ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿಯವರು ಉದ್ಘಾಟಿಸುತ್ತಾರೆನ್ನುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗ ಖುಷಿಯಾಗಿತ್ತು. ತನ್ನ ಪ್ರಖರ ನಿಷ್ಠುರ ಚಿಂತನೆಗಳಲ್ಲಿ ರಾಜಿಯಾಗದೆ, ಸದಾ ವಿವಾದಗಳನ್ನೇ ಮೈಮೇಲೆ ಎಳೆದುಕೊಳ್ಳುತ್ತಾ, ಅದರಲ್ಲಿ ಮಿಂದೆದ್ದು ಬರುವ ಅನಂತಮೂರ್ತಿಯವರು ನುಡಿಸಿರಿಯ ಬಗ್ಗೆ ಏನನ್ನುತ್ತಾರೆ ಎಂಬ ಕುತೂಹಲವಿತ್ತು. ಅವರ ಚಿಂತನೆಗಳು 'ಎಡವೋ, ಬಲವೋ' ಎನ್ನುವುದು ಮುಖ್ಯವಲ್ಲ. ಹೇಳುವುದರಲ್ಲಿ ಸ್ಪಷ್ಟ ಮತ್ತು ನಿಖರ ನಿಲುವುಗಳು ಬಹುಕಾಲದಿಂದ ನಾನು ಮೆಚ್ಚಿದ ಸಂಗತಿ.
ಬೆಂಗಳೂರಿನಲ್ಲಿ ಬಿಟಿ ಬದನೆ ಹೋರಾಟ ತಾರಕಕ್ಕೆ ಏರಿದಾಗ ಕೇಂದ್ರ ಸಚಿವರು ಬಂದಿದ್ದರು. ನಡೆದ ಸಭೆಯಲ್ಲಿ ಅನಂತಮೂರ್ತಿಯವರೂ ಸಾಥ್ ನೀಡಿದ್ದರು. ಕೃಷಿಕರ ಪರವಾಗಿ ಮಾತನಾಡಿದರು. ಆಳ್ವಾಸ್ ನುಡಿಸಿರಿಗೂ ಬಂದರು. ಉದ್ಘಾಟಿಸಿದರು. 'ಅಭಿವೃದ್ಧಿ ಹೆಸರಿನಲ್ಲಿ ಕೃಷಿ ನಾಶವಾಗುತ್ತಿದೆ. ಅದು ನಾಶವಾದರೆ ಅದರೊಂದಿಗೆ ಕಲೆ, ಸಂಸ್ಕೃತಿ ನಾಶವಾಗುತ್ತದೆ. ಅಭಿವೃದ್ಧಿ ಎನ್ನುವ ಪದದ ಬದಲು ಸರ್ವೋದಯ ಎಂಬುದು ಸರಿಯಾದ ಪರಿಕಲ್ಪನೆ. ದೇಶಕ್ಕೆ ಅನಿವಾರ್ಯವಿದು' ಎಂದರು.
ಬಹುಶಃ ಹಿರಿಯ ಸಾಹಿತಿಯೊಬ್ಬರು ನೆಲ-ಜಲದ ಕುರಿತಾಗಿ ಇಷ್ಟೊಂದು ಕರಾರುವಾಕ್ಕಾಗಿ ಮಾತನಾಡಿದ್ದು ಅವರ ಮೇಲಿನ ಗೌರವ ಹೆಚ್ಚಿಸಿತು. ನನಗೆ ಕೃಷಿ, ಗ್ರಾಮೀಣ ವಿಚಾರಗಳಲ್ಲಿ ಆಸಕ್ತಿಯಿದೆ ಎಂಬುದರಿಂದ ಅಲ್ಲ. ಪ್ರಕೃತ ಕಾಲಘಟ್ಟದ ಕೃಷಿ ಚಿಂತನೆಗಳು, ಗ್ರಾಮೀಣ ವ್ಯಾಖ್ಯೆಗಳು ಕೃಷಿ-ಕೃಷಿಕನಿಗೆ ಪೂರಕವಾಗಿರದೆ ಅಲ್ಲೆಲ್ಲಾ ಸೋಗಲಾಡಿತನ ಕುಣಿಯುತ್ತಿದೆ. ನಾಡಿನ ದೊರೆಗಳಿಗೆ ರೈತನ ಉದ್ಧಾರದ ಮಂತ್ರ ಗಂಟಲ ಮೇಲಿನದು. ಕೃಷಿ ಭೂಮಿಯನ್ನು 'ಅಭಿವೃದ್ಧಿ'ಯ ಹೆಸರಿನಲ್ಲಿ ಮಾರಾಟ ಮಾಡಲು ಮುಂದಾಗುವ ಆಡಳಿತ ವ್ಯವಸ್ಥೆಗೆ ಅನಂತಮೂರ್ತಿಯವರ ಮಾತಲ್ಲಿ ಎಚ್ಚರವಿದೆ. ನೆಲ, ಜಲ ಉಳಿಸುವುದು ಕಾಲದ ಅನಿವಾರ್ಯತೆ.
ಮಾಲ್ ಸಂಸ್ಕೃತಿ ಬೇರೂರುತ್ತಿದೆ. ಕಿಸೆಯಲ್ಲಿ ರೊಕ್ಕ ಇದ್ದರೆ ಆಯಿತು, ಮೂಟೆಗಟ್ಟಲೆ ಸಾಮಗ್ರಿಗಳು ಮನೆಯೊಳಗೆ ಸೇರುತ್ತವೆ. ಕಾಫಿಗೆ ಬಳಸುವ ಹಾಲು, ಬಟ್ಟಲಿನ ಅನ್ನ, ಸಾರೊಳಗೆ ಅವಿತಿರುವ ಟೊಮೆಟೋ, ತರಕಾರಿ - ಇವನ್ನೆಲ್ಲಾ ಬೆಳೆಯಬೇಕಾದವರು ಯಾರು? ಈಚೆಗೆ ಭಾಷಣವೊಂದರಲ್ಲಿ ಒಬ್ಬರು ಹೇಳಿಯೇ ಬಿಟ್ಟರು, 'ಬೆಳೆಯುವುದು ಕೃಷಿಕನ ಡ್ಯೂಟಿ'! ಕೃಷಿ, ಕೃಷಿಕನ ಕುರಿತು ಗೌರವ ಇಟ್ಟುಕೊಳ್ಳದೆ, ನಗರದಲ್ಲಿ ಕುಳಿತು ಕೃಷಿಕನ ಡ್ಯೂಟಿಯ ಬಗ್ಗೆ ಹಗುರವಾಗಿ ಮಾತನಾಡುವ ಬುದ್ಧಿವಂತರಿಗೆ ಅನಂತಮೂರ್ತಿಯವರ ಹೇಳಿಕೆಯಲ್ಲಿ ಸಂದೇಶವಿದೆ. ಆದರೆ ಸಾಹಿತ್ಯ ಸೂಕ್ಷ್ಮಗಳು, ಬದುಕಿನ ಅನುಭವಗಳು, ರಸಜ್ಞಾನಗಳು, ಬೌದ್ಧಿಕತೆಗಳು ರಸಾತಳಕ್ಕಿಳಿದ ಈ ಹೊತ್ತಲ್ಲಿ ಯಾವುದೇ ಸಾಹಿತ್ಯ, ವಿಚಾರಗಳು ಎಷ್ಟು ಮಂದಿಗೆ ಅರ್ಥವಾಗುತ್ತವೆ. ಎಲ್ಲಾ ಮಂಡನೆಗಳಿಗೆ ಅಡ್ಡಮಾತುಗಳು ಪರಿಹಾರವಲ್ಲ.
ಕೃಷಿ ಅಜ್ಞಾತವಾಗುತ್ತಿದೆ. ಕೃಷಿ ಉತ್ಪನ್ನಗಳು ಕುಂಠಿತವಾಗುತ್ತಿದೆ. ರೈತನ ಮಗ ರೈತನಾಗಿಲ್ಲ. ನಗರ ಅವನನ್ನು ಕೈಬೀಸಿ ಕರೆಯುತ್ತಿದೆ. ರೈತನಿಗಿಂದು ಹೆಣ್ಣು ಸಿಗುವುದೂ ತ್ರಾಸ. ಹಳ್ಳಿಯ ಜಾಣ್ಮೆಗಳು ಮಸುಕಾಗುತ್ತಿವೆ. ಹಸುರು ಮನಸ್ಸುಗಳಿಲ್ಲ. ಈ ಎಲ್ಲಾ 'ಇಲ್ಲ'ಗಳಿಗೆ ನುಡಿಸಿರಿ ವೇದಿಕೆಯಲ್ಲಾಡಿದ ಅನಂತಮೂರ್ತಿಯವರ ಎಚ್ಚರಿಕೆ ಒಂದು ಕರೆಗಂಟೆ.
ಸಾಹಿತ್ಯದ ವೇದಿಕೆಗಳಲ್ಲಿ ಕೃಷಿ, ಗ್ರಾಮೀಣ ವಿಚಾರಗಳಿಗೆ ಹಿಂದಿನ ಬೆಂಚು! ಕೃಷಿ ಕ್ಷೇತ್ರಗಳ ಸಾಹಿತ್ಯವು ಸಾಹಿತ್ಯವಲ್ಲ! ಕವನ, ಕಥೆ, ಕಾವ್ಯ, ಕಾದಂಬರಿ ಬರೆದರೆ ಮಾತ್ರ ಆತ ಸಾಹಿತಿ! ಬಹು ದಿನಗಳಿಂದ ಕಾಡುವ ಪ್ರಶ್ನೆ. ಹಾಗಾಗಿ ಸಾಹಿತ್ಯದ ವಿಚಾರಗಳು ಬಂದಾಗ ಕೃಷಿ ಸಾಹಿತ್ಯ-ವಿಚಾರ-ಸಂಕಟಗಳಿಗೆ ಆದ್ಯತೆಯಿಲ್ಲ. ಕೃಷಿಯುಳಿದರೆ ಕಲೆಯೂ ಉಳಿಯುತ್ತದೆ, ಸಂಸ್ಕೃತಿಯೂ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ನೆಲ-ಜಲ-ಗ್ರಾಮೀಣ ವಿಚಾರಗಳು ಮಂಥನವಾಗಲಿ. ಹೊಸ ಪರಂಪರೆಗೆ ಆಳ್ವಾಸ್ ನುಡಿಸಿರಿ ಸಾಕ್ಷಿಯಾಗಲಿ.
ಡಾ.ಯು.ಆರ್.ಅನಂತಮೂರ್ತಿಯವರು ನುಡಿಸಿರಿಗೆ ಚಾಲನೆ ನೀಡಿದ್ದಾರೆ. ದೈಹಿಕ ಆಶಕ್ತತೆ ಸ್ಪಷ್ಟವಾಗಿ ಗೋಚರವಾಗುತ್ತಿದ್ದರೂ, ವಿಚಾರದ ಘರ್ಜನೆಯಲ್ಲಿ ರಾಜಿಯಿಲ್ಲ. ಹೇಳುವುದರಲ್ಲಿ ದಾಕ್ಷಿಣ್ಯವಿಲ್ಲ. ಯಾಕೆಂದರೆ ಅವರು ಡಾ.ಯು.ಆರ್. ಅನಂತಮೂರ್ತಿ.
ಇತರ ವಿಚಾರಗಳು:
ಮಹತ್ತರ ಜ್ಞಾನ, ಪ್ರತಿಭೆಯಿರುವ ಅದೆಷ್ಟೋ ಮಂದಿ ಕೆಳವರ್ಗದಲ್ಲೂ ಇದ್ದಾರೆ. ಇಂಗ್ಲಿಷ್ ಬಾರದ ಕಾರಣ ಅದೆಷ್ಟೋ ಗ್ರಾಮೀಣ ಕನ್ನಡ ಪ್ರತಿಭೆಗಳು ಕಮರುತ್ತಿವೆ. ಇವುಗಳು ಬೆಳಕಿಗೆ ಬರಬೇಕಿದ್ದರೆ ಮಾತೃಭಾಷೆಯ ಶಿಕ್ಷಣ ಅನಿವಾರ್ಯ. ವಿಚಾರಗ್ರಹಣಕ್ಕೆ ಮಾತೃಭಾಷಾ ಶಿಕ್ಷಣ ಅನುಕೂಲವಾದರೆ ಅದು ಕಡ್ಡಾಯವಾಗಬೇಕು. ಕನ್ನಡದಲ್ಲಿ ಬೇರೆ ಬೇರೆ ಬೀದಿಗಳಿವೆ. ಬಿಜಾಪುರದ ಬೀದಿ, ಮೈಸೂರಿನ ಬೀದಿ, ಬೆಂಗಳೂರು ಬೀದಿ, ದಕ್ಷಿಣ ಕನ್ನಡದ ಬೀದಿ... ಆದರೆ ಈ ಬೀದಿಗಳೆಲ್ಲವನ್ನೂ ಒಂದಾಗಿಸುವ ಕನ್ನಡ ಹೆದ್ದಾರಿಯೊಂದನ್ನು ರೂಪಿಸುವ ಉದ್ದೇಶ ದ.ರಾ.ಬೇಂದ್ರೆಯವರದ್ದಾಗಿತ್ತು. ಅದನ್ನು ಸಾಕಾರಗೊಳಿಸಿದವರು ಕವಿ ಪ್ರೊ:ಕೆ.ಎಸ್.ನಿಸಾರ್ ಅಹಮದ್. ಇವರು ಮತ್ತು ಡಾ.ರಾಜಕುಮಾರ್ ಇಡಿ ಕರ್ನಾಟಕಕ್ಕೆ ಒಗ್ಗುವ ಭಾಷೆಯನ್ನು ನಿರೂಪಿಸಿದವರು. ಡಾ.ಮೋಹನ ಆಳ್ವರನ್ನು 'ಸಿರಿವಂತ' ಎಂಬ ಬಣ್ಣನೆ. ನಾಡಿನಲ್ಲಿ ಅನೇಕ ಶ್ರೀಮಂತರಿದ್ದಾರೆ. ಆದರೆ ಕನ್ನಡಕ್ಕೆ ಅವರ ಕೊಡುಗೆ ಶೂನ್ಯ. ಆದರೆ ಕನ್ನಡಕ್ಕೆ ಸ್ಪಂದಿಸುತ್ತಾ ಇರುವ ಆಳ್ವರು ಸಿರಿವಂತ.
0 comments:
Post a Comment