Thursday, May 5, 2011

ಪೊಳಲಿಯ 'ಸತ್ಯದ ಬೆಳೆ'


ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಅದ್ದೂರಿಯಾಗಿ ನಡೆಯಿತು. ಜಾತ್ರೆ ಅಂದ ಮೇಲೆ ತೊಟ್ಟಿಲು, ಐಸ್ಕ್ರೀಂ ಅಂಗಡಿ, ಚರುಮುರಿ, ಮಣಿಸರಕು.. ಹೀಗೆ ವಿವಿಧ ವೈವಿಧ್ಯ ಮಳಿಗೆಗಳು ಇದ್ದೇ ಇರುತ್ತವೆ. ಧಾರ್ಮಿಕ ಹಿನ್ನೆಲೆಯ ವಾತಾವರಣದಲ್ಲಿ ನಡೆಯುವ ಮಹೋತ್ಸವ ಸಮಯದ (ಜಾತ್ರೆ, ನೇಮ) ಮಳಿಗೆಗಳಿಗೆ ಮಾತ್ರ 'ಸಂತೆ' ಎಂಬ ನಾಮಕರಣ. ಹಾಗಾಗಿ 'ಸಂತೆ' ಎಂದಾಕ್ಷಣ ಜಾತ್ರೆಯ ಸಂಭ್ರಮ ಕಣ್ಮುಂದೆ ಮಿಂಚಿ ಮರೆಯಾಗುತ್ತದೆ.

ಎಲ್ಲಾ ಜಾತ್ರೆಗಳಂತೆ 'ಸಂತೆ'ಗಳು ಪೊಳಲಿಯಲ್ಲೂ ಇವೆ. ಇಲ್ಲಿಯ ಸಂತೆಯಲ್ಲಿ ಕಲ್ಲಂಗಡಿ (ಬಚ್ಚಂಗಾಯಿ) ಹಣ್ಣಿನಗೆ ಮೊದಲ ಮಣೆ. ಈ ವರುಷ ಇಪ್ಪತ್ತೈದಕ್ಕೂ ಮಿಕ್ಕಿ ಮಳಿಗೆಗಳು ಇದ್ದುವು. ಇಲ್ಲಿ ಮಾರುವ ಕಲ್ಲಂಗಡಿ ಹಣ್ಣು ದೂರದೂರಿನಿಂದ ಬರುವುದಿಲ್ಲ. ಇಲ್ಲಿನ ಕೃಷಿಕರೇ ಬೆಳೆದು ಅವರೇ ಮಾರುವುದು ವಿಶೇಷ. ಮಧ್ಯವರ್ತಿಗಳಿಲ್ಲ. ಐದಾರು ಕಿಲೋದ ಕಲ್ಲಂಗಡಿಗೆ ನೂರರಿಂದ ನೂರ ಇಪ್ಪತ್ತು ರೂಪಾಯಿ ತನಕ ದರ. ಏನಿಲ್ಲವೆಂದರೂ ಜಾತ್ರಾ ಸಮಯದಲ್ಲಿ ಇಲ್ಲಿ ಐದಾರು ಲಕ್ಷ ರೂಪಾಯಿ ಕಲ್ಲಂಗಡಿ ನಗದಾಗುತ್ತದೆ.

'ಪೊಳಲಿ ಚೆಂಡು' ಉತ್ಸವ ಹೆಚ್ಚು ಭಕ್ತರು ಸೇರುವ ವಿಶೇಷ ಜಾತ್ರೆ. ಶ್ರೀ ದೇವಿಯು ಚಂಡಮುಂಡ ದೈತ್ಯರನ್ನು ವಧಿಸಿದ ನೆನಪು ಇಲ್ಲಿ ಮರುಕಳಿಸುತ್ತದೆ. ಆ ಕಾರಣಕ್ಕಾಗಿಯೇ 'ಕಲ್ಲಂಗಡಿ' ವಿಶೇಷ. ದೈತ್ಯರ ಶಿರಗಳನ್ನು ಕಲ್ಲಂಗಡಿಗೆ ಹೋಲಿಸುವುದಿದೆ. ಜಾತ್ರೆಗೆ ಬಂದವರು 'ಪುರಲ್ದ ಬಚ್ಚಂಗಾಯಿ' (ಪೊಳಲಿಯ ಬಚ್ಚಂಗಾಯಿ) ಎಂದೇ ಒಯ್ಯುತ್ತಾರೆ. ಇದು 'ಸತ್ಯದ ಬೆಳೆ, ಧರ್ಮದ ಬೆಳೆ'. ಮೊದಲ ಹಣ್ಣನ್ನು ಕೃಷಿಕರು ದೇವರಿಗೆ 'ನೈವೇದ್ಯ'ವಾಗಿ ಸಲ್ಲಿಸುವುದು ರೂಢಿ.

ಮುಖ್ಯವಾಗಿ ಪಟ್ನಾಗರ್ ತಳಿಯನ್ನು ಬಹುತೇಕ ಎಲ್ಲರೂ ಬೆಳೆಯುತ್ತಾರೆ. ಜತೆಗೆ ಮಧು, ಶುಗರ್ಬೇಬಿ. ಇವೆಲ್ಲಾ 'ಪೊಳಲಿ ಮೂಲ ಕಲ್ಲಂಗಡಿ ತಳಿ'ಯನ್ನು ಹೋಲುತ್ತದಂತೆ. ಈ ಸಂದರ್ಭದಲ್ಲಿ ಹೊರಗಿನಿಂದ ಹಣ್ಣು ತಂದು ಮಾರುವಂತಿಲ್ಲ, ಮಾರುವುದಿಲ್ಲ. ಇಲ್ಲೇ ಬೆಳೆಯುತ್ತಾರೆ, ಅಲ್ಲೇ ಮಾರುತ್ತಾರೆ. 'ಒಂದು ವೇಳೆ ಹೊರಗಿನ ವ್ಯಾಪಾರಸ್ಥರು ಬೇರೆ ತಳಿಯ ಕಲ್ಲಂಗಡಿಯನ್ನು ತಂದು ಮಾರಾಟಕ್ಕಿಟ್ಟರೆ ಜನ ಆ ಸ್ಟಾಲ್ನತ್ತ ಹೋಗುವುದೇ ಇಲ್ಲ. ಇದು ಇಲ್ಲಿಯದಲ್ಲ ಎಂದು ಗುರುತು ಹಿಡಿದುಬಿಡುತ್ತಾರೆ' ಎನ್ನುತ್ತಾರೆ ಕೃಷಿಕ ಪದ್ಮನಾಭ ಭಟ್. ಜಾತ್ರೆ ಕಳೆದ ಬಳಿಕ ಇಲ್ಲಿನ ಹಣ್ಣನ್ನು ಕೇಳುವರಿಲ್ಲವಂತೆ.

ಮೂಲತಳಿ ಪೂರ್ತಿ ನಾಶವಾಗಿ ಇಪ್ಪತ್ತೈದು ವರ್ಷ ಸಂದಿದೆ. ರುಚಿಯಲ್ಲಿ ಸಪ್ಪೆ. ಕಪ್ಪು-ಹಸುರು ಮೈಬಣ್ಣ. ಬೆಳೆವ ಆರೈಕೆಯಂತೆ ಗಾತ್ರ. ಮೂಲ ತಳಿಯ ಸ್ಥಾನಕ್ಕೀಗ ಹೈಬ್ರಿಡ್ ತಳಿ ದಾಂಗುಡಿಯಿಟ್ಟಿದೆ. ಐವತ್ತು ಗ್ರಾಮ್ ಬೀಜಕ್ಕೆ ಆರುನೂರು ರೂಪಾಯಿ! ಪೊಳಲಿಯಲ್ಲಿ ಬೆಳೆದ ಕಾರಣ ಅದು 'ದೇವಿಯ ಪ್ರಸಾದ'. ಆಥರ್ಿಕ ಸಂಪಾದನೆ ದೃಷ್ಟಿಯಿಂದ ಪ್ರತೀ ವರುಷವೂ ಕಂಪನಿ ಬೀಜಗಳನ್ನೇ ನೆಚ್ಚಿಕೊಳ್ಳಬೇಕು.

ಹಣ್ಣಿನ ಬೀಜದಿಂದ ಸಸಿ ಮಾಡಿದರೆ ಆಗುವುದಿಲ್ವಾ? ಕೃಷಿಕ ಕೃಷ್ಣ ನಾಯಕ್ ಹೇಳುತ್ತಾರೆ - 'ಗಿಡ ಸಾಮಾನ್ಯ ಬರುತ್ತದೆ. ಎಲ್ಲಾ ಬೀಜಗಳೂ ಮೊಳಕೆ ಬರುವುದಿಲ್ಲ. ಇಳುವರಿ ತೊಂದರೆಯಿಲ್ಲ. ಆದರೆ ಕಾಯಿಯ ಗಾತ್ರ ಉರುಟಾಗಿರುವುದಿಲ್ಲ, ಕೆಲವು ಉದ್ದವಾಗುತ್ತದೆ. ರುಚಿಯೂ ಕಡಿಮೆ'.

ಕಲ್ಲಂಗಡಿಯನ್ನು ತೂಗಿ ಮಾರುವುದು ಕಡಿಮೆ. ಅಂದಾಜು ದರ. ಗಾತ್ರ ನೋಡಿ ದರ ನಿಗದಿ. ಸುಮಾರು ನೂರಕ್ಕೂ ಮಿಕ್ಕಿ ಬೆಳೆಗಾರರ ಪೊಳಲಿಯಲ್ಲಲ್ಲದೆ ಕರಿಯಂಗಳ, ಮಣೇಲು ಊರಿನಲ್ಲಿ ಬೆಳೆಯುತ್ತಾರೆ.

ಜೀವನದಿ ಫಲ್ಗುಣಿಯಲ್ಲಿ ಮಳೆಗಾಲದಲ್ಲಿ ಬಂದ ನೆರೆ ಭೂಮಿಯ ಫಲವತ್ತತೆಯನ್ನು ಕೊಚ್ಚಿಕೊಂಡು ಹೋಗುತ್ತದೆ. ಬೇರ್ಯಾವ ಕೃಷಿಗೂ ಈ ಮಣ್ಣು ಯೋಗ್ಯವಲ್ಲ. ಆದರೆ ಕಲ್ಲಂಗಡಿ, ಸೌತೆಕಾಯಿ ಕೃಷಿಗೆ ತೊಂದರೆಯಿಲ್ಲ. ಇಳುವರಿ ಅದೃಷ್ಟ. ಸಿಕ್ಕಿದರೆ ಸಿಕ್ಕಿತು! ಮೊದಲೆಲ್ಲಾ ಸಾವಯವ ಕ್ರಮದಲ್ಲಿ ಬೆಳೆಯುತ್ತಿದ್ದರು. 'ಈಗ ರಾಸಾಯನಿಕ ಗೊಬ್ಬರ ಹಾಕದೆ, ವಿಷ ಸಿಂಪಡಿಸದೆ ಕೃಷಿಯೇ ಕಷ್ಟಸಾಧ್ಯ' ಕೃಷಿಕರ ಅನುಭವ.

'ಪೊಳಲಿ ಜಾತ್ರೆಯಲ್ಲಿ ಕಲ್ಲಂಗಡಿ ವ್ಯಾಪಾರದಿಂದ ಸಿಕ್ಕ ಉತ್ಪತ್ತಿ ಮಳೆಗಾಲದ ವೆಚ್ಚವನ್ನು ಭರಿಸುತ್ತದೆ' ಎಂದು ನಂಬಿದ್ದ ಕಾಲವಿತ್ತು. ಈಗ ಹಾಗೇನಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆದವರು ಸ್ವಲ್ಪ ಮಟ್ಟಿನ ಲಾಭ ಗಳಿಸುತ್ತಾರೆ. ಬೆರಳೆಣಿಕೆಯ ಕೃಷಿಕರನ್ನು ಬಿಟ್ಟರೆ ಮಿಕ್ಕವರಿಗೆ ಕಲ್ಲಂಗಡಿ ಕೃಷಿ ಹವ್ಯಾಸ.

ಕಲ್ಲಂಗಡಿ 60-70 ದಿವಸದ ಬೆಳೆ. ಜಾತ್ರೆ ಯಾವ ದಿನಾಂಕದಂದು ಆಚರಿಸಲ್ಪಡುತ್ತದೆ ಎಂಬ ಲೆಕ್ಕಾಚಾರದಂತೆ, ಜನವರಿ 10-20ನೇ ದಿನಾಂಕದೊಳಗೆ ಬೀಜಪ್ರದಾನ. ಬೀಜದಿಂದ ಬೀಜಕ್ಕೆ ಒಂದಡಿ ಅಂತರ. ಸಾಲಿನ ಉದ್ದ ಹದಿನೈದು ಅಡಿ. ಸಾಲಿನಿಂದ ಸಾಲಿಗೆ ಹತ್ತಡಿ ಅಂತರ. ಆರಂಭಕ್ಕೆ ಹಟ್ಟಿ ಗೊಬ್ಬರ. ಸಸಿ ಎತ್ತರ ಬಂದ ಮೇಲೆ 'ಸರ್ಕಾರಿ ಗೊಬ್ಬರ'! ಮೂರು ದಿವಸಕ್ಕೊಮ್ಮೆ ನೀರಾವರಿ.

'ಜಾತ್ರೆ ಮುಗಿಯುತ್ತಿದ್ದಂತೆ ಕಲ್ಲಂಗಡಿ ಹಣ್ಣೂ ಮುಗಿಯುತ್ತದೆ. ನಂತರ ಗದ್ದೆಗೆ ಕಳ್ಳರು ನುಗ್ಗುತ್ತಾರೆ. ಅಷ್ಟರೊಳಗೆ ನಾವು ಖಾಲಿ ಮಾಡಬೇಕು. ಬಚ್ಚಂಗಾಯಿ ಮಧ್ಯೆ ಮಧ್ಯೆ ಸೌತೆಕಾಯಿ ಬೆಳೆ ಮಾಡಿದೆವು. ಚೆನ್ನಾಗಿ ಬಂತು. ಆದರೆ ರಾಸಾಯನಿಕ ಗೊಬ್ಬರ, ಸಿಂಪಡಣೆ ಮಾಡಿದ್ದರಿಂದಾಗಿ ಸೌತೆಯನ್ನು ಹೆಚ್ಚು ಕಾಲ ಕಾಪಿಡುವಂತಿಲ್ಲ. ಹಾಳಾಗುತ್ತದೆ' ಎಂಬ ಅನುಭವವನ್ನು ಹೇಳುತ್ತಾರೆ ಪದ್ಮನಾಭ ಭಟ್.

ಮೊದಲು ಸಾರಿಗೆ ವ್ಯವಸ್ಥೆ ತ್ರಾಸವಾಗಿತ್ತು. ಕಾಲ್ನಡಿಗೆಯ ಪ್ರಯಾಣ. ಜಾತ್ರೆಗೆ ಬಂದವರಿಗೆ ಕಲ್ಲಂಗಡಿ ಭಕ್ಷ್ಯವಾಗಿತ್ತು. ತೃಷೆ ನೀಗಲು ಬೇರೆ ವ್ಯವಸ್ಥೆಗಳಿರಲಿಲ್ಲ. ಮನೆಗೆ ಬಂದವರಿಗೆ ಕಲ್ಲಂಗಡಿ ನೀಡುವುದೂ ಪ್ರತಿಷ್ಠೆ! ಕೆಲವರಲ್ಲಿ 'ಜಾತ್ರೆಗೆ ಬಂದು ಮರಳುವಾಗ ಕಲ್ಲಂಗಡಿ ಒಯ್ಯಲೇ ಬೇಕು' ಎಂಬ ನಂಬುಗೆ. ಮನೆಗೆ ನೆಂಟರಿಷ್ಟರು ಬಂದರೂ 'ಒಂದು ಹಣ್ಣು ಕೊಂಡು ಹೋಗಿ' ಎನ್ನುತ್ತಾ ಕೊಡುವುದೂ ಇದೆ.

ಈಗ ಸಾರಿಗೆ ಯಥೇಷ್ಟ. ಸಿದ್ಧಪಾನೀಯ, ಐಸ್ಕ್ರೀಂ ಮಳಿಗೆಗಳು ಕಲ್ಲಂಗಡಿ ಸ್ಟಾಲ್ಗಳನ್ನು ಆಕ್ರಮಿಸಿವೆ. ಆದರೂ ಹಳೆಯ ನಂಬುಗೆಯಿದೆಯಲ್ಲಾ, ಅದರಂತೆ ಕೃಷಿ, ಮಾರಾಟ ನಡೆಯುತ್ತಿದೆ ಅಷ್ಟೇ. ದೇವಳದಲ್ಲಿ ಧ್ವಜಾವರೋಣವಾಗುತ್ತಿದ್ದಂತೆ, ಇತ್ತ ಕಲ್ಲಂಗಡಿ ಮಳಿಗೆಗಳೂ ಜಾತ್ರೆಗೆ ವಿದಾಯ ಹೇಳುತ್ತವೆ. ನಂತರ ಇಲ್ಲಿನ ಹಣ್ಣು ಯಾರಿಗೂ ಬೇಡ!

ಕೃಷಿಗೂ, ಧಾರ್ಮಿಕ ನಂಬುಗೆಗೂ ನಂಟು. ಕಾಲದ ಬೀಸು ಧಾವಂತಕ್ಕೆ ಕಲ್ಲಂಗಡಿಯನ್ನು 'ಪ್ರಸಾದ' ಅಂತ ಸ್ವೀಕರಿಸುವ ಮನಸ್ಸು ಎಷ್ಟಿದೆ. ನಂಬುಗೆಯ ಕವಚದೊಳಗೆ ಕೃಷಿಯೊಂದು ಜೀವಂತವಿದೆಯಲ್ಲಾ, ಅದೇ ಸಮಾಧಾನ. 'ಬೆಳೆದುದೆಲ್ಲಾ ಇಲ್ಲಿ ಮಾರಾಟವಾಗುತ್ತದಲ್ಲಾ, ಹಾಗಾಗಿ ಒಂದಷ್ಟು ಮಂದಿಗೆ ಆಸಕ್ತಿ ಶುರುವಾಗಿದೆ. ಮೊದಲಿಲ್ಲಿ ಭೂಮಿಗೆ ಹೇಳುವಂತಹ ಮಾರಾಟ ದರವಿರಲಿಲ್ಲ. ಈಗೀಗ ದೊಡ್ಡ ಭೂಮಿಗಳು ಮಾರಾಟಕ್ಕಾಗಿ ಹೋಳಾಗುತ್ತಿವೆ. ಕೃಷಿ ಭೂಮಿಯ ವ್ಯಾಪ್ತಿ ಕಿರಿದಾಗುತ್ತಿದೆ' ಎಂಬ ಆತಂಕ ಪದ್ಮನಾಭ ಭಟ್ಟರಿಗೆ.

ಹೈಬ್ರಿಡ್ ತಳಿಗಳು ಹೊಲಕ್ಕೆ ನುಗ್ಗುತ್ತಿವೆ. ಈ ಅಬ್ಬರದ ಮಧ್ಯೆ ಎಷ್ಟೋ ನಾಟಿ ತಳಿಗಳು ಕಣ್ಮರೆಯಾಗುತ್ತಿವೆ. ಇದರಲ್ಲಿ ಪೊಳಲಿಯ ಮೂಲ ತಳಿಯೂ ಒಂದು. ಅದು ಸಪ್ಪೆಯೋ, ಅರುಚಿಯೋ - ಏನೇ ಇರಲಿ, ಮೂಲ ತಳಿಯ ಶೋಧ ಆಗಲೇಬೇಕು, ಅಭಿವೃದ್ಧಿಯಾಗಬೇಕು. ಇದಕ್ಕಾಗಿ ಸಮಾನ ಮನಸ್ಸುಗಳು ಒಂದಾಗಬೇಕು.

0 comments:

Post a Comment