Monday, September 17, 2012

ಮುನ್ನೂರು ತಳಿಗಳ ಭತ್ತದ ತಿಜೋರಿ!

              ಬದುಕಿಗೆ ಪೂರಕವಾದ ಭತ್ತದ ಕೃಷಿಸಂಸ್ಕೃತಿ ಸನಾತನವಾದುದು. ಮಳೆಹೊಯ್ಯುವ ಪೂರ್ವದಲ್ಲಿ ತೆರೆದುಕೊಳ್ಳುವ ಕೃಷಿ ಕೆಲಸಗಳ ಬೀಸು ಪ್ರಕ್ರಿಯೆಯ ಹಿಂದೆ 'ಅನ್ನದ ಬಟ್ಟಲು' ತುಂಬುವ ಲಕ್ಷ್ಯವಿದೆ. ಗದ್ದೆಗಿಳಿದರೆ ಸಾಕು; ಕೃಷಿ ಪಠ್ಯದ ಒಂದೊಂದೇ ಅಧ್ಯಾಯದ ಹಾಳೆಗಳು ಬಿಡಿಸಿಕೊಳ್ಳುತ್ತವೆ, ಅಲಿಖಿತವಾದ ಜ್ಞಾನ ವಿನಿಮಯವಾಗುತ್ತದೆ. ಕೆಲಸ ಮಾಡುತ್ತಾ ಕಲಿಸುವ, ಕಲಿಯುವ, ಅನುಭವ ಸಂಪತ್ತನ್ನು ವೃದ್ಧಿಸಿಕೊಳ್ಳುವ ಈ ಉಪಾಧಿಗಳು ಬದುಕಿನ ಸಿಲೆಬಸ್.
                'ತಳಿ ಅಭಿವೃದ್ಧಿ' - ಎರಡು ಪದಪುಂಜಗಳನ್ನು ಗ್ರಹಿಸಿಕೊಳ್ಳಿ. ನಮ್ಮ ಚಿತ್ತ ಪ್ರಯೋಗ ಶಾಲೆಯತ್ತ ನುಗ್ಗುತ್ತದೆ. ಸರಕಾರಿ ವ್ಯವಸ್ಥೆಗಳೊಳಗೆ ಸುತ್ತುತ್ತವೆ. ವಿಜ್ಞಾನಿಗಳು ನೆನಪಿಗೆ ಬರುತ್ತಾರೆ. ಆದರೆ ನೂರಾರು ವರುಷಗಳಿಂದ ತಳಿಗಳನ್ನು ಆಯ್ಕೆಮಾಡಿ ಅಭಿವೃದ್ಧಿ ಪಡಿಸುತ್ತಿರುವ 'ರೈತ ವಿಜ್ಞಾನಿ'ಗಳು ಎಲ್ಲಿ ನೆನಪಾಗುತ್ತಾರೆ? ಅವರದು 'ಅನ್ನದ ಬಟ್ಟಲು' ತುಂಬಿಸುವ ಸಾಧನೆ. ಅವರೆಂದೂ ಸುದ್ದಿ ಮಾಡುವುದಿಲ್ಲ, ಸಾಧನೆ ಸದ್ದಾಗುವುದಿಲ್ಲ. ಇವರಿಗೆ ಉನ್ನತ ಶೈಕ್ಷಣಿಕ ಪದವಿ ಇಲ್ಲದಿರಬಹುದು, ಇವರ ಮಣ್ಣು ಮುಟ್ಟಿ ಕಲಿತ ಅನುಭವ ಮತ್ತು ಬೆಳೆದು ಬಾಳುವ ಬದುಕಿನ ಶಿಸ್ತುಗಳು ಇದೆಯಲ್ಲಾ, ಅದು ಪದವಿಗಿಂತಲೂ ಉನ್ನತ.
               ರಾಜಧಾನಿಯಲ್ಲಿ ಜರುಗಿದ 'ಆಹಾರ ಮೇಳ'ವೊಂದರಲ್ಲಿ ಭಾಗವಹಿಸಿದ್ದೆ. ಶ್ರೀಕಂಠ, ಕೃಷ್ಣಪ್ರಸಾದ್, ಆನಂದ.. ಹೀಗೆ ಗ್ರಾಮೀಣ ಪತ್ರಕರ್ತ ಸ್ನೇಹಿತರೆಲ್ಲಾ ಜತೆಯಾದೆವು. ಸಮಾನಾಸಕ್ತರು ಸೇರಿದಾಗ ಕೇಳಬೇಕೇ? ಹತ್ತು ಹಲವು ಸುದ್ದಿಗಳು. ಸಂದ ಘಟನೆಗಳ ನೆನವರಿಕೆ. 'ಐದು ಎಕ್ರೆಯಲ್ಲಿ ಮುನ್ನೂರು ತಳಿ ಭತ್ತವನ್ನು ಬೆಳೆದು ಅರ್ಧ ಒರಿಸ್ಸಾವನ್ನೇ ತೆರೆದಿಟ್ಟಿದ್ದಾರೆ, ನಟವರ ಸಾರಂಗಿ,' ಎಂದು ಕೃಷ್ಣಪ್ರಸಾದರಿಂದ ಹೊಸ ಸುಳಿವು. ಸಾರಂಗಿಯವರ ಭತ್ತದ ಕೃಷಿಯನ್ನು ನೋಡಲು ಒರಿಸ್ಸಾಗೆ ಹೋಗಿದ್ದರು. 'ಅವರೊಬ್ಬ ರೈತ ವಿಜ್ಞಾನಿ. ಅವರ ಕೃಷಿ ಬದುಕನ್ನು ನೋಡಲೇ ಬೇಕು. ಅದರಲ್ಲಿ ಅಪಾರವಾದ ಜ್ಞಾನವಿದೆ. ಒಂದು ವಿವಿ ಮಾಡಬಹುದಾದ ಕೆಲಸವನ್ನು ಅವರೊಬ್ಬರೇ ಮಾಡುತ್ತಿದ್ದಾರೆ' ಎನ್ನುತ್ತಾ ಮಾತಿಗಿಳಿದರು.
               ನಟವರ ಸಾರಂಗಿ - ಒರಿಸ್ಸಾದ ಕುದರ್ ಜಿಲ್ಲೆಯ ನರಿಷೋ ಗ್ರಾಮದ ಕೃಷಿಕ. ಸರಕಾರಿ ಲೆಕ್ಕಾಚಾರದಂತೆ ಒರಿಸ್ಸಾದಲ್ಲಿ ನಲವತ್ತು ಲಕ್ಷ ಹೆಕ್ಟೇರ್ನಲ್ಲಿ ಭತ್ತದ ಕೃಷಿಯಿದೆ. ಅದರಲ್ಲಿ ಹನ್ನೊಂದು ಲಕ್ಷ ಹೆಕ್ಟೇರ್ನಲ್ಲಿ ದೇಸೀ ಭತ್ತದ ತಳಿಗಳು.  ಎಪ್ಪತ್ತರ ದಶಕದಲ್ಲಿ ಇಪ್ಪತ್ತೂ ಸಾವಿರಕ್ಕೂ ಮಿಕ್ಕಿದ ತಳಿಗಳನ್ನು ಭತ್ತದ ವಿಜ್ಞಾನಿಯೊಬ್ಬರು ಗುರುತಿಸಿ ದಾಖಲಿಸಿದ್ದಾರಂತೆ.
               ಪುರಿ ದೇವಾಲಯದ ಜಗನ್ನಾಥ ಸ್ವಾಮಿಗೂ ಭತ್ತದ ಕೃಷಿಗೂ ಬಹಳ ಹತ್ತಿರ. ಇವನಿಗೆ ದೇಸೀ ಭತ್ತದ ತಳಿಯ ಅಕ್ಕಿಯ ನೈವೇದ್ಯವೆಂದರೆ ಪ್ರಿಯ. ಪ್ರತಿದಿನ ಹೊಸದಾಗಿ ಕೊಯ್ಲು ಮಾಡಿದ ಭತ್ತದ ಅಕ್ಕಿಯಿಂದ ನೈವೇದ್ಯ ತಯಾರಿ. ಭಕ್ತರಿಗೆ ಮಣ್ಣಿನ ಕುಡಿಕೆಯಲ್ಲಿ ಪ್ರಸಾದ ವಿತರಣೆ. ನಟವರ್ ಸಾರಂಗಿಯವರಿಗೆ ದೇವಾಲಯದ ಸಂಪರ್ಕದಿಂದಾಗಿ ನೂರಕ್ಕೂ ಮಿಕ್ಕಿ ಭತ್ತದ ತಳಿಗಳು ಪ್ರಾಪ್ತವಾದುವು. 
                ಇವರಿಗೆ 1997ರಿಂದ ಭತ್ತದ ನಂಟು. ಮೊದಲು ಐದಾರು ತಳಿಗಳನ್ನು ಬಿತ್ತಿದರು. ಆರೈಕೆ ಮಾಡಿದರು. ಕಾಳುಗಳನ್ನು ಜತನದಿಂದ ಕಾಪಿಟ್ಟು ಮುಂದಿನ ವರುಷ ಬಿತ್ತನೆ. ಈ ತಳಿಗಳ ಬೀಜಗಳು ಕೈಸೇರಿದಾಗ ಮತ್ತೆ ಮೂವತ್ತು ತಳಿಗಳ ಸ್ನೇಹ. ಹೀಗೆ ಅಭಿವೃದ್ಧಿಯಾಗುತ್ತಾ ಬಂದ ಇವರ ಭತ್ತದ ಬೀಜದ ತಿಜೋರಿಯಲ್ಲಿ  ಹತ್ತೇ ವರುಷದಲ್ಲಿ ನೂರಕ್ಕೂ ಮಿಕ್ಕಿ ತಳಿಗಳು ಸೇರಿದುವು. 2008ರಲ್ಲಿ ಮೂರು ಶತಕ ಮೀರಿತು. ದಶಕಕ್ಕೂ ಮೀರಿದ ತಪಸ್ಸಿನ ಫಲವಿದು.
                   ಸ್ಥಳೀಯ ತಳಿಗಳನ್ನು ಪತ್ತೆ ಮಾಡಿ, ಸ್ವತಃ ಬೆಳೆದು, ಅಭಿವೃದ್ಧಿ ಮಾಡುವುದು ಸಾರಂಗಿಯವರಿಗೆ ಬದುಕು. ಹೈಬ್ರಿಡ್ ಬೀಜಗಳ ಧಾಂಗುಡಿಯಲ್ಲಿ ಮರೆಯಾಗುತ್ತಿರುವ ದೇಸೀ ತಳಿಗಳಿಗೆ ಮರುಹುಟ್ಟು ನೀಡುವ ಇವರ ಕೆಲಸವು ಓರ್ವ ವಿಜ್ಞಾನಿಯ ಕೆಲಸಕ್ಕೆ ಸರಿಸಮ. ಅದರಲ್ಲಿ ಮರೆತ ಜ್ಞಾನವನ್ನು, ಕಳೆದುಕೊಂಡ ಬೀಜವನ್ನು ಹೊಲಕ್ಕೆ ತರುವ ಉಪಕ್ರಮವಿದೆಯಲ್ಲಾ, ಅದು ಒಂದು ಸಂಸ್ಕೃತಿಗೆ ಹಿಡಿದ ಮಸುಕನ್ನು ಒರೆಸುವ ಕೆಲಸ.
                ಬೇಸಿಗೆ ಶುರುವಾದಾಗ ನಟವರ ಸಾರಂಗಿಯವರು ಬ್ಯುಸಿಯಾಗುತ್ತಾರೆ. ಬೀಜ ಅಭಿಯಾನ ಶುರುವಾಗಿ ಬಿಡುತ್ತದೆ. ಹಳ್ಳಿಗಳನ್ನು ಸುತ್ತುತ್ತಾರೆ. ರೈತರನ್ನು ಸಂಪರ್ಕಿಸುತ್ತಾರೆ. ರೈತ ಸಂಘಟನೆಗಳನ್ನು ಭೇಟಿ ಮಾಡುತ್ತಾರೆ. ಉದ್ದೇಶವನ್ನು ಮುಂದಿಡುತ್ತಾರೆ. ಬೀಜಗಳನ್ನು ಸಂಗ್ರಹಿಸುತ್ತಾರೆ. ಇವರ ಆಸಕ್ತಿಯನ್ನರಿತ ಕೃಷಿಕರು ತಮ್ಮಲ್ಲಿರುವ ಭತ್ತದ ತಳಿಗಳನ್ನು ನೀಡುತ್ತಾರೆ.  ಹೀಗಾಗಿ ನಟವರ್ ಅವರ ಸಂಗ್ರಹದಲ್ಲಿ ಒರಿಸ್ಸಾದವೇ ಆದ ಇನ್ನೂರೈವತ್ತು ತಳಿಗಳಿವೆ.            
              'ಮುನ್ನೂರು ತಳಿ ಅಂದಾಗ ನೂರೆಕ್ರೆ ವಿಸ್ತಾರದ ಗದ್ದೆಗಳು ಬೇಕಾಗಬಹುದೇನೋ,' ಎಂಬ ಸಂಶಯ ಮುಂದಿಟ್ಟಾಗ, ಕೃಷ್ಣ ಪ್ರಸಾದ್, 'ಛೇ.. ಅಷ್ಟೆಲ್ಲಾ ಇಲ್ಲ. ಐದೆಕ್ರೆಯಲ್ಲಿ ಇಷ್ಟೂ ತಳಿಗಳನ್ನು ಅಭಿವೃದ್ಧಿ ಪಡಿಸಲೆಂದೇ ಬೆಳೆಯುತ್ತಿದ್ದಾರೆ. ಅವರ ಶ್ರಮಕ್ಕೆ ಅವರ ಹೊಲಗಳೇ ಸಾಕ್ಷಿ,' ಎಂದರು.
                 ಹುಡುಕಿ ತಂದ ಬೀಜಗಳ ದಾಖಲಾತಿಗೆ ಮೊದಲಾದ್ಯತೆ. ಬೀಜದ ಲಭ್ಯತೆಗನುಸಾರ ಗದ್ದೆಗಳ ಗಾತ್ರ ನಿರ್ಧಾರ. ಮಡಿ ಮಾಡಿ, ಮೊಳಕೆ ಬರಿಸಿ, ನೆಡುವಲ್ಲಿಯ ತನಕ ಬೀಜಗಳು ಮಿಶ್ರವಾಗದಂತೆ ಎಚ್ಚರ ವಹಿಸುತ್ತಾರೆ. ಸಾವಯವ ಕೃಷಿ ಕ್ರಮದಲ್ಲಿ ಬೇಸಾಯ. ಹಟ್ಟಿ ಗೊಬ್ಬರ ಹೊರತು ಮಿಕ್ಕ ಯಾವುದೇ ಗೊಬ್ಬರಗಳು ಹೊಲಕ್ಕೆ ಬರುವುದಿಲ್ಲ. ರೋಗ ಅಧಿಕವಾದರೆ ಗೋಮೂತ್ರ ಮತ್ತು ಕಹಿಸೊಪ್ಪುಗಳ ದ್ರಾವಣವನ್ನು ಬೇಕಾದಾಗ ಸಿಂಪಡಿಸುತ್ತಾರೆ.
                'ದೇಸೀ ತಳಿಗಳು ಹೆಚ್ಚು ಇಳುವರಿ ಕೊಡುವುದಿಲ್ಲ, ಹೌದಾ?' ಎಂಬ ಪ್ರಶ್ನೆಗೆ ನಟವರ್ ಉತ್ತರಿಸುವುದು ಹೀಗೆ - ನೂರು ವರ್ಷದ ಹಿಂದೆ ತಮಿಳುನಾಡಿನಲ್ಲಿ ಒಂದು ಎಕರೆಗೆ ಅರುವತ್ತು ಕ್ವಿಂಟಾಲ್ಗೂ ಅಧಿಕ ಇಳುವರಿ ಕೊಡುವ ತಳಿಗಳಿದ್ದುವು ಎಂದು ಅಲ್ಲಿನ ಗಜೆಟಿಯರ್ ಹೇಳುತ್ತದೆ. ಅಷ್ಟು ದೂರ ಯಾಕೆ, ನನ್ನ ಸಂಗ್ರಹದಲ್ಲಿರುವ ಐವತ್ತಕ್ಕೂ ಮಿಕ್ಕಿದ ತಳಿಗಳಲ್ಲಿ ಹದಿನೈದರಿಂದ ಇಪ್ಪತ್ತೈದು ಕ್ವಿಂಟಾಲ್ ಭತ್ತ ಈಗಲೂ ಸಿಗುವುದಿಲ್ವಾ.. ಹೇಳುವಂತಹ ಯಾವುದೇ ಆರೈಕೆ ಬೇಡದ ಬೇಸಾಯ...
               ಒಮ್ಮೆ ಒಂದು ತಳಿ ಇವರ ಹೊಲ ಹೊಕ್ಕರೆ ಸಾಕು, ಮತ್ತೆಂದೂ ತಪ್ಪಿಸಿಕೊಳ್ಳಲಾರವು. ನಾಶವಾಗಲಾರವು. ಕಾಪಿಡುವಲ್ಲಿ ಕಾಳಜಿ, ಶಿಸ್ತು. ಸದೃಢವಾಗಿ ತೆನೆ ಬಂದಾಗ ಮೊದಲು ಗುಣಮಟ್ಟದ ತೆನೆಗಳ ಆಯ್ಕೆ. ಅವುಗಳನ್ನು ಪ್ರತ್ಯೇಕವಾಗಿ ಕೊಯ್ದು, ಕಾಳುಗಳನ್ನು ಆಯ್ದು, ಬಿಸಿಲಿನಲ್ಲಿ ಪ್ರತ್ಯಪ್ರತ್ಯೇಕವಾಗಿ ಒಣಗಿಸುತ್ತಾರೆ. ಒಂದು ಕಾಳುಗಳು ಕೂಡಾ ಆಚೀಚೆ ಮಿಶ್ರವಾಗದಂತೆ ಕಣ್ಗಾವಲು. ಬೀಜದ ಅಯ್ಕೆಯ ಮಾನದಂಡ ಹೀಗಿದೆ - ಒಂದೇ ಮಟ್ಟದಲ್ಲಿ ಬೆಳೆದ ಪೈರುಗಳಾಗಿರಬೇಕು, ಏಕಕಾಲಕ್ಕೆ ಬಲಿತ ತೆನೆಗಳಾಗಿರಬೇಕು, ರೋಗಕೀಟಗಳಿಂದ ಮುಕ್ತವಾಗಿದ್ದು, ಸಸಿಯ ಮಧ್ಯಭಾಗದ ಪೈರಿನಿಂದ ಬಂದ ತೆನೆಗಳನ್ನು ಆಯ್ಕೆ ಮಾಡುತ್ತಾರೆ.
                  ಇಷ್ಟಕ್ಕೆ ಮುಗಿಯಲಿಲ್ಲ; ತಳಿಯ ಎತ್ತರ, ಎಲೆಗಳ ಅಗಲ, ಉದ್ದ, ಪೈರುಗಳ ಸಂಖ್ಯೆ, ಕಾಳಿನ ತೂಕ, ಅವಧಿ, ಇಳುವರಿ.. ಹೀಗೆ ದಾಖಲಾತಿ. ಬೀಜವನ್ನು ಪಡೆದ ಮೂಲ, ಪಡೆದ ದಿನಾಂಕ, ಗುಣಮಟ್ಟ, ಸಂರಕ್ಷಣಾ ಕ್ರಮ, ರೋಗ ಬಾಧೆಯ ವಿವರಗಳ ಡಾಟಾಗಳ ಸಮಗ್ರ ದಾಖಲಾತಿ. ಈ ಎಲ್ಲಾ ವಿವರಗಳನ್ನೊಳಗೊಂಡ 'ಭತ್ತದ ಬೀಜದ ಆಲ್ಬಂ' ರೂಪಿಸುತ್ತಾರೆ. ಒಂದು ಆಲ್ಬಂನಲ್ಲಿ ನೂರು ತಳಿಯ ಬೀಜದ ಮಾದರಿ ಮತ್ತು ಸಮಗ್ರ ಮಾಹಿತಿಗಳಿವೆ. ಈ ಆಲ್ಬಮಿಗೆ ಬೇಡಿಕೆ ಚೆನ್ನಾಗಿದೆ. ಆದರೆ ಪೂರೈಕೆ ಕಷ್ಟ. 
                  ಪ್ರತಿ ವರ್ಷ ಬಿತ್ತನೆಯು ಮುನ್ನ ಎರಡು ಸಲ ಬೀಜ ಪ್ರದರ್ಶನವನ್ನು ಏರ್ಪಡಿಸುತ್ತಾರೆ. ಇದರಿಂದಾಗಿ ಬೀಜಗಳ ಮಾರಾಟ ಮತ್ತು ರೈತರ ಪರಿಚಯ. ಹೊಸ ರೈತರ ಪರಿಚಯವಾದರೆ ಬೀಜದ ಹುಡುಕಾಟ ಕೆಲಸಕ್ಕೆ ಸಲೀಸು. ಮುನ್ನೂರಕ್ಕೂ ಮಿಕ್ಕಿ ಭತ್ತದ ಬೀಜಗಳನ್ನು ಸಂರಕ್ಷಣೆ ಮಾಡಿದ ಕೃಷಿಕ ನಟವರ್ ಸಾರಂಗಿಯವರದು ಒಂಟಿ ಸಾಹಸ. ಎಲ್ಲಾ ಮಾಧ್ಯಮಗಳು ಧನಾತ್ಮಕವಾಗಿ ಸ್ಪಂದಿಸಿವೆ. ಸನಿಹದ ಕೃಷಿ ಸಂಶೋಧನಾ ಕೇಂದ್ರದ ವರಿಷ್ಠರಿಗೆ ಮಾತ್ರ ಸಾರಂಗಿಯವರ ಒಂಟಿ ಸಾಹಸದ ಕತೆ ಇನ್ನೂ ತಲುಪಿಲ್ಲ!
                 ರೈತರು ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿಲ್ಲ, ದುರಾಸೆಗೆ ಬಲಿಯಾಗಿ ಕಳಪೆ ಬೀಜ ಕೊಡುವುದಿಲ್ಲ, ಅಧಿಕ ಬೆಲೆಗೆ ಬಿತ್ತನೆ ಬೀಜ ಮಾರಾಟ ಮಾಡುತ್ತಿಲ್ಲ - ಈ ಪ್ರಾಮಾಣಿಕ ಕಾಳಜಿಯೇ ಬಹುಶಃ ರೈತ ವಿಜ್ಞಾನಿಗಳ ನಿರ್ಲಕ್ಷ್ಯಕ್ಕೆ ಕಾರಣವಿರಬಹುದೇನೋ! ಲಕ್ಷ್ಯ ಕೊಡಿ, ಕೊಡದಿರಿ - ಅವರ ಪಾಡಿಗೆ ಅವರಿರುತ್ತಾರೆ.

ಚಿತ್ರ, ಮಾಹಿತಿ : ಕೃಷ್ಣಪ್ರಸಾದ್ ಜಿ, ಬೆಂಗಳೂರು

1 comments:

Krishnanand said...

One nice video about Natbar Sarangi

http://www.youtube.com/watch?v=TsRLG9HGte0

Post a Comment