'ಮೇ 23ರಂದು ಚಿಕ್ಕಮಗಳೂರಿನಲ್ಲಿ ಹಲಸಿನ ಹಬ್ಬವಿದೆ. ಒಂದು ಸಾವಿರ ಹಲಸು ಪ್ರಿಯರು ಭಾಗವಹಿಸುವ ನಿರೀಕ್ಷೆಯಿದೆ' ಎಂದು ಹಲಸು ಪ್ರಿಯ ಕೃಷಿಕ ಸಾಗರದ ನಾಗೇಂದ್ರ ಸಾಗರ್ ಈಚೆಗೆ ತಂದ ಹೊಸ ಸುದ್ದಿ.
ಅತ್ತ ಕೇರಳದ ರಾಜಧಾನಿಯಲ್ಲಿ ರಾಷ್ಟ್ರೀಯ ಹಲಸು ಹಬ್ಬಕ್ಕಾಗಿ ಸಿದ್ಧತೆ ನಡೆಯುತ್ತಿದ್ದಂತೆ, ಹವಾಯ್ಯ ಹಣ್ಣು ಕೃಷಿಕ ಕೆನ್ ಲವ್ ಹಲಸು ಮೇಳದಲ್ಲಿ ಭಾಗವಹಿಸುವ ಮತ್ತೊಂದು ಸುದ್ದಿ.
ಹಪ್ಪಳದಿಂದ ಐಸ್ಕ್ರೀಂ ತನಕ ಹಲಸಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳು ಅಡುಗೆ ಮನೆ ಸೇರುತ್ತಿವೆ. ಅದಕ್ಕಾಗಿ ಅಲ್ಲಲ್ಲಿ ಹಲಸು ಪ್ರಿಯರು ಒಂದಾಗುತ್ತಿದ್ದಾರೆ. ಮಾತುಕತೆ ನಡೆಯುತ್ತಿದೆ. ಕಸಿ ಗಿಡಗಳ ಅಭಿವೃದ್ಧಿಯಾಗುತ್ತಿದೆ. ಒಕ್ಕೂಟಗಳ ರಚನೆಗಳಾಗುತ್ತಿವೆ.
ಇವೆಲ್ಲವೂ ಬಿಡಿಬಿಡಿಯಾಗಿ ಆಗುತ್ತಿರುವ ಕೆಲಸ. ಇವರೊಳಗೆ ಪರಿಸ್ಪರ ಪರಿಚಯವಿಲ್ಲ. ಸಂಪರ್ಕವಿಲ್ಲ. ಹಾಗಾಗಿ ಈ ಸುದ್ದಿ ಹೊರ ಪ್ರಪಂಚಕ್ಕೆ ತಿಳಿಯುತ್ತಿಲ್ಲ. ಮಾರುಕಟ್ಟೆಗೂ ವೇಗ ದೊರಕಿಲ್ಲ. ದೇಶಮಟ್ಟದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯಿಂದಲೂ ದೂರ. ಇಂತಹವರನ್ನೆಲ್ಲಾ ಒಟ್ಟುಗೂಡಿಸುವ ಹಿನ್ನೆಲೆಯಲ್ಲಿ ಜೂನ್ 4, 5, 6ರಂದು ತಿರುವನಂತಪುರದಲ್ಲಿ 'ರಾಷ್ಟ್ರೀಯ ಹಲಸು ಹಬ್ಬ'ದ ಆಯೋಜನೆ.
ಮೂರು ದಿವಸ ನಡೆಯುವ ಹಬ್ಬದಲ್ಲಿ ಮೌಲ್ಯವರ್ಧನೆಯ ತರಬೇತಿ, ಖಾದ್ಯ ಪ್ರದರ್ಶನ-ಮಾರಾಟ, ವಿಚಾರಗೋಷ್ಠಿ, ಹಬ್ಬದಂಗವಾಗಿ ನಗರದ ವಿವಿಧ ಪ್ರದೇಶದಲ್ಲಿ ಗಣ್ಯರಿಂದ ಹಲಸಿನ ಗಿಡ ನೆಡುವಿಕೆ, ಛಾಯಾಚಿತ್ರ ಪ್ರದರ್ಶನ. ಹಲಸಿನ ಆಸಕ್ತಿಯುಳ್ಳ ವಿಜ್ಞಾನಿಗಳು, ರೈತರು, ಮೌಲ್ಯವರ್ಧಕರು ಸೇರಿಕೊಂಡು ಒಕ್ಕೂಟ ರಚಿಸುವ ಯೋಜನೆಯಿದೆ.
ಈಗಾಗಲೇ ಎರಡು ಬ್ಲಾಗ್ಗಳಲ್ಲಿ ((http://www.panasamwonders.blogspot.com/; http://jackfruitfestkerala.wordpress.com/) ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ.
ಹಬ್ಬದಲ್ಲಿ ರಾಷ್ಟ್ರೀಯ ತೋಟಗಾರಿಕಾ ಬೋರ್ಡಿನ ನಿರ್ವಾಹಕ ನಿರ್ದೇಶಕರು, ಕೇಂದ್ರ-ಕೇರಳದ ಸಚಿವರು ಭಾಗವಹಿಸುತ್ತಾರೆ. ಸಿದ್ಧತಾ ಮೀಟಿಂಗ್ಗಳು ಭರದಿಂದ ನಡೆದಿದ್ದು, ಜವಾಬ್ದಾರಿಯ ಹಂಚಿಕೆಯೊಂದಿಗೆ ಹಲವು ಸಂಸ್ಥೆಗಳು ಕೈಜೋಡಿಸಿ ಉತ್ಸವದ ಯಶಸ್ಸಿನತ್ತ ನಿಗಾ ವಹಿಸುತ್ತಿದ್ದಾರೆ. ತಿರುವನಂತಪುರದ ಹೃದಯಭಾಗದಲ್ಲಿರುವ 'ಕನಕಕುನ್ನು ಅರಮನೆ'ಯಲ್ಲಿ ಹಬ್ಬ ನಡೆಯಲಿದೆ. ಶಾಂತಿಗ್ರಾಮ ಎಂಬ ಎನ್ಜಿಓ ಹಬ್ಬದ ಸಾರಥ್ಯವನ್ನು ವಹಿಸಿದೆ.
(ಸಂಪರ್ಕ : 0471-2269780, 6452511, 09287548234, ಮಿಂಚಂಚೆ : (jackfruitfestkerala@gmail.com, jackfruitfestkerala@gmail.com)
ಕೇರಳದ ವಯನಾಡಿನ ಉರವು ಸಂಸ್ಥೆಯು ಮೇ 20ರಿಂದ 23ರ ತನಕ ಕಲ್ಪೆಟ್ಟಾದಲ್ಲಿ ಹಲಸು ಮೇಳವನ್ನು ಆಯೋಜಿಸಿದೆ. ಇತ್ತ ಶಿರಸಿಯ ಕದಂಬವು ಜೂನ್ 11, 12ರಂದು ಮೇಳ ಏರ್ಪಡಿಸಿದೆ. ಹಲಸಿಗೆ ಮರುಚೇತನ ಕೊಡುವ ಕಾರ್ಯದಲ್ಲಿ ಸರಕಾರೇತರ ಮತ್ತು ಇತರ ಸಂಸ್ಥೆಗಳು ಮುಂದೆ ಬಂದಿರುವುದು ಗಮನಾರ್ಹ.
0 comments:
Post a Comment