ತೀರ್ಥಹಳ್ಳಿ ಸನಿಹದ ಕೃಷಿಕ ತಂತ್ರಜ್ಞ ಕುಂಟುವಳ್ಳಿ ವಿಶ್ವನಾಥರನ್ನು (Kuntuvalli Vishwanath) ಜುಲೈ ತಿಂಗಳಲ್ಲಿ ಮಾತನಾಡಿಸಿದ್ದೆ.. ಚೀನಾ ದೇಶದ ಪ್ರವಾಸದ ಖುಷಿಯ ಗುಂಗಿನಲ್ಲಿದ್ದರು. ನಮ್ಮೂರ ಕೃಷಿಗೆ ಹೊಂದಬಹುದಾದ ಯಂತ್ರಗಳ ತಯಾರಿಯ ನೀಲನಕ್ಷೆ ಮನದಲ್ಲಿ ಅಚ್ಚಾಗುತ್ತಿತ್ತು. ಆಗಷ್ಟೇ ಪುತ್ತೂರಿನ ಯಂತ್ರ ಮೇಳಕ್ಕೆ ಕ್ಯಾಂಪ್ಕೋ ಶ್ರೀಕಾರ ಬರೆದಾಗಿತ್ತು.
'ಚೀನಾ ಜ್ಞಾನವನ್ನು ಬಳಸಿ ನನ್ನ ವರ್ಕ್ ಶಾಪಿನಲ್ಲಿ ಐದಾರು ಯಂತ್ರಗಳನ್ನಾದರೂ ತಯಾರಿಸಿಕೊಂಡು ಯಂತ್ರಮೇಳಕ್ಕೆ ಬರುತ್ತೇನೆ' ಅಂದಿದ್ದರು. ತಲೆತುಂಬಾ ಚೀನಾದ ಯಂತ್ರಗಳು ಸದ್ದುಮಾಡುತ್ತಿರುವುದರಿಂದ ಹೀಗೆಂದಿರಬಹುದೆಂದು ಊಹಿಸಿ ವಿಚಾರ ಮರೆತಿದ್ದೆ.
೨೦೧೨ ನವೆಂಬರ್ 2 ರಿಂದ 4ರ ತನಕ ಜರುಗಿದ ಯಂತ್ರಮೇಳದ ಮುನ್ನಾದಿನ ವಿಶ್ವನಾಥರ 'ವೀಟೆಕ್' ವಾಹನ ಹಾಜರು. 'ನೋಡಿ, ಅಂದೇ ಹೇಳಿದ್ದೇನಲ್ಲಾ.. ಯಂತ್ರ ಸಿದ್ಧವಾಗಿದೆ. ಕ್ಷಮತೆ ನೀವೇ (ಕೃಷಿಕರು) ಪರೀಕ್ಷಿಸಿ' ಎನ್ನುತ್ತಾ ಸಂಬಂಧಿಸಿದ ಕರಪತ್ರ ನೀಡಿದರು.
ತೋಟದೊಳಗೆ ಸಲೀಸಾಗಿ ಸಂಚರಿಸಬಹುದಾದ, ಕೃಷಿ ಕೆಲಸಗಳಿಗೆ ಒಗ್ಗಬಹುದಾದ ರಬ್ಬರ್ ಟ್ರ್ಯಾಕಿನ ಮಿನಿ ಮಣ್ಣುಮಾಂದಿ (ಜೆಸಿಬಿ) ಯಂತ್ರವನ್ನು ತಮ್ಮ ವರ್ಕ್ ಶಾಪಿನಲ್ಲಿ ಸಿದ್ಧಪಡಿಸಿದ್ದರು. ಮೊದಲ ಮಾದರಿ. ಕೈಚಾಲಿತವಾಗಿ ಚಾಲೂ ಆಗುವ ವ್ಯವಸ್ಥೆ. ಆರೂವರೆ ಲಕ್ಷ ರೂಪಾಯಿ ಬೆಲೆ. ಟಿಲ್ಲರ್ ಇಂಜಿನಿನಿಂದ ಚಾಲೂ.
ನಾಲ್ಕರಿಂದ ಆರು ಕ್ವಿಂಟಾಲ್ ಭಾರ ಎಳೆಯುವ ಸಾಮಥ್ರ್ಯದ ಡೀಸೆಲ್ ಚಾಲಿತ ಮಿನಿ ಡಂಪರ್, ಮೂರು ಕ್ವಿಂಟಾಲ್ ಭಾರ ತಾಳಿಕೊಳ್ಳುವ ಪೆಟ್ರೋಲ್ ಚಾಲಿತ ಡಂಪರ್, ಅಡಿಕೆ ಸುಲಿ ಯಂತ್ರ ಮತ್ತು ವಿವಿಧ ಅಟ್ಯಾಚ್ಮೆಂಟ್ಗಳನ್ನು ಜೋಡಿಸಿದ ಕಳೆ ಕಟಾವ್ ಯಂತ್ರಗಳು.. ಮೇಳಕ್ಕಾಗಿಯೇ ರೂಪಿತವಾದವುಗಳು. ಇನ್ನಷ್ಟು ತಾಂತ್ರಿಕ ಅಂಶಗಳು ಅಭಿವೃದ್ಧಿಗೊಂಡು ತೋಟಕ್ಕಿಳಿಯಳಿವೆ.
ನಮ್ಮಲ್ಲಿ ಒಂದು ಕಳೆ ಕಟಾವ್ ಯಂತ್ರ ಇದ್ದುಬಿಟ್ಟರೆ ಅದು ಕಳೆ ಕಟಾವಿಗೇ ಮೀಸಲು. ಬೇರೊಂದು ಕೆಲಸಕ್ಕೆ ಇನ್ನೊಂದು ಯಂತ್ರ ಖರೀದಿಸಬೇಕು. ದುಪ್ಪಟ್ಟು ದರ. 'ಸಬ್ಸಿಡಿಯಲ್ಲಿ ಸಿಗುತ್ತದಲ್ವಾ, ಖರೀದಿಸಿದರಾಯಿತು' ಎನ್ನುವ ಆಕಳಿಕೆ! ತಪ್ಪಲ್ಲ ಬಿಡಿ, ಯಂತ್ರ ಎಂದಾಕ್ಷಣ ಸಬ್ಸಿಡಿಯ ಪೈಲುಗಳ ಚಕ್ರವ್ಯೂಹದ ಸುತ್ತ ಮನಸ್ಸು ಸುತ್ತುತ್ತದೆ. ಇದು ಆಡಳಿತ ವ್ಯವಸ್ಥೆಯ ಅಜ್ಞಾತ ವಿಭಾಗ.
ಚೀನಾದಲ್ಲಿ ಒಂದು ಯಂತ್ರವಿದ್ದರೆ ಸಾಕು, ಹತ್ತಕ್ಕೂ ಮಿಕ್ಕಿ ಕೆಲಸಗಳು! ಯಂತ್ರದ ಹಿಡಿಯ ಮಧ್ಯದಲ್ಲಿ ಕಳಚಿ ಜೋಡಿಸಬಹುದಾದ ವ್ಯವಸ್ಥೆ. ಬೇಕಾದ ಅಟ್ಯಾಚ್ಮೆಂಟನ್ನು ಜೋಡಿಸಿದರಾಯಿತು. ನೆಲದಲ್ಲಿ ನಿಂತು ಮರದ ಗೆಲ್ಲನ್ನು ಸವರಲು ಬ್ಲೇಡ್ ಹೊಂದಿರುವ ಅಟ್ಯಾಚ್ಮೆಂಟ್, ಅಲಂಕಾರಿಕ ಗಿಡವನ್ನು ಟ್ರಿಮ್ ಮಾಡಲು ಇನ್ನೊಂದು.
ಒಂದೇ ಮೋಟಾರಿನಲ್ಲಿ ಹಲವು ಕೆಲಸ. ವಿಶ್ವನಾಥ್ ಹೇಳುತ್ತಾರೆ, ವಾಹನ ತೊಳೆಯಲು, ಹಟ್ಟಿ ತೊಳೆಯಲು, ಮರಕ್ಕೆ ತೂತು ಕೊರೆಯಲು, ಕಟ್ಟಿಗೆ ತುಂಡರಿಸಲು, ಹೊಂಡ ತೋಡಲು.. ಇವೆಲ್ಲದಕ್ಕೂ ಅಟ್ಯಾಚ್ಮೆಂಟ್ಗಳು. ಒಂದೊಂದಕ್ಕೆ ಏನಿಲ್ಲವೆಂದರೂ ಐದು ಸಾವಿರ ರೂಪಾಯಿ ಮೀರದು! ಇವುಗಳಲ್ಲಿ ಕೆಲವನ್ನಾದರೂ ನಮ್ಮ ಭಾಗದ ಕೃಷಿ ಕೆಲಸಗಳಿಗೆ ಅನುಕೂಲವಾಗುವಂತೆ ತಯಾರಿಸುವ ಯೋಚನೆಯನ್ನು ವಿಶ್ವನಾಥ್ ತಲೆತುಂಬ ತುಂಬಿಕೊಂಡಿದ್ದಾರೆ.
ಕಳೆಕೊಚ್ಚುವ ಯಂತ್ರದ ತೂಕ ಸುಮಾರು ಆರು ಕಿಲೋ. ಇದಕ್ಕೆ ಎರಡೂವರೆ ಅಶ್ವಶಕ್ತಿಯ ಮೋಟಾರು. ಪೆಟ್ರೋಲ್ಚಾಲಿತ. ಚೀನಾದಲ್ಲಿ ಬಳಕೆಯಲ್ಲಿರುವ ಎಲ್ಲಾ ಅಟ್ಯಾಚ್ಮೆಂಟ್ಗಳಿಗೆ ಸುಮಾರು ಇನ್ನೂರು ಡಾಲರ್ ಬೆಲೆ. ಅವುಗಳು ಭಾರತಕ್ಕೆ ಬಂದಿಳಿವಾಗ ಹದಿನಾರು ಸಾವಿರ ರೂಪಾಯಿಯ ಸುತ್ತಮುತ್ತ. ನಮ್ಮಲ್ಲಿ ಒಂದು ಯಂತ್ರಕ್ಕೆ ಇದಕ್ಕಿಂತ ಹೆಚ್ಚು ದರವಿದೆ!
ಕಳೆಕೊಚ್ಚು ಯಂತ್ರದ ಕತೆ ಹೀಗಾದರೆ, ಟ್ರಾಕ್ಟರ್ಗಳದು ಒಂದು ಹೆಜ್ಜೆ ಮುಂದೆ. ಒಂದು ಟ್ರಾಕ್ಟರ್ ಇದ್ದರೆ ಸಾಕು, ಮಿಕ್ಕಂತೆ ಎಲ್ಲವೂ ಅಟ್ಯಾಚ್ಮೆಂಟ್ಗಳ ಭರಾಟೆ. ನೇಗಿಲು ಜೋಡಿಸಿದರೆ ಹೂಟೆ, ಸಮತಟ್ಟು ಮಾಡಲು ಇನ್ನೊಂದು, ಹೊಂಡ ತೋಡಲು ಮತ್ತೊಂದು ಅಟ್ಯಾಚ್ಮೆಂಟ್. ವಿಶ್ವನಾಥ್ ಹೇಳುವಂತೆ, ಉತ್ತಮ ಗುಣಮಟ್ಟದ ಟಿಲ್ಲರಿಗೆ ಒಂದು ಲಕ್ಷ ಮೀರಬಹುದು. ಮೇಲ್ನೋಟಕ್ಕೆ ದರ ಹೆಚ್ಚೆಂದು ಕಂಡು ಬಂದರೂ, ಅದನ್ನು ಹದಿನೈದು ವರುಷ ಬಳಸಿದರೂ ದುರಸ್ತಿ ಕಾಣದು.
'ಚೀನಾ ಉತ್ಪನ್ನ' ಅಂದಾಕ್ಷಣ ಮೋರೆಯನ್ನು ಚಿರುಟಿಸುತ್ತೇವೆ! 'ಕಳಪೆ ಮಾಲು' ಎಂಬ ಭಾವನೆ. ಉತ್ತಮ ಗುಣಮಟ್ಟದ ವಸ್ತುವೊಂದಕ್ಕೆ ನೂರು ರೂಪಾಯಿ ಇದೆಯೆನ್ನಿ. ಇದೇ ಉತ್ಪನ್ನ ಇಪ್ಪತ್ತು ರೂಪಾಯಿಗೂ ಲಭ್ಯ! ಇಪ್ಪತ್ತು ರೂಪಾಯಿಯ ವಸ್ತು ನೂರು ರೂಪಾಯಿ ದುಡಿಯಬೇಕೆಂದರೆ ಹೇಗೆ?
ನಾವೆಷ್ಟು ಹಣ ಕೊಡ್ತೇವೆ ಎಂಬುದರ ಮೇಲೆ ಗುಣಮಟ್ಟದ ನಿರ್ಧಾರ. ನಮ್ಮಲ್ಲಿಂದ ಹೋಗುವ ಬಹುತೇಕ ಮಂದಿ ಕಡಿಮೆ ಬೆಲೆಯದನ್ನೇ ಆಯ್ಕೆ ಮಾಡುತ್ತಾರಂತೆ. ಹಾಗಾಗಿ ಭಾರತೀಯ ಅಂದರೆ ಸಾಕು, ಮೂರನೇ ದರ್ಜೆಯ ಗುಣಮಟ್ಟದ ವಸ್ತುವನ್ನೇ ತೋರಿಸುತ್ತಾರೆ - ಎಂಬ ಅನುಭವ ವಿಶ್ವನಾಥ್ ಹೇಳುತ್ತಿರುವಾಗ, ನಮ್ಮ ವಿಶ್ವಾಸಾರ್ಹತೆ ಮತ್ತು ಸ್ವೀಕೃತಿಯನ್ನು ಪುನರ್ನವೀಕರಿಸುವ ಅಗತ್ಯವಿದೆ ಎಂದು ತೋರಿತು.
ನಮ್ಮ ಕೃಷಿ ಸಮಸ್ಯೆಗಳ ಹಿನ್ನೆಲೆಯಲ್ಲಿ ಚಿಕ್ಕ ಮಣ್ಣು ಮಾಂದಿ (ಜೆಸಿಬಿ) ಯಂತ್ರಗಳು, ಪವರ್ ಸ್ಪ್ರೇಯರ್, ಲೋಡರ್, ಹೂಟೆ ಅಟ್ಯಾಚ್ಮೆಂಟ್ಗಳು ಅಗತ್ಯ. ಇಂತಹುಗಳನ್ನು ತನ್ನಲ್ಲೇ ನಿರ್ಮಿಸುವ ಪೂರ್ವಭಾವಿಯಾಗಿ ಚೀನಾ ಕಂಪೆನಿಗಳೊಂದಿಗೆ ಮಾತುಕತೆ ಮುಗಿಸಿದ್ದಾರೆ. ತೋಟದೊಳಗೆ ಸರಾಗವಾಗಿ ಚಲಿಸಬಲ್ಲ ಗಾಡಿಗಳ ರೂಪೀಕರಣ, ಬೈಕ್ ಗಾಡಿಗಳ ರಚನೆ, ಇಲೆಕ್ಟ್ರಿಕ್ ಚಾಲಿತ ದ್ವಿಚಕ್ರಗಳು, ಕಳೆ ತೆಗೆಯುವ ಯಂತ್ರಕ್ಕೆ ಜೋಡಿಸುವ ಅಟ್ಯಾಚ್ಮೆಂಟ್ಗಳನ್ನು ತನ್ನ ಘಟಕದಲ್ಲಿ ತಯಾರಿಸುವ ಯೋಜನೆ ನಿಕಟಭವಿಷ್ಯದವು.
ಕೃಷಿ ಯಂತ್ರಮೇಳದ ಗೋಷ್ಠಿಯಲ್ಲಿ ಭಾಗವಹಿಸಿದ ವಿಶ್ವನಾಥ್ ಯಂತ್ರಾನುಭವದ ಅನುಭವ ಹಂಚಿಕೊಳ್ಳುತ್ತಾ, 'ರೈತರಿಗೆ ಯಾವ ತರಹದ ಯಂತ್ರಗಳು ಬೇಕೆಂಬುದನ್ನು ರೈತರೇ ಹೇಳಿದರೆ ತಯಾರಿಸಲು ಅನುಕೂಲ..' ಎಂದಿದ್ದರು. ನಿಜಕ್ಕೂ ರೈತ ಕಾಳಜಿ. ನಾವು ಎಂದಾದರೂ ನಮಗೆಂತಹ ಯಂತ್ರ ಬೇಕು ಎನ್ನುವುದನ್ನು ಹೇಳಿಲ್ಲ, ಯಾರೂ ಕೇಳಿಲ್ಲ! ಈಗ ವಿಶ್ವನಾಥ್ ಕೇಳುತ್ತಿದ್ದಾರೆ, ಉತ್ತರ ಹೇಳಲು ಪಕ್ವ ಸಮಯ.
ಚೀನಾದಲ್ಲಿ ಎಲ್ಇಡಿ ಬಲ್ಬ್ ಮಳಿಗೆಗೆ ಭೇಟಿ ನೀಡಿದ್ದರು. 'ಒಂದು ರಸ್ತೆ ದೀಪಕ್ಕೆ ಬಳಕೆಯಾಗುವ ವಿದ್ಯುತ್ತನ್ನು ಚೀನಾ ಮಾದರಿಯಲ್ಲಿ ಬಳಸಿದರೆ ನೂರು ಬಲ್ಬ್ ಉರಿಸಬಹುದು. ನಮ್ಮ ರಾಜಧಾನಿಯಲ್ಲಿ ವ್ಯಯವಾಗುವ ಶೇ.60ರಷ್ಟು ವಿದ್ಯುತ್ ಇದರಿಂದ ಉಳಿತಾಯ ಮಾಡಬಹುದು' ಎನ್ನುತ್ತಾರೆ. ಮಾಡುವವರು ಯಾರು? ಚೀನಾದ ಅಭಿವೃದ್ಧಿಯನ್ನು ಅಭ್ಯಸಿಸಲು ನಾಡಿನ ದೊರೆಗಳು ಹಾರಿ ಹೋಗುತ್ತಾರೆ. ಅಲ್ಲಿ ಯಾವ ಅಭಿವೃದ್ಧಿಯನ್ನು ನೋಡ್ತಾರೋ, ಏನು ತರ್ತಾರೋ, ಅದನ್ನು ಯಾವ ರೀತಿ ಅನುಷ್ಠಾನ ಮಾಡ್ತಾರೋ..?
ಯಂತ್ರಮೇಳದಲ್ಲಿ ವಿಶ್ವನಾಥರ ಮಿನಿ ಜೆಸಿಬಿ ಅಕರ್ಷಣೆಯ ಬಿಂದುವಾಗಿತ್ತು. ತೋಟದ ಕೆಲಸಗಳಿಗೆ ಸಂಗಾತಿ. ಮೊದಲ ಮೋಡೆಲ್ ಆದ್ದರಿಂದ ದರ ಅಧಿಕವೆಂದು ಕಂಡು ಬಂದರೂ ಮುಂದೆ ಸರಿ ಹೋದೀತು. ಯಂತ್ರವನ್ನು ವೀಕ್ಷಿಸಿದ ಬಹುಪಾಲು ಮಂದಿ, 'ಯಂತ್ರದ ಕ್ಷಮತೆಯನ್ನು ವಿಚಾರಿಸಿಲ್ಲ. ಅದರ ತಾಂತ್ರಿಕಾಂಶ ಕೇಳಿಲ್ಲ. ಬೆಲೆ ಎಷ್ಟು ಎಂದು ಕೇಳಿದ ಬೆನ್ನಿಗೆ ಸಬ್ಸಿಡಿ ಎಷ್ಟಿದೆ ಅಂತ ಕೇಳ್ತಾರೆ' ಮಳಿಗೆಯಲ್ಲಿದ್ದ ಶ್ರೀನಿವಾಸ್ ಸುಸ್ತು. ಹೌದಲ್ಲಾ.. ಸಬ್ಸಿಡಿ ವ್ಯವಸ್ಥೆಯ ಹೊರತಾಗಿ ಯೋಚಿಸಲು ನಮಗಾಗುತ್ತಿಲ್ಲ.
ಗೋಷ್ಠಿಯೊಂದರಲ್ಲಿ ಪ್ರಶ್ನೋತ್ತರ ನಡೆಯುತ್ತಿತ್ತು. 'ದಾಸವಾಳ ಗಿಡಕ್ಕೆ ನೀರುಣಿಸಲು ಬಳಸುವ ಮಿನಿ ಸ್ಪ್ರಿಂಕ್ಲರಿಗೂ, ಬಾಲ್ವಾಲ್ವ್ ವ್ಯವಸ್ಥೆಗೂ ಸಬ್ಸಿಡಿ ಸಿಗಲೇ ಬೇಕು' ಎಂಬ ಪ್ರಬಲ ವಿಚಾರಗಳು ಹರಿದಿದ್ದುವು. ಕೃಷಿಯ ಸಂಕಟಗಳನ್ನು ಗಮನಿಸಿದಾಗ ಸಬ್ಸಿಡಿ ಬೇಕು. ಅದು ಸಣ್ಣ ಕೃಷಿಕರಿಗೂ ಸುಲಭದಲ್ಲಿ ಸಿಗುವಂತಹ ವ್ಯವಸ್ಥೆಗಳು ರೂಪಿತವಾಗಬೇಕು.
ಸರಕಾರಿ ಸಬ್ಸಿಡಿಯಲ್ಲಿ ಯಾವ ದರಕ್ಕೆ ಯಂತ್ರ ಸಿಗುತ್ತೋ, ಅದೇ ಕ್ರಯಕ್ಕೆ ನನ್ನ ವರ್ಕ್ ಶಾಪಿನಲ್ಲಿ ಯಂತ್ರ ತಯಾರಿಸಿದರೆ ಸಬ್ಸಿಡಿಯ ಬೊಬ್ಬೆ ತಪ್ಪಿಸಬಹುದಲ್ಲಾ - ಮಾತಿನ ಮಧ್ಯೆ ವಿಶ್ವನಾಥ ಹೇಳುತ್ತಾ, 'ಹೊರದೇಶದಿಂದ ತರಿಸುವ ಕೃಷಿ ಯಂತ್ರಗಳಿಗೆ ವಿಧಿಸುವ ಸುಂಕ, ವ್ಯಾಟ್ಗಳನ್ನು ಮನ್ನಾ ಮಾಡಿದರೂ ಸಾಕು, ಈಗಿರುವ ಬೆಲೆಗಿಂತ ಕಡಿಮೆಗೆ ಕೃಷಿಕರಿಗೆ ಯಂತ್ರಗಳನ್ನು ಒದಗಿಸಬಹುದು' ಎಂಬ ಆಶಯ ವ್ಯಕ್ತಪಡಿಸಿದ್ದರು. ಆ ದಿವಸಗಳು, ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಬಂದಾವೇ?
ಬದುಕನ್ನು, ಭಾವನೆಗಳನ್ನು ಕಳಚಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಅದನ್ನು ಮರುಜೋಡಿಸುವ ಪ್ರಯತ್ನಕ್ಕೆ ಯಂತ್ರಮೇಳ ಹೆಜ್ಜೆಯಿಟ್ಟಿದೆ.
v-tech : (08181) 272 075
ಚಿತ್ರ ಕೃಪೆ : ಶ್ರೀ ಪಡ್ರೆ
0 comments:
Post a Comment