ಪುತ್ತೂರಿನ ಇಬ್ಬರು ವಿದ್ಯಾರ್ಥಿನಿಯರಿಂದ ದೇಶಕ್ಕೆ ಗೌರವ! ಇವರ ವಿಜ್ಞಾನ ಸಂಶೋಧನೆಯು ವಿಶ್ವಮಟ್ಟದಲ್ಲಿ ಪ್ರಶಂಸಿಸಲ್ಪಟ್ಟಿದೆ. ಸಂಶೋಧಿತ ಸರಕುಗಳೊಂದಿಗೆ ಕಡಲು ಹಾರಿ, ತೀರ್ಪುಗಾರರ ಹುಬ್ಬೇರಿಸಿ ಚಿನ್ನದ ಪದಕಗಳನ್ನು ಹೊತ್ತು ತಂದಿದ್ದಾರೆ. ಕಲಿತ ಶಾಲೆಗೆ, , ಕಲಿಯಲು ಅನುವು ಮಾಡಿದ ಹೆತ್ತವರಿಗೆ ಸಂಮಾನ.
ವಿಜ್ಞಾನ ಆಸಕ್ತ ವಿದ್ಯಾರ್ಥಿಗಳು ಪ್ರಸ್ತುತಪಡಿಸುವ ಸಂಶೋಧನೆಗಳು ಮೊದಲು ರಾಜ್ಯ ಮಟ್ಟದಲ್ಲಿ ಆಯ್ಕೆಯಾಗುತ್ತದೆ. ಬಳಿಕ ದೇಶಮಟ್ಟ. ಪುತ್ತೂರಿನ ವಿವೇಕಾನಂದ ಕಾಲೇಜಿನ ಎರಡನೇ ಪಿಯುಸಿ ವಿದ್ಯಾರ್ಥಿನಿ ರಶ್ಮಿಪಾರ್ವತಿ ಮತ್ತು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಹತ್ತರ ವಿದ್ಯಾರ್ಥಿನಿ ಸಿಂಧೂರ ಶಂಕರ್ - ಇವರಿಬ್ಬರು ಈ ಹಂತಗಳನ್ನು ದಾಟಿ ವಿಶ್ವಮಟ್ಟದಲ್ಲಿ ಕರಾವಳಿಯ ಮಣ್ಣಿನ ಬೌದ್ಧಿಕ ಗಟ್ಟಿತನವನ್ನು ಸ್ಥಾಪಿಸಿದ್ದಾರೆ.
ಇವರಿಗೆ ಕೃಷಿಕ ಸಂಶೋಧಕ ವಿಟ್ಲ ಬದನಾಜೆ ಶಂಕರ ಭಟ್ಟರ ನಿರ್ದೇಶನ. ಪಾರಂಪರಿಕ ಜ್ಞಾನಗಳನ್ನು ಬಳಸಿದಾಗ ಸಮಾಜಕ್ಕೆ ಪ್ರಯೋಜನ. ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡುವ ಆಸಕ್ತಿಯಿದೆ. ಹೆತ್ತವರಿಗೆ ಉತ್ಸಾಹವಿದೆ. ಅಧ್ಯಾಪಕರ ಬೆಂಬಲವಿದೆ. ನಾಟಿ ಜ್ಞಾನಗಳು ವಿಶ್ವದ ವಿಜ್ಞಾನಿಗಳಿಂದ ಸ್ವೀಕಾರವಾಗಿರುವುದು ದೇಶಕ್ಕೆ ಹೆಮ್ಮೆ ಎನ್ನುತ್ತಾರೆ ಭಟ್.
ಕಾಲೇಜೊಂದರ ಹೆತ್ತವರ ಸಭೆಯಲ್ಲಿ ಭಾಗವಹಿಸಿದ್ದೆ. ಹತ್ತನೇ ತರಗತಿಯಲ್ಲಿ ಆರುನೂರರ ಆಚೀಚೆ ಅಂಕ ಪಡೆದ ವಿದ್ಯಾರ್ಥಿಗಳೊಂದಿಗೆ ಹರಟುತ್ತಿದ್ದೆ. 'ಇಂಜಿನಿಯರಿಂಗ್, ಮೆಡಿಕಲ್, ಕಂಪ್ಯೂ ವಿಜ್ಞಾನ..'ಗಳ ಕನಸು ಮನಸಿನ ದಂಡು ಅಧಿಕವಿತ್ತು. 'ನಾನು ಉಪನ್ಯಾಸಕನಾಗುತ್ತೇನೆ' ಎಂದು ಯಾರೂ ಹೇಳಿಲ್ಲ! ಶೈಕ್ಷಣಿಕ ಪಲ್ಲಟದ ಪ್ರಸ್ತುತ ದಿನಮಾನದಲ್ಲಿ ಸಂಶೋಧನ ಮಾರ್ಗದಲ್ಲಿ ಸಾಗಿದ ವಿದ್ಯಾರ್ಥಿಗಳ ಬಾಲಹೆಜ್ಜೆಗೆ ಅಭಿನಂದನೆ.
ತೆಂಗಿನ ಒಣ ಗರಿಯ ಕೆಳಭಾಗ 'ಕೊತ್ತಳಿಗೆ'. (ಕೊತ್ತಳಿಂಗೆ, coconut palm petiole). ಇದರಿಂದ ಉಪ್ಪು ತಯಾರಿಯ ವಿಧಾನಗಳ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡವರು, ರಶ್ಮೀ ಪಾರ್ವತಿ. ಅಮೆರಿಕಾದ ಹ್ಯೂಸ್ಟನ್ನಿನ ಒಲಿಂಪಿಯಾಡ್ ವಿಜ್ಞಾನ ಮೇಳದಲ್ಲಿ ಪ್ರಬಂಧ ಮಂಡನೆ. ಮಾರ್ಗದರ್ಶಕ ಶಂಕರ ಭಟ್ ಉಪ್ಪು ತಯಾರಿ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಹೇಳುತ್ತಾರೆ: ಐವತ್ತು ಕಿಲೋ ಒಣ ಕೊತ್ತಳಿಗೆಯನ್ನು ಸುಟ್ಟು ಭಸ್ಮ ಮಾಡಿ. ನೀರಿನಲ್ಲಿ ಕದಡಿ. ಏಳು ಪದರವಿರುವ ಹತ್ತಿಯ ಬಟ್ಟೆಯಿಂದ ಮೂರು ಸಲ ಸೋಸಿ. ಈ ನೀರನ್ನು ಬತ್ತಿಸಿದರೆ ಸಿಗುತ್ತದೆ, 'ಕೊತ್ತಳಿಗೆಯ ಉಪ್ಪು'. ಇದಕ್ಕೆ ನಿತ್ಯ ಸೇವಿಸುವ ಉಪ್ಪಿನ ಸವಿ ಇದೆಯಲ್ಲಾ, ಇದಕ್ಕಿಂತ ಹತ್ತು ಪಟ್ಟು ಅಧಿಕ ಸವಿ!
ಅರ್ಧ ಕ್ವಿಂಟಾಲ್ ಕೊತ್ತಳಿಗೆಯಲ್ಲಿ ಮುಕ್ಕಾಲು ಕಿಲೋ ಕೊನೆ ಉತ್ಪನ್ನವಾದ ಉಪ್ಪು ಲಭ್ಯ. ಆಯುರ್ವೇದದಲ್ಲಿ ಈ ಉಪ್ಪಿನ ಬಳಕೆಯಿದೆ. ಒಂದು ಚೀಲ ಗೊಬ್ಬರಕ್ಕೆ ಹದಿನೈದು-ಇಪ್ಪತ್ತು ಗ್ರಾಮ್ ಕೊತ್ತಳಿಗೆ ಉಪ್ಪು ಸೇರಿಸಿದರೆ ಆಯಿತು, ಜೈವಿಕ ಗೊಬ್ಬರಗಳಲ್ಲಿರುವ ಬ್ಯಾಕ್ಟೀರಿಯಾಗಳು ಉತ್ತೇಜಿತವಾಗುತ್ತವೆ. ಪಶುಗಳ ಚರ್ಮರೋಗಗಳಿಗೆ ಉಪ್ಪಿನ ತಯಾರಿ ಔಷಧವನ್ನು ಬಳಸುವ ಕ್ರಮ ಪಶು ವೈದ್ಯಕೀಯದಲ್ಲಿದೆ.
ಸಂಶೋಧನೆಗೆ ಒಳಪಡಿಸಿದಾಗ ಉಪ್ಪಿನಲ್ಲಿ ಕ್ಲೋರಿನ್, ಪೊಟ್ಯಾಶಿಯಂ, ಕಾರ್ಬನ್, ಸೋಡಿಯಂ, ಅಲ್ಯೂಮಿನಿಯಂ, ಸಿಲಿಕಾನ್..ಗಳಿವೆ. ಮಳೆಗಾಲದ ಮಧ್ಯದಲ್ಲಿ ತೆಂಗಿನ ಮರಗಳ ಬುಡಗಳಿಗೆ ಕೃಷಿಕರು ಉಪ್ಪು ಹಾಕುತ್ತಾರೆ. ಇದಲ್ಲದೆ ಮಣ್ಣಿನಲ್ಲಿರುವ ಲವಣಾಂಶವನ್ನೂ ತೆಂಗಿನ ಮರ ಹೀರಿಕೊಂಡು ಎಳನೀರಿನ ಮೂಲಕ, ಕೊತ್ತಳಿಗೆ ಮೂಲಕ ಪುನಃ ಡಿಸ್ಚಾರ್ಜ್ ಮಾಡುತ್ತದೆ.
ಬದನಾಜೆಯವರಿಗೆ ತೆಂಗು, ಅದರ ಮೌಲ್ಯವರ್ಧನೆ, ಔಷಧೀಯ ವಿಚಾರಗಳ ವೈಜ್ಞಾನಿಕ ಸಂಶೋಧನೆಗಳಿಗೆ ವಿಶ್ರಾಂತಿಯಿಲ್ಲ. ಮಾತಿಗಿಳಿದರೆ ಅಂಕಿಅಂಶಗಳೊಂದಿಗೆ ನಿಖರ ಮಾಹಿತಿ. ಒಂದು ಮರದಲ್ಲಿ ವರುಷಕ್ಕೆ ಹನ್ನೆರಡು ತೆಂಗಿನಗರಿ ಒಣಗಿ (ಮಡಲು) ಬೀಳಬೇಕು. ಒಂದು ತೆಂಗಿನ ಮಡಲು ಬೆಳೆದು ಒಣಗುವ ಹಂತ ತಲುಪಲು ಮೂರು ವರುಷ ಬೇಕು. ಹಾಗಾಗಿ ಒಂದು ಸದೃಢ ಮರದಲ್ಲಿ ಮೂವತ್ತಾರು ಗರಿಗಳು ಇರುತ್ತದೆ.
ಕೊತ್ತಳಿಗೆಯನ್ನು ಕತ್ತರಿಸಿ ಬಿಸಿನೀರಿನ ಒಲೆಗಾಗಿ ಸಂಗ್ರಹ ಮಾಡಿಟ್ಟರೆ, ಇನ್ನೂ ಕೆಲವರು ಬಿದ್ದ ಮಡಲನ್ನು ಅಲ್ಲಲ್ಲೇ ತುಂಡರಿಸಿ ಬುಡಕ್ಕೆ ಹಾಕುತ್ತಾರೆ. ಆ ಮರದ ಸತ್ವ ಅದರ ಬುಡಕ್ಕೆ ಮರು ಉಣಿಕೆ. ಕೊತ್ತಳಿಗೆಯಲ್ಲಿರುವ ಔಷಧೀಯ ಗುಣಗಳು ದೊಡ್ಡಪ್ರಮಾಣದಲ್ಲಿ ಸಂಶೋಧನೆಯಾದರೆ ಕೃಷಿ ರಂಗದಲ್ಲೊಂದು ದೊಡ್ಡ ಹೆಜ್ಜೆಯಾಗಬಹುದು.
ಸಿಂಧೂರ ಶಂಕರ್ ಸಂಶೋಧನೆಗೆ ಆಯ್ದುಕೊಂಡ ವಿಷಯ - ವೃಕ್ಷಗಳ ಫಲವತ್ತತೆ ಹೆಚ್ಚಿಸುವ, ಕೀಟ ಮತ್ತು ಶಿಲೀಂಧ್ರ ನಾಶಕ ಔಷಧಿ ತಯಾರಿ. ನೆದರ್ಲ್ಯಾಂಡಿನ ಇನೆಸ್ಫೋ ವಿಜ್ಞಾನ ಮೇಳದಲ್ಲಿ ಪ್ರಸ್ತುತಿ. ಸಂಶೋಧನಾ ವಿಷಯದ ಮುಖ್ಯ ಒಳಸುರಿ ಗೇರುಬೀಜದ ಸಿಪ್ಪೆಯ ಎಣ್ಣೆ. ಇದಕ್ಕೆ ಅರಶಿನ, ಅಂಟುವಾಳ, ತೆಂಗಿನೆಣ್ಣೆ.. ಮೊದಲಾದ ಸಸ್ಯಜನ್ಯ ವಸ್ತುಗಳ ಬಳಕೆ. ಇದರೊಂದಿಗೆ ಗೇರು ಎಣ್ಣೆಯನ್ನು ಕರಗಿಸಲಿರುವ ವಸ್ತುವೊಂದರ ಬೆರಕೆ. ಹೀಗೆ ಲಭಿಸಿದ ದ್ರಾವಣಕ್ಕೆ ಹೆಸರು 'ಫಲಿನಿ'. ನೂರು ಲೀಟರ್ ನೀರಿಗೆ ಮೂರು ಲೀಟರ್ ಫಲಿನಿ ಸೇರಿಸಿ ಅಡಿಕೆ, ದ್ರಾಕ್ಷಿ, ಕಾಫಿ, ಕೊಕ್ಕೋ ಗಿಡಗಳಿಗೆ ಕೃಷಿಕರು ಸಿಂಪಡಿಸುತ್ತಿದ್ದಾರೆ. ದಶಕದೀಚೆಗೆ ಉತ್ತಮ ಫಲಿತಾಂಶ ಪ್ರಾಪ್ತವಾಗುತ್ತಿದೆ ಎನ್ನುತ್ತಾರೆ ಭಟ್.
ಸಿಂಧೂರ ಫಲಿನಿಯನ್ನು ವೈಜ್ಞಾನಿಕ ಸಂಶೋಧನೆಗೆ ಅಳಪಡಿಸಿದ್ದಾರೆ. ಸಂಶೋಧನಾಲಯಕ್ಕೆ ಓಡಿದ್ದಾರೆ. ವಿಜ್ಞಾನಿಗಳನ್ನು ಭೇಟಿಯಾಗಿದ್ದಾರೆ. ವರದಿಯನ್ನು ತರಿಸಿಕೊಂಡಿದ್ದಾರೆ. ಫಲಾಫಲಗಳನ್ನು ದಾಖಲಿಸಿದ್ದಾರೆ. ಪ್ರಾಕ್ಟಿಕಲ್ ವಿಚಾರಗಳಿಗೆ ಒತ್ತುನೀಡಿದ್ದರಿಂದಲೇ ಇವರಿಬ್ಬರ ವರದಿಗಳಿಗೆ ಪ್ರಶಸ್ತಿ ಪ್ರಾಪ್ತವಾಗಿದೆ. ಧೀಮಂತ್ ಸೇಡಿಯಾಪು ಮತ್ತು ಶ್ರೀಕುಮಾರ್ ಜಂಟಿಯಾಗಿ 'ಬಸವನಹುಳು ನಿಯಂತ್ರಣಕ್ಕೆ ಸೀಗೆಕಾಯಿಯ ಔಷಧದ ಸಿಂಪಡಣೆ'; 'ಆಸ್ಪತ್ರೆಗಳಲ್ಲಿ ತ್ಯಾಜ್ಯಗಳನ್ನು ತುಂಬುವ ನೂತನ ಕಸದ ಬುಟ್ಟಿ' ವಿಚಾರದ ಪ್ರಸ್ತುತಿಯನ್ನು ಆದಿತ್ಯ ಎಸ್.ಎನ್., ಶಿವಪ್ರಸಾದ್ ಬಿ. ಮಾಡಿದ್ದಾರೆ. ಈ ಎರಡೂ ಪ್ರಬಂಧಗಳಿಗೂ ಬೆಳ್ಳಿಯ ಪುರಸ್ಕಾರ.
ಅಂತಾರಾಷ್ಟ್ರೀಯ ವಿಜ್ಞಾನಿಗಳ ಕೈಯಲ್ಲಿ ಭಾರತದ ಜ್ಞಾನ ವರದಿಗಳ ರೂಪದಲ್ಲಿವೆ. ಭಾರತಕ್ಕೆ ಬೇರೆ ಬೇರೆ ರೂಪದಲ್ಲಿ ನುಗ್ಗಿ, ನಮ್ಮ ಪಾರಂಪರಿಕ ಜ್ಞಾನವನ್ನು ದಾಖಲಿಸಿ, 'ಅದು ತಮ್ಮದೆಂದು' ಸ್ಥಾಪಿಸಿದ ಉದಾಹರಣೆಗಳು ಕಣ್ಣ ಮುಂದಿವೆ. ಅರಶಿನ, ಕಹಿಬೇವು..ಗಳು ಹುನ್ನಾರಗಳಿಂದ ಪೇಟೆಂಟ್ ಪಡಕೊಂಡಿದ್ದರೂ, ಬಳಿಕ ರದ್ದಾದುದು ಇತಿಹಾಸ. 'ಇದನ್ನು ಲಕ್ಷ್ಯದಲ್ಲಿಸಿಕೊಂಡೇ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಜ್ಞಾನಕ್ಕೆ ಪೇಟೆಂಟ್ ಮಾಡುವ ಉದ್ದೇಶವಿದೆ' ಎನ್ನುತ್ತಾರೆ ಶಂಕರ ಭಟ್.
ಕೃಷಿಯಲ್ಲಿ ಸಂಶೋಧನೆಗಳು ಅಪರಿಮಿತ. 'ಲ್ಯಾಬ್ ಟು ಲ್ಯಾಂಡ್' ಆಶಯವಾದರೂ ಬಹುತೇಕ ಫೈಲಿನೊಳಗೆ ಅವಿತುಕೊಳ್ಳುತ್ತವೆ. ಸಂಶೋಧನೆಗಳನ್ನು ಹೊಲಕ್ಕೆ ತರುವ, ರೈತರಿಗೆ ತಲಪಿಸುವ ಬೆರಳೆಣಿಕೆಯ ಪ್ರಾಮಾಣಿಕ ವಿಜ್ಞಾನಿಗಳಿರುವುದರಿಂದ ಸಂಶೋಧನಾಲಯಗಳು ಉಸಿರಾಡುತ್ತಿವೆ! ಬಾಲವಿಜ್ಞಾನಿಗಳ ಬಾಲಹೆಜ್ಜೆಯ ಪ್ರಬಂಧವು ಹಸಿರು ಉಸಿರಿನ ವಿಜ್ಞಾನಿಗಳ ಸಂಶೋಧನೆಗೆ ಒಳಸುರಿ.
ಸಂಶೋಧನೆಗಳು ಕೃಷಿಕಪರವಾಗಿದ್ದರೂ ಅಲ್ಲೋ ಇಲ್ಲೋ ಕೆಲವು ವಿಜ್ಞಾನಿಗಳು ಬಹುರಾಷ್ಟ್ರೀಯ ಕಂಪೆನಿಗಳ ಏಜೆಂಟರಂತೆ ನಡೆದುಕೊಳ್ಳುತ್ತಿರುವುದು ಮಾಧ್ಯಮಗಳಿಂದ ವ್ಯಕ್ತವಾಗುವ ವಿಚಾರ. ಫಕ್ಕನೆ ನೋಡಿದರೆ ವಿಷ ಕಂಪೆನಿಗಳ ಏಜೆಂಟರಂತೆ ಭಾಸವಾಗುತ್ತದೆ. ತನ್ನ ಸಂಶೋಧನೆ, ದೇಶ, ಸಮಾಜಕ್ಕೆ ಕಿಂಚಿತ್ತೂ ಗೌರವ ಕೊಡದವರು ಎಷ್ಟು ಮಂದಿ ಬೇಕು? ಸಂಶೋಧನೆಯ ಅರ್ಥವೇ ಮಸುಕಾಗಿದೆ.
ಶಾಲಾ ಹಂತದಿಂದಲೇ 'ಸಂಶೋಧನೆ' ಪರಿಕಲ್ಪನೆ, ಪ್ರಕ್ರಿಯೆಗಳು ವಿದ್ಯಾರ್ಥಿಗೆ ಕಲಿಕೆಯಾಗಿಯೇ ಒದಗಿದಾಗ ಅದರ ಕಷ್ಟ ಸುಖಗಳ ಕನಿಷ್ಠ ಜ್ಞಾನವೂ ಲಭಿಸುತ್ತದೆ. ಇಂದು ಕೃಷಿ ವಿಚಾರಗಳು ಶೈಕ್ಷಣಿಕವಾಗಿ ದೂರವಾಗಿವೆ. ಕೃಷಿಗೂ ವಿದ್ಯಾರ್ಥಿಗಳಿಗೂ, ಕೃಷಿಗೂ ಶೈಕ್ಷಣಿಕ ಸಂಸ್ಥೆಗಳಿಗೂ, ಕೃಷಿಗೂ ಪಠ್ಯ ರೂಪೀಕರಣ ಸಮಿತಿಗಳಿಗೆ 'ಕೃಷಿಯೊಂದು ಬದುಕು' ಎನ್ನುವುದು ಅರ್ಥವಾಗಿಲ್ಲ, ಅರ್ಥವಾಗುತ್ತಿಲ್ಲ. ಈ ಕಾಲಘಟ್ಟದಲ್ಲಿ ಕೃಷಿಯ ಹಿನ್ನೆಲೆಯನ್ನಿಟ್ಟುಕೊಂಡು ವಿಶ್ವಮಟ್ಟದಲ್ಲಿ ಚಿನ್ನ, ಬೆಳ್ಳಿ ತಂದ ವಿದ್ಯಾರ್ಥಿಗಳ ಸಂಶೋಧನಾ ಬಾಲನಡೆಯಲ್ಲಿ ಸಂದೇಶವಿಲ್ವಾ.
ಶಾಲೆಯಲ್ಲಿ ಯಾವ ವಿದ್ಯಾರ್ಥಿಯೂ ಶ್ರೇಷ್ಟನಲ್ಲ, ಯಾರೂ ಕನಿಷ್ಟರಲ್ಲ. ಆದರೆ ಬೌದ್ಧಿಕ ಮಟ್ಟದಲ್ಲಿ ಒಬ್ಬೊಬ್ಬರದು ಒಂದೊಂದು ಮೆಟ್ಟಿಲು. ಪಠ್ಯೇತರ ವಿಚಾರಗಳಿಗೆ ಮಾನ್ಯತೆ ಸಿಕ್ಕಾಗ ಅದು ಇತರ ವಿದ್ಯಾರ್ಥಿಗಳನ್ನೂ ಪ್ರಚೋದಿಸುತ್ತವೆ. ಈ ವರುಷ ನನ್ನಲ್ಲಿಗೆ ಏಳೆಂಟು ವಿದ್ಯಾರ್ಥಿಗಳು ಪ್ರಾಜೆಕ್ಟ್ಗಾಗಿ ಬಂದಿದ್ದಾರೆ. ಎಲ್ಲರಿಗೂ ಹೇಗೆ ನಾನು ಮಾರ್ಗದರ್ಶಕನಾಗಲಿ. ಆದರೆ ವಿಜ್ಞಾನ ಸಂಶೋಧನೆಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಮನಃಸ್ಥಿತಿ, ಹೆತ್ತವರ ನಿರ್ಧಾರವನ್ನು ಮಾನಿಸಬೇಕು, ಎನ್ನುತ್ತಾರೆ ಶಂಕರ ಭಟ್ಟರು.
ಅಂಕ ಆಧಾರಿತವಾದ ಶೈಕ್ಷಣಿಕ ಪಠ್ಯಕ್ರಮದಲ್ಲಿ ಮಕ್ಕಳನ್ನು ಓದಿಸುತ್ತೇವೆ. ಓಡುತ್ತಿರುವ ಕಾಲದ ಜತೆಗೆ ಅಪ್ಡೇಟ್ ಆಗಬೇಕೆನ್ನುವುದು ಹಪಹಪಿ. ಹಾಗಾಗಿ ಒಂದೊಂದು ಮಾರ್ಕಿಗೂ ಪೈಪೋಟಿ. ನನಗನ್ನಿಸುತ್ತದೆ - ಪೈಪೋಟಿ ಬೇಕಾದುದೇ. ಆದರೆ ಬೌದ್ಧಿಕವಾಗಿ ಗಟ್ಟಿ ಮಾಡದ ಸ್ಪರ್ಧೆಗಳು ಬರಿಗುಲ್ಲು-ನಿದ್ದೆಗೇಡು. ಅಂಕದ ಹಿಂದೆ ಓಡಿ ಯಶಸ್ಸಾಗಬಹುದು. ಆದರೆ ಅಂತಿಮ ಬಿಂದು ತಲುಪಿದಾಗ ಜ್ಞಾನ ಕೈಕೊಡುತ್ತದೆ! ಒತ್ತಡ ಅಂಟಿಕೊಳ್ಳುತ್ತದೆ. ಶಾಲಾ ಹಂತದಿಂದಲೇ ಸಂಶೋಧನೆಯಂತಹ ಜ್ಞಾನವನ್ನು ಗಟ್ಟಿಗೊಳಿಸುವ ಪಠ್ಯೇತರ ಶಿಕ್ಷಣ ಸಿಕ್ಕರೆ ವಿದ್ಯಾರ್ಥಿ ಜೀವನ ಯಶಸ್ಸು.
1 comments:
Very good, Girls. Keep going. All the best.
Post a Comment