Thursday, June 6, 2013

ಕನ್ನಾಡಿಗೆ ಅಂಬೆಗಾಲಿಕ್ಕಿದ ಸೇಬು

 
             'ಅರೋಗ್ಯವರ್ಧನೆಗೆ ದಿನಕ್ಕೊಂದು ಸೇಬು ತಿನ್ನಿ,' ಮಗು ಸೇಬುಹಣ್ಣನ್ನು ಕಚ್ಚಿ ತಿನ್ನುತ್ತಿದ್ದ ಚಿತ್ರದಲ್ಲಿದ್ದ ಘೋಷವಾಕ್ಯ. ಆರೋಗ್ಯಸಂಬಂಧಿ ಹಣ್ಣುಗಳ ಸೇವನೆಯ ವಿಚಾರ ಬಂದಾಗ ಸೇಬಿಗೆ ಮೊದಲ ಮಣೆ. ಪೂಜಾ ಸಂದರ್ಭದಲ್ಲಿ ದೇವರ ಸಮರ್ಪಣೆಯ ಹಣ್ಣಿನ ತಟ್ಟೆಯಲ್ಲಿ ಸೇಬು ಇದ್ದರೆ ಅಂತಸ್ತು ವೃದ್ಧಿ! ಕ್ರೀಂ ಪಾರ್ಲರಿನಲ್ಲಿ ಆಪಲ್ ಜ್ಯೂಸ್ ಆರ್ಡರ್ ಮಾಡುವುದೂ ಪ್ರೆಸ್ಟೀಜ್. ಸೇಬುಹಣ್ಣು ಇಲ್ಲದೆ ಸಂಮಾನ ಸಮಾರಂಭಗಳಿಲ್ಲ.
            ಸೇಬು ಚಳಿ ಪ್ರದೇಶದ ಹಣ್ಣು. ಹತ್ತಾರು ವಿಧಗಳ ರಾಸಾಯನಿಕ, ಹಾರ್ಮೋನುಗಳನ್ನು ಎರಚಿ ಕೃಷಿ. ಹಾಳಾಗದಿರಲೆಂದು ವಿಷ ದ್ರಾವಣದ ಸ್ನಾನ. ಬಣ್ಣಗೆಡದಿರಲು ಕೆಮಿಕಲ್ ಲೇಪ. ಸೌಂದರ್ಯ ಕೆಡದಿರಲು, ಸಿಹಿ ವರ್ಧನೆಗೆ, ತಾಜಾ ನೋಟಕ್ಕೆ ವಿವಿಧ ವಿಷ ಸಿಂಚನಗಳು! ಮನೆಯೊಳಗೆ ತಂದಿಟ್ಟರೆ ತಿಂಗಳಾದರೂ ಹಾಳಾಗದು, ಕೊಳೆಯದು, ವಾಸನೆ ಬಾರದು. ಸೇಬು ಮಾತ್ರವಲ್ಲ, ಬಹುತೇಕ ಮಾರುಕಟ್ಟೆ ಉದ್ದೇಶಕ್ಕಾಗಿ ಬೆಳೆದ ಹಣ್ಣುಗಳ ಹಿಂದಿರುವ ಕಹಿ-ಸಿಹಿ!
              ಮಾವು, ಹಲಸು, ಚಿಕ್ಕು, ಬಾಳೆಯಂತೆ ಸೇಬು ಹಣ್ಣು ಕೂಡಾ ಕನ್ನಾಡಿನ ತೋಟಗಳಲ್ಲಿ ಬೆಳೆಯುವಂತಾದರೆ, ರಾಸಾಯನಿಕಗಳಿಂದ ತೋಯ್ದ ಹಣ್ಣುಗಳಿಗೆ ವಿದಾಯ ಹೇಳಬಹುದಲ್ವಾ. ಚಳಿ ಪ್ರದೇಶದ ಹಣ್ಣು ಉಷ್ಣ ನೆಲದಲ್ಲಿ ಬೆಳೆಯಬಹುದಾ? ಫಲ ನೀಡಬಹುದಾ? ನೀಡಿದರೂ ಅಲ್ಲಿನಂತೆ ರುಚಿ ನೀಡಬಹುದಾ? ಈ ಎಲ್ಲಾ ಪ್ರಶ್ನೆಗಳಿಗೆ ತಜ್ಞರು ಉತ್ತರದ ಹುಡುಕಾಟದಲ್ಲಿರುವಾಗಲೇ ಕನ್ನಾಡಿಗೆ ಸೇಬು ಪ್ರವೇಶ ಮಾಡಿದೆ. ಹೂ ಬಿಟ್ಟಿದೆ. ಕೆಲವೆಡೆ ಕಾಯಿ ಬಿಟ್ಟು ಮಾಗುವ ಹಂತಕ್ಕೂ ಬಂದುಬಿಟ್ಟಿದೆ. ಕನ್ನಾಡಿನ ಸೇಬು ಕೃಷಿಯ ಅಂಬೆಗಾಲಿನ ಹಿಂದೆ ಹಿಮಾಚಲ ಪ್ರದೇಶದ ಬೆಸುಗೆಯಿದೆ.
              ಡಾ.ಚಿರನ್ಜಿತ್ ಪರ್ಮಾರ್ (74) ಹಿಮಾಚಲ ಪ್ರದೇಶದವರು. ತೋಟಗಾರಿಕಾ ತಜ್ಞ. ಇಂಡೋನೇಶ್ಯಾದ ಜಾವಾ ದ್ವೀಪದ 'ಬಾಟು'ವಿಗೊಮ್ಮೆ ಭೇಟಿ ನೀಡಿದ್ದರು. ಬಾಟು ಉಷ್ಣಪ್ರದೇಶ. ತನ್ನ ಶಿಷ್ಯ ಸುನಿಲ್ ನೆರವಿನಿಂದ ಅಲ್ಲಿನ ಸೇಬು ತೋಟಗಳ ಭೇಟಿ. ತೆಂಗು, ಬಾಳೆಗಳ ಮಧ್ಯೆ ಬಾಟುವಿನದ್ದೇ ಆದ ಸೇಬಿನ ತಳಿಗಳು ಫಲದ ಭಾರದಿಂದ ತೊನೆಯುವುದನ್ನು ಕಂಡು ಪರ್ಮಾರ್ ದಿಗಿಲು.
               ಐದು ದಶಕದಿಂದ ಬಾಟುವಿನಲ್ಲಿ ಸೇಬು ಕೃಷಿಯಿದೆ. ಪ್ರಸ್ತುತ ಸುಮಾರು ಎರಡು ಸಾವಿರ ಹೆಕ್ಟೇರಿನಷ್ಟು ವಿಸ್ತಾರದಲ್ಲಿ ಹಬ್ಬಿದ ಸೇಬು ವರುಷದಲ್ಲಿ ಎರಡು ಸಲ ಕೊಯಿಲು. ಹೆಕ್ಟಾರಿಗೆ ಅರುವತ್ತೇಳು ಟನ್ ಇಳುವರಿ. ಹಿಮಾಚಲ ಪ್ರದೇಶದಲ್ಲಿ ವರುಷಕ್ಕೆ ಒಮ್ಮೆ ಮಾತ್ರ ಬೆಳೆ. ಒಂದು ಹೆಕ್ಟೇರಿಗೆ ಸುಮಾರು ಆರರಿಂದ ಏಳು ಟನ್ ಇಳುವರಿ ಸಿಗುತ್ತಿದೆ. ಬಾಟುವಿನ ಇಳುವರಿ ಮತ್ತು ಮಾರುಕಟ್ಟೆ ಅದ್ಭುತ ಮತ್ತು ಅಧ್ಯಯನಯೋಗ್ಯ' ಎನ್ನುತ್ತಾರೆ.
                 ಬಾಟುವಿನ ಕೃಷಿಕರಲ್ಲಿ ಪರ್ಮಾರ್ ಮಾತುಕತೆ. ಕೃಷಿಯ ಸೂಕ್ಷ್ಮಗಳ ಅಧ್ಯಯನ. ತಮ್ಮೂರಿನ ಕೃಷಿಯ ಅನುಭವ ವಿನಿಮಯ. ಬಾಟುವಿನಲ್ಲಿ ಸೇಬು ಕೊಯಿಲು ಆದ ಬಳಿಕ ಗಿಡದ ಎಲೆಗಳನ್ನೆಲ್ಲಾ ಕೈಯಲ್ಲೇ ಕಿತ್ತು ತೆಗೆಯುತ್ತಾರೆ. ಎರಡೇ ತಿಂಗಳಲ್ಲಿ ಪುನಃ ಚಿಗುರಿ, ನಾಲ್ಕು ತಿಂಗಳಲ್ಲಿ ಫಸಲು ಆರಂಭ. ಮಾರುಕಟ್ಟೆಯ ದರವನ್ನು ಹೊಂದಿಕೊಂಡು ಬೆಳೆ ಪಡೆಯಲು ಕೊಯಿಲಿನ ಸಮಯವನ್ನೇ ನಿಯಂತ್ರಣ ಮಾಡುವ ಜಾಣ್ಮೆ.
              ಪ್ರಕೃತಿದತ್ತವಾಗಿ ಚಳಿಗಾಲದಲ್ಲಿ ಸೇಬಿನ ಮರ ಎಲೆಯನ್ನು ಉದುರಿಸುತ್ತವೆ. ಉಷ್ಣತೆ ಏರಿದಾಗ ಮತ್ತೆ ಚಿಗುರೊಡೆದು, ಹೂಬಿಟ್ಟು ಕಾಯಾಗುತ್ತದೆ. ಬಾಟುವಿನಲ್ಲಿ ಎಲೆ ಉದುರಿಸುವ ಪ್ರಕ್ರಿಯೆಯನ್ನು ಕೃತಕವಾಗಿ ಮಾಡುವ 'ಚಿಲ್ಲಿಂಗ್' ವಿಧಾನ ಪರ್ಮಾರ್ ಅವರನ್ನು ಸೆಳೆಯಿತು. ಉಷ್ಣ ಪ್ರದೇಶದ ಬಾಟುವಿನಲ್ಲಿ ಸಾಧ್ಯವಾಗುವ ಈ ಪ್ರಯೋಗ ಭಾರತದಲ್ಲೂ ಸಾಧ್ಯವಾಗಬಹುದು ಎಂಬ ಸಂಶೋಧನಾ ದೃಷ್ಟಿ.
               ಈ ಪ್ರಯೋಗದ ಅನುಷ್ಠಾನಕ್ಕಾಗಿ ದೇಶದ ಪ್ರತಿಷ್ಠಿತ ಉದ್ಯಮಿಗಳನ್ನು ಪತ್ರ ಮೂಲಕ ಸಂಪರ್ಕಿಸಿದರು. ಪತ್ರಿಕೆಗಳಲ್ಲಿ ಬಾಟುವಿನ ಸೇಬು, ಕೃಷಿ ಕ್ರಮ, ನಮ್ಮ ನೆಲಕ್ಕೆ ಹೊಂದುವ ಲಕ್ಷಣಗಳನ್ನೊಳಗೊಂಡ ಲೇಖನಗಳನ್ನು ಬರೆದರು. ಸಂಶೋಧನಾ ಕೇಂದ್ರಗಳಿಗೆ ಭೇಟಿಯಿಟ್ಟು ಬಾಟುವನ್ನು ತೆರೆದಿಟ್ಟರು. ಕೃಷಿಕರ ಜತೆ ಅನುಭವ ಹಂಚಿಕೊಂಡರು. ಉತ್ತೇಜಿತ ಸ್ಪಂದನದ ಕೊರತೆಯಿಂದ ನಿರಾಶೆ. ಪರ್ಮಾರ್ ಪ್ರಯೋಗದ ಸುಳಿವು ಅಡಿಕೆ ಪತ್ರಿಕೆಗೆ ಲಭಿಸಿತು. ಸುಳಿವಿನ ಬೆನ್ನೇರಿ, ವಿಷಯ ಕೆದಕಿ ಅಡಿಕೆ ಪತ್ರಿಕೆಯಲ್ಲಿ 2-3 ಕಂತುಗಳಲ್ಲಿ ಲೇಖನ ಪ್ರಕಟ. ಕರ್ನಾಟಕ, ತಮಿಳುನಾಡಿನಲ್ಲೂ ಸೇಬು ಕೃಷಿ ಯಶಸ್ಸಾಗಬಹುದು ಎನ್ನುವ ಪರ್ಮಾರ್ ವಿಶ್ವಾಸಕ್ಕೆ ಕರಾವಳಿಯ ಕೃಷಿಕ ಕಾಟುಕುಕ್ಕೆ ಕೃಷ್ಣ ಶೆಟ್ಟರ ಸಾಥ್.
                ಪರ್ಮಾರ್ ನಿರ್ದೇಶನದಲ್ಲಿ ಪ್ರಾಯೋಗಿಕವಾಗಿ ಸೇಬು ಬೆಳೆಸುವ ಉದ್ದೇಶದಿಂದ ಹಿಮಾಚಲ ಪ್ರದೇಶದಿಂದ ಸೇಬು ಗಿಡಗಳು ಬಂದುವು. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ಸುಮಾರು ಮೂವತ್ತು ರೈತರು ಗಿಡಗಳನ್ನು ಪಡೆದರು. ಆರೈಕೆ ಮಾಡಿದರು. ಈ ವರುಷದ ಆರಂಭದಲ್ಲಿ ಪುನಃ ಗಿಡಗಳು ಬಂದು ಹಂಚಲ್ಪಟ್ಟವು. ಸೇಬು ಗಿಡದ ಒಡನಾಟದಲ್ಲಿ ಒಬ್ಬೊಬ್ಬರದು ಒಂದೊಂದು ಅನುಭವ. 'ಸೇಬು ಹಣ್ಣು ಯಾವಾಗ ತಿನ್ನಬಹುದು' ಎಲ್ಲರ ಅಂತಿಮ ನಿರೀಕ್ಷೆ.
              ಉಡುಪಿಯ ಕೃಷಿತಜ್ಞ ಗುರುರಾಜ ಬಾಳ್ತಿಲ್ಲಾಯರಲ್ಲಿ ಹೂ ಬಿಟ್ಟಿತು. ಶೃಂಗೇರಿಯ ಕೃಷಿಕ, ಸಾಮಾಜಿಕ ಕಾರ್ಯಕರ್ತ ಅನಂತಯ್ಯರಿಗೆ ಕಾಯಿ ಬಿಟ್ಟಾಗ ಖುಷಿ. ತುಮಕೂರಿನ ಕೃಷಿಕ ಗಂಗಾಧರ ಮೂರ್ತಿಯವರ ಎಲ್ಲಾ ಗಿಡಗಳು ಸದೃಢವಾಗಿ ಬೆಳೆದು, ಕಾಯಿ ಹಣ್ಣಾಗುವ ಹಂತಕ್ಕೆ ಬಂದಾಗ 'ತಮ್ಮೂರಲ್ಲೂ ಸೇಬು ಕೃಷಿ ಸಾಧ್ಯ' ಎಂಬ ಭರವಸೆ ಮನದ ಮೂಲೆಯಲ್ಲಿ ಚಿಗುರಲು ಆರಂಭ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ. ಕುತೂಹಲಿ ಕೃಷಿಕರ ಭೇಟಿ. ಮಾರುಕಟ್ಟೆಗೆ ಅಲ್ಲದಿದ್ದರೂ, ತಿನ್ನುವುದಕ್ಕಾದರೂ ಹಣ್ಣು ಸಿಕ್ಕರೆ ಸಾಕು ಎನ್ನುವ ಸಮಾಧಾನ.
           ಇಲ್ಲಿನ ಸೇಬು ಕೃಷಿಯ ಅನುಭವಗಳನ್ನು ಚಿತ್ರ ಸಹಿತ ಪರ್ಮಾರರಿಗೆ ರವಾನೆ. ಕನ್ನಾಡಿಗೆ ಭೇಟಿ ನೀಡಿ ಕೃಷಿಕರ ಅನುಭವಗಳನ್ನು ದಾಖಲಿಸುವ ತುಡಿತ. ಎಪ್ರಿಲ್ ಮೂರನೇ ವಾರದಲ್ಲಿ ಪರ್ಮಾರ್ ಕೃಷ್ಣ ಶೆಟ್ಟರಲ್ಲಿಗೆ ಭೇಟಿ ನೀಡಿದರು. ಬೆಳೆದ ಗಿಡದೊಂದಿಗೆ ಮಾತನಾಡಿದರು. ಹೊಸ ಗಿಡವನ್ನು ನೆಟ್ಟು, ನೀರು ಉಣಿಸಿ ಸಂಭ್ರಮಪಟ್ಟರು. ಬಾಟುವಿನಲ್ಲಿ ಕಾಯಿ ಬಿಡಲು ಐದಾರು ವರ್ಷ ಬೇಕು. ಇಲ್ಲಿ 2-3 ವರುಷಕ್ಕೇ ಕಾಯಿ ಬಿಟ್ಟಾಗ ಪರ್ಮಾರ್ ಅವರಿಗೆ ಖುಷಿ ಜತೆಯಲ್ಲಿ ಹೆಚ್ಚು ಅಧ್ಯಯನಕ್ಕೆ ತೊಡಗುವಂತೆ ಪ್ರೇರಣೆ.
            ಕೃಷ್ಣ ಶೆಟ್ಟರು ಐವತ್ತು ಸೇಬು ಗಿಡಗಳ ತೋಟ ಎಬ್ಬಿಸಿದ್ದಾರೆ. ಪತ್ರಿಕೆಯ ಲೇಖನವೊಂದರಿಂದ ಪ್ರಭಾವಿತರಾಗಿ ಸೇಬು ಗಿಡವನ್ನು ತರಿಸುವುದು ಮಾತ್ರವಲ್ಲ, ಆಸಕ್ತ ಕೃಷಿಕರಿಗೆ ಹಂಚಿದ ಸಂಘಟನಾ ಕೌಶಲಕ್ಕೆ ಶಹಬ್ಬಾಸ್. ಏನಿಲ್ಲವೆಂದರೂ ಸಾವಿರಕ್ಕೂ ಮಿಕ್ಕಿ ಗಿಡಗಳು ಕನ್ನಾಡನ್ನು ಪ್ರವೇಶಿಸಿವೆ. ಸೇಬು ಬೆಳೆವ ಕೃಷಿಕರೊಳಗೆ ಸಂವಹನ, 'ಬೇಕು-ಬೇಡಗಳ ಮಾಹಿತಿಗಳು ವಿನಿಮಯವಾಗುತ್ತಿವೆ.
           ಸದ್ಯದ ಸೇಬು ಕೃಷಿ ಪ್ರಯೋಗದಿಂದ ಒಂದಂತೂ ಸ್ಪಷ್ಟ - 'ರುಚಿ ನೋಡಲು ಮನೆ ಹಿತ್ತಿಲಲ್ಲಿ ಸೇಬು ಬೆಳೆಯಬಹುದು' ಎಂಬ ವಿಶ್ವಾಸ. ಅದರ ಆರೈಕೆ, ರೋಗ ಮತ್ತಿತರ ಸೂಕ್ಷ್ಮ ವಿಚಾರಗಳನ್ನು ಹೇಳುವ ಹಂತಕ್ಕಿನ್ನೂ ತಲುಪಿಲ್ಲ. ವಾಣಿಜ್ಯ ಮಟ್ಟದಲ್ಲಿ ಬೆಳೆಯಬಹುದು ಎಂದು ಗಟ್ಟಿ ದನಿಯಲ್ಲಿ ಹೇಳುವ ದಿನವಿನ್ನೂ ಬಂದಿಲ್ಲ. ಚಳಿ ಪ್ರದೇಶದ ಹಣ್ಣಿನ ರುಚಿ, ಸ್ವಾದಗಳು ಇಲ್ಲೂ ಸಿಕ್ಕೀತೇ ಎನ್ನುವ ಪ್ರಶ್ನೆಗೆ ಉತ್ತರಕ್ಕಾಗಿ ಕಾಯಬೇಕು. ಹಿಮಾಚಲ ಪ್ರದೇಶದಿಂದ ಗಿಡ ತರಿಸುವುದರ ಬದಲು ಇಲ್ಲೇ ಅಭಿವೃದ್ಧಿ ಮಾಡುವುದು ಮುಂದಿನ ಪ್ರಕ್ರಿಯೆ.
             ಕೃಷಿಕರ ಮಟ್ಟದಲ್ಲಿ ಸದ್ದಿಲ್ಲದೆ ಪ್ರಯೋಗಗಳು ನಡೆದಿವೆ. ಒಂದು ಸಂಶೋಧನಾ ಕೇಂದ್ರ ಮಾಡಬಹುದಾದ ಕೆಲಸವನ್ನು ಪರ್ಮಾರ್ ಒಬ್ಬರೇ ಮಾಡಿದ್ದಾರೆ. ಅದಕ್ಕಾಗಿ ಸ್ವತಃ ಹಣವನ್ನು ವ್ಯಯಿಸಿದ್ದಾರೆ. ಕೃಷಿಕರ ಹಂತದಲ್ಲಿ ಇಷ್ಟು ಮಾಡಿ ತೋರಿಸಿದ ಬಳಿಕ, ಹುಟ್ಟು ಹಿಡಿದು ಮುನ್ನಡೆಸುವವರು ಬೇಕು. ಪರ್ಮಾರ್ ಅವರ ಯತ್ನವು ತೋಟಗಾರಿಕೆ ಇಲಾಖೆಯ ಕೆಲಸವನ್ನು ಹಗುರಗೊಳಿಸಿವೆ. ಅಭಿವೃದ್ಧಿ ಪಡಿಸುವ ಹೊಣೆಯನ್ನು ಇಲಾಖೆ ಯಾಕೆ ಹೊರಬಾರದು? ತಳಿಯೊಂದರ ಅಭಿವೃದ್ಧಿಗೆ ಬೇಕಾದ ಎಲ್ಲಾ ಪ್ಯಾಕೇಜ್ಗಳು ಇಲಾಖೆಯಲ್ಲಿರುವುದರಿಂದ ಕಷ್ಟವಾಗಲಾರದು. ಮನಸ್ಸು ಮತ್ತು ಕೃಷಿಕಪರ ಒಲವು ಮೂಡಬೇಕಷ್ಟೇ.


 

0 comments:

Post a Comment