Thursday, June 6, 2013

ಶ್ರಮ ಹಗರುಗೊಳಿಸುವ ಸಹಕಾರಿ ತರಕಾರಿ ಕೃಷಿ


              ಒಂದು ಕಾಲಘಟ್ಟ ನೆನಪಾಗುತ್ತದೆ. ಹತ್ತು ಮಂದಿ ಜತೆ ಸೇರಿ ಗದ್ದೆಯಲ್ಲಿ ತರಕಾರಿ ಮಾಡುವ ವ್ಯವಸ್ಥೆ. ಪ್ರತಿಯೊಬ್ಬನಿಗೂ ಇಂತಿಷ್ಟು ಸಾಲು ಎನ್ನುವ ಲೆಕ್ಕಾಚಾರ. ಏತದಿಂದ ನೀರೆತ್ತಿ ನೀರಾವರಿ. ಬೆಳ್ಳಂಬೆಳಿಗ್ಗೆ ಅವರವರ ಪಾಲಿನ ತರಕಾರಿ ಸಾಲಿಗೆ ನೀರುಣಿಕೆ, ಗೊಬ್ಬರ ಮೊದಲಾದ ಆರೈಕೆಗಳು ಸೂರ್ಯೋದಯವಾಗುವಾಗ ಮುಗಿದು ಬಿಡುತ್ತದೆ. ದಿನಕ್ಕೊಬ್ಬರಂತೆ ಏತವನ್ನು ಜಗ್ಗುವ ಸರದಿ. ಯಾರಲ್ಲಿ ತರಕಾರಿ ಇಳುವರಿ ಬಂತೋ ಅದನ್ನು ಸ್ಥಳೀಯವಾಗಿಯೇ ವಿನಿಮಯ.
ಹಸಿಮೆಣಸಿನಕಾಯಿ, ಸೌತೆ, ಬೆಂಡೆ, ಅಲಸಂಡೆ, ಗೆಣಸು.... ಬೆಳೆಸದವರಿಲ್ಲ. ಮನೆಗಳಲ್ಲಿ ಸೌತೆ, ಕುಂಬಳ ಕಾಯಿಗಳನ್ನು ತೆಂಗಿನ ಹಸಿ ಗರಿಯ ಒಂದು ಸೀಳಿನಲ್ಲಿ ಕಟ್ಟಿ ತೂಗಾಡಿಸಿ ಕಾಪಿಡುವುದು ಪಾರಂಪರಿಕ ಕ್ರಮ. ರಾಸಾಯನಿಕ, ವಿಷವನ್ನು ಬಳಸದ್ದರಿಂದ ತಾಳಿಕೆಯೂ ಹೆಚ್ಚು. ರುಚಿಯೂ ಅಧಿಕ.

              ಸೌತೆಕಾಯಿ ಅಂದಾಗ ಏನು ಮಾಡಬಹುದು ಹೇಳಿ? ಪದಾರ್ಥ, ಪಲ್ಯ ಬಿಟ್ಟರೆ ಫಕ್ಕನೆ ಹೊಳೆಯದು. ಹಿರಿಯನ್ನು ಕೇಳಿ. ಸೌತೆಯ ಕಡುಬು, ಪಾಯಸ, ದೋಸೆ, ಬೀಜದ ಸಾರು, ಒಳ ಹೂರಣವನ್ನು ಕೆರೆದು ಬೆಲ್ಲ ಮಿಶ್ರಮಾಡಿದ ಪಾಕ.. ಇವೆಲ್ಲಾ ಕಾಲದ ಧಾವಂತದಲ್ಲಿ ಮರೆತುಹೋಗಿದೆ. ಅಲ್ಲೋ ಇಲ್ಲೋ ಉಳಿದುಕೊಂಡಿವೆಯಷ್ಟೇ. ಇಂತಹ ಮನೆಗಳಲ್ಲಿ ದಿಢೀರ್ ನೆಂಟರು ಬಂದಾಗ ಮನೆಯೊಡತಿಯ ರಕ್ತದೊತ್ತಡ ಏರುವುದಿಲ್ಲ. ಸೌತೆಯೊಂದರಿಂದಲೇ ಖಾರದಿಂದ ಸಿಹಿ ತನಕ ಮಾಡಿದ ಅಡುಗೆಗಳು ಬರೆದಿಟ್ಟರೆ ಪುಸ್ತಕದಲ್ಲಿ ಮಾತ್ರ ಉಳಿದಿರುವುದು ನಮ್ಮ ಪಾಡು.

                ಸಹಕಾರಿ ಕೃಷಿ ಮಾಡುವುದರಿಂದ ತರಕಾರಿಯೊಂದಿಗೆ ಇತರ ಪ್ರಯೋಜನಗಳನ್ನು ಗುರುತು ಹಾಕಿಕೊಳ್ಳಬಹುದು. ತರಕಾರಿ ಕೃಷಿಯು ಗಿಡಗಳ ಜತೆಗಿದ್ದೇ ಮಾಡುವ ಕೆಲಸ. ಇದು ಅವಲಂಬನಾ ಕೆಲಸವಲ್ಲ. ಸಹಾಯಕರನ್ನು ನಂಬಿ ಮಾಡುವಂತಹುದಲ್ಲ. ಸ್ವತಃ ತೊಡಗಿಸಿಕೊಂಡರೆ ಮಾತ್ರ ಪ್ರತಿಫಲ. ಒಂದು ದಿವಸ ನಿಗಾ ತಪ್ಪಿದರೆ ಸಾಕು, ಆರೈಕೆ ಮಾಡಿದ ಗಿಡಗಳು ಸೊರಗಿರುತ್ತದೆ. ಕೂಡು ಕೃಷಿಯಲ್ಲಿ ಶ್ರಮವಿನಿಮಯವಿದೆ. ಇಂದು ಒಬ್ಬನಿಗೆ ಗೈರುಹಾಜರಾಗುವ ಸಂದರ್ಭ ಬಂದರೆ, ಅವನ ಸಾಲಿನ ಕೆಲಸವನ್ನು ಪಕ್ಕದ ಸಾಲಿನ ಮಾಡುತ್ತಾನೆ. ಗಿಡಗಳ ರಕ್ಷೆಗಾಗಿ ಪ್ರತಿಯೊಬ್ಬನಿಗೂ ಬೇಲಿ ಹಾಕಬೇಕಾಗಿಲ್ಲ. ಎಲ್ಲರಿಗೂ ಒಂದೇ ಬೇಲಿ ಸಾಕು. ಹಲವರ ನಿಗಾ ಇರುವಾಗ ಒಂದು ಗಿಡ ಸೊರಗಿದರೂ ಗೊತ್ತಾಗಿಬಿಡುತ್ತದೆ. ಆರೈಕೆ ಮಾಡಲು ಸುಲಭ.

                ಈಚೆಗೆ ಅಳಿಕೆ (ದ.ಕ.) ಸನಿಹದ ಮುಳಿಯಕ್ಕೆ ಭೇಟಿ ನೀಡಿದ್ದೆ. ವಿ.ಕೆ.ಶರ್ಮರ ಬೈಲುಗದ್ದೆಯೊಂದರಲ್ಲಿ ತರಕಾರಿ ಕೃಷಿ. ಸುತ್ತಲಿನ ಐದಾರು ಮಂದಿ ಜತೆಸೇರಿ ಹತ್ತು ಸೆಂಟ್ಸ್ ವಿಸ್ತಾರದಲ್ಲಿ ಕೃಷಿ ಮಾಡಿದ್ದರು. ಸೌತೆ, ಮುಳ್ಳುಸೌತೆ, ಅಲಸಂಡೆ, ಬೆಂಡೆ, ಸೊರೆ.. ಹೀಗೆ ಹಲವು ಬೇಸಿಗೆ ತರಕಾರಿಗಳು. ಎರಡೂವರೆ ತಿಂಗಳ ಶ್ರಮ. ನೀರಿನ ಸಂಪನ್ಮೂಲ ಕಡಿಮೆಯಾಗುತ್ತಾ ಬಂದಂತೆ ಬಳ್ಳಿಗಳೂ ಕೊನೆಯುಸಿರುಬಿಟ್ಟಿರುತ್ತವೆ.

               ಮನೆಬಳಕೆಗೆ ಮಿಕ್ಕಿದ್ದು ಸ್ಥಳೀಯವಾಗಿ ಮಾರಾಟ. ಈ ವರುಷ ಉತ್ತೇಜಿತ ದರವಿದ್ದುದರಿಂದ ಬೆಳೆದವರ ಮುಖ ಅರಳಿದೆ. ಸೌತೆ ಕಿಲೋಗೆ ಹದಿನೈದು ರೂಪಾಯಿ, ಬೆಂಡೆಗೆ ಮೂವತ್ತು, ಅಲಸಂಡೆಗೆ ಮೂವತ್ತು.. ಹೀಗೆ. ವಿಸ್ತಾರವಾಗಿ ತರಕಾರಿ ಗಿಡ/ಬಳ್ಳಿಗಳು ಹಬ್ಬಿವೆ. ಹಾಗಾಗಿ ಒಂದೇ ಕಡೆಗೆ ಕೀಟ ಬಾಧೆ ಕಡಿಮೆ. ಬಯೋಡೈಜೆಸ್ಟರ್ ದ್ರಾವಣ ಮತ್ತು ಸುಡುಮಣ್ಣು, ಹಟ್ಟಿಗೊಬ್ಬರ ಉಣಿಸಿದ್ದರಿಂದಾಗಿ ಗಿಡಗಳು ಸದೃಢವಾಗಿವೆ ಎನ್ನುತ್ತಾರೆ ಶರ್ಮ.

                ಸಹಕಾರಿ ಕ್ರಮದಲ್ಲಿ ಕೃಷಿ ಮಾಡಿದ್ದರಿಂದ ಕೆಲಸಗಳು ಹಗುರವಾಗಿವೆ. ಒಬ್ಬ ರಜೆ ಮಾಡಿದರೂ ಇನ್ನೊಬ್ಬ ಆ ಜಾಗವನ್ನು ತುಂಬುತ್ತಾನೆ. ಏತವನ್ನು ಜಗ್ಗಿ ನೀರು ಹಾಯಿಸಲು ನಾಲ್ಕೈದು ಮಂದಿ ಬೇಕು. ಒಬ್ಬೊಬ್ಬ ಕೃಷಿ ಮಾಡಿದರೆ ತ್ರಾಸ. ನಿರ್ವಹಣೆ ಕಷ್ಟ. ಎಲ್ಲರೂ ಸೇರಿ ಮಾಡುವುದರಿಂದ ಸುಲಭವಾಗಿದೆ' ಎನ್ನುತ್ತಾರೆ ತರಕಾರಿ ಬೆಳೆದ ನಾರಾಯಣ. ಹತ್ತಿರ ಹತ್ತಿರ ಸಾಲುಗಳಿರುವುದರಿಂದ ನೀರಿನ ಪ್ರಮಾಣವೂ ಕಡಿಮೆ ಸಾಕಾಗುತ್ತದೆ.

                 ಸಹಕಾರಿ ಕ್ರಮದಲ್ಲಿ ಕೃಷಿಗೆ - ಏಕಮನಸ್ಕರಾಗಿರಬೇಕು, ಹೊಂದಾಣಿಕೆ ಗುಣವಿರಬೇಕು. ನನ್ನದೇ ಅಂತಿಮ ಮಾತು ಎನ್ನುವ ಮಂದಿಗೆ ನೋ ಎಂಟ್ರಿ! ಕಳೆದ ಐದು ವರುಷದಿಂದ ಶಮರ್ಾರ ಗದ್ದೆ ತರಕಾರಿಗೆ ಮೀಸಲು. ನಾವೇ ಬೆಳೆದ ತರಕಾರಿಯನ್ನು ಮೆಲ್ಲುವುದು ಖುಷಿಯಲ್ವಾ. ಮನಸ್ಸು, ವಿಷರಹಿತ ಆಹಾರದ ಅರಿವು ಬೇಕಷ್ಟೇ.


0 comments:

Post a Comment