ಶಾಖಾಹಾರಿಗಳಿಗೊಂದು ಸಿಹಿ ಸುದ್ದಿ! ಬಂದಿದೆ, ಸಸ್ಯ ಮಾಂಸ. ಇದು ಜಾಹೀರಾತು ವಾಕ್ಯಗಳಲ್ಲ. ಮಾಂಸಾಹಾರದಲ್ಲಿ ಬಳಸುವ ಮಸಾಲೆ ಸೇರಿಸಿದ ಆಹಾರವನ್ನು ತಿನ್ನಬೇಕಿತ್ತು, ಅದರೊಂದಿಗೆ ಮಾಂಸದ ತುಂಡುಗಳಿವೆಯಲ್ಲಾ.. ಕೈ ಕೈ ಹಿಸುಕಬೇಕಾಗಿಲ್ಲ. ಇನ್ನು 'ಸಸ್ಯ ಮಾಂಸ' ತಿಂದು 'ಅಪ್ಪಟ ಸಸ್ಯಾಹಾರಿ'ಗಳಾಗಿ ಉಳಿಯಬಹುದು!
ವಿದರ್ಭದ ರೆಸ್ಟುರಾಗಳಲ್ಲಿ ಹಲಸಿನ 'ಸಸ್ಯ ಮಾಂಸ' ಜನಪ್ರಿಯವಾಗುತ್ತಿದೆ. ಆಹಾರದಲ್ಲಿ ಮಾಂಸದ ತುಂಡುಗಳ ಬದಲಿಗೆ ಹಲಸಿನ ಗುಜ್ಜೆಯನ್ನು ಬಳಸುತ್ತಾರಷ್ಟೇ. ಗುಜ್ಜೆಯ ತುಂಡುಗಳು ಬೆಂದಾಗ ಥೇಟ್ ಮಾಂಸದಂತೆ ಕಾಣುತ್ತದಂತೆ. ಅಮೆರಿಕಾ ಮತ್ತು ಇತರ ಪಾಶ್ಚಿಮಾತ್ಯ ದೇಶಗಳಲ್ಲಿ ಎಳೆಹಲಸು 'ಸಸ್ಯಾಹಾರಿ ಮಾಂಸ'ವಾಗಿ ಒಲವು ಪಡೆಯುತ್ತಿದೆ. ಡಮ್ಮಿ ಮೀಟ್ (ನಕಲು ಮಾಂಸ) ಎನ್ನುವುದು ಇನ್ನೊಂದು ಹೆಸರು.
ಗುಜ್ಜೆಯ ಬಣ್ಣ, ನೋಟ, ರಚನೆ ಮತ್ತು ಮೃದುತ್ವದಲ್ಲಿ ಮಾಂಸದ ಹೋಲಿಕೆ. ಉಪ್ಪು, ಖಾರ, ಮಸಾಲೆಯೊಂದಿಗೆ ಮಾಂಸವು ಬೇಯುವಾಗ ಇವೆಲ್ಲಾ ಹೀರುವಂತೆ ಗುಜ್ಜೆಯೂ ಎಲ್ಲವನ್ನೂ ಹೀರುವ ಸಾಮಥ್ರ್ಯ ಹೊಂದಿದೆ. ವಿದರ್ಭದ ಆಯ್ದ ಹೋಟೆಲುಗಳಲ್ಲಿ ಡಮ್ಮಿ ಮೀಟ್ ಬಯಸಿ ಬರುವ ಗ್ರಾಹಕರು ಹೆಚ್ಚುತ್ತಿದ್ದಾರೆ. ನಾಗಪುರ ಪಟ್ಟಣದಲ್ಲೊಂದರಲ್ಲೇ ನಕಲಿ ಮಾಂಸವನ್ನು ನೀಡುವ ನಲವತ್ತಕ್ಕೂ ಮಿಕ್ಕಿ ರೆಸ್ಟೋರೆಂಟ್ಗಳಿವೆ. ಉತ್ತರದ ಧಾಬಾ, ಸಸ್ಯಾಹಾರಿ-ಮಾಂಸಾಹಾರಿ ಹೋಟೆಲ್ಗಳಲ್ಲಿ ಸಸ್ಯಮಾಂಶದ 'ಕರಿ' ಜನಪ್ರಿಯ.
ಈಚೆಗೆ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಹಲಸಿನ ಅಧ್ಯಯನಕ್ಕಾಗಿ ವಿದರ್ಭಕ್ಕೆ ಭೇಟಿ ನೀಡಿದ್ದರು. 'ಅಲ್ಲಿನ ಹೋಟೆಲುಗಳ ಮೆನುವಿನಲ್ಲಿ ಹಲಸಿನ ಡಮ್ಮಿ ಮೀಟ್ ಸೇರಿದೆ. ಒಂದು ಪ್ಲೇಟಿಗೆ ನೂರು ರೂಪಾಯಿ. ಅದರಲ್ಲಿ ಕೇವಲ ಐದು ಗುಜ್ಜೆ ತುಂಡುಗಳಿದ್ದುವು. ಹೃದಯ ಖಾಯಿಲೆ ಮತ್ತು ಮಧುಮೇಹ ಇದ್ದವರಿಗೆ ಮಾಂಸವನ್ನು ತಿನ್ನದಂತೆ ವೈದ್ಯರು ಪಥ್ಯ ಸೂಚಿಸುತ್ತಾರೆ. ಇಂತಹವರು ಗುಜ್ಜೆಯ ನಕಲಿ ಮಾಂಸ ಇಷ್ಟಪಟ್ಟು ತಿನ್ನುತ್ತಾರೆ' ಎನ್ನುತ್ತಾರೆ.
ಇವರೊಂದಿಗೆ ಪ್ರವಾಸ ಮಾಡಿದ ಕೇರಳ ವಯನಾಡಿನ ಸುನೀಶ್ ವಿದರ್ಭದಿಂದ ಮರಳಿದ ಬಳಿಕ ಡಮ್ಮಿ ಮೀಟ್ ಮಾಡಿದ್ದರು. ಸ್ನೇಹಿತರಿಗೆ ಹಂಚಿದ್ದರು. ಅಲ್ಲಿನ ಪಂಚತಾರಾ ಹೋಟೆಲಿನವರಿಗೂ ರುಚಿ ತೋರಿಸಲು ಉತ್ಸುಕರಾಗಿದ್ದಾರೆ. ಸುನೀಶ್ ಬತ್ತಳಿಗೆಯಲ್ಲಿ ಹಲಸಿನ ಮೆನುಗಳ ರಾಶಿಯಿದೆ. ಈಗ 'ಡಮ್ಮಿ ಮೀಟ್' ಸೇರ್ಪಡೆ. ಸಸ್ಯಮಾಂಸವಾಗುವ ಹಲಸು ವಿವಿಧ ಖಾದ್ಯಗಳ ಮೂಲಕ ಮೌಲ್ಯವರ್ಧಿಸಿಕೊಳ್ಳುತ್ತಿದೆ.
ಅರಿಶಿನ ಎಲೆ, ತೇಗದ ಎಲೆ ಬಳಸಿ ಕೊಟ್ಟಿಗೆ, ಕಡುಬು ಮಾಡುವುದು ಕರಾವಳಿಯಲ್ಲಿ ರೂಢಿ. ಅಕ್ಕಿಹಿಟ್ಟು, ಬೆಲ್ಲ, ತರಕಾರಿ, ಹಲಸಿನ ಹಣ್ಣು.. ಇದರೊಳಗಿನ ಹೂರಣ. ಮೆಕ್ಸಿಕೋದಲ್ಲಿ ಇಂತಹುದೇ ಖಾದ್ಯಕ್ಕೆ 'ತಮಾಲೆ' ಎನ್ನುತ್ತಾರೆ. ಇದರೊಳಗಿರುವುದು ವಿವಿಧ ಮಾಂಸಗಳು. ಇದೊಂದು ದೊಡ್ಡ ಉದ್ಯಮ. ಕಾನ್ಸಾಸಿನ ಸ್ಟೆಫಾನಿ-ಶಾನ್ ದಂಪತಿಗಳು ಕಳೆದ ವರುಷ ತಮಾಲೆಯೊಳಗೆ ಮಾಂಸದ ಬದಲು ಹಲಸಿನ ಗುಜ್ಜೆಯನ್ನು ಬಳಸಿದ್ದು ಕ್ಲಿಕ್ ಆಗಿತ್ತು. ಎಲ್ಲಿಯವರೆಗೆ ಜ್ಯಾಕ್ಫ್ರುಟ್ ತಮಾಲೆ ಜನಪ್ರಿಯವಾಗಿದೆಯೆಂದರೆ ಜಾಲತಾಣಗಳ ಮೂಲಕ ಪೂರೈಕೆಯ ಆದೇಶ ಬರುತ್ತಿದೆ.
'ಸೆಲಿಯಾಕ್ ಕಾಯಿಲೆ' ಇರುವ ಮಂದಿಗೆ ಗೋಧಿ, ಮೈದಾ ತಿಂಡಿಗಳು ವಜ್ರ್ಯ. ಈ ತಿಂಡಿಯಲ್ಲಿರುವ 'ಗ್ಲುಟೆನ್' ತೊಂದರೆ ನೀಡುವ ಘಟಕ. ಗುಟೆನ್ಫ್ರೀ ಆಹಾರ ಸೇವನೆಯಿಂದ ಮಾತ್ರ ಸೆಲಿಯಾಕನ್ನು ನಿಯಂತ್ರಿಸಬಹುದಷ್ಟೇ. ಅಮೆರಿಕಾದಲ್ಲಿ ಹಲಸಿನ ಬೀಜದ ಹುಡಿಯಿಂದ ತಯಾರಿಸಿದ ಉತ್ಪನ್ನಗಳು ಗ್ಲುಟೇನ್ಮುಕ್ತ ಎನ್ನುವುದು ಪ್ರಾಯೋಗಿಕವಾಗಿ ಕಂಡು ಬಂದ ಅಂಶ. ಇತರ ಗ್ಲುಟೇನ್ಮುಕ್ತ ಹುಡಿಗಳೊಂದಿಗೆ ಹೋಲಿಸಿದಾಗ ಹಲಸಿನ ಬೀಜನ ಹುಡಿಯು ಉತ್ತೇಜಿತ ಫಲಿತಾಂಶ ನೀಡಿರುವುದು ಅಮೆರಿಕಾದ ಹಲಸು ಪ್ರಿಯರಿಗೆ ಖುಷಿ ನೀಡಿದೆ.
ಫಿಲಿಪ್ಪೈನ್ಸಿನ ಆಸ್ಪತ್ರೆಯೊಂದು ಐದು ವರುಷಗಳಿಂದ ರೋಗಿಗಳಿಗೆ ಹಲಸಿನ ಹಣ್ಣನ್ನು ನೀಡುತ್ತಿದೆ. ಇದರಲ್ಲಿರುವ ಉತ್ತಮ ಪೌಷ್ಟಿಕಾಂಶ ಮತ್ತು ನಾರು ಇರುವುದರಿಂದ ರೋಗಿಗಳ ಆಹಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಹಲಸಿನ ಹಣ್ಣಿನಲ್ಲಿ ಪೊಟ್ಯಾಸಿಯಂ, ಸಿ ಜೀವಾತು, ಮ್ಯಾಂಗನೀಸ್ ಅಧಿಕ. ಕೊಲೆಸ್ಟರಾಲ್, ಸೋಡಿಯಂ ಮತ್ತು ಕೊಬ್ಬು ಕಡಿಮೆ. ಹೀಗಾಗಿ ರೋಗಿಗಳ ಆರೋಗ್ಯವನ್ನು ಕಾಯುವುದೆಂದು ವೈದ್ಯರ ಅಂಬೋಣ. ಫಿಲಿಪ್ಪೈನ್ಸ್ ಮಂದಿಗೆ ಹಲಸಿನ ಹಣ್ಣು ಪ್ರಿಯ. ಹಣ್ಣನ್ನು ತಿನ್ನುವುದು ಮಾತ್ರವಲ್ಲ, ಅದರ ಮೌಲ್ಯವರ್ಧನೆಯಲ್ಲೂ ಅವರು ಮುಂದು.
ದೂರ ಯಾಕೆ, ನಮ್ಮ ದೇಶದಲ್ಲೇ ಎಷ್ಟೊಂದು ಉತ್ಪನ್ನಗಳು. ತುಳುವ (ಬಿಳುವ) ಹಲಸಿನಿಂದ ಪಲ್ಪ್ ತಯಾರಿಸುವ 'ಕೊನಿಮ್ ಸ್ಫೂರ್ತಿ' ಎಂಬ ಉದ್ದಿಮೆಯು ಮಹಾರಾಷ್ಟ್ರದ ಕುಡಾಲ್ ಎಂಬಲ್ಲಿದೆ. ತುಳುವ ಹಲಸಿಲ್ಲಿ 'ಬಕರ್’ , ಬಕ್ಕೆಯು 'ಕಾಪಾ' ಎನ್ನುತ್ತಾರೆ. ಹಣ್ಣಿನ ಪಲ್ಪನ್ನು ಬಳಸಿ ಮುಳುಕ, ಮಿಲ್ಕ್ ಶೇಕ್, ಐಸ್ಕ್ರೀಂ, ಟಾಫಿ, ಚಾಕೊಲೇಟ್, ಫ್ರುಟ್ರೋಲ್, ಸಿಹಿ ಇಡ್ಲಿ.. ಖಾದ್ಯಗಳನ್ನು ತಯಾರಿಸಬಹುದು.
ಮಹರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಕರಾವಳಿಯ ಮಂದಿಗೆ ಧಾರ್ಮಿಕ ಆಚರಣೆಯಲ್ಲಿ ನಂಬುಗೆ. ಕೆಲವು ಶುಭ ದಿವಸಗಳಂದು ಉಪವಾಸದಲ್ಲಿರುವುದು ಆಚಾರ. ಹಲಸಿನ ಬೀಜದ ಹುಡಿಯನ್ನು ಬಳಸಿ ಮಾಡಿದ 'ಉಪವಾಸ್ ಭಾಜನ್' ಹಿಟ್ಟು ಉಪವಾಸದಂದು ಬಳಸಲು ಯೋಗ್ಯ. ಸಬ್ಬಕ್ಕಿ ಮತ್ತು ಜೀರಿಗೆ ಇದರೊಂದಿಗಿರುವ ಒಳಸುರಿ. ಹಿಟ್ಟಿಗೆ ಮಜ್ಜಿಗೆ, ಉಪ್ಪು ಸೇರಿಸಿ ಉಪ್ಪಿಟ್ಟಿನಂತಹ ಖಾದ್ಯ ತಯಾರಿಸುತ್ತಾರೆ. ಇವೆಲ್ಲಾ ಮನೆಮಟ್ಟದಲ್ಲಿ ಬಳಕೆಯಾಗುತ್ತಿದ್ದು, ಜನರ ಒಲವು ಗಳಿಸ ಹತ್ತಿದೆ.
ಮಹಾರಾಷ್ಟ್ರದ ಇನ್ನೊಂದು ಉತ್ಪನ್ನ 'ಹಲಸಿನ ಹಣ್ಣಿನ ಟಾಫಿ'. ಹಣ್ಣಿನ ಪಲ್ಪ್, ಸಕ್ಕರೆ ಮತ್ತು ದ್ರವರೂಪದ ಗ್ಲೂಕೋಸ್ ಒಳಸುರಿ. ವರುಷಕ್ಕೆ ಅರುವತ್ತು ಸಾವಿರ ಟಾಫಿ ಮಾರಾಟ! ಒಂದು ಟಾಫಿಗೆ ಎಂಟು ರೂಪಾಯಿ ಬೆಲೆ. ಮೂರು ತಿಂಗಳ ತಾಳಿಕೆ. ಏಳು ಸೆಂಟಿಮೀಟರ್ ಉದ್ದ, ಮೂರು ಸೆಂಟಿಮೀಟರ್ ಅಗಲದ ಟಾಫಿಗೆ ಅಲ್ಯೂಮಿನಿಯಂ ಫಾಯಿಲಿನ ಸುರಕ್ಷಿತ ಅಂಗಿ. ಪುಣೆ, ಗೋವಾ ಮುಂಬಯಿ, ಗುಜರಾತಿನಲ್ಲಿ ಟಾಫಿಗೆ ದೊಡ್ಡ ಗ್ರಾಹಕರು.
ದೇಸಿ, ವಿದೇಶಗಳಲ್ಲಿ ಹಲಸಿನ ಬಳಕೆ ಮತ್ತು ಒಲವಿನ ಹಿನ್ನೆಲೆಯಲ್ಲಿ, ಹಲಸಿನ ಬೆಳೆಗಾರರ ನಡುವೆ, ದೇಶಗಳ ನಡುವೆ ವಿಚಾರ ವಿನಿಮಯ ಮತ್ತು ನೆಟ್ ವರ್ಕಿಂಗ್ ಆಗಬೇಕು. ಹಲಸಿನ ಸಂಶೋಧನೆಗೆ ಒತ್ತು ಸಿಗಬೇಕು. ಜಾಗತಿಕ ಹಲಸು ಇನ್ಸ್ಟಿಟ್ಯೂಟ್ ರೂಪುಗೊಳ್ಳಬೇಕು. ಸಂಶೋಧನೆಯ ಜತೆಜತೆಗೆ ಇದು ಮಾಹಿತಿಯ ಕೊರತೆಯನ್ನೂ ತುಂಬಬಹುದು, ಎಂಬ ಆಶಯವನ್ನು ಅಡಿಕೆಯ ಪತ್ರಿಕೆಯ ಸಂಪಾದಕೀಯವೊಂದರಲ್ಲಿ ಶ್ರೀ ಪಡ್ರೆಯವರು ವ್ಯಕ್ತಪಡಿಸಿದ್ದರು.
ಸಂವಹನ ವೃದ್ಧಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಚಿಕ್ಕ ಪ್ರಯತ್ನ ಮಾಡಿತ್ತು. ಇದರ ಮುಖ್ಯಸ್ಥರಾದ ಡಾ.ನಾರಾಯಣ ಗೌಡರ ಆಸಕ್ತಿಯ ಫಲವಾಗಿ ದೊಡ್ಡಬಳ್ಳಾಪುರ ತೂಬುಗೆರೆ ಹಲಸು ಬೆಳೆಗಾರರ ಸಂಘ ಸ್ಥಾಪನೆಯಾಯಿತು. ಗ್ರಾಮಮಟ್ಟದಲ್ಲಿ ಅಲ್ಪಸ್ಪಲ್ಪ ಮಾರಾಟವಾಗುತ್ತಿದ್ದ ಹಲಸಿನ ಹಣ್ಣು ರಾಜಧಾನಿಯ ಲಾಲ್ಬಾಗಿನ ಬಾಗಿಲು ತಟ್ಟಿತು. ಒಂದೊಂದು ಹಣ್ಣಿಗೂ ನೂರರಿಂದ ಮುನ್ನೂರು ರೂಪಾಯಿ ತನಕ ದರ ನೀಡಿ ಒಯ್ಯುವ ಗ್ರಾಹಕರು ರೂಪುಗೊಂಡರು.
ಕೃಷಿ ವಿಶ್ವವಿದ್ಯಾಲಯವು ಹುಟ್ಟು ಹಾಕಿದ ಹಲಸು ಅಭಿವೃದ್ಧಿಯ ಬೀಜ ಅಧಿಕಾರಿಗಳ ಉತ್ಸಾಹಕ್ಕನುಗುಣವಾಗಿ ಅಲ್ಲಿಲ್ಲಿ ಮೊಳಕೆಯೊಡೆಯಿತು. ಇಲಾಖಾ ವ್ಯಾಪ್ತಿಯಲ್ಲಿ ಒತ್ತಾಯಕ್ಕಾಗಿಯಾದರೂ ಹಲಸು ಮೇಳಗಳು ಆಯೋಜನೆಗೊಂಡವು. 'ಫಂಡ್ ಮುಗಿಸುವ' ಮೇಳಗಳಿಂದ ಹೇಳುವಂತಹ ಫಲಿತಾಂಶ ನಿರೀಕ್ಷಿಸಲಾಗದು. ಇಲಾಖೆಯ ಸಂಪರ್ಕದಲ್ಲಿರುವ ಕೃಷಿಕರಿಗೆ ಹಲಸಿನ ಸ್ವಯಂ ಅರಿವು ಸಣ್ಣ ಪ್ರಮಾಣದಲ್ಲಾದರೂ ಆಗಬಹುದು.
ಬಂಟ್ವಾಳ ತಾಲೂಕಿನ ಅಡ್ಯನಡ್ಕ, ಕೇಪು, ಅಳಿಕೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರುಷಗಳಿಂದ ಸದ್ದಿಲ್ಲದೆ ಹಲಸಿನ ಅಭಿವೃದ್ಧಿಯ ಕೆಲಸಗಳು ನಡೆಯುತ್ತಿವೆ. ರೈತರೇ 'ರುಚಿ ನೋಡಿ ತಳಿ ಆಯ್ಕೆ' ಮಾಡುವ ಮೂಲಕ ಇಪ್ಪತ್ತೈದಕ್ಕೂ ಮಿಕ್ಕಿ ಹಲಸಿನ ತಳಿಗಳನ್ನು ಗುರುತಿಸಿ, ಕಸಿ ಕಟ್ಟಿ ಅಭಿವೃದ್ಧಿ ಪಡಿಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯು 'ಹಲಸಿನ ಕ್ಲಸ್ಟರ್' ರೂಪಿಸಿ, 'ವಾರಣಾಶಿ ಹಲಸು ಬೆಳೆಗಾರರ ಸಂಘ'ವನ್ನು ಸ್ಥಾಪಿಸಿದೆ. ಸಂಘದ ಮೂಲಕ ಹಲಸಿನ ಸೊಳೆಯನ್ನು ಮಾರಾಟ ಮಾಡುವ ಪ್ರಕ್ರಿಯೆ ಶುರುವಾಗಿದೆ. ಕಳೆದ ವರುಷ ಇಪ್ಪತ್ತೆಂಟು ಟನ್ ಹಲಸನ್ನು ಮುಂಬಯಿಯ ಐಸ್ಕ್ರೀಂ ಘಟಕಕ್ಕೆ ಮಾರಾಟ ಮಾಡಿರುವುದು ಒಂದು ದಾಖಲೆ. ಹತ್ತಕ್ಕೂ ಮಿಕ್ಕಿ ಕೃಷಿಕರು ಅರ್ಧ ಎಕ್ರೆಯಿಂದ ಎರಡು ತನಕ ಹಲಸಿನ ತೋಟ ಎಬ್ಬಿಸುತ್ತಿದ್ದಾರೆ.
ಹಲಸಿನ ಚಿಪ್ಸ್, ಹಪ್ಪಳ, ಐಸ್ಕ್ರೀಂ, ಮಾಂಬಳ, ಹಲ್ವ.. ಹೀಗೆ ಮೌಲ್ಯವರ್ಧಿತ ಉತ್ಪನ್ನಗಳು ಮನೆಮಟ್ಟದಲ್ಲಿ, ಸ್ವಸಹಾಯ ಸಂಘಗಳ ಮೂಲಕ ಸಿದ್ಧವಾಗುತ್ತಿವೆ. ಬೇಡಿಕೆ ಹೆಚ್ಚುತ್ತಿದೆ. ಹಲಸಿನ ಸಾರ್ವಕಾಲಿಕ ಬಳಕೆ ಮತ್ತು ಅದರ ಮಾರುಕಟ್ಟೆ ವಿಸ್ತಾರದ ಕುರಿತು ಉದ್ಯಮದವರೊಂದಿಗೆ ಕೃಷಿಕರ ನೇರ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಜುಲೈ 7ರಂದು ಅಡ್ಯನಡ್ಕದ ಜನತಾ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯುವ ಸಮಾರಂಭವು ಹಲಸು ಆಂದೋಳನದಲ್ಲೊಂದು ಮೈಲುಗಲ್ಲು.
(ಚಿತ್ರ/ಮಾಹಿತಿ : ಶ್ರೀ ಪಡ್ರೆ/ಅಡಿಕೆಪತ್ರಿಕೆ)