(ಇಂದಿನ ಪ್ರಜಾವಾಣಿಯ ಕೃಷಿಯ ಪುರವಣಿಯಲ್ಲಿ ಪ್ರಕಟವಾದ ಲೇಖನ - ಶೀರ್ಷಿಕೆ - ಪುನರ್ಪುಳಿ ರಾಷ್ಟ್ರೀಯ ಕಾರ್ಯಾಗಾರ)
ಪುನರ್ಪುಳಿ (ಕೋಕಂ) ಹಣ್ಣಿಗೆ ಈಗ ರಾಷ್ಟ್ರೀಯ ಮಹತ್ವ ಬಂದಿದೆ. ಮೇ 6 ಮತ್ತು 7ರಂದು ಗೋವಾದಲ್ಲಿ ಪುನರ್ಪುಳಿಯ ರಾಷ್ಟ್ರೀಯ ಕಾರ್ಯಾಗಾರ ನಡೆಯಿತು. ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳದ ಪ್ರತಿನಿಧಿಗಳು ಭಾಗವಹಿಸಿದ್ದರು.
ಪುನರ್ಪುಳಿ ಅರಣ್ಯ ಉತ್ಪತ್ತಿಗಳಲ್ಲಿ ಒಂದು. ಅದನ್ನೇ ಮುಖ್ಯ ಬೆಳೆಯಾಗಿ ಬೆಳೆಯುವ ಪ್ರಯತ್ನ ವಿರಳವಾಗಿ ನಡೆಯುತ್ತಿದೆ. ಶೇ.70ರಷ್ಟು ಹಣ್ಣುಗಳು ನೆಲಕ್ಕೆ ಬಿದ್ದು ಹಾಳಾಗಿ ಹೋಗುತ್ತದೆ. ಒಂದು ಮೂಲದ ಪ್ರಕಾರ ನಮ್ಮ ದೇಶದಲ್ಲಿ ಪುನರ್ಪುಳಿ ಬೆಳೆಯುವ ಪ್ರದೇಶ ಕೇವಲ ಒಂದು ಸಾವಿರ ಹೆಕ್ಟೇರ್ ಎಂಬ ಅಂದಾಜಿದೆ. ನಾಲ್ಕು ಸಾವಿರ ಐನೂರು ಮೆಟ್ರಿಕ್ ಟನ್ ಹಣ್ಣು ಉತ್ಪಾದನೆಯಾಗುತ್ತಿದೆ. ಇದರ ಮಹಾರಾಷ್ಟ್ರದ ಪಾಲು ದೊಡ್ಡದು.
ಪುನರ್ಪುಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಮಾಡುವುದು, ಗಿಡಗಳ ಅಭಿವೃದ್ಧಿ, ಮೌಲ್ಯವರ್ಧನೆ ಮಾಡುವುದು ಕಾರ್ಯಾಗಾರದ ಉದ್ದೇಶ. ಪುನರ್ಪುಳಿ ಕುರಿತು ಈ ವರೆಗಿನ ಸಂಶೋಧನೆಗಳು, ತಳಿ ಅಭಿವೃದ್ಧಿ, ಅಂಗಾಂಶ ಕಸಿ, ಕಸಿ ಅಭಿವೃದ್ಧಿ, ಹಣ್ಣಿನಲ್ಲಿರುವ ಅಂಶಗಳು, ಸಿರಪ್ ತಯಾರಿಕೆ ಇತ್ಯಾದಿ ವಿಚಾರಗಳು ಪ್ರಸ್ತಾಪವಾದುವು.
ಪುಣೆಯ ಮುಕುಂದ್ ಭಾವೆ ಅವರ ಅಪರಾಂತ್ ಆಗ್ರೋ ಫುಡ್ಸ್ ಇದರ ಕೋಕಂನ 'ಟೆಟ್ರಾಪ್ಯಾಕ್' ಸೆಮಿನಾರಿನ ಹೈಲೈಟ್. ಪುಣೆಯ ಹರ್ಡೀಕರ್ ಟೆಕ್ನಾಲಜೀಸ್ ಇದರ ಸಂಜಯ್ ಓರ್ಪೆ ಇವರ ಕೋಕಂಗೆ ಮೌಲ್ಯವರ್ಧನೆ ಮಾಡುವ ವಿಷಯದ ಬಗ್ಗೆ ಗಮನ ಸೆಳೆದರು. ಕೋಕಂ ಪೌಡರ್, ಶರಬತ್ ಪೌಡರ್, ಸೋಲ್ಕಡಿ ಪೌಚ್, ಕೋಕಂ ಸೋಡಾ.. ಹೀಗೆ ಎಂಭತ್ತಕ್ಕೂ ಮಿಕ್ಕಿ ಉತ್ಪನ್ನಗಳ ತಯಾರಿಕೆ. ಅದರಲ್ಲಿ ಮೂವತ್ತರಷ್ಟು ತರಕಾರಿಯ ಮೌಲ್ಯವರ್ಧನೆ. ಡಾ.ಜೋನ್ ರಾಡ್ರ್ರಿಗಸ್ರ ಕೋಕಂ ವೈನ್ ಕುರಿತಾದ ಮಾಹಿತಿಗಳು ಕುತೂಹಲ ಮೂಡಿಸಿದುವು. ರತ್ನಗಿರಿಯ ದೀಪಶ್ರೀ ಪ್ರಾಡಕ್ಟ್ಸ್ ಅವರ ಪುನರ್ಪುಳಿ ಚಾಕೋಲೇಟ್, ಬಟರ್, ಕೋಕಂ ಬೀ, ಸಿಪ್ಪೆ, ಮೋದಕಗಳ ಪ್ರದರ್ಶನವಿತ್ತು
ಕರ್ನಾಟಕದ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಶಿರಸಿಯ ವಿಧೀಶ ಭಟ್, ಶಿರಸಿ ಮಂಡೆಮನೆಯ ಶ್ರೀಪಾದ ಆರ್. ಹೆಗಡೆ ಮತ್ತು ಮಂಗಳೂರಿನ ಪ್ರಕೃತಿ ಫುಡ್ಸ್ನ ಪಿ.ಶ್ಯಾಮಲಾ ಶಾಸ್ತ್ರಿಯವರು ತಮ್ಮ ಕೋಕಂ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಪುನರ್ಪುಳಿ ಹಣ್ಣಿನ ಬೆಳೆ, ಇಳುವರಿ, ಉತ್ಪನ್ನಗಳು, ಹಣ್ಣಿನ ಕುರಿತಾಗಿ ಇರುವ ಜನರ ಅಭಿಪ್ರಾಯಗಳನ್ನು ಶ್ರೀ ಪಡ್ರೆ ವಿವರಿಸಿದರು.
ವೆಸ್ಟರ್ನ ಘಾಟ್ಸ್ ಕೋಕಂ ಪೌಂಡೇಶನ್ ಆಯೋಜಿಸಿದ ಮೂರನೇ ಸಮ್ಮೇಳನವಿದು. ಗೋವಾ ವಿವಿಯು ಪೌಂಡೇಶನ್ ಜತೆ ಕೈಜೋಡಿಸಿದೆ. ಪುನರ್ಪುಳಿ ಕುರಿತಾದ ಬ್ಲಾಗ್, ಜಾಲತಾಣಗಳ ಸೃಷ್ಟಿ ಹಾಗೂ ಕೋಕಂಗೆ ಮೌಲ್ಯವರ್ಧನೆ ಮಾಡಿದ ಆಸಕ್ತರನ್ನು ಒಂದೆಡೆ ಸೇರಿಸುವ ಕಾರ್ಯಾಗಾರದ ಉದ್ದೇಶವಾಗಿತ್ತು ಎಂದು ವೆಸ್ಟರ್ನ ಘಾಟ್ಸ್ ಕೋಕಂ ಪೌಂಡೇಶನ್ನ ಅಧ್ಯಕ್ಷ ಡಾ.ಅಜಿತ್ ಶಿರೋಡ್ಕರ್ ಹೇಳಿದರು.
ಪುನರ್ಪುಳಿಯ ಸಿರಪ್, ಸಿಪ್ಪೆ, ತುಪ್ಪ ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳು ಕರ್ನಾಟಕದ ಹೊರಗೆ ತಯಾರಾಗುತ್ತಿವೆ. ನಮ್ಮಲ್ಲಿ ಯಾಕಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನಗಳು ನಡೆಯಬೇಕಿದೆ.
------------------------------------------------------------------------------------------------
(ನನ್ನ ಪೂರ್ಣ ಲೇಖನ)
ಪುನರ್ಪುಳಿ (ಕೋಕಂ) ಹಣ್ಣಿಗೆ ಈಗ ರಾಷ್ಟ್ರೀಯ ಮಹತ್ವ. ಮೇ 6 ಮತ್ತು 7ರಂದು ಗೋವಾದಲ್ಲಿ ಪುನರ್ಪುಳಿಯ ರಾಷ್ಟ್ರೀಯ ಕಾರ್ಯಾಗಾರ. ಮುಖ್ಯವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳದ ಪ್ರತಿನಿಧಿಗಳು ಭಾಗಿಯಾಗಿದ್ದರು.
ಪುನರ್ಪುಳಿ ಕಾಡುತ್ಪತ್ತಿ. ಅದನ್ನೇ ಮುಖ್ಯ ಕೃಷಿಯನ್ನಾಗಿ ಮಾಡುವ ಪ್ರಯತ್ನ ವಿರಳವಾಗಿ ನಡೆಯುತ್ತಿದೆ. ಶೇ.70ರಷ್ಟು ಹಣ್ಣು ಬಿದ್ದು ಹಾಳಾಗಿ ಹೋಗುತ್ತದೆ. ಒಂದು ಅಂಕಿಅಂಶದಂತೆ ದೇಶದ ಪುನರ್ಪುಳಿ ಬೆಳೆವ ಪ್ರದೇಶ ಕೇವಲ ಒಂದು ಸಾವಿರ ಹೆಕ್ಟೇರ್. ನಾಲ್ಕು ಸಾವಿರ ಐನೂರು ಮೆಟ್ರಿಕ್ ಟನ್ ಹಣ್ಣು ಉತ್ಪಾದನೆ. ಇದರ ಬೆಳೆಯಲ್ಲಿ ಮಹಾರಾಷ್ಟ್ರ ಮುಂದು.
'ಕೋಕಂಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಮಾಡುವುದು, ಪುನರ್ಪುಳಿ ಗಿಡಗಳ ಅಭಿವೃದ್ಧಿ, ಮೌಲ್ಯವರ್ಧನೆ' ಆಶಯದ ಎರಡು ದಿವಸದ ಸಮ್ಮೇಳನವು ಕೋಕಂನ ವಿವಿಧ ಸಾಧ್ಯತೆಗಳನ್ನು ತೆರೆದಿಟ್ಟಿತು. ಪವರ್ ಪಾಯಿಂಟ್ ಮೂಲಕ ವಿಚಾರಗಳ ಪ್ರಸ್ತುತಿ.
ಪುನರ್ಪುಳಿ ಕುರಿತು ಈ ವರೆಗಿನ ಸಂಶೋಧನೆಗಳು, ತಳಿ ಅಭಿವೃದ್ಧಿ, ಅಂಗಾಂಶ ಕಸಿ, ಕಸಿ ಅಭಿವೃದ್ಧಿ, ಹಣ್ಣಿನಲ್ಲಿರುವ ಕಂಟೆಂಟ್ಗಳು, ಸಿರಪ್ ತಯಾರಿ ಬಗೆ.. ಹೀಗೆ ವಿವಿಧ ಮಜಲುಗಳಲ್ಲಿ ವಿಚಾರ ಪ್ರಸ್ತುತಿ.
ಪುಣೆಯ ಮುಕುಂದ್ ಭಾವೆ ಅವರ ಅಪರಾಂತ್ ಆಗ್ರೋ ಫುಡ್ಸ್ ಇದರ ಕೋಕಂನ 'ಟೆಟ್ರಾಪ್ಯಾಕ್' ಸೆಮಿನಾರಿನ ಹೈಲೈಟ್. ಪುಣೆಯ ಹರ್ಡೀಕರ್ ಟೆಕ್ನಾಲಜೀಸ್ ಇದರ ಸಂಜಯ್ ಓರ್ಪೆ ಇವರ ಸೆಷನ್ ಮೌಲ್ಯವರ್ಧನೆಗೆ ಕನ್ನಡಿಯಾಗಿತ್ತು. ಕೋಕಂ ಪೌಡರ್, ಶರಬತ್ ಪೌಡರ್, ಸೋಲ್ಕಡಿ ಪೌಚ್, ಕೋಕಂ ಸೋಡಾ.. ಹೀಗೆ ಎಂಭತ್ತಕ್ಕೂ ಮಿಕ್ಕಿ ಉತ್ಪನ್ನಗಳನ್ನು ತಯಾರಿ. ಅದರಲ್ಲಿ ಮೂವತ್ತರಷ್ಟು ತರಕಾರಿಯ ಮೌಲ್ಯವರ್ಧನೆ. ಡಾ.ಜೋನ್ ರಾಡ್ರ್ರಿಗಸ್ರ ಕೋಕಂ ವೈನ್ ಕುರಿತಾದ ವಿಚಾರಗಳು ಕುತೂಹಲ ಮೂಡಿಸಿದುವು.
ರತ್ನಗಿರಿಯ ದೀಪಶ್ರೀ ಪ್ರಾಡಕ್ಟ್ಸ್ ಅವರ ಪುನರ್ಪುಳಿ ಚಾಕೋಲೇಟ್, ಬಟರ್, ಕೋಕಂ ಬೀ, ಸಿಪ್ಪೆ, ಮೋದಕಗಳ ಪ್ರದರ್ಶನ. ಎಲ್ಲದಕ್ಕೂ ಆಕರ್ಷಕ ಪ್ಯಾಕಿಂಗ್. ಚಾಕೋಲೇಟ್ ಎಲ್ಲರಿಗೂ ಉಚಿತ.
ಕರ್ನಾಟಕದಿಂದ - ಶಿರಸಿಯ ವಿಧೀಶ ಭಟ್, ಶಿರಸಿ ಮಂಡೆಮನೆಯ ಶ್ರೀಪಾದ ಆರ್. ಹೆಗಡೆ ಮತ್ತು ಮಂಗಳೂರಿನ ಪ್ರಕೃತಿ ಫುಡ್ಸ್ ಇದರ ಪಿ.ಶ್ಯಾಮಲಾ ಶಾಸ್ತ್ರಿಯವರು - ತಮ್ಮ ಕೋಕಂ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಪುನರ್ಪುಳಿ ಹಣ್ಣಿನ ಬೆಳೆ, ಇಳುವರಿ, ಉತ್ಪನ್ನಗಳು, ಹಣ್ಣಿನ ಕುರಿತಾಗಿ ಇರುವ ಜನರ ಮೈಂಡ್ ಸೆಟ್ಗಳನ್ನು ಶ್ರೀ ಪಡ್ರೆಯವರು ವಿವರಿಸಿದರು.
'ಇನ್ನಷ್ಟು ಕೋಕಂನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಬೇಕಿತ್ತು' ಎಂದು ಶಿರಸಿಯ ಎಂ.ಆರ್.ಹೆಗಡೆ ಅಭಿಪ್ರಾಯ. 'ಮೌಲ್ಯವರ್ಧಕರೆಲ್ಲಾ ಇಲ್ಲಿ ಸೇರುತ್ತಿದ್ದರೆ ಪರಸ್ಪರ ಕೊಂಡಿ ಏರ್ಪಟ್ಟು ಮಾರಾಟ ಮತ್ತು ಗುಣಮಟ್ಟದ ವೃದ್ಧಿಗೆ ಸಹಾಯಕವಾಗುತ್ತಿತ್ತು' ಎನ್ನುತ್ತಾರೆ ಬಾಲಚಂದ್ರ ಹೆಗಡೆ ಸಾಯಿಮನೆ.
ವೆಸ್ಟರ್ನ ಘಾಟ್ಸ್ ಕೋಕಂ ಪೌಂಡೇಶನ್ ಆಯೋಜಿಸಿದ ಮೂರನೇ ಸಮ್ಮೇಳನವಿದು. 2001ರಲ್ಲಿ ವೆಂಗೂರ್ಲ ಮತ್ತು 2005ರಲ್ಲಿ ಗೋವಾದಲ್ಲಿ ಎರಡನೇ ಸಮ್ಮೇಳನ ಜರುಗಿತ್ತು. ಗೋವಾ ವಿವಿಯು ಪೌಂಡೇಶನ್ ಜತೆ ಕೈಜೋಡಿಸಿದೆ.
ಪುನರ್ಪುಳಿ ಕುರಿತಾದ ಬ್ಲಾಗ್, ಜಾಲತಾಣಗಳ ರೂಪೀಕರಣ, ಈಗಾಗಲೇ ಮೌಲ್ಯವರ್ಧನೆ ಮಾಡಿದ ಸಾಧಕರನ್ನು ಒಂದೆಡೆ ಸೇರಿಸುವ ಕುರಿತು ಬೇರೆ ಬೇರೆ ಪ್ರದೇಶದಲ್ಲಿ ಸಮಾವೇಶ, ಸಂಶೋಧನೆಗಳ ವಿಸ್ತರಣೆ, ತೋಟ ವಿಸ್ತರಣೆ.. ಸಮ್ಮೇಳನದ ಕೊನೆಗೆ ವೆಸ್ಟರ್ನ್ ಘಾಟ್ಸ್ ಕೋಕಂ ಪೌಂಡೇಶನ್ನ ಅಧ್ಯಕ್ಷ ಡಾ.ಅಜಿತ್ ಶಿರೋಡ್ಕರ್ ಅಭಿಮತ.
'ಎಲ್ಲರೂ ಕೋಕಂನತ್ತ ಮುಖಮಾಡಿದರೆ ಹುಣಸೆ ಹಣ್ಣನ್ನು ಗೆಟ್ಔಟ್ ಮಾಡಬಹುದು' ಎಂದು ದಾಪೋಲಿಯ ಡಾ.ಸಿ.ಡಿ.ಪವಾರ್ ತಮ್ಮ ವಿಚಾರಪ್ರಸ್ತುತಿಯಲ್ಲಿ ಹೇಳಿದಾಗ, ಜತೆಗಿದ್ದ ಬಾಲು ಹೆಗಡೆ ಸಾಯಿಮನೆ ನಕ್ಕರು!
ಸಮ್ಮೇಳನದ ಕೊನೆಗೆ ಮಂಗಳೂರಿನ ತರಕಾರಿ ವ್ಯಾಪಾರಿ ಡೇವಿಡ್, 'ಈ ವರುಷ ನಮ್ಮಲ್ಲಿ ಒಂದು ಕಿಲೋ ತಾಜಾ ಪುನರ್ಪುಳಿ ಹಣ್ಣಿಗೆ ಕಿಲೋಗೆ ಅರುವತ್ತು ರೂಪಾಯಿ, ಸಿಪ್ಪೆಗೆ ಒಂದು ನೂರು ಇಪ್ಪತ್ತು' ಎಂಬ ಅಚ್ಚರಿಯ ಮಾಹಿತಿ.
ಪುನರ್ಪುಳಿಯ ಸಿರಪ್, ಸಿಪ್ಪೆ, ತುಪ್ಪ ಇವಿಷ್ಟು ಇಲ್ಲಿ ಸಿದ್ಧವಾಗುತ್ತಿದ್ದರೂ, ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳು ಕನ್ನಾಡಿನ ಆಚೆಗೆ ತಯಾರಾಗುತ್ತಿದೆ. ನಮ್ಮಲ್ಲಿ ಯಾಕಾಗುತ್ತಿಲ್ಲ? ಉತ್ತೇಜನದ ಕೊರತೆ.
0 comments:
Post a Comment