Thursday, June 27, 2013

ಮಂಚಿ ಪದ್ಮನಾಭ ಆಚಾರ್ ವಿಧಿವಶ

            
               ಕೃಷಿಕ ತಂತ್ರಜ್ಞ ಮಂಚಿ ಪದ್ಮನಾಭ ಆಚಾರ್ (58) ಅಲ್ಪಕಾಲದ ಅಸೌಖ್ಯದಿಂದ ಜೂ.27ರಂದು ವಿಧಿವಶರಾದರು. ಪತ್ನಿ ಹೇಮಾ ಸೇರಿದಂತೆ ಸಹೋದರರು, ಬಂಧುಗಳು ಮತ್ತು ಮತ್ತು ಅಸಂಖ್ಯಾತ ಆಪ್ತರನ್ನು ಅಗಲಿದ್ದಾರೆ. ಇವರು ಹಿರಿಯ ಸಹಕಾರಿ ದಿ. ಮಂಚಿ ನಾರಾಯಣ ಆಚಾರ್ ಅವರ ಪುತ್ರ.

                 ಪದ್ಮನಾಭ ಆಚಾರ್ ಕೃಷಿಕರಾಗಿದ್ದುಕೊಂಡು ಕೃಷಿ ತಾಂತ್ರಿಕತೆಯಲ್ಲಿ ಆಸಕ್ತರು. ಮಂಚಿಯಲ್ಲಿ ಸ್ವಂತದ್ದಾದ ವರ್ಕ್ ಶಾಪ್ ಹೊಂದಿದ್ದರು. ಕೃಷಿ ಕೆಲಸಗಳಿಗೆ ಅನುಕೂಲವಾಗುವ 'ಸಹಾಯಿ'ಗಳನ್ನು ಆವಿಷ್ಕರಿಸಿದ್ದರು. ತಾನೇ ಆವಿಷ್ಕರಿಸಿದ ಊರುಗೋಲನ್ನು ಹೋಲುವ ಚಿಕ್ಕ ಸಾಧನದಿಂದ ಅಡಿಕೆ ತೋಟದ ಚಿಕ್ಕಪುಟ್ಟ ಕೆಲಸಗಳನ್ನು ನಿರಾಯಾಸವಾಗಿ ಮಾಡುತ್ತಿದ್ದರು. ಈ ಸಾಧನದ ಕ್ಷಮತೆ ಮತ್ತು ವಿನ್ಯಾಸವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಶ್ಲಾಘಿಸಿದ್ದರು.

                 ಪದ್ಮನಾಭ ಆಚಾರ್ ಅವರು ಪುತ್ತೂರಿನ ಗಿಡ ಗೆಳೆತನ ಸಂಘದ ಮಾಜಿ ಅಧ್ಯಕ್ಷ. ಮಂಚಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಕ್ರಿಯ. ಕೃಷಿಯಲ್ಲಿ ಹನಿನೀರಾವರಿ, ಸ್ಪ್ರಿಂಕ್ಲರ್.. ಮೊದಲಾದ ವಿಚಾರದಲ್ಲಿ ಅಪಾರ ಜ್ಞಾನ ಹೊಂದಿದ್ದರು. ಹಳೆಯ ಮರದ ಪರಿಕರಗಳನ್ನು ಹೊಸ ವಿನ್ಯಾಸದೊಂದಿಗೆ ನವೀಕರಿಸುವ ಜ್ಞಾನ ಹೊಂದಿದ್ದರು. ಅವರ ಮನೆಯಲ್ಲಿರುವ ವಿವಿಧ ವೈವಿಧ್ಯ ವಸ್ತುಗಳು ಪದ್ಮನಾಭ ಆಚಾರರ ಆಸಕ್ತಿಗಳಿಗೆ ಕನ್ನಡಿ.

                 ಕೆಲವು ವರುಷಗಳಿಂದ ದೈಹಿಕವಾದ ಅಸೌಖ್ಯತೆಯಿದ್ದರೂ ಅದನ್ನು ಮರೆತು ತನ್ನ ಆಸಕ್ತಿಯ 'ಸಂಶೋಧನೆ'ಯತ್ತ ನಿತ್ಯ ಚಿತ್ತ. ಪುತ್ತೂರಿನಲ್ಲಿ ಜರುಗಿದ ಯಂತ್ರಮೇಳ - 12ರಲ್ಲಿ ತನ್ನೆಲ್ಲಾ ಆವಿಷ್ಕಾರವನ್ನು ಸ್ವತಃ ಉಪಸ್ಥಿತರಿದ್ದು ಪ್ರದರ್ಶನಕ್ಕಿಟ್ಟಿದ್ದರು. ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದರು.

              'ಮನೆಯ ಎಲ್ಲಾ ಚಟುವಟಿಕೆಗಳನ್ನು ಪದ್ಮನಾಭ ನೋಡಿಕೊಳ್ಳುತ್ತಿದ್ದ. ಯಾವುದೇ ಸಮಾರಂಭವಿರಲಿ ಅಲ್ಲಿನ ಎಲ್ಲಾ ವಿಭಾಗಗಳ ಹೊಣೆಯನ್ನು ಸ್ವತಃ ಹೊತ್ತುಕೊಳ್ಳುತ್ತಿದ್ದ. ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ. ಮನೆಮಂದಿಗೆ ಆಪ್ತನಾಗಿದ್ದ. ಊರವರಲ್ಲಿ ಕೂಡಾ ಬಾಂಧವ್ಯವಿತ್ತು..' ತಮ್ಮನ ಗುಣವನ್ನು ಹೃದಯಪೂರ್ವಕವಾಗಿ ಮಂಚಿ ಶ್ರೀನಿವಾಸ ಆಚಾರ್ ಹೇಳುತ್ತಾರೆ.

0 comments:

Post a Comment