ಫೆಬ್ರವರಿ ಮಧ್ಯದಲ್ಲಿ ಚಿಕ್ಕಮಗಳೂರು ಪ್ರವಾಸದಲ್ಲಿದ್ದೆ. ಮೂರ್ನಾಲ್ಕು ದಿವಸ ಅಕಾಲ ಮಳೆ. ರಸ್ತೆಗಳೆಲ್ಲಾ ಕೊಚ್ಚೆ. ಚರಂಡಿ ವ್ಯವಸ್ಥೆ ಕೈಕೊಟ್ಟುದರಿಂದ ಮುಖ್ಯ ರಸ್ತೆಯಲ್ಲೇ ನೀರಿನ ಹರಿವು.
"ಕಾಫಿ ಕೊಯ್ಲಿನ ಸಮಯ. ಈಗ ಮಳೆ ಬರಬಾರ್ದು. ಕಾಫಿ ಗಿಡಗಳು ಚಿಗುರಿ ಹೂವರಳಿ ಬಿಡುತ್ತದೆ. ಇದರಿಂದಾಗಿ ಮುಂದಿನ ವರುಷ ಫಸಲಿಗೆ ತೊಂದರೆಯಾಗ್ತದೆ," ಎಂದರು ಕೃಷಿಕ ಚಂದ್ರಶೇಖರ್. ಬಹುತೇಕ ಎಲ್ಲಾ ಕೃಷಿಕರಲ್ಲೂ ಇದೇ ಆತಂಕ.
'ಈ ವರುಷ ರೇಟ್ ಚೆನ್ನಾಗಿಯೇ ಇದೆ. ಆದರೆ ಕೆಲವು ರೈತರಿಗೆ ಬೆಳೆ ಓಕೆ. ಇನ್ನೂ ಕೆಲವೆಡೆ ಬೆಳೆಯಿಲ್ಲದ ಆತಂಕವಿದೆ,' ಮನೋಜ್ ಅನುಭವ ಹಂಚಿಕೊಳ್ಳುತ್ತಾರೆ. ಬೆಲೆ-ಬೆಳೆಗಳ ಮಧ್ಯದ ಹಾವೇಣಿ ಕೃಷಿಕರನ್ನು ಸಂಕಟದತ್ತ ತಳ್ಳಿಬಿಡುತ್ತವೆ.
ಚಿಕ್ಕಮಗಳೂರಿನ ಕೆಲವು ಕಾಫಿ ತೋಟ ವೀಕ್ಷಿಸಿ ಮರಳುತ್ತಿದ್ದಂತೆ ಕೃಷಿಕ ಸ್ನೇಹಿತ ಅಚ್ಚನಹಳ್ಳಿ ಸುಚೇತನ ಕಳುಹಿಸಿದ 'ಕಾಫಿ ಬೈಟ್' ಪುಸ್ತಿಕೆ ಕಾಯುತ್ತಿತ್ತು. ಸುಚೇತನ ಸಕಲೇಶಪುರ ತಾಲೂಕಿನ ದೇವಲಕೆರೆಯವರು. ಕಾಫಿ ಮುಖ್ಯ ಕೃಷಿ. ಕಾಫಿ ಕೃಷಿಯ ಸೂಕ್ಷ್ಮತೆ, ಮಾರುಕಟ್ಟೆ, ವಿಶ್ವದ ಸ್ಥಿತಿಗತಿಗಳನ್ನು ಬಲ್ಲರು. ಕಾಫಿಬೈಟಿನ ಕುತೂಹಲಕರ ವಿಚಾರಗಳು ನಿಮಗಾಗಿ :-
ವಿಶ್ವದ ಸುಮಾರು ಐವತ್ತು ದೇಶಗಳಲ್ಲಿ ಕಾಫಿಯನ್ನು ಬೆಳೆಯಲಾಗುತ್ತದೆ. ಇಪ್ಪತ್ತೈದು ಮಿಲಿಯನಿಗೂ ಹೆಚ್ಚು ಕಾಫಿ ಬೆಳೆಗಾರರಿದ್ದಾರೆ. ಭಾರತದಲ್ಲಿ 1.57 ಲಕ್ಷ ಕಾಫಿ ಹಿಡುವಳಿದಾರರು. ಅದರಲ್ಲಿ ಶೇ. 70ರಷ್ಟು ಎರಡು ಹೆಕ್ಟೇರಿಗಿಂತಲೂ ಕಡಿಮೆ ಜಾಗ ಹೊಂದಿದವರು. ಕರ್ನಾಟಕ ರಾಜ್ಯ ಜಾಗತಿಕವಾಗಿ ಶೇ. 3.5ರಷ್ಟು ಮತ್ತು ರಾಷ್ಟ್ರೀಯವಾಗಿ ಶೇ. 70ರಷ್ಟು ಕಾಫಿಯನ್ನು ಉತ್ಪಾದಿಸುತ್ತದೆ.
ವಿಶ್ವದ ಕಾಫಿ ಉತ್ಪಾದನೆಯಲ್ಲಿ ಲ್ಯಾಟೀನ್ ಅಮೇರಿಕಾದ ಪಾಲು ಶೇ. 60. ಏಷ್ಯಾ ಖಂಡ ಶೇ. 25ರಷ್ಟು ಉತ್ಪಾದಿಸಿ ಎರಡನೇ ಸ್ಥಾನದಲ್ಲಿದೆ. ಆಫ್ರಿಕಾ ಖಂಡಕ್ಕೆ ಮೂರನೇ ಸ್ಥಾನ. ಮೆಕ್ಸಿಕೋ ಪ್ರಮುಖ ಕಾಫಿ ಉತ್ಪಾದಕ ದೇಶ. ಮುಖ್ಯ ರಫ್ತು ಕಾಫಿ. ದೇಶಕ್ಕೆ ಕಾಫಿ ರಫ್ತಿನಿಂದ ಬರುವ ಆದಾಯ 800 ಮಿಲಿಯನ್ ಡಾಲರ್.
ಜತೆಜತೆಗೆ ಕಾಫಿಯ ಸಂಶೋಧನಾ ಲೋಕದ ಕೆಲಸಗಳನ್ನು ಸುಚೇತನ ಕಾಫಿಬೈಟಲ್ಲಿ ತುಂಬಿದ್ದಾರೆ. ಕೆಫಿನ್ ಇರುವ ಕಾಫಿ ಸೇವನೆಯು ಅಕಾಲ ಸಾವನ್ನು ಮುಂದೂಡುತ್ತದೆ. ಮಹಿಳೆಯರನ್ನು ಹೃದಯ ರೋಗದಿಂದ ಕಾಪಾಡುತ್ತದೆ. ದಿನಕ್ಕೆ ಆರು ಲೋಟಗಳಷ್ಟು ಕಾಫಿ ಸೇವನೆಯು ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುವುದಿಲ್ಲ. ಮಹಿಳೆಯರು ಹಠಾತ್ತಾಗಿ ಹೃದಯಾಘಾತಕ್ಕೆ ಒಳಗಾಗುವುದನ್ನು ಕಾಫಿ ನಿರ್ಬಂಧಿಸುತ್ತದೆ ಎನ್ನುತ್ತದೆ ಅಧ್ಯಯನ.
ಎಂಭತ್ತನಾಲ್ಕು ಸಾವಿರ ಮಹಿಳೆಯರ ಮತ್ತು ನಲವತ್ತೊಂದು ಸಾವಿರ ಪುರುಷರ ಕಾಫಿ ಸೇವನೆಯ ಮೇಲೆ ಇಪ್ಪತ್ತು ವರುಷಗಳಿಂದ ನಿಗಾ ಇರಿಸಿಕೊಂಡು ಬಂದು ಈ ತೀರ್ಮಾನಕ್ಕೆ ಬರಲಾಗಿದೆ. ಪ್ರತಿ ಎರಡರಿಂದ ನಾಲ್ಕು ವರುಷಗಳಿಗೊಮ್ಮೆ ಅಧ್ಯಯನಕ್ಕೆ ಒಳಪಡಿಸಿದವರ ಕಾಫಿ ಸೇವನೆ, ಆಹಾರ ಪಥ್ಯ ಮತ್ತು ಸಿಗರೇಟ್ ಸೇವನೆ ಹವ್ಯಾಸಗಳನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡು ಸಂಶೋಧನೆ ಮಾಡಲಾಗಿದೆಯಂತೆ.
ನಿತ್ಯ ಎರಡರಿಂದ ಮೂರು ಕಪ್ ಕಾಫಿ ಸೇವಿಸುವ ಮಹಿಳೆಯರನ್ನು ಕಾಫಿ ಸೇವಿಸದವರಿಗೆ ಹೋಲಿಸಿದರೆ ಹೃದಯಾಘಾತದ ಸಾಧ್ಯತೆ ಶೇಕಡ 25ರಷ್ಟು ಕಡಿಮೆ. ಕ್ಯಾನ್ಸರ್ ಕಾಯಿಲೆ ಸಾಧ್ಯತೆಯೂ ಕಡಿಮೆ!
'ದಿನಕ್ಕೆ ಒಂದು ಕಪ್ ಕಾಫಿ ಸೇವನೆಯಿಂದ ಇಳಿ ವಯಸ್ಸಿನಲ್ಲಿ ಬಾಧಿಸುವ ಮರೆಗುಳಿತನ ಕಾಯಿಲೆಯಿಂದ ದೂರ ಇರಬಹುದು' ಎನ್ನುವುದು ಅಂತಾರಾಷ್ಟ್ರೀಯ ಸಂಶೋಧಕರ ವರದಿ. ಕೊಬ್ಬಿನಾಂಶ ಮೆದುಳಿನಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸಬಲ್ಲುದು. ನಂತರ ಅವು ಚದುರಿದಾಗ ಉಂಟಾಗುವ ಲೋಳೆಯಂತರಹ ಸಶೇಷ ನಿರ್ಮಾಣವಾಗಿ ಮರೆಗುಳಿ ರೋಗಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊಬ್ಬು ಜಾಸ್ತಿಯಾದಾಗ ಆಗುವ ಅವಾಂತರವನ್ನು ಕಾಫಿಯ ಕೆಫಿನ್ ತಡೆಯಬಲ್ಲುದು ಎನ್ನುತ್ತಾರೆ ಸಂಶೋಧಕರು.
ಸುಚೇತನ (9448530176) ಸ್ವತಃ ಕಾಫಿ ಬೆಳೆಗಾರರಾದ್ದರಿಂದ ಸುಖ ದುಃಖಗಳನ್ನು ಅನುಭವಿಸಿದವರು. ಹಾಗಾಗಿ ಕಾಫಿಬೈಟಿನ ಬರೆಹಗಳೆಲ್ಲವೂ ಅನುಭವದ ಮೂಸೆಯಿಂದ ಹೊರಬಂದಿದೆ. ಕರ್ನಾಟಕದಲ್ಲಿ ಕಾಫಿ ಬೆಳೆ ಕುಸಿತದ ಕಾರಣವನ್ನು ಸುಚೇತನ ಬರೆಯುತ್ತಾರೆ, 1980-81ರಲ್ಲಿ ಕರ್ನಾಟಕದಲ್ಲಿ ನೂರು ಹೆಕ್ಟೇರಿಗೂ ಹೆಚ್ಚಿನ ವಿಸ್ತೀರ್ಣದ ಕಾಫಿ ತೋಟಗಳನ್ನು ಹೊಂದಿದವರ ಸಂಖ್ಯೆ 123 ಮಾತ್ರ. 2000-01ರಲ್ಲಿ ಅಂತಹ ಶ್ರೀಮಂತ ಜಮೀನುದಾರರ ಸಂಖ್ಯೆ ನಲವತ್ತಕ್ಕೆ ಇಳಿಯಿತು. ಆ ಬಳಿಕ ಇನ್ನೂ ಇಳಿತ ಕಂಡಿದೆ. ಕಾರಣ, ಎಲ್ಲಾ ಕಾಫಿ ತೋಟಗಳನ್ನು ತಮ್ಮ ಬಗಲಿಗೆ ಹಾಕಿಕೊಳ್ಳುತ್ತಿರುವ ಟಾಟಾ ಕಾಫಿ ಮತ್ತು ಇತರ ಕಂಪೆನಿಗಳ ದಾಹ.
ಇಂದು ಕಾಫಿ, ನಾಳೆ ಭತ್ತ, ನಾಡಿದ್ದು.. ಇನ್ನೇನೋ. ಹೊಸ ಉದ್ಯಮಗಳಿಗೆ ರತ್ನಗಂಬಳಿ ಹಾಸುತ್ತಿರುವ ಸರಕಾರಕ್ಕೆ ಕೃಷಿಕನ ಬದುಕು ಬೇಕಾಗಿಲ್ಲ. ಹಾಗಾಗಿಯೇ ನೋಡಿ, ಕಂಪೆನಿಗಳು ಕೃಷಿಕನ ಅಂಗಳದಲ್ಲಿ ಬಿಡಾರ ಹೂಡುತ್ತಿವೆ!
ಸುಚೇತನ - 9448530176
0 comments:
Post a Comment