Saturday, October 17, 2009

'ನಮ್ಮ ಅಡುಗೆಗೆ ನಮ್ಮದೇ ತರಕಾರಿ'


ಸೆಪ್ಟೆಂಬರ್ ಕೊನೆ ವಾರ ನಾಲ್ಕು ದಿವಸ ಧಾರವಾಡ ಕೃಷಿ ವಿಶ್ವವಿದ್ಯಾಲಯದ 'ಕಾಲಾವಧಿ ಕೃಷಿಮೇಳ' ನಡೆಯಿತು. ಐದು ಲಕ್ಷಕ್ಕೂ ಮಿಕ್ಕಿ ರೈತರು ಬಂದಿದ್ದರು ಅಂತ ವಿವಿಗೆ ಸಂತಸ-ಹೆಮ್ಮೆ. ಈ ಸಂಭ್ರಮದ ಮಧ್ಯೆ 'ಮಹಾಮಳೆ'ಗೆ ಕೃಷಿಮೇಳವು ಕೊಚ್ಚಿಹೋದ ವಿಚಾರ ಸದ್ದಾಗಲೇ ಇಲ್ಲ! ಈಗಂತೂ ಈ ಮಧ್ಯೆ ಧಾರವಾಡ ವಿಕಾಸ ಗಾಮೀಣ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ಸಿಕ್ಕರು. ಅವರು ಸಿಕ್ಕಾಗಲೆಲ್ಲಾ 'ನಮ್ಮಲ್ಲಿ ಈ ವರುಷ ಬರೋಬ್ಬರಿ ಟೊಮೆಟೋ ಆಯ್ತು, ಸಿಕ್ಕಾಪಟ್ಟೆ ಫ್ಯಾಷನ್ಫ್ರುಟ್ ಆಯ್ತು..' ಹೀಗೆ ಹೊಸ ಹೊಸ ಸುದ್ದಿ ಹೇಳುತ್ತಾ ಇರುತ್ತಾರೆ. ಈ ಸಲ ಅವರ 'ಪೇಟೆ ಕೃಷಿ' ನೋಡೇ ಬಿಡೋಣ ಅನ್ನುತ್ತಾ ನಿಂತದ್ದು 'ಕಲ್ಯಾಣಿ' ಮುಂದೆ.
ಗುನಗಾ ಅವರಿಗೆ 'ಕಲ್ಯಾಣಿ' ಎದ್ದು ನಿಂತಾಗ ಖುಷಿಯಾಗಲಿಲವಂತ್ಲೆ! ಕಾರಣ, ಹಸಿರೆಲ್ಲೆಬ್ಬಿಸಲಿ ಎಂಬ ಚಿಂತೆ. 1300 ಚದರಡಿ ಜಾಗದೊಳಗೆ ಬಂಧಿಯಾಗಿದ್ದಳು ಕಲ್ಯಾಣಿ. ಮನೆಸುತ್ತ ಓಡಾಡಲು ಮೂರಡಿ ಅಗಲದಷ್ಟು ಜಾಗ. ಕಲ್ಲುಹಾಸು. ಒಂಚೂರು ಮಣ್ಣಿಲ್ಲ. ಆವರಣಕ್ಕೆ ತಾಗಿಕೊಂಡಿರುವ ಕಲ್ಲುಹಾಸನ್ನು ಎರಡಡಿ ಅಗಲಕ್ಕೆ ಕತ್ತರಿಸಿ, ಅದಕ್ಕೆ ಮಣ್ಣನ್ನು ಪೇರಿಸಿದರು. ಸೊಪ್ಪು-ಬಳ್ಳಿ-ತರಕಾರಿ ಬೀಜಗಳನ್ನು ಹಾಕಿದರು. ಬಾಳೆ, ತೆಂಗು ಊರಿದರು. ಆರು ತಿಂಗಳಲ್ಲಿ ಹಸಿರೆದ್ದಾಗ ಖುಷಿಯೋ ಖುಷಿ. 'ನಾವೀಗ ಅಡುಗೆ ಮನೆಗೆ ಹೊರಗಿನಿಂದ ತರಕಾರಿ ತರುವುದೇ ಇಲ್ಲ' ಮನೆಯೊಡತಿ ಸುಮಾ.
ವಾರಕ್ಕೊಮ್ಮೆ ದಂಪತಿಗಳ ಸೆಗಣಿ ಬೇಟೆ! ರವಿವಾರ ಬೆಳ್ಳಂಬೆಳಗ್ಗೆ ಒಂದು ಗಂಟೆ ಸುತ್ತಾಟ. ಸೆಗಣಿ ಸಂಗ್ರಹ. 'ಈ ಬ್ಯಾಂಕ್ ಅಧಿಕಾರಿಗೆ ಕೈತುಂಬಾ ಸಂಬಳ ಸಿಗುತ್ತೆ. ಸೆಗಣಿಯಿಂದ ಕೈಯೆಲ್ಲಾ ಗಲೀಜು ಮಾಡ್ಕೋತಾರೆ. ಎಂತಾ ಮನುಷ್ಯರಪ್ಪಾ...' ಗೇಲಿ ಮಾಡ್ತಾರಂತೆ.
ಮನೆ ಕಟ್ಟುವಾಗಲೇ ಮಳೆಕೊಯ್ಲಿಗೆ ವ್ಯವಸ್ಥೆ. ಅಡುಗೆ ಮನೆ ನೀರು, ಸ್ನಾನದ ನೀರು ವ್ಯರ್ಥವಾಗದೆ ಗಿಡಗಳಿಗೆ ಉಣಿಕೆ. ಮನೆ ಹಿಂಭಾಗ ಚಿಕ್ಕ-ಚೊಕ್ಕ ಕಂಪೋಸ್ಟ್ ಹೊಂಡ. ಸೆಗಣಿಯೊಂದಿಗೆ ಅಡುಗೆ ತ್ಯಾಜ್ಯ, ಕಸ-ಕಡಿಗಳು ಗೊಬ್ಬರವಾಗುತ್ತವೆ. 'ಒಂದು ಬಕೆಟ್ ದ್ರವಸೆಗಣಿಗೆ ಒಂದು ಕಿಲೋ ಕಡ್ಲೆ ಹಿಟ್ಟನ್ನು ಬೆರೆಸಿ ಮೂರು ದಿವಸ ಇಟ್ಟು, ನಂತರ ಅದನ್ನು ತಿಳಿಗೊಳಿಸಿ ಎಲ್ಲಾ ಗಿಡಗಳಿಗೆ ಹಾಕಿದ್ದೇನೆ. ನಿರೀಕ್ಷೆಗಿಂತ ಮೀರಿ ಇಳುವರಿ ನೀಡುತ್ತಿದೆ. ಎರೆಹುಳ ಹೆಚ್ಚಾಗಿದೆ.' ಎನ್ನುತ್ತಾ ಸಿಹಿಗುಂಬಳ ಬಳ್ಳಿಯನ್ನು ತೋರಿಸುತ್ತಾರೆ ಗುನಗಾ.
ಒಂದೇ ಬಳ್ಳಿಯಲ್ಲಿ ಹತ್ತಕ್ಕೂ ಮಿಕ್ಕಿ ಕಾಯಿಗಳು. 'ಇದಕ್ಕಿಂತಲೂ ಹೆಚ್ಚು ಬೆಳೆಯಬಹುದು. ನನ್ನದೇನೂ ಮಹಾ ಅಲ್ಲ. ಆದರೆ ನಗರದ ಮಧ್ಯೆ ಹೇಳುವಂತಹ ಕೃಷಿ ಸಂಪನ್ಮೂಲಗಳ ಅಲಭ್ಯತೆಯಲ್ಲಿ ಇಷ್ಟು ಕಾಯಿ ಬಿಟ್ಟಿರೋದೇ ಹೆಚ್ಚು' ತಾರಸಿಯಲ್ಲಿ ಟೊಮೆಟೋ ಮಡಿ. ಬೇಕಾದಷ್ಟು ಪ್ರಮಾಣದ ಪ್ಲಾಸ್ಟಿಕ್ ಶೀಟನ್ನು ನೆಲಕ್ಕೆ ಹಾಸುತ್ತಾರೆ. ಅದರ ಸುತ್ತಲೂ ಹೋಮಕುಂಡದಂತೆ ಇಟ್ಟಿಗೆಗಳನ್ನು ಪೇರಿಸುತ್ತಾರೆ. ಮಣ್ಣು ಮತ್ತು ಸೆಗಣಿ ಮಿಶ್ರಣವನ್ನು ಮಧ್ಯಕ್ಕೆ ಹಾಕಿ, ಟೊಮೆಟೋ ಬೀಜ ಬಿತ್ತಿದ್ದಾರೆ. ಎರಡ್ಮೂರು ದಿವಸಗಳಿಗೊಮ್ಮೆ ಬುಡವನ್ನು ಕೆದಕಬೇಕು. 'ಟೊಮೆಟೊ ತಾವೂ ತಿಂದು, ಪಕ್ಕದ ಮನೆಯವರಿಗೂ ಕೊಟ್ಟು ಮತ್ತಷ್ಟು ಉಳಿಯುತ್ತದೆ' ಮಗಳು ಮಧುರಾ.
ಹಸಿರು ತರಕಾರಗೂ ಇಂತಹುದೇ ಮಡಿ. ಹಂಚಿ ತಿನ್ನುವ ಗುಣ ಇವರಿಗಿದ್ದುದರಿಂದ, ತರಕಾರಿ ಹೆಚ್ಚು ಫಲ ಕೊಟ್ಟಷ್ಟೂ ನೆರೆ-ಕರೆಯವರಿಗೆ ಖುಷಿ! ಬದನೆ, ಬೆಂಡೆ, ಅಲಸಂಡೆ, ಒಂದೆಲಗ, ಹರಿವೆ, ಟೊಮೆಟೋ, ಅವರೆ, ಫ್ಯಾಶನ್ಫ್ರುಟ್, ಗಾಂಧಾರಿ, ಬಾಳೆ, ಕೆಸು, ಕುಂಬಳಕಾಯಿ, ಪಪ್ಪಾಯಿ, ಮರಗೆಣಸು....ಒಂದೇ, ಎರಡೇ. 'ನಮ್ಮ ಅಡುಗೆಗೆ ನಮ್ಮದೇ ತರಕಾರಿ.' ಉಂಡಾದ ಬಳಿಕ ವೀಳ್ಯ ಹಾಕಲು ವೀಳ್ಯದೆಲೆ ಬಳ್ಳಿ!
ಗುನಗಾ ಕಸಿ ಅನುಭವಿ. ಕಾಡು ಬದನೆಗೆ ಟೊಮ್ಯಾಟೊ ಕಸಿ. ಒಂದೇ ಗಿಡದಲ್ಲಿ ಬದನೆ ಮತ್ತು ಟೊಮೆಟೋ. ಇನ್ನೊಂದರಲ್ಲ್ಲಿ ಟೊಮೆಟೋ ಮತ್ತು ಊರ ಬದನೆ. ತ್ರೀ ಇನ್ ವನ್! 'ಚಿಕ್ಕ ಜಾಗದ ಕೃಷಿಗೆ ಕಸಿ ಸೂಕ್ತ.' ಗುನಗಾ ಸಲಹೆ. 'ಕಲ್ಯಾಣಿ'ಗಿಂತ ಮೊದಲು ಉಲ್ಲಾಸರಿಗೆ ಬಾಡಿಗೆ ಮನೆ ವಾಸ. ಅಲ್ಲಿಯೂ ಕೃಷಿ, ಕಸಿ. ಸ್ವಂತ ಮನೆಗೆ ಬಂದಾಗ ಯಾವ ಗಿಡವನ್ನೂ ತಂದಿಲ್ಲ. ಎಲ್ಲವೂ ಹೊಸದೇ. ಇವರ ಮನೆಕೃಷಿಯಿಂದ ಒಂದಷ್ಟು ಮಂದಿ ಪ್ರೇರಿತರಾಗಿ ತಾವೂ ಗಿಡ ನೆಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ.
'ಪೇಟೆ ಮನೆಯ ಸುತ್ತ ಕ್ಲೀನ್ ಇರಬೇಕು. ಯಾವುದೇ ಗಿಡ ಇರಬಾರದು. ಗಿಡವಿದ್ದರೆ ಹಾವು ಬರುತ್ತದೆ, ಸೊಳ್ಳೆ ಹೆಚ್ಚಾಗುತ್ತದೆ ಎಂಬ ಒಣಭ್ರಮೆ ಕೆಲವರಿಗಿದೆ.' ಗುನಗಾ ವಿಷಾದ. 'ನನ್ನದು ನಿಜವಾದ ಶೂನ್ಯ ಕೃಷಿ! ಯಾಕೆಂದರೆ ಏನೂ ವೆಚ್ಚ ಮಾಡಿಲ್ಲ.' ಎನ್ನುತ್ತಾರೆ. 'ಮನೆಯಲ್ಲಿ ಜಾಗವಿಲ್ಲ, ನಮಗೆ ಪುರುಸೊತ್ತಿಲ್ಲ, ನೀರೆಲ್ಲಿದೆ....' ಎನ್ನುವ ಮಂದಿಗೆ ಗುನಗಾರ ಮನೆಕೃಷಿಯಲ್ಲಿ ಸಂದೇಶವಿದೆ. ಮನೆಯಲ್ಲಿ ಜಾಗ ಸಿಗಬೇಕಾದರೆ ಮನದಲ್ಲಿ ಜಾಗ ಕೊಡಿ!


1 comments:

nagaraj said...

tumba chennagide...

Post a Comment