Tuesday, May 17, 2011

ಬೇಸಿಗೆಯ ನೆಂಟ 'ಪುನರ್ಪುಳಿ'

ಈಚೆಗೆ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದೆ. 'ಬಿರಿಂಡಾ ಜ್ಯೂಸ್' ಮೊದಲಾತಿಥ್ಯ. ಗಾಢ ಕೆಂಪು ಬಣ್ಣದ ಜ್ಯೂಸ್ ಕುಡಿದಾದ ಬಳಿಕ ನಾಲಗೆ ಏನೋ ದಡ್ಡುಕಟ್ಟಿದ (ದೊರಗಾದ) ಅನುಭವ. ಪುನರ್ಪುಳಿಯ ಯಾವ ಸ್ವಾದವೂ ಇರಲಿಲ್ಲ. ಬಳಿಯಲ್ಲಿದ್ದ ಪ್ರಕಾಶ್ 'ಅದು ಕಲಬೆರಕೆಯೇ ಇರಬೇಕು. ನಾವು ನೀರು ಕುಡಿದೇ ಸುಧಾರಿಸುವಾ' ಎಂದು ಪಿಸುಗುಟ್ಟಿದರು.

ಮಂಗಳೂರಿನ ಸೆಂಟ್ರಲ್ ಮಾರ್ಕೆಟಿನ ತರಕಾರಿ ವ್ಯಾಪಾರಿ ಡೇವಿಡ್ ಹೇಳಿದ ಮಾತು ನೆನಪಾಯಿತು - 'ಇಲ್ಲಿಗೆ ತರಕಾರಿಗೆಂದು ಬರುವವರಿಗೆ ನಾನೇ ಸಾಕಷ್ಟು ಬಾರಿ ಹೇಳುತ್ತಿದ್ದೇನೆ. ಗಾಢ ಬಣ್ಣದ ರೆಡಿಮೇಡ್ ಜ್ಯೂಸ್ ಬಹುತೇಕ ಸಾಚಾ ಅಲ್ಲ. ವ್ಯಾಪಾರದ ಉದ್ದೇಶ ಅಲ್ವೇ, ಏನೇನೋ ಬಣ್ಣ ಸೇರಿಸುತ್ತಾರೆ. ಅದಕ್ಕಾಗಿ ತಾಜಾ ಹಣ್ಣನ್ನೇ ಒಯ್ದು, ಮನೆಯಲ್ಲೇ ಜ್ಯೂಸ್ ಮಾಡಿ ಕುಡಿಯಿರಿ. ಹೊಟ್ಟೆಗೆ ತಂಪು, ಆರೋಗ್ಯಕ್ಕೂ ಒಳ್ಳೆಯದು.'

ಎರಡು ತಿಂಗಳ ಹಿಂದೆ ನಾನು ಹೊಸ ಬಾಡಿಗೆ ಮನೆಗೆ ಗಂಟು ಮೂಟೆ ಕಟ್ಟಿದ್ದೆ. ಅಲ್ಲಿ ಒಂದು ಪುನರ್ಪುಳಿ ಮರವಿತ್ತು. ಹಣ್ಣುಗಳು ಸಾಕಷ್ಟಿದ್ದುವು. 'ಜ್ಯೂಸ್ ಮಾಡೋಣ' ಎನ್ನುತ್ತಾ ಮಗಳು ಸುಕನ್ಯಾಳಿಂದ ಹಣ್ಣಿನ ಜ್ಯೂಸ್ ತಯಾರಿ. ಕೊನೆಗೆ ಪತ್ನಿ ವೀಣಾ ಹಣ್ಣು ಕೊಯಿದು, ಪ್ರತಿ ಹಣ್ಣನ್ನು ಎರಡು ಭಾಗ ಮಾಡಿ, ಅದರ ಮೇಲೆ ಸಕ್ಕರೆಯನ್ನು ಮಿಶ್ರ ಮಾಡಿ ಬಿಸಿಲಲ್ಲಿಟ್ಟಳು. 'ನಾಳೆಯಿಂದ ನಿಮಗೆ ಬಾಟಲ್ ಜ್ಯೂಸ್ ಇಲ್ಲ. ಪುನರ್ಪುಳಿಯದ್ದೇ ಜ್ಯೂಸ್' ಎನ್ನುತ್ತಾ, 'ಇದು ಈಗ ತಾನೇ ಹಣ್ಣಿನಿಂದ ಮಾಡಿದ ತಾಜಾ ಜ್ಯೂಸ್, ಕುಡಿಯಿರಿ. ಪಿತ್ತ ಇಳಿಯುತ್ತದೆ' ಎಂದು ನೀಡಿದಾಗ ನಿಜಕ್ಕೂ 'ಪಿತ್ತ ಏರಿತ್ತು'!

'ಮಂಗಳೂರಿನ ಹೋಟೆಲ್ಗಳಲ್ಲಿ ಬಹಳ ವರುಷದ ಹಿಂದೆ ಗ್ರಾಹಕರ ಎದುರೇ ಪುನರ್ಪುಳಿ ಹಣ್ಣನ್ನು ಕ್ರಷ್ ಮಾಡಿ ಜ್ಯೂಸ್ ಮಾಡಿ ಕೊಡುತ್ತಿದ್ದರು' ಎಂದು ಡೇವಿಡ್ ಹೇಳಿದ ಮಾತು ನೆನಪಾಗಿ ಹೊಟ್ಟೆಗಿಳಿಸಿಕೊಂಡೆ. 'ಬೇಸಿಗೆಯ ನೆಂಟ' ಎಂಬ ಮಾತು ನಿಜಕ್ಕೂ ಅನ್ವರ್ಥ.

ಕರಾವಳಿಯಲ್ಲಿ ಈ ಹಣ್ಣಿಗೆ ‘ಪುನರ್ಪುಳಿ’ ಎಂಬ ಹೆಸರಿದ್ದರೆ, ಮಲೆನಾಡಿನಲ್ಲಿ 'ಮುರುಗಲು' ಹಣ್ಣು. ಇಂಗ್ಲಿಷ್ ಹೆಸರು ಕೋಕಂ. ಸಸ್ಯಶಾಸ್ತ್ರೀಯ ಹೆಸರು 'ಗಾರ್ಸೀನಿಯಾ ಇಂಡಿಕಾ'. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ ದಕ್ಷಿಣಕ್ಕೆ; ಕೇರಳದ ಕಾಸರಗೋಡು ವರೆಗೆ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಕಾಡು ಬೆಳೆ. ನಿತ್ಯ ಹರದ್ವರ್ಣ ಮರ. ಮರವು ಪಿರೆಮಿಡ್ ಆಕಾರದಲ್ಲಿ ಬೆಳೆಯುತ್ತದೆ. ಕಾಡುತ್ಪತ್ತಿಯಾಗಿ ಪರಿಗಣನೆ.

ಎಪ್ರಿಲ್-ಮೇ ತಿಂಗಳಲ್ಲಿ ಉತ್ತಮ ಇಳುವರಿ. ಹಣ್ಣು ಮಾಗಿದಾಗ ಗಾಢ ಕೆಂಪು. ಉರುಟು ಹಣ್ಣು. ಹುಳಿ-ಸಿಹಿ ರುಚಿ. ಸಿಪ್ಪೆ, ಒಳಗಿನ ಗುಣ ಎಲ್ಲವೂ ಹಲವು ರೀತಿಯಲ್ಲಿ ಉಪಯೋಗಿ. ಬೀಜದಿಂದ ಗಿಡ ತಯಾರಿ 8-10 ವರುಷಗಳಲ್ಲಿ ಇಳುವರಿ.
ಸಿಪ್ಪೆಯನ್ನು ಒಣಗಿಸಿ ಶರಬತ್ತು ತಯಾರಿ. ಹಣ್ಣಿಗೆ ಸಕ್ಕರೆ ಸೇರಿಸಿ ಕುದಿಸುವುದು ಒಂದು ಬಗೆ, ಬಿಸಿಲಿನಲ್ಲಿ ಒಣಗಿಸುವುದು ಮತ್ತೊಂದು. ಪಿತ್ತಶಮನ ಗುಣ. ಮನೆ ಅಡುಗೆಯಲ್ಲಿ ಸಾರು, ತಂಬುಳಿ, ಅಪ್ಪೆಹುಳಿಯಾಗಿ ಬಳಕೆ.

ಮರ ದೊಡ್ಡದಾಗಿ ಬೆಳೆಯುತ್ತದೆ. ಶೇ. 70ರಷ್ಟು ಮಂದಿ ಹಣ್ಣನ್ನು ಕೊಯ್ಯದೆ, ಬಳಸದೆ ಹಾಳಾಗುವುದೇ ಹೆಚ್ಚು. ಪಿತ್ತಕಾರಿ ತರಕಾರಿಗಳ ಬಳಕೆಯಲ್ಲಿ ಹುಣಸೆ ಹಣ್ಣಿನ ಬದಲಿಗೆ ಪುನರ್ಪುಳಿ ಹಣ್ಣನ್ನು ಬಳಸುತ್ತಾರೆ.

ಇದರಲ್ಲಿರುವ 'ಹೈಡ್ರಾಕ್ಸಿ ಸಿಟ್ರಿಕ್ ಆಸಿಡ್' ಎಂಬ ಸಸ್ಯಜನ್ಯ ಉತ್ಪನ್ನವನ್ನು ಪ್ರತ್ಯೇಕಿಸಿ ರಫ್ತು ಮಾಡುವ ಉದ್ದಿಮೆಗಳು ಭಾರತದಲ್ಲಿವೆ. ಇದರ ಮೌಲ್ಯವರ್ಧಿತ ಉತ್ಪನ್ನಗಳತ್ತ ಅಲ್ಲಲ್ಲಿ ಸಾಕಷ್ಟು ಪ್ರಯತ್ನಗಳು ಆಗುತ್ತಿವೆ.

1984ರಲ್ಲಿ ಪುತ್ತೂರಿನಲ್ಲಿ ಸೇಡಿಯಾಪು ವಿಶ್ವಪ್ರಸಾದ್ ಪುನರ್ಪುಳಿಯ ಸ್ಕ್ವಾಷ್ ತಯಾರಿ ಯಶಸ್ಸಾಗಿದ್ದರು. ಸಾಯಿಕೋಟೆ ಎಂಟರ್ಪ್ರೈಸಸ್ ಇವರು 'ಪುನರ್ಪುಳಿಯ ಹುಡಿ' ತಯಾರಿಸಿದ್ದರು. ಇದರಲ್ಲಿ ಸಾರಿಗೆ ಬೇರೆ, ಶರಬತ್ತಿಗೆ ಬೇರೆ ಎಂದು ಎರಡು ವೆರೈಟಿಯಿದ್ದುವು. ಕೆಲವು ಎನ್ಜಿಓಗಳು, ಖಾಸಗಿ ಸಂಸ್ಥೆಗಳು 'ಬಿರಿಂಡಾ ಜ್ಯೂಸ್' ತಯಾರಿ, ಆ ಕುರಿತು ತರಬೇತಿ ನಡೆಸುತ್ತಿವೆ.

ಮಂಗಳೂರಿನ ಡೇವಿಡ್ ಮೂರು ದಶಕದ ಹಿಂದೆಯೇ ಪುನರ್ಪುಳಿಯ ಬೆನ್ನು ಬಿದ್ದಿದ್ದರು. 1977ರಲ್ಲಿ ದೇಶದಲ್ಲಿ ಕೋಲಾ ನಿಷೇಧವಾದಾಗ ಡೇವಿಡ್ಗೆ ಪುರುಸೊತ್ತಿರಲಿಲ್ಲ! ತರಕಾರಿಗೆಂದು ಬರುತ್ತಿದ್ದ ಗ್ರಾಹಕರ ತಲೆಗೆ ಪುನರ್ಪುಳಿಯನ್ನು ಹೇರುತ್ತಿದ್ದರು. 'ಗ್ರಾಹಕರ ಆರೋಗ್ಯ ಚೆನ್ನಾಗಿದ್ದರೆ ನನಗೂ ಒಳ್ಳೆಯದಲ್ಲವೇ?' ಎನ್ನುತ್ತಾರೆ.

ಸೀಸನ್ ಸಮಯದಲ್ಲಿ ಹಣ್ಣನ್ನು ಒಣಗಿಸಿಟ್ಟು ವರುಷಪೂರ್ತಿ ಬಳಸುತ್ತಾರೆ. ಕೊಲ್ಲಿಯಿಂದ ಬಂದ ಕರಾವಳಿಗರು ಡೇವಿಡ್ ಅವರನ್ನು ಭೇಟಿ ಮಾಡದೆ ಮರಳುವುದಿಲ್ಲ!

ಡೇವಿಡ್ ಅವರಲ್ಲಿ ತಾಜಾ ಹಣ್ಣಿಗೆ ಕಿಲೋಗೆ ೫೦-೬೦ ರೂಪಾಯಿ ಬೆಲೆ. ಮಂಗಳೂರಿನಲ್ಲಿ ಎಲ್ಲಾ ಸೇರಿ ಸುಮಾರು 15-20 ಮಂದಿ ಹಣ್ಣಿನ ವ್ಯಾಪಾರಿಗಳಲ್ಲಿ ತಾಜಾ ಹಣ್ಣು ಸಿಗುತ್ತದೆ. ಏನಿಲ್ಲವೆಂದರೂ ಸೆಂಟ್ರಲ್ ಮಾರ್ಕೆಟ್ ಒಂದರಲ್ಲೇ ವರುಷಕ್ಕೆ ನಾಲ್ಕು ಟನ್ ತಾಜಾ ಹಣ್ಣು ಮಾರಾಟವಾಗ್ತದೆ ಅಂದ್ರೆ ನಂಬ್ತೀರಾ?

'ಹೀಗೆ ದೊಡ್ಡ ಮಟ್ಟದ ತಾಜಾ ಕೋಕಂ ಮಾರಾಟ ಬೇರೆ ಯಾವ ನಗರದಲ್ಲೂ ಇರುವುದು ಗೊತ್ತಿಲ್ಲ. ಇದು ಮಹತ್ವದ ವಿಚಾರ' ಎನ್ನುತ್ತಾರೆ ಗೋವಾದಲ್ಲಿರುವ ಪಶ್ಚಿಮಘಟ್ಟ ಕೋಕಂ ಪೌಂಡೇಶನ್ನಿನ ಅಧ್ಯಕ್ಷ ಅಜಿತ್ ಶಿರೋಡ್ಕರ್.

ಮೇ 6, 7ರಂದು ಗೋವಾದಲ್ಲಿ ಪುನರ್ಪುಳಿಯ ಕೊಯ್ಲೋತ್ತರ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಿತು. ದೇಶದ ಬೇರೆ ಬೇರೆಡೆ ನಡೆಯುತ್ತಿರುವ ಪುನರ್ಪುಳಿ ಹಣ್ಣಿನ ಸ್ಥಿತಿಗತಿ, ಅದರ ವೈಜ್ಞಾನಿಕ ಮಾಹಿತಿಗಳು, ಕೋಕಂನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆದಿತ್ತು.

1 comments:

RAJ said...

ಅತ್ಯುತ್ತಮ ಲೇಖನ ಪಾನಕ ಮಾಡುವಾಗ ಲಿಂಬೆ ಹಣ್ಣಿನ ಜತೆಗೆ ಪುನರ್ಪುಳಿ ಹಾಕಿ ಮಾಡಿದರು ಅತ್ಯಂತ ಸ್ವಾದ ಭರಿತ ಪುಷ್ಟಿಕ ದಾಯಕ ಹಣ್ಣಿನ ರಸವಾಗುತ್ತದೆ. ನಮ್ಮ ಮನೆಯಲ್ಲಿ ಇದರ ರಸವನ್ನು ಸರಿನಂತೆ ಮಾಡಿ ಒಗ್ಗರಣೆ ಹಾಕಿ ಉಪಯೋಗಿಸುತ್ತಾರೆ ಹೊಟ್ಟೆಗೆ ತಂಪಾದ ಅನುಭವ ನೆಡುವ ಇದಕ್ಕೆ "ಕಡಿ" ಎಂದು ಹೇಳುತ್ತಾರೆ

Post a Comment