಸಲು ಜನವರಿ-ಫೆಬ್ರವರಿಯಲ್ಲಿ ಗಿಡಗಳಿಗೆ ಸ್ಟ್ರೆಸ್ ಮಾಡಲಾಗುತ್ತದೆ. ಇದರಿಂದಾಗಿ ದಶಂಬರ-ಜನವರಿಯಲ್ಲಿ ಫಸಲು ತೆಗೆಯಬಹುದು. ಅವೆಲ್ಲವೂ ಉಲ್ಟಾಪಲ್ಟಾ!

ಜಿಲ್ಲಾ ಕೇಂದ್ರ ಬ್ಯಾಂಕ್ 2008-09ರಲ್ಲಿ ಕಾಫಿ ಕ್ಷೇತ್ರಕ್ಕೆ 23ಕೋಟಿ ರೂಪಾಯಿ ಸಾಲ ನೀಡಿತ್ತು. ಮುಂದಿನ ಹಣಕಾಸು ವರ್ಷಕ್ಕೆ ಮೂವತ್ತೈದುವರೆ ಕೋಟಿ ರೂಪಾಯಿ ನೀಡುವ ಗುರಿ ಹಾಕಿಕೊಂಡಿತ್ತು. ಕಾಫಿಯ ಇಳುವರಿ ಸಮೃದ್ಧತೆಯನ್ನು ಕಂಡ ಸಾಕಷ್ಟು ರೈತರು ಬ್ಯಾಂಕಿನ ಸೌಲಭ್ಯವನ್ನು ಪಡೆಯಲು ಮಾನಸಿಕವಾಗಿ ತಯಾರಾಗಿದ್ದರು.

'ತೆಗೆದ ಸಾಲವನ್ನು ಪೂರ್ತಿ ಮರುಪಾವತಿ ಮಾಡುವ ಸಂತಸದಲ್ಲಿದ್ದೆ. ಈಗಿನ ಪರಿಸ್ಥಿತಿ ನೋಡಿದರೆ ಅಸಲು ಬಿಡಿ, ಬಡ್ಡಿ ಕಟ್ಟಲೂ ಗಿಟ್ಟುತ್ತಾ ಇಲ್ವೋ' ಎನ್ನುತ್ತಾರೆ ಕೃಷಿಕ ವಸಂತ. ಕಾಫಿ ಬೋರ್ಡ್ಗೆ ಈ ಸಲ ತೊಂಭತ್ತಾರು ಟನ್ ಕಾಫಿ ಬರಬಹುದೆಂಬ ಲೆಕ್ಕಾಚಾರ. ಆದರೆ ಪ್ರಾಕೃತಿಕ ವಿಕೋಪದಿಂದಾಗಿ ಶೇ.30ರಷ್ಟು ಕಾಫಿ ಕಳೆದುಕೊಳ್ಳಬೇಕಾಗಬಹುದು. ಬೋರ್ಡ್ ಏನೋ ಸುಧಾರಿಸಿಕೊಳ್ಳಬಹುದು. ಆದರೆ ಕೃಷಿಕರು?

ಅಡಿಕೆ ಕತೆನೇ ಬೇರೆ. ಬಿಸಿಲಿಗೆ ಒಣಹಾಕಿದ್ದ ಅಡಿಕೆಯನ್ನು ಒಳಗೆ ಪೇರಿಸುವಷ್ಟೂ ಮಳೆ ಅವಕಾಶ ಕೊಟ್ಟಿಲ್ಲ. ಹಣ್ಣಡಿಕೆ ಒಣಗದೆ ಬಣ್ಣ ಕಳೆದುಕೊಂಡು ಬೂಸ್ಟ್ ಬಂದಿವೆ.

ಹಾಸನ ಕಡೆ ಗದ್ದೆಯಲ್ಲಿ ಇಪ್ಪತ್ನಾಲ್ಕು ಗಂಟೆ ಕಟಾವ್ ಆದ ತೆನೆಗಳು ಸ್ನಾನ ಮುಗಿಸಿವೆ. ಕೆಲವು ಕಟಾವಿಗೆ ಸಿದ್ಧವಾಗಿವೆ. 'ತೆನೆ ಕಟಾವಿಗೆ ಯಂತ್ರವನ್ನೇನೋ ಬಳಸಬಹುದು. ಆದರೆ ಯಂತ್ರವನ್ನು ಗದ್ದೆಗೆ ಇಳಿಸುವುದಾದರೂ ಹೇಗೆ' ಪ್ರಶ್ನಿಸುತ್ತಾರೆ ದಿನೇಶ್.

'ಸಾರ್, ಇಂತಹ ಹೊಡೆತಗಳನ್ನು ದೊಡ್ಡ ಕೃಷಿಕರು ತಾಳಿಕೊಳ್ಳಬಹುದು. ಆದರೆ ಒಂದೆರಡು ಎಕ್ರೆ ಕೃಷಿ ಇರುವಂತಹ ನಮ್ಮಂತಹವರಿಗೆ ಶಾಶ್ವತ ಹೊಡೆತ' ಮೂಡಿಗೆರೆ ಫಲ್ಗುಣಿಯ ಕೇಶವ ಅಳಲು. 'ಐದಾರು ದಿವಸದಲ್ಲಿ ನಾಲ್ಕಿಂಚು ಮಳೆಯಾಗಿದೆ. ಕಳೆದೆಂಟು ವರುಷದಿಂದ ಇಂತಹ ಸ್ಥಿತಿ ಬಂದಿರಲಿಲ್ಲ. ದರದಲ್ಲಿ ಏರಿಳಿತವಿತ್ತಷ್ಟೇ. ಅದನ್ನೇನೋ ಹೊಂದಾಣಿಸಿಕೊಳ್ಳಬಹುದು' ಎನ್ನುತ್ತಾರೆ ಸ್ವರೂಪ್ ಅಚ್ಚನಹಳ್ಳಿ.

ಕಾಫಿ, ಭತ್ತದೊಂದಿಗೆ ಮೆಕ್ಕೆಜೋಳ, ರಾಗಿ, ಕಿತ್ತಳೆ, ಕರಿಮೆಣಸುಗಳ ಗತಿನೂ ಇದೇ! ಐದಾರು ಜಿಲ್ಲೆಗಳ ಕೃಷಿಕರ ಬದುಕು ತಲ್ಲಣಗೊಂಡಿದೆ. 'ಎಲ್ಲ ಇದ್ದೂ ಏನೂ ಮಾಡಲಾಗದ ಸ್ಥಿತಿ'. ಪರಿಹಾರ, ಪ್ರೋತ್ಸಾಹ, ಬೆಂಬಲ ಬೆಲೆಗಳ ಮಾತು ನಂತರ. ಮೊದಲಾಗಬೇಕಾದುದು - ಉದುರಿ ಬಿದ್ದ ಕಾಫಿ ಹಣ್ಣಿಗೆ ಸಂಸ್ಕರಣೆ, ಇದರಿಂದ ಗುಣಮಟ್ಟದ ಕಾಫಿ ತೆಗೆವ ಕ್ರಮ - ನಮ್ಮಲ್ಲಿ ಅಂತ ವ್ಯವಸ್ಥೆ ಇದೆಯೇ?

ಸರಕಾರಿ ಇಲಾಖೆಗಳು ಆಕಳಿಸಿಕೊಂಡು ಎದ್ದು ಬರುವಾಗ ವರುಷ ದಾಟಿರುತ್ತದೆ. ನಾಡಿನ ದೊರೆಗಳಿಗೆ ವಿಚಾರ ತಲಪುವಾಗ ಮತ್ತೊಂದು ಚುನಾವಣೆ ಬಂದಿರುತ್ತದೆ!

1 comments:

ಸಾಗರದಾಚೆಯ ಇಂಚರ said...

ನಿಮ್ಮ ಮಾತು ಅಕ್ಷರಶ ಸತ್ಯ
ಮೊದಲ ಬಾರಿ ನಿಮ್ಮ ಬ್ಲಾಗಿಗೆ ಬಂದೆ
ತುಂಬಾ ಚಂದದ ಬ್ಲಾಗ್

Post a Comment