Thursday, June 6, 2013

ಹತ್ತು ಪೈಸೆಗೆ ಒಂದು ಲೀಟರ್ ನೀರು!


              ಕನ್ನಾಡಿನ ಕುಡಿಯುವ ನೀರಿನಲ್ಲಿ ಶೇ.60ರಷ್ಟು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್, ಶೇ.20 ನೈಟ್ರೇಟ್ ಮತ್ತು ಶೇ.38ರಷ್ಟು ಸೂಕ್ಷ್ಮಾಣುಗಳು ಸೇರಿವೆ - ಸಮೀಕ್ಷಾ ವರದಿಯೊಂದರ ವರದಿ.

            ಉತ್ತರ ಕರ್ನಾಟಕದ ಬಹುಪಾಲು ಪ್ರದೇಶಗಳಲ್ಲಿ ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್, ಕ್ಲೋರಿನ್, ಜಡಧಾತುಗಳು, ಸೀಸ, ಅರ್ಸೆನಿಕ್, ಸೂಕ್ಷ್ಮಾಣುಜೀವಿಗಳು ಸೇರಿ ನೀರು ಅಶುದ್ಧವಾಗಿರುವುದು ಹೊಸ ವಿಚಾರವಲ್ಲ.
ಗದಗ, ಧಾರವಾಡ.. ಮೊದಲಾದ ಪ್ರದೇಶಗಳಲ್ಲಿ ಮಳೆ ಕೈಕೊಟ್ಟಿದೆ. ಬರ ಸ್ವಾಗತಿಸಿದೆ. ಹೊಲಗಳು ಭಣಭಣ. ಜನರು ಗುಳೆ ಹೋಗುತ್ತಿದ್ದಾರೆ. ಕೊಳವೆ ಬಾವಿಗಳ ನೀರು ಪಾತಾಳಕ್ಕಿಳಿದಿವೆ. ಭೂಗರ್ಭದಲ್ಲಿದ್ದ ನೀರನ್ನು ಮೇಲೆತ್ತಿ ನೇರ ಬಳಸಿದರೆ ಕಾಯಿಲೆಗಳಿಗೆ ಎಂಟ್ರಿ ನೀಡಿದಂತೆ. 
 
             ಅಶುದ್ಧ ನೀರಿನ ಬಳಕೆಯ ತೊಂದರೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕ್ಷೇತ್ರಾಧ್ಯಯನದಿಂದ ಅಭ್ಯಸಿಸಿದೆ. ಶಾರೀರಿಕ-ಮಾನಸಿಕ, ನರಮಂಡಲದ ಹಾನಿ, ಕ್ಯಾನ್ಸರ್, ಚರ್ಮರೋಗ, ಎಲುಬು ಮತ್ತು ಹಲ್ಲುಗಳ ಮೇಲೆ ಪರಿಣಾಮ, ಕರುಳು ಬೇನೆ, ವಾಂತಿ-ಭೇದಿ, ರಕ್ತದೊತ್ತಡ.. ಮೊದಲಾದ ಕಾಯಿಲೆಗಳಿಗೆ ದಾರಿ. ಕುಡಿ ನೀರಿಗೆ ರುಚಿಯಿಲ್ಲ, ಕೆಟ್ಟ ವಾಸನೆ. ಅನ್ನ ಮಾಡಿದರೆ ಅನ್ನದ ಬಣ್ಣ ಹಳದಿ!

              ನಗರದಲ್ಲಿ ಉಳ್ಳವರು ಸಿದ್ಧ ಬಾಟಲ್ ನೀರನ್ನು ಖರೀದಿಸಿ ಸುಧಾರಿಸಿಕೊಳ್ಳುತ್ತಾರೆ. ಆದರೆ ಬಡವರ ಕತೆ..! ದುಡಿದರೆ ಮಾತ್ರ ಉಣ್ಣಲು ಸಾಧ್ಯ. ಇಂದಿಗಿದ್ದರೆ ನಾಳೆಗಿಲ್ಲ. ಹೀಗಿರುವಾಗ ಬಾಟಲ್ ನೀರು ಕನಸಿನ ಮಾತು. ಈ ಮಧ್ಯೆ 'ಶುದ್ಧ ನೀರನ್ನು ಒದಗಿಸುತ್ತೇವೆ' ಎಂದು ಸಾಮಾನ್ಯ ನೀರನ್ನೇ ಬಾಟಲಿಯಲ್ಲಿ ತುಂಬಿ ಮಾರುವ ದಂಧೆಗಳು!
ಈ ಹಿನ್ನೆಲೆಯಲ್ಲಿ ಹಳ್ಳಿ ಮಂದಿ ಕಾಯಿಲೆಗಳಿಗೆ ತುತ್ತಾಗಬಾರದು, ಶುದ್ಧ ನೀರನ್ನು ಬಳಸಬೇಕು ಎಂಬ ದೂರದೃಷ್ಟಿಯಿಂದ ಗ್ರಾಮಾಭಿವೃದ್ಧಿ ಯೋಜನೆಯು 'ಶುದ್ಧಗಂಗಾ' ಎಂಬ ಯೋಜನೆಯೊಂದಕ್ಕೆ ಶ್ರೀಕಾರ ಬರೆಯಿತು. ಇದು ರಾಜರ್ಶಿ ಡಾ.ವೀರೇಂದ್ರ ಹೆಗ್ಗಡೆಯವರ ಮಿದುಳ ಮರಿ.

            ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರಿಕೆರೆ; ಗದಗ, ರೋಣ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ನಲವತ್ತು ಶುದ್ಧಗಂಗಾ ಘಟಕಗಳಿವೆ. ಒಂದು ಘಟಕ ಸ್ಥಾಪನೆಗೆ ಹತ್ತು ಲಕ್ಷ ರೂಪಾಯಿ ವೆಚ್ಚ. ಕಟ್ಟಡ, ಸ್ಥಳ.. ಹೀಗೆ ಘಟಕದ ಮೂರನೇ ಒಂದು ಭಾಗ ಸ್ಥಳೀಯ ಪಂಚಾಯತ್, ಸಂಘಸಂಸ್ಥೆಗಳ ಪಾಲು.

           'ಹೆಚ್ಚು ಸಮಸ್ಯೆಯಿರುವ ಗದಗ ಜಿಲ್ಲೆಯಲ್ಲಿ ಹತ್ತು ಘಟಕಗಳು ಆರಂಭವಾಗಿದೆ. ಎಲ್ಲವೂ ಹಳ್ಳಿ ಪ್ರದೇಶದಲ್ಲಿವೆ,' ಎನ್ನುತ್ತಾರೆ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ. ಈಚೆಗೆ ಲಕ್ಕುಂಡಿಗೆ ಭೇಟಿಯಿತ್ತಾಗ ಶುದ್ಧಗಂಗಾ ಘಟಕ ಆರಂಭವಾಗಿತ್ತಷ್ಟೇ. ಜನರ ಒಲವು ಹತ್ತಿರವಾಗುತ್ತಿದೆ.

ಯಾಂತ್ರಿಕ ಸೋಸು ವಿಧಾನ

          ಸುಲಭದಲ್ಲಿ ಹೇಳುವುದಾದರೆ 'ಹಿಮ್ಮುಖ ಪ್ರವಾಹ ತಂತ್ರಜ್ಞಾನ'ದ (Reverse Osmosis Technology) ಮೂಲಕ ನೀರನ್ನು ಶುದ್ಧೀಕರಿಸುವುದು. ನೀರಿನಲ್ಲಿರುವ ಅಜ್ಞಾತ ಅಶುದ್ಧ ವಸ್ತುಗಳನ್ನು ವೈಜ್ಞಾನಿಕವಾಗಿ ಬೇರ್ಪಡಿಸಿ, ಶುದ್ಧ ನೀರನ್ನು ಕೊಡುವ ವಿಧಾನ. ಮುಂದುವರಿದ ದೇಶಗಳು ಈ ತಂತ್ರಜ್ಞಾನವನ್ನು ಬಳಸುತ್ತಿವೆ.

            ಕೊಳವೆ ಬಾವಿಯ ನೀರನ್ನು ಟ್ಯಾಂಕ್ ಒಂದರಲ್ಲಿ ಸಂಗ್ರಹಿಸಲಾಗುತ್ತದೆ. ಇಲ್ಲಿಂದ ಯಂತ್ರಕ್ಕೆ ನೀರು ಹರಿದು ನಾಲ್ಕು ಹಂತಗಳಲ್ಲಿ ಸೋಸಲ್ಪಟ್ಟು ಬೇರೊಂದು ಸಂಗ್ರಹ ಟ್ಯಾಂಕಿಯಲ್ಲಿ ಸಂಗ್ರಹವಾಗುತ್ತದೆ. ನೂರು ಲೀಟರ್ ನೀರು ಸೋಸಿದರೆ ಎಂಭತ್ತು ಲೀಟರ್ ಶುದ್ಧ, ಇಪ್ಪತ್ತು ಲೀಟರ್ ಅಶುದ್ಧ ಜಲ ಲಭ್ಯ. ಆಶುದ್ಧ ಜಲವು ಯೋಗ್ಯವಲ್ಲ. ಆದರೆ ತರಕಾರಿ, ಹೂವಿನ ತೋಟಗಳಿಗೆ, ದನಗಳ ಸ್ನಾನಕ್ಕೆ ಓಕೆ.

             ಘಟಕದಲ್ಲಿ ಐದು ಸಾವಿರ ಲೀಟರ್ ಸಂಗ್ರಹ ಸಾಮಥ್ರ್ಯದ ಟ್ಯಾಂಕಿಯಿದೆ. ಗಂಟೆಗೆ 1200 ಲೀಟರ್ ನೀರನ್ನು ಯಂತ್ರವು ಸೋಸಿ ಸಂಗ್ರಹಿಸುತ್ತದೆ. 'ಆರಂಭದ ದಿವಸಗಳಲ್ಲಿ ನೀರಿನಲ್ಲಿ 3450 ಟಿಡಿಎಸ್ ಇತ್ತು, ಈಗದು 138ಕ್ಕೆ ಇಳಿದಿದೆ, ನೀರಿನ ಶುದ್ಧತೆಯನ್ನು ಹೇಳುತ್ತಾರೆ ಗದಗ ಯೋಜನಾ ನಿದರ್ೇಶಕ ಜಯಂತ.

              ಒಂದು ಘಟಕಕ್ಕೆ ನಿತ್ಯ ಇಪ್ಪತ್ತು ಲೀಟರಿನಂತೆ ಐನೂರು ಮನೆಗಳಿಗೆ ಶುದ್ಧ ನೀರನ್ನು ಒದಗಿಸುವ ಸಾಮಥ್ರ್ಯ. ವಿದ್ಯುತ್ ಸರಬರಾಜು ಸಮರ್ಪಕವಾಗಿದ್ದರೆ ಮಾತ್ರ! ವಿದ್ಯುತ್ ವ್ಯತ್ಯಯದ ಸಮಯದಲ್ಲಿ ರಾತ್ರಿ ಪಾಳಿಯಲ್ಲೂ ಶುದ್ಧೀಕರಿಸುವ ಕೆಲಸ. 
 
ತಿಂಗಳಿಗೊಂದು ಕಾರ್ಡು

             ಘಟಕದ ಸದಸ್ಯತ್ವ ಅರುವತ್ತು ರೂಪಾಯಿ. ಒಂದು ಕುಟುಂಬಕ್ಕೆ ದಿವಸಕ್ಕೆ ಇಪ್ಪತ್ತು ಲೀಟರ್ ನೀರು. ಇಪ್ಪತ್ತು ಲೀಟರಿಗೆ ಎರಡು ರೂಪಾಯಿ ಶುಲ್ಕ. ತಿಂಗಳಿಗೆ ಅರುವತ್ತು ರೂಪಾಯಿ. ತಿಂಗಳಾರಂಭದಲ್ಲಿ ಅರುವತ್ತು ರೂಪಾಯಿ ಪಾವತಿಸಿ, ಕಾರ್ಡನ್ನು ಗ್ರಾಹಕರು ಪಡೆಯಬೇಕು. ನೀರು ಒಯ್ಯುವಾಗಲೆಲ್ಲಾ ಕಾರ್ಡು ತೋರಿಸಿ ಎಂಟ್ರಿ ಮಾಡಿಸುವುದು ಕಡ್ಡಾಯ.
ಸೋಸು ನೀರನ್ನು ಘಟಕದ ಹೊರಗೆ ಸುಲಭವಾಗಿ ಸಂಗ್ರಹಿಸಲು ನಳ್ಳಿ ವ್ಯವಸ್ಥೆ. ಬೆಳಿಗ್ಗೆ ಮತ್ತು ಸಂಜೆ ನಿಗದಿತ ಸಮಯ.

             ನೀರೊಯ್ಯಲು ಘಟಕವೇ ಫುಡ್ಗ್ರೇಡೆಡ್ ಕ್ಯಾನ್ ನೀಡಿದೆ. ಕ್ಯಾನಿಗೆ ನೂರ ಎಪ್ಪತ್ತೈದು ರೂಪಾಯಿ ದರ. 'ಕ್ಯಾನ್ ಬೇಡ - ಕೊಡಪಾನ, ಬಾಲ್ದಿ, ಮಗ್ಗಳಲ್ಲಿ ನೀರು ಒಯ್ಯುತ್ತೇವೆ ಎನ್ನುತ್ತಿದ್ದರು. ಅವುಗಳು ಶುಚಿಯಾಗಿರುವುದಿಲ್ಲ. ಅಶುಚಿ ಪಾತ್ರೆಯಲ್ಲಿ ಶುದ್ಧ ನೀರು ಒಯ್ದರೆ ನೀರೂ ಆಶುಚಿಯಲ್ವಾ. ಹಾಗಾಗಿ ಕ್ಯಾನಿನಲ್ಲೇ ನೀರು ಕೊಂಡೊಯ್ಯುವಂತೆ ತಿಳಿ ಹೇಳುತ್ತಿದ್ದೇವೆ' ಎನ್ನುತ್ತಾರೆ ಘಟಕ ಮೇಲ್ವಿಚಾರಕ ವಿಜಯಕುಮಾರ.

             ಶ್ರಮಿಕ ವರ್ಗದವರಾದ್ದರಿಂದ ಕ್ಯಾನ್, ನೀರಿನ ಶುಲ್ಕಗಳನ್ನು ಏಕಕಂತಿನಲ್ಲಿ ಪಾವತಿಸಲು ತ್ರಾಸ. ಇವರಿಗೆ ಅನುಕೂಲವಾಗಲೆಂದು ಯೋಜನೆಯು ತನ್ನ 'ಪ್ರಗತಿ ನಿಧಿ' ವಿಭಾಗದಿಂದ ಅಲ್ಪ ಪ್ರಮಾಣದ ಸಾಲ ನೀಡುತ್ತಾರೆ. ವರ್ಷ ಮುಗಿಯುವಾಗ ಕಂತೂ ಮುಗಿದಿರುತ್ತದೆ. ಉತ್ತಮ ಸಾಮಾಜಿಕ ಸ್ಪಂದನ ದೊರಕುತ್ತಿದ್ದು, ಆರೋಗ್ಯ ಕಾಳಜಿಯ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ.

            ಶುಭ ಸಮಾರಂಭ, ಮದುವೆಗಳಿದ್ದಾಗ ನೀರಿನ ಬಳಕೆ ಹೆಚ್ಚು. ಒಂದು ವಾರ ಮುಂಚಿತವಾಗಿ ಘಟಕಕ್ಕೆ ತಿಳಿಸಿದರೆ ಸಾಕು, ಸಕಾಲಕ್ಕೆ ಶುದ್ಧ ನೀರಿನ ಸರಬರಾಜು. ಇದಕ್ಕೆ ಮಾತ್ರ ಶುಲ್ಕ ಸ್ವಲ್ಪ ಅಧಿಕ.

ಬೇಕಿದೆ, ಅರಿವಿನ ಹರಿವು

             ಆರಂಭದಲ್ಲಿ ಗದಗ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯೋಜನೆಯ ಮುಖ್ಯಸ್ಥರು ಸಂದರ್ಶಿಸಿದಾಗ ಎದುರಾದುದು ಆರೋಗ್ಯದ ಅರಿವಿಲ್ಲದ ಬದುಕು. 'ಅದು ದೇವರು ಕೊಟ್ಟ ಶಿಕ್ಷೆ' ಅಂತ ಭಾವಿಸುವವರೇ ಅಧಿಕ. ಮೆಡಿಕಲ್ ಶಾಪ್, ಆಸ್ಪತ್ರೆಗಳ ನಿರತ ಸಂಪರ್ಕ! ಬಹುತೇಕ ಮನೆಗಳಲ್ಲಿ ಹಲ್ಲಿನ ಸಮಸ್ಯೆ, ಗಂಟು ನೋವು, ಆಶಕ್ತತೆ ಎದ್ದು ಕಾಣುತ್ತಿತ್ತು. ಆರೋಗ್ಯ, ನೀರಿನ ಸಮಸ್ಯೆಗಳನ್ನು ಮನಮುಟ್ಟುವಂತೆ ವಿವರಿಸುವ ಕೆಲಸ. ಜತೆಗೆ ಸಭೆಗಳ ಆಯೋಜನೆ.

             ಈ ಮಧ್ಯೆ 'ನೀರಿನಿಂದ ಫ್ಲೋರೈಡ್ ಬೇರ್ಪಡಿಸಿದರೆ ಅಕ್ಕಿ ಬೇಯುವುದಿಲ್ಲ. ಅನ್ನಕ್ಕೆ ರುಚಿಯಿಲ್ಲ. ಬೇಯುವಾಗ ಲೇಟ್. ಹೊಟ್ಟೆಗೆ ಹಾಳು, ಗ್ಯಾಸ್ ಆಗುತ್ತೆ. ಬಾಯಿಹುಣ್ಣು ಆಗುತ್ತೆ' ಅಂತ ಹಲವರ ಅಪಪ್ರಚಾರ. ಕಡೂರಿನಲ್ಲಿ ಶುದ್ಧ ನೀರನ್ನು ಬಳಸಿದವರಲ್ಲಿ ರೋಗಗಳ ಪ್ರಮಾಣ ಕಡಿಮೆಯಾದುವು. ಮಾತ್ರೆಗಳನ್ನು ನುಂಗುವ ಪರಿಪಾಠ ಇಳಿಮುಖವಾಯಿತು. ಔಷಧಕ್ಕೆ ರೋಗಿಗಳು ಬರುವುದಿಲ್ಲವೆಂದು ತಿಳಿದು ಡಾಕ್ಟರರೇ ಶುದ್ಧ ನೀರಿನ ಬಗ್ಗೆ ಮಿಸ್ಗೈಡ್ ಮಾಡಿದ ದೃಷ್ಟಾಂತವಿದೆ ಎನ್ನುತ್ತಾರೆ ಯೋಜನಾಧಿಕಾರಿ ನವೀನ.

             ಜನರಲ್ಲೇ ಆರೋಗ್ಯದ ಅರಿವು ಮೂಡಬೇಕು. ಶಿಕ್ಷಣ ಮತ್ತು ಆರೋಗ್ಯವು ಒಂದೇ ನಾಣ್ಯದ ಎರಡು ಮುಖಗಳು. ಶೈಕ್ಷಣಿಕವಾಗಿ ಮುಂದುವರಿದವರು 'ತಮ್ಮ ಜವಾಬ್ದಾರಿ' ಎಂದರಿತು ಅಕ್ಷರ ರಹಿತರಿಗೆ ಮಾರ್ಗದರ್ಶನ ಮಾಡಬೇಕು. ಇಂತಹ ಬದಲಾವಣೆ ಸಮಾಜದ ಮಧ್ಯೆದಿಂದಲೇ ಬಂದಾಗ ಶುದ್ಧಗಂಗಾದಂತಹ ಯೋಜನೆ ಹಲವು ಹಳ್ಳಿಗಳನ್ನು ಸಂಪರ್ಕಿಸುತ್ತದೆ.
ಲಕ್ಷಗಟ್ಟಲೆ ವೆಚ್ಚದ ಘಟಕಕ್ಕೆ ತಿಂಗಳೊಂದಕ್ಕೆ ಇಪ್ಪತ್ತೈದು ಸಾವಿರ ರೂಪಾಯಿಗೂ ಮಿಕ್ಕಿದ ಮೊತ್ತ ನಿರ್ವಹಣೆಗೆ ಬೇಕು. ಗರಿಷ್ಠ ಫಲಾನುಭವಿಗಳು ನೀರನ್ನು ಬಳಸಿದಾಗ ಮಾತ್ರ ಸಶಕ್ತವಾದೀತು. ಘಟಕದ ನಿರ್ವಹಣಾ ವೆಚ್ಚವನ್ನು ಘಟಕವೇ ಗಳಿಸಬೇಕು. ಆರಂಭದಲ್ಲದು ಕಷ್ಟ. ಆರೇಳು ತಿಂಗಳುಗಳ ಬಳಿಕ ಕಷ್ಟವಾಗದು. ಅಲ್ಲಿಯವರೆಗೆ ಗ್ರಾಮಾಭಿವೃದ್ಧಿ ಯೋಜನೆಯು ಘಟಕವನ್ನು ಆಧರಿಸುತ್ತದೆ.

             ಯೋಜನೆಯು ಯಂತ್ರಗಳಿಗಾಗಿ ಅಮೇರಿಕದ ಅಕ್ವಾಸಫಿ ಎಂಬ ಸಂಸ್ಥೆಯೊಂದಿಗೆ ಹಾಗೂ ನಾರ್ವೆಯ್ ಮಾಲ್ತೆವಿಂಜೆ ಡಿ.ಡಬ್ಲ್ಯೂ.ಎಸ್. ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.


 

0 comments:

Post a Comment