Wednesday, November 21, 2012

ಸ್ಪಂದನ ವಾಹಿನಿಯಲ್ಲಿ ಯಂತ್ರಮೇಳ ಪ್ರಸಾರ


ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ 2ರಿಂದ 4 ರ ತನಕ ಜರುಗಿದ ಕೃಷಿ ಯಂತ್ರ ಮೇಳದ ಕಲಾಪಗಳ ಹೈಲೈಟ್ಸ್ ಮಂಗಳೂರಿನ ಸ್ಪಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನವೆಂಬರ 22 ರಿಂದ 26ರ ತನಕ (25ರಂದು ಇಲ್ಲ) ರಾತ್ರಿ 7-30ರಿಂದ 8-00ರ ತನಕ ವೀಕ್ಷಿಸಬಹುದು.

ಇದು ಜಾಲತಾಣದಲ್ಲೂ ಲಭ್ಯ - www.spandana.tv

Tuesday, November 20, 2012

ಹೊಟ್ಟೆ ಹೊರೆಯಲು ಲಾವಣಿ ಕೃಷಿ


               ಗದಗ ಸನಿಹದ ಬೆಟಗೇರಿಯ ಸಾವಿತ್ರಿ ಕಲಬುರ್ಗಿಯವರುಗೆ ರಸ್ತೆಗುಂಟ ಹತ್ತೆಕ್ರೆ ಭೂಮಿ. ಅದರಲ್ಲಿ ಎರಡೆಕ್ರೆ ತಾನಿಟ್ಟುಕೊಂಡು, ಮಿಕ್ಕ ಎಂಟೆಕ್ರೆಯನ್ನು ಐದು ಮಂದಿಗೆ ವಾರ್ಷಿಕ ಕ ಗುತ್ತಿಗೆ (ಲಾವಣಿ) ಆಧಾರದಲ್ಲಿ ವಿಭಾಗಿಸಿದ್ದಾರೆ. ಎಲ್ಲರೂ ಸಣ್ಣ ಕೃಷಿಕರು.

              ಸಾವಿತ್ರಿ ಅವರಿಗೆ ಎರಡೆಕ್ರೆಯಲ್ಲಿ ಕರಿಬೇವು ಕೃಷಿ. ನಗರದ ತ್ಯಾಜ್ಯ (ಗಟಾರ) ನೀರಿನಿಂದ ನೀರಾವರಿ. ಗಟಾರ ನೀರಿನ ಹರಿವು ಹೆಚ್ಚಿರುವಲ್ಲಿ ಪಂಪ್ ಶೆಡ್ ಸ್ಥಾಪಿಸಿದ್ದಾರೆ. ಅಲ್ಲಿಂದ ಪೈಪ್ ಮೂಲಕ ಪ್ರತೀಯೊಬ್ಬರ ಹೊಲಕ್ಕೂ ಸಂಪರ್ಕ. ವಾರಕ್ಕೊಮ್ಮೆ ಸರದಿಯಂತೆ ನೀರುಣಿಕೆ.

                 ಒಂದು ದಿವಸದಲ್ಲಿ ಎರಡೆಕ್ರೆ ಭೂಮಿ ತೋಯುತ್ತದೆ. ಪಂಪ್ ಶೆಡ್ ಬಳಿ ನೀರನ್ನು ನೋಡಿದರೆ ಬಣ್ಣ ಕಪ್ಪು. ಜತೆಗೆ ವಾಸನೆ! ಕೃಷಿಗೆ ನೀರು ಹರಿಸುತ್ತಿರುವಾಗ ವಾಸನೆಯೇನೊ, ಆದರೆ ಇಂಗಿದ ಬಳಿಕ ವಾಸನೆ ಬಿಡಿ, ಮಣ್ಣಿನಲ್ಲಿ ಕಪ್ಪು ಅಂಟಿಕೊಂಡಿರುವುದೂ ಕಾಣದು.

                   ಸಾವಿತ್ರಿ ಎರಡು ವರುಷದಿಂದ ಕರಿಬೇವಿನ ಕೃಷಿ ಮಾಡುತ್ತಾರೆ. ವಾರ್ಶಿಕ ಗುತ್ತಿಗೆ. ಗುತ್ತಿಗೆದಾರರು ಇವರಿಗೆ ಹದಿನೈದರಿಂದ ಹದಿನೆಂಟು ಸಾವಿರ ರೂಪಾಯಿ ತನಕ ನೀಡುತ್ತಾರೆ. ವರುಷಕ್ಕೆ ಮೂರು ಸಲ ಕಟಾವ್. ಕಹಿಬೇವಿನ ಗಿಡಗಳೆಲ್ಲಾ ಹತ್ತು ವರುಷ ಪ್ರಾಯದವು. ನೀರುಣಿಕೆ ಹೆಚ್ಚಾದರೆ ಎಲೆಗಳು ಹಳದಿ ವರ್ಣಕ್ಕೆ ಬದಲಾಗುತ್ತದೆ. ಹೀಗಾಗದಂತೆ ಎಚ್ಚರ ಬೇಕಾಗುತ್ತದೆ ಎನ್ನುತ್ತಾರೆ. ರೋಗದ ಬಾಧೆಯಿಲ್ಲ.

                    ಉಳಿದ ಕೃಷಿಕರು ಹೂಕೋಸು, ಟೊಮೆಟೋ, ಸೊಪ್ಪು ತರಕಾರಿ, ಮೂಲಂಗಿ, ಮೆಂತೆಸೊಪ್ಪು, ಸಬ್ಬಸಿಗೆ ಬೆಳೆಯುತ್ತಾರೆ. ಜತೆಗೆ ಬದನೆ, ಸೌತೆ, ಕ್ಯಾಬೇಜ್, ರಾಜಗೀರ್ ಹರಿವೆ, ಪುದಿನ.. ಹೀಗೆ ತರಕಾರಿ ವೈವಿಧ್ಯಗಳು. ಕ್ಯಾಬೇಜ್, ಹೂಕೋಸಿನಂತಹ ತರಕಾರಿಗೆ ಔಷಧ (ವಿಷ) ಸಿಂಪಡಣೆ ಬೇಕೇ ಬೇಕು. ಯಾಕೋ, ಸಿಂಪಡಣೆ ಮಾಡದಿದ್ದರೆ ತರಕಾರಿ ಕೃಷಿ ಅಸಾಧ್ಯ!

                  ಸ್ಥಳೀಯ ಗದಗದಲ್ಲಿ ತರಕಾರಿಗಳಿಗೆ ಮಾರುಕಟ್ಟೆ. ಕೆಲವರು ದ್ವಿಚಕ್ರ ವಾಹನದಲ್ಲಿ ಮಾರುತ್ತಾರೆ, ರಖಂ ಆಗಿ ಮಾರಾಟ ಮಾಡುವವರೂ ಇದ್ದಾರೆ. 'ಇಲ್ಲಿ ಕಾಯಿಪಲ್ಲೆ ಚೆನ್ನಾಗಿ ಬೆಳೆಯುತ್ತದೆ. ಗಟಾರದ ನೀರು ಉತ್ತಮ ಫಲವತ್ತತೆ ಹೊಂದಿದೆ' ಎನ್ನುವುದು ಕೃಷಿಕ ನಂಜಪ್ಪ ಅನುಭವ.

                     ಅವರ ಹೊಲಕ್ಕೆ ಭೇಟಿಯಿತ್ತಾಗ ಸೊಪ್ಪು ತರಕಾರಿಯನ್ನು ದಂಪತಿ ಸಹಿತ ಕೀಳುತ್ತಿದ್ದರು. ಸೊರಗಿದ ಸಸಿಗಳು. ಮಳೆ ಕೈಕೊಟ್ಟಿದ್ದರ ಪರಿಣಾಮ. ಸಾರ್, ಒಂದೆರಡು ಮಳೆ ಬಂದುಬಿಟ್ಟಿದ್ದರೆ ನಾವೆಲ್ಲಾ ಕಾಸಿನಲ್ಲಿ ಚಲೋ ಇರ್ತೀವಿ ಎಂದರು. ಗಿಡಗಳೆಲ್ಲಾ ಸೊಂಪಾಗಿ ಬೆಳೆಯುತ್ತಿದ್ದುವು. ಗ್ರಹಿಸಿದ ಹಾಗೆ ಮಾರುಕಟ್ಟೆಗೆ ಉತ್ಪನ್ನವನ್ನು ಪೂರೈಸಲು ಆಗುತ್ತಿತ್ತು.

                'ಗಟಾರ್ ನೀರಿನಲ್ಲಿ ಕೃಷಿ ಮಾಡುವುದು ಪಾರಂಪರಿಕ. ಪ್ರತೀವರುಷದಂತೆ ಮಳೆ ಬಂದರೆ ಗಟಾರ ನೀರಿನಲ್ಲಿ ದೋಷವಿಲ್ಲ. ಶೇ.50ರಷ್ಟು ಮಡ್ ಉಳಕೊಂಡರೆ ಓಕೆ. ನೀರಿನ ಮಡ್ ಮಳೆ ನೀರಿನಲ್ಲಿ ಇಂಗಿ ಹೋಗಿ ಬ್ಯಾಲೆನ್ಸ್ ಆಗಿಬಿಡುತ್ತದೆ. ಮಳೆಯೇ ಬಾರದಿದ್ದರೆ ಶೇ.100 ಹಾಗೆ ಉಳಿದುಬಿಡುತ್ತದಲ್ಲಾ ಎರಡು ವರುಷದಿಂದ ಮಳೆಯೇ ಬಂದಿಲ್ಲ. ನೀರಿನ ಮಡ್ ಹಾಗೆ ಉಳಿದುಕೊಳ್ಳುತ್ತದೆ. ಇದು ಅಪಾಯ.', ಎನ್ನುತ್ತಾರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಜಾವೂರು.

                  ಕೊಳವೆ ಬಾವಿಗಳಿಲ್ಲ. ಗದಗ ಬೆಟಗೇರಿ ಏತ ನೀರಾವರಿ ಯೋಜನೆಯಡಿಯಲ್ಲಿ ಡ್ಯಾಮ್ ಮೂಲಕ ವಿತರಣೆಯಾಗುವ ನೀರು ತಿಂಗಳಿಗೊಂದು ಸಲ ಬರುತ್ತೆ. ಹೀಗೆ ನೀರು ಬಂದಾಗ ತಿಂಗಳಿಗೆ ಬೇಕಾದಷ್ಟು ಕುಡಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಸ್ಥಿತಿ.

                    ಕೃಷಿ ಮಾಡಲು ಹೊಲವಿಲ್ಲ, ಭೂಮಿಯಿಲ್ಲ ಎನ್ನುತ್ತಾ ಕಾಲಯಾಪನೆ ಮಾಡಬೇಕಿಲ್ಲ. ವಾರ್ಶಿಕ ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆದು ಕೂಡು ಕೃಷಿ ಮಾಡುವ ಬೆಟಗೇರಿಯ ಐದು ಮಂದಿ ಕೃಷಿಕರ ಶ್ರಮವೇ ಅವರ ಬದುಕಿನ ಗುಟ್ಟು. ರಾಸಾಯನಿಕವೋ, ಗಟಾರದ ನೀರೋ, ಅದರಿಂದ ಆರೋಗ್ಯ-ಅನಾರೋಗ್ಯ.. ಅವರಿಗೆ ಬೇಕಾಗಿಲ್ಲ. 'ದುಡಿದು ತಿನ್ನಬೇಕು' ಎಂಬ ನಿಲುವು. ಇಲ್ಲದಿದ್ದರೆ ಹೊಟ್ಟೆಗೆ ತಂಪು ಬಟ್ಟೆಯೇ ಗತಿ.

                     ಸರಕಾರದ ಯೋಜನೆಯ ಫೈಲುಗಳು ಇಂತಹ ಕೃಷಿಕರ ಹೊಲದತ್ತ ನೋಡುವುದೇ ಇಲ್ಲ!

Monday, November 19, 2012

ಕೃಷಿ ಉಳಿದರೆ ಕಲೆ-ಸಾಹಿತ್ಯದ ಉಳಿವು!

 ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿಯವರು ಉದ್ಘಾಟಿಸುತ್ತಾರೆನ್ನುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗ ಖುಷಿಯಾಗಿತ್ತು. ತನ್ನ ಪ್ರಖರ ನಿಷ್ಠುರ ಚಿಂತನೆಗಳಲ್ಲಿ ರಾಜಿಯಾಗದೆ, ಸದಾ ವಿವಾದಗಳನ್ನೇ ಮೈಮೇಲೆ ಎಳೆದುಕೊಳ್ಳುತ್ತಾ, ಅದರಲ್ಲಿ ಮಿಂದೆದ್ದು ಬರುವ ಅನಂತಮೂರ್ತಿಯವರು ನುಡಿಸಿರಿಯ ಬಗ್ಗೆ ಏನನ್ನುತ್ತಾರೆ ಎಂಬ ಕುತೂಹಲವಿತ್ತು. ಅವರ ಚಿಂತನೆಗಳು 'ಎಡವೋ, ಬಲವೋ' ಎನ್ನುವುದು  ಮುಖ್ಯವಲ್ಲ. ಹೇಳುವುದರಲ್ಲಿ ಸ್ಪಷ್ಟ ಮತ್ತು ನಿಖರ ನಿಲುವುಗಳು ಬಹುಕಾಲದಿಂದ ನಾನು ಮೆಚ್ಚಿದ ಸಂಗತಿ.

          ಬೆಂಗಳೂರಿನಲ್ಲಿ ಬಿಟಿ ಬದನೆ ಹೋರಾಟ ತಾರಕಕ್ಕೆ ಏರಿದಾಗ ಕೇಂದ್ರ ಸಚಿವರು ಬಂದಿದ್ದರು. ನಡೆದ ಸಭೆಯಲ್ಲಿ ಅನಂತಮೂರ್ತಿಯವರೂ ಸಾಥ್ ನೀಡಿದ್ದರು. ಕೃಷಿಕರ ಪರವಾಗಿ ಮಾತನಾಡಿದರು. ಆಳ್ವಾಸ್ ನುಡಿಸಿರಿಗೂ ಬಂದರು. ಉದ್ಘಾಟಿಸಿದರು. 'ಅಭಿವೃದ್ಧಿ ಹೆಸರಿನಲ್ಲಿ ಕೃಷಿ ನಾಶವಾಗುತ್ತಿದೆ. ಅದು ನಾಶವಾದರೆ ಅದರೊಂದಿಗೆ ಕಲೆ, ಸಂಸ್ಕೃತಿ ನಾಶವಾಗುತ್ತದೆ. ಅಭಿವೃದ್ಧಿ ಎನ್ನುವ ಪದದ ಬದಲು ಸರ್ವೋದಯ ಎಂಬುದು ಸರಿಯಾದ ಪರಿಕಲ್ಪನೆ. ದೇಶಕ್ಕೆ ಅನಿವಾರ್ಯವಿದು' ಎಂದರು.

          ಬಹುಶಃ ಹಿರಿಯ ಸಾಹಿತಿಯೊಬ್ಬರು ನೆಲ-ಜಲದ ಕುರಿತಾಗಿ ಇಷ್ಟೊಂದು ಕರಾರುವಾಕ್ಕಾಗಿ ಮಾತನಾಡಿದ್ದು ಅವರ ಮೇಲಿನ ಗೌರವ ಹೆಚ್ಚಿಸಿತು. ನನಗೆ ಕೃಷಿ, ಗ್ರಾಮೀಣ ವಿಚಾರಗಳಲ್ಲಿ ಆಸಕ್ತಿಯಿದೆ ಎಂಬುದರಿಂದ ಅಲ್ಲ. ಪ್ರಕೃತ ಕಾಲಘಟ್ಟದ ಕೃಷಿ ಚಿಂತನೆಗಳು, ಗ್ರಾಮೀಣ ವ್ಯಾಖ್ಯೆಗಳು ಕೃಷಿ-ಕೃಷಿಕನಿಗೆ ಪೂರಕವಾಗಿರದೆ ಅಲ್ಲೆಲ್ಲಾ ಸೋಗಲಾಡಿತನ ಕುಣಿಯುತ್ತಿದೆ. ನಾಡಿನ ದೊರೆಗಳಿಗೆ ರೈತನ ಉದ್ಧಾರದ ಮಂತ್ರ ಗಂಟಲ ಮೇಲಿನದು. ಕೃಷಿ ಭೂಮಿಯನ್ನು 'ಅಭಿವೃದ್ಧಿ'ಯ ಹೆಸರಿನಲ್ಲಿ ಮಾರಾಟ ಮಾಡಲು ಮುಂದಾಗುವ ಆಡಳಿತ ವ್ಯವಸ್ಥೆಗೆ ಅನಂತಮೂರ್ತಿಯವರ ಮಾತಲ್ಲಿ ಎಚ್ಚರವಿದೆ. ನೆಲ, ಜಲ ಉಳಿಸುವುದು ಕಾಲದ ಅನಿವಾರ್ಯತೆ.

          ಮಾಲ್ ಸಂಸ್ಕೃತಿ ಬೇರೂರುತ್ತಿದೆ. ಕಿಸೆಯಲ್ಲಿ ರೊಕ್ಕ ಇದ್ದರೆ ಆಯಿತು, ಮೂಟೆಗಟ್ಟಲೆ ಸಾಮಗ್ರಿಗಳು ಮನೆಯೊಳಗೆ ಸೇರುತ್ತವೆ. ಕಾಫಿಗೆ ಬಳಸುವ ಹಾಲು, ಬಟ್ಟಲಿನ ಅನ್ನ, ಸಾರೊಳಗೆ ಅವಿತಿರುವ ಟೊಮೆಟೋ, ತರಕಾರಿ - ಇವನ್ನೆಲ್ಲಾ ಬೆಳೆಯಬೇಕಾದವರು ಯಾರು? ಈಚೆಗೆ ಭಾಷಣವೊಂದರಲ್ಲಿ ಒಬ್ಬರು ಹೇಳಿಯೇ ಬಿಟ್ಟರು, 'ಬೆಳೆಯುವುದು ಕೃಷಿಕನ ಡ್ಯೂಟಿ'!  ಕೃಷಿ, ಕೃಷಿಕನ ಕುರಿತು ಗೌರವ ಇಟ್ಟುಕೊಳ್ಳದೆ, ನಗರದಲ್ಲಿ ಕುಳಿತು ಕೃಷಿಕನ ಡ್ಯೂಟಿಯ ಬಗ್ಗೆ ಹಗುರವಾಗಿ ಮಾತನಾಡುವ ಬುದ್ಧಿವಂತರಿಗೆ ಅನಂತಮೂರ್ತಿಯವರ ಹೇಳಿಕೆಯಲ್ಲಿ ಸಂದೇಶವಿದೆ. ಆದರೆ ಸಾಹಿತ್ಯ ಸೂಕ್ಷ್ಮಗಳು, ಬದುಕಿನ ಅನುಭವಗಳು, ರಸಜ್ಞಾನಗಳು, ಬೌದ್ಧಿಕತೆಗಳು ರಸಾತಳಕ್ಕಿಳಿದ ಈ ಹೊತ್ತಲ್ಲಿ ಯಾವುದೇ ಸಾಹಿತ್ಯ, ವಿಚಾರಗಳು ಎಷ್ಟು ಮಂದಿಗೆ ಅರ್ಥವಾಗುತ್ತವೆ. ಎಲ್ಲಾ ಮಂಡನೆಗಳಿಗೆ ಅಡ್ಡಮಾತುಗಳು ಪರಿಹಾರವಲ್ಲ.

          ಕೃಷಿ ಅಜ್ಞಾತವಾಗುತ್ತಿದೆ. ಕೃಷಿ ಉತ್ಪನ್ನಗಳು ಕುಂಠಿತವಾಗುತ್ತಿದೆ. ರೈತನ ಮಗ ರೈತನಾಗಿಲ್ಲ.  ನಗರ ಅವನನ್ನು ಕೈಬೀಸಿ ಕರೆಯುತ್ತಿದೆ. ರೈತನಿಗಿಂದು ಹೆಣ್ಣು ಸಿಗುವುದೂ ತ್ರಾಸ. ಹಳ್ಳಿಯ ಜಾಣ್ಮೆಗಳು ಮಸುಕಾಗುತ್ತಿವೆ. ಹಸುರು ಮನಸ್ಸುಗಳಿಲ್ಲ. ಈ ಎಲ್ಲಾ 'ಇಲ್ಲ'ಗಳಿಗೆ ನುಡಿಸಿರಿ ವೇದಿಕೆಯಲ್ಲಾಡಿದ ಅನಂತಮೂರ್ತಿಯವರ ಎಚ್ಚರಿಕೆ ಒಂದು ಕರೆಗಂಟೆ.

          ಸಾಹಿತ್ಯದ ವೇದಿಕೆಗಳಲ್ಲಿ ಕೃಷಿ, ಗ್ರಾಮೀಣ ವಿಚಾರಗಳಿಗೆ ಹಿಂದಿನ ಬೆಂಚು! ಕೃಷಿ ಕ್ಷೇತ್ರಗಳ ಸಾಹಿತ್ಯವು ಸಾಹಿತ್ಯವಲ್ಲ! ಕವನ, ಕಥೆ, ಕಾವ್ಯ, ಕಾದಂಬರಿ ಬರೆದರೆ ಮಾತ್ರ ಆತ ಸಾಹಿತಿ! ಬಹು ದಿನಗಳಿಂದ ಕಾಡುವ ಪ್ರಶ್ನೆ. ಹಾಗಾಗಿ ಸಾಹಿತ್ಯದ ವಿಚಾರಗಳು ಬಂದಾಗ ಕೃಷಿ ಸಾಹಿತ್ಯ-ವಿಚಾರ-ಸಂಕಟಗಳಿಗೆ ಆದ್ಯತೆಯಿಲ್ಲ. ಕೃಷಿಯುಳಿದರೆ ಕಲೆಯೂ ಉಳಿಯುತ್ತದೆ, ಸಂಸ್ಕೃತಿಯೂ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ನೆಲ-ಜಲ-ಗ್ರಾಮೀಣ ವಿಚಾರಗಳು ಮಂಥನವಾಗಲಿ. ಹೊಸ ಪರಂಪರೆಗೆ ಆಳ್ವಾಸ್ ನುಡಿಸಿರಿ ಸಾಕ್ಷಿಯಾಗಲಿ.

          ಡಾ.ಯು.ಆರ್.ಅನಂತಮೂರ್ತಿಯವರು ನುಡಿಸಿರಿಗೆ ಚಾಲನೆ ನೀಡಿದ್ದಾರೆ. ದೈಹಿಕ ಆಶಕ್ತತೆ ಸ್ಪಷ್ಟವಾಗಿ ಗೋಚರವಾಗುತ್ತಿದ್ದರೂ, ವಿಚಾರದ ಘರ್ಜನೆಯಲ್ಲಿ ರಾಜಿಯಿಲ್ಲ. ಹೇಳುವುದರಲ್ಲಿ ದಾಕ್ಷಿಣ್ಯವಿಲ್ಲ. ಯಾಕೆಂದರೆ ಅವರು ಡಾ.ಯು.ಆರ್. ಅನಂತಮೂರ್ತಿ.    

ಇತರ ವಿಚಾರಗಳು:

ಮಹತ್ತರ ಜ್ಞಾನ, ಪ್ರತಿಭೆಯಿರುವ ಅದೆಷ್ಟೋ ಮಂದಿ ಕೆಳವರ್ಗದಲ್ಲೂ ಇದ್ದಾರೆ. ಇಂಗ್ಲಿಷ್ ಬಾರದ ಕಾರಣ ಅದೆಷ್ಟೋ ಗ್ರಾಮೀಣ ಕನ್ನಡ ಪ್ರತಿಭೆಗಳು ಕಮರುತ್ತಿವೆ. ಇವುಗಳು ಬೆಳಕಿಗೆ ಬರಬೇಕಿದ್ದರೆ ಮಾತೃಭಾಷೆಯ ಶಿಕ್ಷಣ ಅನಿವಾರ್ಯ. ವಿಚಾರಗ್ರಹಣಕ್ಕೆ ಮಾತೃಭಾಷಾ ಶಿಕ್ಷಣ ಅನುಕೂಲವಾದರೆ ಅದು ಕಡ್ಡಾಯವಾಗಬೇಕು. ಕನ್ನಡದಲ್ಲಿ ಬೇರೆ ಬೇರೆ ಬೀದಿಗಳಿವೆ. ಬಿಜಾಪುರದ ಬೀದಿ, ಮೈಸೂರಿನ ಬೀದಿ, ಬೆಂಗಳೂರು ಬೀದಿ, ದಕ್ಷಿಣ ಕನ್ನಡದ ಬೀದಿ... ಆದರೆ ಈ ಬೀದಿಗಳೆಲ್ಲವನ್ನೂ ಒಂದಾಗಿಸುವ ಕನ್ನಡ ಹೆದ್ದಾರಿಯೊಂದನ್ನು ರೂಪಿಸುವ ಉದ್ದೇಶ ದ.ರಾ.ಬೇಂದ್ರೆಯವರದ್ದಾಗಿತ್ತು. ಅದನ್ನು ಸಾಕಾರಗೊಳಿಸಿದವರು ಕವಿ ಪ್ರೊ:ಕೆ.ಎಸ್.ನಿಸಾರ್ ಅಹಮದ್. ಇವರು ಮತ್ತು ಡಾ.ರಾಜಕುಮಾರ್ ಇಡಿ ಕರ್ನಾಟಕಕ್ಕೆ ಒಗ್ಗುವ ಭಾಷೆಯನ್ನು ನಿರೂಪಿಸಿದವರು. ಡಾ.ಮೋಹನ ಆಳ್ವರನ್ನು 'ಸಿರಿವಂತ' ಎಂಬ ಬಣ್ಣನೆ. ನಾಡಿನಲ್ಲಿ ಅನೇಕ ಶ್ರೀಮಂತರಿದ್ದಾರೆ. ಆದರೆ ಕನ್ನಡಕ್ಕೆ ಅವರ ಕೊಡುಗೆ ಶೂನ್ಯ. ಆದರೆ ಕನ್ನಡಕ್ಕೆ ಸ್ಪಂದಿಸುತ್ತಾ ಇರುವ ಆಳ್ವರು ಸಿರಿವಂತ.

Saturday, November 17, 2012

ಕಳಚುವುದಲ್ಲ, ಜೋಡಿಸುವ ಕೆಲಸ


            ತೀರ್ಥಹಳ್ಳಿ ಸನಿಹದ ಕೃಷಿಕ ತಂತ್ರಜ್ಞ ಕುಂಟುವಳ್ಳಿ ವಿಶ್ವನಾಥರನ್ನು (Kuntuvalli Vishwanath) ಜುಲೈ ತಿಂಗಳಲ್ಲಿ ಮಾತನಾಡಿಸಿದ್ದೆ.. ಚೀನಾ ದೇಶದ ಪ್ರವಾಸದ ಖುಷಿಯ ಗುಂಗಿನಲ್ಲಿದ್ದರು. ನಮ್ಮೂರ ಕೃಷಿಗೆ ಹೊಂದಬಹುದಾದ ಯಂತ್ರಗಳ ತಯಾರಿಯ ನೀಲನಕ್ಷೆ ಮನದಲ್ಲಿ ಅಚ್ಚಾಗುತ್ತಿತ್ತು. ಆಗಷ್ಟೇ ಪುತ್ತೂರಿನ ಯಂತ್ರ ಮೇಳಕ್ಕೆ ಕ್ಯಾಂಪ್ಕೋ ಶ್ರೀಕಾರ ಬರೆದಾಗಿತ್ತು.
          'ಚೀನಾ ಜ್ಞಾನವನ್ನು ಬಳಸಿ ನನ್ನ ವರ್ಕ್ ಶಾಪಿನಲ್ಲಿ ಐದಾರು ಯಂತ್ರಗಳನ್ನಾದರೂ ತಯಾರಿಸಿಕೊಂಡು ಯಂತ್ರಮೇಳಕ್ಕೆ ಬರುತ್ತೇನೆ' ಅಂದಿದ್ದರು. ತಲೆತುಂಬಾ ಚೀನಾದ ಯಂತ್ರಗಳು ಸದ್ದುಮಾಡುತ್ತಿರುವುದರಿಂದ ಹೀಗೆಂದಿರಬಹುದೆಂದು ಊಹಿಸಿ ವಿಚಾರ ಮರೆತಿದ್ದೆ.

          ೨೦೧೨ ನವೆಂಬರ್ 2 ರಿಂದ 4ರ ತನಕ ಜರುಗಿದ ಯಂತ್ರಮೇಳದ ಮುನ್ನಾದಿನ ವಿಶ್ವನಾಥರ 'ವೀಟೆಕ್' ವಾಹನ ಹಾಜರು. 'ನೋಡಿ, ಅಂದೇ ಹೇಳಿದ್ದೇನಲ್ಲಾ.. ಯಂತ್ರ ಸಿದ್ಧವಾಗಿದೆ. ಕ್ಷಮತೆ ನೀವೇ (ಕೃಷಿಕರು) ಪರೀಕ್ಷಿಸಿ' ಎನ್ನುತ್ತಾ ಸಂಬಂಧಿಸಿದ ಕರಪತ್ರ ನೀಡಿದರು.

          ತೋಟದೊಳಗೆ ಸಲೀಸಾಗಿ ಸಂಚರಿಸಬಹುದಾದ, ಕೃಷಿ ಕೆಲಸಗಳಿಗೆ ಒಗ್ಗಬಹುದಾದ ರಬ್ಬರ್ ಟ್ರ್ಯಾಕಿನ ಮಿನಿ ಮಣ್ಣುಮಾಂದಿ (ಜೆಸಿಬಿ) ಯಂತ್ರವನ್ನು ತಮ್ಮ ವರ್ಕ್ ಶಾಪಿನಲ್ಲಿ ಸಿದ್ಧಪಡಿಸಿದ್ದರು. ಮೊದಲ ಮಾದರಿ. ಕೈಚಾಲಿತವಾಗಿ ಚಾಲೂ ಆಗುವ ವ್ಯವಸ್ಥೆ. ಆರೂವರೆ ಲಕ್ಷ ರೂಪಾಯಿ ಬೆಲೆ. ಟಿಲ್ಲರ್ ಇಂಜಿನಿನಿಂದ ಚಾಲೂ. 

          ನಾಲ್ಕರಿಂದ ಆರು ಕ್ವಿಂಟಾಲ್ ಭಾರ ಎಳೆಯುವ ಸಾಮಥ್ರ್ಯದ ಡೀಸೆಲ್ ಚಾಲಿತ ಮಿನಿ ಡಂಪರ್, ಮೂರು ಕ್ವಿಂಟಾಲ್ ಭಾರ ತಾಳಿಕೊಳ್ಳುವ ಪೆಟ್ರೋಲ್ ಚಾಲಿತ ಡಂಪರ್, ಅಡಿಕೆ ಸುಲಿ ಯಂತ್ರ ಮತ್ತು ವಿವಿಧ ಅಟ್ಯಾಚ್ಮೆಂಟ್ಗಳನ್ನು ಜೋಡಿಸಿದ ಕಳೆ ಕಟಾವ್ ಯಂತ್ರಗಳು.. ಮೇಳಕ್ಕಾಗಿಯೇ ರೂಪಿತವಾದವುಗಳು. ಇನ್ನಷ್ಟು ತಾಂತ್ರಿಕ ಅಂಶಗಳು ಅಭಿವೃದ್ಧಿಗೊಂಡು ತೋಟಕ್ಕಿಳಿಯಳಿವೆ. 

          ನಮ್ಮಲ್ಲಿ ಒಂದು ಕಳೆ ಕಟಾವ್ ಯಂತ್ರ ಇದ್ದುಬಿಟ್ಟರೆ ಅದು ಕಳೆ ಕಟಾವಿಗೇ ಮೀಸಲು. ಬೇರೊಂದು ಕೆಲಸಕ್ಕೆ ಇನ್ನೊಂದು ಯಂತ್ರ ಖರೀದಿಸಬೇಕು. ದುಪ್ಪಟ್ಟು ದರ. 'ಸಬ್ಸಿಡಿಯಲ್ಲಿ ಸಿಗುತ್ತದಲ್ವಾ, ಖರೀದಿಸಿದರಾಯಿತು' ಎನ್ನುವ ಆಕಳಿಕೆ! ತಪ್ಪಲ್ಲ ಬಿಡಿ, ಯಂತ್ರ ಎಂದಾಕ್ಷಣ ಸಬ್ಸಿಡಿಯ ಪೈಲುಗಳ ಚಕ್ರವ್ಯೂಹದ ಸುತ್ತ ಮನಸ್ಸು ಸುತ್ತುತ್ತದೆ. ಇದು ಆಡಳಿತ ವ್ಯವಸ್ಥೆಯ ಅಜ್ಞಾತ ವಿಭಾಗ. 

            ಚೀನಾದಲ್ಲಿ ಒಂದು ಯಂತ್ರವಿದ್ದರೆ ಸಾಕು, ಹತ್ತಕ್ಕೂ ಮಿಕ್ಕಿ ಕೆಲಸಗಳು! ಯಂತ್ರದ ಹಿಡಿಯ ಮಧ್ಯದಲ್ಲಿ ಕಳಚಿ ಜೋಡಿಸಬಹುದಾದ ವ್ಯವಸ್ಥೆ. ಬೇಕಾದ ಅಟ್ಯಾಚ್ಮೆಂಟನ್ನು ಜೋಡಿಸಿದರಾಯಿತು. ನೆಲದಲ್ಲಿ ನಿಂತು ಮರದ ಗೆಲ್ಲನ್ನು ಸವರಲು ಬ್ಲೇಡ್ ಹೊಂದಿರುವ ಅಟ್ಯಾಚ್ಮೆಂಟ್, ಅಲಂಕಾರಿಕ ಗಿಡವನ್ನು ಟ್ರಿಮ್ ಮಾಡಲು ಇನ್ನೊಂದು.

          ಒಂದೇ ಮೋಟಾರಿನಲ್ಲಿ ಹಲವು ಕೆಲಸ. ವಿಶ್ವನಾಥ್ ಹೇಳುತ್ತಾರೆ, ವಾಹನ ತೊಳೆಯಲು, ಹಟ್ಟಿ ತೊಳೆಯಲು, ಮರಕ್ಕೆ ತೂತು ಕೊರೆಯಲು, ಕಟ್ಟಿಗೆ ತುಂಡರಿಸಲು, ಹೊಂಡ ತೋಡಲು.. ಇವೆಲ್ಲದಕ್ಕೂ ಅಟ್ಯಾಚ್ಮೆಂಟ್ಗಳು.  ಒಂದೊಂದಕ್ಕೆ ಏನಿಲ್ಲವೆಂದರೂ ಐದು ಸಾವಿರ ರೂಪಾಯಿ ಮೀರದು! ಇವುಗಳಲ್ಲಿ ಕೆಲವನ್ನಾದರೂ ನಮ್ಮ ಭಾಗದ ಕೃಷಿ ಕೆಲಸಗಳಿಗೆ ಅನುಕೂಲವಾಗುವಂತೆ ತಯಾರಿಸುವ ಯೋಚನೆಯನ್ನು ವಿಶ್ವನಾಥ್ ತಲೆತುಂಬ ತುಂಬಿಕೊಂಡಿದ್ದಾರೆ.

            ಕಳೆಕೊಚ್ಚುವ ಯಂತ್ರದ ತೂಕ ಸುಮಾರು ಆರು ಕಿಲೋ. ಇದಕ್ಕೆ ಎರಡೂವರೆ ಅಶ್ವಶಕ್ತಿಯ ಮೋಟಾರು. ಪೆಟ್ರೋಲ್ಚಾಲಿತ. ಚೀನಾದಲ್ಲಿ ಬಳಕೆಯಲ್ಲಿರುವ ಎಲ್ಲಾ ಅಟ್ಯಾಚ್ಮೆಂಟ್ಗಳಿಗೆ ಸುಮಾರು ಇನ್ನೂರು ಡಾಲರ್ ಬೆಲೆ. ಅವುಗಳು ಭಾರತಕ್ಕೆ ಬಂದಿಳಿವಾಗ ಹದಿನಾರು ಸಾವಿರ ರೂಪಾಯಿಯ ಸುತ್ತಮುತ್ತ. ನಮ್ಮಲ್ಲಿ ಒಂದು ಯಂತ್ರಕ್ಕೆ ಇದಕ್ಕಿಂತ ಹೆಚ್ಚು ದರವಿದೆ!

          ಕಳೆಕೊಚ್ಚು ಯಂತ್ರದ ಕತೆ ಹೀಗಾದರೆ, ಟ್ರಾಕ್ಟರ್ಗಳದು ಒಂದು ಹೆಜ್ಜೆ ಮುಂದೆ. ಒಂದು ಟ್ರಾಕ್ಟರ್ ಇದ್ದರೆ ಸಾಕು, ಮಿಕ್ಕಂತೆ ಎಲ್ಲವೂ ಅಟ್ಯಾಚ್ಮೆಂಟ್ಗಳ ಭರಾಟೆ. ನೇಗಿಲು ಜೋಡಿಸಿದರೆ ಹೂಟೆ, ಸಮತಟ್ಟು ಮಾಡಲು ಇನ್ನೊಂದು,  ಹೊಂಡ ತೋಡಲು ಮತ್ತೊಂದು ಅಟ್ಯಾಚ್ಮೆಂಟ್.  ವಿಶ್ವನಾಥ್ ಹೇಳುವಂತೆ, ಉತ್ತಮ ಗುಣಮಟ್ಟದ ಟಿಲ್ಲರಿಗೆ ಒಂದು ಲಕ್ಷ ಮೀರಬಹುದು. ಮೇಲ್ನೋಟಕ್ಕೆ ದರ ಹೆಚ್ಚೆಂದು ಕಂಡು ಬಂದರೂ, ಅದನ್ನು  ಹದಿನೈದು ವರುಷ ಬಳಸಿದರೂ ದುರಸ್ತಿ ಕಾಣದು.

          'ಚೀನಾ ಉತ್ಪನ್ನ' ಅಂದಾಕ್ಷಣ ಮೋರೆಯನ್ನು ಚಿರುಟಿಸುತ್ತೇವೆ! 'ಕಳಪೆ ಮಾಲು' ಎಂಬ ಭಾವನೆ. ಉತ್ತಮ ಗುಣಮಟ್ಟದ ವಸ್ತುವೊಂದಕ್ಕೆ ನೂರು ರೂಪಾಯಿ ಇದೆಯೆನ್ನಿ. ಇದೇ ಉತ್ಪನ್ನ ಇಪ್ಪತ್ತು ರೂಪಾಯಿಗೂ ಲಭ್ಯ! ಇಪ್ಪತ್ತು ರೂಪಾಯಿಯ ವಸ್ತು ನೂರು ರೂಪಾಯಿ ದುಡಿಯಬೇಕೆಂದರೆ ಹೇಗೆ?

          ನಾವೆಷ್ಟು ಹಣ ಕೊಡ್ತೇವೆ ಎಂಬುದರ ಮೇಲೆ ಗುಣಮಟ್ಟದ ನಿರ್ಧಾರ. ನಮ್ಮಲ್ಲಿಂದ ಹೋಗುವ ಬಹುತೇಕ ಮಂದಿ ಕಡಿಮೆ ಬೆಲೆಯದನ್ನೇ ಆಯ್ಕೆ ಮಾಡುತ್ತಾರಂತೆ. ಹಾಗಾಗಿ ಭಾರತೀಯ ಅಂದರೆ ಸಾಕು, ಮೂರನೇ ದರ್ಜೆಯ ಗುಣಮಟ್ಟದ ವಸ್ತುವನ್ನೇ ತೋರಿಸುತ್ತಾರೆ - ಎಂಬ ಅನುಭವ ವಿಶ್ವನಾಥ್ ಹೇಳುತ್ತಿರುವಾಗ, ನಮ್ಮ ವಿಶ್ವಾಸಾರ್ಹತೆ ಮತ್ತು ಸ್ವೀಕೃತಿಯನ್ನು ಪುನರ್ನವೀಕರಿಸುವ ಅಗತ್ಯವಿದೆ ಎಂದು ತೋರಿತು.

          ನಮ್ಮ ಕೃಷಿ ಸಮಸ್ಯೆಗಳ ಹಿನ್ನೆಲೆಯಲ್ಲಿ ಚಿಕ್ಕ ಮಣ್ಣು ಮಾಂದಿ (ಜೆಸಿಬಿ) ಯಂತ್ರಗಳು, ಪವರ್ ಸ್ಪ್ರೇಯರ್, ಲೋಡರ್, ಹೂಟೆ ಅಟ್ಯಾಚ್ಮೆಂಟ್ಗಳು ಅಗತ್ಯ. ಇಂತಹುಗಳನ್ನು ತನ್ನಲ್ಲೇ ನಿರ್ಮಿಸುವ ಪೂರ್ವಭಾವಿಯಾಗಿ  ಚೀನಾ ಕಂಪೆನಿಗಳೊಂದಿಗೆ ಮಾತುಕತೆ ಮುಗಿಸಿದ್ದಾರೆ. ತೋಟದೊಳಗೆ ಸರಾಗವಾಗಿ ಚಲಿಸಬಲ್ಲ ಗಾಡಿಗಳ ರೂಪೀಕರಣ, ಬೈಕ್ ಗಾಡಿಗಳ ರಚನೆ, ಇಲೆಕ್ಟ್ರಿಕ್ ಚಾಲಿತ ದ್ವಿಚಕ್ರಗಳು, ಕಳೆ ತೆಗೆಯುವ ಯಂತ್ರಕ್ಕೆ ಜೋಡಿಸುವ ಅಟ್ಯಾಚ್ಮೆಂಟ್ಗಳನ್ನು ತನ್ನ ಘಟಕದಲ್ಲಿ ತಯಾರಿಸುವ ಯೋಜನೆ ನಿಕಟಭವಿಷ್ಯದವು.

          ಕೃಷಿ ಯಂತ್ರಮೇಳದ ಗೋಷ್ಠಿಯಲ್ಲಿ ಭಾಗವಹಿಸಿದ ವಿಶ್ವನಾಥ್ ಯಂತ್ರಾನುಭವದ ಅನುಭವ ಹಂಚಿಕೊಳ್ಳುತ್ತಾ, 'ರೈತರಿಗೆ ಯಾವ ತರಹದ ಯಂತ್ರಗಳು ಬೇಕೆಂಬುದನ್ನು ರೈತರೇ ಹೇಳಿದರೆ ತಯಾರಿಸಲು ಅನುಕೂಲ..' ಎಂದಿದ್ದರು. ನಿಜಕ್ಕೂ ರೈತ ಕಾಳಜಿ. ನಾವು ಎಂದಾದರೂ ನಮಗೆಂತಹ ಯಂತ್ರ ಬೇಕು ಎನ್ನುವುದನ್ನು ಹೇಳಿಲ್ಲ, ಯಾರೂ ಕೇಳಿಲ್ಲ! ಈಗ ವಿಶ್ವನಾಥ್ ಕೇಳುತ್ತಿದ್ದಾರೆ, ಉತ್ತರ ಹೇಳಲು ಪಕ್ವ ಸಮಯ.

             ಚೀನಾದಲ್ಲಿ ಎಲ್ಇಡಿ ಬಲ್ಬ್ ಮಳಿಗೆಗೆ ಭೇಟಿ ನೀಡಿದ್ದರು. 'ಒಂದು ರಸ್ತೆ ದೀಪಕ್ಕೆ ಬಳಕೆಯಾಗುವ ವಿದ್ಯುತ್ತನ್ನು ಚೀನಾ ಮಾದರಿಯಲ್ಲಿ ಬಳಸಿದರೆ ನೂರು ಬಲ್ಬ್ ಉರಿಸಬಹುದು. ನಮ್ಮ ರಾಜಧಾನಿಯಲ್ಲಿ ವ್ಯಯವಾಗುವ ಶೇ.60ರಷ್ಟು ವಿದ್ಯುತ್ ಇದರಿಂದ ಉಳಿತಾಯ ಮಾಡಬಹುದು' ಎನ್ನುತ್ತಾರೆ. ಮಾಡುವವರು ಯಾರು? ಚೀನಾದ ಅಭಿವೃದ್ಧಿಯನ್ನು ಅಭ್ಯಸಿಸಲು ನಾಡಿನ ದೊರೆಗಳು ಹಾರಿ ಹೋಗುತ್ತಾರೆ. ಅಲ್ಲಿ ಯಾವ ಅಭಿವೃದ್ಧಿಯನ್ನು ನೋಡ್ತಾರೋ, ಏನು ತರ್ತಾರೋ, ಅದನ್ನು ಯಾವ ರೀತಿ ಅನುಷ್ಠಾನ ಮಾಡ್ತಾರೋ..?

               ಯಂತ್ರಮೇಳದಲ್ಲಿ ವಿಶ್ವನಾಥರ ಮಿನಿ ಜೆಸಿಬಿ ಅಕರ್ಷಣೆಯ ಬಿಂದುವಾಗಿತ್ತು. ತೋಟದ ಕೆಲಸಗಳಿಗೆ ಸಂಗಾತಿ. ಮೊದಲ ಮೋಡೆಲ್ ಆದ್ದರಿಂದ ದರ ಅಧಿಕವೆಂದು ಕಂಡು ಬಂದರೂ ಮುಂದೆ ಸರಿ ಹೋದೀತು. ಯಂತ್ರವನ್ನು ವೀಕ್ಷಿಸಿದ ಬಹುಪಾಲು ಮಂದಿ, 'ಯಂತ್ರದ ಕ್ಷಮತೆಯನ್ನು ವಿಚಾರಿಸಿಲ್ಲ. ಅದರ ತಾಂತ್ರಿಕಾಂಶ ಕೇಳಿಲ್ಲ. ಬೆಲೆ ಎಷ್ಟು ಎಂದು ಕೇಳಿದ ಬೆನ್ನಿಗೆ ಸಬ್ಸಿಡಿ ಎಷ್ಟಿದೆ ಅಂತ ಕೇಳ್ತಾರೆ' ಮಳಿಗೆಯಲ್ಲಿದ್ದ ಶ್ರೀನಿವಾಸ್ ಸುಸ್ತು. ಹೌದಲ್ಲಾ.. ಸಬ್ಸಿಡಿ ವ್ಯವಸ್ಥೆಯ ಹೊರತಾಗಿ ಯೋಚಿಸಲು ನಮಗಾಗುತ್ತಿಲ್ಲ.

               ಗೋಷ್ಠಿಯೊಂದರಲ್ಲಿ ಪ್ರಶ್ನೋತ್ತರ ನಡೆಯುತ್ತಿತ್ತು. 'ದಾಸವಾಳ ಗಿಡಕ್ಕೆ ನೀರುಣಿಸಲು ಬಳಸುವ ಮಿನಿ ಸ್ಪ್ರಿಂಕ್ಲರಿಗೂ, ಬಾಲ್ವಾಲ್ವ್ ವ್ಯವಸ್ಥೆಗೂ ಸಬ್ಸಿಡಿ ಸಿಗಲೇ ಬೇಕು' ಎಂಬ ಪ್ರಬಲ ವಿಚಾರಗಳು ಹರಿದಿದ್ದುವು. ಕೃಷಿಯ ಸಂಕಟಗಳನ್ನು ಗಮನಿಸಿದಾಗ ಸಬ್ಸಿಡಿ ಬೇಕು. ಅದು ಸಣ್ಣ ಕೃಷಿಕರಿಗೂ ಸುಲಭದಲ್ಲಿ ಸಿಗುವಂತಹ ವ್ಯವಸ್ಥೆಗಳು ರೂಪಿತವಾಗಬೇಕು.

              ಸರಕಾರಿ ಸಬ್ಸಿಡಿಯಲ್ಲಿ ಯಾವ ದರಕ್ಕೆ ಯಂತ್ರ ಸಿಗುತ್ತೋ, ಅದೇ ಕ್ರಯಕ್ಕೆ ನನ್ನ ವರ್ಕ್ ಶಾಪಿನಲ್ಲಿ ಯಂತ್ರ ತಯಾರಿಸಿದರೆ ಸಬ್ಸಿಡಿಯ ಬೊಬ್ಬೆ ತಪ್ಪಿಸಬಹುದಲ್ಲಾ - ಮಾತಿನ ಮಧ್ಯೆ ವಿಶ್ವನಾಥ ಹೇಳುತ್ತಾ, 'ಹೊರದೇಶದಿಂದ ತರಿಸುವ ಕೃಷಿ ಯಂತ್ರಗಳಿಗೆ ವಿಧಿಸುವ ಸುಂಕ, ವ್ಯಾಟ್ಗಳನ್ನು ಮನ್ನಾ ಮಾಡಿದರೂ ಸಾಕು, ಈಗಿರುವ ಬೆಲೆಗಿಂತ ಕಡಿಮೆಗೆ ಕೃಷಿಕರಿಗೆ ಯಂತ್ರಗಳನ್ನು ಒದಗಿಸಬಹುದು' ಎಂಬ ಆಶಯ ವ್ಯಕ್ತಪಡಿಸಿದ್ದರು. ಆ ದಿವಸಗಳು, ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಬಂದಾವೇ?

ಬದುಕನ್ನು, ಭಾವನೆಗಳನ್ನು ಕಳಚಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಅದನ್ನು ಮರುಜೋಡಿಸುವ ಪ್ರಯತ್ನಕ್ಕೆ ಯಂತ್ರಮೇಳ ಹೆಜ್ಜೆಯಿಟ್ಟಿದೆ.

v-tech : (08181) 272 075

ಚಿತ್ರ ಕೃಪೆ : ಶ್ರೀ ಪಡ್ರೆ

Tuesday, November 6, 2012

ಪೂಗ ಫ್ಲವರ್

ಆಂಧ್ರಪ್ರದೇಶದ ಅನಂತಪುರದ 'ಇಂಟೆಗ್ರೇಟೆಡ್ ಡೆವಲಪ್ಮೆಂಟ್ ಟ್ರಸ್ಟ್' - ಕಳೆದ ಒಂದು ದಶಕದಿಂದ ಹದಿನೈದು ಮಂದಿ ವಿಕಲಚೇನತನರು ತಯಾರಿಸುವ ಅಡಿಕೆ ಹಾಳೆಯ ಉತ್ಪನ್ನವಿದು. ಅಡಿಕೆ ಹಾಳೆಯ ಹೂ, ಹೂಮಾಲೆ, ಕಿವಿಯೋಲೆ, ನೆಕ್ಲೆಸ್, ಮೊದಲಾದ ಇಪ್ಪತ್ತೈದು ಮಾದರಿಯ ಐಟಂಗಳು ವಿದೇಶಕ್ಕೂ ರಫ್ತಾಗುತ್ತದೆ. ಕೃಷಿ ಯಂತ್ರಮೇಳಕ್ಕಾಗಿಯೇ ವಿಶೇಷವಾಗಿ ಈ ಹೂಗಳನ್ನು ತರಿಸಿ, ಅತಿಥಿಗಳಿಗೆ ನೀಡಲಾಗಿತ್ತು.

(ಮಾಹಿತಿ : ಶ್ರೀ ಪಡ್ರೆ )

ಅಡಿಕೆ ವೈನ್

ಬೆಳ್ತಂಗಡಿಯ 'ಬಿಸ್ಲೆ' ಬ್ರಾಂಡ್ ಗೃಹ ಉದ್ಯಮಿ ಮಹೇಶ್ ಕೌಡಂಗೆ (ಮೊಬೈಲ್ : 87775 56409) ತಯಾರಿಸಿ ತಂದಿಟ್ಟ ಅಡಿಕೆ ವೈನ್ ಬಹುಜನರ ಶ್ರದ್ಧೆ ಸೆಳೆಯಿತು. 'ಮಾರಾಟಕ್ಕಿದೆಯೇ' ಎನ್ನುವುದೇ ಹೆಚ್ಚಿನವರ ಪ್ರಶ್ನೆ ಆದರೆ ಇದು ಮಹೇಶರ ಪ್ರಾಯೋಗಿಕ ಉತ್ಪನ್ನ ಅಂದು ತಿಳಿದಾಗ ಒಂದು ಡೋಸ್ ರುಚಿ ನೋಡಬಹುದೇ ಎಂದು ಕೇಳುವವರೂ ಧಾರಾಳ ಇದ್ದರು.

ಯಂತ್ರ ಚಿಂತನೆಯೊಂದಿಗೆ ಹಲಸು ರಫ್ತಿನ ಮಂತ್ರಾಲೋಚನೆ


ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಬಯಲಿನಲ್ಲಿ ಸಾವಿರಗಟ್ಟಲೆ ಕೃಷಿಕರಿಂದ ಅಡಿಕೆ ಕೃಷಿ ಉಳಿಸಿಕೊಳ್ಳಬಲ್ಲ ಯಂತ್ರಗಳಿಗಾಗಿ ಹುಡುಕಾಟ. ಅದೇ ವೇಳೆ ಕಾಲೇಜು ಕಟ್ಟಡದಲ್ಲಿ ಮೂರು ಜಿಲ್ಲೆಗಳ ಐವತ್ತು ಕೃಷಿಕರಿಂದ ಅಮೆರಿಕಕ್ಕೆ ಹಲಸಿನ ಉತ್ಪನ್ನ ಕಳಿಸುವ ನಿಟ್ಟಿನ ಚಿಂತನೆ. (ನವಂಬರ ೩, ೨೦೧೨) ಇದು ಮಲೆನಾಡಿನ ಕೃಷಿಕರ ಬೆಳೆಯ ಒಲವು ಬದಲಾಗುತ್ತಿರುವ ಲಕ್ಷಣವೇ?

ಏನೇ ಇರಲಿ, ಅಮೆರಿಕದ 'ಗ್ಲೋಬಲ್ ವಿಲೇಜ್ ಫ್ರುಟ್ಸ್' ಕಂಪನಿಗೆ ಮುಂದಿನ ಋತುವಿನಲ್ಲಿ ಇಪ್ಪತ್ತೈದು ಟನ್ ಬಕ್ಕೆ ಹಲಸಿನ ಒಣ ಸೊಳೆ ಮತ್ತು ತಲಾ ಹತ್ತುಹತ್ತು ಟನ್ ಒಣ ಎಳೆ ಹಲಸು (ಗುಜ್ಜೆ) ಮತ್ತು ಹಲಸಿನ ಬೀಜದ ಹುಡಿ ಬೇಕಂತೆ. ಸಭೆಯಲ್ಲಿ ಆರೆಂಟು ಮಂದಿ ಕೃಷಿಕರು ಸುಮಾರು ಎರಡು ಟನ್ನಿನಷ್ಟು ಹಲಸಿನ ಉತ್ಪನ್ನವನ್ನು ಮಾಡಿ ಗ್ಲೋಬಲ್ ಫ್ರುಟ್ಸ್ ಕಂಪೆನಿಗೆ ಒದಗಿಸಲು ಸಿದ್ಧ ಎಂದು ಮುಂದೆ ಬಂದರು. ಕಂಪನಿಯ ಸಂಪರ್ಕ :
annemarie.ryu@gmail.com

(ಚಿತ್ರ, ಮಾಹಿತಿ : ಶ್ರೀ ಪಡ್ರೆ)

ಅಡಿಕೆ ಪತ್ರಿಕೆ ವಿಶೇಷಾಂಕ ಬಿಡುಗಡೆ

ಕೃಷಿಕರೇ ರೂಪಿಸುವ ಕೃಷಿಕರಪರ ಮಾಧ್ಯಮ 'ಅಡಿಕೆ ಪತ್ರಿಕೆ'ಗೆ ಇಪ್ಪತ್ತನಾಲ್ಕು ವರುಷ ತುಂಬಿ ಇಪ್ಪತ್ತೈದರ ರಜತ ಬೆಳಕಿಗೆ ಮೈಯೊಡ್ಡಿದೆ. ಇದರ ಸವಿ ನೆನಪಿಗಾಗಿ ನವೆಂಬರ್ ತಿಂಗಳ ಪತ್ರಿಕೆಯು 'ವಿಶೇಷಾಂಕ'ವಾಗಿ ಮೂಡಿಬಂದಿದೆ. ಯಂತ್ರ ಮೇಳದ ಉದ್ಘಾಟನೆಯಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರು ವಿಶೇಷಾಂಕವನ್ನು ಬಿಡುಗಡೆಗೊಳಿಸಿ, ಅಡಿಕೆ ಪತ್ರಿಕೆಯ ಸಾಧನೆಯನ್ನು ಶ್ಲಾಘಿಸಿದರು. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಪಡಾರು ರಾಮಕೃಷ್ಣ ಶಾಸ್ತ್ರಿ, ಶ್ರೀ ಪಡ್ರೆ, ಶಂಕರ್ ಸಾರಡ್ಕ, ವಿ.ಮ.ಭಟ್, ಕಿನಿಲ ಅಶೋಕ ಉಪಸ್ಥಿತರಿದ್ದರು.

ಕೃಷಿ ವಿಕಸನ - ಯಂತ್ರ ಮೇಳ ಸಂಚಿಕೆ

ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ತಮ್ಮ ಮಾಸಿಕ ವಾರ್ತಾಪತ್ರ 'ವಿಕಸನ' ಪತ್ರಿಕೆಯನ್ನು 'ಯಂತ್ರ ಮೇಳ' ವಿಶೇಷ ಸಂಚಿಕೆಯನ್ನಾಗಿ ರೂಪಿಸಿದ್ದಾರೆ. ಒಂದು ರಾತ್ರಿಯಲ್ಲಿ ನಾಲ್ಕು ಪುಟಗಳ ಸಂಚಿಕೆಯನ್ನು ವಿನ್ಯಾಸಿಸಿ, ಮುದ್ರಿಸಿ, ಸಮಾರೋಪದಂದು ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳ ಆಸಕ್ತಿಗೆ ಸಾಕ್ಷಿ. ಮೂರೂ ದಿವಸವೂ ವಾರ್ತಾ ಪತ್ರವನ್ನು ಮುದ್ರಿಸುವ ಯೋಚನೆ ಪೂರ್ವದಲ್ಲಿದ್ದರೂ, ಮಧ್ಯೆ ಪರೀಕ್ಷೆ ನಿಗದಿಯಾದುದರಿಂದ ವಾರ್ತಾಪತ್ರದ ತಯಾರಿಯನ್ನು ಕೈಬಿಡಲಾಗಿತ್ತು. ಆದರೆ ಕೃಷಿ ಯಂತ್ರ ಮೇಳದ ಎರಡನೇ ದಿವಸ, ಅಂದರೆ ನವೆಂಬರ್ 3ಕ್ಕೇ ಪರೀಕ್ಷೆ ಮುಗಿದಿತ್ತು. ಒಂದು ದಿವಸಕ್ಕಾದರೂ ವಾರ್ತಾಪತ್ರ ಪ್ರಕಟವಾಗಬೇಕೆಂಬ ಮಕ್ಕಳ ತುಡಿತಕ್ಕೆ ಸಾಥ್ ನೀಡಿದವರು ಕಾಲೇಜಿನ ಪ್ರಾಂಶುಪಾಲ ಡಾ.ಮಾಧವ ಭಟ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್.ಜಿ.ಶ್ರೀಧರ್. ಮುಖ್ಯ ಸಂಪಾದಕ ಉಪನ್ಯಾಸ ರಾಕೇಶ್ ಕುಮಾರ್ ಕಮ್ಮಾಜೆ. ಪತ್ರಿಕೆಯ ಸಂಪಾದಕ ಮಂಜುನಾಥ್ ಎಲ್.ಕೆ. ಅಭಿಷೇಕ್ ಡಿ. ಪುಟವಿನ್ಯಾಸ. ಸಮಾರೋಪದಂದು ಮಧ್ಯಾಹ್ನದ ಹೊತ್ತಿಗೆ ವಾರ್ತಾಪತ್ರ ಮುದ್ರಣಗೊಂಡು ತಯಾರಾಗಿತ್ತು. ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಪತ್ರವನ್ನು ಬಿಡುಗಡೆ ಮಾಡಿ, ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಮಂಚಿ ಶ್ರೀನಿವಾಸ ಆಚಾರ್, ಪಡಾರು ರಾಮಕೃಷ್ಣ ಶಾಸ್ತ್ರಿ, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ, ಹಿರಿಯ ಪತ್ರಕರ್ತ ಶ್ರೀ ಪಡ್ರೆ.. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಕ್ಷಿಪ್ರ ಸಾಧನೆಗೆ ಬೆನ್ನು ತಟ್ಟಿದರು. ಮೇಳದಲ್ಲಿ ಒಂದು ಪತ್ರಿಕೆಗೆ ಎರಡು ರೂಪಾಯಿಯಂತೆ ವಿದ್ಯಾರ್ಥಿಗಳು ಮಾರಾಟ ಮಾಡಿದ್ದರು. ವಾರ್ತಾಪತ್ರದ ಮುದ್ರಣ ವೆಚ್ಚವನ್ನು ಕೃಷಿ ಯಂತ್ರ ಮೇಳವು ಭರಿಸಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

ಕೃಷಿ ಯಂತ್ರ ಮೇಳ ಸಂಪನ್ನ

                 ನವೆಂಬರ್ 4ರಂದು ಕೃಷಿ ಯಂತ್ರಮೇಳಕ್ಕೆ ತೆರೆ. ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ. ’'2015ರೊಳಗೆ ಅಂತಾರಾಷ್ಟ್ರೀಯ ಮಟ್ಟದ ಕೃಷಿ ಯಂತ್ರ ಮೇಳದ ಆಯೋಜಿಸುವ ಘೋಷಣೆ. ಇಂಜಿನಿಯರಿಂಗ ಕಾಲೇಜಿನ ವಿದ್ಯಾರ್ಥಿಗಳ ಅನುಶೋಧನೆ, ಕೃಷಿಕ ಆವಿಷ್ಕಾರಗಳಿಗೆ 'ಅರ್ಜಿ ಆಹ್ವಾನಿಸದೆ' ಪ್ರಶಸ್ತಿ ನೀಡಿಕೆ' ಕೋಂಕೋಡಿಯವರ ಭಾಷಣದ ಮುಖ್ಯಾಂಶ.
                ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಾ, 'ಸರಕಾರವು ಕೃಷಿ ಆವಿಷ್ಕಾರ-ಸಂಶೋಧನೆಗಳಿಗೆ ಬೆಂಬಲ, ಸಹಕಾರಕ್ಕೆ ಪ್ರಯತ್ನಿಸಬೇಕು. ಕೃಷಿ ಕ್ಷೇತ್ರ ಬಲವರ್ಧನೆಯಾಗಿ ಲಾಭದಾಯಕ ಎಂಬ ಭಾವನೆ ಯುವಕರಲ್ಲಿ ಬರಬೇಕು. ಈ ನಿಟ್ಟಿನಲ್ಲಿ ಯಂತ್ರ ಮೇಳವು ಯುವಕರಿಗೆ ಕೃಷಿಯತ್ತ ಒಲವು ತೋರಿಸಲು ದಾರಿ' ಎಂದರು.
          ಕಾಸರಗೋಡು ಸಂಸದ ಪಿ.ಕರುಣಾಕರನ್, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಬಲರಾಮ ಆಚಾರ್ಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಇ.ಶಿವಪ್ರಸಾದ್ , ಕ್ಯಾಂಪ್ಕೋ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕ ರಾಧಾಕೃಷ್ಣ ಭಕ್ತ, ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಉಪಸ್ಥಿತರಿದ್ದರು. ಮೂರೂ ದಿವಸ ಸುಮಾರು ಅರುವತ್ತು ಸಾವಿರ ಮಂದಿಯಿಂದ ಮೇಳದ ವೀಕ್ಷಣೆ.

ಕೃಷಿಕರ ಅನುಭವ ಪ್ರಸ್ತುತಿ


             ಮೆದುಳಿಗೆ ಮೇವು ನೀಡುವ ಕೃಷಿಕರ ಅನುಭವ ಕಥನ ಯಂತ್ರ ಮೇಳದ ಹೈಲೈಟ್. ಪವರ್ ಪಾಯಿಂಟ್ ಮೂಲಕ ವಿಚಾರಗಳ ಪ್ರಸ್ತುತಿ. ತಮಗಾಗಿ ಮಾಡಿಕೊಂಡ ಅವಿಷ್ಕಾರಗಳು, ಅದರ ಗೆಲುವುಗಳ ಬಗ್ಗೆ ಅನುಭವಗಳನ್ನು ವಿನಿಮಯಮಾಡಿಕೊಳ್ಳುವ ಆಸಕ್ತಿ ಮೆಚ್ಚುವಂತಾದ್ದು.

              ಕೃಷಿ ಯಾಂತ್ರೀಕರಣ: ಮೊದಲ ದಿವಸದ ಮೊದಲ ಗೋಷ್ಠಿ. ಕ್ಯಾಂಪ್ಕೋ ವ್ಯವಸ್ಥಾಕಪ ನಿರ್ದೇಶಕ ಸುರೇಶ್ ಭಂಡಾರಿಯವರ ಅಧ್ಯಕ್ಷತೆ. 'ಕೃಷಿ ಕೆಲಸಗಳಲ್ಲಿ ನಾನು ಪೂರ್ತಿ ಸ್ವಾವಲಂಬಿ' ಎನ್ನುವ ಬನಾರಿ ಈಶ್ವರ ಪ್ರಸಾದ್, 'ರೈತ ಆವಿಷ್ಕಾರಗಳಿಗೆ ಅಡಿಕೆ ಸಂಸ್ಥೆಗಳು ಬೆಂಬಲವಾಗಿ ನಿಲ್ಲಬೇಕು' ಎಂದ ತೀರ್ಥಹಳ್ಳಿಯ ಕೂಳೂರು ಸತ್ಯನಾರಾಯಣ, 'ಅನಿವಾರ್ಯವೇ ಆವಿಷ್ಕಾರಕ್ಕೆ ಮೂಲಕ' ಎನ್ನುವ ನಿಟಿಲೆ ಮಹಾಬಲೇಶ್ವರ ಭಟ್ - ಇವರು ಕೃಷಿ ಯಾಂತ್ರೀಕರಣದ ತಮ್ಮ ಅನುಭವ, ಆವಿಷ್ಕಾರಗಳನ್ನು ಪ್ರಸ್ತುತಪಡಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಗೋಷ್ಠಿಯನ್ನು ನಿರ್ವಹಿಸಿದರು.

              ಪಶುಪಾಲನೆ-ಯಾಂತ್ರೀಕರಣದ ಸಾಧ್ಯತೆ ಮತ್ತು ಸವಾಲುಗಳು : ಶಾಂತಾರಾಮ ಹೆಗಡೆಯವರ ಅಧ್ಯಕ್ಷತೆ. ಶಿರಸಿ ನೀರ್ನಳ್ಳಿಯ ಸೀತಾರಾಮ ಹೆಗಡೆಯವರಿಂದ ಹೈನುಗಾರಿಕೆ ಅನುಭವ ಪ್ರಸ್ತುತಿ. ಹಟ್ಟಿಯ ಕೆಲಸಗಳ ಸರಳೀಕರಣ ಮತ್ತು ಯಾಂತ್ರೀಕರಣಗೊಳಿಸಿದ ಹೆಗಡೆಯವರ ಉಪಾಯಗಳು ಹೆಚ್ಚು ಗಮನ ಸೆಳೆಯಿತು. ಡಾ.ದಿನೇಶ್ ಸರಳಾಯರಿಂದ ನಿರೂಪಣೆ.
            ಬಯಲು ಪ್ರಾತ್ಯಕ್ಷಿಕೆ : ಚಿಕ್ಕಮಗಳೂರಿನ ಅನ್ನಪೂರ್ಣ ಏಜೆನ್ಸೀಸ್, ಪುತ್ತೂರು ಸಾಯ ಎಂಟರ್ಪ್ರೈಸಸ್ ಸಂಸ್ಥೆಯ ಸಾಯ ಗೋವಿಂದ ಪ್ರಕಾಶ, ವಿಟ್ಲದ ಉರಿಮಜಲು ಮೋಹನ ಇವರಿಂದ ಸ್ಪ್ರೇಗನ್ನುಗಳ ಪ್ರಾತ್ಯಕ್ಷಿಕೆ; ಚೀಮುಳ್ಳು ಸೀತಾರಾಮ ಅವರಿಂದ ಮಿಸ್ಟ್ಬ್ಲೋವರ್ಗಳ ಕಾರ್ಯಕ್ಷಮತೆ, ಮಂಚಿಯ ರಾಮ್ ಕಿಶೋರ್ ಅವರಿಂದ ರೋಪ್ ವೇ ಪ್ರಾತ್ಯಕ್ಷಿಕೆಗಳಲ್ಲಿ ಕೃಷಿಕರ ಸ್ಪಂದನ ಶ್ಲಾಘನೀಯ. ಸಲಕರಣೆಯ ಸಹಾಯದಿಂದ ತೆಂಗಿನ ಮರವೇರುವ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟ ಕಾಸರಗೋಡಿನ ಶ್ರೀಮತಿ ಕೃಷ್ಣವೇಣಿ ಅವರ ಅನುಭವ ಸಾವಿರಾರು ಮಂದಿಯ ನೋಟಕರ ಹುಬ್ಬೇರಿಸಿತು! ಜಾಬ್ ವರ್ಕ್ ಮೂಲಕ ತೆಂಗು ಕೊಯ್ಯುವ ವೃತ್ತಿಯನ್ನು ರೂಢಿಸಿಕೊಂಡ ಕೃಷ್ಣವೇಣಿ ಅವರ ಸಾಧನೆ, ಅನುಭವ ಮಾದರಿ.

              ಮರ ಏರದೆ ನೆಲದಲ್ಲಿಯೇ ನಿಂತು ಅಡಿಕೆ ಕೊಯ್ಯುವ 'ವಂಡರ್ ಕ್ಲೈಂಬರ್' ಯಂತ್ರ ಕಾಲದ ಆವಶ್ಯಕತೆ. ಕಳೆದ ತಿಂಗಳು ಕೋಝಿಕೋಡಿನಲ್ಲಿ ಬಿಡುಗಡೆಗೊಂಡ ಯಂತ್ರವನ್ನು ತಯಾರಿಸಿದವರು ಪ್ರಕಾಶನ್. ಅಡಿಕೆ ಮರಕ್ಕೆ ರಾಟೆ ಮೂಲಕ ಯಂತ್ರವು ಮೇಲೇರುತ್ತದೆ. ಅಡಿಕೆ ಗೊನೆ ತನಕ ಹೋದ ಬಳಿಕ ಯಂತ್ರದ ಮೇಲ್ಬಾಗದಲ್ಲಿರುವ ಬ್ಲೇಡ್ ವೇಗದಿಂದ ಗೊನೆಗೆ ಬಡಿಯುತ್ತದೆ. ಗೊನೆ ತುಂಡಾಗಿ ಕೆಳಗೆ ಬೀಳುತ್ತದೆ. ಪ್ರಕಾಶನ್ ಪ್ರಾತ್ಯಕ್ಷಿಕೆ ಮೂಲಕ ಅಡಿಕೆ ತುಂಡರಿಸುವುದನ್ನು ತೋರಿಸಿಕೊಟ್ಟಾಗ ಕೃಷಿಕರು ಕರತಾಡನದ ಮೂಲಕ ಅವರ ಆವಿಷ್ಕಾರಕ್ಕೆ ಗೌರವ ಸಲ್ಲಿಸಿದರು. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಈ ಎಲ್ಲಾ  ಪ್ರಾತ್ಯಕ್ಷಿಕೆಯನ್ನು ನಿರ್ವಹಿಸಿದ್ದರು.

              ಕೃಷಿ ಯಾಂತ್ರೀಕರಣದಲ್ಲಿ ಹೊಸತು -  ಅಳವಡಿಸುವ ಸಾಧ್ಯತೆಗಳು:  ತೀರ್ಥಹಳ್ಳಿ ಸಮೀಪದ 'ವಿಟೆಕ್'ನ ವಿಶ್ವನಾಥ್ ಕುಂಟುವಳ್ಳಿ, ಚಿದಂಬರ ಕುಂಟುವಳ್ಳಿ, ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುರೇಶ್ ಭಂಡಾರಿ, ಬಾಲಚಂದ್ರ ಹೆಗಡೆ ಸಾಯಿಮನೆ, ಸಾಯಿ ಎಂಟರ್ಪ್ರೈಸಸ್ನ ಗೋವಿಂದ ಪ್ರಕಾಶ್ ತಮ್ಮ ಅನುಭವಗಳನ್ನು ಪ್ರಸ್ತುತಪಡಿಸಿದರು.  ಕ್ಯಾಂಪ್ಕೋದ ಹಿರಿಯ ನಿರ್ದೇಶಕ ಕರುಣಾಕರ ನಂಬಿಯಾರ್ ಅವರ ಅಧ್ಯಕ್ಷತೆ. ಉಪನ್ಯಾಸಕ ಪರೀಕ್ಷಿತ ತೋಳ್ಪಾಡಿ ನಿರೂಪಣೆ.

                  ಜಾಬ್ ವರ್ಕ್ ಮೂಲಕ ಯಂತ್ರಗಳ ಬಳಕೆ : ತೀರ್ಥಹಳ್ಳಿಯ ಅಮರನಾಥ್ ಪಡಿಯಾರ್, ಹುಳುಗೋಳ ಸಹಕಾರ ಸೊಸೈಟಿಯ ಕಾರ್ಯದರ್ಶಿ ಶಿರಸಿಯ ಆರ್.ಎಮ್.ಭಟ್, ಹೊಸನಗರದ ರೇಣುಕೇಶ್ ಆನಂದಯ್ಯ ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರು ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಟ್ರಸ್ಟಿಗಳಾದ ಶ್ರೀ ಮಂಚಿ ಶ್ರೀನಿವಾಸ್ ಆಚಾರ್ ಅಧ್ಯಕ್ಷತೆ. ಲೇಖಕ ಪ್ರಕಾಶ ಭಟ್ ಕರ್ಕಿ ನಿರೂಪಣೆ. 

                 ಎರಡನೇ ದಿವಸದ ಮೇಳದ ಕೊನೆಯ ಗೋಷ್ಠಿ : ನೀರಿನಿಂದ ವಿದ್ಯುತ್ ಉತ್ಪಾದನೆ ಕುರಿತು ರತ್ನಾಕರ ಜಯಪುರ, ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದನೆ ವಿಚಾರವಾಗಿ ಡಾ. ಅಶೋಕ್ ಕುಂದಾಪುರ ಮತ್ತು ಕೃಷಿಕ ಶೇಷಾದ್ರಿ ಕನ್ನಂಗಿ ಇವರು ಕೇಂದ್ರೀಕೃತ ಬೆಳೆ ಸಂಸ್ಕರಣೆಯನ್ನು ಮಾಡುವ ಕುರಿತು ತಮ್ಮ ಅನುಭವಗಳನ್ನು ವಿವರಿಸಿದರು. ವಿ.ವಿ ಭಟ್,  ಐ.ಎ.ಎಸ್ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥರಾದ ಪ್ರೊ. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

          ಯಂತ್ರಮೇಳದ ಕೊನೆಯ ದಿವಸದ ಗೋಷ್ಠಿಗಳು : ವಿಟ್ಲ ಸೀತಾರಾಮ ಭಟ್, ಕೋಡಿಬೈಲು ಸತ್ಯನಾರಾಯಣ ಇವರಿಂದ ತೋಟದೊಳಗೆ ಅಂತರ್ಸಾಗಾಟ, ಗೋಪಾಲಕೃಷ್ಣ ಭಟ್ ಅವರಿಂದ ರಿಕ್ಷಾದಿಂದ ತೋಟಗಳಲ್ಲಿ ಸರಕು ಸಾಗಾಟದ ಅನುಭವ ಪ್ರಸ್ತುತಿ. ಕೃಷಿಕ ರಾಮ್ ಕಿಶೋರ್ ಮಂಚಿ ಇವರಿಂದ ನಿರೂಪಣೆ.

          ವಿವೇಕಾನಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೃಷಿ ಉಪಯೋಗಿ ಆವಿಷ್ಕಾರಗಳ ವಿವರಗಳನ್ನು ಕಾಲೇಜಿನ ಪ್ರಿನ್ಸಿಪಾಲ್ ಡಾ.ಅಶೋಕ್ ಕುಮರ್ ಅಧ್ಯಕ್ಷತೆಯಲ್ಲಿ ಜರುಗಿದ ಗೋಷ್ಠಿಯಲ್ಲಿ ವಿವರಿಸಲಾಯಿತು. ಉಪನ್ಯಾಸಕ ಉದಯಕುಮಾರ್ ಅವರ ನಿರೂಪಣೆ.  ಹನಿ ನೀರಾವರಿ ಪ್ರಾಮುಖ್ಯತೆ ಮತ್ತು ರಸಗೊಬ್ಬರಗಳನ್ನು ನೀರಿನ ಮೂಲಕ ಪೂರೈಕೆ ಮಾಡುವ ಕುರಿತು ಶ್ರೀನಿವಾಸ ನಾಯ್ಕ್, ಆಧುನಿಕ ಸಸ್ಯ ಸಂರಕ್ಷಣಾ ಉಪಕರಣಗಳ ಕುರಿತು ಎಸ್.ವಿ.ರಂಗಸ್ವಾಮಿ ಕಂಪೆನಿಯ ಪ್ರತಿನಿಧಿಗಳಿಂದ ಮಾಹಿತಿ. ಪತ್ರಕರ್ತ, ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ ಇವರಿಂದ ನಿರ್ವಹಣೆ. 

          ಮೂರೂ ದಿವಸ ನಡೆದ ಗೋಷ್ಠಿಗಳಲ್ಲಿ ಕೃಷಿಕರ ಉಪಸ್ಥಿತಿ ವಿರಳವಾಗಿದ್ದರೂ, ಮಾಹಿತಿಗಳ ವಿನಿಮಯ ಹೇರಳ. ಪ್ರಶ್ನೋತ್ತರಗಳ ಮೂಲಕ ಸಂಶಯ ಪರಿಹಾರ. ಗಟ್ಟಿ ಹೂರಣಗಳಿದ್ದ ವಿಚಾರಗೋಷ್ಠಿಗಳ ಕಾರ್ಯಸೂಚಿಗಳು ಪ್ರಸ್ತುತ ಕೃಷಿ ರಂಗದ ಸಮಸ್ಯೆಗಳತ್ತ ಪರಿಹಾರದ ನೋಟ ನೀಡಿವೆ.

Friday, November 2, 2012

ಕೃಷಿ ಯಂತ್ರ ಮೇಳಕ್ಕೆ ಶುಭ ಚಾಲನೆ




                ಪುತ್ತೂರು (ದ.ಕ.) ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದಿನಿಂದ - ನವಂಬರ್ 2 ರಿಂದ 4ರ ತನಕ - ಕೃಷಿ ಯಂತ್ರ ಮೇಳಕ್ಕೆ ಚಾಲನೆ. ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಶಿ ಡಾ.ವೀರೇಂದ್ರ ಹೆಗ್ಗಡೆಯವರಿಂದ ದೀಪಜ್ವಲನೆ ಮೂಲಕ ಉದ್ಘಾಟನೆ. ಜತೆಗೆ ರಿಮೋಟ್ ಮೂಲಕ ಪಂಪ್ ಚಾಲೂ ಮಾಡಿ 'ಯಾಂತ್ರೀಕೃತ'ವಾಗಿ ಚಾಲನೆ.

                 ಅವರ ಉದ್ಘಾಟನಾ ಭಾಷಣದ ಒಂದು ನೋಟ : ನಾವು ಕೃಷಿಕರಾಗಿ ಉಳಿದರೆ ನಮ್ಮ ಮಕ್ಕಳಿಗೆ ಭವಿಷ್ಯವಿಲ್ಲ ಎಂಬ ಹಂತಕ್ಕೆ ಕೃಷಿಕರು ಬಂದುಬಿಟ್ಟಿದ್ದಾರೆ. ನಗರದಿಂದ ವಲಸೆ ಬಂದು ಹಳ್ಳಿಯಲ್ಲಿ ಕೃಷಿ ಮಾಡಲು ಉದ್ಯುಕ್ತರಾದವರು ಬಹಳಷ್ಟು ಮಂದಿ ಸಿಗುತ್ತಾರೆ. ಕೃಷಿ ಕೆಲಸಗಳಲ್ಲಿ ವೆಚ್ಚ ಹೆಚ್ಚಾಗಿದೆ. ಅದಕ್ಕೆ ಹೊಂದುವಂತಹ ಜೀವನಶೈಲಿ ನಮ್ಮಲ್ಲಿಲ್ಲ. ಬದುಕಿನ ಆಸೆಗಳು, ಆಕಾಂಕ್ಷೆಗಳು ಹೇರಳವಾಗಿವೆ. ಅದನ್ನೆಲ್ಲಾ ಕೃಷಿ ಭರಿಸಬೇಕೆನ್ನುವುದು ಎಷ್ಟು ಸರಿ? ಇದ್ದ ಭೂಮಿಯಲ್ಲಿ ಹೆಚ್ಚು ಉತ್ಪನ್ನಗಳನ್ನು ಪಡೆಯುವ ದಾರಿ ಹುಡುಕಬೇಕು. ಆಧುನಿಕ ತಂತ್ರಜ್ಞಾನಗಳು ಎಲ್ಲಾ ರಂಗವನ್ನು ಪ್ರವೇಶಿಸಿವೆ. ಆಷ್ಟೇ ವೇಗದಲ್ಲಿ ಕೃಷಿ ಕ್ಷೇತ್ರಕ್ಕೆ ಅವು ಪ್ರವೇಶವಾಗಿಲ್ಲ. ಕೂಲಿ ಸಮಸ್ಯೆ ಇಂದು ನಿನ್ನೆಯದಲ್ಲ. ಏಳು ದಶಕದ ಹಿಂದೆ ಅಮೇರಿಕಾ, ಯುರೋಪ್ ದೇಶಗಳಲ್ಲಿ ಕಾರ್ಮಿಕ ಸಮಸ್ಯೆ ತಲೆದೋರಿವೆ. ಕಳೆದೆರಡು ದಶಕದಿಂದ ನಮ್ಮಲ್ಲೂ ಸಮಸ್ಯೆ ಬೆಳೆದಿದೆ. ಹತ್ತು ವರುಷಗಳ ಕಾಲ ಇದಕ್ಕೆ ಪರ್ಯಾಯ ದಾರಿ ಕಂಡುಕೊಳ್ಳದೆ ಸಮಸ್ಯೆಯನ್ನೇ ವೈಭವೀರಿಕರಿಸಿದೆವು. ಈಗ ಪರಿಹಾರದ ದಾರಿಯನ್ನು ಹುಡುಕುತ್ತಿದ್ದೇವೆ. ಕೃಷಿಯಲ್ಲಿ ಎದುರಾಗುವ ಸಮಸ್ಯೆಯನ್ನು ಎದುರಿಸಿ, ಅದನ್ನು ಸವಾಲಾಗಿ ಸ್ವೀಕರಿಸಬೇಕು. ಅದಕ್ಕೆ ಬೆನ್ನು ಹಾಕುವುದು ಸರಿಯಲ್ಲ. ಕೃಷಿ ಉಪಕರಣ, ಯಂತ್ರಗಳ ಆವಿಷ್ಕಾರಗಳಿಗೆ ಪ್ರಖರ ಮಾಧ್ಯಮ ಬೆಳಕು ಬಿದ್ದಿಲ್ಲ. ನಮ್ಮಲ್ಲಿ ಅಕ್ಕಿ ಮಿಲ್ಲುಗಳು ಹೇಗೆ ಅಭಿವೃದ್ಧಿಯಾಗಿವೆಯೋ, ಅದೇ ರೀತಿ ಅಡಿಕೆ ಸಂಸ್ಕರಣೆಗೂ ಮಿಲ್ ರೂಪಿತವಾಗಬೇಕು.
.
                ಕ್ಯಾಂಪ್ಕೋದ ಆಧ್ಯಕ್ಷ ಕೊಂಕೋಡಿ ಪದ್ಮನಾಭ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ಎಸ್.ಸಿ.ಡಿ.ಸಿ.ಸಿ.ಬ್ಯಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಪ್ರಸಾದ್, ಬಾಹ್ಯಾಕಾಶ ಮತ್ತು ಅಣುಶಕ್ತಿ ಆಯೋಗದ ಕಾರ್ಯದರ್ಶಿ ವಿ.ವಿ.ವಿ.ವಿ ಭಟ್.ಶುಭಾಶಂಸನೆ ಮಾಡಿದರು.

                ಈ ಸಂದರ್ಭದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರಜತ ವರ್ಷಕ್ಕೆ ಕಾಲಿಟ್ಟ ಕೃಷಿ ಮಾಧ್ಯಮ ಅಡಿಕೆ ಪತ್ರಿಕೆಯ ವಿಶೇಷಾಂಕವನ್ನು ಮತ್ತು ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ 'ಕೃಷಿಕ ಮಾಹಿತಿ' ಪುಸ್ತಿಕೆಯನ್ನು ಅನಾವರಣಗೊಳಿಸಿದರು.

                ವೇದಿಕೆಯಲ್ಲಿ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಬಲರಾಮ ಆಚಾರ್ಯ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ. ಉಪಸ್ಥಿತರಿದ್ದರು.

ವಿಚಾರಗೋಷ್ಠಿ:
ಅಪರಾಹ್ನ 'ಕೃಷಿ ಯಾಂತ್ರೀಕರಣದ ಅನುಭವಗಳು ಎಂಬ ವಿಚಾರದಲ್ಲಿ ಅನುಭವ ಪ್ರಸ್ತುತಿ. ಅನುಭವಿ ಕೃಷಿಕರಾದ ಕೂಳೂರು ಸತ್ಯನಾರಾಯಣ, ಈಶ್ವರ ಪ್ರಸಾದ್ ಬನಾರಿ ಮತ್ತು ನಿಟಿಲೆ ಮಹಾಬಲೇಶ್ವರ ಭಟ್ ತಮ್ಮ ಆವಿಷ್ಕಾರಗಳತ್ತ ಪವರ್ ಪಾಯಿಂಟ್ ಮೂಲಕ ಬೆಳಕು ಹಾಕಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಗೋಷ್ಠಿಯನ್ನು ಮುನ್ನಡೆಸಿದ್ದರು.

'ಪಶುಪಾಲನೆ - ಯಾಂತ್ರೀಕರಣದ ಸಾಧ್ಯತೆ-ಸವಾಲುಗಳೂ - ಈ ಗೋಷ್ಠಿಯ ಅಧ್ಯಕ್ಷತೆನ್ನು ಶಾಂತಾರಾಮ ಹೆಗಡೆ ವಹಿಸಿದ್ದರು. ಶಿರಸಿ ನೀರ್ನಳ್ಳಿಯ ಅನುಭವಿ ಕೃಷಿಕ ಸೀತಾರಾಮ ಹೆಗಡೆ ನೀರ್ನಳ್ಳಿಯವರು ತಮ್ಮ ಹೈನುಗಾರಿಕೆ ಅನುಭವವನ್ನು ಪ್ರಸ್ತುತಪಡಿಸಿದರು. ಡಾ.ದಿನೇಶ್ ಸರಳಾಯ ನಿರ್ವಹಣೆ.

                ನೂರ ಐವತ್ತೇಳು ಮಳಿಗೆಗಳು ಭರ್ತಿ. ವಿಪರೀತ ಮಳೆ. ಸ್ವಲ್ಪಮಟ್ಟಿಗೆ ವ್ಯವಸ್ಥೆಯಲ್ಲಿ ಏರುಪೇರು. ಆದರೂ ಸಮಯಕ್ಕೆ ಸರಿಯಾಗಿ ಆರಂಭವಾದ ಕಲಾಪಗಳು. ದಿನಪೂರ್ತಿ ಮಳಿಗೆಗಳಲ್ಲಿ ಕೃಷಿಕರ ಸಂದೋಹ.