Sunday, August 27, 2017

ಓರ್ವ ಪಶುವೈದ್ಯ ಹೀಗೂ ಇರಲು ಸಾಧ್ಯ!

ಉದಯವಾಣಿಯ - ನೆಲದ ನಾಡಿ - ಅಂಕಣ  / 8-6-2017

               ಪುತ್ತೂರಿನ ಜನವಸತಿ ರಸ್ತೆಗಳಲ್ಲಿ ಬೆಳಿಗ್ಗೆ ಹಾದು ಹೋಗಿ. ಬಹುತೇಕ ಅಮ್ಮಂದಿರು ಹಾಲಿಗಾಗಿ ಕಾಯುತ್ತಿರುತ್ತಾರೆ. ಒಂದೊಂದು ನಿಮಿಷ ಕಳೆವಾಗಲೂ ಒತ್ತಡ ಏರುತ್ತದೆ. ಮಗುವಿಗೆ ಶಾಲೆಗೆ ತಡವಾಗುತ್ತದೆ. ಯಜಮಾನರಿಗೆ ಕಚೇರಿಗೆ ಹೋಗಲು ವೇಳೆ ಮೀರುತ್ತಿದೆ. ಅಷ್ಟು ಹೊತ್ತಿಗೆ ಬೆಲ್ ರಿಂಗಣಿಸುತ್ತದೆ. ಕ್ಯಾರಿಯರ್ನಲ್ಲಿನ ಟ್ರೇಯಲ್ಲಿ ಹಾಲಿನ ಕ್ಯಾನ್ ತುಂಬಿದ ಬೈಸಿಕಲ್ ಅಂಗಳದಲ್ಲಿ ನಿಲ್ಲುತ್ತದೆ. ಅಮ್ಮಂದಿರ ಮುಖ ಅರಳುತ್ತದೆ. ಒತ್ತಡ ನಿರಾಳವಾಗುತ್ತದೆ. ಹಾಲು ನೀಡಿದ ಬಳಿಕ ಸೈಕಲ್ ಮತ್ತೊಂದು ಮನೆಗೆ ತೆರಳುತ್ತದೆ. ಸೈಕಲ್ ನಿರ್ವಾಹಕರಿಗೆ ಬೆವರೊರೆಸಿಕೊಳ್ಳಲೂ ಪುರುಸೊತ್ತಿರುವುದಿಲ್ಲ. ಇದು ಪುತ್ತೂರು ಹೈನು ವ್ಯವಸಾಯಗಾರರ ಸಂಘದ ಸೇವೆ.
                 ಈ ವ್ಯವಸ್ಥೆಯ ಹಿಂದಿನ ಶಕ್ತಿ ಡಾ.ಮಜಿ ಸದಾಶಿವ ಭಟ್ (ಡಾ.ಎಂ.ಎಸ್.ಭಟ್). 1982-83ರ ಆಜೂಬಾಜು. ಆಗಲೇ ಭಟ್ಟರ ಪಶುವೈದ್ಯ ಸೇವೆಗೆ ದಶಕ ಮೀರಿತ್ತು. ಪುತ್ತೂರು ಕಸಬಾದಲ್ಲಿ ಹೈನುಗಾರಿಕೆಯು ಕೃಷಿಯೊಂದಿಗೆ ಮಿಳಿತವಾಗಿದ್ದುವು. ಹಸುಗಳೊಂದಿಗೆ ಎಮ್ಮೆ ಸಾಕಣೆಯೂ ನಡೆದಿತ್ತು.  ಕೃಷಿಕರು ನಗರದ ಹೋಟೆಲುಗಳಿಗೆ, ಮನೆಗಳಿಗೆ ಸ್ವತಃ ಹಾಲು ವಿತರಿಸುತ್ತಿದ್ದರು. ಹೀಗೆ ಹಾಲು ತರುವವರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಖುಷಿಯದ್ದಾಗಿರಲಿಲ್ಲ. ಒಂದು ರೀತಿಯ ಅನಾದರ ಭಾವ. ಗ್ರಾಹಕರ ವರ್ತನೆಗಳು ಡಾಕ್ಟರಿಗೆ ಹಿಡಿಸಲಿಲ್ಲ.  ಹೈನುಗಾರರ ಸಂಘಟಿತ ವ್ಯವಸ್ಥೆಯಿದ್ದರೆ ಕೃಷಿಕರಿಗೂ ಗೌರವ, ಗ್ರಾಹಕರಿಗೂ ಅನುಕೂಲ ಎನ್ನುವ ನೆಲೆಯಲ್ಲಿ ಹೈನುಗಾರರ ಸಂಘವೊಂದರ ಸ್ಥಾಪನೆಗೆ ಶ್ರೀಕಾರ.
                ಆಗಲೇ ಹೈನುಗಾರಿಕೆಯಲ್ಲಿ ತೊಡಗಿ ಅನುಭವವಿದ್ದ ಹಿರಿಯರು (ಮರಿಕೆ, ಬಂಗಾರಡ್ಕ, ಪುಂಡಿತ್ತೂರು, ಮುದ್ಲಾಜೆ ಕುಟುಂಬದವರು) ಡಾಕ್ಟರರ ಯೋಚನೆಗೆ ಹೆಗಲೆಣೆಯಾದರು. ಸಂಘದ ಕಾರ್ಯಾರಂಭದ ಕುರಿತು ಮಾಧ್ಯಮಗಳಲ್ಲಿ ಪ್ರಚಾರ. ಹೈನುಗಾರರು ತಂದ ಹಾಲನ್ನು ತಕ್ಷಣವೇ ಗ್ರಾಹಕರಿಗೆ ವಿತರಣೆ. ಕೃಷಿಕರು ಸಂತೃಪ್ತಿ. ಗ್ರಾಹಕರಿಗೂ ಸ್ವೀಕೃತ. ಆರಂಭದ ದಿವಸಗಳಲ್ಲಿ ಇನ್ನೂರು ಲೀಟರ್ ಹಾಲು ಸಂಘಕ್ಕೆ ಬರುತ್ತಿತ್ತು. ಸಂಘದ ಕಾರ್ಯಸೂಚಿಯಿಂದ ಕೃಷಿಕರು ಉತ್ಸುಕರಾದರು. ಕ್ರಮೇಣ ಹೈನುಗಾರಿಕೆಯು ವಿಸ್ತರಣೆಯಾಯಿತು. ಸಂಘಕ್ಕೆ ಬರುವ ಹಾಲಿನ ಪ್ರಮಾಣ ಐದಾರು ಪಟ್ಟು ಏರಿತು. ಹಾಲನ್ನು ಉಳಿಸಿಕೊಳ್ಳುವ ಹಾಗಿಲ್ಲ. ಹತ್ತು ಗಂಟೆಯೊಳಗೆ ಮುಗಿಸಬೇಕಿತ್ತು, ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ. ಹಾಗಾಗಿ ಮನೆಮನೆಗಳಿಗೆ ಹಾಲನ್ನು ವಿತರಿಸುವ ಪ್ಯಾಕೇಜ್ ಯೋಜನೆಗೆ ಚಿಂತನೆ.
                "ಬೆಳಿಗ್ಗೆ ಸಂಘ(ಡಿಪೋ)ದ ವರೆಗೆ ಬಂದು ಹಾಲು ಒಯ್ಯಲು ಬಹುತೇಕರಿಗೆ ಸಮಯದ ತೊಂದರೆಯಾಗುತ್ತಿತ್ತು. ಇವರೆಲ್ಲಾ ತಾಜಾ ಹಾಲನ್ನೇ ಅಪೇಕ್ಷೆ ಪಡುವವರು. ಏನಾದರು ವ್ಯವಸ್ಥೆ ಮಾಡಿ ಎಂದು ಒತ್ತಡ ಹಾಕಿದ್ದರು. ನಮ್ಮ ಮಗುವಿಗೆ ತಾಜಾ ಹಾಲೇ ಆಗಬೇಕೆನ್ನುವ ಬೇಡಿಕೆ ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ಮನೆಮನೆಗೆ ಹಾಲು ವಿತರಿಸುವ ವ್ಯವಸ್ಥೆ ರೂಪುಗೊಂಡಿತು," ಎಂದು ಡಾ.ಎಂ.ಎಸ್.ಭಟ್ ನೆನಪಿಸಿಕೊಳ್ಳುತ್ತಾರೆ. ಪಟ್ಟಣಿಗರು ಸಂಘದ ಯೋಜನೆಯನ್ನು ಸ್ವೀಕರಿಸಿದರು. ತಪ್ಪು ಒಪ್ಪುಗಳ ಹಿಮ್ಮಾಹಿತಿ ನೀಡುತ್ತಿದ್ದರು. ಇಂತಹ ಹಿಮ್ಮಾಹಿತಿಗಳೇ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಟೂಲ್ಸ್ಗಳಾಗಿದ್ದುವು.
                  ಎಂ.ಎಸ್.ಭಟ್ಟರು ಪಶು ವೈದ್ಯರು. 1970 ಸೆಪ್ಟೆಂಬರ್ 6ರಂದು ಪುತ್ತೂರಿನಲ್ಲಿ ಪಶುವೈದ್ಯಕೀಯ ಕ್ಲಿನಿಕ್ ಆರಂಭ. 2012 ಅಕ್ಟೋಬರ್ 19ರಂದು ನಿವೃತ್ತ. ಹೈನುಗಾರರು ನೆನಪಿಟ್ಟುಕೊಳ್ಳಬೇಕಾದ ನಲವತ್ತೆರಡು ವರುಷದ ಅವರ ಸೇವೆ. ಪಶು ಚಿಕಿತ್ಸೆಯ ಜತೆಗೆ ಹೈನುಗಾರರ ಅಪೇಕ್ಷೆ ಮತ್ತು ಅಗತ್ಯವನ್ನು ಅರಿತ ಡಾಕ್ಟರ್ ಹೈನು ಸಂಘದ ಸ್ಥಾಪನೆಗೆ ಕಾರಣರಾದುದು ಪುತ್ತೂರಿನ ಚರಿತ್ರೆಯು ಮರೆಯದ ಕಾಲಘಟ್ಟ. ಸಂಘದ ಒಂದು ಅಂಗವಾಗಿ ಹೆಗಲು ಕೊಟ್ಟು ಕೃಷಿಕರೆಲ್ಲರ ಒಲವು ಪಡೆದಿದ್ದಾರೆ.
            ಡಾಕ್ಟರ್ ಮುದ್ಲಾಜೆಯ ಕೃಷಿ ಕುಟುಂಬದವರು. ಸಮಾಜಕ್ಕೆ ಋಣಿಯಾಗುವಂತಹ ಉದ್ಯೋಗ ಮಾಡಬೇಕೆಂದು ತಂದೆಯ ಬಯಕೆ. ತಂದೆಯ ಆಸೆಯನ್ನು ಮೀರದ ಮಗ. ಮನೆಯಲ್ಲಿ ಪಶುಸಂಸಾರದೊಂದಿಗೆ ಬದುಕು ಅರಳಿದ್ದರಿಂದ ಸಹಜವಾಗಿಯೇ ಪಶುಪ್ರೀತಿ. ಮನೆಗೆ ಬರುತ್ತಿದ್ದ ಪಶುವೈದ್ಯ ಡಾ.ನಾಗಪ್ಪ ಪೈಯವರ ಪ್ರಚೋದನೆ. ಎಲ್ಲಾ ಬೆಂಬಲಗಳು ಒಟ್ಟುಸೇರಿದ ಫಲವಾಗಿ ಪಶುವೈದ್ಯಕೀಯ ಕಲಿತರು. ಪುತ್ತೂರಿನಲ್ಲಿ ಸ್ವಂತದ್ದಾದ ಕ್ಲಿನಿಕ್ ಆರಂಭಿಸಿದರು. ಖಂಡಿಗೆ ಶಿವಶಂಕರ ಭಟ್ಟರು ಕ್ಲಿನಿಕ್ಕಿಗೆ ಮೊದಲು ಬೋರ್ಡ್ ಹಾಕಿದವರು, ಎಂದು ಜ್ಞಾಪಿಸಿಕೊಳ್ಳುತ್ತಾರೆ.
                ಆಗ ಸರಕಾರಿ ಆಸ್ಪತ್ರೆಯ ಸೇವೆಯು ಹಳ್ಳಿಪ್ರದೇಶಕ್ಕೆ ತಲುಪುತ್ತಿದ್ದುದು ಕಡಿಮೆ. ಪ್ರತಿ ಕೃಷಿಕರಲ್ಲೂ ಜಾನುವಾರುಗಳಿದ್ದುವು. ಕ್ರಮೇಣ ಮಿಶ್ರತಳಿಯ ಪಶುಗಳು ಹಟ್ಟಿಗೆ ಪ್ರವೇಶಿಸಿದ್ದುವು. ಸಹಜವಾಗಿ ಪಶುವೈದ್ಯರ ಅವಲಂಬನೆಯು ಹೆಚ್ಚಾಯಿತು. ಆಗಲೇ ಎಂ.ಎಸ್.ಭಟ್ಟರು ಹೈನುಗಾರರ ಸಂಪರ್ಕದಲ್ಲಿದ್ದರು. ಕರೆದಾಗ ಓಗೊಟ್ಟು ಧಾವಿಸುವ ಸೇವೆಯಿಂದ ವಿಶ್ವಾಸ ವೃದ್ಧಿಯಾಯಿತು. ದಿನದ ಯಾವ ಹೊತ್ತಿಗೆ ಇರಲಿ, ಇವರ ಮೋಟಾರ್ ಬೈಕ್ ಸ್ಟಾರ್ಟ್ ಆಯಿತು ಎಂದಾದರೆ ಎಲ್ಲಿಗೋ ಹಳ್ಳಿಗೆ ಹೊರಟಿದ್ದಾರೆ ಎಂದು ಊಹಿಸಬಹುದಾಗಿತ್ತು! ವೈಯಕ್ತಿಕ ಹಿತಾಸಕ್ತಿಯನ್ನು ಲಕ್ಷಿಸದೆ, ಗಡಿಯಾರ ನೋಡದೆ ಪಶುಗಳ ಕೂಗಿಗೆ ಧಾವಿಸುತ್ತಿದ್ದರು.
             ಕಾಲೇಜಿನಲ್ಲಿ ಕಲಿತ ವಿದ್ಯೆಗಿಂತಲೂ ಹೈನುಗಾರರು ನನ್ನ ಅಕಾಡೆಮಿಕ್ ಜ್ಞಾನವನ್ನು ವಿಸ್ತರಿಸಿದರು., ಎಂದು ವಿನೀತರಾಗುತ್ತಾರೆ. ಚಿಕಿತ್ಸೆಗಿಂತಲೂ ಮುಖ್ಯವಾಗಿ ಪಶುಗಳ ದೇಹಭಾಷೆಯನ್ನು ವೈದ್ಯನಾದವರು ಅರಿಯಬೇಕು. ಮನುಷ್ಯರನ್ನು ಫಕ್ಕನೆ ಪ್ರಾಣಿಗಳು ಸ್ವೀಕರಿಸುವುದಿಲ್ಲ. ಇವುಗಳನ್ನು ಮುಟ್ಟದೆ, ತಟ್ಟದೆ ಚಿಕಿತ್ಸೆ ಸಾಧ್ಯವಿಲ್ಲ. ಒಂದು ಕಾಲಘಟ್ಟದಲ್ಲಿ ಅಸೌಖ್ಯದ ಪಶುಗಳು ಡಾಕ್ಟರರ ಸ್ಪರ್ಶಮಾತ್ರದಿಂದ ಭಾಗಶಃ ಗುಣಹೊಂದುತ್ತಿದ್ದುವು! ಅಷ್ಟೊಂದು ಕೈಗುಣ.
                ಡಾಕ್ಟರಿಗೆ ಮನೆಯ ಗೇಟಿನ ಪರಿಚಯವಿರುವುದಿಲ್ಲ, ಆದರೆ ಹಟ್ಟಿಯ ಗೇಟಿನ ಪರಿಚಯವಿದೆ - ಎಂ.ಎಸ್.ಭಟ್ಟರ ಸೇವೆಗೆ ಈ ವಾಕ್ಯದ ಭಾವಾರ್ಥ ಸಾಕು. ಚಿಕಿತ್ಸೆಗಾಗಿ ಬಂದಾಗ ಆ ಮನೆಯ ಆಗುಹೋಗುಗಳು, ವರ್ತಮಾನದ ಸಂಗತಿಗಳು, ಕೃಷಿ ವಿಚಾರಗಳು, ಮಕ್ಕಳ ಓದು.. ಹೀಗೆಲ್ಲಾ ಮಾತುಕತೆಗಳು ನಡೆಯುತ್ತಿದ್ದುದರಿಂದ ಎಲ್ಲಾ ಹೈನುಗಾರರಿಗೆ ಇವರು ಹಿರಿಯಣ್ಣನಾಗಿದ್ದರು. ಇಂತಹ ಪ್ರೀತಿ, ವಿಶ್ವಾಸ ಗಳಿಸುವುದು ಸುಲಭ ಸಾಧ್ಯವಲ್ಲ.
                  ಕ್ಲಿನಿಕ್ ಆರಂಭಿಸಿದ ಮೂರ್ನಾಲ್ಕು ತಿಂಗಳ ಅನುಭವವನ್ನು ಎಂ.ಎಸ್.ಭಟ್ಟರೇ ಹೇಳಬೇಕು. ಆಗ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧಿ ಲಭ್ಯವಾಗಿರುತ್ತಿತ್ತು. ನಾನು ಕ್ಲಿನಿಕ್ ತೆರೆದಾಗ ಉಚಿತ ಮದ್ದೆಂದು ಗ್ರಹಿಸಿ ಹಣ ನೀಡಿದೆ ಹೋದವರ ಸಂಖ್ಯೆ ಅಗಣಿತ! ಕ್ರಮೇಣ ಸರಿ ಹೋಯಿತು ಬಿಡಿ. ಎನ್ನುತ್ತಾರೆ. ಇವರೊಂದಿಗೆ ಸಂಘದಲ್ಲಿ ಸೇವೆ ಮಾಡುತ್ತಿದ್ದ ಮೋಹನ ಕಲ್ಲೂರಾಯರು ಹೇಳುತ್ತಾರೆ, ಎಲ್ಲರಂತಲ್ಲ, ಕಡಿಮೆ ಚಿಕಿತ್ಸಾ ವೆಚ್ಚ ಪಡೆಯುತ್ತಿದ್ದರು. ಬಡವರು ಎಂದಾದರೆ ಅವರ ಪ್ರಯಾಣ ವೆಚ್ಚವನ್ನು ತಾನೇ ನೀಡಿದ ಉದಾಹರಣೆಯಿದೆ.
                  1976ರಲ್ಲಿ ಎಂ.ಎಸ್.ಭಟ್ಟರು ಜಾನುವಾರು, ಶ್ವಾನ ಪ್ರದರ್ಶನಗಳ ಆಯೋಜನೆಯಲ್ಲಿ ಮುತುವರ್ಜಿ ವಹಿಸಿದ್ದರು. ಬೆಂಗಳೂರಿನಿಂದ ದುಬಾರಿ ಮೊತ್ತ ನೀಡಿ ಶ್ವಾನವನ್ನು ಖರೀದಿಸಿ, ತಂದು ಸಾಕಿದವರೂ ಇದ್ದಾರೆ, ಇದು ಶ್ವಾನ ಪ್ರದರ್ಶನದ ಎಫೆಕ್ಟ್! ನಾಲ್ಕು ದಶಕದ ಹಿಂದೆಯೇ ಇಂತಹ ಸಾಹಸಕ್ಕೆ ಕೈ ಹಾಕಿದ್ದು ಸಣ್ಣ ಸಂಗತಿಯಲ್ಲ. ಇಲ್ಲೆಲ್ಲಾ ಸಮಾಜಮುಖಿಯಾದ ಯೋಚನೆ, ಯೋಜನೆಗಳು ಜೀವಂತವಾಗಿದ್ದುವು. ಸಮಾಜದ ಮಧ್ಯೆ ಬದುಕುವ ನಾನು ಸಮಾಜಕ್ಕಾಗಿ ಏನನ್ನಾದರೂ ಮಾಡಲೇಬೇಕೆನ್ನುವ ತುಡಿತ.
                  ಹೈನು ವ್ಯವಸಾಯಗಾರರ ಸಂಘ ಮತ್ತು ಎಂ.ಎಸ್.ಭಟ್ಟರ ಕ್ಲಿನಿಕ್ - ಇವೆರಡೂ ವ್ಯಾವಹಾರಿಕವಾಗಿ ಬೇರೆ ಬೇರೆ ಆದರೂ ಆಂತರಿಕವಾಗಿ ಮಿಳಿತಗೊಂಡಿದ್ದುವು. ಇವರ ಯೋಚನೆಗಳಿಗ ಸಾಥ್ ಆಗುವ ಪ್ರಾಮಾಣಿಕ ಸಿಬ್ಬಂದಿಗಳಿದ್ದರು. "ಈಗಿನ ಕಾಲಮಾನದಲ್ಲಿ ಹಾಲಿನ ಉತ್ಪಾದನಾ ವೆಚ್ಚವೇ ನಲವತ್ತೇಳು ರೂಪಾಯಿಯಷ್ಟು ಆಗುತ್ತದೆ. ಇದಕ್ಕಿಂತ ಕಡಿಮೆ ಕ್ರಯಕ್ಕೆ ಹಾಲು ವಿತರಿಸುವುದು ಹೇಗೆ? ಉತ್ತೇಜಿತ ದರವು ಹೈನುಗಾರರಿಗೆ ಸಿಕ್ಕರೆ ಈಗಲೂ ಹೈನುಗಾರಿಕೆಗೆ ಒಲವು ತೋರಿಸುವವರು ಇದ್ದಾರೆ. ನಷ್ಟವೆಂದು ಹಟ್ಟಿ ಯಿಂದ ದೂರವಾದವರು ಪುನಃ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ," ಎನ್ನುತ್ತಾರೆ. ಒಳ್ಳೆಯ ಮಾಲಿಗೆ ಒಳ್ಳೆಯ ದರ - ಡಾಕ್ಟರರ ನಿಲುವು. ಹಾಲಿಗೆ ಉತ್ತಮ ದರವು ಹೈನುಗಾರರಿಗೆ ಸಿಗಬೇಕೆನ್ನುವ ಹಪಾಹಪಿ.
                ಭಟ್ಟರದು 'ತಾವಾಯಿತು, ತಮ್ಮ ವೃತ್ತಿಯಾಯಿತು' ಎನ್ನುವ ಜಾಯಮಾನದವರಲ್ಲ. ತೆರೆದುಕೊಳ್ಳುವ ಮನಸ್ಸು. ಹೊಗಳಿಕೆಗೆ ಉಬ್ಬುವವರಲ್ಲ. ಅದು ಅವರಿಗೆ ಮುಜುಗರ ತರುವ ವಿಚಾರ. ಹಾಲಿಗೆ ಬೇಡಿಕೆಯಿಲ್ಲದೆ, ಉತ್ತೇಜಿತ ದರವಿಲ್ಲದೆ ಹೈನುಗಾರರ ಬದುಕು ವಿಷಾದಕ್ಕೆ ಜಾರುತ್ತಿರುವ ಸಂದರ್ಭದಲ್ಲಿ ಸಾಂತ್ವನ ಹೇಳಿದವರು. ಸಂಘವನ್ನು ಸ್ಥಾಪಿಸಿ ಹೈನುಗಾರಿಕೆಗೆ ಮಾನವನ್ನು ತಂದವರು. ಅವರು ನಿವೃತ್ತರಾಗಿ ನಾಲ್ಕು ವರುಷ ಕಳೆದರೂ ಹೈನುಗಾರರು ಎಂ.ಎಸ್.ಭಟ್ಟರನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಓರ್ವ ವ್ಯಕ್ತಿ ಸಮಾಜದಲ್ಲಿ ತನ್ನ ವೃತ್ತಿಯ ಮೂಲಕ ಎಷ್ಟು ದೊಡ್ಡ ಹೆಜ್ಜೆಯನ್ನೂರಬಹುದು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಮುಂದೆ ನಿಲ್ಲುತ್ತಾರೆ.
             ಕಳೆದ ಕೆಲವು ವರುಷಗಳಲ್ಲಿ ಮರಿಕೆಯ ಎ.ಪಿ.ಸದಾಶಿವರು ಸಂಘವನ್ನು ಮುನ್ನಡೆಸಿದ್ದರೆ, ಪ್ರಕೃತ ಪಿ.ಎಸ್.ಕೃಷ್ಣಮೋಹನ್ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ.

Friday, August 25, 2017

ಕನ್ನಾಡಿಗೆ ಗೌರವ ತಂದ ತಳಿ ಸಂರಕ್ಷಕರು

ಉದಯವಾಣಿಯ 'ನೆಲದ ನಾಡಿ' (Nelada Nadi in Udayavani)  / 18-5-2017
(ಚಿತ್ರ : ಶ್ರೀ ಪಡ್ರೆ)

                 'ಜೋಯಿಡಾದ ಮುದ್ಲಿ ಗೆಡ್ಡೆಗೆ ರಾಷ್ಟ್ರ ಪ್ರಶಸ್ತಿ. ಜತೆಗೆ ಹತ್ತು ಲಕ್ಷ ರೂಪಾಯಿಯ ಬಹುಮಾನ'. ಈ ಸುದ್ದಿ ಬಿತ್ತರವಾದಾಗ ಕುಣುಬಿ ಸಮುದಾಯಕ್ಕೆ ಖುಷ್. ಪಾರಂಪರಿಕವಾಗಿ ಸಂರಕ್ಷಿಸಿಕೊಂಡು ಬಂದ ಮುದ್ಲಿ ಗಡ್ಡೆಗೆ ಮಾನ-ಸಂಮಾನ. ರಾಷ್ಟ್ರ ಮಟ್ಟದ ಸುದ್ದಿ. ಊಹಿಸದ ವಿದ್ಯಮಾನ. ಪ್ರಶಸ್ತಿಯು ಕತ್ತಲೆಯ ಬದುಕಿಗೆ ಬೆಳಕಿನ ಕಿರಣ.
 ಬಿಹಾರದ ಚಂಪಾರಣ್ಯದ ಸಮಾರಂಭವೊಂದರಲ್ಲಿ ಪ್ರಶಸ್ತಿ ಪ್ರದಾನ. ಕುಣುಬಿ ಸಮುದಾಯದ ಮುಖಂಡರಿಂದ ಸ್ವೀಕಾರ. ಹಿರಿಯರ ಕಾಲದಿಂದಲೇ ಬದುಕಿಗಾಗಿ ಬೆಳೆಯುತ್ತಿದ್ದ ಈ ಗಡ್ಡೆಗೆ ಪ್ರಶಸ್ತಿ ಬಂದಿರುವುದರಿಂದ ಮಾರುಕಟ್ಟೆ ಸುಲಭವಾಗಬಹುದು, ಎನ್ನುವ ಖುಷಿಯನ್ನು ಹಂಚಿಕೊಂಡರು ಜಯಾನಂದ ಡೇರೇಕರ್. ಇವರು ಕುಣುಬಿ ಸಮುದಾಯದ ಮುಖಂಡರು.
              ಕೇಂದ್ರ ಕೃಷಿ ಸಚಿವಾಲಯದ 'ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ'ವು ಪ್ರಶಸ್ತಿಯನ್ನು ಆಯೋಜಿಸಿತ್ತು. ಸಸ್ಯ ತಳಿಗಳ ರಕ್ಷಣೆಯನ್ನು 2001ರಲ್ಲಿ ಕಾನೂನಿನ ಚೌಕಟ್ಟಿಗೆ ಸರಕಾರವು ಅಳವಡಿಸಿತ್ತು. ಯಾರು ತಳಿಗಳ ಸಂರಕ್ಷಣೆ ಮಾಡುತ್ತಾರೋ ಅದರ ಹಕ್ಕನ್ನು ಅವರಿಗೇ ಪ್ರದಾನಿಸುವ ಅಪರೂಪದ ಮತ್ತು ಅಗತ್ಯದ ಕಾಯಿದೆಯಿದು. ಪ್ರಾಧಿಕಾರವು ರಾಷ್ಟ್ರಮಟ್ಟದಲ್ಲಿ ಇಂತಹ ಪ್ರಶಸ್ತಿಯನ್ನು ನೀಡುವುದರ ಮೂಲಕ ತಳಿ ಸಂರಕ್ಷಕರಿಗೆ ಉತ್ತೇಜನ ನೀಡುತ್ತಿದೆ.
              ಕನ್ನಾಡಿನ ಜೋಯಿಡಾದಲ್ಲಿ ಬಹುಪಾಲು ಕುಣುಬಿ ಸಮುದಾಯದವರೇ ವಾಸ. ಯಾವುದೇ ಮೂಲಸೌಕರ್ಯಗಳು, ಸಾರಿಗೆ ಅನುಕೂಲತೆಗಳಿಂದ ದೂರವಿರುವ ಕುಟುಂಬಗಳ ಮುಖ್ಯ ಕೃಷಿ ಗೆಡ್ಡೆಗೆಣಸು. ಇಲ್ಲಿನ ಮಣ್ಣು, ಹವಾಮಾನದಲ್ಲಿ ಹುಲುಸಾಗಿ ಬೆಳೆಯುವ ಗೆಡ್ಡೆಗಳೇ ಜೀವನಾಧಾರ. 2014ಲ್ಲಿ ಜರುಗಿದ ಗೆಡ್ಡೆ ಮೇಳವು ಕೃಷಿ ಬದುಕಿಗೆ ಹೊಸ ಹಾದಿ ತೋರಿತು. ಜೋಯಿಡಾಕ್ಕೆ ವಿಜ್ಞಾನಿಗಳು ಆಗಮಿಸಿದರು. ಕೃಷಿಕರ ಜತೆ ಸಂವಾದ ಮಾಡಿದರು. ಗೆಡ್ಡೆಗಳ ಇತಿಹಾಸವನ್ನು ದಾಖಲಿಸಿದರು. ಮಾರುಕಟ್ಟೆ ಒದಗಿಸುವತ್ತ ಚಿಂತನೆಗಳು ನಡೆದುವು. ಮೌಲ್ಯವರ್ಧನೆ ಮತ್ತು ಅವುಗಳ ಮಾರಾಟ ಅವಕಾಶಗಳ ರೂಪುರೇಷೆ ಮಾಡಲಾಗಿತ್ತು. ಇವೆಲ್ಲಾ ಅನುಷ್ಠಾನದತ್ತ ಮುಖ ಮಾಡುತ್ತಿರುವಾಗಲೇ - ಮೂರೇ ವರುಷದಲ್ಲಿ - ಜೋಯಿಡಾ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.
            ಮುದ್ಲಿ ಗೆಡ್ಡೆಗೆ ವಿಶೇಷ ಸ್ಥಾನ. ಉದ್ದವಾಗಿ ಬೆಳೆವ ಗಡ್ಡೆಗೆ ಒಂದು ವರುಷ ತಾಳಿಕೆ. ಅತ್ಯಧಿಕ ಪೌಷ್ಟಿಕಾಂಶ. ಇದಕ್ಕೆ ಮುಡ್ಲಿ, ಮುಡಿಯಾ, ದೊಡ್ಡಕೆಸು, (colocasia esculenta) ಎನ್ನುವ ಹೆಸರಿದೆ. ಏಳು ತರಹದ ಖಾದ್ಯಗಳನ್ನು ಇದರಿಂದ ಮಾಡಬಹುದಂತೆ. ಪನ, ಏಟ್, ಕೋಂಬ್, ಸಾಂಬಾರ್, ಚಟ್ನಿ, ಏಡಿಯ ಜತೆ ಕುಲ್ಯಾ ಕಡಿ, ಸಿಗಡಿ ಜತೆ ಸುಂಡಾ ಕಡಿ, ಕಾಪಾ (ಪತ್ರೊಡೆ). ಜತೆಗೆ 'ಕೋನಾ' ಎಂದು ಕರೆಯುವ ಡಯೋಸ್ಕೋರಿಯ ಗಡ್ಡೆಯ ಪಾಯಸ ವಿಶೇಷ. ಮುದ್ಲಿ ಅಲ್ಲದೆ ಹದಿನೈದಕ್ಕೂ ವಿವಿಧ ವೈವಿಧ್ಯ ತಳಿಗಳಿಗಳನ್ನು ಬೆಳೆಸುತ್ತಾರೆ. ತಳಿಯೊಂದನ್ನು ರಕ್ಷಿಸಿಕೊಂಡು ಬಂದ ಕುಣುಬಿ ಸಮುದಾಯಕ್ಕೇ ಈ ಪ್ರಶಸ್ತಿ ಬಂದಂತಾಗಿದೆ.
               ಮೈಸೂರಿನ ಡಾ.ಸಿ.ಎನ್.ಮೃತ್ಯುಂಜಯಪ್ಪ (68) ಅವರಿಗೆ ತಳಿ ಸಂರಕ್ಷಣೆಯ ಕಾಯಕಕ್ಕೆ ಪ್ರಶಸ್ತಿ. ಇವರು ವೃತ್ತಿಯಲ್ಲಿ ವೈದ್ಯರು. ಮೈಸೂರಿನ ಶ್ರೀರಾಂಪುರದಲ್ಲಿ ವಾಸ. ಅವರ ಮನೆ ಹಿತ್ತಿಲಿನಲ್ಲಿ ಎಪ್ಪತ್ತಕ್ಕೂ ಮಿಕ್ಕಿ ವಿವಿಧ ಜಾತಿಯ ತಳಿಗಳನ್ನು ಬೆಳೆಸಿದ್ದಾರೆ. ವಾಣಿಜ್ಯ ವ್ಯವಹಾರಕ್ಕಲ್ಲ, ತಳಿಸಂರಕ್ಷಣೆಯ ಉದ್ದೇಶ.
              ಡಾಕ್ಟರಿಗೆ ಪ್ರವಾಸ ಆಸಕ್ತಿ. ಹೋದೆಡೆ ವಿವಿಧ ನರ್ಸರಿಗಳನ್ನು ಭೇಟಿ ಮಾಡುತ್ತಾರೆ. ಅಪರೂಪದ್ದಾದವುಗಳನ್ನು ತಂದು, ಆರೈಕೆ ಮಾಡಿ ಬೆಳೆಸುತ್ತಾರೆ. ಗಿಡಗಳನ್ನು ತರಲು ಅಸಾಧ್ಯವಾದಾಗ ಕುಡಿಗಳನ್ನು ತಂದು ಕಸಿ ಕಟ್ಟಿ ಅಭಿವೃದ್ಧಿ ಪಡಿಸುತ್ತಾರೆ. ಇವರ ಮನೆಯ ಆವರಣದಲ್ಲಿರುವ ಒಂದೇ ಮಾವಿನ ಮರದಲ್ಲಿ ಹಲವು ಬಗೆಯ ತಳಿಗಳ ಮಾವು ಲಭ್ಯ!
              ನಗರದ ಹಿತ್ತಿಲಿನಲ್ಲಿ ಸ್ಥಳ ತುಂಬಾ ಕಡಿಮೆ. ಮಾವಿನ ಗಿಡ ನೆಡಬೇಕೆಂದರೆ, ಬೇಕಾದ ಜಾತಿಯ ಬಗ್ಗೆ ಮನೆಯಲ್ಲಿ ಒಮ್ಮತವಿಲ್ಲ.   ಗಂಡನಿಗೆ ಅಲ್ಫಾನ್ಸೋ ಇಷ್ಟ. ಹೆಂಡತಿಗೆ ಮಲ್ಲಿಕಾ. ಮಗಳಿಗೆ ಕಾಳಪ್ಪಾಡಿ. ಇಂತಹ ಕುಟುಂಬಗಳು ಚಿಂತಿಸಬೇಕಾಗಿಲ್ಲ. ಎಲ್ಲರಿಗೂ ಸಮಾಧಾನ ಆಗುವ ಫಾರ್ಮುುಲಾ ಅನುಸರಿಸಬಹುದು. ಅದಕ್ಕಿರುವ ಉಪಾಯವೇ ಟಾಪ್ ವರ್ಕಿಂಗ್. ಒಂದೇ ದೇಹಕ್ಕೆ ಹಲವು ತಲೆ. ಒಂದರಲ್ಲಿ ನೂರು! ಒಂದೇ ಮರದಲ್ಲಿ ಅವರವರಿಗೆ ಅಚ್ಚುಮೆಚ್ಚಿನ ಜಾತಿಯ ಹಣ್ಣು, ಡಾ.ಮೃತ್ಯುಂಜಯಪ್ಪ ಸ್ವಾರಸ್ಯವಾಗಿ ಹೇಳುತ್ತಾರೆ.
                 ಡಾಕ್ಟರರ ಹಿತ್ತಿಲಿನ ಮಾವಿನ ಮರದಲ್ಲಿ ನೂರು ತಳಿಗಳ ಶಿರಗಳಿವೆ! ಇದರಲ್ಲಿ ಐವತ್ತು ಬಗೆಯವು ಅಧಿಕೃತ ಹೆಸರಿರುವಂತಹುಗಳು. ಎಲ್ಲಿಂದ ತಳಿಗಳನ್ನು ಸಂಗ್ರಹಿಸಿದ್ದಾರೋ ಆ ಊರಿನ ಹೆಸರನ್ನು ಕೆಲವು ತಳಿಯದ್ದಕ್ಕೆ ನಾಮಕರಣ ಮಾಡಿದ್ದಾರೆ. 'ಒಂದರಲ್ಲಿ ನೂರು ಮಾವು' - ಈ ಮರದಿಂದ ತಿನ್ನಲು ಕಾಯುತ್ತಿರುವ ತಳಿಗಳು ಹಲವು. ವಿಭೂತಿ ಉಂಡೆ, ಹಣ್ಣನ್ನು ತೂತು ಮಾಡಿ ಕುಡಿಯುವಂತಾದ್ದು, ಸೇಬು ಮಾವು, ಅರುಣಾಚಲದ ತಳಿ.. ಇತ್ಯಾದಿ.
               ದಾಸವಾಳ, ಸೇಬು, ಸೀತಾಫಲ, ನಿಂಬೆ ಗಿಡಗಳಿಗೆ ಡಾಕ್ಟರರ ಕಸಿ ಪ್ರಯೋಗ ಯಶಸ್ವಿ. ಅಡಿ ಗಿಡವೊಂದರಲ್ಲಿ  ವಿವಿಧ ತಳಿಗಳ ಫಲಗಳನ್ನು ಪಡೆಯುವ ಯತ್ನ. ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳ ಸಂರಕ್ಷಣೆ ವಿಶೇಷಾಸಕ್ತಿ. ವಿದೇಶಿ ಸಸ್ಯ ಸಂಸಾರಗಳೂ ಇವೆ. ಕೃಷಿ-ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳಿಗೆ ಇವರ ತೋಟ  ಕಲಿಕಾ ಪಠ್ಯ. ಮಡದಿ ಸುಧಾ ಹೆಗಲೆಣೆ.
                  ಎರಡೂ ಪ್ರಶಸ್ತಿಗಳು ತಳಿಸಂರಕ್ಷಣೆಗಾಗಿ ಪ್ರಾಪ್ತವಾದವುಗಳು. ಇಂದು ನಮ್ಮ ಅನೇಕ ಕೃಷಿ ಸಂಶೋಧನಾಲಯಗಳಲ್ಲಿ ತಳಿಗಳು ಸಂಶೋಧನೆಗಳಾಗುತ್ತಿವೆ. ಆ ಸಂಶೋಧನೆಗಳಿಗೆ ಸಿದ್ಧ ವೈಜ್ಞಾನಿಕ ಮಾನದಂಡಗಳಿವೆ. ಆದರೆ ಕೃಷಿಕರೇ ಇಂದು ಸಂಶೋಧಕರಾಗುತ್ತಿದ್ದಾರೆ. ಯಾವುದೇ ಪ್ರಶಸ್ತಿಗಳ ಆಸೆಯಿಂದ ಕುಣುಬಿ ಸಮುದಾಯದವರಾಗಲೀ, ಡಾ.ಮೃತ್ಯುಂಜಯಪ್ಪನವರಾಗಲಿ ತಳಿ ಸಂರಕ್ಷಣೆ ಮಾಡಿದ್ದಲ್ಲ. ಸ್ವಯಂ ಆಸಕ್ತಿಯಿಂದ ಮಾಡಿದ ಸಾಧನೆಗೆ ಪ್ರಶಸ್ತಿ ಅರಸಿ ಬಂದಿರುವುದು ಖುಷಿಯ ಸಂಗತಿ. ಇತರರಿಗೂ ಪ್ರೇರಣೆ. ಹಸಿರಿಗೆ ಸಂದ ಗೌರವ.
                    ತಳಿ ಸಂರಕ್ಷಣೆಯಂತಹ ಕೆಲಸದಲ್ಲಿ ಬಂಟ್ವಾಳ ತಾಲೂಕಿನ ಕೇಪು-ಉಬರು 'ಹಲಸು ಸ್ನೇಹಿ ಕೂಟ'ವು ಐದಾರು ವರುಷದಿಂದ ತೊಡಗಿಸಿಕೊಂಡಿದೆ. ಎಲ್ಲವೂ ಸ್ವಯಂ ಆಸಕ್ತಿಯಿಂದ ಮಾಡಿದವುಗಳು. ಹಲಸು, ಮಾವು ಮೇಳಗಳನ್ನು ಸಂಘಟಿಸುತ್ತಾ, ಲಭ್ಯವಾದ ಹಿಮ್ಮಾಹಿತಿಯ ಜಾಡನ್ನು ಅನುಸರಿಸಿ ಹಲವು ತಳಿಗಳ ಪತ್ತೆ ಮತ್ತು ಸಂರಕ್ಷಣೆಯ ಕೆಲಸಗಳು ಸದ್ದಿಲ್ಲದೆ ನಡೆದಿವೆ. ಸುಮಾರು ಇಪ್ಪತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಏನಿಲ್ಲವೆಂದರೂ ಮೂವತ್ತಕ್ಕೂ ಮಿಕ್ಕಿ ಹಲಸು, ಮಾವಿನ ತಳಿಗಳು ಅಭಿವೃದ್ಧಿಯಾಗಿವೆ.
                 ಅಪರೂಪದ ತಳಿಗಳನ್ನು ಉಳಿಸುವ, ಸಂರಕ್ಷಿಸುವ ನೆಲೆಯಲ್ಲಿ ಹಲಸು ಸ್ನೇಹಿ ಕೂಟವು 'ರುಚಿ ನೋಡಿ-ತಳಿ ಆಯ್ಕೆ' ಎನ್ನುವ ಹೊಸ ಪ್ರಕ್ರಿಯೆಗೆ ಶ್ರೀಕಾರ ಬರೆದಿತ್ತು. ಸಮಾರಂಭದಲ್ಲಿ ಹತ್ತಾರು ತಳಿಯ ಹಲಸಿನ ಹಣ್ಣನ್ನು ಕೃಷಿಕರೇ ರುಚಿ ನೋಡುವುದರ ಮೂಲಕ ತಳಿ ಆಯ್ಕೆಯನ್ನು ಮಾಡಿದೆ. ರುಚಿ, ಬಣ್ಣ, ತಾಳಿಕೆ, ಫಿಲ್ಲಿಂಗ್, ಫಲ ಬಿಡುವ ಸಮಯ.. ಮೊದಲಾದ ಮಾನದಂಡಗಳನ್ನಿಟ್ಟು ತಳಿ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ವೈಜ್ಞಾನಿಕ - ಸಂಶೋಧನಾತ್ಮಕವಾದ ಮಾನದಂಡಗಳಿಲ್ಲದೇ ಇರಬಹುದು. ಆದರೆ ಆ ಊರಿನ ಅಪರೂಪದ್ದಾದ, ಹೆಚ್ಚಾಗಿ ಬೆಳಕಿಗೆ ಬಾರದಿರುವ ಉತ್ಕೃಷ್ಟ ತಳಿಗಳು ಅಭಿವೃದ್ಧಿಯಾಗಿವೆ.
                 ಈಚೆಗೆ ಹಲಸು ಸ್ನೇಹಿ ಕೂಟವು 'ಪುನರ್ಪುಳಿ ಪ್ರಪಂಚದೊಳಕ್ಕೆ' ಎನ್ನುವ ಅಪರೂಪದ, ಖಾಸಗಿ ಸಹಭಾಗಿತ್ವದ ಕಲಾಪವನ್ನು ಹಮ್ಮಿಕೊಂಡಿತ್ತು. ಹದಿನೈದು ವಿವಿಧ ಪುನರ್ಪುಳಿ (ಕೋಕಂ) ತಳಿಗಳನ್ನು 'ತಳಿ ಆಯ್ಕೆ' ಪ್ರಕ್ರಿಯೆಗೆ ಒಡ್ಡಲಾಗಿತ್ತು. ಡಾ.ಕತ್ರಿಬೈಲು ಶ್ರೀಕುಮಾರ್ ಮತ್ತು ಪೇರಡ್ಕ ಜಗನ್ನಾಥ ಶೆಟ್ಟರ ಹಿತ್ತಿಲಿನ ಎರಡು ತಳಿಗಳು ಉತ್ಕೃಷ್ಟವೆಂದು ಆಯ್ಕೆಯಾಗಿವೆ. ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳು ಅಭಿವೃದ್ಧಿ ಪಡಿಸಿದ ತಳಿಗಳಷ್ಟೇ ಉತ್ಕೃಷ್ಟವಾದ ತಳಿಗಳು ನಮ್ಮ ತೋಟದಲ್ಲೋ, ಕಾಡಿನಲ್ಲೋ ಇರಬಹುದು. ಅಂತಹುಗಳನ್ನು ಹುಡುಕಿ ಅಭಿವೃದ್ಧಿ ಪಡಿಸಬೇಕಾಗಿದೆ. ಪುನರ್ಪುಳಿ ಕಾರ್ಯಾಗಾರದಲ್ಲಿ  ಕಸಿ ತಜ್ಞ  ಆತ್ರಾಡಿಯ ಗುರುರಾಜ ಬಾಳ್ತಿಲ್ಲಾಯರು ನಾಲ್ಕು ಪುನರ್ಪುಳಿ ತಳಿಗಳನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸಿದ್ದರು. ಕಲಾಪದಲ್ಲಿ ಅವೆಲ್ಲಾ ಖಾಲಿ! ಕೃಷಿಕರ ಒಲವು ಉತ್ತೇಜಕರ.
                 ತಳಿ ಸಂರಕ್ಷಣೆ ಮತ್ತು ಅಭಿವೃದ್ದಿ ಜತೆಜತೆಗೆ ಆಗುವ ಕೆಲಸಗಳು. ಮನಸ್ಸಿನಿಂದ ಹುಟ್ಟುವ ತಳಿ ಪ್ರೀತಿಯ ಹತ್ತಾರು ತಳಿ ಸಂರಕ್ಷಕರಿಂದಾಗಿ ಇಂದು ವಿವಿಧ ಅಪರೂಪದ ತಳಿಗಳು ಉಳಿದುಕೊಂಡಿವೆ. ತಳಿ ಸಂರಕ್ಷಣೆಗಾಗಿ ಸರಕಾರವು 'ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ'ಯನ್ನು ರೂಪುಗೊಳಿಸಿದೆ. ಇದರ ಕಾರ್ಯವ್ಯಾಪ್ತಿಯಲ್ಲಿ ಕನ್ನಾಡಿನ ಇಬ್ಬರು ಪ್ರಶಸ್ತಿಗೆ ಭಾಜನರಾಗಿರುವುದು ಕನ್ನಾಡಿಗೆ ಗೌರವ.

ಬದಲಾವಣೆಯ ತಂಗಾಳಿ - ತೆಂಗಿನ ಕಾಯಲ್ಲಿ ಫಲದಾಯಕನ ಕಾಯ


ಉದಯವಾಣಿಯ - ನೆಲದ ನಾಡಿ - ಅಂಕಣ / 17-8-2017

                 ಗಣೇಶನ ಹಬ್ಬದ ಸಂಭ್ರಮದ ಕ್ಷಣಕ್ಕೆ ಕನ್ನಾಡು ತೆರೆದುಕೊಳ್ಳುತ್ತಿದೆ. ಮನೆಮನಗಳು ಸಜ್ಜಾಗುತ್ತಿವೆ. ಗಣೇಶನ ವಿಗ್ರಹಗಳಿಗೆ ಕಲಾಗಾರರು ಅಂತಿಮ ಟಚ್ ಕೊಡುತ್ತಿದ್ದಾರೆ. ಇನ್ನೊಂದೇ ವಾರ. ಎಲ್ಲರ ಮನದೊಳಗೆ ಗಣೇಶ ಇಳಿದು ಬಿಡುತ್ತಾನೆ. ಪುಳಕದ ಅನುಭವ, ಅನುಭಾವ.
                ಗಣೇಶ ಕಲ್ಪವೃಕ್ಷ ಫಲಪ್ರಿಯ. ಗಣಹವನಕ್ಕೆ ತೆಂಗಿನಕಾಯಿಯ ಎಲ್ಲಾ ಭಾಗಗಳು ಅವಶ್ಯ. ಹೋಮಿಸಲು ಕೂಡಾ. ಮಂಟಪಕ್ಕೆ ತೆಂಗಿನಗರಿಯಿಂದ ತಯಾರಿಸಿದ ಹೆಣಿಕೆಯು ಪಾರಂಪರಿಕ. ಹೀಗೆ ಸರ್ವತ್ರ ತೆಂಗಿನ ಬಳಕೆಯು ಗಣೇಶನ ಹಬ್ಬದಲ್ಲಿ ಸ್ಥಾನ ಪಡೆದಿದೆ. ಹಬ್ಬಾಚರಣೆಯಲ್ಲಿ ತೆಂಗು ಇಷ್ಟೊಂದು ಪ್ರಭಾವಿಯಾಗಿ ಆವರಿಸಿರಬೇಕಾದರೆ ಗಣೇಶನ ಮೂರ್ತಿಯೂ ತೆಂಗಿನಕಾಯಿಯದ್ದೇ ಆಗಿಬಿಟ್ಟರೆ ಇನ್ನೂ ಶ್ರೇಷ್ಠವಲ್ವಾ!
               ಧಾರವಾಡದಲ್ಲಿ ಸರಕಾರದ ಆದೇಶವೊಂದು ಈ ಯೋಚನೆಗೆ ಬೀಜಾಂಕುರ ಮಾಡಿತು. ನೈಸರ್ಗಿಕವಲ್ಲದ ವಸ್ತುಗಳಿಂದ ತಯಾರಿಸುವ ಗಣಪನ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಬಾರದು ಎನ್ನುವುದು ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶ. ಇದಕ್ಕೆ ಕಾರಣ ಇಲ್ಲದಿಲ್ಲ. ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ವಿವಿಧ ರಾಸಾಯನಿಕ ಬಣ್ಣಗಳನ್ನು ಬಳಸಿ ಮೂರ್ತಿಗಳನ್ನು ರಚಿಸುವುದು ವಾಡಿಕೆ. ಗಣೇಶನ ವಿಸರ್ಜನೆ ಬಳಿಕ ಮೂರ್ತಿಯು ನೀರಿನಲ್ಲಿ ಕರಗುವುದಿಲ್ಲ. ಮೂರ್ತಿಯ ಅಂದಕ್ಕಾಗಿ ಲೇಪಿಸಿದ್ದ ಕೃತಕ ಬಣ್ಣಗಳು ನೀರಿನೊಂದಿಗೆ ಮಿಶ್ರಗೊಂಡು ಕಲುಶಿತವಾಗುತ್ತದೆ. ಇದರಿಂದ ನಾನಾ ತರಹದ ಕಾಯಿಲೆಗಳು ಬರುವುದಲ್ಲದೆ ಜೀವವೈವಿಧ್ಯಕ್ಕೂ ಹಾನಿಯಾಗುತ್ತದೆ.
                 ಮಣ್ಣಿನಿಂದಲೇ ಮೂರ್ತಿಗಳನ್ನು ಮಾಡಿದರೆ ಓಕೆ. ಈಗಾಗಲೇ ಈ ಯತ್ನದಲ್ಲಿ ಯಶ ಸಾಧಿಸಿದವರಿದ್ದಾರೆ. ಮಣ್ಣಿನ ಬದಲಿಗೆ ಗಣಪನಿಗೆ ಪ್ರಿಯವಾದ ತೆಂಗಿನಕಾಯಿಯಿಂದಲೇ ಮೂರ್ತಿ ಸಿದ್ಧವಾದರೆ ಪರಿಸರ ನೈರ್ಮಲ್ಯಕ್ಕೆ ಆತಂಕವಿಲ್ಲ. ಜಿಲ್ಲಾಧಿಕಾರಿಗಳ ಈ ಆದೇಶವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗಂಭೀರವಾಗಿ ಪರಿಗಣಿಸಿತು. ಪ್ಲಾಸ್ಟರ್ ಆಫ್ ಪ್ಯಾರೀಸ್ಗೆ ಪರ್ಯಾಯ ವ್ಯವಸ್ಥೆಯೊಂದನ್ನು ಜನರ ಮುಂದಿಡಲು ಬಹುಕಾಲದಿಂದ ಯೋಚಿಸುತ್ತಲೇ ಇತ್ತು.
ಧಾರವಾಡ ಇಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ಮೇಲ್ವಿಚಾರಕ ಬಾವಿಕಟ್ಟಿಯ ಜಗದೀಶ ಗೌಡ ಮತ್ತು ಅವರ ಸಹೋದರ ವೀರನಗೌಡರು ತೆಂಗಿನಿಂದ ವಿವಿಧ ವಿನ್ಯಾಸಗಳನ್ನು ಸ್ವ-ಆಸಕ್ತಿಗಾಗಿ ಮಾಡುತ್ತಿದ್ದರು. ಆಸಕ್ತರಿಗೆ ಹಂಚುತ್ತಿದ್ದರು. ಮೇಳಗಳಲ್ಲಿ ಪ್ರದರ್ಶನಕ್ಕಿಡುತ್ತಿದ್ದರು. ಅದರಲ್ಲಿ ತೆಂಗಿನಕಾಯಿ ಗಣಪನ ಮೂರ್ತಿಯೂ ಒಂದು. ಗ್ರಾಮಾಭಿವೃದ್ಧಿ ಯೋಜನೆಯ ಯೋಚನೆಗೆ ಜಿಲ್ಲಾಧಿಕಾರಿಗಳ ಆದೇಶವೂ ಬಲ ನೀಡಿತು. ಜಗದೀಶರ ಕಲೆಯನ್ನು ಜನರ ಮುಂದಿಡಲು ಮುಂದಾಯಿತು.
             ಯೋಜನೆಯ 'ಕೌಶಲ್ಯ ಅಭಿವೃದ್ಧಿ ತರಬೇತಿ'ಯಡಿ ಸ್ವ-ಸಹಾಯ ಸಂಘದ ಐವತ್ತು ಮಹಿಳೆಯರಿಗೆ ಜಗದೀಶರು ತರಬೇತಿ ನೀಡಿದರು. ಇಪ್ಪತ್ತೈದು ಮಂದಿಯ ಎರಡು ತಂಡಕ್ಕೆ ಏಳೇಳು ದಿವಸಗಳ ತರಬೇತಿ. ತೆಂಗಿನಕಾಯಿಯ ಆಯ್ಕೆಯಲ್ಲಿಂದ ಅಂತಿಮ ಸ್ಪರ್ಶದ ತನಕದ ಸಿಲೆಬಸ್. ಪರೀಕ್ಷೆಯಲ್ಲಿ ಎಲ್ಲರೂ ಉತ್ತೀರ್ಣ. ಫಲವಾಗಿ ಐನೂರಕ್ಕೂ ಮಿಕ್ಕಿ ತೆಂಗಿನಕಾಯಿಯಲ್ಲಿ ಮೂಡಿದ ಗಣೇಶ ಪೂಜೆಗೆ ಸಿದ್ಧನಾಗಿದ್ದಾನೆ. ಇನ್ನೂ ಐನೂರಕ್ಕೆ ನಕ್ಷೆ ತಯಾರಾಗಿದೆ.
              "ಈ ವರುಷ ಒಂದು ಸಾವಿರ ಮನೆಗಳಲ್ಲಿ ತೆಂಗಿನಕಾಯಿಯಿಂದ ರಚಿತವಾದ ಗಣಪನ ವಿಗ್ರಹಕ್ಕೆ ಪೂಜೆ ಸಲ್ಲಲ್ಪಡುತ್ತದೆ. ಮನೆಮನೆ ಭೇಟಿ ಮೂಲಕ ಅರಿವು ಮೂಡಿಸುವ ಯತ್ನಗಳಾಗುತ್ತಿವೆ. ಗಣೇಶ ಮೂರ್ತಿ ಅಂದಾಗ ನೀರಿನಲ್ಲಿ ವಿಸರ್ಜನೆ ಮಾಡಬೇಕೆನ್ನುವ ಮೈಂಡ್ಸೆಟ್ ಬಹುತೇಕರಲ್ಲಿದೆ. ತೆಂಗಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿ ನಂತರ ಮಣ್ಣಿಗೆ ಸೇರಿಸಿ. ಅದು ಮೊಳಕೆ ಬಂದು ಸಸಿಯಾಗುತ್ತದೆ, ಕಲ್ಪವೃಕ್ಷವಾಗುತ್ತದೆ. ಅದೊಂದು ಪವಿತ್ರ ಮರವಾಗುತ್ತದೆ. ಇಲ್ಲವೇ ಅಂದಕ್ಕಾಗಿ ಶೋಕೇಸಿನಲ್ಲಿಡಿ. ನಮ್ಮ ವಿಚಾರಗಳಿಗೆ ಮಹಿಳೆಯರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎನ್ನುವ ಮಾಹಿತಿ ನೀಡಿದರು ಪ್ರಿಯಾ. ಈ ಉದ್ದೇಶಕ್ಕಾಗಿಯೇ ಧಾರವಾಡದ ಕೆಲ್ಕೇರಿಯಲ್ಲಿ ರೂಪುಗೊಂಡ 'ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ'ಯ ಮುಖ್ಯಸ್ಥರಿವರು.
                  ಐವತ್ತು ಮಂದಿ ತರಬೇತಿಯೇನೋ ಪಡೆದರು. ಪ್ರಾಕ್ಟಿಕಲ್ ವಿಚಾರಕ್ಕೆ ಬಂದಾಗ ಸಹಜವಾಗಿ ಎಡವಿದರು. ಆಕಾರಗಳು ಮೊದಲಿಗೆ ವಿಕಾರವಾದುವು. ಅನುಭವದ ಗಾಢತೆ ವಿಸ್ತಾರವಾಗುತ್ತಾ ಬಂದಂತೆ ಕಲೆ ಕೈವಶವಾಯಿತು. ಒಬ್ಬರು ದಿವಸಕ್ಕೆ ನಾಲ್ಕು ಮೂರ್ತಿಗಳನ್ನು ರಚಿಸುವಷ್ಟು ನಿಷ್ಣಾತರಾದರು. ತೆಂಗಿನಕಾಯಿಯ ಆಯ್ಕೆಗೆ ಮೊದಲಾದ್ಯತೆ. ಉರುಟಾಗಿರುವ ಸುಲಿಯದ ಕಾಯಿಯಾಗಿರಬೇಕು. ಹೆಚ್ಚು ಎಳೆಯದಾಗಿರಬಾರದು, ಕೊಬ್ಬರಿಯ ಹಂತಕ್ಕೂ ತಲುಪಿರಬಾರದು-ಇಂತಹ ಕಾಯಿಗಳನ್ನು ವಿಗ್ರಹ ರಚನೆಗೆ ಆಯ್ಕೆ. ಯಲ್ಲಾಪುರದಿಂದ ಕುಸುರಿಗೆ ಬೇಕಾದ ಆಕಾರಗಳ ಕಾಯಿಗಳ ಖರೀದಿ. ಅದರ ಮೇಲೆ ಸ್ಕೆಚ್ ಹಾಕುವುದು ಮೊದಲ ಕೆಲಸ. ಮತ್ತೆಲ್ಲಾ ಚಾಕುವಿನ ಚಮತ್ಕೃತಿ. ಮನದೊಳಗಿನ ಕಲೆಯು ಚಕಚಕನೆ ತೆಂಗಿಗೆ ಆಕಾರ ಕೊಡುತ್ತದೆ. ಗಣಪನನ್ನು ಕೂರಿಸುವುದಕ್ಕೆ ಚಿಕ್ಕ ಪೀಠ. ಒಂದು ಮೂರ್ತಿಗೆ ನಾಲ್ಕು ನೂರಒಂದು ರೂಪಾಯಿ.
                 ಹೀಗೆ ಸಿದ್ಧವಾದ ವಿಗ್ರಹಕ್ಕೆ ಕಿರೀಟ, ಕಿವಿ ಆಭರಣ, ಕಣ್ಣುಗಳನ್ನು ಪ್ರತ್ಯೇಕವಾಗಿ ಫಿಕ್ಸ್ ಮಾಡುತ್ತಾರೆ. "ಬಹುಕಾಲ ಕೆಡದಿರುವಂತೆ ಟಚ್ವುಡ್ಡಿನ ಲೇಪ. ಹೀಗೆ ಮಾಡಿದ್ದರಿಂದ  ತಾಳಿಕೆ ಹೆಚ್ಚು. ಅಲಂಕಾರಕ್ಕಾಗಿ ಕಾಪಿಡಬಹುದು. ಪರಿಸರಕ್ಕೆ ಹಾನಿಯಿಲ್ಲ. ತೆಂಗು ನೈಸರ್ಗಿಕ ಉತ್ಪನ್ನ. ಬದಲಾದ ಕಾಲಘಟ್ಟದಲ್ಲಿ ಇಂತಹ ಬದಲಾವಣೆಯ ಮನಃಸ್ಥಿತಿಯನ್ನೂ ರೂಢಿಸುವುದು ಅನಿವಾರ್ಯವಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸ್ಥಾಪಿತ  ಮಾರಾಟಗಾರರು ಇದನ್ನು ಪಕ್ಕನೆ ಒಪ್ಪಲಾರರು ಎಂದೂ ಗೊತ್ತಿದೆ. ಆದರೆ ಜನರು ಒಪ್ಪುತ್ತಿದ್ದಾರೆ, ಎನ್ನುವ ಮಾಹಿತಿ ನೀಡುತ್ತಾರೆ," ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಧಾರವಾಡದ ದಿನೇಶ್ ಎಂ.
                 ಹುಬ್ಬಳ್ಳಿ, ಧಾರವಾಡ ಪೇಟೆಯುದ್ದಕ್ಕೂ ಓಡಾಡಿದರೆ ಸಾಕು, ಗಣೇಶನ ಸಾಲು ಸಾಲು ವಿಗ್ರಹಗಳು. ಕೆಲವೆಡೆ 'ಇಲ್ಲಿ ಗಣಪತಿ ಮೂರ್ತಿ ಸಿಗುತ್ತದೆ' ಎನ್ನುವ ಫಲಕವೂ ಗೋಚರವಾಗುತ್ತದೆ. ವ್ಯಾಪಾರವನ್ನು ನೆಚ್ಚಿಕೊಂಡ ಬಹು ಮಂದಿ ಮೂರ್ನಾಲ್ಕು ಹಿಂದೆಯೆ ಗಣೇಶನ ಮೂರ್ತಿಯ ರಚನೆಯಲ್ಲಿ ಬ್ಯುಸಿಯಾಗಿದ್ದರು. ಬಹುಶಃ ಪಿಓಪಿಯಿಂದ ಬಳಸಿ ಮಾಡಿದ ವಿಗ್ರಹಗಳೂ ಸಾಕಷ್ಟು ಇದ್ದಿರಬೇಕು. ಜಿಲ್ಲಾಧಿಕಾರಿಗಳ ಆದೇಶವು ಇವರೆಲ್ಲರ ಮುಖದಲ್ಲಿ ವಿಷಾದದ ಗೆರೆಯನ್ನು ಮೂಡಿಸಿದೆ.
              ಗಣೇಶ ಹಬ್ಬದಂತೆ ಇತರ ಹಬ್ಬಗಳೂ ಇವೆಯಲ್ಲಾ. ಉದಾ. ದೀಪಾವಳಿ, ನವರಾತ್ರಿ. ಇಂತಹ ಸಂದರ್ಭಗಳಲ್ಲಿ ಯಾವ ರೀತಿಯ ಮಾದರಿಯನ್ನು ಕೊಡುತ್ತೀರಿ? ಪ್ರಿಯಾ ಹೇಳುತ್ತಾರೆ, "ಈಗಾಗಲೇ ಸಾವಿರದಷ್ಟು ಗಣೇಶನ ಮೂರ್ತಿಗಳು ಸಿದ್ಧವಾಗಿದೆ. ಅವಕ್ಕೆ ಅಂದವನ್ನು ಕೊಡುವಲ್ಲಿ ಸುಧಾರಣೆಯಾಗುತ್ತಿವೆ. ಯಾವುದೇ ದೇವರ ಮೂರ್ತಿಗಳನ್ನು ತೆಂಗಿನಲ್ಲಿ ಮೂಡಿಬಹುದೆಂಬ ಧೈರ್ಯ ಬಂದಿದೆ. ಕರಕುಶಲ ಮೇಳಗಳಲ್ಲಿ ಇಂತಹ ವಿನ್ಯಾಸಗಳನ್ನು ಪರಿಚಯಿಸಬಹುದು. ದೇವಸ್ಥಾನಗಳ ಪಕ್ಕದ ಮಳಿಗೆಗಳಲ್ಲಿಟ್ಟು ಜನರ ಚಿತ್ತವನ್ನು ಸೆಳೆಯಬಹುದು. ಗುಣಮಟ್ಟವನ್ನು ವೃದ್ಧಿಸಿ ಈ ದಿಸೆಯಲ್ಲಿ ನಮ್ಮ ಸಮಿತಿಯು ಹೆಜ್ಜೆಯೂರಲಿದೆ.
                ಆರಂಭದಲ್ಲಿ ತರಬೇತಿಗೆ ಸದಸ್ಯರನ್ನು ನಿಯುಕ್ತಿ ಮಾಡುವಾಗ ನಿಜಾಸಕ್ತರನ್ನೇ ಆಯ್ಕೆ ಮಾಡಿದ್ದು ದೊಡ್ಡ ಬಲ. ಪ್ರಿಯಾ ಸ್ವತಃ ಕಲಾವಿದೆ. ಚಾಕು ಹಿಡಿದು ತೆಂಗಿನಕಾಯಿಯ ಮೇಲೆ ಸುಲಭದಲ್ಲಿ ಮತ್ತು ಕ್ಷಿಪ್ರವಾಗಿ ಕುಸುರಿ ಮಾಡಬಲ್ಲರು. ಎಲ್ಲಾ ಸದಸ್ಯರ ಆಸಕ್ತಿ, ಹುಮ್ಮಸ್ಸಿನಲ್ಲಿ ಪೈಪೋಟಿ ಇರುವುದರಿಂದ ಅಲ್ಪಕಾಲದಲ್ಲಿ ಐನೂರು ಮೂರ್ತಿಯನ್ನು ಮಾಡಲು ಸಾಧ್ಯವಾಯಿತು. ಸಮಿತಿ ರೂಪೀಕರಣದ ಬಳಿಕ ಆಸಕ್ತರ ಒಲವು ಹೆಚ್ಚಾಗಿ ಸದಸ್ಯರ ಸಂಖೈಯಲ್ಲೂ ಏರಿಕೆಯಾಗುತ್ತಿದೆ. ಈ ಸಮಿತಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕೆನ್ನುವುದು ದೂರದೃಷ್ಠಿ.
                ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತೆಂಗಿನ ಗಣೇಶನ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಮನೆಯಲ್ಲೂ ಅನುಷ್ಠಾನಿಸಲು ನಿರ್ಧಾರ ಮಾಡಿದ್ದಾರಂತೆ. ಜಿಲ್ಲಾಧಿಕಾರಿಯವರು ಮತ್ತು ಇತರ ಅಧಿಕಾರಿ ವರ್ಗದವರನ್ನು ಗ್ರಾಮಾಭಿವೃದ್ದಿ ಯೊಜನೆಯ ವರಿಷ್ಠರು ಭೇಟಿ ಮಾಡಿ ಬೆಂಬಲಿಸಲು ಕೋರಲಿದ್ದಾರೆ. ಪರಿಸರದ ಕಾಳಜಿ ಹೊಂದಿರುವ ಒಂದಿಬ್ಬರು ಮಠಾಧೀಶರು ಕೂಡ ಈಗಾಗಲೇ ಒಲವು ವ್ಯಕ್ತಪಡಿಸಿದ್ದಾರೆ.
               ಧಾರವಾಡದ ಕೆಲಕೇರಿಯ ಮಂಜುನಾಥ ಹಿರೇಮಠ ಮತ್ತು ಅವರ ತಂಡವು ಬಹುಕಾಲದಿಂದ ಇಂತಹ ನೈಸರ್ಗಿಕ ವಿಚಾರಗಳನ್ನು ಜನರ ಮುಂದಿಡುತ್ತ ಬಂದಿದೆ. ಅನುಷ್ಠಾನವನ್ನೂ ಮಾಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಇಡ್ಲಹುಂಡ್ ಹಳ್ಳಿಯ ಮಲ್ಲಪ್ಪ ಶಂಕರಪ್ಪ ಕುಂಬಾರ್ ಕುಟುಂಬ ಸಾವಿರಗಟ್ಟಲೆ ಮಣ್ಣಿನ ಮೂರ್ತಿಗಳನ್ನು ಪಾರಂಪರಿಕವಾಗಿ ರಚಿಸುತ್ತಿದ್ದಾರೆ. ಕುಲಕಸುಬನ್ನು ಉಳಿಸುತ್ತಿದ್ದಾರೆ.
                 ಒಂದು ವ್ಯವಸ್ಥೆಗಳಿಗೆ ಒಪ್ಪಿಕೊಂಡ ಮನಸ್ಸು ತಕ್ಷಣ ಬದಲಾವಣೆಯನ್ನು ಸ್ವೀಕರಿಸುವುದಿಲ್ಲ. ಮನೆಯ ಪದ್ಧತಿ, ನಂಬುಗೆಗಳು ಗಾಢವಾಗಿ ಬದುಕಿನಲ್ಲಿ ಬೇರನ್ನು ಇಳಿಸಿರುತ್ತವೆ ಮಾದರಿಗಳು ಮುಂದಿದ್ದರೆ ಅನುಸರಿಸಲು ಹಾದಿ ಸುಲಭ. ಈ ಹಿನ್ನೆಲೆಯಲ್ಲಿ ತೆಂಗಿನಕಾಯಿಯಿಂದ ರೂಪುಗೊಂಡ ಗಣಪತಿಯ ಮೂರ್ತಿಯು ಪಾರಿಸಾರಿಕವಾಗಿಯೂ ನೈಸರ್ಗಿಕವಾಗಿಯೂ ಜನ ಸ್ವೀಕೃತಿ ಪಡೆಯುತ್ತಿದೆ. ಅವಳಿ ನಗರದಲ್ಲಿ ಬದಲಾವಣೆಯ ತಂಗಾಳಿ ಬೀಸುತ್ತಿದೆ.

Tuesday, August 22, 2017

ಸದ್ದಿಲ್ಲದ ಪರಿಸ್ನೇಹಿ ಆಂದೋಳನ - ಗಣೇಶನ ಪೂಜೆಗೆ 'ಇಷ್ಟಫಲ'ದ ವಿಗ್ರಹ

ತೆಂಗಿನ ಗಣೇಶ ವಿಗ್ರಹ ರಚನಾ ಸೈನ್ಯ
 ಕುಸುರಿ ಕೆಲಸ
 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ
'ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ'ಯ ಮುಖ್ಯಸ್ಥೆ ಪ್ರಿಯಾ ಖೋದನಾಪುರ (ಬಲ)

              "ನೈಸರ್ಗಿಕವಲ್ಲದ ವಸ್ತುಗಳಿಂದ ತಯಾರಿಸುವ ಗಣಪನ ಮೂರ್ತಿಯನ್ನು ಸಾರ್ವಜನಿಕವಾಗಿ ಇಲ್ಲವೇ ಮನೆಗಳಲ್ಲಿ ಪ್ರತಿಷ್ಠಾಪಿಸಬಾರದು" ಧಾರವಾಡ ಜಿಲ್ಲಾಧಿಕಾರಿಗಳ ಆದೇಶ.
            ಗಣೇಶ ಚತುರ್ಥಿ ಸಂದರ್ಭದ ಆರಾಧನೆಯಲ್ಲಿ ಮಣ್ಣಿನ ಮೂರ್ತಿಗಳ ಬಳಕೆ ಅಪೇಕ್ಷಣೀಯ. ಮೂರ್ತಿಗೆ ಬಳಸಿದ ನೈಸರ್ಗಿಕ ಬಣ್ಣವೂ ಸೇರಿ ಎಲ್ಲವೂ ನೀರಿನಲ್ಲಿ ಕರಗುತ್ತದೆ. ಇದರಿಂದ ಪರಿಸರ, ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ.
ನೀರಿನಲ್ಲಿ ಕರಗದ ಪ್ಲಾಸ್ಟರ್ ಆಪ್ ಪ್ಯಾರೀಸ್(ಪಿಒಪಿ)ನಿಂದ ತಯಾರಿಸಿದ ವಿಗ್ರಹಗಳು ಮತ್ತು ರಾಸಾಯನಿಕ ಬಣ್ಣಗಳು ಹಾನಿಕಾರಕ. ಈ ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶವು ವರ್ತಮಾನದ ಅನಿವಾರ್ಯತೆ. ಆರಾಧನೆಯ ಬಳಿಕ ವಿಗ್ರಹವನ್ನು ವಿಸರ್ಜಿಸುವ ಜಲಮೂಲಗಳ ರಕ್ಷಣೆಯ ಕಾಳಜಿಯ ನೋಟವು ಆದೇಶದ ಹಿಂದಿರುವುದು ಗಮನೀಯ.
              ಮೂರ್ತಿ ರಚನೆಯ ಕಾಯಕವನ್ನು ನೆಚ್ಚಿಕೊಂಡ ಅನೇಕರಿಗೆ ಜಿಲ್ಲಾಧಿಕಾರಿಗಳ ಆದೇಶ ಸಂತೋಷ ನೀಡದು. ಅವರೆಲ್ಲರೂ ಅನಿವಾರ್ಯವಾಗಿ ನೈಸರ್ಗಿಕ ಒಳಸುರಿಯತ್ತ ವಾಲಲೇಬೇಕಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಿಒಪಿಗೆ ಪರ್ಯಾಯ ವ್ಯವಸ್ಥೆಯತ್ತ ಯೋಚಿಸಿದೆ.
              ತೆಂಗಿನ ಕಾಯಿಯಿಂದ ಕೆತ್ತಲ್ಪಟ್ಟ ಗಣಪನ ವಿಗ್ರಹಗಳನ್ನು ಜನರ ಮುಂದೆ ಪ್ರಸ್ತುತಪಡಿಸುತ್ತಿದೆ. ಮನೆಮನೆ ಭೇಟಿ ಮಾಡಿ ಜನರಲ್ಲಿ ಅರಿವನ್ನು ಬಿತ್ತುವ ಕೆಲಸ ಮಾಡುತ್ತಿದೆ. ಪಿಒಪಿ, ರಾಸಾಯನಿಕಗಳ ಬಳಕೆಯ ಮಾರಕವನ್ನು ತಿಳಿಸುತ್ತಿದೆ. ಪರಿಣಾಮವಾಗಿ ಈಗಾಗಲೇ ಐನೂರಕ್ಕೂ ಮಿಕ್ಕಿ ಮಂದಿ ತೆಂಗಿನ ಕಾಯಿಯಲ್ಲಿ ಮೂಡಿಸಿದ ಗಣಪನ ವಿಗ್ರಹವನ್ನು ಮನೆ ಆಚರಣೆಗಾಗಿ ಆಯ್ದುಕೊಂಡಿದ್ದಾರೆ. ಇದೊಂದು ಸದ್ದಿಲ್ಲದ ಬದಲಾವಣೆಯ ಮೆಟ್ಟಿಲು.
             ಧಾರವಾಡ ಇಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ಮೇಲ್ವಿಚಾರಕ ಜಗದೀಶ ಗೌಡ ಬಾವಿಕಟ್ಟಿ ಮತ್ತು ಅವರ ಸಹೋದರ ವೀರನಗೌಡರು ತೆಂಗಿನಿಂದ ಕಲಾತ್ಮಕ ಕುಸುರಿಗಳನ್ನು ಮಾಡಿ ಆಸಕ್ತರಿಗೆ, ಸ್ನೇಹಿತರಿಗೆ ಹಂಚುತ್ತಿದ್ದರು. ಅವರ ಸಂಗ್ರಹದ ತೆಂಗಿನ ಗಣಪನ ಕಲಾಕೃತಿಯ ವಿನ್ಯಾಸವನ್ನು ಪಿಒಪಿಗೆ ಪರ್ಯಾಯವಾಗಿ ನೀಡಬಹುದೆಂಬ ಯೋಜನೆಯ ಯೋಚನೆ ಅನುಷ್ಠಾನದ ಹೆಜ್ಜೆಯೂರಿದೆ.
             ಗ್ರಾಮಾಭಿವೃದ್ಧಿ ಯೋಜನೆಯ 'ಕೌಶಲ್ಯ ಅಭಿವೃದ್ಧಿ ತರಬೇತಿ'ಯಡಿ ಸ್ವ-ಸಹಾಯ ಸಂಘದ ಐವತ್ತು ಮಹಿಳೆಯರಿಗೆ ಜಗದೀಶರಿಂದ ತರಬೇತಿ. ಇಪ್ಪತ್ತೈದು ಮಂದಿಯ ಎರಡು ತಂಡಕ್ಕೆ ಏಳೇಳು ದಿವಸಗಳ ಕಲಿಕೆ. ಫಲವಾಗಿ ಐನೂರಕ್ಕೂ ಮಿಕ್ಕಿ ತೆಂಗಿನಕಾಯಿಯಲ್ಲಿ ಮೂಡಿದ ಗಣೇಶ ಪೂಜೆಗೆ ಸಿದ್ಧನಾಗಿದ್ದಾನೆ. ಬೇಡಿಕೆಯಂತೆ ಎಲ್ಲವೂ ನಡೆದುಹೋದರೆ ಚೌತಿಯ ಸಂದಭಕ್ಕೆ ಸಾವಿರದ ದಾಟಿದರೂ ಆಶ್ಚರ್ಯಪಡಬೇಕಿಲ್ಲ.
               "ಗಣೇಶನ ಮೂರ್ತಿ ಅಂದಾಗ ನೀರಿನಲ್ಲಿ ವಿಸರ್ಜಿಸಬೇಕೆನ್ನುವ ಮನಃಸ್ಥಿತಿ ಸಹಜವಾಗಿ ಬದುಕಿಗಂಟಿಕೊಂಡಿದೆ. ತೆಂಗಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿ ನಂತರ ಮಣ್ಣಿಗೆ ಸೇರಿಸಿ. ಅದು ಮೊಳಕೆ ಬಂದು ಸಸಿಯಾಗುತ್ತದೆ, ಕಲ್ಪವೃಕ್ಷವಾಗುತ್ತದೆ. ಅಥವಾ ಅಂದಕ್ಕಾಗಿ ಶೋಕೇಸಿನಲ್ಲಿಡಬಹುದು. ನಮ್ಮ ವಿಚಾರಗಳಿಗೆ ಮಹಿಳೆಯರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎನ್ನುವ ಮಾಹಿತಿ ನೀಡಿದರು ಪ್ರಿಯಾ ಖೋದಾನಪುರ.  ಇವರು ಧಾರವಾಡದ ಕೆಲ್ಕೇರಿಯಲ್ಲಿ ರೂಪುಗೊಂಡ 'ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ'ಯ ಮುಖ್ಯಸ್ಥರು.
                ತರಬೇತಿ ಪಡೆದ ಸಮಿತಿಯ ಸದಸ್ಯೆಯರು ಸಂತೋಷದಿಂದ ಕಾರ್ಯರಂಗಕ್ಕೆ ಧುಮುಕಿದರು. ಆರಂಭದಲ್ಲಿ ಎಡವಿದರೂ, ಮಾಡುತ್ತಾ ಸುಲಭವಾಯಿತು. ಈಗ ಒಬ್ಬರು ದಿವಸಕ್ಕೆ ನಾಲ್ಕು ಮೂರ್ತಿಗಳನ್ನು ರಚಿಸುವಷ್ಟು ಪಳಗಿದ್ದಾರೆ. ಉರುಟಾಗಿರುವ ಸುಲಿಯದ ಕಾಯಿಯು ಹೆಚ್ಚು ಎಳೆಯದಾಗಿರಬಾರದು, ಕೊಬ್ಬರಿಯ ಹಂತಕ್ಕೂ ತಲುಪಿರಬಾರದು - ಇಂತಹ ಕಾಯಿಗಳನ್ನು ಮೂರ್ತಿಯ ರಚನೆಗೆ ಆಯ್ಕೆ ಮಾಡುತ್ತಾರೆ.
                  ಯಲ್ಲಾಪುರದಿಂದ ಕುಸುರಿಗೆ ಬೇಕಾದ ಆಕಾರಗಳ ಕಾಯಿಗಳ ಖರೀದಿ. ಅದರ ಮೇಲೆ ಸ್ಕೆಚ್ ಹಾಕುವುದು ಮೊದಲ ಕೆಲಸ. ಮತ್ತೆಲ್ಲಾ ಚಾಕುವಿನ ಚಮತ್ಕೃತಿ. ಮನದೊಳಗಿನ ಕಲೆಯು ಚಕಚಕನೆ ತೆಂಗಿಗೆ ಆಕಾರ ಕೊಡುತ್ತದೆ. ಗಣಪನನ್ನು ಕೂರಿಸುವುದಕ್ಕೆ ಚಿಕ್ಕ ಪೀಠ. ಒಂದು ಮೂರ್ತಿಗೆ ನಾಲ್ಕು ನೂರಒಂದು ರೂಪಾಯಿ.
               ಹೀಗೆ ಸಿದ್ಧವಾದ ಮೂರ್ತಿಗೆ ಕಿರೀಟ, ಕಿವಿ ಆಭರಣ, ಕಣ್ಣುಗಳನ್ನು ಪ್ರತ್ಯೇಕವಾಗಿ ಫಿಕ್ಸ್ ಮಾಡುತ್ತಾರೆ. ಬಹುಕಾಲ ಕೆಡದಿರುವಂತೆ ಟಚ್ವುಡ್ಡಿನ ಲೇಪ. ಹೀಗೆ ಮಾಡಿದ್ದರಿಂದ  ತಾಳಿಕೆ ಹೆಚ್ಚು. ಅಲಂಕಾರಕ್ಕಾಗಿ ಕಾಪಿಡಬಹುದು. ಪರಿಸರಕ್ಕೆ ಹಾನಿಯಿಲ್ಲ. "ತೆಂಗು ನೈಸರ್ಗಿಕ ಉತ್ಪನ್ನ. ಬದಲಾದ ಕಾಲಘಟ್ಟದಲ್ಲಿ ಇಂತಹ ಬದಲಾವಣೆಯ ಮನಃಸ್ಥಿತಿಯನ್ನೂ ರೂಢಿಸುವುದು ಅನಿವಾರ್ಯವಿದೆ. ಬಹುಕಾಲ ಇದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರು ಪಕ್ಕನೆ ಒಪ್ಪಲಾರರು ಎಂದೂ ಗೊತ್ತಿದೆ. ಗಣೇಶನಿಗೆ ತೆಂಗು ಇಷ್ಟಫಲವಾದ್ದರಿಂದ ಗಣೇಶನಿಗೂ ಪ್ರಿಯವಾದೀತು. ಜನರೂ ಒಪ್ಪುತ್ತಿದ್ದಾರೆ" ಎನ್ನುವ ಮಾಹಿತಿ ನೀಡುತ್ತಾರೆ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ.
              ಈಗಾಗಲೇ ಸಾವಿರದಷ್ಟು ಗಣೇಶನ ಮೂರ್ತಿಗಳು ಸಿದ್ಧವಾಗಿದೆ.  ಅಂದವನ್ನು ಕೊಡುವಲ್ಲಿ ಸುಧಾರಣೆಯಾಗುತ್ತಿವೆ. ಯಾವುದೇ ಮೂರ್ತಿಗಳನ್ನು ತೆಂಗಿನಲ್ಲಿ ಮೂಡಿಸಬಹುದೆಂಬ ಧೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟವನ್ನು ವೃದ್ಧಿಸುವ ಸಂಕಲ್ಪವಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತೆಂಗಿನ ಗಣೇಶನ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದಾರೆ. ಧಾರವಾಡದ ಕೆಲಕೇರಿಯ ಮಂಜುನಾಥ ಹಿರೇಮಠ ಮತ್ತು ಅವರ ತಂಡವು ಬಹುಕಾಲದಿಂದ ಇಂತಹ ನೈಸರ್ಗಿಕ ವಿಚಾರಗಳನ್ನು ಜನರ ಮುಂದಿಡುತ್ತ ಬಂದಿದ್ದಾರೆ.
              ಫಕ್ಕನೆ ಒಂದು ವ್ಯವಸ್ಥೆಯ ಬದಲಾವಣೆಗೆ ಮನಸ್ಸು ಹಿಂಜರಿಯುವುದು ಸಹಜ. ಪರಿಸರ, ಆರೋಗ್ಯ ಮೊದಲಾದ ವಿಚಾರಗಳು ಮುಂದೆ ಬಂದಾಗ ಬದಲಾಗಬೇಕಾದುದು ಅನಿವಾರ್ಯ ಕೂಡಾ. ಗ್ರಾಮಾಭಿವೃದ್ಧಿ ಯೋಜನೆಯು ನೈಸರ್ಗಿಕ ಗಣೇಶ ವಿಗ್ರಹದ ಮಾದರಿಯೊಂದನ್ನು ಜನರ ಮುಂದಿಟ್ಟಿದೆ. ಜನಸ್ವೀಕೃತಿಯೂ ಪಡೆಯುತ್ತಿದೆ. ನಿಜಾರ್ಥದಲ್ಲಿ ಇದೊಂದು ಸದ್ದಿಲ್ಲದ ಪರಿಸ್ನೇಹಿ ಆಂದೋಳನ.
(ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟ -: 22-8-2017 )

ಹಲಸು ಸಾಕ್ಷರತೆಗೆ ಶ್ರೀಕಾರ ಬರೆದ ಪುಟ್ಟಪ್ಪ


ಹೊಸದಿಗಂತ ’ಮಾಂಬಳ’ ಅಂಕಣ / 31-5-2017

             ಶಿಗ್ಗಾಂವ್ ತಾಲೂಕು ಬಯಲು ಸೀಮೆಯ ಅಂಚಿನಲ್ಲಿದೆ. ಇಲ್ಲಿ ಹಲಸಿನ ಬಳಕೆ, ಕೃಷಿ ತೀರಾ ವಿರಳ. ಬಳಕೆಯ ಅರಿವಿಲ್ಲದೆ ಹಲಸಿನ ಹಣ್ಣುಗಳಿಗೆ ಕೊಳೆಯುವ ದೌರ್ಭಾಗ್ಯ! 'ಹಲಸೆಂದರೆ ಹೊಲಸು' ಎನ್ನುವ ಮನಃಸ್ಥಿತಿ.
             ಇಲ್ಲೊಬ್ಬರು ಹಲಸು ಪ್ರಿಯರಿದ್ದಾರೆ. ಅವರ ಜಮೀನಿನಲ್ಲಿ ಸಾಲು ಸಾಲು ಹಲಸಿನ ಮರಗಳು. ಬರಡು ನೆಲವು ಹಲಸಿಗೆ ಒಗ್ಗಿಕೊಂಡಿದೆ. "ನನ್ನ ಹಲಸಿನ ಕೃಷಿ ನೋಡಿದವರು 'ಇವನಿಗೆ ಹುಚ್ಚು' ಎಂದರು. ಟೀಕೆಯನ್ನು ಸವಾಲಾಗಿ ಸ್ವೀಕರಿಸಿದೆ. ಈಗ ನನ್ನ ಹೊಲದಲ್ಲಿ ಸಾಲು ಸಾಲು ಹಲಸಿನ ಮರಗಳು ಬೆಳೆದಿವೆ," ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾರೆ ಪುಟ್ಟಪ್ಪ ಕಲ್ಲಪ್ಪ ಕುಂದಗೋಳ. ಇವರು ಶಿಗ್ಗಾಂವ್ ತಾಲೂಕಿನ ರಾಜೀವ ನಗರ ಗ್ರಾಮದವರು. ಇವರ ಹೊಲದ ಸಸ್ಯ ವೈವಿಧ್ಯಗಳಲ್ಲಿ ಹಲಸಿಗೆ ಮಣೆ.
               ಎರಡು ದಶಕದ ಹಿಂದೆ ಇಪ್ಪತ್ತನಾಲ್ಕು ಎಕ್ರೆ ಕೃಷಿ ಭೂಮಿ ಖರೀದಿ. ಐದಾರು ವರುಷ ಭೂಮಿ ಹಡಿಲು ಬಿದ್ದು ಕೃಷಿ ಕಾಯಕಗಳು ಸೊರಗಿದ್ದುವು. ಹದಿನೈದು ವರುಷದ ಹಿಂದೆ ಜಿ-9 ತಳಿಯ ಬಾಳೆ ಕೃಷಿ ಮೂಲಕ ಕೃಷಿಗೆ ಬೀಸುಹೆಜ್ಜೆ. ಈ ಭಾಗದಲ್ಲಿ 'ಬಾಳೆ ಬೆಳೆದವನ ಬಾಳು ಹಾಳು' ಎನ್ನುವುದು ನಾಣ್ಣುಡಿ. ಈ ಮನಃಸ್ಥಿತಿಯ ಮಧ್ಯೆ ಪುಟ್ಟಪ್ಪ ಎಂಟು ಎಕ್ರೆಯಲ್ಲಿ ಬಾಳೆ ಬೆಳೆದು ಆಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದರು!
                   ಆರಂಭದಲ್ಲಿ ಅನುಭವದ ಕೊರತೆಯಿಂದ ಶ್ರಮ ಕೆಲಸಗಳು ಹಗುರವಾಗಲಿಲ್ಲ. ನಿರ್ವಹಣೆಯ ಸಮಸ್ಯೆಯಿಂದ ನಿರೀಕ್ಷಿತ ಆದಾಯ ಪಡೆಯಲಾಗಲಿಲ್ಲ.  ಬಾವಿಯಿಂದ ಸಣ್ಣ ಕಾಲುವೆಗಳ ಮೂಲಕ ನೀರುಣಿಸುವ ಸಾಂಪ್ರದಾಯಿಕ ಪದ್ಧತಿಯ ರೂಢನೆ. ತುಂಬಾ ನಷ್ಟವಾಗದೆ ಬಾಳೆ ಕೃಷಿ ಸ್ವಲ್ಪ ಮಟ್ಟಿನ ಬದುಕನ್ನು ಆಧರಿಸಿತು.
                  ಹಿಂದೊಮ್ಮೆ ಶಿಗ್ಗಾಂವ್ ಸನಿಹದ ಹಾದಿಮನೆ ಹರಿಕೊಂಡರ ಮನೆಗೆ ಪುಟ್ಟಪ್ಪ ಭೇಟಿ ನೀಡಿದ್ದರು ಅವರ ಜಮೀನಿನಲ್ಲಿ ಮೂರು ದಶಕ ಪ್ರಾಯದ ಹಲಸಿನ ಮರವು ಸೆಳೆಯಿತು. 'ಮೂರಡಿ ವ್ಯಾಸ, ನೂರಡಿ ಎತ್ತರ' ಬೆಳೆದ ಹಲಸು ಪುಟ್ಟಪ್ಪರ ಮನಸ್ಸನ್ನು ಆವರಿಸಿತು. ಮೇಲ್ನೋಟಕ್ಕೆ ಲೆಕ್ಕಹಾಕಿದಾಗ ಮರದ ಬೆಲೆ ಎರಡು ಲಕ್ಷ ರೂಪಾಯಿ! ಅದೇ ಸಮಯಕ್ಕೆ ಹಲಸಿನ ಕುರಿತು ಪತ್ರಿಕೆಯಲ್ಲಿ ಬಂದ ಲೇಖನವು ಪುಟ್ಟಪ್ಪರ ಕೃಷಿ ಬದುಕಿಗೆ ಹೊಸ ತಿರುವು ನೀಡಿತು.
                ಹಲಸಿನ ಗಿಡವನ್ನು ನರ್ಸರಿಯಿಂದ ತಂದು ನೆಡುವುದರಲ್ಲಿ ನನಗೆ ಆಸಕ್ತಿಯಿರಲಿಲ್ಲ. ಹರಿಕೊಂಡರಲ್ಲಿಂದ ಹಣ್ಣನ್ನು ತಂದು ಅದರ ಬೀಜದಿಂದ ನಾಲ್ಕುನೂರ ಐವತ್ತು ಗಿಡಗಳನ್ನು ತಯಾರಿಸಿದೆ. ಗಿಡಳು ಒಂದಡಿ ಎತ್ತರಕ್ಕೆ ಬೆಳೆದಾಗ ನಾಟಿ ಮಾಡಿದೆ. ಎಂದು ನೆನಪು ಮಾಡಿಕೊಂಡರು. ಗಿಡದಿಂದ ಗಿಡಕ್ಕೆ ಮತ್ತು ಸಾಲಿಂದ ಸಾಲಿಗೆ ಮೂವತ್ತಡಿ ಅಂತರದಲ್ಲಿ ಗಿಡಗಳ ನಾಟಿ.
               ಒಂದು ದಿನ ಹಲಸಿನ ಗುಂಗಿನಲ್ಲೇ ಇದ್ದ ಪುಟ್ಟಪ್ಪರಿಗೊಂದು ಆಘಾತದ ಸುದ್ದಿ! ತಾನು ಪ್ರೀತಿಯಿಟ್ಟು ನೆಟ್ಟ ಹಲಸಿನ ಗಿಡಗಳೆಲ್ಲಾ ಬೆಂಕಿ ಆಕಸ್ಮಿಕದಿಂದ ಭಸ್ಮವಾಗಿದ್ದುವು. ಜತೆಗೆ ಹಲಸಿನ ಮಧ್ಯೆ ನಾಟಿ ಮಾಡಿದ ನಾಲ್ಕುನೂರಕ್ಕೂ ಮಿಕ್ಕಿದ ಮಾವಿನ ಗಿಡಗಳು ಕೂಡಾ. "ಕೆಲವು ದಿವಸ ಅಧೀರನಾಗಿದ್ದೆ. ಹತ್ತು ಹಲಸಿನ ಗಿಡಗಳು ಮತ್ತು ಅರುವತ್ತು ಮಾವಿನ ಗಿಡಗಳು ಕರಟಿದರೂ ಮತ್ತೆ ಚಿಗುರಿದ್ದುವು," ಎನ್ನುತ್ತಾರೆ.
                 ಪುನಃ ವಿವಿಧ ತಳಿಯ ಹಲಸು, ಮಾವಿನ ಗಿಡಗಳ ನಾಟಿ. ಅದೃಷ್ಟಕ್ಕೆ ಕೊರೆದ ಕೊಳವೆ ಬಾವಿಯಲ್ಲಿ ಸಮೃದ್ಧ ನೀರು. ಕೃಷಿಗೆ ಹನಿ ನೀರಾವರಿ ಅಳವಡಿಕೆ. ನಾಲ್ಕೇ ವರುಷದಲ್ಲಿ ಹಲಸಿನ ಗಿಡಗಳಲ್ಲಿ ಇಳುವರಿ. ಕಾಯಿಯ ಭಾರಕ್ಕೆ ಎಳೆಯ ಮರಗಳು ಬಿದ್ದು ಮತ್ತೆ ಚಿಗುರಿದ್ದುವು. ’ನಾವು ಅವುಗಳನ್ನು ಪ್ರೀತಿಸಿದರೆ ಅವುಗಳು ಕೂಡಾ ನಮ್ಮನ್ನು ಪ್ರೀತಿಸುತ್ತವೆ” ಎನ್ನುವ ಪುಟ್ಟಪ್ಪ, "ಹಲಸಿನ ಹಣ್ಣಿನ ಮಾರಾಟದಿಂದ ಬಂದ ಆದಾಯವೇ ಅರುವತ್ತು ಸಾವಿರ ರೂಪಾಯಿಯಾಗಬಹುದು" ಎನ್ನುವ ಲೆಕ್ಕಾಚಾರ ಮುಂದಿಡುತ್ತಾರೆ.
                ಹುಬ್ಬಳ್ಳಿಯಲ್ಲಿರುವ ಅಳಿಯನ ಕಿರಾಣಿ ಅಂಗಡಿಯ ಪಕ್ಕದಲ್ಲಿ ಹಲಸಿನ ಹಣ್ಣನ್ನು ಮಾರಾಟ ಮಾಡಿದ್ದರು. ಉತ್ಕೃಷ್ಟ ತಳಿಯ ಹಲಸಿನ ರುಚಿಗೆ ಆಕರ್ಶಿತರಾದವರು ಅಧಿಕ. ತಂದ ಹಲಸಿನ ಹಣ್ಣೆಲ್ಲಾ ಮಾರಿ ಹೋದಾಗ ಸಂತೃಪ್ತಿ. ಅದುವರೆಗೆ ಹಲಸಿನ ಮೋಪಿನ ಕುರಿತು ಯೋಚಿಸುತ್ತಿದ್ದ ಪುಟ್ಟಪ್ಪರ ಮೈಂಡ್ ಸೆಟ್ ಬದಲಾಯಿತು!
               ಮಹಾರಾಷ್ಟ್ರದ ಹಲಸು ಉದ್ದಿಮೆದಾರರಿಂದ ಎಳೆ ಕಾಯಿಗೆ (ಗುಜ್ಜೆ) ಬೇಡಿಕೆ ಬಂದಾಗ ಪುಟ್ಟಪ್ಪ ಖುಷ್. ಆಸುಪಾಸಿನ ರೈತರಿಂದಲೂ ಎಳೆಕಾಯಿ ಖರೀದಿಸಿ ಬೇಡಿಕೆಯನ್ನು ಪೂರೈಸುವ ಯೋಚನೆಯಿದೆ. ಈ ಕುರಿತು ಮಾತುಕತೆ ನಡೆಯುತ್ತಿದೆ. ಎಲ್ಲವೂ ಸರಿಹೋದರೆ ಈ ಸೀಸನ್ನಿನಲ್ಲಿ ಯೋಚನೆಯು ಸಾಕಾರವಾಗಲಿದೆ. "ರೈತರನ್ನು ಹೊಸತನಕ್ಕೆ ಒಡ್ಡುವುದು ಸುಲಭದ ಮಾತಲ್ಲ. ಮನವೊಲಿಸುವ ಕೆಲಸ ದೊಡ್ಡದು," ಎನ್ನುತ್ತಾರೆ. ಎರಡು ವರುಷದ ಹಿಂದೆ ಗಿಡಗಳನ್ನು ಪ್ರೂನಿಂಗ್ ಮಾಡಿದ್ದಾರೆ. ಇದರಿಂದಾಗಿ ಹಿಂದಿನ ವರುಷ ಇಳುವರಿ ಕಡಿಮೆ. ಈ ವರುಷವೂ ನಿರೀಕ್ಷಿತ ಫಸಲು ಬಂದಿಲ್ಲ. ತಾಲೂಕಿನಲ್ಲಿ 'ಹಲಸಿನ ಸಾಕ್ಷರತೆ'ಗೆ ಶ್ರೀಕಾರ.
                 ಕಳೆದ ವರುಷ ಅಡಿಕೆ ಗಿಡಗಳ ಮಧ್ಯೆ ಮತ್ತು ಎರಡು ಸಾವಿರ ಹಲಸಿನ ಗಿಡಗಳ ನಾಟಿ! ನೀರು, ಗೊಬ್ಬರ ಕೊಟ್ಟು ಆರೈಕೆ. ಈ ಬಾರಿ ಬೆಂಗಳೂರಿನ ತೂಬುಗೆರೆ, ಸಖರಾಯಪಟ್ಟಣದಿಂದ ರುಚಿಕರವಾದ ಹಣ್ಣನ್ನು ತಂದು ಅದರ ಬೀಜದಿಂದ ಗಿಡ ತಯಾರಿ. ಬಹುಶಃ ಇನ್ನು ಮೂರೇ ವರುಷದಲ್ಲಿ ಹಣ್ಣು ಸಿಗಬಹುದು. ಹಲಸಿನ ತೋಟ ಮಾಡುವವರು ಹತ್ತಡಿ ಅಂತರದಲ್ಲಿ ನೆಡಬಹುದು, ಎನ್ನುವುದು ಇವರ ಅನುಭವ.
              ಪುಟ್ಟಪ್ಪರದು ಬಹುವಿಧದ ಆಸಕ್ತಿ. ಅಡಿಕೆ, ಹಲಸಿನ ಮಧ್ಯೆ ಶ್ರೀಗಂಧದ ಗಿಡಗಳನ್ನು ನಾಟಿ ಮಾಡಿದ್ದಾರೆ. ಬೇಲಿ ಬದಿಯಲ್ಲಿ ಸಂಪಿಗೆ, ಸುವಾಸಿತ ಕರಿಬೇವಿನ ಗಿಡಗಳು, ನುಗ್ಗೆ ಗಿಡಗಳು, ಚಿಕ್ಕು.. ಹೀಗೆ ವಿವಿಧ ವೈವಿಧ್ಯ ಬೆಳೆಗಳಿವೆ. "ಈ ವರುಷ ಎರಡು ನುಗ್ಗೆಗೆ ಹತ್ತು ರೂಪಾಯಿಯಂತೆ ಮಾರಾಟ ಮಾಡಿದ್ದೇನೆ. ಚಿಕ್ಕಿನ ಹಣ್ಣಿನ ಮಾರಾಟದಿಂದ ಸ್ವಲ್ಪಾಂಶ ಆದಾಯ. ಸಾವಯವ ಗೊಬ್ಬರ ತಯಾರಿಸಲು ಇಪ್ಪತ್ತು ಬರಡು ಎಮ್ಮೆಗಳನ್ನು ಆರೈಕೆ ಮಾಡುತ್ತಿದ್ದೇನೆ. ಜತೆಗೆ ಐವತ್ತು ಕುರಿಗಳಿವೆ,"ಎನ್ನುವ ಮಾಹಿತಿ ನೀಡುವ ಪುಟ್ಟಪ್ಪರಿಗೆ ತನ್ನ ಹೊಲಕ್ಕೆ ತನ್ನದೇ ಗೊಬ್ಬರವಾಗಬೇಕೆನ್ನುವ ಬದ್ಧತೆ.
    .            "ಮಣ್ಣಿನಲ್ಲಿ ಪೊಟೇಶ್ ಅಂಶ ಕಡಿಮೆಯಿದ್ದಲ್ಲಿ ಹಲಸಿನ ಹಣ್ಣಿಗೆ ರುಚಿ ಕಡಿಮೆ. ಬಿಸಿಲು ಚೆನ್ನಾಗಿ ಬೀಳುವಂತಿರಬೇಕು. ಮೊದಲ ವರುಷ ನೀರು ಉಣಿಸಿದರೆ ಸಾಕು," ಎನ್ನುವ ಪುಟ್ಟಪ್ಪರು, ಇನ್ನೆರಡು ವರುಷದಲ್ಲಿ ಸ್ವಂತದ್ದಾದ ಹಲಸು ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಯೋಚನೆಯನ್ನು ಮಾಡಿದ್ದಾರೆ. ಈ ಕುರಿತ ಯೋಜನೆಯು ರೂಪುಗೊಳ್ಳುತ್ತಿದೆ.

Sunday, August 20, 2017

ಗಟ್ಟಿಗೊಳ್ಳುತ್ತಿದೆ, ಕೋಕಂ ಹಣ್ಣು ಮಾರಾಟದ ತಾಯಿಬೇರು

ಉದಯವಾಣಿ 'ನೆಲದ ನಾಡಿ' ಅಂಕಣ / 4-5-2017

                 "ಎಪ್ಪತ್ತರ ದಶಕ. ನಮ್ಮದೇ ನಿರು, ನಮ್ಮದೇ ಸಕ್ಕರೆ. ಇತರ ಮಿಶ್ರಣಗಳೂ ಇಲ್ಲಿಯವೇ. ಇವನ್ನೆಲ್ಲಾ ಬಳಸಿ ತಯಾರಿಸಿದ ಕೋಕಾಕೋಲಾದ ವಾರ್ಶಿಕ ಟರ್ನ್ ಓವರ್ ಮುನ್ನೂರು ಕೋಟಿ ರೂಪಾಯಿಗಿಂತಲೂ ಅಧಿಕ. ಇದರ ಲಾಭವೆಲ್ಲವೂ ಭಾರತದಿಂದ ಹೊರಗೆ ಹೋಗುತ್ತದೆ," ಸಮಾರಂಭವೊಂದರಲ್ಲಿ ಸಚಿವರಾಗಿದ್ದ ಜಾರ್ಜ್  ಫೆರ್ನಾಾಂಡಿಸರ ಮಾತು ಡೇವಿಡ್ ಡಿ'ಸೋಜರ ಮನಕ್ಕಿಳಿಯಿತು. ಇವರು ಮಂಗಳೂರಿನ ಸೆಂಟ್ರಲ್ ಮಾರ್ಕೆೇಟಿನ ತರಕಾರಿ ವ್ಯಾಪಾರಿ.
                ನಮ್ಮ ಜನರಿಗೆ ಇಲ್ಲಿನದೇ ಯಾವ ನೈಸರ್ಗಿಕ ಪೇಯ ಹೇಗೆ ಪರಿಚಯಿಸಲಿ, ಪ್ರಶ್ನೆ ಮನದಲ್ಲಿ ರಿಂಗಣಿಸಲು ಶುರು. ಆಗ ನೆನಪಾದುದು ಪುನರ್ಪುಳಿ (ಮುರುಗಲು, ಕೋಕಂ, ಗಾರ್ಸೀನಿಯಾ ಇಂಡಿಕಾ) ಹಣ್ಣು. 1977ರಲ್ಲಿ ದೇಶದಲ್ಲಿ ಕೋಲಾ ನಿಷೇಧವಾಯಿತು. ಡೇವಿಡರ ಆಸಕ್ತಿ ಗರಿಕೆದರಿತು. ತರಕಾರಿ ಖರೀದಿಗೆ ಬರುವ ಗ್ರಾಹಕರಿಗೆ ಪುನರ್ಪುಳಿ ಹಣ್ಣನ್ನು ಪರಿಚಯಸತೊಡಗಿದರು. ಇದರ ಜ್ಯೂಸ್ ಮಾಡಿ ನೋಡಿ. ಸ್ಕ್ವಾಷ್ ಮಾಡಿಟ್ಟೂ ಬಳಸಬಹುದು. ಆರೋಗ್ಯ ಭಾಗ್ಯವಾಗುತ್ತದೆ, ಅಂತ ಹೇಳತೊಡಗಿದರು.
               ಆಗ ಬಜ್ಪೆ ಪರಿಸರದ ಕುಡುಬಿಯವರು ಕಾಡಿನಿಂದ ಪುನರ್ಪುಳಿ ಹಣ್ಣನ್ನು ಕೊಯ್ದು ತಂದು ಮಾರುತ್ತಿದ್ದರು. ನೂರು ಹಣ್ಣಿಗಿಷ್ಟು ದರ ಎನ್ನುವ ಲೆಕ್ಕಾಚಾರ. ಎಣಿಕೆಯ ಬದಲಿಗೆ ತೂಗಿ ಮಾರುವ ವ್ಯವಸ್ಥೆಯನ್ನು 1985ರಲ್ಲಿ ಪ್ರಥಮ ಬಾರಿಗೆ ಡೇವಿಡ್ ಅನುಷ್ಠಾನಕ್ಕೆ ತಂದರು. ಆಗ ಕಿಲೋಗೆ ಹಣ್ಣಿಗೆ ಹತ್ತು ರೂಪಾಯಿ ದರವಿತ್ತು. ಮಾರ್ಚಿನಿಂದ ಮೇ ತನಕ ಹಣ್ಣಿನ ಋತು. ಕ್ರಿಶ್ಚಿಯನ್ ಮತ್ತು ಕೊಂಕಣಸ್ತರಿಗೆ ಪುನರ್ಪುಳಿ ತುಂಬಾ ಇಷ್ಟ.  ಸೀಸನ್ನಿನಲ್ಲಿ ಖರೀದಿಸಿ ಸಿಪ್ಪೆ ಒಣಗಿಸಿ ಸಂಗ್ರಹಿಸಿಟ್ಟು ಅಕಾಲದಲ್ಲಿ ಬಳಸುತ್ತಾರೆ.
               ಡೇವಿಡ್ ನೆನಪು ಮಾಡಿಕೊಳ್ಳುತ್ತಾರೆ, "ವರುಷದಿಂದ ವರುಷಕ್ಕೆ ಡಿಮಾಂಡ್ ಜಾಸ್ತಿಯಾಗುತ್ತಿದೆ. ಸಾಂಪ್ರದಾಯಿಕ ಆಹಾರಕ್ಕೆ ಬದಲಾಗುತ್ತಾ ಇರುವವರು ಹಣ್ಣನ್ನು ಹುಡುಕಿ ಬರುತ್ತಾರೆ. ಗಿರಾಕಿಗಳಲ್ಲಿ ಹೆಚ್ಚಿನವರೂ ಮಧ್ಯಮ ವರ್ಗದವರು. ಶೇ.90 ಮಂದಿ ಸ್ಕ್ವಾಷ್ ಮಾಡಿ ಇಟ್ಟುಕೊಳ್ಳುತ್ತಾರೆ. ಉತ್ತಮ ರುಚಿ, ಆಕರ್ಷಕ ಬಣ್ಣ, ಜತೆಗೆ ಔಷಧೀಯ ಗುಣ. ಇದರಿಂದಾಗಿ ಹಣ್ಣಿಗೆ ಬೇಡಿಕೆ. ಪರವೂರಿನವರು ಊರಿಗೆ ಬಂದಾಗ ಹಣ್ಣು ಮತ್ತು ಒಣಸಿಪ್ಪೆಯನ್ನು ಒಯ್ಯುತ್ತಾರೆ. ರುಚಿ ಗೊತ್ತಿರುವ ಪ್ರವಾಸಿಗರೂ ಹುಡುಕಿ ಬರುತ್ತಾರೆ. ಕೊಲ್ಲಿ ರಾಷ್ಟ್ರಗಳಲ್ಲಿರುವವರು ತಾಯ್ನೆಲಕ್ಕೆ ಬಂದಾಗ ಒಯ್ದು ಅಲ್ಲಿ 'ಇದು ಊರಿನ ಹುಳಿ' ಎಂದು ಪರಿಚಯಿಸುತ್ತಾರೆ."
               "ಕಳೆದ ವರುಷ ನಿಮ್ಮಿಂದ ಕೊಂಡು ಹೋದ ಹಣ್ಣಿನ ಬಣ್ಣ ಚೆನ್ನಾಗಿತ್ತು. ಮೊನ್ನೆಮೊನ್ನಿನವರೆಗೂ ಬಣ್ಣ ಮಾಸಲೇ ಇಲ್ಲ" ಇದು ಗೃಹಿಣಿಯರ ಹಿಮ್ಮಾಹಿತಿ. ಡೇವಿಡರ ಗ್ರಾಹಕರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಖಾಯಂನವರು. ಅದರ ಔಷಧೀಯ ಗುಣಗಳ ಕುರಿತು ಮಾತನಾಡುತ್ತಾರೆ. ಹೊಸ ಗಿರಾಕಿಗಳಿಗೆ ಪುನರ್ಪುಳಿ ಈಗ ಮಾತ್ರ ಸಿಗುತ್ತದೆ. ಅಕಾಲದಲ್ಲಿ ಬಳಕೆಗಾಗಿ ಹಣ್ಣನ್ನು ಒಣಗಿಸಿ ಇಡಬಹುದು, ಎಂದು ತಿಳಿ ಹೇಳುತ್ತಾರೆ. ಪುರುಸೊತ್ತಿದ್ದರೆ ಡೇವಿಡ್ ತರಕಾರಿಗೆ ಬಂದ ಗಿರಾಕಿಗೆ ಪುನರ್ಪುಳಿ ಹಣ್ಣಿನ ಮಹತ್ವ ಹೇಳದೆ ಇರುವುದಿಲ್ಲ.
               ಹಿಂದೆ ಕುಡುಬಿಯವರು ನಗರದ ಹೋಟೆಲ್ಗಳಿಗೂ ಪುನರ್ಪುಳಿ ಒದಗಿಸುತ್ತಿದ್ದರಂತೆ. ಪ್ರತಿಷ್ಠಿತ ತಾಜ್ಮಹಲ್ ಹೋಟೆಲಿನಲ್ಲಿ ಗ್ರಾಹಕರ ಕಣ್ಣೆದುರೇ ಹಣ್ಣಿನ ತಾಜಾ ಜ್ಯೂಸ್ ಮಾಡಿಕೊಡುತ್ತಿದ್ದರು. ವಿಶೇಷ ವಿತ್ತ ವಲಯ ಬಂದ ಮೇಲೆ ಕಾಡು ನಾಶವಾಗಿದೆ. ಬೇಕಾದಷ್ಟು ಹಣ್ಣು ಸಿಗುತ್ತಿಲ್ಲ. ನಗರಕ್ಕೆ ಬರುವ ಹಣ್ಣು ಕಡಿಮೆಯಾಗಿದೆ. ಡೇವಿಡ್ ಸೇರಿದಂತೆ ತರಕಾರಿ-ಹಣ್ಣಗಳ ಜತೆ ತಾಜಾ ಪುನಪರ್ುಳಿ ಮಾರುವವರು ಹಲವರಿದ್ದಾರೆ. ಮೊದಲು ಉಳಿದ ಅಂಗಡಿಯವರಿಗೆ ಅಷ್ಟೊಂದು ಒಲವಿರಲಿಲ್ಲವಂತೆ. ಇವರು ಪುನರ್ಪುಳಿಗೆ ದನಿಯಾಗತೊಡಗಿದಾಗ ಗಿರಾಕಿಗಳು ಹೆಚ್ಚಾದರು. ಉಳಿದ ಮಾರಾಟಗಾರರಿಗೂ ಉತ್ತೇಜನ ಸಿಕ್ಕಿತು.
                 ಸೀಸನ್ನಿನಲ್ಲಿ ಡೇವಿಡ್ ಸರಾಸರಿ ಐವತ್ತು ಕಿಲೋ ಪುನರ್ಪುಳಿಯ ತಾಜಾ ಹಣ್ಣನ್ನು ಮಾರುತ್ತಾರೆ. ಅಂದರೆ ವರುಷಕ್ಕೆ ನಾಲ್ಕು ಟನ್. ಉಳಿದವರೂ ಹೆಚ್ಚುಕಡಿಮೆ ಇದೇ ಮಟ್ಟದಲ್ಲಿದ್ದಾರೆ. ಸೆಂಟ್ರಲ್ ಮಾರ್ಕೆಟ್ಟಿನಲ್ಲೇ ವರುಷಕ್ಕೆ ಮೂವತ್ತು-ಮೂವತೈದು ಟನ್ ತಾಜಾ ಹಣ್ಣಿನ ವ್ಯವಹಾರ ನಡೆಯಬಹುದು ಎಂದು ಅಂದಾಜು. "ದಶಕದ ಹಿಂದೆ ಮಂಗಳೂರಿನಲ್ಲಿ ಆರ್.ಎಸ್.ಎಸ್.ಕಾರ್ಯಕ್ರಮ ಜರುಗಿತ್ತು. ಒಂದೇ ದಿನ ಮೂರು ಕ್ವಿಂಟಾಲ್ ಹಣ್ಣು ಮಾರಿದ್ದೆ," ಎಂದು ನೆನಪಿಸುತ್ತಾರೆ.
                ಹಣ್ಣನ್ನು ಮೂರು ದಿವಸ ಬಿಸಿಲಿನಲ್ಲಿ ಒಣಗಿಸಿದರೆ ಒಣ ಸಿಪ್ಪೆ ಸಿದ್ಧ. ಒಂದು ಕಿಲೋ ಒಣ ಸಿಪ್ಪೆ ಆಗಲು ಐದು ಕಿಲೋ ಹಣ್ಣು ಬೇಕು. ಒಣ ಸಿಪ್ಪೆಗೆ ಈಗ ಕಿಲೋಗೆ ನೂರೈವತ್ತು ರೂಪಾಯಿಯ ಆಜೂಬಾಜು.  ಮಂಗಳೂರಿನ  ಬಹುತೇಕ ಜೀನಸು ಅಂಗಡಿಗಳಲ್ಲಿ ವರುಷಪೂರ್ತಿ ಒಣ ಪುನರ್ಪುಳಿ ಸಿಪ್ಪೆ ಲಭ್ಯ. ಪ್ರತಿ ಅಂಗಡಿಗಳಲ್ಲೂ ಕನಿಷ್ಠ ಐದಾರು ಕ್ವಿಂಟಾಲ್ ಮಾರಾಟ ಖಚಿತ. ಡೇವಿಡ್ ಪುನರ್ಪುಳಿ ಹಣ್ಣಿನ ಮೌಲ್ಯವರ್ಧನೆ ಕುರಿತು ಅಧ್ಯಯನಕ್ಕಾಗಿ ಮೈಸೂರಿನ ಸಿಎಫ್ಟಿಆರ್ಐಗೆ ಹೋಗಿದ್ದರು. ಮಾಹಿತಿಯನ್ನೂ ಕಲೆ ಹಾಕಿದ್ದರು. ಆ ವರುಷ ಹಣ್ಣೂ ಸರಿಯಾಗಿ ಮಾರುಕಟ್ಟೆಗೆ ಬಾರದೆ ಅವರ ಯೋಜನೆ ಬಿದ್ದು ಹೋಗಿತ್ತು.
                ಹಣ್ಣು ಮಾರಾಟದ ಬದ್ಧತೆಯ ಹಿನ್ನೆಲೆಯಲ್ಲಿ ಕೆಲವು ಸೂಕ್ಷ್ಮಗಳನ್ನು ಕೃಷಿಕರಿಗೆ ಹೇಳುತ್ತಾರೆ. "ಪೂರ್ತಿ ಹಣ್ಣಾಗುವ ತನಕ ಕಾಯಬೇಡಿ. ಒಂದೆರಡು ದಿನಗಳಲ್ಲಿ ಹಣ್ಣಾಗಬಹುದಾದ, ಅರೆ ಮಾಗಿದ ಕಾಯಿಯನ್ನು ಕೊಯಿದು ತನ್ನಿ. ಚಿಕ್ಕ ಬಾಕ್ಸ್ಗಳಲ್ಲಿ ತಂದರೆ ಗೀರು ಆಗುವುದಿಲ್ಲ." ಎಂದು ಸೂಚಿಸುತ್ತಾರೆ. ತರುವಾಗಲೇ ಹಣ್ಣಾಗಿದ್ದರೆ ಎರಡೇ ದಿನದಲ್ಲಿ ಮುಗಿಸಬೇಕು. ಹಣ್ಣಿನ ಸಿಪ್ಪೆ ಮೃದು. ಮೇಲ್ಮೈ ಮೇಲೆ ಸಣ್ಣ ಗೀರು ಆದರೂ ಹೆಚ್ಚು ತಾಳಿಕೊಳ್ಳುವುದಿಲ್ಲ.
              ಡೇವಿಡ್ ಹಿಂದೊಮ್ಮೆ ಗೋವಾದಲ್ಲಿ ಜರುಗಿದ ಕೋಕಂ ಕಾರ್ಯಾಗಾರಕ್ಕೆ ಆಗಮಿಸಿದ್ದರು. ಆಗ ಹೀಗೆ ದೊಡ್ಡ ಮಟ್ಟದ ತಾಜಾ ಕೋಕಂ ಮಾರಾಟ ಬೇರೆ ಯಾವ ನಗರದಲ್ಲೂ ಇರುವುದು ಗೊತ್ತಿಲ್ಲ. ಇದು ಮಹತ್ವದ ವಿಚಾರ, ಎಂದು ಅಜಿತ್ ಶಿರೋಡ್ಕರ್ ಶ್ಲಾಘಿಸಿದ್ದರು. ಇವರು ಪಶ್ಚಿಮಘಟ್ಟ ಕೋಕಂ ಫೌಂಡೇಶನ್ನಿನ ಅಧ್ಯಕ್ಷರು. "ಆಯ್ದ ಅರೆ ಮಾಗಿದ ಹಣ್ಣುಗಳನ್ನು ಮೊಟ್ಟೆ ಟ್ರೇಯಂತಹ ಟ್ರೇಗಳಲ್ಲಿಟ್ಟು ದೂರ ಸಾಗಾಟ ಮಾಡಲು ಅಗುತ್ತದೆಯೋ ಎನ್ನುವುದನ್ನು ಪರೀಕ್ಷೆ ಮಾಡಿ ನೋಡಬೇಕಾಗಿದೆ. ಇದು ಸಾಧ್ಯವಾದರೆ ಬೆಂಗಳೂರು ಮತ್ತು ಮುಂಬಯಿಯಂತಹ ಪುನರ್ಪುಳಿ ರುಚಿ ತಿಳಿದ ಗ್ರಾಹಕರಿರುವ ನಗರಕ್ಕೆ ಒಯ್ದು ಮಾರಬಹುದು. ಇದು ತಾಜಾ ಹಣ್ಣಿಗೆ ಒಳ್ಳೆಯ ಬೇಡಿಕೆ ತರಬಹುದು" ಎಂದು ಸಲಹೆ ನೀಡಿದ್ದರು.
              ಈಗ ಡೇವಿಡರಿಗೆ ಐವತ್ತೈದು. ತನ್ನ ಹದಿಮೂರನೇ ವಯಸ್ಸಿಗೇ ತರಕಾರಿ ವ್ಯಾಪಾರಕ್ಕೆ ಹೆಗಲು ನೀಡಿದ್ದರು. ಇದರ ಬಗ್ಗೆ ಅವರಿಗೆ ನೋವಿಲ್ಲ. ಖುಷಿಯಿದೆ. ಬೆಳಿಗ್ಗೆ ಆರು ಗಂಟೆಗೆ ಅಂಗಡಿಗೆ ಬಂದರೆ ಹದಿನಾರು ಗಂಟೆ ನಿರಂತರ ಬ್ಯುಸಿ. ಈ ಮಧ್ಯೆಯೂ ವಿವಿಧ ಪತ್ರಿಕೆಗಳ ಓದು. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕೃಷಿ, ಪರಿಸರ, ಆರೋಗ್ಯ ವಿಚಾರಗಳ ನೆರಳು ಪ್ರತಿ ಮಾಡಿ ಮಿತ್ರರಿಗೆ ಹಂಚುವುದು ಹವ್ಯಾಸ. ತನ್ನ ಪುನರ್ಪುಳಿ ಸಹವಾಸದಿಂದ ಅದರ ಜಾತಕವನ್ನು ಪೋಸ್ಟ್ಮಾರ್ಟಂ ಮಾಡುತ್ತಾರೆ, ಪುನರ್ಪುಳಿ ಹೆಚ್ಚು ಇಳುವರಿ ಕೊಡುವುದು ಮೂರು ವರುಷಕ್ಕೊಮ್ಮೆ. ಹೆಚ್ಚು ಇಳುವರಿ ಬಂದ ನಂತರದ ಎರಡು ವರುಷ ಅದರರ್ಧ ಮಾತ್ರ ಬೆಳೆ.
             ಬಂಟ್ವಾಳ ತಾಲೂಕಿನ ಅಳಿಕೆ ಸಮೀಪದ ಮುಳಿಯದಲ್ಲಿ ಜರುಗಿದ ಒಂದು ದಿವಸದ 'ಪುನರ್ಪುಳಿ ಪ್ರಪಂಚದೊಳಕ್ಕೆ' ಎನ್ನುವ ಕಾರ್ಯಾಗಾರದಲ್ಲಿ ಡೇವಿಡ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕರು ಡೇವಿಡ್ - ಪುನರ್ಪುಳಿಗೆ ಭಾರತ ಮಾತ್ರವಲ್ಲ, ವಿದೇಶದಲ್ಲೂ ಬೇಡಿಕೆಯಿದೆ. ಒಣಸಿಪ್ಪೆ ರಫ್ತಾಗುತ್ತಿದೆ. ಅದರ ಮೌಲ್ಯವರ್ಧಿತ ಉತ್ಪನ್ನಗಳು ಮಾರುಕಟ್ಟೆಗೆ ಬಂದಿರುವುದು ವಿರಳ. "ಹಣ್ಣಿನಿಂದ ಪ್ರತ್ಯೇಕಿಸುವ ಹೈಡ್ರಾಕ್ಸಿ ಸಿಟ್ರಿಕ್ ಆಸಿಡ್ ವಿದೇಶಗಳಿಗೆ ರಫ್ತಾಗುತ್ತಿದೆ. ಬೊಜ್ಜು ಬೆಳೆಯಲು ಬಿಡದೆ, ಕೊಲೆಸ್ಟರಾಲ್ ನಿಯಂತ್ರಣದ ಗುಣ ಹೊಂದಿದೆ," ಎನ್ನುತ್ತಾರೆ.
              ತರಕಾರಿ ವ್ಯಾಪಾರಿ ವೃತ್ತಿಯಲ್ಲಿರುವ ಡೇವಿಡ್ ಡಿ'ಸೋಜರಲ್ಲಿ ಒಂದು ವೃತ್ತಿಧರ್ಮವಿದೆ. ಜತೆಗೆ ಅದಕ್ಕೆ ಭೂಷಣವಾಗಿ ಸಾಮಾಜಿಕ ಕಳಕಳಿಯಿದೆ. ಜನರ ಆರೋಗ್ಯದ ಕಾಳಜಿಯಿದೆ. ಈ ಎಲ್ಲಾ ಗುಣಗಳಿಂದಾಗಿ ಡೇವಿಡ್ ಗ್ರೇಟ್ ಆಗಿ ಕಾಣುತ್ತಾರೆ.

Friday, August 18, 2017

ಹಬ್ಬುತ್ತಿದೆ, ಪುನರ್ಪುಳಿ ಹಣ್ಣಿನ ಒಲವು



ಹೊಸದಿಂಗತದ 'ಮಾಂಬಳ' / 3-5-2017

               ಎಪ್ರಿಲ್ ಮೂರನೇ ವಾರ ಗೋವಾದ ಪಣಜಿಯಲ್ಲಿ 'ಕೊಂಕಣ್ ಫ್ರುಟ್ ಫೆಸ್ಟ್' ಜರುಗಿತು. ವಿವಿಧ ತಳಿಗಳ ಮಾವುಗಳದ್ದೇ ಕಾರುಬಾರು! ಪುನರ್ಪುಳಿ(ಕೋಕಂ, ಮುರುಗಲು)ಯ ತಳಿಗಳು, ಗಿಡಗಳು, ಮೌಲ್ಯವರ್ಧಿತ ಉತ್ಪನ್ನಗಳು ಹಣ್ಣಿನ ಹಬ್ಬದಲ್ಲಿ ಎದ್ದು ಕಾಣಬೇಕಿತ್ತು. ಸಾಕಷ್ಟು ಮಂದಿ ವಿಚಾರಿಸುತ್ತಲೂ ಇದ್ದರು. ಗಿಡಗಳನ್ನು ಒಯ್ಯುವುದಕ್ಕಾಗಿಯೇ ಆಗಮಿಸಿದ ಕೃಷಿಕರಿಗೆ ನಿರಾಸೆಯಾದುದಂತೂ ಖಂಡಿತ.
               ಮಹಾರಾಷ್ಟ್ರ ರತ್ನಗಿರಿ ಜಿಲ್ಲೆಯ ದಾಪೋಲಿಯ ಡಾ.ಬಾಳಾಸಾಹೇಬ್ ಸಾವಂತ್ ಕೊಂಕಣ್ ಕೃಷಿ ವಿದ್ಯಾಪೀಠವು ಪುನರ್ಪುಳಿಯ ಬಗ್ಗೆ ಅಧ್ಯಯನವನ್ನು ಮಾಡಿದ ಸಂಸ್ಥೆ. ಇದರ ಹೊರತು ಮುರುಗಲಿನ ಬಗ್ಗೆ ಕೃಷಿ ವಿದ್ಯಾಲಯಗಳು ಮಾಡಿರುವ ಅಧ್ಯಯನ ಅತ್ಯಲ್ಪ. ಹಣ್ಣಿನ ಹಬ್ಬದಲ್ಲಿ ವಿದ್ಯಾಪೀಠದ ಮಳಿಗೆಯಿದ್ದರೂ ಕೋಕಂನ ಗಿಡಗಳು, ಉತ್ಪನ್ನಗಳು ಇದ್ದಿರಲಿಲ್ಲ. ಆದರೆ ಮಾಹಿತಿ ಅಪೇಕ್ಷಿಸಿದವರಿಗೆ ಉತ್ತಮವಾದ ಮಾಹಿತಿ ನೀಡುವ ಸಿಬ್ಬಂದಿಗಳಿದ್ದರು.
                ಕೋಕಮ್ ಫೌಂಡೇಶನ್ನಿನ ಮುಖ್ಯಸ್ಥ ಅಜಿತ್ ಶಿರೋಡ್ಕರ್ ಮಾತಿಗೆ ಸಿಕ್ಕರು. ಕೊಂಕಣ್ ಕೃಷಿ ವಿದ್ಯಾಪೀಠವು ಈಗಾಗಲೇ ಪುನರ್ಪುಳಿಯ್ ಎರಡು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದು ಕೃಷಿಕ ಸ್ವೀಕೃತಿ ಪಡೆದಿದೆ. ಎರಡು ದಶಕದ ಹಿಂದೆ 'ಕೊಂಕಣ್ ಅಮೃತ್' ತಳಿಯನ್ನು ಅಭಿವೃದ್ಧಿ ಪಡಿಸಿತ್ತು. ಇದಾದ ಏಳು ವರುಷಗಳ ಬಳಿಕ  'ಕೊಂಕಣ್ ಹಾತಿಸ್' ಎನ್ನುವ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಎಂದರು.
                ಕೊಂಕಣ್ ಅಮೃತ್ ತಳಿಯ ತಾಯಿ ಮರವು ಶಿರ್ಗಾಂವ್ ಎಂಬ ಹಳ್ಳಿಯಲ್ಲಿದ್ದರೆ, ಹಾತಿಸ್ ತಳಿಯದ್ದು ರತ್ನಾಗಿರಿಯ ನಾಗ್ವೇಕರ್ ಎಂಬ ಕೃಷಿಕರ ಜಮೀನಿನಲ್ಲಿದೆ, ಪತ್ರಕರ್ತ ಶ್ರೀ ಪಡ್ರೆಯವರು ಈ ಎರಡೂ ತಳಿಗಳ ಅಪರೂಪದ ಮಾಹಿತಿಗಳನ್ನು ಹಂಚಿಕೊಂಡರು. ಮುರುಗಲು ಹಣ್ಣಿನಲ್ಲಿ ತಳಿಯ ಆಯ್ಕೆ, ಪ್ರತ್ಯುತ್ಪಾದನೆ, ಗಂಡುಗಿಡ ಎಷ್ಟು ಬೇಕು ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆದಿರುವುದು ಅತ್ಯಲ್ಪ.
               ಕೊಂಕಣ್ ಅಮೃತ್  ಹಣ್ಣಿನ ಸರಾಸರಿ ತೂಕ ಸುಮಾರು ಮೂವತ್ತೈದು ಗ್ರಾಮ್. ಹಾತಿಸ್ನದು ತೊಂಭತ್ತು ಗ್ರಾಮಿಗಿಂತಲೂ ಅಧಿಕ! ಒಂದು ಕಿಲೋಗೆ ಹನ್ನೊಂದು, ಹನ್ನೆರಡು ಹಣ್ಣುಗಳು ಸಾಕು. ಅಮೃತ್ ಹಣ್ಣಿನ ಸಿಪ್ಪೆಯೇ ಹದಿನೇಳು ಗ್ರಾಮಿಗಿಂತ ಅಧಿಕವಾಗಿದೆ. ಹಾತಿಸ್ನದು ಸಿಪ್ಪೆ ದಪ್ಪ. ಆಜೂಬಾಜು ಐವತ್ತು ಗ್ರಾಮ್. ಇದು ಎಪ್ರಿಲ್-ಮೇ ತಿಂಗಳಿನಲ್ಲಿ ಇಳುವರಿಗೆ ಬರುತ್ತದೆ.
               ಸ್ವಲ್ಪ ನಮ್ಮ ಸುತ್ತ ಮುತ್ತ ಹುಡುಕಿದರೆ ಈ ಎರಡು ತಳಿಗಳನ್ನು ಹಿಂದಿಕ್ಕುವ ಸ್ಥಳೀಯ ತಳಿಗಳು ಇರಬಹುದೇನೋ? ತಾಜಾ ಹಣ್ಣಿನ ಮಾರಾಟ ಸಾಧ್ಯತೆಯ ಹಿನ್ನೆಲೆಯಲ್ಲಿ ದೊಡ್ಡ ಗಾತ್ರ, ಆಕರ್ಷಕ ಬಣ್ಣ, ಕಡಿಮೆ ಹುಳಿಯ ತಳಿಗಳನ್ನು ಆಯ್ಕೆ ಮಾಡಿ ಬೆಳೆಸುವ ಕೆಲಸ ಆಗಬೇಕಾಗಿದೆ. ಇದಕ್ಕಾಗಿ ಸಂಶೋಧನಾ ಕೇಂದ್ರಗಳತ್ತ ಕತ್ತು ತಿರುಗಿಸಬೇಕಾಗಿಲ್ಲ. ಸ್ವಲ್ಪ ಸಮಯ ಕೊಟ್ಟು, ಸಂಶೋಧನಾ ಮನಸ್ಸನ್ನು ತೆರೆದಿಟ್ಟರೆ ಕೃಷಿಕರಿಗೂ ಈ ಕೆಲಸ ಸಾಧ್ಯ.
              ದಶಕಕ್ಕಿಂತಲೂ ಹಿಂದೆಯೇ ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿರುವ ಹಣ್ಣಿನ ವ್ಯಾಪಾರಿ ಡೇವಿಡ್ ತಾಜಾ ಪುನರ್ಪುಳಿ ಹಣ್ಣುಗಳಿಗೆ ಗ್ರಾಹಕರನ್ನು ರೂಪಿಸಿದವರು. "ಮಂಗಳೂರಿನ ಒಂದೆರಡು ಕ್ರೀಮ್ ಪಾರ್ಲರಿನಲ್ಲಿ ಗ್ರಾಹಕರೆದುರೇ ಪುನರ್ಪುಳಿ ಹಣ್ಣನ್ನು ಮಿಕ್ಸಿಯಲ್ಲಿ ಕ್ರಷ್ ಮಾಡಿ ಜ್ಯೂಸ್ ಮಾಡಿಕೊಡುತ್ತಿದ್ದರು. ಈ ಜ್ಯೂಸ್ ಕುಡಿಯಲು ಬರುವ ಗ್ರಾಹಕರು ಸಾಕಷ್ಟಿದ್ದರು" ಎಂದು ಡೇವಿಡ್ ನೆನಪು ಮಾಡಿಕೊಳ್ಳುತ್ತಾರೆ.
             ಹವಾಯಿಯ ಹಣ್ಣು ಕೃಷಿಕ, ತಜ್ಞ ಕೆನ್ ಲವ್ ಐದು ವರುಷದ ಹಿಂದೊಮ್ಮೆ ಕರಾವಳಿಗೆ ಬಂದಿದ್ದರು. 'ಕೋಕಮ್ ತಾಜಾ ಹಣ್ಣಾಗಿ ಮಾರಿಹೋಗಬಲ್ಲುದು' ಎನ್ನುವ ಕಣಿಯನ್ನೂ ಹೇಳಿದ್ದರು. ಇದರ ಹುಳಿ ರುಚಿ, ಗಾತ್ರಕ್ಕೆ ಆಕರ್ಶಿತರಾದ ಕೆನ್ ಹೇಳುತ್ತಾರೆ, ಕೋಕಮ್ ಹಣ್ಣು ಮ್ಯಾಂಗೋಸ್ಟೀನಿಗಿಂತಲೂ ಹೆಚ್ಚು ಇಷ್ಟ. ಇದು ನಮ್ಮ ಹವಾಯ್ ದ್ವೀಪದಲ್ಲಿ ಖಂಡಿತ ತಾಜಾ ಹಣ್ಣಾಗಿ, ತಿನ್ನಲೆಂದೇ ಮಾರಿ ಹೋಗಬಲ್ಲುದು. ಮ್ಯಾಂಗೋಸ್ಟೀನ್ನಲ್ಲಿ ತಿನ್ನಬಹುದಾದ ಅಂಶ ಹೆಚ್ಚಿದೆ. ಬೀಜ ಕಡಿಮೆ. ಆದರದು ಸಿಹಿ. ನಾನು ಮ್ಯಾಂಗೋಸ್ಟೀನ್ ತಿಂದ ನಂತರ ಅದರ ಸಿಹಿಯ ಪ್ರಮಾಣವನ್ನು ಕಡಿಮೆ ಮಾಡಲು ನಿಂಬೆ ಶರಬತ್ತು ಕುಡಿಯುವುದಿದೆ. ಆದರೆ ಕೋಕಮ್ಮಿನದು ಹುಳಿ ಮಿಶ್ರಿತ ಸಿಹಿ. ಈ ರುಚಿ ಬಾಯಿಯಲ್ಲೇ ಉಳಿಯಲೆಂದು ಹಾರೈಸುತ್ತೇನೆ.
               ಪುನರ್ಪುಳಿಯ ಗುಳವನ್ನು ಬಾಯಲ್ಲಿಟ್ಟು ಚೀಪುತ್ತಾ ಕೋಕಂನ ಪರವಾಗಿ ಮಾತನಾಡುತ್ತಾರೆ, ಒಂದು ಮ್ಯಾಂಗೋಸ್ಟೀನಿಗೆ ಬದಲು ನಾನು ಎರಡು ಕೋಕಮ್ ತಿಂದೇನು. ತಾಜ್ನಂತಹ ಪಂಚತಾರಾ ಹೋಟೇಲುಗಲ್ಲಿ ಹಣ್ಣನ್ನು ಅರ್ಧ ಬಿಡಿಸಿ ಇಡಬಹುದು. ಕೋಕಮ್ಮಿನಿಂದ ಮಾಡಿದ ವೈನ್, ಸಿಪ್ಪೆಯ ಜೆಲ್ಲಿ ಜಪಾನೀಯರೂ ಸೇರಿದ ಹಾಗೆ ವಿದೇಶಿಯರಿಗೆ ಇಷ್ಟವಾಗಬಹುದು.
               ಉತ್ತರ ಕನ್ನಡ ಜಿಲ್ಲೆಯಲ್ಲಿ ಮುರುಗಲಿನ ಮಂದಸಾರವನ್ನು ತೆಗೆಯುವ ಮನೆ ಉದ್ದಿಮೆಗಳು ಜನಪ್ರಿಯ. ಈಚೆಗಂತೂ ಶಿರಸಿಯ ನವೀನ್ ಹೆಗಡೆಯವರು ಆಕರ್ಷಕ ಪ್ಯಾಕೆಟ್ಟಿನಲ್ಲಿ ಕೋಕಂನ ಕುಡಿಯಲು ಸಿದ್ಧ ಪೇಯವನ್ನು ಮಾರುಕಟ್ಟೆಗಿಳಿಸಿದ್ದಾರೆ. ಗೋವಾ, ಮಹಾರಾಷ್ಟ್ರಗಳಲ್ಲಿ ಹತ್ತಾರು ಕಂಪೆನಿಗಳು 'ರೆಡಿ ಟು ಡ್ರಿಂಕ್' ಪೇಯವನ್ನು ಸಿದ್ಧಪಡಿಸುತ್ತಿವೆ. ಮಹಾರಾಷ್ಟ್ರೀಯರು ರುಚಿಗಾಗಿ ಕೋಕಮ್ಮಿನ ಪೇಯಕ್ಕೆ ಜೀರಿಗೆ ಮತ್ತು ಉಪ್ಪು ಸೇರಿಸುತ್ತಾರೆ.
ಪಶ್ಚಿಮ ಘಟ್ಟ ಕೋಕಂ ಫೌಂಡೇಶನ್ ಈ ಹಿಂದೆ ಪುನರ್ಪುಳಿಯ ಕುರಿತು ರಾಷ್ಟ್ರ ಮಟ್ಟದ ಕಾರ್ಯಾಗಾರಗಳನ್ನು ನಡೆಸಿತ್ತು. ಪರಿಣಾಮವಾಗಿ ಕೋಕಮ್ಮಿನ ಸಿಪ್ಪೆಯಿಂದು ಮಿತ ಪ್ರಮಾಣದಲ್ಲಿ ರಫ್ತು ಆಗುತ್ತಿದೆ. ಪುನರ್ಪುಳಿಯ ಸವಿಸ್ತಾರವಾದ ಪುಸ್ತಕವನ್ನು ಹೊರ ತಂದಿತ್ತು. ಪುನರ್ಪುಳಿಯ ವಿಚಾರದಲ್ಲಿ, ಅದರಲ್ಲೂ ರಫ್ತು ಮಾಡುವ ಉತ್ಪನ್ನಗಳ ಗುಣಮಟ್ಟ ವೃದ್ಧಿಗಾಗಿ ಕೊಯ್ಲೋತ್ತರ ಸಂಸ್ಕರಣೆಯ ಜ್ಞಾನವು ಇನ್ನೂ ಅಭಿವೃದ್ಧಿಯಾಗಬೇಕಿದೆ.
                 ಬಿಳಿ ಮುರುಗಲು ಗಿಡಗಳನ್ನು ದೊಡ್ಡ ಪ್ರಮಾಣದಲ್ಲಿ ನೆಟ್ಟು ಬೆಳೆಸಿದವರು ತೀರಾ ಕಡಿಮೆ. ಶಿರಸಿಯ ಬೆಂಗಳಿ ವೆಂಕಟೇಶ ಮತ್ತು ಗೋಕರ್ಣದ ವೇದಶ್ರವ ಶರ್ಮ ಬಿಳಿ ಮುರುಗಲನ್ನು ಬೆಳೆಸಿದ ಕೃಷಿಕರು. ಬೆಂಗಳಿ ವೆಂಕಟೇಶರು ಬೆಳೆಯುವುದಲ್ಲದೆ, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ತಮ್ಮದೇ ಮಾರುಕಟ್ಟೆ ಜಾಲವನ್ನು ಹೊಂದಿದ್ದಾರೆ. ಕೆಂಪು ಮುರುಗಲಿನ ತೋಟವನ್ನು ಎಬ್ಬಿಸಿದವರಲ್ಲಿ ಇಬ್ಬರು ಮುಂಚೂಣಿಯಲ್ಲಿದ್ದಾರೆ. ಒಬ್ಬರು ಗೋವಾದ ಶ್ರೀಹರಿ ಕುರಾಡೆ. ಇಪ್ಪತ್ತೈದು ಎಕ್ರೆಯಲ್ಲಿ ಕೋಕಂ ಬೆಳೆದಿದ್ದಾರೆ. ಇನ್ನೊಬ್ಬರು ಪುಣೆ ಸನಿಹದ ವಿಕಾಸ್ ರಾಯ್ಕರ್. ತೆಂಗು, ನೆಲ್ಲಿಗಳ ಮಧ್ಯೆ ಮತ್ತು ಮಾರ್ಗದ ಇಕ್ಕೆಡೆಗಳಲ್ಲಿ ಬೆಳೆಸಿದ್ದಾರೆ.
             ಈ ಎಲ್ಲಾ ಸ್ಫೂರ್ತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜರುಗಿದ ಪ್ರಥಮ ಬಾರಿ ಎನ್ನಬಹುದಾದ ಪುನರ್ಪುಳಿ ಹಣ್ಣಿನ ಕಾರ್ಯಾಗಾರವು ಕೃಷಿಕರಲ್ಲಿ ಒಲವನ್ನು ಮೂಡಿಸಲು ಸಹಕಾರಿಯಾಗಿದೆ.

Thursday, August 10, 2017

ಹುಳಿಯ ಕತೆಯಲ್ಲಿ ಸಿಹಿಯ ಲೇಪ


ಉದಯವಾಣಿಯ ’ನೆಲದ ನಾಡಿ’ ಅಂಕಣ / 20-4-2017

           ಸುಡುಬಿಸಿಲು ತರುವ ಸಂಕಟಕ್ಕೆ ಪುನರ್ಪುಳಿ (ಕೋಕಂ, ಮುರುಗಲು, ಗಾರ್ಸೀನಿಯಾ ಇಂಡಿಕಾ) ಹಣ್ಣಿನ ಜ್ಯೂಸ್ ಸೇವನೆ ಹಿತಕಾರಿ. ಉತ್ತರ ಕನ್ನಡ, ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಹಣ್ಣಿಗೆ ವಿಶೇಷ ಸ್ಥಾನ. ಆಹಾರವಾಗಿ ಮತ್ತು ಔಷಧವಾಗಿ ಸೇವಿಸುವುದು ಪಾರಂಪರಿಕ. ಬಹುತೇಕ ಕಾಡಂಚಿನ ಮರಗಳಿಂದ ಹಣ್ಣುಗಳನ್ನು ಸಂಗ್ರಹಿಸಲಾಗುತ್ತದೆ. ಮನೆಮಟ್ಟದಲ್ಲಿ ಸಿರಪ್, ಸಿಪ್ಪೆಗಳಿಂದ; ಪಾನೀಯ, ಸಾರು, ತಂಬುಳಿಗಳ ರೂಪದಲ್ಲಿ ಬಳಕೆಯಲ್ಲಿದೆ. ಮಹಾರಾಷ್ಟ್ರದ ಕೊಂಕಣ್ ಪ್ರದೇಶ ಮತ್ತು ಗೋವಾಗಳಲ್ಲಿ ಹಣ್ಣಿನ ಸಿಪ್ಪೆ(ಅಮ್ಸೊಲ್)ಯು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.
             ಹಣ್ಣಿಗೆ ಬಾಯಾರಿಕೆ ನೀಗುವ ವಿಶೇಷ ಗುಣವಿದೆ. ಕೆಲವು ಹಣ್ಣುಗಳನ್ನು ಆಯಾಯ ಋತುವಿನಲ್ಲೇ ಸೇವಿಸಬೇಕು. ಪುನರ್ಪುಳಿಗೆ ಈ ಶಾಪವಿಲ್ಲ! "ಎಲ್ಲಾ ಋತುವಿನಲ್ಲಿ ಸೇವಿಸಬಹುದು. ಪಿತ್ತಶಮನ ಮತ್ತು ರಕ್ತವರ್ಧಕ ಗುಣವಿದೆ. ಮಣ್ಣಿನ ಪಾತ್ರೆಯಲ್ಲಿ ಪುನರ್ಪುಳಿ ಹಣ್ಣಿನ ಒಣ ಸಿಪ್ಪೆಗಳನ್ನು ಹಾಕಿಟ್ಟು, ಹತ್ತಿಬಟ್ಟೆಯಿಂದ ಮಡಕೆಯ ಬಾಯನ್ನು ಬಿಗಿದಿಟ್ಟರೆ ಮೂರು ವರುಷವಾದರೂ ತಾಜಾ ಆಗಿಯೇ ಉಳಿಯುತ್ತದೆ ಎನ್ನುವ ಮಾಹಿತಿಯನ್ನು ಹಿರಿಯರು ನೀಡುತ್ತಾರೆ.
             ಪುನರ್ಪುಳಿಯ ಹೊರ ಸಿಪ್ಪೆಯ ರಸವೇ ಉತ್ಕೃಷ್ಟ ಔಷಧ. ಹೃದಯೋತ್ತೇಜಕ ಮತ್ತು ಬಲದಾಯಕ, ರುಚಿಕಾರಿ, ಜೀರ್ಣಕಾರಿ,  ಯಕೃತ್ ಪ್ಲೀಹ, ಮೂತ್ರರೋಗಗಳಿಗೆ ಔಷಧಿ. ರಕ್ತಶೋಧಕ, ವರ್ಧಕ-ಶರೀರದೊಳಗಿನ ಆಮವನ್ನು ಕರಗಿಸಿ ಚುರುಕಾಗಿಸುತ್ತದೆ ಬೀಜಗಳನ್ನು ಅರೆದು ಕುದಿಸಿ ತೆಗೆದ ಕೊಬ್ಬು - ಮುರುಗಲು ತುಪ್ಪ - ಅಡುಗೆಯಲ್ಲಿ ತುಪ್ಪದಂತೆ ಬಳಸಬಹುದಾಗಿದೆ. ಪೌಷ್ಟಿಕ, ವಿಷನಿವಾರಕ, ಬಾಯಿಹುಣ್ಣು, ಪಿತ್ತಜ್ವರ, ಕ್ಷಯಗಳಲ್ಲಿ ಔಷಧ. ಶುದ್ಧೀಕರಿಸಿ ಬಳಸಿದರೆ ಆಯುಸ್ಸು, ಶರೀರ ಕಾಂತಿ ಹೆಚ್ಚಿಸುವುದು. ಪಾಶ್ಚಿಮಾತ್ಯ ದೇಶಗಳಲ್ಲಿ ಕೊಬ್ಬು ತೊಲಗಿಸಿ, ಶರೀರ ತೆಳುವಾಗಿಸಲು ಬಳಸುವ ದುಬಾರಿ 'ಹೈಡಾಕ್ಸಿ ಸಿಟ್ರಿಕ್ ಆಮ್ಲ'ದ ಮೂಲವಸ್ತು ಹಣ್ಣಿನ ಒಣಸಿಪ್ಪೆ." ಔಷಧೀಯ ಗುಣಗಳನ್ನು ಮೂಲಿಕಾ ತಜ್ಞ ಪಾಣಾಜೆಯ ವೆಂಕಟರಾಮ ದೈತೋಟ ಹೇಳುತ್ತಾರೆ.
            ಗೋವಾದ ವೆಸ್ಟರ್ನ್  ಘಾಟ್ಸ್ ಕೋಕಮ್ ಫೌಂಡೇಶನ್ ಎನ್ನುವ ಸರಕಾರೇತರ ಸಂಸ್ಥೆಯು ಪುನರ್ಪುಳಿ ಹಣ್ಣಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಅಜಿತ್ ಶಿರೋಡ್ಕರ್ ಅವರ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳು ನಡೆದಿವೆ. ಫಲವಾಗಿ ಹಣ್ಣಿನ ಸಿಪ್ಪೆಯಿಂದು ವಿದೇಶಕ್ಕೂ ಹಾರುತ್ತಿದೆ! ಮಹಾರಾಷ್ಟ್ರದ ಸಿಂಧುದುರ್ಗ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಪುನರ್ಪುಳಿಯ ಇಳುವರಿ ಅಧಿಕ. ಎರಡೂ ಜಿಲ್ಲೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಚಿಕ್ಕಪುಟ್ಟ ಮೌಲ್ಯವರ್ಧನಾ ಘಟಕಗಳಿವೆ. ಇತ್ತ ಕೇರಳದಲ್ಲಿ ಪುನರ್ಪುಳಿ ಪರಿಚಿತವಲ್ಲ. ಇದರ ಸೋದರ 'ಮಂತುಹುಳಿ'ಯ ಮಂದಸಾರವು ಮಾಂಸದ ಅಡುಗೆಗಳಲ್ಲಿ ಬಳಕೆಯಾಗುತ್ತಿದೆ.
             ಮಾರುಕಟ್ಟೆಯಲ್ಲಿ ಫ್ರೂಟಿಯಂತಹ ಟೆಟ್ರಾಪ್ಯಾಕ್ಗಳು ವಿವಿಧ ಸ್ವಾದದಲ್ಲಿ ಸಿಗುತ್ತವೆ. ಆರೇಳು ವರುಷದ ಹಿಂದೆ ಪುಣೆಯ ಅಪರಂತ್ ಆಗ್ರೋ ಫುಡ್ಸ್ನ ಮುಕುಂದ ಭಾವೆ, ಪುನರ್ಪುಳಿಯ ಟೆಟ್ರಾಪ್ಯಾಕ್ ಮಾಡಿ ಮಾರುಕಟ್ಟೆಗೆ ಇಳಿಸಿದ್ದರು. ಹೆಚ್ಚು ವೆಚ್ಚದ  ಪ್ಯಾಕಿಂಗ್. ಮೇಲ್ನೋಟಕ್ಕೆ ಸ್ವಲ್ಪ ಅಧಿಕವೇ ಅನ್ನಿಸುವ ದರ. ತೋಟದ ತಾಜಾ ಉತ್ಪನ್ನವೊಂದು ಟೆಟ್ರಾಪ್ಯಾಕ್ ಆಗಿರುವುದು ಹೆಮ್ಮೆಯ ವಿಚಾರ. ಅನ್ಯಾನ್ಯ ಕಾರಣಗಳಿಂದ ಈಗ ಉದ್ದಿಮೆ ಶಟರ್ ಎಳೆದಿದೆ. ಶಿರಸಿಯಲ್ಲಿ ನವೀನ್ ಹೆಗಡೆಯವರು 'ಹೂಗ್ಲು' ಬ್ರಾಂಡಿನಲ್ಲಿ ಆಕರ್ಷಕ ಪ್ಯಾಕಿನಲ್ಲಿ 'ಕುಡಿಯಲು ಸಿದ್ಧ' ಉತ್ಪನ್ನ ಮಾರುಕಟ್ಟೆಗಿಳಿಸಿದ್ದಾರೆ.
              ಮಹಾರಾಷ್ಟ್ರದಲ್ಲಿ 'ಆಮ್ಸೋಲ್' - ಪುನರ್ಪುಳಿಯ ಜ್ಯೂಸ್ನಲ್ಲಿ ಮುಳುಗಿಸಿದ ಒಣಸಿಪ್ಪೆ. ಮಾಂಸಾಹಾರ ಪದಾರ್ಥಗಳಿಗೆ ಬಳಸುತ್ತಾರೆ. ಹಣ್ಣಿನ ಉಪ್ಪುಮಿಶ್ರಿತ ರಸ - 'ಸೋಲ್ಕಡಿ'. ಊಟದ ಕೊನೆಗೆ ಮಜ್ಜಿಗೆಯ ಬದಲಿಗೆ ಹೆಚ್ಚು ಇಷ್ಟ ಪಡುತ್ತಾರೆ. ಪೇಯವಾಗಿಯೂ ಬಳಸುತ್ತಾರೆ. ಇದನ್ನು ಹೋಟೆಲ್ಗಳಿಗೆ ವಿತರಿಸುವ ಒಂದೆರಡು ಮನೆ ಉದ್ದಿಮೆಗಳೂ ತಲೆಯೆತ್ತಿವೆ. ಹಣ್ಣನ್ನು ಕತ್ತರಿಸುವ ಯಂತ್ರಗಳೂ ಬಂದಿವೆ.
               ಗರ್ಡಾಡಿಯ ಕೃಷಿಕ ಅನಿಲ್ ಬಳೆಂಜರಲ್ಲಿ 'ಸಿಹಿ ಪುನರ್ಪುಳಿ' ಈಚೆಗೆ ಗಮನ ಸೆಳೆಯುತ್ತಿದೆ. ಸಹಜವಾಗಿ ಬೆಳೆದ ಹದಿನೇಳು ವರುಷದ ಮರ. ಮೂವತ್ತಡಿಯಷ್ಟು ಎತ್ತರಕ್ಕೆ ಬೆಳೆದಿದೆ. ಎಂಟನೇ ವರುಷದಿಂದ ಫಸಲು ಕೊಡಲು ಶುರುವಾಗಿತ್ತು. ದೊಡ್ಡ ಗಾತ್ರದ ಹಣ್ಣು. ಕಪ್ಪುಗೆಂಪು ಬಣ್ಣ. ಸಿಪ್ಪೆಯಿಂದ ತೆಗೆದ ರಸವು ಗಾಢ ವರ್ಣದಿಂದ ಕೂಡಿದೆ.  ರಸವು ಎರಡು ವರುಷ ಕಳೆದರೂ ಬಣ್ಣ ಮಾಸದು. ಉಳಿದ ಪುನರ್ಪುಳಿ ತಳಿಗಿಂತ ಇದರಲ್ಲಿ ರಸ ಅಧಿಕ. ಎಪ್ರಿಲ್-ಮೇ ಇಳುವರಿ ಸಮಯ. ಎಲ್ಲಾ ಹಣ್ಣುಗಳು ಸಮಾನ ಗಾತ್ರದಲ್ಲಿರುವುದು ವಿಶೇಷ.
               "ಕೆಂಪು ಮುರುಗಲಿಗಿಂತ ಬಿಳಿ ಮುರುಗಲಿನಲ್ಲಿ ಹುಳಿಯ ಅಂಶ ಹೆಚ್ಚು. ಕೆಂಪಿನದರಂತೆ ಇದೂ ಅಡವಿಯಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಅಪರೂಪದ ಗಿಡ. ನೂರು ಕೆಂಪು ಮುರುಗಲು ಗಿಡಗಳಿದ್ದೆಡೆ ನಾಲ್ಕೈದು ಬಿಳಿಯದು ಸಿಗಬಹುದು. ಎರಡೂ ನೋಡಲು ಒಂದೇ ಥರ. ಹೂವು, ಕಾಯಿಯ ಆಕಾರ-ಗಾತ್ರಗಳಲ್ಲಿ ವ್ಯತ್ಯಾಸವಿಲ್ಲ. ಬಿಳಿ ಮುರುಗಲು ನಿಜವಾಗಿ ಬಿಳಿಯಲ್ಲ. ಬದಲಿಗೆ ಹಳದಿ ಬಣ್ಣ ಹೊಂದಿರುತ್ತದೆ. ಕೆಂಪಿನದರಂತೆಯೇ, ಬಿಳಿ ಮುರುಗಲಿನ ಯಾವ ಭಾಗವೂ ನಿರರ್ಥಕವಲ್ಲ. ಬೀಜದಿಂದ  ತುಪ್ಪ, ರಸದಿಂದ ಜಾಮ್, ಸಿಪ್ಪೆಯಿಂದ ಉಪ್ಪಿನಕಾಯಿ.. ಹೀಗೆ ಒಂದೊಂದು ಥರ , ಎನ್ನುತ್ತಾರೆ" ಕೋಕಂನ ಬಗ್ಗೆ ಅಧ್ಯಯನ ಮಾಡಿದ ಡಾ.ಗಣೇಶ ಎಂ.ನೀಲೇಸರ.
             ಬಿಳಿ ಮುರುಗಲು ಗಿಡಗಳನ್ನು ದೊಡ್ಡ ಪ್ರಮಾಣದಲ್ಲಿ ನೆಟ್ಟು ಬೆಳೆಸಿದವರು ತೀರಾ ಕಡಿಮೆ. ಶಿರಸಿಯ ಬೆಂಗಳಿ ವೆಂಕಟೇಶ ಮತ್ತು ಗೋಕರ್ಣದ ವೇದಶ್ರವ ಶರ್ಮಾ ಬಿಳಿ ಮುರುಗಲನ್ನು ಬೆಳೆಸಿದ ಕೃಷಿಕರು. ಬೆಂಗಳಿ ವೆಂಕಟೇಶರು ಬೆಳೆಯುವುದಲ್ಲದೆ, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ತಮ್ಮದೇ ಮಾರುಕಟ್ಟೆ ಜಾಲವನ್ನು ಹೊಂದಿದ್ದಾರೆ. ಕೆಂಪು ಮುರುಗಲಿನ ತೋಟವನ್ನು ಎಬ್ಬಿಸಿದವರಲ್ಲಿ ಇಬ್ಬರು ಮುಂಚೂಣಿಯಲ್ಲಿದ್ದಾರೆ. ಒಬ್ಬರು ಗೋವಾದ ಶ್ರೀಹರಿ ಕುರಾಡೆ. ಇಪ್ಪತ್ತೈದು ಎಕ್ರೆಯಲ್ಲಿ ಕೋಕಂ ಬೆಳೆದಿದ್ದಾರೆ. ಇನ್ನೊಬ್ಬರು ಪುಣೆ ಸನಿಹದ ವಿಕಾಸ್ ರಾಯ್ಕರ್. ತೆಂಗು, ನೆಲ್ಲಿಗಳ ಮಧ್ಯೆ ಮತ್ತು ಮಾರ್ಗದ ಇಕ್ಕೆಡೆಗಳಲ್ಲಿ ಬೆಳೆಸಿದ್ದಾರೆ.
              ಮಂಗಳೂರಿನಲ್ಲಿ ಪುನರ್ಪುಳಿಯ ತಾಜಾ ಹಣ್ಣಿಗೂ ಮಾರುಕಟ್ಟೆಯಿದೆ! ಸೇಬು, ಕಿತ್ತಳೆ, ಮುಸುಂಬಿ, ಮಾವಿನೊಂದಿಗೆ 'ಪುನರ್ಪುಳಿ'ಗೂ ಸ್ಥಾನ. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಹಣ್ಣಿನಂಗಡಿಯಲ್ಲಿ ತಾಜಾ ಹಣ್ಣು ಲಭ್ಯ. ಅರ್ಧ, ಒಂದು ಕಿಲೋದ ಸಾದಾ ಪ್ಯಾಕೆಟ್ನಲ್ಲಿ ಬಿಕರಿ. ಸೆಂಟ್ರಲ್ ಮಾಕರ್ೆಟ್ನ ತರಕಾರಿ ವ್ಯಾಪಾರಿ ಡೇವಿಡ್ ಕರಾವಳಿಯಲ್ಲಿ ತಾಜಾ ಹಣ್ಣಿನ ಮಾರಾಟಕ್ಕೆ ಸಾಥ್ ಕೊಟ್ಟವರು. ಅಲ್ಲದೆ ಗಿರಾಕಿಗಳಿಗೆ ಹಣ್ಣಿನ ಔಷಧೀಯ ಗುಣಗಳ ಅರಿವನ್ನು ಮೂಡಿಸಿ, ಗ್ರಾಹಕ ವಲಯವನ್ನು ರೂಪಿಸಿದ ಹೆಗ್ಗಳಿಕೆ ಇವರಿಗಿದೆ.
              ದಾಪೋಲಿಯ ಡಾ.ಬಾಳಾಸಾಹೇಬ್ ಸಾವಂತ್ ಕೊಂಕಣ್ ಕೃಷಿ ವಿದ್ಯಾಪೀಠವು 'ಕೊಂಕಣ್ ಅಮೃತ' ಮತ್ತು 'ಕೊಂಕಣ್ ಹಾತಿಸ್' ಎಂಬ ಎರಡು ಪುನರ್ಪುಳಿ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಕೋಕಮ್ ಅಮೃತವು ಮಾರ್ಚ್-ಎಪ್ರಿಲ್ ಹಣ್ಣು ಕೊಟ್ಟರೆ, ಕೋಕಮ್ ಹಾತಿಸ್ ಎಪ್ರಿಲ್-ಮೇಯಲ್ಲಿ ಇಳುವರಿ ನೀಡುತ್ತದೆ. ಏಳನೇ ವರುಷದಲ್ಲಿ ಅಮೃತ ತಳಿಯ ಒಂದು ಮರದಲ್ಲಿ ಒಂದುನೂರ ಮೂವತ್ತೆಂಟು ಕಿಲೋ ಹಣ್ಣು ನೀಡಿದೆ. ಕಿಲೋವೊಂದರಲ್ಲಿ ಇಪ್ಪತ್ತೊಂಭತ್ತು ಹಣ್ಣುಗಳು ತೂಗುತ್ತದೆ. ಹಾತಿಸ್ನಲ್ಲಿ ಇನ್ನೂರೈವತ್ತು ಕಿಲೋ ಹಣ್ಣುಗಳನ್ನು ಮರವೊಂದು ನೀಡಿದರೆ, ಒಂದು ಕಿಲೋದಲ್ಲಿ ತೂಗುವ ಹಣ್ಣುಗಳ ಸಂಖ್ಯೆ ಹನ್ನೊಂದು!
              ಪುನರ್ಪುಳಿ ಹಣ್ಣಿನ ವಿವಿಧ ಬಳಕೆಯ ಕುರಿತು ಸಂಶೋಧನೆಗಳು ನಡೆದುದು ವಿರಳ. ದೊಡ್ಡ ದೊಡ್ಡ ನಗರಗಳಲ್ಲಿ ಬಹುಶಃ ಹಣ್ಣು ಅಪರಿಚಿತ. ಮಳೆ ಬಿದ್ದ ಬಳಿಕವೇ ಹಣ್ಣು ಸಿಗುವುದು ಶಾಪ! ಕುಂದಾಪುರ ಭಾಗದಲ್ಲಿ ಜನವರಿಗೆ ಇಳುವರಿ ಬಿಡುವ ತಳಿಗಳಿವೆಯಂತೆ. ಇಲಾಖಾ ಮಟ್ಟದಲ್ಲಿ ಹೇಳುವಂತಹ ಸಂಶೋಧನೆ ನಡೆದಿಲ್ಲ.  ಇದನ್ನು ಮಾನ ಕೊಡುವ ಮತ್ತು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೃಷಿಕ ಮಟ್ಟದಲ್ಲಿ ಸಂಘಟಿತ ಕಾರ್ಯಕ್ರಮವೊಂದು ಮೇ 1ರಂದು ಸಂಪನ್ನವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಸನಿಹದ ಮುಳಿಯ ವೆಂಕಟಕೃಷ್ಣ ಶರ್ಮರಲ್ಲಿ 'ಪುನರ್ಪುಳಿ ಪ್ರಪಂಚದೊಳಕ್ಕೆ' ಎನ್ನುವ ವಿಶಿಷ್ಟ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಉಬರು 'ಹಲಸು ಸ್ನೇಹಿ ಕೂಟ', ಪಶ್ಚಿಮ ಘಟ್ಟ ಕೋಕಂ ಪ್ರತಿಷ್ಠಾನ ಮತ್ತು ಅಡಿಕೆ ಪತ್ರಿಕೆಯು ಜಂಟಿಯಾಗಿ 'ಕೋಕಂ ಡೇ'ಯನ್ನು ಆಯೋಜಿಸುತ್ತಿದೆ.
              ಹಲಸಿನಲ್ಲಿ 'ರುಚಿ ನೋಡಿ-ತಳಿ ಆಯ್ಕೆ' ಎನ್ನುವ ತಳಿ ಆಯ್ಕೆಯ ಪರಿಕಲ್ಪನೆಯನ್ನು ಅನುಷ್ಠಾನಿಸಿದ 'ಹಲಸು ಸ್ನೇಹಿ ಕೂಟ'ವು ಪುನರ್ಪುಳಿಯ ಅಭಿವೃದ್ಧಿಯತ್ತ ಹೆಜ್ಜೆಯೂರಿದೆ. ಕಿರಿದಾದ ಈ ಹೆಜ್ಜೆಯು ಹಿರಿದು ಹೆಜ್ಜೆಯ ಅಡಿಗಟ್ಟು ಎನ್ನುವುದನ್ನು ಮರೆಯುವಂತಿಲ್ಲ.

Tuesday, August 8, 2017

ಕೃಷಿಕ ಜ್ಞಾನದ ನೀರಿನ ರೇಶನ್!

ಉದಯವಾಣಿಯ 'ನೆಲದ ನಾಡಿ' ಅಂಕಣ / 6-4-2017

                ಬಿಸಿಲ ಧಗೆ ಏರುತ್ತಿದೆ. ಕೊಳವೆ ಬಾವಿ ಕೊರೆತದ ಯಂತ್ರಗಳು ಸದ್ದನ್ನು ಹೆಚ್ಚಿಸುತ್ತಿವೆ. ಒಂದೆಡೆ ಕನ್ನಾಡಿನ ಕೆಲವೆಡೆ ಕೊಳವೆ ಬಾವಿ ಕೊರತಕ್ಕೆ ನಿಷೇಧ. ಮತ್ತೊಂದೆಡೆ ನಿಷೇಧ ತೆರವುಗೊಳಿಸುವ ಪರವಾನಿಗೆಗೆ ಸಹಿ ಹಾಕುವ ತರಾತುರಿ! ಕೆರೆ, ಬಾವಿ ಮೊದಲಾದ ನೀರಿನ ಮೂಲಗಳನ್ನು ಬರಿದಾಗಿಸಿದ ಮೇಲೆ ಕಟ್ಟಕಟೆಯ ಕೊಳವೆ ಬಾವಿ ಕೊರೆತದ ಯತ್ನವು ಯಶಕ್ಕಿಂತ ವಿಫಲದ ಸುದ್ದಿಗಳೇ ಕೇಳಿಸುತ್ತಿವೆ.
            ಶಿರಸಿಯ ಪಾಂಡುರಂಗ ಹೆಗಡೆ ಉಲ್ಲೇಖಿಸುತ್ತಾರೆ - ದಶಕದ ಹಿಂದೆ ಬಯಲು ಸೀಮೆಯಲ್ಲಿ ಆರುನೂರರಿಂದ ಎಂಟುನೂರು ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಇಂದು ಒಂದು ಸಾವಿರದ ನಾಲ್ಕುನೂರರಿಂದ ಸಾವಿರದ ಎಂಟು ನೂರು ಅಡಿಗೆ ಕುಸಿದಿದೆ. ಹೆಚ್ಚು ಮಳೆ ಬೀಳುವ ಕರಾವಳಿ, ಮಲೆನಾಡು ಇದಕ್ಕಿಂತ ಹೊರತಲ್ಲ.
              ಒಂದು ಕೊಳವೆ ಬಾವಿ ವೈಫಲ್ಯಗೊಂಡರೆ ಮತ್ತೊಂದು, ಇನ್ನೊಂದು.. ಹೀಗೆ ಕೊರೆತಗಳ ಸಾಲು ಯಶೋಗಾಥೆಗಳು ಕಣ್ತೆರೆದರೆ ಕಾಲಬುಡದಲ್ಲೇ ಇದೆ. ಪ್ರತೀಯೊಬ್ಬನಿಗೂ ತನ್ನ ಸ್ಥಳದಲ್ಲಿ ಒಂದಾದರೂ ಕೊಳವೆ ಬಾವಿ ಇರಲೇ ಬೇಕೆನ್ನುವ ಹಪಾಹಪಿ, ಜತೆಗೆ ಹಠ!  ಧರಣಿಗೆ ನೀರುಣಿಸುವ ಕಾಳಜಿ ಇಲ್ಲ, ಕೊರೆಯಲು ಎಷ್ಟೊಂದು ಅತ್ಯುತ್ಸಾಹ! ನೀರಿನ ಕೊರತೆಯ ಈ ಹೊತ್ತಲ್ಲಿ ಇಂತಹ ಮಾತು ಅಪಥ್ಯವಾಗಬಹುದು.
             ನೀರಿನ ಅಭಾವದ ಸಂಕಷ್ಟದ ಮನಃಸ್ಥಿತಿಯ ತೇವವು ಮಳೆಗಾಲ ಬಂದಾಗಲೂ ಆರಕೂಡದು ಅಲ್ವಾ. ಬಹುಶಃ ಆಗ ಭೂ ಒಡಲಿಗೆ ನೀರಿಂಗಿಸುವ, ಮಳೆಕೊಯ್ಲಿನಂತಹ ಜಲಸಂರಕ್ಷಣೆಯ ಅರಿವಿನ ಅನುಷ್ಠಾನಕ್ಕೆ ಕಾಲ ಪಕ್ವ.  ನೀರಿಲ್ಲ ಎಂದಾಗ ಸರಕಾರದಲ್ಲಿರುವ ಒಂದೇ ಅಸ್ತ್ರ - ಕೊಳವೆ ಬಾವಿಗಳ ಕೊರೆತ. ಇಂತಹ ಬಾವಿಗಳ ವೈಫಲ್ಯದ ಕತೆಗಳು ಸರಕಾರದ ಕಡತದಲ್ಲಿ ಎಷ್ಟಿಲ್ಲ. ಅವು ಎಂದೂ ತೆರೆದುಕೊಳ್ಳುವುದಿಲ್ಲ ಬಿಡಿ.
             'ನಮ್ಮ ಬಾವಿ, ನಮ್ಮ ನೀರು' ಎಂದು ಬೀಗುವ ಕಾಲಕ್ಕೀಗ ಇಳಿಲೆಕ್ಕ. ಬಾವಿಯಲ್ಲಿ ನೀರಿದೆ ಎಂದು ಟ್ಯಾಂಕಿ ತುಂಬಿ ಪೋಲಾಗುವಷ್ಟು ಪಂಪ್ ಚಾಲೂ ಮಾಡುವಾತನಿಗೆ ಭವಿಷ್ಯದ ಕರಾಳತೆಯ ಅರಿವು ಬೇಕಾಗಿಲ್ಲ.  'ನೀರನ್ನು ತುಪ್ಪದಂತೆ ಬಳಸಿ' ಎಂದು ಜಲಯೋಧರು ಕಳೆದೆರಡು ದಶಕದಿಂದ ಹೇಳುತ್ತಿದ್ದರೂ ನಗೆಯಾಡಿದವರೇ ಅಧಿಕ. ಆ ನಗೆಯ ಮುಖದಲ್ಲಿ ಈಗ ವಿಷಾದದ ಛಾಯೆ!
             ನೀರನ್ನು ತುಪ್ಪದಂತೆ ಬಳಸುವ ಮನಃಸ್ಥಿತಿಯನ್ನು ಅನಿವಾರ್ಯವಾಗಿ ರೂಢಿಸಿಕೊಳ್ಳಬೇಕಾದುದು ಕಾಲದ ಅನಿವಾರ್ಯತೆ. ಹಿಂದೊಮ್ಮೆ ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭರು ಇಸ್ರೆಲಿಗೆ ಹೋಗಿದ್ದರು. "ಕಡಿಮೆ ಮಳೆ ಬೀಳುವ ಇಸ್ರೆಲ್ ದೇಶದ ನೀರಿನ ಬಳಕೆಯ ಪಾಠ ನಿಜಕ್ಕೂ ನೀರಿನ ಪಠ್ಯ. ಅಲ್ಲಿ ನೀರು ತುಪ್ಪಕ್ಕೆ ಸಮಾನ. ಜನರ ಮನಃಸ್ಥಿತಿ ಅದಕ್ಕೆ ಟ್ಯೂನ್ ಆಗಿದೆ. ಹಾಗಾಗಿ ನೋಡಿ, ಕೃಷಿಯಲ್ಲಿ ಇಸ್ರೆಲ್ ಮುಂದಿದೆ," ಎಂದಿದ್ದರು.
            ಕನ್ನಾಡಿನಲ್ಲಿ ಅದರಲ್ಲೂ ಕರಾವಳಿಯಲ್ಲಿ ಸಹಕಾರ ವ್ಯವಸ್ಥೆಯು ಗ್ರಾಮೀಣ ಭಾರತದ ಉಸಿರು. ಇಂತಹ ಸಹಕಾರ ವ್ಯವಸ್ಥೆಯು ನೀರಿನ ವಿಚಾರದಲ್ಲೂ ಹೊಂದಿದರೆ ಕೊಳವೆ ಬಾವಿಗಳ ಅವಿರತ ಕೊರೆತಕ್ಕೆ ಪರ್ಯಾಯ ಪರಿಹಾರವಾಗಬಹುದು. ಕೇವಲ ಕೊಳವೆ ಬಾವಿ ಮಾತ್ರವಲ್ಲ, ಜಲನಿಧಿಗಳಾದ ಕಟ್ಟ, ಮದಕಗಳ ನೀರಿನ ಬಳಕೆಯಲ್ಲೂ ಇದೇ ಮಾದರಿಯನ್ನು ಹೊಂದಿರುವ ಉದಾಹರಣೆಗಳು ಎಷ್ಟಿಲ್ಲ. ಅಂತಹ ತಂಪು ಸುದ್ದಿಗಳು ಎಲ್ಲೂ ಸುದ್ದಿಯಾಗುವುದಿಲ್ಲ.
            ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮಕ್ಕೆ ಮೃತ್ಯುಂಜಯ ನದಿ ಜಲದಾತೆ. ನೇತ್ರಾವತಿಯ ಮೂರನೇ ಒಂದು ಉಪನದಿ. ಅಗಲ ಸುಮಾರು ಐವತ್ತು ಮೀಟರ್. ಆಳ ಒಂದೂವರೆ ಮೀಟರ್. ಇದು ಚಾರ್ಮಾಡಿಯ ಮಧುಗುಂಡಿಯಲ್ಲಿ ಹುಟ್ಟಿ ಹದಿನೈದು ಕಿಲೋಮೀಟರ್ ಹರಿದು ಫಜಿರಡ್ಕದಲ್ಲಿ ನೇತ್ರಾವತಿಯನ್ನು ಸೇರುತ್ತದೆ. ಇಲ್ಲಿನ ಪೂರ್ವಜರು ಶತಮಾನಕ್ಕೂ ಮೊದಲೇ ಕಟ್ಟ ನಿರ್ಮಿಸಿ ಕೃಷಿಗೆ ನೀರು ಬಳಸುತ್ತಿದ್ದರು.
            ಕಟ್ಟ ಎಂದರೆ ಹರಿಯುವ ನೀರನ್ನು ತಡೆಯಲು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ನದಿಗೆ (ತೋಡಿಗೆ) ಅಡ್ಡವಾಗಿ ಕಟ್ಟುವ ತಾತ್ಕಾಲಿಕ ತಡೆಗಟ್ಟ ಅಥವಾ ಚೆಕ್ಡ್ಯಾಮ್. ನದಿಗುಂಟದ ಹದಿನೆಂಟು ಮನೆಗಳು ಕಟ್ಟದ ಫಲಾನುಭವಿಗಳು. ಮೊದಲು ಇಪ್ಪತ್ತೆರಡು ಕುಟುಂಬಗಳಿದ್ದುವಂತೆ. ಎಲ್ಲರದೂ ಮುಖ್ಯ ಕೃಷಿ ಅಡಿಕೆ. ಕಟ್ಟದ ನೀರೇ ಆಧಾರ. ಸುಮಾರು 1906ರಲ್ಲಿ ಈ ಕಟ್ಟ ಆರಂಭವಾಗಿರುವ ಉಲ್ಲೇಖ ಕೃಷಿಕರಲ್ಲಿದೆ. 1917ರಿಂದ ಸವಿವರವಾದ ಖರ್ಚುವೆಚ್ಚ ಬರೆದಿಟ್ಟ ದಾಖಲೆಗಳಿವೆ.
             ಕಟ್ಟದ ಫಲಾನುಭವಿಗಳಲ್ಲಿ ಒಬ್ಬರು ಗಜಾನನ ವಝೆ ಅವರಿಗೆ ಕಟ್ಟದ ಸುದ್ದಿ ಹೇಳಲು ಖುಷಿ - ಪ್ರತಿ ವರುಷ ನವೆಂಬರ್ ತಿಂಗಳಲ್ಲಿ ಕಟ್ಟ ಕಟ್ಟುವ ಮುಹೂರ್ತ. ನಮ್ಮೆಲ್ಲರ ತೋಟಗಳಿಗೆ ಎರಡು ತಿಂಗಳ ಕಾಲ ಸಮೃದ್ಧ ಹಾಯಿ ನೀರಾವರಿ. ನೀರು ಕಡಿಮೆಯಾಗುತ್ತಿದ್ದಂತೆ ರೇಶನ್! ಅಂದರೆ ನಾಲ್ಕು ತಿಂಗಳ ತುಂತುರು ನೀರಾವರಿ. ತೋಡಿನಲ್ಲಿ ನೀರಿನ ಹರಿವಿರುವಾಗ ಎಲ್ಲ ಕೆರೆ, ಬಾವಿಗಳು ತುಂಬಿರುತ್ತವೆ. ಕಟ್ಟ ಕಟ್ಟುವ ಸ್ಥಳವು ಪೂರ್ತಿ ನೇರವಾಗಿಲ್ಲ. ನದಿಯಲ್ಲೇ ನೈಸರ್ಗಿಕ  ಬಂಡೆಕಲ್ಲುಗಳಿವೆ. ಇವು ಕೆಲಸವನ್ನು ಸುಲಭವಾಗಿಸಿದೆ. ಅಲ್ಲಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಅಡ್ಡ ಕಟ್ಟಿದರೆ ಸಾಕು, ಕಟ್ಟ ಆಗಿಬಿಡುತ್ತದೆ.
            ಕಟ್ಟದ ಕತೆಗೆ ಕಿವಿಯಾಗುತ್ತಿದಂತೆ ಸಹಜವಾಗಿ 'ನೀರಿನ ಖುಷಿ' ಆಗುತ್ತದೆ. ಆದರೆ ವರುಷ ವರುಷ ಮಳೆ ಕಡಿಮೆಯಾಗುತ್ತಿದ್ದಂತೆ ಕಟ್ಟದ ನೀರಿನಲ್ಲೂ ವ್ಯತ್ಯಯವಾಗುತ್ತಿದೆ. ಎಪ್ರಿಲ್-ಮೇ ತಿಂಗಳಲ್ಲಿ ತೋಡಿನಲ್ಲಿ ಧಾರಾಳವಾಗಿ ನೀರು ಹರಿಯುತ್ತಿದ್ದ ದಿನಮಾನಗಳನ್ನು ನೆನೆಯುತ್ತಾರೆ ವಝೆ, "ಆ ಕಾಲದಲ್ಲಿ ನದಿಯ ನೀರನ್ನು ಪಂಪ್ ಮಾಡುತ್ತಿರಲಿಲ್ಲ. ಕೆಲವರು ಅವರವರ ತೋಟದ ಕೆಳಭಾಗದಲ್ಲಿ ಪಂಪ್ ಇಟ್ಟಿರುತ್ತಾರೆ. ಬರಬರುತ್ತಾ ಕಟ್ಟದ ನೀರು ತೋಟಕ್ಕೆ ಹರಿಯುವ ದಿನಗಳು ತುಂಬಾ ಕಡಿಮೆಯಾಗುತ್ತಿವೆ.  ಬಹುತೇಕ ಫೆಬ್ರವರಿ ತನಕ ನೀರು ಹರಿಯುತ್ತದಷ್ಟೇ. ಕೆಲವೊಮ್ಮೆ ಜನವರಿಗೇ ಕಡಿಮೆಯಾಗಿರುತ್ತದೆ. ಹೀಗಿದ್ದೂ ಆರು ತಿಂಗಳ ಬದಲು ಎರಡೇ ತಿಂಗಳಿಗೆ ನೀರು ಸಿಗುತ್ತಿದ್ದರೂ ಕಟ್ಟ ಕಟ್ಟುವುದನ್ನು ನಿಲ್ಲಿಸಿಲ್ಲ."
           ಕಾಸರಗೋಡು ಜಿಲ್ಲೆಯ ಮೀಯಪದವಿನ 'ಉಪ್ಪಳ ನದಿ'ಯ ಒಂದು ದಡದಲ್ಲಿ ಡಾ.ಡಿ.ಸಿ.ಚೌಟರ ತೋಟ. ಮತ್ತೊಂದು ದಡದಲ್ಲಿ ಸುಮಾರು ಇಪ್ಪತ್ತೈದು ಮಂದಿ ಕೃಷಿಕರ ಗದ್ದೆ-ತೋಟ. ಒಂದೆಕ್ರೆಯಿಂದ ಐದೆಕ್ರೆ ತನಕ. ಏತದ ಮೂಲಕ ನೀರೆತ್ತಿ ಗದ್ದೆ ಬೇಸಾಯ ಮಾಡಿದ ದಿನಮಾನಗಳನ್ನು ಕೃಷಿಕರು ಜ್ಞಾಪಿಸಿಕೊಳ್ಳುತ್ತಿದ್ದಾರೆ. ಮೋಟಾರು ಪಂಪ್ ಇಲ್ಲದ ಕಾಲಘಟ್ಟ. ಭೂಮಿಯಿದೆ, ಕೃಷಿ ಮಾಡುವ ಉಮೇದಿದೆ. ಮಾಡಲಾಗುತ್ತಿಲ್ಲ ಎನ್ನುವ ಸ್ಥಿತಿ.
          ಈ ಸಂಕಟ ಪರಿಹಾರಕ್ಕೆ ಕೃಷಿಕ ಡಾ.ಡಿ.ಸಿ.ಚೌಟರ ಯೋಜನೆ. ಮೊದಲಿಗೆ ಹನ್ನೆರಡು ಮಂದಿಯ ಗುಂಪು ರಚನೆ. ವಿದ್ಯುತ್ ಸಂಪರ್ಕಕ್ಕೆ ಮೊದಲಾದ್ಯತೆ. ಹೊಳೆಯಿಂದ ಮೋಟಾರ್ ಪಂಪ್ ಮೂಲಕ ನೀರೆತ್ತಿ ಕೃಷಿಗೆ ಸಹಕಾರಿ ವ್ಯವಸ್ಥೆಯಲ್ಲಿ ಬಳಕೆ. ಅವರವರ ಕೃಷಿ ಭೂಮಿಗೆ ಹೊಂದಿಕೊಂಡು ನೀರಿನ ವಿತರಣೆ. ಎಲ್ಲರ ತೋಟಗಳು ಒತ್ತಟ್ಟಿಗೆ ಇದ್ದುದರಿಂದ ಯೋಜನೆಗೆ ಶೀಘ್ರ ಚಾಲನೆ. ಸುಮಾರು ಇಪ್ಪತ್ತೆರಡು ವರುಷವಾಯಿತು, ಕೃಷಿಕರಲ್ಲಿ ಪರಸ್ಪರ ನಿಜಾರ್ಥದ ಒಗ್ಗಟ್ಟು ಮತ್ತು ಸನ್ಮನಸ್ಸು ಮೂಡಿದ್ದರಿಂದಾಗಿ ನೀರಿನ ಬಳಕೆಯಲ್ಲಿ ಸಹಕಾರಿ ತತ್ವ ಅನ್ವಯವಾಗಿ ಯಶವಾಗಿವೆ. ಸಹಕಾರಿ ನೀರಾವರಿ ಶುರುವಾಗುವ ಮೊದಲು ಹದಿನೈದೆಕ್ರೆ ಕೃಷಿಯಾಗುತ್ತಿತ್ತು. ಈಗ ದುಪ್ಪಟ್ಟು ಅಲ್ಲ ಅದಕ್ಕಿಂತಲೂ ಹೆಚ್ಚು ವಿಸ್ತಾರಗೊಂಡಿದೆ' ಎನ್ನುತ್ತಾರೆ ಚೌಟರು.
ಈ ಎಲ್ಲಾ ಜಲವಿಚಾರಗಳನ್ನು ಜಾಲಾಡುತ್ತಿದ್ದಾಗ ಪುತ್ತೂರು ಬಲ್ನಾಡಿನ ಕೃಷಿಕ ಸುರೇಶ್ ಭಟ್ ಮಾಹಿತಿ ಹಂಚಿಕೊಂಡರು - ತನ್ನೂರಲ್ಲಿ ಒಂದು ಕೊಳವೆ ಬಾವಿಯಿಂದ ದಿನಕ್ಕೊಬ್ಬರಂತೆ ಏಳು ಮಂದಿ ಕೃಷಿಕರು ಸಹಕಾರಿ ತತ್ವದಂತೆ ನೀರನ್ನು ಬಹುಕಾಲ ಬಳಸುತ್ತಿದ್ದರು. ಈ ವ್ಯವಸ್ಥೆ ಒಂದಷ್ಟು ಕಾಲ ನಡೆದಿತ್ತು.
           ಕೊಳವೆ ಬಾವಿಗಳನ್ನು ಕೊರೆಯುತ್ತಾ ಹೋಗುವುದಕ್ಕಿಂತ ಜೀವವಿದ್ದ ಕೊಳವೆಬಾವಿಗಳ ನೀರನ್ನು 'ಸಹಕಾರಿಕರಣ'ಗೊಳಿಸಬಹುದು. ಇದರಲ್ಲಿ ಸಮಸ್ಯೆ ಇಲ್ಲವೆಂದಲ್ಲ. ಅಲ್ಲಲ್ಲಿನ ಸಂಪನ್ಮೂಲ, ಅಗತ್ಯಗಳಿಗೆ ಹೊಂದಿಕೊಂಡು ಮನಃಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕಾಗಬಹುದು. ಮನಸ್ಸು  ಸಜ್ಜಾಗಬೇಕಷ್ಟೇ. ಸಹಕಾರಿ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಬಹುಶಃ ನೀರಿಗೂ ರೇಶನ್ ಸಿಸ್ಟಂ ಅನಿವಾರ್ಯ.
           ಒಂದು ನೆನಪಿಟ್ಟುಕೊಳ್ಳೋಣ - ನೀರಿನ ಬರಕ್ಕೆ ಕೊಳವೆ ಬಾವಿಗಳ ಕೊರೆತ ಪರಿಹಾರವಲ್ಲ. ಇಂತಹ ಚಿಕ್ಕಪುಟ್ಟ ಸಹಕಾರಿಕರಣವು ಕೂಡಾ ಜಲಸಂರಕ್ಷಣೆಗೆ ಮಾದರಿ. ಕನ್ನಾಡಿನಲ್ಲಿ ನೀರುಳಿತಾಯದ ಸಹಕಾರಿ ಮಾದರಿಗಳು ವಿರಳವಾಗಿವೆ. ಅರಿವಿನ ದೃಷ್ಟಿಯಿಂದ ಅದಕ್ಕೆ ಬೆಳಕ್ಕೊಡ್ಡುವ ತುರ್ತಿದೆ.  

Wednesday, August 2, 2017

ಹೂಳಿನೊಳಗೆ ಅವಿತ ಜೀವನಿಧಿಗೆ ಮರು ಉಸಿರು

ಉದಯವಾಣಿಯ 'ನೆಲದ ನಾಡಿ' ಅಂಕಣ / 2-3-2017

                "ಕನ್ನಾಡಿನಾದ್ಯಂತ  ನೀರು ಬಿಸಿಯಾಗುತ್ತಿದೆ! ಇನ್ನೊಂದೇ ತಿಂಗಳು, ಮತ್ತೆ ದೇವ್ರೇ ಗತಿ. ಕಳೆದ ವರ್ಷಕ್ಕಿಂತಲೂ ಈ ಬಾರಿ ನೀರು ಕೈಕೊಡುತ್ತೆ. ಕೃಷಿ ಕೈಬಿಡುತ್ತೆ. ಕುಡಿಯಲು ನೀರಿಲ್ಲ. ಬದುಕು ಹೇಂಗಪ್ಪಾ.." ದೂರದ ಕೊಪ್ಪಳದಿಂದ ಮಹಂತೇಶ ಸುಖ-ದುಃಖದ ಮಧ್ಯೆ ವರ್ತಮಾನದ ವಿಷಾದವನ್ನು ಉಸುರಿದರು. ಅವರ ವಿಷಾದದ ಉಸಿರಿನಲ್ಲಿ ಬಿಸಿಯ ಅನುಭವವಾಗುತ್ತಿತ್ತು. ಭವಿಷ್ಯದ ಕಷ್ಟದ ದಿನಗಳ ಚಿತ್ರಣ ಎದುರಿದ್ದು ಅಸಹಾಯಕರಾಗಿ ಅದನ್ನು ಒಪ್ಪಿಕೊಳ್ಳಬೇಕಾದ ದಿನಗಳಿಗೆ ಅಣಿಯಾಗುತ್ತಿದ್ದಾರೆ.
              ಕೊಪ್ಪಳ ಯಾಕೆ, ಕನ್ನಾಡಿನ ಬಹುತೇಕ ಜಿಲ್ಲೆಗಳ ನೀರಿನ ಕತೆಗಳಲ್ಲಿ ವಿಷಾದಗಳೇ ತುಂಬಿವೆ. ಬಾವಿಗಳಲ್ಲಿ ನೀರು ಕೆಳಕೆಳಗೆ ಇಳಿಯುತ್ತಿವೆ. ಕೆರೆಗಳಲ್ಲಿ ಇನ್ನೇನು ಕ್ಷಣಗಣನೆ. ಕೊಳವೆ ಬಾವಿಗಳಲ್ಲಿ ಜಲ ಪಾತಾಳಕ್ಕಿಳಿದಿವೆ. ನದಿಗಳು ಹರಿವನ್ನು ನಿಧಾನವಾಗಿಸುತ್ತಿವೆ. ಕೊಪ್ಪಳದ ಮಿತ್ರ ಹೇಳಿದಂತೆ ಒಂದೇ ತಿಂಗಳು! ಮತ್ತೇನು ಎನ್ನುವ ಪ್ರಶ್ನೆಗೆ ಉತ್ತರಿಸಲು ಕಷ್ಟವಾಗುತ್ತಿದೆ. ಕೆಲವು ವರುಷಗಳಿಂದ ಇಂತಹ ಸ್ಥಿತಿಗಳು ಮರುಕಳಿಸುತ್ತಿದ್ದರೂ ಮಳೆ ಬಂದಾಗ ಖುಷ್ ಆಗಿರುತ್ತೇವೆ. ಬೇಸಿಗೆ ಬಂದಾಗ ಅದೇ ಹಾಡು, ಅದೇ ಕೂಗು.
              ಜಲಸಂರಕ್ಷಣೆಯ ತಿಳುವಳಿಕೆಯು ಕನ್ನಾಡಿನಲ್ಲಿ ಹೊಸತೇನಲ್ಲ. ದಶಕಕ್ಕೂ ಆಚೆ ನೀರೆಚ್ಚರದ ಅರಿವನ್ನು ಮೂಡಿಸುವ ಕೆಲಸಗಳು ನಡೆಯುತ್ತಲೇ ಇವೆ. ಜಲಯೋಧರು ಕನ್ನಾಡಿನಾದ್ಯಂತ ಓಡಾಡಿ ಜಲಸಂರಕ್ಷಣೆಯ ಮಾದರಿ, ಅರಿವನ್ನು ಮೂಡಿಸುತ್ತಲೇ ಬಂದಿದ್ದಾರೆ, ಬರುತ್ತಿದ್ದಾರೆ. ಬರದ ನೋವಿನ ಮಧ್ಯೆ ಜಲಸಂರಕ್ಷಣೆಯ ಮಾದರಿಗಳು ರೂಪುಗೊಳ್ಳುತ್ತಿವೆ. ನೀರಿಲ್ಲ ಎಂದವರಿಗೆ 'ನೀರು ನಾವು ಕೊಡುತ್ತೇವೆ' ಎಂದು ನಗುನಗುತ್ತಾ ಸ್ವಾಗತಿಸುವ ಮನಸ್ಸುಗಳು ಅಲ್ಲೋ ಇಲ್ಲೋ ರೂಪುಗೊಳ್ಳುತ್ತಿವೆ.
              ಇಂತಹ ಮಾದರಿಗಳನ್ನು, ಅರಿವನ್ನು ಬಿತ್ತುವ ಕೆಲಸಗಳನ್ನು ನಮ್ಮ ಸ್ಥಳೀಯಾಡಳಿತಗಳು ಗಂಭೀರವಾಗಿ ಪರಿಗಣಿಸಿಲ್ಲ. ಜನರನ್ನು ಈ ದಿಸೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಅದನ್ನು ಸಾಮೂಹಿಕ ಜಾಗೃತಿಯನ್ನಾಗಿ ಮಾಡುವತ್ತ ಹೆಜ್ಜೆ ಊರಿಲ್ಲ. ವಿವಿಧ ಸ್ತರಗಳಲ್ಲಿ ರಾಜಕೀಯದ ಅವತಾರಗಳು ಮೇಳೈಸುತ್ತಿರುವ ಮಧ್ಯೆ  ಮಾಡಬೇಕಾದವರಿಗೆ ಉತ್ಸಾಹವಿಲ್ಲ. ಉತ್ಸಾಹವಿದ್ದವರಿಗೆ ಆಡಳಿತ ವ್ಯವಸ್ಥೆಗಳು ರಸ್ತೆಉಬ್ಬುಗಳಾಗಿವೆ. ವೈಯಕ್ತಿಕವಾಗಿ, ಕೆಲವು ಸ್ಥಳೀಯ ಖಾಸಗಿ ಸಂಸ್ಥೆಗಳಿಂದ ಅಲ್ಲಿಲ್ಲಿ ನೀರೆಚ್ಚರದ ಪಾಠಗಳಾಗುತ್ತಿವೆ. ಶಾಲೆಗಳಲ್ಲಿ ಅರಿವು ಮೂಡಿಸುವ ಯತ್ನಗಳಾಗುತ್ತಿವೆ. ಇಷ್ಟೆಲ್ಲಾ ವಿಷಾದಗಳ ಮಧ್ಯೆ ಕನ್ನಾಡಿನ ಕೆಲವೆಡೆ ನೀರಿನ ಬರವನ್ನು ಲಕ್ಷಿಸಿ ಕೆರೆಗಳ ಹೂಳು ತೆಗೆಯುವ, ಅಭಿವೃದ್ಧಿ ಮಾಡುವ ಕಾರ್ಯಗಳು ಸದ್ದು ಮಾಡುತ್ತಿವೆ. ನೀರನ್ನು ಹಿಡಿದಿಡುವ ಕೆರೆಗಳಲ್ಲಿ ಕೆಲವು ಬಹುಮಹಡಿ ಕಟ್ಟಡದ ಅಡಿಪಾಯಗಳಾಗಿವೆ! ಅಳಿದುಳಿದ ಕೆರೆಗಳ ಅಭಿವೃದ್ಧಿಗೆ ನೀರಿನ ಮನಸ್ಸುಗಳು ಟೊಂಕಕಟ್ಟಿದ ಸುದ್ದಿಗಳು ಮಹತ್ವ ಪಡೆಯುತ್ತಿವೆ.
              ನಟ ಯಶ್ ನಟನೆಯಿಂದ ಒಂದು ಕ್ಷಣ ದೂರ ನಿಂತು ಘೋಷಣೆಯನ್ನೇ ಮಾಡಿಬಿಟ್ಟರು - 'ರಾಜ್ಯಾದ್ಯಂತ ಕೆರೆಗಳಿಗೆ ಕಾಯಕಲ್ಪ'. ಫೆಬ್ರವರಿ 28ರಂದು ಚಾಲನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ ಅಭಿವೃದ್ಧಿಗೆ ಮೊದಲ ಶ್ರೀಕಾರ. ಅವರ 'ಯಶೋಮಾರ್ಗ' ಸಂಸ್ಥೆಯ ಹೊಣೆ. ನಾಲ್ಕು ಕೋಟಿ ರೂಪಾಯಿ ವೆಚ್ಚದ ಯೋಜನೆ. ಯಶ್ ಅವರ ಸಂಕಲ್ಪದಂತೆ ಕೆರೆ ಅಭಿವೃದ್ಧಿಯಾದರೆ ನಲವತ್ತು ಗ್ರಾಮಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದು. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಇದೆಲ್ಲಾ ಅಂಕಿಅಂಶಗಳಷ್ಟೇ. ಇದು ಘೋಷಣೆಗಳ ಕಾಲ. ಜನ ನಂಬುವ ಸ್ಥಿತಿಯಲ್ಲಿಲ್ಲ. ಘೋಷಣೆ, ಆಶ್ವಾಸನೆಗಳನ್ನು ಕೇಳಿ ಕೇಳಿ ಜನ ರೋಸಿಹೋಗದ್ದಾರೆ. ಯಶ್ ಅವರ ಈ ಘೋಷಣೆ ಶೀಘ್ರ ಅನುಷ್ಠಾನ ಆಗಬೇಕಾದುದು ಮುಖ್ಯ. ಆದೀತೆಂದು ಆಶಿಸೋಣ.
                ಕಳೆದ ವರುಷ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧಾರವಾಡ ತಾಲೂಕಿನ ಐದು ಕೆರೆಗಳಿಗೆ ಕಾಯಕಲ್ಪ ನೀಡಿತ್ತು. ನೂರಾರು ವರುಷಗಳ ಇತಿಹಾಸವಿರುವ ಹೆಬ್ಬಳ್ಳಿ ಗ್ರಾಮದ ಕೆಂಗಳಮ್ಮನ ಕೆರೆಯಿಂದ ನೀರು ಬಳಸದೆ ಅರ್ಧ ಶತಮಾನವಾಗಿತ್ತು. ಈ ಗ್ರಾಮದ ಜನಸಂಖ್ಯೆ ಸುಮಾರು ಮೂರುವರೆ ಸಾವಿರ. ಕಾಲಗರ್ಭಕ್ಕೆ ಸೇರಿಹೋದ ಕೆರೆಯು ಜನರ ಮನಸ್ಸಿನಿಂದಲೂ ದೂರವಾಯಿತು. ಜಾಲಿಮರಗಳು ಹುಟ್ಟಿ ಕಾಡಾಯಿತು. ಜತೆಗೆ ಕೆರೆ ಒತ್ತುವರಿಯಾಯಿತು. ದನಕರುಗಳ ಮೇವು, ಸೌದೆ ಸಂಗ್ರಹಗಳಿಗೆ ಆಶ್ರಯವಾಗಿತ್ತು. ಪುಂಡಾಡಿಕೆಯ ತಾಣವಾಯಿತು. 2012ರಲ್ಲಿ ಒತ್ತುವರಿಯನ್ನು ತೆರವುಗೊಳಿಸಿದರೂ ಅಭಿವೃದ್ಧಿ ಕಾರ್ಯ ಆರಂಭವಾಗಿರಲಿಲ್ಲ. ಹೆಬ್ಬಳ್ಳಿಯ ಕೆರೆಯದ್ದು ಒಂದು ಮಾದರಿಯಷ್ಟೇ. ರಾಜ್ಯದ್ಯಂತ ಇಂತಹ ಕೆರೆಗಳು ಸಾವಿರಾರಿವೆ.
              ಯೋಜನೆಯ ನಿರ್ದೇಶಕ ಜಯಶಂಕರ ಶರ್ಮ ಕೆರೆಗಳ ಸ್ಥಿತಿಗತಿ ವಿವರಿಸುತ್ತಾರೆ, "ಮಹಾರಾಜರ ಆಡಳಿತದಲ್ಲಿ ಅಂತರ್ಜಲ ವೃದ್ಧಿ, ಜನ-ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಮತ್ತು ಕೃಷಿ ಉದ್ದೇಶಗಳಿಗೆ ನೀರಿನ ಬಳಕೆಯನ್ನು ಲಕ್ಷಿಸಿ ಕೆರೆ-ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಪ್ರಸ್ತುತ ಇರುವ ಕೆರೆಗಳು ನಿರ್ವಹಣೆಯ ಕೊರತೆಯಿಂದ ಹೂಳು ತುಂಬಿ ಆಟದ ಮೈದಾನಗಳಾಗಿವೆ. ಕೆಲವು ಉಳ್ಳವರ ಆಸ್ತಿಗಳಾಗಿವೆ! ಒಂದು ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಮೂರುವರೆ ಸಾವಿರಕ್ಕೂ ಮಿಕ್ಕಿ ಸಣ್ಣ ನೀರಾವರಿ ಕೆರೆಗಳಿವೆ. ಧಾರವಾಡ ಜಿಲ್ಲೆಯೊಂದರಲ್ಲೇ ನೂರಕ್ಕೂ ಹೆಚ್ಚು ಕೆರೆಗಳಿವೆ. ಇವುಗಳೆಲ್ಲಾ ಮಳೆಗಾಲದಲ್ಲಿ  ನೀರು ತುಂಬಿಕೊಂಡು ಅಂತರ್ಜಲ ವೃದ್ಧಿ ಕಾರ್ಯವನ್ನು ಸಹಜವಾಗಿ ಮಾಡುತ್ತಿದ್ದುವು."
              ಧಾರವಾಡ ತಾಲೂಕಿನ ಹೆಬ್ಬಳ್ಳಿ, ಮುಗುದ, ಹಳ್ಳಿಕೆರೆ, ಕೊಟಬಾಗಿ ಹಾಗೂ ತಿಮ್ಮಾಪುರ ಗ್ರಾಮದ ಐದು ಕೆರೆಗಳ ಹೂಳು ತೆಗೆದು ವರುಷವಾಗುತ್ತಾ ಬಂತು. ಕೆಲವು ಕೆರೆಗಳ ಸುತ್ತ ಹಣ್ಣು, ಹೂವು ಸಸಿಗಳ ನಾಟಿ. ಹೆಬ್ಬಳ್ಳಿಯ ಒಂದು ಕೆರೆ ತುಂಬಿತೆಂದರೆ ಸುತ್ತಲಿನ ನಲವತ್ತೊಂದು ಕೊಳವೆ ಬಾವಿಗಳು ಮರುಪೂರಣವಾದಂತೆ. ಮುಗುದ ಕೆರೆಯು ಆರುವತ್ತು ಕುಟುಂಬದ ಮೀನುಗಾರಿಕೆಗೆ ಆಸರೆ. ಹಳ್ಳಿಗೆರೆಯ ಕೆರೆಯಿಂದ ಸುತ್ತಲಿನ ಮೂವತ್ತೆಂಟು ಬೋರ್ವೆಲ್ಗಳು,. ಕೊಟಬಾಗಿ ಕೆರೆಯು ಇಪ್ಪತ್ತೆರಡು ಮತ್ತು ತಿಮ್ಮಾಪುರದ ಮೂವತ್ತು ಕೊಳವೆ ಬಾವಿಗಳಿಗೆ ಅಂತರ್ಜಲ ಪೂರೈಕೆಗೆ ಸಹಕಾರಿ. ಏನಿದ್ದರೂ ನಿರೀಕ್ಷಿತ ಫಲಿತಾಂಶಕ್ಕಾಗಿ ಒಂದೆರಡು ವರುಷ ಕಾಯಬೇಕು.
               ನಲವತ್ತು ವರುಷಗಳಿಂದ ಜನಪ್ರತಿನಿಧಿಗಳು ಹೆಬ್ಬಳ್ಳಿಯ ಕೆರೆ ಕಾರ್ಯವನ್ನು ಮುಂದೂಡುತ್ತಾ ಬಂದಿದ್ದಾರೆ. ಯೋಜನೆಯ ಪ್ರವೇಶದಿಂದ ಮತ್ತು ಕೆಲವು ಸಂಸ್ಥೆಗಳ ಸಹಕಾರದಿಂದ ಕೆರೆ ಪುನರುಜ್ಜೀವನ ಗೊಂಡಿತು. ಒಂದು ಕೆರೆ ಅಭಿವೃದ್ಧಿ ಅಂದರೆ ಒಂದು ದೇವಾಲಯ ಕಟ್ಟಿದಂತೆ., ಹೆಬ್ಬಳ್ಳಿ ಶ್ರೀ ಶಿವಾನಂದ ಮಠದ ಶ್ರೀ ಬ್ರಹ್ಮಾನಂದ ಸ್ವಾಮಿಗಳ ಅಭಿಮತ. ಯೋಜನೆಯು ಕನ್ನಾಡಿನ ವಿವಿಧ ಜಿಲ್ಲೆಗಳಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಸ್ಥಳೀಯರೊಂದಿಗೆ ಕೈ ಜೋಡಿಸುತ್ತಾ ಬಂದಿದೆ. ಈ ಹೂಳೆತ್ತುವ ಕೆಲಸಗಳ ಪ್ರಯೋಜನಗಳ ವಸ್ತುಸ್ಥಿತಿ ಅರಿಯಲು ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರು ಸ್ವತಃ ಕ್ಷೇತ್ರ ಸಂದರ್ಶನ ಮಾಡುತ್ತಿರುವುದರಿಂದ ಈ ಕುರಿತ ಅರಿವಿಗೆ ವೇಗ ಹೆಚ್ಚಿದೆ. ವೈಯಕ್ತಿಕವಾಗಿ ಜಲಮೂಲಗಳನ್ನು ಸಂರಕ್ಷಿಸುವ ನೈತಿಕ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ಹೊರಬೇಕು.
               ಗ್ರಾಮಾಭಿವೃದ್ಧಿ ಯೋಜನೆಯಂತೆ ಜಲಕಾಯಕವನ್ನು ತಪಸ್ಸಿನಂತೆ ಮಾಡುವ ಖಾಸಗಿ ಸಂಸ್ಥೆಗಳ ಕೆಲಸಗಳು ಸದ್ದಾಗುವುದಿಲ್ಲ. ಸರಕಾರಿ ಮಟ್ಟದ ಜಲ ಕಾಯಕಗಳು ಪತ್ರಿಕೆಗಳಲ್ಲಿ ಮಾತ್ರ ಸದ್ದಾಗುತ್ತಿವೆ. ಅದು ಜನರ ಮನಸ್ಸಿನಲ್ಲಿ ಸದ್ದಾಗಬೇಕು. ಅವರು ಅದಕ್ಕೆ ಸ್ಪಂದಿಸಬೇಕು. ಅರಿವನ್ನು ಮೂಡಿಸಬೇಕು. ಆದರೆ ಹಾಗಾಗುತ್ತಿಲ್ಲ. ಕೆರೆಗಳ ಹೂಳು ತುಂಬಿದಷ್ಟೂ ತಮ್ಮ ಜನನಾಯಕರಿಗೆ ಖುಷಿ! ಯಾಕೆ ಹೇಳಿ? ದಾಖಲೆಗಳಲ್ಲಿ ಪ್ರತೀವರುಷ ಹೂಳು ತೆಗೆಯುತ್ತಲೇ ಇರುತ್ತಾರೆ!
               ಐದು ವರುಷದ ಹಿಂದೆ ಹಿರಿಯ ಪರ್ತಕರ್ತ ನಾಗೇಶ ಹೆಗಡೆಯವರು ಆಡಳಿತ ವ್ಯವಸ್ಥೆಯ ಹೂಳಿನ ಚಿತ್ರಣವನ್ನು ಒಂದೆಡೆ ಉಲ್ಲೇಖಿಸಿದ್ದರು - ನಮ್ಮ ಪಂಚಾಯತ್ಗಳಲ್ಲಿ ಚೆಕ್ಡ್ಯಾಮ್ ಕಟ್ಟಲು, ಹೂಳೆತ್ತಲು ಹಣ ಎಲ್ಲಿದೆ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ನಮ್ಮ ದೊಡ್ಡ 'ಜಲಾಶಯ'ಗಳತ್ತ ನೋಡೋಣ. ಕೇಂದ್ರ ಬಜೆಟ್ ದಾಖಲೆಗಳ ಪ್ರಕಾರ, ಹಿಂದಿನ ವರುಷ ದೊಡ್ಡ ಕಂಪೆನಿಗಳಿಂದ ಬರಬೇಕಿದ್ದ - ಆದರೆ ಸಂಗ್ರಹಿಸಲಾಗದೆ ಕೈಬಿಡಲಾದ ವರಮಾನ ತೆರಿಗೆ, ಅಬಕಾರಿ ಸುಂಕದ ಮೊತ್ತ 4,87,112 ಕೋಟಿ ರೂಪಾಯಿ. ಅದೂ ಒಂಥರಾ ಹೂಳು ತಾನೆ? ಹೀಗೆ ಆರೇಳು ವರುಷಗಳ ಲೆಕ್ಕ ನೋಡಿದಾಗ ಹೀಗೆ ಕೈಬಿಟ್ಟ ಹಣದ ಮೊತ್ತ ಇಪ್ಪತ್ತೈದು ಲಕ್ಷ ಕೋಟಿಗೂ ಮಿಕ್ಕಿ! ಈಗಂತೂ ಈ ಸಂಖ್ಯೆ ದುಪ್ಪಟ್ಟಾಗಿರಬಹುದು. ಆ ಹೂಳನ್ನು ಮೇಲಕ್ಕೆತ್ತಿ ಸಂಗ್ರಹಿಸಿ ಪಂಚಾಯ್ತಿಗಳಿಗೆ ವಿತರಿಸಿದರೆ ದೇಶದ ಎಲ್ಲಾ ಕೆರೆಕಟ್ಟೆಗಳೂ ಸದಾ ತುಂಬಿರುತ್ತವೆ. ಬರ ಅಥವಾ ಮಹಾಪೂರದ ಸಮಸ್ಯೆಯೇ ಇರುವುದಿಲ್ಲ.

Tuesday, August 1, 2017

ಕಾಡು ಹಣ್ಣುಗಳ ಕಾರುಬಾರು!




ಹೊಸದಿಗಂತದ 'ಮಾಂಬಳ' ಅಂಕಣ  / 22-3-2017

              ಕಳೆದ ವರುಷದ ಮೇ-ಜೂನ್ ತಿಂಗಳು. ನಗರದಲ್ಲಿ ವಾಸ ಮಾಡುವ ಕೃಷಿ ಮೂಲದ ಒಂದು ಕುಟುಂಬದ ಸದಸ್ಯರು ಶುಭ ಕಾರ್ಯಕ್ಕಾಗಿ ಹಳ್ಳಿಗೆ ಬಂದಿದ್ದರು. ನಗರದ ಸಂಸ್ಕೃತಿಯಲ್ಲೇ ಬೆಳದ ಮೂರ್ನಾಲ್ಕು ಮಕ್ಕಳೂ ಜತೆಗಿದ್ದರು. ಮದುವೆ ಮನೆ ಅಂದಾಗ ಕೇಳಬೇಕೇ? ಮಕ್ಕಳ ಗುಲ್ಲು, ಗಲಾಟೆ. ಜತೆಗೆ ಬೇಸಿಗೆ ಕಾಲ. ಕಾಡುಹಣ್ಣುಗಳ ಸೀಸನ್. ಯಾವ ಮರದಲ್ಲಿ ಯಾವ ರುಚಿಯ ಹಣ್ಣು ಇದೆಯೆಂಬುದು ಹಳ್ಳಿಯಲ್ಲೇ ಬೆಳೆದ ಮಕ್ಕಳಿಗೆ ಗೊತ್ತಿದೆ.
                ಮಕ್ಕಳ ಮಕ್ಕಳಾಟಕ್ಕೆ ಸಾಥ್ ಆಗಿದ್ದೆ. ಹತ್ತಾರು ಮಕ್ಕಳು ಸನಿಹದ ಗುಡ್ಡದಲ್ಲಿ ಕೋತಿಗಳಾಗಿದ್ದರು! ಕಾಡು ಹಣ್ಣುಗಳ ಬೇಟೆ ಶುರುವಾಗಿತ್ತು. ನಗರದಿಂದ ಬಂದವರು ಅವಾಕ್ಕಾಗಿ ನೋಡುತ್ತಿದ್ದರು. ಪಾಪ, ಅವರಿಗೆ ಕಾಡುಗಳ ಪರಿಚಯವಿಲ್ಲ. ಇರಲೂ ಸಾಧ್ಯವಿಲ್ಲ ಬಿಡಿ. ಸೇಬು, ದ್ರಾಕ್ಷಿ, ಕಿತ್ತಳೆ, ಮುಸುಂಬಿ... ಹೊರತಾದ, ಅದರಲ್ಲೂ ಕಾಡುಗಣ್ಣುಗಳ ರುಚಿಗಳನ್ನು ಸವಿದು ಗೊತ್ತಿಲ್ಲ. ಅಂದು ಅಪರೂಪದ್ದಾದ ಮಡಕೆ ಹಣ್ಣು ಮಕ್ಕಳ ಹಿಡಿಯಲ್ಲಿತ್ತು.  ನಗರದಿಂದ ಬಂದಿದ್ದರಲ್ಲಾ, ಆ ಚಿಣ್ಣರಿಗೆ ಈ ಹಣ್ಣನ್ನು ನೀಡಿದಾಗ ತಿನ್ನಲು ಹಿಂದೆ ಸರಿದರು. ರುಚಿಯ ಅನುಭವ ಇಲ್ಲದೆ ಕಚ್ಚಿ ಉಗುಳಿದರಷ್ಟೇ. ನನಗನ್ನಿಸಿತು, ಕಾಡುವ ಕಾಡು ಹಣ್ಣುಗಳ ರುಚಿ, ಮತ್ತು ಕಾಡಿನಲ್ಲಿ ಕಳೆಯುವ ಬಾಲ್ಯವನ್ನು ನಗರ ಕಸಿದುಕೊಂಡಿತಲ್ಲಾ.!
                ಎಲ್ಲಾ ಹಣ್ಣುಗಳಲ್ಲಿ ಒಂದೊಂದು ಗುಣ, ರುಚಿ. ಅದರಲ್ಲೂ ಮಡಕೆ ಹಣ್ಣು ತುಂಬಾ ಇಷ್ಟವಾಯಿತು. ಅದರ ಗಾತ್ರ, ನೋಟಕ್ಕೆ ಮರುಳಾಗಿದ್ದೆ. ಅದರ ಗುಣಗಳ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ವಿಚಾರಗಳಿವೆ. ವಿದ್ಯಾರ್ಥಿಗಳಲ್ಲಿ ಒಂದು ಪ್ರಶ್ನೆ ಕೇಳಿ - ಮಡಕೆ ಹಣ್ಣು ನೋಡಿದ್ದೀರಾ? ಮುಖ ಮುಖ ನೋಡಿಯಾರಷ್ಟೇ. ನಗರದ ವಿದ್ಯಾರ್ಥಿಗಳೇ ಆಗಬೇಕಿಲ್ಲ. ಗ್ರಾಮೀಣ ವಿದ್ಯಾರ್ಥಿಗಳನ್ನೇ ಕೇಳಿ? ಉತ್ತರಿಸುವುದಕ್ಕೆ ಕಷ್ಟಪಡುತ್ತಾರೆ. ಯಾಕೆಂದರೆ ಈಗ ಹಳ್ಳಿಯಲ್ಲೂ ನಗರದ ಮನಃಸ್ಥಿತಿ ಬೆಳೆಯುತ್ತಿದೆ. ಮಡಕೆ ಹಣ್ಣು ಬಿಡಿ, ಮಣ್ಣಿನ ಮಡಕೆಯೂ ನೋಡಲಾರದಂತಹ ಬದುಕನ್ನು ಕಾಂಚಾಣ ತೆಕ್ಕೆಗೆ ಸೇರಿಸಿಕೊಂಡಿದೆ.
                ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮಡಕೆ ಹಣ್ಣು ಲಭ್ಯ. ಜುಲೈ ವರೆಗೂ ವಿರಳವಾಗಿ ಸಿಗುತ್ತದೆ. ಚಿಕ್ಕ ಗಿಡ. ಸುಲಿದ ಚಾಲಿ ಅಡಿಕೆಯಷ್ಟು ದೊಡ್ಡ ಗಾತ್ರದ ಹಣ್ಣು. ಬಲಿತ ಕಾಯಿಗೆ ಹಸಿರು ಬಣ್ಣ. ಹಣ್ಣಾದರೆ ಮಣ್ಣಿನ ವರ್ಣ. ಆಕರ್ಷಕ ನೋಟ. ಬಿಳಿ-ಹಳದಿ ಮಿಶ್ರಿತ ಗುಳ. ಹುಳಿ ಮಿಶ್ರಿತ ಸಿಹಿ ರುಚಿ. ಹಣ್ಣಿನ ಬಣ್ಣವು ಮಕ್ಕಳನ್ನು ಸೆಳೆಯುತ್ತದೆ. ನೆಟ್ಟು ಬೆಳೆಸುವಂತಹುದಲ್ಲ. ಗೊಬ್ಬರ ಕೊಟ್ಟು ಬೆಳೆಸಿದವರಿದ್ದಾರೆ. ಹೇಳುವಂತಹ ಬೆಳವಣಿಗೆಯಿಲ್ಲ. ಇವೆಲ್ಲಾ ಕಾಡಿನ ವಾಸಿಗರು. ಹಾಗಾಗಿ ಕಾಡಿನ ವಾತಾವರಣ ಬೇಕು. ಕಾಡುಪ್ರಾಣಿ, ಪಕ್ಷಿಗಳು ಕಾಡುಹಣ್ಣಿನ ಮೊದಲ ಗಿರಾಕಿಗಳು. ಮಿಕ್ಕುಳಿದರೆ ಮಕ್ಕಳಿಗೆ ಆಹಾರ.
               ಬಾಲ್ಯದ ಶಾಲಾ ದಿನಗಳು ನೆನಪಾಗುತ್ತವೆ. ದಾರಿಯ ಇಕ್ಕೆಲೆಗಳಲ್ಲಿ ಎಷ್ಟೊಂದು ಹಣ್ಣುಗಳು. ನೇರಳೆ ಹಣ್ಣು,     ಮುಳ್ಳು ಅಂಕೋಲೆ ಹಣ್ಣು, ಮುಳ್ಳಿನೆಡೆಯಿಂದ ಇಣುಕುವ 'ಬೆಲ್ಲಮುಳ್ಳು', ಹುಳಿಮಜ್ಜಿಗೆ ಕಾಯಿ, ಕೇಪುಳ ಹಣ್ಣು, ಜೇಡರ ಬಲೆಯ ಒಳಗಿರುವಂತೆ ಕಾಣುವ 'ಜೇಡರ ಹಣ್ಣು', ನೆಲ್ಲಿಕಾಯಿ, ಹುಣಸೆ, ಅಂಬಟೆ, ನಾಣಿಲು, ಚೂರಿ ಮುಳ್ಳಿನ ಹಣ್ಣು, ಅಬ್ಳುಕ, ಪೇರಳೆ, ಹೆಬ್ಬಲಸು, ಪುನರಪುಳಿ, ರಂಜೆ, ಕೊಟ್ಟೆಮುಳ್ಳು, ಶಾಂತಿಕಾಯಿ..ಗಳ ಸಿಹಿ-ಹುಳಿ ರುಚಿಗಳನ್ನು ಸವಿದ ನಾಲಗೆಗಳ ಭಾಗ್ಯ. ಮಲೆನಾಡಿಗರಿಗೆ ಮೊಗೆದು ತಿನ್ನುವಷ್ಟು ಹಣ್ಣುಗಳ ಸಂಪತ್ತಿದೆ.
             ಶರೀರಕ್ಕೆ ಬೇಕಾದ ವಿಟಮಿನ್ಗಳು ಹಣ್ಣಿನ ಸಹವಾಸದಲ್ಲಿ ಲಭ್ಯ. 'ಎ', 'ಬಿ'.. ಮಿಟಮಿನ್ ಅಂತ ಹೆಸರಿಸಲು ಬಾರದಿರಬಹುದು. ಆದರೆ ಸಣ್ಣಪುಟ್ಟ ದೇಹದ ಆರೋಗ್ಯದ ವ್ಯತ್ಯಾಸಗಳಿಗೆ ಇಂತಹುದೇ ಹಣ್ಣು ತಿನ್ನಬೇಕು ಎಂಬುದು ಹಿರಿಯರಿಗೆ ಗೊತ್ತಿತ್ತು. ಉದಾ: ಬಾಯಿಹುಣ್ಣು ಬಂದಾಗ 'ಕೊಟ್ಟೆಮುಳ್ಳು ಹಣ್ಣು' ತಿನ್ನಲೇ ಬೇಕು ಅಂತ ಅಮ್ಮ ಹೇಳುತ್ತಿದ್ದುರು.
ದ.ಕ.ಜಿಲ್ಲೆಯ ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್ ಹೇಳಿದ ಮಾತು ನೆನಪಾಗುತ್ತದೆ, ಮನೆಯ ಎದುರು ಒಂದು ಚೆರ್ರಿ ಹಣ್ಣಿನ ಮರವರಲಿ. ಇದರ ಹಣ್ಣುಗಳು ಮಕ್ಕಳಿಗೆ ಖುಷಿ ಕೊಡುತ್ತದೆ. ಹೇರಳವಾದ ವಿಟಮಿನ್ ಹಣ್ಣಿನಲ್ಲಿದೆ. ವಿಟಮಿನ್ನಿಗಾಗಿ ಮಾತ್ರೆಗಳನ್ನು ತಿನ್ನುವುದಕ್ಕಿಂತ ಇದು ಎಷ್ಟೋ ವಾಸಿ. ಮೊದಲು ಅಮ್ಮಂದಿರಿಗೆ ಚೆರ್ರಿ ಹಣ್ಣು ತಿಂದು ಅಭ್ಯಾಸವಾಗಬೇಕು. ಆಗಷ್ಟೇ ಮಕ್ಕಳಿಗದು ತಿನ್ನಬೇಕೂಂತ ಕಾಣಬಹುದು.
              ಕೊಡಗಿನ ಕಾಡುಗಳಲ್ಲಿ ನುಚ್ಚಕ್ಕಿ ಹಣ್ಣು ಸಾಮಾನ್ಯ. ಮೂರು ವಿಧದ ರಾಸ್ಬೆರಿ. ಕಪ್ಪು ವರ್ಣದ ಮೈಸೂರು ರಾಸ್ಬೆರಿ. ಹಿಮಾಲಯ ಮೂಲದ ಹಳದಿ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚು ಕಂಡು ಬರುವ ಕೆಂಪು ಬಣ್ಣದವು. ಇವು ಮೂರೂ ಕೊಡಗಿನಲ್ಲಿವೆ. ಇದು ಇಲ್ಲಿಗೆ ಅಪರೂಪದ್ದು ಎನ್ನುವ ಅರಿವು ಇಲ್ಲದ್ದರಿಂದ ಕಾಡು ಹಣ್ಣು ಕಾಡಲ್ಲೇ ಮಣ್ಣಾಗುತ್ತಿವೆ, ಎಂದು ವಿಷಾದಿಸುತ್ತಾರೆ ಮಡಿಕೇರಿಯ ಇಂಜಿನಿಯರ್ ಕೃಷಿಕ ಶಿವಕುಮಾರ್.
                   ಕಾಡು ಹಣ್ಣುಗಳ ಹಿಂದೆ ರೋಚಕವಾದ ಬಾಲ್ಯವಿದೆ, ಕಾಲದ ಕಥನವಿದೆ. ಕಾಡುವ ನೆನಪಿದೆ. ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಭವಗಳು. ಒಂದು ಕಾಲಘಟ್ಟದಲ್ಲಿ ಮಾವು, ಹಲಸು ಬಿಟ್ಟರೆ ಮಿಕ್ಕಂತೆ ನಾಲಗೆಯ ರುಚಿಗಳನ್ನು ಕಾಡು ಹಣ್ಣುಗಳು ನೀಗಿಸುತ್ತಿದ್ದುವು. ವಿಷರಹಿತವಾದ, ನೈಸರ್ಗಿಕವಾದ ಹಣ್ಣುಗಳು ಆರೋಗ್ಯಕ್ಕೂ ದೊಡ್ಡ ಕಾಣ್ಕೆ ನೀಡಿತ್ತು.
              ರಬ್ಬರ್ ಕೃಷಿಯ ಭರಾಟೆ ಶುರುವಾದುವಲ್ಲಾ. ಗಿಡಗಳನ್ನು ಬೆಳೆಸುವ ಧಾವಂತದಲ್ಲಿ ಗುಡ್ಡಗಳೆಲ್ಲಾ ನುಣುಪಾದುವು. ಇತರ ಮರಗಳೊಂದಿಗೆ ಹಣ್ಣು ನೀಡುವ ಮರಗಳೂ ನೆಲಕ್ಕೊರಗಿವೆ. ಇವುಗಳನ್ನೇ ತಿಂದು ಬದುಕುವ ಕಾಡು ಪ್ರಾಣಿಗಳು ನಾಡಿಗೆ ಬಂದಿವೆ. 'ಛೇ.. ಮಂಗಗಳು, ಹಂದಿಗಳು ಎಲ್ಲಾ ಹಾಳು ಮಾಡುತ್ತವಲ್ಲಾ..' ಅಂತ ಮರುಗುವ ನಮಗೆ ಕಾಡು ಕಡಿಯಲು ಅಧಿಕಾರವಿದೆ. ಒಂದು ಗಿಡವನ್ನಾದರೂ ನೆಟ್ಟು ಪೋಶಿಸಲು ಮನಸ್ಸು ಇದೆಯಾ?
             ಒಂದೊಂದು ಜಿಲ್ಲೆಯಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳಿಂದ ಕೂಡದ ಕಾಡು ಹಣ್ಣುಗಳಿವೆ. ಅವೆಲ್ಲ ನೆಟ್ಟು ಬೆಳೆಸುವುಂತಹುದಲ್ಲ. ಕಾಡಿನ ಮಧ್ಯೆ ಅವು ಕೂಡಾ ಕಾಡಾಗಿ ಬೆಳೆಯುತ್ತವೆ. ನಾವು ಕಾಡೊಳಗೆ ಹೊಕ್ಕರೆ ಮಾತ್ರ ಅವರು ಗೋಚರ. ಸರಕಾರದಿಂದ ಒಂದು ಕಡಿತಲೆಯ ಆದೇಶ ಬಂದರೆ ಸಾಕು, ಇಡೀ ಮರವನ್ನೇ ನಾಶ ಮಾಡಿ ನುಂಗುವ ನುಂಗಣ್ಣಗಳಿಂದ ಕಾಡಿನ ದಟ್ಟತ ಕಡಿಮೆಯಾಗುತ್ತಿದೆ. ಜತೆಗೆ ಅವುಗಳನ್ನೇ ಆಸರೆಯಾಗಿ ಬೆಳೆಯುವ ಕಾಡುಹಣ್ಣುಗಳ ವೈವಿಧ್ಯತೆಯೂ ಮಣ್ಣುಪಾಲಾಗುತ್ತಿವೆ.
            ಎರಡು ವರುಷಗಳ ಹಿಂದೆ ಕಾಡು ಹಣ್ಣುಗಳನ್ನು ನೆನಪಿಸುವ ಕಾರ್ಯಾಗಾರವೊಂದನ್ನು ದ.ಕ. ಜಿಲ್ಲೆಯ ಅಳಿಕೆ ಸನಿಹದ ಕೇಪು-ಉಬರು ಹಲಸು ಸ್ನೇಹಿ ಕೂಟವು ಆಯೋಜಿಸಿತ್ತು. ಕೊಡಗಿನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲೂ ಕಾಡು ಹಣ್ಣುಗಳ ಕಾರ್ಯಗಾರ ನಡೆದಿತ್ತು.