ಕೃಷಿಕ, ಹವಾಯ್ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ಕೆನ್ ಲವ್ ಪುನಃ ಭಾರತಕ್ಕೆ (ಅದರಲ್ಲೂ ಕನ್ನಾಡಿಗೆ) ಬಂದಿದ್ದಾರೆ. ಈ ಬಾರಿ ಅವರನ್ನು ಸೆಳೆಯುತ್ತಿರುವುದು ಕೇರಳದ ರಾಜಧಾನಿಯಲ್ಲಿ ನಡೆಯುವ ರಾಷ್ಟ್ರೀಯ ಹಲಸು ಉತ್ಸವ.
ಕೆನ್ ಎರಡು ವರುಷ ಹಿಂದೆ ಕನ್ನಾಡಿಗೆ ಬಂದಿದ್ದಾಗ, ಜಲತಜ್ಞ ಶ್ರೀ ಪಡ್ರೆಯವರ ಮನೆಯಲ್ಲಿ ವಾಸ್ತವ್ಯವಿದ್ದರು. ಇವರಮ್ಮ ಸಾವಿತ್ರಿ ಭಟ್ ಇಕ್ಕಿದ ಹಲಸಿನ ದೋಸೆಯನ್ನು ಹೊಟ್ಟೆಗಿಳಿಸಿದ್ದರು. 'ನನ್ನ ಹೆಂಡತಿಗೂ ಈ ರುಚಿಯನ್ನು ಪರಿಚಯಿಸುತ್ತೇನೆ' ಎಂದಿದ್ದರಂತೆ! ಹಿಂದೊಮ್ಮೆ ವಯನಾಡಿನ 'ಉರವು' ಏರ್ಪಡಿಸಿದ ಹಲಸು ಮೇಳದಲ್ಲಿ ಕೆನ್ ಅವರು ಹೇಳಿದ್ದೇನು ಗೊತ್ತೇ - 'ನನ್ನ ಮರಿ ಮಕ್ಕಳನ್ನು ಸಿಟಿ (ನಗರ) ಸೆಳೆಯಲು ನಾನು ಬಿಡುವುದಿಲ್ಲ'.
ಹವಾಯ್ಯ ಕೆನ್ ಅವರನ್ನು ಹಲಸು ಆಕರ್ಶಿಸಿದೆ. ನಾವು ನಿರ್ಲಕ್ಷಿಸುತ್ತಿದ್ದೇವೆ. ಒಂದು ಕಾಲಘಟ್ಟದಲ್ಲಿ ಬದುಕನ್ನು ಆಧರಿಸಿದ ಹಲಸನ್ನು ಮರೆಯುತ್ತಿದ್ದೇವೆ. ಬೆಳೆವ ಹಲಸಿನಲ್ಲಿ ತಿನ್ನಲು ಕೂಡಾ ಬಳಕೆಯಾಗದೆ ಶೇ.60ರಷ್ಟು ಹಲಸು ಹಾಳಾಗುತ್ತಿದೆ! ಹಿತ್ತಿಲಿನಿಂದ ಅಂಗಳಕ್ಕೆ ಬರುವುದೇ ಇಲ್ಲ.
ಇಲ್ನೋಡಿ. ಶ್ರೀಲಂಕಾದಲ್ಲಿ ಹಲಸು 'ಅನ್ನದ ಮರ'. ಬಳಕೆ ಮತ್ತು ಮೌಲ್ಯವರ್ಧನೆಯಲ್ಲಿ ಮುಂದು. 'ಎಂತಹುದೇ ಬರ ಬಂದರೂ ಹಸಿವಿನಿಂದ ನಾವು ಕಂಗೆಡಲಾರೆವು. ಕಾರಣ, ನಮ್ಮಲ್ಲಿ ಅರ್ಧ ಲಕ್ಷ ಹೆಕ್ಟೇರ್ ಹಲಸಿನ ಕೃಷಿ ಇದೆ' ಎನ್ನುವ ಅಲ್ಲಿನ ಹಿರಿಯ ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರ ಮಾತು ಅಲ್ಲಿನ ಆಹಾರ ಸುರಕ್ಷತೆಗೆ ಕನ್ನಡಿ.
ಮಲೇಶ್ಯಾ ದೇಶವೂ ಹಲಸಿನ ಕೃಷಿ, ತಳಿ ಅಭಿವೃದ್ಧಿ ಮತ್ತು ಮಾರುಕಟ್ಟೆಗೆ ತುಂಬಾ ಪ್ರಾಶಸ್ತ್ಯ ನೀಡಿದೆ. ಹದಿನೇಳೇ ತಿಂಗಳಿನಲ್ಲಿ ಫಲ ನೀಡುವ 'ಸಿಜೆ 3' ಇಲ್ಲಿನ ಜನಪ್ರಿಯ ತಳಿ. ಮುಂಚೂಣಿ ದೇಶಗಳಾದ ವಿಯೆಟ್ನಾಂ, ಫಿಲಿಪೈನ್, ಥೈಲ್ಯಾಂಡ್ ಹಲಸಿನ ವಿಚಾರದಲ್ಲಿ ಮುಂದಿದೆ.
ತಮಿಳುನಾಡಿನ ಪನ್ರುತ್ತಿಯಲ್ಲಿ ಒಂದೆಕರೆಯಿಂದ ಇಪ್ಪತ್ತೆಕರೆ ಹಲಸಿನ ತೋಟವಿರುವ, ಹಲಸೇ ಅನ್ನದ ಬಟ್ಟಲಾಗಿರುವ ಕುಟುಂಬಗಳು ನೂರಾರಿವೆ. ದೇಶದಲ್ಲಿ ಬೇರೆಲ್ಲೂ ಇಲ್ಲದ ಹಲಸಿನದೇ ಏಕಕೃಷಿ ಪನ್ರುತ್ತಿಯ ವಿಶೇಷ.
ಸಾಮಾನ್ಯವಾಗಿ ಹೋಟೆಲ್ಗಳು ಮಾವು ಉತ್ಸವ, ದ್ರಾಕ್ಷಿ ಉತ್ಸವ.. ಮೊದಲಾದ 'ಹಣ ತರುವ' ಉತ್ಸವಗಳನ್ನು ಆಚರಿಸುತ್ತಿವೆ. ಮುಂಬಯಿಯ 'ಮಚಾನ್ ಮಲಾಡ್' ಎಂಬ ತ್ರಿತಾರಾ ರೆಸ್ಟೋರೆಂಟ್ನಲ್ಲಿ 'ಜಾಕ್ಫ್ರುಟ್ ಫೆಸ್ಟಿವಲ್' ನಡೆದಿದೆ ಎಂದರೆ ನಂಬ್ತೀರಾ? ವಾಣಿಜ್ಯ ಮಟ್ಟಕ್ಕೆ ತೆರೆದುಕೊಳ್ಳದ ಹಲಸಿನ ಅಡುಗೆ ಪ್ರಯೋಗ ಮುಂಬಯಿಯ ಚೊಚ್ಚಲ ಪ್ರಯತ್ನದಲ್ಲೇ ಜಯಭೇರಿ ಹೊಡೆಯಿತು.
ಹಲಸಿನ ಕುರಿತು ಮೊಟ್ಟ ಮೊದಲ ಬಾರಿಗೆ ಮೇಳವನ್ನು ಮಾಡಿದ ಕೀರ್ತಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರಕ್ಕೆ ಸಲ್ಲಬೇಕು. 2006ರಲ್ಲಿ ಕೇರಳದ ಉರವು ಹಲಸು ಮೇಳವನ್ನು ನಡೆಸಿತ್ತು. ಬಳಿಕ ಶಿರಸಿಯ ಕದಂಬ ಸಂಸ್ಥೆಯು ಎರಡು ದಿವಸದ ಮೇಳವನ್ನು ಏರ್ಪಡಿಸಿತ್ತು. ನಂತರ ಮೇಳಗಳ ಮಾಲೆ! ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕದ ತಟ್ಟುವಷ್ಟು ಮೇಳಗಳು ಪರಿಣಾಮ ಬೀರಿವೆ.
ನಮ್ಮಲ್ಲಿ ಅಲ್ಲಿಲ್ಲಿ ಕೆಲವೆಡೆ ಹಲಸಿನ ಅಭಿವೃದ್ಧಿ, ಮೌಲ್ಯವರ್ಧನೆಯ ಚಿಕ್ಕಪುಟ್ಟ ಯತ್ನಗಳಾಗುತ್ತಿವೆ. ಇಂತಹ ಚಿಕ್ಕ ಕೆಲಸ ಮಾಡಿದವರು ಹಲವರಿದ್ದಾರೆ. ಇವರೊಳಗೆ ಪರಿಸ್ಪರ ಪರಿಚಯವಾಗಲೀ, ಬೇರೆ ಕಡೆ ಏನು ನಡೆದಿದೆ ಎಂಬ ವಿವರಗಳಾಗಲೀ ಪರಸ್ಪರ ಗೊತ್ತೇ ಇಲ್ಲ. ದೇಶಮಟ್ಟದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೂ ದೂರ. ಇಂತಹವರನ್ನೆಲ್ಲಾ ಒಟ್ಟುಗೂಡಿಸುವ ಹಿನ್ನೆಲೆಯಲ್ಲಿ ಜೂನ್ 4, 5, 6ರಂದು ತಿರುವನಂತಪುರದಲ್ಲಿ 'ರಾಷ್ಟ್ರೀಯ ಹಲಸು ಹಬ್ಬ' ನಡೆಯಲಿದೆ.
ಮೂರು ದಿವಸ ನಡೆಯುವ ಹಬ್ಬದಲ್ಲಿ ಮೌಲ್ಯವರ್ಧನೆಯ ತರಬೇತಿ, ಖಾದ್ಯ ಪ್ರದರ್ಶನ-ಮಾರಾಟ, ವಿಚಾರಗೋಷ್ಠಿ, ಹಬ್ಬದಂಗವಾಗಿ ನಗರದ ವಿವಿಧ ಪ್ರದೇಶದಲ್ಲಿ ಗಣ್ಯರಿಂದ ಹಲಸಿನ ಗಿಡ ನೆಡುವಿಕೆ, ಛಾಯಾಚಿತ್ರ ಪ್ರದರ್ಶನ. ಹಲಸಿನ ಆಸಕ್ತಿಯುಳ್ಳ ವಿಜ್ಞಾನಿಗಳು, ರೈತರು, ಮೌಲ್ಯವರ್ಧಕರು ಸೇರಿಕೊಂಡು ಒಕ್ಕೂಟ ರಚಿಸುವ ಯೋಜನೆಯಿದೆ. ಈಗಾಗಲೇ ಎರಡು ಬ್ಲಾಗ್ಗಳಲ್ಲಿ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ.
ಹಬ್ಬದಲ್ಲಿ ರಾಷ್ಟ್ರೀಯ ತೋಟಗಾರಿಕಾ ಬೋರ್ಡಿನ ನಿರ್ವಾಹಕ ನಿರ್ದೇಶಕರು, ಕೇಂದ್ರ-ಕೇರಳದ ಸಚಿವರು ಭಾಗವಹಿಸುತ್ತಾರೆ. ಈಗಾಗಲೇ ಸಿದ್ಧತಾ ಮೀಟಿಂಗ್ಗಳು ನಡೆದಿದ್ದು, ಹಬ್ಬದ ಪ್ರತಿಯೊಂದು ಕಲಾಪಗಳ ಯಶಸ್ಸಿನತ್ತ ನಿಗಾ ವಹಿಸುತ್ತಿದ್ದಾರೆ. ತಿರುವನಂತಪುರದ ಹೃದಯಭಾಗದಲ್ಲಿರುವ 'ಕನಕಕುನ್ನು ಅರಮನೆ'ಯಲ್ಲಿ ಹಬ್ಬ ನಡೆಯಲಿದೆ. ಶಾಂತಿಗ್ರಾಮ ಎಂಬ ಎನ್ಜಿಓ ಹಬ್ಬದ ಸಾರಥ್ಯವನ್ನು ವಹಿಸಿದೆ. (ಸಂಪರ್ಕ : 0471-2269780, 6452511 (M) 09287548234, jackfruitfestkerala@gmail.com, jackfruitfestkerala@gmail.com, http://jackfruitfestkerala.wordpress.com)
ಕೇರಳದ ವಯನಾಡಿನ ಉರವು ಸಂಸ್ಥೆಯು ಮೇ 20ರಿಂದ 23ರ ತನಕ ಕಲ್ಪೆಟ್ಟಾದಲ್ಲಿ ಹಲಸು ಮೇಳವನ್ನು ಆಯೋಜಿಸಿತ್ತು. ಇತ್ತ ಶಿರಸಿಯ ಕದಂಬವು ಜೂನ್ 11, 12ರಂದು ಮೇಳ ಏರ್ಪಡಿಸಿದೆ. ಹಲಸಿಗೆ ಮರುಚೇತನ ಕೊಡುವ ಕಾರ್ಯದಲ್ಲಿ ಸರಕಾರೇತರ ಸಂಸ್ಥೆಗಳು ಮತ್ತು ಕೃಷಿಕರೇ ಮುಂದೆ ಬಂದಿರುವುದು ಗಮನಾರ್ಹ.
ನಮ್ಮ ಸುತ್ತಮುತ್ತ ಹಲಸಿನ ಕುರಿತು ಸದ್ದಿಲ್ಲದೆ ಸಾಕಷ್ಟು ಕೆಲಸಗಳಾಗುತ್ತಿವೆ. ಮರದಲ್ಲೇ ಹಲಸನ್ನು ಕೊಳೆಯಲು ಬಿಡದೆ, ಅದಕ್ಕೆ ಮೌಲ್ಯವನ್ನು ತಂದು ಕೊಡುವ ಕೆಲಸಗಳಾಗುತ್ತಿವೆ. ಹಲಸು ಆರ್ಥಿಕ ಬೆಳೆಯಾಗುವ ಸಾಕಷ್ಟು ಅವಕಾಶಗಳು ಕಣ್ಣೆದುರೇ ಇವೆ. ಆದರೆ ಇದು ನಮ್ಮ ಸರಕಾರಿ-ಆಧಿಕಾರಿಗಳಿಗೆ ಯಾವಾಗ ಅರ್ಥವಾದೀತು?
(ಚಿತ್ರಗಳು: ’ಶ್ರೀ’ಪಡ್ರೆ)