Thursday, June 6, 2013

ಕೊಲೆಸ್ಟರಾಲ್ ಇರುವುದು ತೆಂಗಿನಲ್ಲಲ್ಲ, ಮನಸ್ಸಿನಲ್ಲಿ..


              ಥಾಯ್ಲ್ಯಾಂಡಿನ ರಾಜಧಾನಿ ಬ್ಯಾಂಕಾಕ್. ನಮ್ಮೂರಿನ ಸೂಪರ್ ಬಜಾರನ್ನೂ ನಾಚಿಸುವ ಆಕರ್ಷಕ ಮಳಿಗೆ. ಏನುಂಟು ಏನಿಲ್ಲ! ಅಲ್ಲೊಂದೆಡೆ ಎಳನೀರನ್ನು (ಬೊಂಡ, ಸೀಯಾಳ) ಅಂದವಾಗಿ ಕೆತ್ತಿ, ಮುದ್ದುಮುದ್ದಾದ ಆಕಾರ ಕೊಟ್ಟು, ಕ್ಲಿಂಗ್ ಫಿಲ್ಮ್ ಸುತ್ತಿ ಮಾರಾಟಕ್ಕಿಟ್ಟಿದ್ದರು. ಪ್ರವಾಸಿಗನಾಗಿ ಹೋದ ಗುಲ್ಬರ್ಗದ ಮಿತ್ರ ಆನಂದರನ್ನು ಸೆಳೆಯಿತು. ಎಲ್ಲೋ ನೋಡಿದ, ಓದಿದ ನೆನಪು. ಥಟ್ಟನೆ ನೆನಪಾಯಿತು, ಅಡಿಕೆ ಪತ್ರಿಕೆ. ಅಂದವರ್ಧನೆಗೊಂಡ ಎಳನೀರಿನ ಫೋಟೋ ಕ್ಲಿಕ್ಕಿಸಿ ಮಿಂಚಂಚೆಯಲ್ಲಿ ಕಳುಹಿಸಿಕೊಟ್ಟರು. ಜತೆಗೆ ಸ್ವಲ್ಪ ಮಾಹಿತಿಯೂ ಕೂಡಾ.

               ಎಲ್ಲಾ ಉತ್ಪನ್ನಗಳ ಪ್ಯಾಕೆಟಿಗಂಟಿರುವಂತೆ ಎಳನೀರಿನ ಮೇಲೂ ಬಾರ್ಕೋಡ್. ತಯಾರಿ ಮತ್ತು ಅವಧಿ ಮುಗಿವ ದಿನಾಂಕ, ಎಳನೀರಿನಲ್ಲಿರುವ ಕಂಟೆಂಟ್, ತಯಾರಿ ಕಂಪೆನಿ.. ವಿವರಗಳುಳ್ಳ ಸ್ಟಿಕ್ಕರ್. ಫಕ್ಕನೆ ಸೆಳೆಯಬಲ್ಲ ನೋಟ. ತಂಪು ಪಾನೀಯಗಳಿಗಿರುವಷ್ಟೇ ಮಾನ-ಮರ್ಯಾದೆ! ತರಕಾರಿ, ಜೀನಸಿಗಳನ್ನು ಒಯ್ಯುವಂತೆ ಎಳನೀರನ್ನು ಒಯ್ಯುವ ಗ್ರಾಹಕರು.

                 ಒಂದು ಎಳನೀರಿಗೆ ಯಾ ಬೊಂಡಕ್ಕೆ ಎಷ್ಟಿರಬಹುದು? ಐವತ್ತರಿಂದ ಅರುವತ್ತು ಬಾತ್ Baht). . ಒಂದು ಬಾತ್ ಅಂದರೆ ಭಾರತದ ಒಂದು ರೂಪಾಯಿ ಎಂಭತ್ತಮೂರು ಪೈಸೆ. ವಿಮಾನ ನಿಲ್ದಾಣದಲ್ಲಿ ಒಂದು ಎಳನೀರಿಗೆ ಎಂಭತ್ತು ಬಾತಿನವರೆಗಿದೆ. ತೆಂಗಿನ ತಾಜಾ ಎಣ್ಣೆಯ (ತೆಂತಾ ಎಣ್ಣೆ, ವರ್ಜಿನ್ ಕೋಕನಟ್ ಆಯಿಲ್) ಏಳುನೂರ ಐವತ್ತು ಎಂ.ಎಲ್. ಬಾಟಲಿಗೆ ನಾಲ್ಕುನೂರ ಐವತ್ತು ಬಾತ್!

                ತೆಂಗು ಉತ್ಪಾದನೆಯಲ್ಲಿ ಥಾಯ್ಲ್ಯಾಂಡಿಗೆ ಆರನೇ ಸ್ಥಾನ. ಆದರೆ ಎಳನೀರಿನ ಮೌಲ್ಯವರ್ಧನೆಯಲ್ಲಿ ಹಿರಿಯಣ್ಣ. ಅಂದವರ್ಧಿಸಿಕೊಂಡ ಎಳನೀರು ದೇಶದೊಳಗೆ ಮಾತ್ರವಲ್ಲ, ಕಡಲಾಚೆಯ ದೇಶಗಳಿಗೂ ರಫ್ತಾಗುತ್ತದೆ. ಅಮೆರಿಕಾ, ಇಂಗ್ಲೇಂಡ್, ಜಪಾನ್, ಆಸ್ಟ್ರೇಲಿಯ, ಸಿಂಗಾಪುರ, ಹಾಂಗ್ಕಾಂಗ್, ಯುರೋಪ್.. ದೇಶಗಳಲ್ಲಿ ಬಾಯಾರಿದಾಗ ನೆನಪಾಗುವುದು ಥಾಯ್ ಎಳನೀರು. ಕೊಕೊನಟ್ ಜೆಲ್ಲಿ - ಪ್ರವಾಸಿಗರನ್ನು ಸೆಳೆಯುವ ಥಾಯ್ ಜನಪ್ರಿಯ ಉತ್ಪನ್ನ.

               ಆಕರ್ಷಕ ನೋಟ, ಸ್ವಚ್ಛತೆ, ಕನಿಷ್ಠ ಸಂಸ್ಕರಣೆ ಮಾಡಿ ಗ್ರಾಹಕರಿಗೆ ನೀಡುವುದು ಕಡಲಾಚೆಯ ದೇಶಗಳಲ್ಲಿ ಮಾಮೂಲಿ. ಥಾಯ್ಲ್ಯಾಂಡ್ ಮಾರುಕಟ್ಟೆ ಕೌಶಲ ಮೆಚ್ಚುವಂತಾದ್ದು. ಎಳನೀರಿಗೆ ರಾಜಮರ್ಯಾದೆ ನೀಡುವ ಅಲ್ಲಿನ ಕ್ರಮ ನೋಡಿದಾಗ ನಮ್ಮೂರಿನ ಎಳನೀರು ವ್ಯಾಪಾರ, ವ್ಯಾಪಾರಿಗಳ ನೆನಪಾಯಿತು,' ಎಂದು ಆನಂದ್ ಜ್ಞಾಪಿಸಿಕೊಳ್ಳುತ್ತಾ, 'ಕನ್ನಾಡಿನ ಪ್ರವಾಸಿಧಾಮಗಳಲ್ಲಿ ಎಳನೀರನ್ನು ಈ ರೀತಿ ಮಾಡಿ ನೀಡಿದರೆ ಡಿಮ್ಯಾಂಡ್ ಬರಬಹುದು' ಎಂದರು. ಹೌದಲ್ಲಾ.. ಕಾರ್ಪೋರೇಟ್ ವಲಯವನ್ನು ಈಗಾಗಲೇ ಸೆಳೆದ ಅಂದವರ್ಧಿತ ಎಳನೀರಿನ ಮಳಿಗೆಗಳು ಯಶಕಾಣುತ್ತಿವೆ.

                  ಈಚೆಗೆ ಕರಿಂಗಾಣದ ಡಾ.ಕೆ.ಎಸ್.ಕಾಮತರ ಮನೆಗೆ ಹೋಗಿದ್ದೆ. ಮಧ್ಯಾಹ್ನ ಭೋಜನಕ್ಕೆ ವಿಶೇಷ ಖಾದ್ಯ. ಯಾವುದರದು ಎಂದು ಆರ್ಥವಾಗಿಲ್ಲ. 'ಇದು ತೆಂಗಿನ ಮೊಳಕೆಯ (ಕೊಕನಟ್ ಆಪಲ್) ಪದಾರ್ಥ' ಎನ್ನುತ್ತಾ ಇನ್ನಷ್ಟು ಬಡಿಸಿದರು. 'ತೆಂಗಿನ ಮೊಳಕೆಯಿಂದಲೂ ಪದಾರ್ಥ ಮಾಡಲು ಆಗುತ್ತಾ' ಎನ್ನುತ್ತಾ ಜತೆಗಿದ್ದ ಹಾಸನಡ್ಕ ರಘುರಾಮ್ ಇನ್ನಷ್ಟು ಬಡಿಸಿಕೊಂಡರು.

                  ತೆಂಗಿಗೆ ದರ ಕಡಿಮೆಯಾದಾಗ ಸಹಜವಾಗಿ ಆತಂಕ, ದುಗುಡ. ಬೆಳೆಯಿದೆ, ಬೆಲೆಯಿಲ್ಲ. ಮಾರುಕಟ್ಟೆಗೆ ಒಯ್ದರೆ ಚಿಕ್ಕಾಸು ದರ. ಐದೋ ಆರೋ ರೂಪಾಯಿಗೆ ಕೃಷಿಕರಿಂದ ಖರೀದಿಸಿ, ಮರುಕ್ಷಣದಲ್ಲೇ ಹದಿನೈದೋ ಇಪ್ಪತ್ತು ರೂಪಾಯಿಗೆ ಮಾರುವ ವ್ಯಾಪಾರಿಗಳ ತಂತ್ರ. ಅದನ್ನು ಹಾರ್ದಿಕವಾಗಿ ಸ್ವೀಕರಿಸಿದ್ದೇವೆ ಬಿಡಿ. ದೂರದ ಹಳ್ಳಿಯಿಂದ ಉತ್ಪನ್ನವನ್ನು ಪಟ್ಟಣಕ್ಕೆ ತಂದುದಾಗಿದೆ, ಮರಳಿ ಒಯ್ಯುವ ಹಾಗಿಲ್ಲ. ಕೃಷಿಕನ ಈ ಅಸಹಾಯಕತೆ, ಸೌಜನ್ಯ ಮತ್ತು ಪ್ರಾಮಾಣಿಕತೆಯನ್ನು 'ಸದುಪಯೋಗ'ಮಾಡಿಕೊಳ್ಳುವ ಎಷ್ಟು ಮಂದಿ ಜಾಣರು ಬೇಕು!

                  ಕೃಷಿ ಉತ್ಪನ್ನಗಳಿಗೆ ದೂರದ ಪಟ್ಟಣದಲ್ಲೇ ಮಾರುಕಟ್ಟೆಯಾಗಬೇಕಿಲ್ಲ. ಹಳ್ಳಿಯಲ್ಲೇ ಮಾರುಕಟ್ಟೆ ಮಾಡುವ ಜಾಣ್ಮೆಯಿದ್ದರೆ ಲಾಭ. ಕಾಸರಗೋಡು ಜಿಲ್ಲೆಯ ಮೀಯಪದವಿನ ಡಾ.ಚಂದ್ರಶೇಖರ ಚೌಟರು ಕೆಲವು ವರುಷಗಳಿಂದ ತನ್ನ ತೋಟದ ಎಳನೀರನ್ನು ತನ್ನೂರಲ್ಲೇ ಮಾರುಕಟ್ಟೆ ಮಾಡಿ ಮುಗುಳ್ನಗೆ ಬೀರುತ್ತಿದ್ದಾರೆ. ಮೀಯಪದವು ದೊಡ್ಡ ಪಟ್ಟಣವಲ್ಲ. ಬಹುಪಾಲು ಕೃಷಿ ಕಾರ್ಮಿಕರು. ಎಳನೀರಿಗೆ ಅವರೇ ದೊಡ್ಡ ಗ್ರಾಹಕರು. ಮೀಯಪದವಿನಲ್ಲಿ ಎಳನೀರಿಗೆ ಎಂಟರಿಂದ ಹತ್ತು ರೂಪಾಯಿ ದರ ಸಿಗುತ್ತದೆ. ದೂರದ ಪಟ್ಟಣಕ್ಕೆ ಒಯ್ದರೆ ದರ ಹೆಚ್ಚು ಸಿಗಬಹುದೇನೋ? ಆದರೆ ಸಾರಿಗೆ, ಕೂಲಿ, ಶ್ರಮ.. ಗಳನ್ನು ಲೆಕ್ಕ ಹಾಕಿದರೆ ನನ್ನೂರಿನ ಮಾರುಕಟ್ಟೆಯೇ ಹಿರಿದು' ಎನ್ನುತ್ತಾರೆ.

                    ಕರಾವಳಿಯ ಯಶೋಗಾಥೆ ಹೀಗಾದರೆ ತುಮಕೂರು ಜಿಲ್ಲೆಯಲ್ಲಿ ತಿರುಗುಮುರುಗು. ಅಲ್ಲಿ ಎಳನೀರು ಕೀಳುವುದೆಂದರೆ ಆತ ಆರ್ಥಿಕವಾಗಿ ದಿವಾಳಿಯಂಚಿನಲ್ಲಿದ್ದಾನೆ ಎಂದರ್ಥವಂತೆ. ಎಳನೀರು ಮಾರುವುದು ಲಾಭದಾಯಕ ಅಂತ ಗೊತ್ತಿದೆ. ಆದರೆ ಮಾರಾಟ ಮಾಡುವವನತ್ತ ವಿಷಾದ ಭಾವ! 'ಗತಿಯಿಲ್ಲದೆ ಈ ಉದ್ಯೋಗಕ್ಕೆ ಬಂದಿದ್ದಾನೆ' ಎಂಬ ಕುಹಕ. ಹೀಗಾಗಿ ಮನಸ್ಸಿದ್ದರೂ ಸಾಮಾಜಿಕ ಮುಜುಗರದಿಂದಾಗಿ ಎಳನೀರು ಮಾರಾಟಕ್ಕೆ ಹಿಂದೇಟು ಹಾಕುವವರೇ ಅಧಿಕ.

                   ಕಾಯಿಲೆ ಬಂದರೆ ಮಾತ್ರ ಎಳನೀರು ಕೀಳುತ್ತಾರೆ. ಅಮೃತತುಲ್ಯ ಪಾನೀಯ ಮನೆಯೊಳಗಿದ್ದರೂ ಕಂಪೆನಿ ಪ್ರಣೀತ ತಂಪುಪಾನೀಯಗಳಿಗೆ ಮಣೆ. ಎಲ್ಲೆಲ್ಲಿ ಆಸ್ಪತ್ರೆಗಳಿವೆಯೋ ಅಲ್ಲೆಲ್ಲಾ ಎಳನೀರಿಗೆ ಭರ್ಜರಿ ಮಾರಾಟ. ನಮ್ಮ ಕ್ರಿಕೆಟ್ ತಾರೆಯರು ಆಟದ ಮಧ್ಯೆ ಪೆಪ್ಸಿ, ಕೋಲಾ ಕುಡಿದಂತೆ, ಎಳನೀರಿನ ರೋಚಕ ಜಾಹೀರಾತು ಬಂದುಬಿಟ್ರೆ ತೆಂಗಿಗೂ ಬೆಲೆ ಬರಬಹುದೋ ಏನೋ!?

                     ಸನಿಹದ ಕೇರಳ ರಾಜ್ಯ ಮೌಲ್ಯವರ್ಧನೆಯಲ್ಲಿ ಮುಂದು. ಮನೆಮಟ್ಟದಿಂದ ಕಂಪೆನಿವರೆಗೆ ವಿವಿಧ ಉತ್ಪನ್ನಗಳು ಬೆಳಕು ಕಂಡಿವೆ. ವರ್ಜಿನ್ ಕೋಕನಟ್ ಆಯಿಲಿನಿಂದ ಸ್ನಾನದ ಸಾಬೂನು ವರೆಗೆ ಎಷ್ಟೊಂದು ಐಟಂಗಳು. ಚಟ್ನಿಹುಡಿ, ವಿನೇಗರ್, ಹೇರ್ಟೋನ್, ತೆಂಗಿನ ಬರ್ಫಿ, ಶಿಶುಸಾಬೂನು, ತೆಂಗಿನ ಹಾಲಿನ ಚಾಕೋಲೇಟ್.. ತೆಂಗಿನೆಣ್ಣೆಯ ಬಳಕೆ ಕೇರಳದಲ್ಲಿ ಪಾರಂಪರಿಕ. ನಖಶಿಖಾಂತ ಎಣ್ಣೆಪೂಸಿ, ಸ್ನಾನ ಮಾಡುವ ಪರಿ.

                      ಕನ್ನಾಡಿನಲ್ಲೂ ವೈಯಕ್ತಿಕ ಮಟ್ಟದಲ್ಲಿ ತೆಂಗಿನ ಮೌಲ್ಯವರ್ಧನೆ ಕೆಲಸಗಳಾಗಿವೆ. ತೆಂಗಿನ ತಾಜಾ ಎಣ್ಣೆ, ತೆಂಗಿನ ತಾಜಾ ಹಾಲು, ಐಸ್ಕ್ರೀಂ ಉದ್ದಿಮೆಗಳದು ಚಿಕ್ಕ ಹೆಜ್ಜೆ. ರಾಜಧಾನಿಯ ಕೆಲವು ಹೋಟೆಲುಗಳಲ್ಲಿ ತೆಂಗಿನ ತಾಜಾ ಹಾಲಿನ ಬಳಕೆಯಿದೆ.

                        ದೂರದ ಬ್ಯಾಂಕಾಕಿನ ಸುದ್ದಿ ಮಾತನಾಡುತ್ತೇವೆ. ಅವರ ಶ್ರಮವನ್ನು ಶ್ಲಾಘಿಸುತ್ತೇವೆ. ನಮ್ಮೂರಿನ ತೆಂಗು, ಅದರ ಉತ್ಪನ್ನಗಳತ್ತ ಯೋಚನೆ ಬರುತ್ತಿಲ್ಲ. ತೆಂಗು, ತೆಂಗಿನೆಣ್ಣೆ ಎಂದಾಕ್ಷಣ 'ಕೊಲೆಸ್ಟರಾಲ್' ಎನ್ನುತ್ತಾ ಗರ ಬಡಿದವರಂತೆ ವರ್ತಿಸುತ್ತೇವೆ. ವೈದ್ಯಕೀಯ ಮೂಲಗಳೂ ಸಾಥ್ ನೀಡುತ್ತಿವೆ. ವರುಷಪೂರ್ತಿ ತೆಂಗಿನ ಉತ್ಪನ್ನಗಳನ್ನು ಬಳಸುವ ಮಂದಿ ಕೊಲೆಸ್ಟರಾಲಿನಿಂದ ಬಳಲಿ ಬೆಂಡಾಗಿದ್ದಾರೆಯೇ? ತೆಂಗಿನೆಣ್ಣೆ, ಕೊಲೆಸ್ಟರಾಲ್ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಬೆಸುಗೆ ಹಾಕುವ ಯತ್ನಗಳು ಇಂದು ನಿನ್ನೆಯದಲ್ಲ. ಕೊಲೆಸ್ಟರಾಲ್ ಇರುವುದು ತೆಂಗಿನಲ್ಲಲ್ಲ, ಮನಸ್ಸಿನಲ್ಲಿ. ಮೈಂಡ್ಸೆಟ್ ಬದಲಾದರೆ ಕೊಲೆಸ್ಟರಾಲಿನ ಬಾಧೆಯಿಲ್ಲ.

                      ತೆಂಗು, ಕೊಲೆಸ್ಟರಾಲ್.. ಸುತ್ತ ಮನಸ್ಸು ಸುತ್ತುತ್ತಿದ್ದಾಗ ಅಣೆಕಟ್ಟೆ ವಿಶ್ವನಾಥ್ ತೆಂಗಿನ ವಿಸ್ಮಯ ಜಗತ್ತು ಪುಸ್ತಕ ಕಳುಹಿಸಿಕೊಟ್ಟರು. ಅವರ ಮೂರು ವರುಷಗಳ ಅಧ್ಯಯನ ಫಲದಿಂದ ಪುಸ್ತಕ ಹೊರಬಂದಿದೆ. ಕೃಷಿಕನ ಅನುಭವ, ಬಳಕೆ ಮತ್ತು ವೈದ್ಯಕೀಯ ಮಾಹಿತಿಗಳನ್ನು ಕಲೆಹಾಕಿ ಸಿದ್ಧಪಡಿಸಿದ ಪುಸ್ತಕ. ವಿಶ್ವನಾಥ್ಗೆ ತುಮಕೂರಿನ ತೆಂಗು ಕೃಷಿ, ಕೃಷಿಕ, ಕೃಷಿಸಮಸ್ಯೆಯತ್ತ ಲಕ್ಷ್ಯ. ಹಾಗೆಂತ ತೆಂಗಿನ ಕಾಣದ ಮುಖಗಳ ಪರಿಚಯ ಮಾಡಿಕೊಟ್ಟಿರುವುದು ಪುಸ್ತಕದ ಹಿರಿಮೆ.

                       ತೆಂಗಿನ ಸಂಶೋಧನಾ ಮಾಹಿತಿಯನ್ನು ಒಂದೆಡೆ ಹೇಳುತ್ತಾರೆ - ಪ್ರತಿನಿತ್ಯ ತೆಂಗಿನ ಎಣ್ಣೆಯನ್ನು ಬಳಸುವ ಜನರಲ್ಲಿ ಹೃದಯ ಸಂಬಂಧಿ ರೋಗಗಳು ಕಡಿಮೆ. ತೆಂಗಿನೆಣ್ಣೆ ಹೆಚ್ಚಾಗಿ ಬಳಸದ ಅಮೆರಿಕಾದಲ್ಲಿ ಹೃದಯದ ಕಾಯಿಲೆಗಳಿಂದ ಮರಣಿಸುವ ಪ್ರಮಾಣ ಜಾಸ್ತಿ. ಶ್ರೀಲಂಕಾದಲ್ಲಿ ಜನರ ನಿತ್ಯ ಆಹಾರದ ಬಹುಭಾಗ ತೆಂಗು. ಅಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಮರಣಿಸುವವರ ಸಂಖ್ಯೆ ಕಡಿಮೆ.

                       ತೆಂಗಿನ ಉತ್ಪನ್ನ ತಯಾರಿಗೆ ಸಾಧ್ಯತೆಗಳು ಹೆಚ್ಚು. ಅವಕಾಶಗಳ ಬಾಗಿಲು ತೆಗೆಯುವ ಕೆಲಸವಾದರೆ ಬೆಳೆಗಾರರಿಗೆ ಆಸಕ್ತಿ ಕುದುರಬಹುದು. ತೆಂಗು ಮಂಡಳಿಯಂತಹ ಸರಕಾರಿ ಪ್ರಣೀತ ಸಂಸ್ಥೆಗಳು ತೆಂಗಿನ ಕೆಲಸಗಳತ್ತ ಚಿಕ್ಕ ನೋಟ ಬೀರಿ ಆ ಜ್ಞಾನವನ್ನು ಹಂಚಿದರೂ ಸಾಕು, ಅದು ದೊಡ್ಡ ಹೆಜ್ಜೆ ಮೂಡಿಸಬಹುದು.

0 comments:

Post a Comment