ಮೇ 6 ಮತ್ತು 7ರಂದು ಗೋವಾ ವಿಶ್ವವಿದ್ಯಾಲಯದಲ್ಲಿ ಕೋಕಂ (ಪುನರ್ಪುಳಿ, ಮುರುಗಲು, Kokum, Garcinia Indica)
ರಾಷ್ಟ್ರೀಯ ಸೆಮಿನಾರ್ ನಡೆಯಿತು. ವೆಸ್ಟರ್ನ್ ಘಾಟ್ಸ್ ಕೋಕಂ ಪೌಂಡೇಶನ್ ಸೆಮಿನಾರನ್ನು ಆಯೋಜಿಸಿತ್ತು. ಪುನರ್ಪುಳಿಯ ಕುರಿತಾದ ಮೂರನೇ ಸಮ್ಮೇಳನ ಇದು. ಪೌಂಡೇಶನ್ನಿನ ಡಾ.ಅಜಿತ್ ಶಿರೋಡ್ಕರ್ ಮತ್ತು ಗೋವಾ ವಿವಿಯ ಬಾಟನಿ ವಿಭಾಗದ ಮುಖ್ಯಸ್ಥ ಪ್ರೊ:ಡಿ.ಜೆ.ಭಟ್ಟರ ಉಸ್ತುವಾರಿಕೆ.
ಕೋಕಂ ಕುರಿತು ಜರುಗಿದ ಸಂಶೋಧನೆಗಳು; ಗೋವಾ, ಕೇರಳ, ಕರ್ನಾಟಕ, ಮಹಾರಾಷ್ಟ್ರಗಳ ಸದ್ಯದ ಕೋಕಂ ಸ್ಥಿತಿಗತಿಗಳ ಕುರಿತು ಮಾತುಕತೆ. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಂದ ಕರ್ನಾಟಕ ಮತ್ತು ಕೇರಳದ ಕೋಕಂ ಮಾರುಕಟ್ಟೆ ಮತ್ತು ಮೌಲ್ಯವರ್ಧನೆಯ ಮಾಹಿತಿ. ಪುಣೆಯ ಮುಕುಂದ್ ಭಾವೆ ಅವರ ಅಪರಾಂತ್ ಆಗ್ರೋ ಫುಡ್ಸ್ ಇದರ ಕೋಕಂನ 'ಟೆಟ್ರಾಪ್ಯಾಕ್' ಸೆಮಿನಾರಿನ ಹೈಲೈಟ್. ಪುಣೆಯ ಹರ್ಡೀಕರ್ ಟೆಕ್ನಾಲಜೀಸ್ ಇದರ ಸಂಜಯ್ ಓರ್ಪೆ ಇವರ ಮೌಲ್ಯವರ್ಧಿತ ಉತ್ಪನ್ನಗಳು, ಡಾ.ಜೋನ್ ರಾಡ್ರ್ರಿಗಸ್ ಅವರು ಕೋಕಂ ವೈನ್ ಕುರಿತಾದ ವಿಚಾರಗಳು ಕುತೂಹಲ ಮೂಡಿಸಿದುವು. ರತ್ನಗಿರಿಯ ದೀಪಶ್ರೀ ಪ್ರಾಡಕ್ಟ್ಸ್ ಅವರ ಪುನರ್ಪುಳಿ ಚಾಕೋಲೇಟ್, ಬಟರ್, ಕೋಕಂ ಬೀ, ಸಿಪ್ಪೆ, ಮೋದಕಗಳ ಪ್ರದರ್ಶನ. ಎಲ್ಲದಕ್ಕೂ ಆಕರ್ಷಕ ಪ್ಯಾಕಿಂಗ್.
ಗೋವಾದ ಕುರಾಡೆಯ ಶ್ರೀಹರಿ ಸುಬ್ರಾಯ ನಾಯಕ್ ಅವರ ಪುನರ್ಪುಳಿ ಹಣ್ಣಿನ ತೋಟದ ಯಶವನ್ನು ಬಾಲಚಂದ್ರ ಹೆಗಡೆ ಸಾಯಿಮನೆಯವರಿಂದ ಪ್ರಸ್ತುತಿ. ಕರ್ನಾಟಕದಿಂದ - ಶಿರಸಿಯ ವಿಧೀಶ ಭಟ್, ಶಿರಸಿ ಮಂಡೆಮನೆಯ ಶ್ರೀಪಾದ ಆರ್. ಹೆಗಡೆ ಮತ್ತು ಮಂಗಳೂರಿನ ಪ್ರಕೃತಿ ಫುಡ್ಸ್ ಇದರ ಪಿ.ಶ್ಯಾಮಲಾ ಶಾಸ್ತ್ರಿಯವರು - ತಮ್ಮ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು.
ಮಂಗಳೂರು ಸೆಂಟ್ರಲ್ ಮಾರ್ಕೆಟ್ ತರಕಾರಿ ವ್ಯಾಪಾರಿ ಡೇವಿಡ್ ಅವರು ಮಂಗಳೂರಿನ ತಾಜಾ ಹಣ್ಣಿನ ಮಾರುಕಟ್ಟೆಯ ಸ್ಥಿತಿಗತಿಗಳನ್ನು ವಿವರಿಸುತ್ತ, 'ಸದ್ಯ ಪುನರ್ಪುಳಿ ಹಣ್ಣಿಗೆ ಕಿಲೋಗೆ ಅರುವತ್ತು ರೂಪಾಯಿ, ಸಿಪ್ಪೆಗೆ ಒಂದು ನೂರು ಇಪ್ಪತ್ತು ರೂಪಾಯಿ ಇದೆ' ಎಂದರು.
'ಕೋಕಂನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಬೇಕಿತ್ತು' ಎಂದು ಶಿರಸಿಯ ಎಂ.ಆರ್.ಹೆಗಡೆ ಅಭಿಪ್ರಾಯ. 'ಮೌಲ್ಯವರ್ಧಕರೆಲ್ಲಾ ಇಲ್ಲಿ ಸೇರುತ್ತಿದ್ದರೆ ಪರಸ್ಪರ ಕೊಂಡಿ ಏರ್ಪಟ್ಟು ಮಾರಾಟ ಮತ್ತು ಗುಣಮಟ್ಟದ ವೃದ್ಧಿಗೆ ಸಹಾಯಕವಾಗುತ್ತಿತ್ತು' ಎನ್ನುತ್ತಾರೆ ಬಾಲಚಂದ್ರ ಹೆಗಡೆ ಸಾಯಿಮನೆ.
ದಾಪೋಲಿಯ ಡಾ.ಬಾಳಾಸಾಹೇಬ್ ಸಾವಂತ್ ಕೊಂಕಣ್ ಕೃಷಿ ವಇದ್ಯಾಪೀಠದ ಉಪಕುಲಪತಿ ಪ್ರೊ. ವಿಜಯ್ ಮೆಹ್ತಾ, ಗೋವಾ ವಿವಿಯ ಉಪಕುಲಪತಿ ಪ್ರೊ.ದಿಲೀಪ್, ಗೋವಾ ಸರಕರದ ಕೃಷಿ ಇಲಾಖೆಯ ನಿರ್ದೇಶಕ ಸತೀಶ್ ತೆಂಡೂಲ್ಕರ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು.
ಇಡೀ ಸಮ್ಮೇಳನದ ಯಶಸ್ಸಿಗೆ ಕಾರಣ ಪ್ರೊ.ಡಿ.ಜಯರಾಮ ಭಟ್. ವಿವಿಯ ಮುಖ್ಯಸ್ಥನ ಹುದ್ದೆಯಲ್ಲಿದ್ದೂ ಯಾವುದೆ ಬಿಗುಮಾನ ಮತ್ತು 'ಬಿಗಿಯಾದ ಅಕಾಡೆಮಿಕ್ ಸ್ಟ್ರೈಲ್' ಇಲ್ಲದೆ, ಎಲ್ಲಾ ವ್ಯವಸ್ಥೆಯತ್ತ ಓಡಾಡುತ್ತಾ, ಎಲ್ಲರೊಂದಿಗೆ ಮಾತನಾಡುತ್ತಾ, ಸಂದರ್ಭ ಬಂದಾಗ ಚಹ-ಬಿಸ್ಕತ್ತುಗಳನ್ನು ಹಂಚುತ್ತಾ, ಸಮ್ಮೇಳನದ ಅಚ್ಚುಕಟ್ಟಿನತ್ತ ಗಮನ ಕೊಟ್ಟ ಪ್ರೊ.ಭಟ್ ಮರೆಯದ, ಮಾದರಿ ವ್ಯಕ್ತಿತ್ವ.
0 comments:
Post a Comment