Monday, June 10, 2013

ಆಹಾರ ಸಂರಕ್ಷಣೆಯಿಂದ ಬದುಕಿಗೆ ಭದ್ರತೆ


 
               ಆಪ್ತರೊಬ್ಬರ ಮನೆ ತಲುಪಿದಾಗ ಮಧ್ಯಾಹ್ನ ಮೀರಿತ್ತು. ಮನೆಮಂದಿ ಭೋಜನ ಪೂರೈಸಿದ್ದಕ್ಕೆ ಬಟ್ಟಲು ಸಾಕ್ಷಿಯಾಗಿತ್ತು. ಉಂಡಾಯಿತು ಎಂದರೆ ಹೊಟ್ಟೆಗೆ ದ್ರೋಹ. ಉಣ್ಣದಿರೊಣವೇ, ಹೊಟ್ಟೆಯೊಳಗೆ ತಳಮಳ. ತಡವಾದುದಕ್ಕೆ ಸಬೂಬು ಹೇಳುತ್ತಿರುವಾಗಲೇ, 'ಮಧ್ಯಾಹ್ನದ ಹೊತ್ತು. ಉಂಡು ಹೋಗಲೇ ಬೇಕು' ಎನ್ನುವ ಒತ್ತಾಯ. ಶುರುವಾಯಿತು ನೋಡಿ, ಮನೆಯೊಳಗೆ ಟೆನ್ಶನ್. ಗೊಣಗಾಟ. ಕಾರಣವಿಷ್ಟೇ, ಮಾಡಿದ ಖಾದ್ಯ ಮುಗಿದಿತ್ತು. ಪುನಃ ಮಾಡುವಷ್ಟು ಪುರುಸೊತ್ತಿಲ್ಲ. ಮನೆಯೊಳಗೆ ಪರಿಕರಗಳಿಲ್ಲ! 'ಅನ್ನದೊಂದಿಗೆ ಉಪ್ಪಿನಕಾಯಿ, ಮಜ್ಜಿಗೆ ಸಾಕು' ಎಂದು ಬಿನ್ನವಿಸಿ, ಅದರಲ್ಲೇ ಮೃಷ್ಟಾನ್ನವನ್ನು ಆರೋಪಿಸಿ ಉಂಡು ಹೊರಟೆ.

                ಯಾಕೆ ಹೀಗೆ? ಅಕಾಲದಲ್ಲಿ ಅತಿಥಿಗಳು ಬಂದರೆ ರಕ್ತದೊತ್ತಡ ಯಾಕೆ ಏರುತ್ತದೆ? ಅಮ್ಮ, ಅಜ್ಜಿಯಂದಿರ ಬದುಕು ಟೆನ್ಶನ್ ಫ್ರೀಯಾಗಿತ್ತಲ್ವಾ. ನೆಂಟರು ಬಂದಾಗ ಮುಖ ಅರಳುತ್ತಿತ್ತು. ಅರ್ಧ ಗಂಟೆಯೊಳಗೆ ಚಟ್ನಿ, ಗೊಜ್ಜು, ಸಾರು, ತಂಬುಳಿ ಸಿದ್ಧವಾಗುತ್ತಿತ್ತು. ಮಾಡಿದ ಖಾದ್ಯದ ವಿಶೇಷ, ಒಳಸುರಿಗಳ ಸಿದ್ಧತೆಯನ್ನು ಹೇಳಿದಷ್ಟು ತೃಪ್ತಿಯಾಗದು.

               ಆಹಾರ ಸಂರಕ್ಷಣೆಯ ಪರಿಕಲ್ಪನೆ ಹಿರಿಯರ ಯಶಸ್ವೀ ಬದುಕಿನ ಗುಟ್ಟು. ಬದುಕಿನೊಂದಿಗೆ ಹೊಸೆದ ಪ್ರಕ್ರಿಯೆ. ಅದಕ್ಕೆಂದೇ ಪ್ರತ್ಯೇಕ ಕಾನೂನುಗಳಿರಲಿಲ್ಲ. ಪ್ರಕೃತ ಕೇಂದ್ರ ಸರಕಾರವು ಆಹಾರ ಭದ್ರತೆಯ ಕಾನೂನನ್ನು ಕೈಯಲ್ಲಿ ಹಿಡಿದಿದೆ. ಕಿಲೋ, ಗ್ರಾಮ್, ಲೀಟರ್ ಮೂಲಕ ಒಬ್ಬೊಬ್ಬನಿಗೆ ಇಂತಿಷ್ಟು ಆಹಾರ ಎಂಬ ಲೆಕ್ಕಾಚಾರ ಮಾಡುತ್ತಿದೆ. ಆಹಾರ ಸಂರಕ್ಷಣೆ ಇದ್ದಾಗ ಭದ್ರತೆಯ ಅಂಜಿಕೆ ಯಾಕೆ?

               ಆಹಾರ ಸಂರಕ್ಷಣೆಯೆನ್ನುವುದು ಹಳ್ಳಿ ಜ್ಞಾನ. ಹಳ್ಳಿ ಬದುಕಿನೊಂದಿಗೆ ನಿತ್ಯ ಸಂವಹನ ಮಾಡುವ ಅಲಿಖಿತ ಜ್ಞಾನ. ಅಜ್ಜಿಯಿಂದ ಮೊಮ್ಮಗನಿಗೆ ಹರಿದು ಬರುವ ಪ್ರಾಕ್ಟಿಕಲ್ ವಿದ್ಯೆ. ಹಳ್ಳಿಯ, ಹಳ್ಳಿಗರ, ಹಳ್ಳಿಜ್ಞಾನದ ಅನಾದರ ಮತ್ತು ಗ್ರಾಮೀಣ ಭಾರತವನ್ನು ನೋಡುವ ದೊರೆಗಳ ಅಪಕ್ವ ಬೌದ್ಧಿಕ ಮಟ್ಟಗಳಿಂದಾಗಿ ಆಹಾರ ಸಂರಕ್ಷಣೆಯಂತಹ ದೇಸಿ ಜ್ಞಾನಕ್ಕೆ ಮಸುಕು.

ಹಿರಿಯರ ನೆನಪಿನಲ್ಲಿರುವ ಕೆಲವು ಸಂರಕ್ಷಣಾ ವಿಧಾನಗಳು:
               ಹಲಸು ನಿರ್ಲಕ್ಷಿತ ಹಣ್ಣು. ಅಕ್ಕಿಗೆ ತತ್ವಾರವಾಗಿದ್ದಾಗ ಉಸಿರು ನಿಲ್ಲಿಸಿದ ಹಿರಿಯಣ್ಣ. ಹಲಸಿನ ಬೀಜವು ತರಕಾರಿ, ಸಿಹಿತಿಂಡಿಗಳಿಗೆ ಒಳಸುರಿ. ನೆಲಮಟ್ಟದಿಂದ ಮೂರಡಿ ಕೆಳಗಿನ ಮಣ್ಣನ್ನು ನೀರಿನಲ್ಲಿ ತೋಯಿಸಿ, ಅದರಲ್ಲಿ ಹಲಸಿನ ಬೀಜವನ್ನು ಅದ್ದಿ ಕಾಪಾಡುತ್ತಿದ್ದರು. ತಾಜಾತನ ಕಳೆದುಕೊಳ್ಳದ ಬೀಜಕ್ಕೆ ವರುಷದ ತಾಳಿಕೆ. ಬೇಕಾದಾಗ ಬೇಕಾದಷ್ಟೇ ಬಳಕೆ. ಸೌತೆಕಾಯಿ, ಉಪ್ಪುಸೊಳೆ ಪದಾರ್ಥ ಮತ್ತು ನುಗ್ಗೆಸೊಪ್ಪಿನ ಪಲ್ಯಕ್ಕೆ ಒಳಸುರಿ. ಹಲಸಿನ ಬೀಜವನ್ನು ಹದಕ್ಕೆ ಬೇಯಿಸಿ ರುಚಿಗೆ ಉಪ್ಪು ಸೇರಿಸಿ, ನಂತರ ಮೂರ್ನಾಲ್ಕು ದಿವಸ ಬಿಸಿಲಿನ ಸ್ನಾನ ಮಾಡಿಸಿ. ಮಕ್ಕಳಿಗದು ಮಳೆಗಾಲದ ಕುಟುಂ ಕುಟುಂ ತಿಂಡಿ. ದೊಡ್ಡವರಿಗೂ ಸಹ. ಶಾಲೆಯ ಕಂಪಾಸ್ ಬಾಕ್ಸ್ನಲ್ಲಿ, ಚೀಲದ ಸಂಚಿನಲ್ಲಿ ಈ 'ಸಾಂತಾಣಿ'ಗೆ ಖಾಯಂ ಜಾಗ!

              ಬಲಿತ ಹಲಸಿನ ಸೊಳೆಯನ್ನು ಬೀಜದಿಂದ ಬೇರ್ಪಡಿಸಿ, ಉಪ್ಪುನೀರಿನಲ್ಲಿ ಮುಳುಗಿಸಿಟ್ಟರೆ ವರುಷವಾದರೂ ಕೆಡದು. ಕರಾವಳಿಯಲ್ಲಿದು 'ಉಪ್ಪುಸೊಳೆ'. ಇದನ್ನು ತಯಾರಿಸುವ ವಿಶೇಷಜ್ಞರು ಉಪ್ಪುಸೊಳೆಗಾಗಿಯೇ ಕೆಲವು ಮರಗಳನ್ನು ಗೊತ್ತು ಮಾಡುವುದುಂಟು. ಹಲಸಿನ ಗುಜ್ಜೆ, ಹೆಬ್ಬಲಸನ್ನು ಚಿಕ್ಕ ತುಂಡು ಮಾಡಿ ಉಪ್ಪುನೀರಿನಲ್ಲಿ ಹಾಕಿಟ್ಟರೆ ಆರು ತಿಂಗಳ ತಾಳಿಕೆ. ಇದರ ಪಲ್ಯ, ರೊಟ್ಟಿ, ದೋಸೆ, ಹಪ್ಪಳ, ಉಂಡ್ಲುಕಾಳುಗಳು.. ರುಚಿ. ಹಲಸು, ಗೆಣಸು, ಮರಗೆಣಸುಗಳ ಹಪ್ಪಳ, ಚಿಪ್ಸ್ಗಳು ಸಂರಕ್ಷಣೆ ಮಾಡಿಡುವಂತಾದ್ದು. ಇವು ಮನೆಯೊಳಗಿದ್ದರೆ ಮಳೆಗಾಲ, ಚಳಿಗಾಲದಲ್ಲಿ ಬೇಕರಿಗೆ ಓಡಬೇಕಾಗಿಲ್ಲ! ಅಜೀರ್ಣ ಮಾಡಿಕೊಳ್ಳಬೇಕಾಗಿಲ್ಲ!

                  ಮಾಂಬಳ - ಕಾಡುಮಾವಿನ ಹಣ್ಣಿನ ರಸದ ಘನ ರೂಪ. ಬದುಕಿನಲ್ಲಿ ಮರೆಯಾದ, ಮರೆಯಾಗುತ್ತಿರುವ ರುಚಿ. ಕಾಡು ಮಾವಿನ ಹಣ್ಣನ್ನು ತೊಳೆದು, ರಸವನ್ನು ಹಿಂಡಿ, ಅದನ್ನು ಬಿಸಿಲಿನಲ್ಲಿ ಒಣಗಿಸುವುದು. ಗೆರಸೆಯ (ಭತ್ತ, ಧಾನ್ಯ ಗೇರುವ) ಮೇಲೆ ಹತ್ತಿ ವಸ್ತ್ರವನ್ನು ಹಾಸಿ ಅದರ ಮೇಲೆ ರಸ ಎರೆಯಬೇಕು. ಮರುದಿನ ಒಣಗಿದ ಹಣ್ಣಿನ ರಸದ ಮೇಲೆ ಪುನಃ ಎರೆತ. ಹೀಗೆ ಹದಿನೈದು ದಿವಸದ ಲೇಯರ್. ಬಿಸಿಲಿನ ಸ್ನಾನದೊಂದಿಗೆ ಹದವಾದ ಘನ ವಸ್ತುವೇ ಮಾಂಬಳ. ಕಾಡು ಮಾವಿನ ಸಿಹಿ-ಹುಳಿಯನ್ನು ಹೊಂದಿಕೊಂಡು ರುಚಿ. ಸುಮಾರು ಅರ್ಧ ಇಂಚು ದಪ್ಪ. ಒಂದು ವರುಷವಾದರೂ ಕೆಡದು. ತಂಪು ಪೆಟ್ಟಿಗೆಯಲ್ಲಿಟ್ಟರೆ ಬಾಳ್ವಿಕೆ ಹೆಚ್ಚು. ಕಾಡು ಮಾವಿನ ಹಣ್ಣಿನ ರಸ ದಪ್ಪವಾದಷ್ಟು ಒಳ್ಳೆಯದು. ತೆಳುವಾಗಿದ್ದರೆ ಒಣಗುವುದಿಲ್ಲ.

               ಹಣ್ಣು ಹಲಸಿನ ಸೊಳೆಯನ್ನು ಕೊಚ್ಚಿ, ಅದಕ್ಕೆ ಬೆಲ್ಲ ಹಾಕಿ ತಳಹಿಡಿಯದಂತೆ ಜಾಗ್ರತೆಯಿಂದ ಗಟ್ಟಿಯಾಗುವ ತನಕ ಕಾಯಿಸಿದಾಗ ಸಿಗುವ ಉತ್ಪನ್ನ 'ಬೆರಟ್ಟಿ'. ಇದರ ಗಟ್ಟಿ ಪಾಕ (ಅಂದರೆ ಬೆಲ್ಲದಷ್ಟು) ತಾಳಿಕೆ ಹೆಚ್ಚು. ಹಲಸಿನ ಋತುವಿನ ಬಳಿಕ 'ಹಲಸಿನ ಹಣ್ಣಿನ ಪಾಯಸ'ಕ್ಕೆ ಬೆರಟ್ಟಿ ಬಳಕೆ. ಚಿಕ್ಕ ಮಕ್ಕಳಿಗಿದು ಚಾಕೋಲೇಟ್.

              ಬಲಿತ ಮಾವಿನ ಕಾಯಿಯನ್ನು ತೊಳೆದು ಉಪ್ಪುನೀರಿನಲ್ಲಿ ಹಾಕಿಡುವಂತಹ ಪದ್ಧತಿ ಪಾರಂಪರಿಕ. ಉಪ್ಪು ಸಂರಕ್ಷಕವಾಗಿ ಕೆಲಸ ಮಾಡುವುದರಿಂದ ಮಾವಿನಕಾಯಿ ಹಾಳಾಗದು. ಒಂದು ವರುಷವಾದರೂ ಕೆಡದು. ಮಾವಿನ ಋತು ಕಳೆದ ಬಳಿಕ 'ನೀರು ಮಾವಿನಕಾಯಿ'ಯನ್ನು ತೆಗೆದು ಮಾಡುವ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಪಲ್ಯ, ಗೊಜ್ಜು, ಚಟ್ನಿ, ಸಾರು ಇದ್ದರೆ ನಾಲ್ಕು ತುತ್ತು ಹೆಚ್ಚೇ ಹೊಟ್ಟೆಗಿಳಿಯುತ್ತದೆ. ಮಾವಿನ ಕಾಯನ್ನು ತೆಳುವಾಗಿ ಕೆತ್ತಿ, ಒಣಗಿಸಿಟ್ಟು ಪದಾರ್ಥಕ್ಕೆ ಬಳಸುತ್ತಿದ್ದರು. ಹುಣಸೆ ಹುಳಿಗೆ ಪರ್ಯಾಯ.

               ಹಸಿಮೆಣಸನ್ನು ಪೂರ್ತಿ ತುಂಡಾಗದಂತೆ ಉದ್ದಕ್ಕೆ ಸೀಳಿ, ಉಪ್ಪು ಹಾಕಿ, ಮೆಣಸು ಬಾಡುವಷ್ಟು ಬೇಯಿಸಿ. ಅದನ್ನು ಮಜ್ಜಿಗೆಯಲ್ಲಿ ಮುಳುಗಿಸಿ ಬಿಸಿಲಿನಲ್ಲಿ ಒಣಗಿಸಿ. ಮರುದಿವಸ ಪುನಃ ಮಜ್ಜಿಗೆಯಲ್ಲಿ ಮಿಂದೆದ್ದು ಬಿಸಿಲ ಸ್ನಾನ. ಹೀಗೆ ಮೂರ್ನಾಲ್ಕು ದಿವಸದ ಪ್ರಕ್ರಿಯೆಯ ಬಳಿಕ ಗಾಳಿಯಾಡದಂತೆ ಕಾಪಿಟ್ಟರೆ ಮಳೆ, ಚಳಿಗಾಲದಲ್ಲಿ ಬಳಕೆ. ಎಣ್ಣೆಯಲ್ಲಿ ಕರಿದ ಮೆಣಸು ಊಟಕ್ಕೆ ಅದರಲ್ಲೂ ಗಂಜಿಯೂಟಕ್ಕೆ ಜತೆ. ಇದೇ ರೀತಿ ಹಾಗಲಕಾಯಿ, ಬದನೆಕಾಯನ್ನು ಕೂಡಾ ಬಿಸಿಲಿನಲ್ಲಿ ಒಣಗಿಸಿ ಸಂರಕ್ಷಣೆ ಮಾಡುತ್ತಿದ್ದರು. ಇದಕ್ಕೆ ಮಾತ್ರ ಮಜ್ಜಿಗೆಯ ಬಳಕೆಯಿಲ್ಲ.

               ಮಲೆನಾಡಿನ ಮಿಠಾಯಿ 'ಸುಕೇಳಿ'. ಎಲ್ಲಾ ಪ್ರದೇಶದ ಬೇಡಿಕೆಯ ಸಿಹಿತಿಂಡಿ. ಬಾಳೆಹಣ್ಣನ್ನು ಸಿಪ್ಪೆತೆಗೆದು, ಬಿಸಿಪೆಟ್ಟಿಗೆ(ಡ್ರೈಯರ್)ಯಲ್ಲಿ ಒಂದು ದಿವಸ ನಿರ್ಜಲಿಸಲು ಇಡುತ್ತಾರೆ. ಮರುದಿವಸ ಚಿಕ್ಕ ಚಿಪ್ಸಿನ ಗಾತ್ರಕ್ಕೆ ಕತ್ತರಿಸುತ್ತಾರೆ. ಮೂರನೇ ದಿವಸ ಪುನಃ ಬಿಸಿಪೆಟ್ಟಿಗೆಯಲ್ಲಿ ಸಣ್ಣ ಉರಿಯಲ್ಲಿ ಸ್ನಾನ. ಸಾಮಾನ್ಯ ಗಾತ್ರದ ಹತ್ತು ಕಿಲೋ ಬಾಳೆಹಣ್ಣಿನಿಂದ ಒಂದು ಕಿಲೋ ಸುಕೇಳಿ ತಯಾರು. ಉತ್ತಮ ನೋಟ ಮತ್ತು ರುಚಿ. ತಾಳಿಕೆ ಮೂರು ತಿಂಗಳು. ಒಣಪ್ರದೇಶದಲ್ಲಾದರೆ ಆರು ತಿಂಗಳು. ಶೀರ, ಪಾಯಸಗಳಿಗೆ ದ್ರಾಕ್ಷಿಯ ಬದಲಿಗೆ ಬಳಕೆ. ಸುಕೇಳಿಗೆ ಬೂದು ಬಾಳೆಹಣ್ಣು ಹೆಚ್ಚು ಒಗ್ಗುತ್ತದೆ.

                ಕೋಕಂ, ಪುನರ್ಪುಳಿಯ ಬಳಕೆ ಎಲ್ಲರಿಗೂ ಗೊತ್ತು. ಎಪ್ರಿಲ್, ಮೇ ತಿಂಗಳಲ್ಲಿ ರಸವನ್ನು ತೆಗೆದಿಟ್ಟರೆ, ಮುಂದಿನ ಬೇಸಿಗೆ ಕೊನೆಯವರೆಗೂ ಬಳಸಬಹುದಾದ ಆರೋಗ್ಯದಾಯಕ ಪೇಯ. ಅದರ ಒಣಸಿಪ್ಪೆಗೆ ಬಹು ಬೇಡಿಕೆ. ಸಿಪ್ಪೆಯಿಂದ ತಯಾರಿಸಿದ ತಿಳಿಸಾರು ಬೆಳ್ತಿಗೆ ಅಕ್ಕಿಯ ಅನ್ನಕ್ಕೆ ಕಾಂಬಿನೇಶನ್. ಹಿಮ್ಮಡಿ ಒಡೆದಾಗ ಮತ್ತು ಬೆಂಕಿ ತಗುಲಿದ ಗಾಯಕ್ಕೆ ಲೇಪಿಸಲು ಪುನರ್ಪುಳಿಯ ಬೀಜದಿಂದ ಮುಲಾಮು ತಯಾರಿಸುವ ಪದ್ಧತಿ ಹಳ್ಳಿಬದುಕಿನಲ್ಲಿದೆ.

                   ಭತ್ತ, ಅಕ್ಕಿಯನ್ನು ಸಂರಕ್ಷಿಸಲು ಭತ್ತದ ಹುಲ್ಲಿನಿಂದ 'ಮುಡಿ' ತಯಾರಿಸುವ ಜಾಣ್ಮೆ ಅಪ್ಪಟ ದೇಸಿ. ಭತ್ತದ ಕೃಷಿಯ ಹಿಂಬೀಳಿಕೆಯೊಂದಿಗೆ ಈ ಅಪೂರ್ವ ತಂತ್ರಜ್ಞಾನಕ್ಕೆ ಇಳಿಲೆಕ್ಕ. ಮುಡಿಯಲ್ಲಿ ಭತ್ತ, ಅಕ್ಕಿಯನ್ನು ತುಂಬಿ ಅಟ್ಟದಲ್ಲಿಟ್ಟರೆ ಎರಡು-ಮೂರು ವರುಷ ತಾಜಾ ಆಗಿ ಉಳಿಯುತ್ತದೆ! ಮುಡಿಯಲ್ಲಿ ಭತ್ತ ಮಾತ್ರವಲ್ಲ ಹೆಸರು ಕಾಳು, ಉದ್ದು, ಹುರುಳಿಯನ್ನು ಸಂರಕ್ಷಿಸಲು ಮುಡಿ ಉಪಾಧಿ. ಮುಡಿಯನ್ನು ಇಲಿಯೂ ಕೊರೆಯುವುದಿಲ್ಲ. ಅಷ್ಟೊಂದು ಭದ್ರ. ಉಪನಯನದಂತಹ ಸಂಸ್ಕಾರಕರ್ಮಗಳಲ್ಲಿ 'ಅಜ್ಜಿ ಮನೆಯ ಬಳುವಳಿ'ಯಾಗಿ ಅಕ್ಕಿಮುಡಿಯನ್ನು ಕೊಡುವ ಸಂಪ್ರದಾಯವಿದೆ. ಹಾಲ್ಗಳಿಗೆ ಉಪನಯನ ವರ್ಗಾವಣೆ ಆದ ಮೇಲೆ ಮುಡಿಯೂ, ಅಜ್ಜಿಯೂ ನಾಪತ್ತೆ!

                      ಪಿಜ್ಜಾ, ಬರ್ಗರ್, ಗೋಬಿಮಂಚೂರಿಯನ್.. ತಿನ್ನಬೇಕೆಂಬ ಹಠವಿರುವ, ಇವುಗಳು ಆರೋಗ್ಯಕ್ಕೆ ಹಾನಿಯಾಗದೆಂದು ಬಿಂಬಿಸುವ ಮಂದಿಗೆ ಪಾರಂಪರಿಕ ಆಹಾರಗಳೆಂದರೆ ಅಷ್ಟಕ್ಕಷ್ಟೇ. ಅಭಿವೃದ್ಧಿ ಯುಗದಲ್ಲಿ ಜೀವಿಸುವಾಗ ಪುನಃ ಹಿಂದಿನ ಕಾಲಕ್ಕೆ ಮರಳಬೇಕೆನ್ನುವುದೂ ಅಪ್ರಸ್ತುತ. ಆದರೆ ಜೀವನಶೈಲಿಯಲ್ಲಿ ಅಲ್ಲದಿದ್ದರೂ, ಆಹಾರದ ವಿಚಾರದಲ್ಲಿ ನಾವು ಒಂದು ಹೆಜ್ಜೆ ಹಿಂದೆ ಹೋಗದಿದ್ದರೆ ಆಸ್ಪತ್ರೆಗಳುಂಟು, ಮೆಡಿಕಲ್ ಶಾಪ್ಗಳುಂಟು!

1 comments:

BSPrasad said...

Namaskara Na.Karantharige,

Thumba olleya lekhana.

Thanks,
Subramanya Prasad
Bangalore

Post a Comment