Thursday, November 16, 2017

ಹಾಸ್ಯಸಾಹಿತಿ ಕು.ಗೋ ಅವರಿಗೆ - ಬೋಳಂತಕೋಡಿ ಕನ್ನಡ ಪ್ರಶಸ್ತಿ



               ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಉಡುಪಿಯ ಹೆರ್ಗ ಗೋಪಾಲ ಭಟ್ ಯನೆ ಕು.ಗೋ ಇವರು ಈ ಸಾಲಿನ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ನವೆಂಬರ್ 21, ಮಂಗಳವಾರ ಸಂಜೆ 4-30ಕ್ಕೆ ಪುತ್ತೂರು ಟೌನ್ ಬ್ಯಾಂಕ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ. ಪುತ್ತೂರಿನ 'ಬೋಳಂತಕೋಡಿ ಅಭಿಮಾನಿ ಬಳಗ'ವು ಆಯೋಜಿಸುವ ಸಮಾರಂಭದಲ್ಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣೆ ನಡೆಯಲಿದೆ.
              ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ವಹಿಸಲಿದ್ದಾರೆ. ಬೆಂಗಳೂರು ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ.ಮಹೇಶ್ ಜೋಷಿಯವರು 'ಪುಸ್ತಕ ಹಬ್ಬ'ವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರಿನ ವಿಶ್ರಾಂತ ಉಪನ್ಯಾಸಕ, ಸಾಹಿತಿ ಪ್ರೊ. ವಿ.ಬಿ.ಅರ್ತಿಕಜೆಯವರು ಬೋಳಂತಕೋಡಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಕು.ಗೋ ಅವರ ಕುರಿತು ಸಾಹಿತಿ, ವಿಮರ್ಶಕ ಬೆಳಗೋಡು ರಮೇಶ್ ಭಟ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
                ಈ ಸಂದರ್ಭದಲ್ಲಿ ಕು.ಅಪೂರ್ವ ಕೊಲ್ಯ ಅವರ 'ಚಿತ್ತಚೋರ' ಕವನ ಸಂಕಲನವು ಅನಾವರಣಗೊಳ್ಳಲಿದ್ದು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಶೋಭಿತಾ ಸತೀಶ್ ಕೃತಿ ಪರಿಚಯ ಮಾಡಲಿದ್ದಾರೆ. ಪುತ್ತೂರಿನ ರಾಜೇಶ್ ಪವರ್ ಪ್ರೆಸ್ಸಿನ ಎಂ.ಎಸ್.ರಘುನಾಥ ರಾವ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಮತ್ತು ಹಿರಿಯ ನ್ಯಾಯವಾದಿಗಳಾದ  ಕೆ.ಆರ್.ಆಚಾರ್ಯ ಇವರು ವಿವಿಧ ಕಲಾಪಗಳನ್ನು ನಡೆಸಿಕೊಡಲಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕವು ಹೆಗಲೆಣೆಯಾಗಿ ಕೈಜೋಡಿಸಿದೆ. 
             ಸಂಗೀತ ಕಛೇರಿ : ಸಮಾರಂಭದ ಬಳಿಕ ಕು.ಶ್ರೇಯಾ ಕೊಳತ್ತಾಯ ಪುತ್ತೂರು ಇವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಇವರೊಂದಿಗೆ ವಯೋಲಿನ್ನಲ್ಲಿ ಬೆಂಗಳೂರಿನ ವೈಭವ್ ರಮಣಿ, ಮೃದಂಗದಲ್ಲಿ ಸುನಿಲ್ ಸುಬ್ರಹ್ಮಣ್ಯ ಸಹಕರಿಸಲಿದ್ದಾರೆ.
             ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಈ ಹಿಂದಿನ ವರುಷಗಳಲ್ಲಿ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್ (ದಿ.), ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ, ಹರೇಕಳ ಹಾಜಬ್ಬ, ಕುಂಞಿಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್ ಇವರಿಗೆ ಪ್ರದಾನಿಸಲಾಗಿದೆ.
ಪುಸ್ತಕ ಹಬ್ಬ : ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನವೆಂಬರ 21 ರಿಂದ 27ರ ತನಕ ದಿನಪೂರ್ತಿ 'ಪುಸ್ತಕ ಹಬ್ಬ' ಜರುಗಲಿದ್ದು ಪುಸ್ತಕ ಪ್ರದರ್ಶನ-ಮಾರಾಟ ವ್ಯವಸ್ಥೆಯಿದೆ.
               ಪ್ರಶಸ್ತಿ ಪುರಸ್ಕೃತರ ಪರಿಚಯ : ಹಾಸ್ಯ ಸಾಹಿತಿ ಹೆರ್ಗ ಗೋಪಾಲ ಭಟ್ (79) ಇವರ ಕಾವ್ಯ ನಾಮ 'ಕು.ಗೋ.' ಬರೆಯುವ, ಬರೆಸುವ; ಮಾತನಾಡುವ, ಮಾತನಾಡಿಸುವ; ಪುಸ್ತಕ ಓದುವ, ಓದಿಸುವ; ಓದುವವರನ್ನು ಹುಡುಕಿ ಹೋಗಿ ಪುಸ್ತಕಗಳನ್ನು ಹಂಚುವ ಅಪರೂಪದ ವ್ಯಕ್ತಿತ್ವ. ಇವರೊಬ್ಬ ಅಕ್ಷರ ಸಂಸ್ಕೃತಿಯ ಹರಿಕಾರ. ಪುಸ್ತಕ ಪ್ರೀತಿಯ ಪರಿವ್ರಾಜಕ. ಹಲವು ಪುಸ್ತಕಗಳನ್ನು ಖರೀದಿಸಿ ಆಸಕ್ತರ ಕೈಗಿಟ್ಟು ಓದಿಸುವಂತೆ ಪ್ರೇರೇಪಿಸುವ ಅಕ್ಷರ ಪ್ರಚಾರಕ. ಹಳೆಯ ತಲೆಮಾರಿನ ಪ್ರಾತಿನಿಧಿಕ ಹಾಸ್ಯ ಬರಹಗಾರ. ಲೇಖಕರ, ಪ್ರಕಾಶಕರ ಮತ್ತು ಪ್ರಕಾಶನಗಳಿಗೆ ನಿತ್ಯ ಸಹಕಾರಿ. ನಾಡಿನಾದ್ಯಂತ ಪುಸ್ತಕ ಪ್ರೀತಿಯನ್ನು ಹಬ್ಬಿಸುವ ಹಾಸ್ಯ ಲೇಖಕ. ಅಕ್ಕನ ಮದುವೆ, ಶನಿಹಿಡಿದವ, ಹತ್ತು ಕತೆಗಳು, ತೇಲ್ನೋಟ, ಎತ್ತಣಿಂದೆತ್ತ, ಲೊಳಲೊಳಾಯಿ, ಪಟಪಟ ಪಟಾಕಿ ಇವರ ಪ್ರಕಟಿತ ಕೃತಿಗಳು. ಇದರಲ್ಲಿ ಲೊಳಲೊಳಾಯಿ ಕೃತಿಯ ಒಂದು ಹಾಸ್ಯ ಪ್ರಸಂಗವು ಕೇರಳ ಸರಕಾರದ ಎಂಟನೇ ತರಗತಿಯ ಪಠ್ಯದಲ್ಲಿ ಸೇರ್ಪಡೆಗೊಂಡಿತ್ತು. 'ಗೋರೂರು ಸಾಹಿತ್ಯ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿ'ಗಳಿಂದ ಪುರಸ್ಕೃತರು. ವೃತ್ತಿಯಲ್ಲಿ ಎಲ್.ಐ.ಸಿ.ಯಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತ. ತನಗೆ ಬರುವ ನಿವೃತ್ತಿ ವೇತನದ ಬಹುಪಾಲನ್ನು ತನ್ನ ಪುಸ್ತಕಾಸಕ್ತಿಗೆ ವಿನಿಯೋಗಿಸುತ್ತಿದ್ದಾರೆ.

-    ಕೆ.ಆರ್.ಆಚಾರ್ಯ (9449464463)
-    ಪ್ರಕಾಶ್ಕುಮಾರ್ ಕೊಡೆಂಕಿರಿ (9480451560)

Friday, September 22, 2017

ಹಣ್ಣುಹುಳಕ್ಕೆ ದುಃಸ್ವಪ್ನ ಪ್ಲಾಸ್ಟಿಕ್ ಅಂಗಿ!

 ಹೆಚ್ಚು ನಿಗಾ ಬೇಡುವ ಬೀನ್ಸ್ ಕೃಷಿ

ಕಂಬಳಿ ಹುಳಗಳ ಬೇಟೆ

ಹೊಸದಿಗಂತದ ’ಮಾಂಬಳ’ ಅಂಕಣ / 30-8-2017

                 "ಕರಾವಳಿಯಲ್ಲಿ ಬೀನ್ಸ್ ಕೃಷಿ ವಿರಳ. ಇತರ ತರಕಾರಿಗಳಿಗಿಂತ ಸ್ವಲ್ಪ ಹೆಚ್ಚು ನಿಗಾ ಮತ್ತು ಆರೈಕೆಯಿದ್ದರೆ ವಾಣಿಜ್ಯ ಮಟ್ಟದಲ್ಲಿ ಅಲ್ಲದಿದ್ದರೂ ಮನೆಬಳಕೆಗಾಗಿ ಧಾರಾಳ ಬೆಳೆಯಬಹುದು," ಎನ್ನುವ ರಘುರಾಮ ಹಾಸನಡ್ಕರ ಸ್ವಾನುಭವದಲ್ಲಿ ದಶಕದ ತರಕಾರಿ ಕೃಷಿಯ ಅನುಭವ ಮಿಳಿತವಾಗಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕದವರು.
              ಮುಖ್ಯ ಕೃಷಿ ಅಡಿಕೆ, ತೆಂಗು. ಮಳೆಗಾಲದಲ್ಲಿ ಅಂಗಳಪೂರ್ತಿ ತರಕಾರಿ. ಕೃಷಿಯ ಅನುಭವವನ್ನು ಹಂಚಿಕೊಳ್ಳಲು ರಘುರಾಮರಿಗೆ ಖುಷಿ. ಅವರು ಕಾರಿನಲ್ಲಿ ಮನೆ ಹೊರಟರೆ ಸಾಕು, ಡಿಕ್ಕಿಯಲ್ಲಿ ತಾಜಾ ತರಕಾರಿ ಪ್ಯಾಕೆಟ್ಗಳು ಮುಗುಮ್ಮಾಗಿ ಕುಳಿತಿರುತ್ತವೆ! ಆಪ್ತರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಹಂಚುವುದು ಸ್ವ-ಭಾವ. ಇವರ ತರಕಾರಿಯನ್ನೇ ಕಾಯುವ ಆಪ್ತೇಷ್ಟರಿದ್ದಾರೆ!  ಎಲ್ಲಾ ವಿಧದ ತರಕಾರಿಗಳನ್ನು ಬೆಳೆಯುತ್ತಾರೆ. ಇವರ ಅಡುಗೆ ಮನೆಯಲ್ಲಿ ತಾಜಾ, ವಿಷರಹಿತ ಕಾಯಿಪಲ್ಲೆಯ ಖಾದ್ಯಗಳು ಸದಾ.
                 ತರಕಾರಿಯನ್ನು ಬೆಳೆಯುವುದು ದೊಡ್ಡದಲ್ಲ. ಒಂದೊಂದಕ್ಕೆ ಒಂದೊಂದು ಆರೈಕೆ ಬೇಕು. ಇದು ಕಲಿತು ಬರುವುದಲ್ಲ. 'ಮಾಡಿ-ಬೇಡಿ' ಅನುಭವ ಆಗಿಯೇ ಕೃಷಿಯ ಜಾಣ್ಮೆಗಳು ಕೈವಶವಾಗುತ್ತವೆ. ರಘುರಾಮರು ಪ್ರತೀವರುಷ ಮಾಡುತ್ತಾ, ಕಲಿಯುತ್ತಾ ಒಂದೊಂದರ ಡಾಟಾವನ್ನು ದಾಖಲಿಸಿದ್ದಾರೆ. ಕಳೆ ನಿಯಂತ್ರಣಕ್ಕಾಗಿ ಮಳೆಗಾಲದ ಆರಂಭದಲ್ಲಿ ಅಂಗಳಕ್ಕೆ ಒಣ ತೆಂಗಿನ ಗರಿಗಳನ್ನು ಹಾಸಿದ ಬಳಿಕ ತರಕಾರಿ ಕೃಷಿಗೆ ಶ್ರೀಕಾರ.
                ಮುಳ್ಳುಸೌತೆ ಮತ್ತು ಪಡುವಲಕಾಯಿ(ಪಟ್ಲಕಾಯಿ)ಗೆ ಬಾಧಿಸುವ ಹಣ್ಣುಹುಳಗಳ ನಿಯಂತ್ರಣಕ್ಕೆ 'ಪ್ಲಾಸ್ಟಿಕ್ ಅಂಗಿ' ವಿಧಾನ ಯಶವಾಗಿದೆ. "ಮಿಡಿ ಕಚ್ಚುವ ಹಂತದಲ್ಲೇ ಮಿಡಿಗೆ ಪ್ಲಾಸ್ಟಿಕ್ ಕವರ್ (ತೊಟ್ಟೆ) ಹೊದಿಕೆ. ತರಕಾರಿಯ ಗಾತ್ರವನ್ನು ಹೊಂದಿಕೊಂಡು ಕವರಿನ ಆಯ್ಕೆ. ಪಡುವಲಕಾಯಿಗೆ ಉದ್ದನೆಯ ಗಾತ್ರದ ಪ್ಲಾಸ್ಟಿಕ್ ಬೇಕು. ಬಳಸಿದ ಪ್ಲಾಸ್ಟಿಕನ್ನು ಯಾ ಪ್ಲಾಸ್ಟಿಕ್ ಅಂಗಿಯನ್ನು ಮುಂದಿನ ವರುಷವೂ ಮರುಬಳಕೆ. ತರಕಾರಿ ಚಪ್ಪರದ ಮಧ್ಯೆ 'ಮೋಹಕ ಬಲೆ' ಯನ್ನು ತೂಗಿಸಿದ್ದೇನೆ. ತುಂಬಾ ಪ್ರಯೋಜನವಾಗಿದೆ. ಮುಳ್ಳುಸೌತೆಯ ಮಿಡಿಯ ಹೊರಮೈ ಮೆದು. ಇದನ್ನು ಹಣ್ಣುಹುಳವು ಎಳೆಯದರಲ್ಲೆ ಕಡಿದು ಬಿಡುತ್ತದೆ. ಕಾಯಿ ಬೆಳೆದಂತೆ ಹಾಡರ್್ ಆಗುತ್ತದೆ. ನಂತರ ಹುಳಗಳ ಬಾಧೆ ಕಡಿಮೆ." ಎನ್ನುತ್ತಾರೆ.
               ಪಡುವಲಕಾಯಿ(ಪಟ್ಲಕಾಯಿ)ಗೂ ಅಂಗಿ ಪ್ರಯೋಗ. ಸುಮಾರು ಮೂರಡಿ ಬೆಳೆದ ಪಟ್ಲಕಾಯಿಗೆ ಎಳತರಲ್ಲಿ ರೋಗಬಾಧೆ. ಒಂದು ರೀತಿಯ ಕಂಬಳಿ ಹುಳದಂತಿರುವ ಹುಳ. ಇದು ಎಳೆಯ ಕಾಯನ್ನು ತೂತು ಮಾಡುತ್ತದೆ. ಈ ಹುಳವನ್ನು ದಿನಂಪ್ರತಿ ಹುಡುಕಿ ಹುಡುಕಿ ನಾಶ ಮಾಡುವುದೊಂದೇ ದಾರಿ. ರಘುರಾಮರ ತರಕಾರಿ ಕೃಷಿಯಲ್ಲಿ ಬೆಳಗ್ಗಿನ ಪಾಳಿಯು ಹುಳುಗಳ ಹುಡುಕಾಟಕ್ಕೆ ಮೀಸಲು ಮತ್ತು ಮೊದಲಾದ್ಯತೆ.
               ಅಂಗಳದಂಚಿನಲ್ಲಿ ಬೀನ್ಸ್ ಕೃಷಿ. ಸುಡುಮಣ್ಣಿನ ಮಡಿ ಮಾಡಿ ಅದರಲ್ಲಿ ಬೀಜಪ್ರದಾನ. ವಾರಕ್ಕೊಮ್ಮೆ ಸೆಗಣಿ ನೀರಿನ ಉಣಿಕೆ. ಜತೆಗೆ ಹಟ್ಟಿಗೊಬ್ಬರ. ಬಳ್ಳಿ ಬೆಳೆದಂತೆ ಅಡರಿನ (ಮರಗಿಡಗಳ ಒಣ ರೆಂಬೆ) ಆಧಾರ. ಮಡಿ ಎತ್ತರವಾಗಿರಬೇಕು. ಬುಡದಲ್ಲಿ ನೀರು ನಿಂತರೆ ಗಿಡ ಕೊಳೆಯುವ ಸಾಧ್ಯತೆ ಹೆಚ್ಚು. ಹೂ ಬಿಡಲು ಶುರು ಮಾಡಿದಾಗ ಸುಡುಮಣ್ಣು ಅಥವಾ ಪೊಟೇಶ್ ಗೊಬ್ಬರಗಳ ಉಣಿಕೆ.
               "ಈ ಗೊಬ್ಬರಗಳ ಬದಲಿಗೆ ನಾವೇ ಮನೆಯಲ್ಲಿ ಮಾಡಿಕೊಳ್ಳಬಹುದು. ಸ್ಲರಿಗೆ ಬೂದಿಯನ್ನು ಮಿಶ್ರ ಮಾಡಿ. ಅದನ್ನು ತೆಳ್ಳಗೆ ಮಾಡಿ ಗಿಡಗಳಿಗೆ ಎರೆಯಿರಿ. ಮಳೆ ಬರುತ್ತಾ ಇದ್ದರೆ ಮಾತ್ರ ಈ ದ್ರಾವಣ ಉಣಿಸಿ. ಮಧ್ಯಾಹ್ನ ಬೇಡ. ಗಿಡವೇ ಸುಟ್ಟುಹೊಗುವ ಸಾಧ್ಯತೆಯಿದೆ.  ಗಿಡದಲ್ಲಿ ಬೀನ್ಸ್ ಬೆಳೆಯುತ್ತಾ ಬಂದಂತೆ ಬುಡಕ್ಕೆ ಮಣ್ಣು ಪೆರಿಸಿ. ಗಿಡದ ಬೆಳವಣಿಗೆ ನೋಡಿಕೊಂಡು ಗೊಬ್ಬರ ಹಾಕಿ," ಎನ್ನುತ್ತಾರೆ.
               ಸೌತೆ, ಕುಂಬಳ, ಸುವರ್ಣಗೆಡ್ಡೆ, ಬೆಂಡೆ... ಹೀಗೆ ವರುಷದ ಹತ್ತು ತಿಂಗಳು ತಮ್ಮದೇ ತರಕಾರಿ. "ಬೆಂಡೆಗೆ ಹಳದಿ ಎಲೆ ರೋಗ. ಕೆಲವರು ಮಣ್ಣಿನ ಕ್ಷಾರವೇ ಕಾರಣ. ಬಹುಶಃ ಮಣ್ಣಿನಿಂದ ಹಬ್ಬುವ ಯಾವುದೋ ರೋಗವಿರಬೇಕು. ನೆಲಮಟ್ಟದಲ್ಲಿ ಪ್ಲಾಸ್ಟಿಕ್ ಗೋಣಿ ಯಾ ಹಾಳೆಯನ್ನು ಹಾಸಿ ಅದರ ಮೇಲೆ ಮಣ್ಣು ಹಾಕಿ ಬೆಳೆಸಿದರೆ ಪ್ರಯೋಜನವಾಬಹುದೋ ಏನೋ," ಎನ್ನುವ ಚಿಂತನೆಯಲ್ಲಿದ್ದಾರೆ.
                ಬೂದುಗುಂಬಳ, ಸಿಹಿಗುಂಬಳ(ಚೀನಿಕಾಯಿ)ಗಳಿಗೆ ಪ್ರತ್ಯೇಕ ತಾಕುಗಳು. ಮಳೆಯ ರಭಸಕ್ಕೆ ಹೂವಿನ ಪರಾಗ ತೊಳೆದುಹೋಗಿ ಕಾಯಿ ಕಚ್ಚುವುದಿಲ್ಲ. ಇದಕ್ಕಾಗಿ ಕೃತಕ ಪರಾಗಸ್ಪರ್ಶ. "ಬೆಳ್ಳಂಬೆಳಿಗ್ಗೆ ಅರಳಿದ ಹೂವಿಗೆ ಕೃತಕ ಪರಾಗಸ್ಪರ್ಶ ಮಾಡಿ ಪ್ಲಾಸ್ಟಿಕ್ ಅಂಗಿ ತೊಡಿಸುತ್ತೇನೆ. ಮಳೆಗೆ ಪರಾಗ ತೋಯ್ದು ಹೋಗದಂತೆ  ಪರಿಹಾರ ಕಂಡುಕೊಂಡಿದ್ದೇನೆ," ಎಂಬ ಸೂಕ್ಷ್ಮಗಳನ್ನು ಹೇಳುತ್ತಾರೆ. ಕೃಷಿಯ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಬೇಕು, ಗುಟ್ಟು ಮಾಡಬಾರದು ಎನ್ನುವ ನಿಲುವು ಇವರದು.
                   ಅಲಸಂಡೆಗೆ ಶತ್ರು 'ಬಂಬುಚ್ಚಿ'.  ಇದನ್ನು ಓಡಿಸಲು ಕೆಂಪಿರುವೆ(ಉರಿ)ಯನ್ನು ಛೂ ಬಿಡುತ್ತಾರೆ. ನಿಯಂತ್ರಣವಾಗಿದೆ. ತರಕಾರಿ ಮಧ್ಯೆ ಕಳೆ ಇದ್ದರೆ ಕೀಟ ಜಾಸ್ತಿ. ಹಾಗಾಗಿ ಕಳೆ ಕೀಳುವುದು ಮುಖ್ಯ. ಇದನ್ನೆಲ್ಲಾ ನೋಡುತ್ತಾ ಕಲಿಕೆ. ಇನ್ನೂ ಕಲಿಯುವುದು ಇದೆ, ಎನ್ನುತ್ತಾರೆ. ಗೊಬ್ಬರದ ಹುಳ ತಿನ್ನಲು ಬರುವ ಹಂದಿಗಳಿಗೆ ಮಡಿಯ ಸುತ್ತ ನೆಲದಿಂದ ಒಂದಡಿ ಎತ್ತರಕ್ಕೆ ತಂತಿಯನ್ನು ಬಿಗಿದಿದ್ದಾರೆ. ಕೋಳಿಗಳಿಗೆ ಗೇಟ್ಪಾಸ್ ನೀಡಲು ಎರಡಡಿ ಎತ್ತರಕ್ಕೆ ನೆರಳು ಬಲೆಯ ಆವರಣ. ತರಕಾರಿಯ ಮೊದಲ ಇಳುವರಿ ಬೀಜಕ್ಕೆ ಮೀಸಲು.
              ವೃತ್ತಿ ಸಂಬಂಧವಾಗಿ ಕಡಲಾಚೆಯ ಕೆನಡಾದಲ್ಲಿದ್ದರು. ಅನಿವಾರ್ಯವಾಗಿ ತವರಿಗೆ ಮರಳಿದಾಗ ಬಾಲ್ಯದ ಮಣ್ಣಿನ ಸಹವಾಸಗಳು ಅನುಕೂಲವಾಯಿತು. ಜವ್ವನದಲ್ಲೆ ಕೃಷಿಯ ಜವಾಬ್ದಾರಿ ಹೆಗಲಿಗೆ ಬಂದಾಗ ತನ್ನ ಅಜ್ಜ ಲಕ್ಷ್ಮೀನಾರಾಯಣ ಪೈಲೂರರ ಜತೆಗಿದ್ದ ಬಾಲ್ಯಾನುಭವು ಪಠ್ಯವಾಗಿ ಕಣ್ಣ ಮುಂದಿತ್ತು. ಮಡದಿ ಜೋತ್ಸ್ನಾ ರಘುರಾಮರ ತರಕಾರಿ ಆಸಕ್ತಿಗೆ ಹೆಗಲೆಣೆ. ಮನೆಗೆ ಬಂದ ಅತಿಥಿಗಳು ಮರಳುವಾಗ ಅವರ ಕೈಯಲ್ಲಿ ತರಕಾರಿಯನ್ನೋ, ಬೀಜವನ್ನು ನೀಡಿದರೆ ಮಾತ್ರ ಈ ದಂಪತಿಗೆ ಖುಷಿ.
              ಮಾರುಕಟ್ಟೆಯ ಭಾಷೆಯು ಬದುಕಿನಲ್ಲಿ ಆವರಿಸಿರುವ ಕಾಲಘಟ್ಟದಲ್ಲಿದ್ದೇವೆ. ಆದರೆ ರಘುರಾಮ ದಂಪತಿಯಲ್ಲಿ ಮಣ್ಣಿನ ಭಾಷೆಯು ಬದುಕಿನಲ್ಲಿ ಮಿಳಿತವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ತಾನು ಬೆಳೆದು ತಿನ್ನುವುದಲ್ಲದೆ, ಇತರರ ಹೊಟ್ಟೆಯೂ ತಂಪಾಗಿರಬೇಕು ಎನ್ನುವ ಮನಃಸ್ಥಿತಿ ಹೊಂದಿರುವುದು ಗ್ರಾಮೀಣ ಭಾರತದ ಕೃಷಿಕರಲ್ಲಿ ಮಾತ್ರ.

Sunday, September 17, 2017

ಈ ಹೊರೆಯಾಳುಗಳಿಂದ 'ಟೆನ್ಶನ್-ಫ್ರೀ'!



ಹೊಸದಿಗಂತದ - ಮಾಂಬಳ - ಅಂಕಣ / 9-9-2017

             ಮನುಷ್ಯರಿಗೂ ಪ್ರಾಣಿಗಳಿಗೂ ಹೇಳಲಾಗದ, ವರ್ಣಿಸಲಾಗದ ಭಾವ ಸಂಬಂಧಗಳಿವೆ. ಬೆಕ್ಕು, ನಾಯಿ, ಪಶುಗಳು ಮೂಕವಾದರೂ ಮನುಷ್ಯನ ಭಾವವನ್ನು ಗ್ರಹಿಸಬಲ್ಲವು. ಮನವನ್ನು ಓದಬಲ್ಲವು. ಮನುಷ್ಯನಾದರೋ ಭಾವ-ಸಂಬಂಧಗಳಿಲ್ಲದೆ ವ್ಯವಹರಿಸುವ, ಕೆಲವೊಮ್ಮೆ ಪ್ರಾಣಿಗಳಷ್ಟೂ ಯೋಚನಾಶಕ್ತಿಯಿಂದ ವಿರಹಿತನಾಗುವ ಮನಃಸ್ಥಿತಿಗಳಿವೆ.
ಕೃಷಿಯಲ್ಲಿ ಪ್ರಾಣಿಗಳ ಬಳಕೆ ಪ್ರಾಚೀನ. ಗದ್ದೆ ಬೇಸಾಯಕ್ಕೆ ಎತ್ತುಗಳು, ಕೋಣಗಳನ್ನು ಬಳಸುವುದು ಹೊಸತೇನಲ್ಲ. ಬದಲಾದ ಕಾಲಘಟ್ಟದಲ್ಲಿ ಅವುಗಳ ದುಡಿಮೆಯ ಸ್ಥಾನಕ್ಕೆ ಯಂತ್ರಗಳು ಬಂದಿವೆ. ಭತ್ತದ ಕೃಷಿಗೆ ಹಿನ್ನಡೆಯಾದ ಬಳಿಕ ಅವೆಲ್ಲವೂ ಅಜ್ಞಾತವಾಗಿದೆ. ಇಲ್ನೊಡಿ, ಕೃಷಿಕರೊಬ್ಬರ ತೋಟದಲ್ಲಿ ಕತ್ತೆಗಳು ಪ್ರವೇಶ ಮಾಡಿವೆ. ತಿಂದುಂಡು 'ಕತ್ತೆಯ ಹಾಗೆ' ಅವುಗಳು ಬಿದ್ದುಕೊಳ್ಳುವುದಿಲ್ಲ! ಅವೀಗ ತೋಟದ ಹೊರೆಯಾಳುಗಳು.
              ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸನಿಹದ ಪಡ್ನೂರಿನ ನಾಗೇಶ ಶರ್ಮರಲ್ಲಿಗೆ ಇಬ್ಬರು - ಬೋರ, ರಾಗಿಣಿ - ತೋಟದ ಕೆಲಸಕ್ಕೆ ಆಗಮಿಸಿದ್ದಾರೆ. ಅವರು ಹೊರೆ ಕೆಲಸವನ್ನು ಹಗುರ ಮಾಡುವ ಶ್ರಮಜೀವಿಗಳು. ಕರಾವಳಿಯ ವಾತಾವರಣಕ್ಕೆ ಈ ಶ್ರಮಜೀವಿಗಳು ಒಗ್ಗಿಕೊಳ್ಳುತ್ತಿದ್ದಾರೆ. ಒಡೆಯನ ಭಾಷೆಯನ್ನು ಕಲಿಯುತ್ತಿವೆ. ಕಳೆದ ಋತುವಿನಲ್ಲಿ ಮರದಿಂದ ಬಿದ್ದ ಅಡಿಕೆಯನ್ನು, ತೆಂಗಿನಕಾಯಿಯನ್ನು ಬೋರ, ರಾಗಿಣಿಯರೇ ಅಂಗಳಕ್ಕೆ ಹೊತ್ತು ತಂದುವು!
ಶರ್ಮರಿಗೆ ಬೇಲೂರಿನಲ್ಲಿ ಕೃಷಿ ಭೂಮಿಯಿದೆ. ಆಗಾಗ್ಗೆ ಅಲ್ಲಿಗೆ ಭೇಟಿ ಕೊಡುತ್ತಿರುತ್ತಾರೆ. ಹೀಗೆ  ಹೋದಾಗಲೆಲ್ಲಾ ಕುರಿ ಮಂದೆಯನ್ನು, ಕತ್ತೆಯ ಸಮೂಹವನ್ನು ನೋಡಿದ್ದರು. ಮೈಸೂರಿನಲ್ಲಿ ಕತ್ತೆಯನ್ನು ಸಾಗಾಟಕ್ಕೆ, ಹೊರೆ ಕೆಲಸಗಳಿಗೆ ಬಳಸುವುದನ್ನು ಕೇಳಿದ್ದರು.
             ಈಚೆಗೆ ಶಿವಮೊಗ್ಗದ ಸುರೇಶ್ ಅಯ್ಯರ್ ಕತ್ತೆ ಮೇಲೆ ಹೊರೆ ಕೆಲಸಗಳನ್ನು ನಿಭಾಯಿಸುವ ಸುದ್ದಿಗೆ ಶರ್ಮರ ಕಿವಿಯರಳಿತು. ಅವರು ತಮಿಳುನಾಡಿನ ಅಲೆಮಾರಿಗಳ ತಂಡ ಬಂದಿದ್ದಾಗ ಅವರಿಂದ ಕತ್ತೆಯನ್ನು ಖರೀದಿಸಿದ್ದರು. ತೋಟದ ಹೊರೆಯಾಳಾಗಿ ಸುರೇಶರಿಗೆ ಸಹಕರಿಸುತ್ತಿದೆ. ಮನೆಯ ಒಬ್ಬ ಸದಸ್ಯನಂತೆ ಬೆಳೆಯುತ್ತಿದೆ. ಶರ್ಮರಿಗೆ ತಾನೂ ಪ್ರಯೋಗ ಮಾಡೋಣ ಅನಿಸಿತು.
            ಕತ್ತೆಯನ್ನು ಕೆಲಸಕ್ಕೆ ಬಳಸುವ ಯಾವುದೇ ಪೂರ್ವಾನುಭವ ಇಲ್ಲದ ಶರ್ಮರು ರಿಸ್ಕ್ ತೆಕ್ಕೊಂಡರು. ನಮ್ಮ ನೆಲದಲ್ಲಿ ಏನೂ ಕೆಲಸ ಮಾಡಿಲ್ಲ ಅಂತಿಟ್ಟುಕೊಳ್ಳೋಣ, ಎರಡು ಪ್ರಾಣಿಯನ್ನು ಸಾಕಿದಂತಾಯಿತು ಅಷ್ಟೇ. ಎಂದು ನಿರ್ಧಾರ ಮಾಡಿದರು. ತುಮಕೂರಿನಿಂದ ಗೊಬ್ಬರ ಸರಬರಾಜು ಮಾಡುವ ಮಧ್ಯವರ್ತಿಗಳಲ್ಲಿ ಮಾತುಕತೆ ನಡೆಸಿದರು.  ಹದಿನೆಂಟುವರೆ ಸಾವಿರ ರೂಪಾಯಿಗೆ ತುಮಕೂರಿನಿಂದ ಪಡ್ನೂರಿಗೆ ಕತ್ತೆಗಳು ಬಂದು ವರುಷವಾಗುತ್ತಾ ಬಂತು.
              ಕತ್ತೆಯು ಬಹಳ ಸೂಕ್ಷ್ಮ ಪ್ರಾಣಿ. ಅಷ್ಟೇ ಅಂಜುಬುರುಕ ಕೂಡಾ. ಅಂಗಳದಿಂದ ತೋಟಕ್ಕೆ ಹೋಗುವ ದಾರಿ ಪರಿಚಿತವಾದರೆ ಅದೇ ದಾರಿಯಲ್ಲಿ ಹೋಗುತ್ತವೆ, ಬರುತ್ತವೆ. ಕಳೆದ ಹತ್ತು ತಿಂಗಳಿನಿಂದ ಕತ್ತೆಯಿಂದಾಗಿ ತೊಂದರೆಯಾಗಿಲ್ಲ. ಅವುಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಭಾಷೆಯನ್ನು ಕಲಿಸಬೇಕು. ಎನ್ನುತ್ತಾರೆ. ಈಗ ಹೇಗೂ ಮಳೆಗಾಲ. ಹೇಳುವಂತಹ ಕೆಲಸವಿಲ್ಲ. ಹಾಗಾಗಿ ಅವಕ್ಕೆ ಮಳೆಗಾಲದ ರಜೆ!
               ಶರ್ಮರ ಮನೆಯ ಕೆಳಗೆ ಇಳಿಜಾರು ಪ್ರದೇಶ. ಮೇಲೆ ಏರು ಜಾಗ. ಇಲ್ಲೆಲ್ಲಾ ಅಡಿಕೆ ತೋಟವನ್ನು ಎಬ್ಬಿಸಿದ್ದಾರೆ. ತುಂಬಾ ಏರಿನ ಜಾಗವಾದ್ದರಿಂದ ಯಾಂತ್ರಿಕ ಗಾಡಿಗಳು ಸಾಗಾಟ ಕೆಲಸವನ್ನು ಸುಲಲಿತವಾಗಿ ಮಾಡುವ ಕುರಿತು ಗುಮಾನಿಯಿದೆ. ಅಲ್ಲದೆ ಈಗಾಗಲೇ ಪ್ರಯೋಗಿಸಿದ ಕೈಗಾಡಿಗಳು ಶರ್ಮರನ್ನು ಖುಷಿಪಡಿಸಲಿಲ್ಲ. ಬೇರೆ ಪಾರ್ಯಾಯ ದಾರಿಗಳತ್ತ ಯೋಚಿಸುತ್ತಿದ್ದರು. ಬರುವ ಸೀಸನ್ನಿನಲ್ಲಿ ಅಡಿಕೆ ಗೊನೆಗಳನ್ನೂ ಬೋರ, ರಾಗಿಣಿಯರು ಸಾಗಿಸಬೇಕು ಎನ್ನುವುದು ಆಶಯ.
              ಬೇಸಿಗೆಯಲ್ಲಿ ಸಂಜೆ ಬಿಟ್ಟರೆ ರಾತ್ರಿಯಿಡೀ ತೋಟದಲ್ಲಿರುತ್ತವೆ. ಹೊಟ್ಟೆ ತುಂಬಾ ಹುಲ್ಲು ಮೇಯುತ್ತವೆ. ಬೆಳಿಗ್ಗೆ ಅವಾಗಿಯೇ ಕಟ್ಟುವ ಜಾಗದಲ್ಲಿ ಹಾಜರ್. ಅಕ್ಕಿ ತೊಳೆದ ನೀರು, ನೆಲಗಡಲೆ ಹಿಂಡಿ, ಹಾಳೆ, ಸೋಗೆ, ಪಪ್ಪಾಯಿ ಸೋಗೆ.. ಅವುಗಳ ಆಹಾರ. ನಾವದನ್ನು ಫ್ರೆಂಡ್ಸ್ ಆಗಿ ಟ್ರೀಟ್ ಮಾಡಿದರೆ ಹೇಳಿದಂತೆ ಕೇಳುತ್ತವೆ. ಎನ್ನುತ್ತಾರೆ. ಅದುವೇ ಭಾವ-ಭಾವ ಸಂಬಂಧ. ಪ್ರಾಣಿಗಳಿಗೂ ಭಾಷೆಯಿದೆ, ಸಂವಹನ ಕೌಶಲವಿದೆ. ಅದು ಅರ್ಥವಾದರೆ ಕಷ್ಟವಲ್ಲ. ಸ್ವಲ್ಪ ಸಮಯ ಬೇಕು.
ಶರ್ಮರು ತೋಟಕ್ಕೆ ಹೊರಟಾಗ ಕತ್ತೆಗಳೂ ಹಿಂಬಾಲಿಸುತ್ತವೆ. ಕೆಲವೊಮ್ಮೆ ತೋಟದಲ್ಲಿ ಮೇದುಕೊಂಡಿದರೆ ಶರ್ಮರು ಹೋದಾಗ ಹಿಂಬಾಲಿಸುತ್ತವೆ. ಪ್ಲಾಸ್ಟಿಕ್ ಗೋಣಿಯನ್ನು ಕತ್ತೆಯ ಬೆನ್ನಿಗೆ ಎರಡೂ ಕಡೆ ತೂಗುವಂತೆ ಬಿಗಿಯುತ್ತಾರೆ. ಬಿದ್ದ ಹಣ್ಣಡಿಕೆಯನ್ನು ಗೋಣಿಗೆ ಹಾಕುತ್ತಾರೆ.
               ಹಣ್ಣಡಿಕೆಯು ಗೋಣಿಯಲ್ಲಿ ತುಂಬಿತು ಎಂದಾದರೆ ಮೈದಡಿವಿದರೆ ಆಯಿತು, ಎಕ್ಸಿಲೆಟರ್ ಕೊಟ್ಟಂತೆ! ನೇರವಾಗಿ ಅಂಗಳದತ್ತ ಮುಖಮಾಡುತ್ತವೆ. ಡೌನ್ಲೋಡ್ ಮಾಡಲು ಒಬ್ಬರು ಬೇಕಷ್ಟೇ. ಕತ್ತೆಯ ಬೆನ್ನಿಗೇರಿಸಿದ ಎರಡೂ ಬದಿಯ ಚೀಲಗಳಲ್ಲಿ ಸಮಭಾರ ಇರುವಂತೆ ನೋಡಿಕೊಳ್ಳಬೇಕು.
               "ಈ ವರುಷ ಕತ್ತೆಗಳಿಗೂ ಇವರಿಗೂ ಅಪ್ರೆಂಟಿಸ್ಶಿಪ್ಪು. ನನಗೆ ಇದು ಆರಂಭ. ತಪ್ಪು ಮಾಡುತ್ತಾ ಕಲಿತುಕೊಳ್ಳುತ್ತೇನೆ. ಈಗಿನ ಅಲ್ಪ ಕಾಲದ ಕ್ಷಮತೆಯನ್ನು ಕಂಡಾಗ ಮುಂದೆ ಇದನ್ನು ಎಲ್ಲಾ ಹೊರೆ ಕೆಲಸಗಳಿಗೆ ಬಳಸಬಹುದು ಎನ್ನುವ ವಿಶ್ವಾಸ ಬಂದಿದೆ" ಎನ್ನುತ್ತಾರೆ.
             ಮೇಯಲು ಬಿಟ್ಟರೆ ತರಕಾರಿ, ಬಾಳೆಗಳಿಗೆ ಬಾಯಿ ಹಾಕುವುದು ತೀರಾ ಕಡಿಮೆ. ಇಲ್ಲವೆಂದಲ್ಲ. ತರಕಾರಿಯ ಮಧ್ಯೆ ಇರುವ ಹುಲ್ಲನ್ನು ತಿನ್ನುತ್ತವೆ. ಇಂಟರ್ಲಾಕ್ ಎಡೆಯಲ್ಲಿ ಮೇಲೆದ್ದು ಬರುವ ಹುಲ್ಲು ತಿನ್ನಲು ಅವಕ್ಕೆ ಖುಷಿ. ಈಗೀಗ ಬಾಳೆ, ತರಕಾರಿ ಗಿಡಗಳ ರುಚಿ ಸಿಕ್ಕಿದೆ. ಜೋರು ಮಾಡಿದರೆ  ತಿನ್ನುವುದು ಜಾಸ್ತಿ - ಎಂದು ದನಿಗೂಡಿಸಿದರು, ಅರುಂಧತಿ ಶರ್ಮ.
        ಶರ್ಮರಿಗೆ ಇರುವುದು ಮೂರೆಕ್ರೆ ತೋಟ. ಬೋರ, ರಾಗಿಣಿಯರಿಗೆ ಇಡೀ ತೋಟ ಸುತ್ತಲು ಪರವಾನಿಗೆ ಇದೆ. ಅವುಗಳ ಮೂತ್ರ, ಹಿಕ್ಕೆ ತೋಟಕ್ಕೆ ಬೋನಸ್. ಇಬ್ಬರು ಮಹಿಳಾ ಆಳುಗಳಿದ್ದಾರೆ. ಅವರಿಗೆ ತೋಟದ ಕೆಲಸ ಕಡಿಮೆಯಾದಾಗ ಹುಲ್ಲು ತೆಗೆಯುವುದೇ ಕೆಲಸ. ಇದು ನಿರಂತರ ಪ್ರಕ್ರಿಯೆ. ಕಳೆದ ಮಳೆಗಾಲಕ್ಕಾಗುವಾಗ ಒಮ್ಮೆ ಪೂರ್ತಿ ಹುಲ್ಲು ತೆಗೆದು ಆಗಿತ್ತು. ನಂತರ ಹುಲ್ಲನ್ನು ಹೆರೆದಿಲ್ಲ. ಕಳೆದ ನವೆಂಬರ್ ಬಳಿಕ ಕತ್ತೆಗಳು ಹುಲ್ಲನ್ನು ಮೇಯಲು ಶುರು ಮಾಡಿದುವು.
ಮೇದು ಮೇದು ಸಪಾಯಿ ಮಾಡುತ್ತವೆ. ಹುಲ್ಲುಗಳ ಮಧ್ಯೆ ಬೆಳೆದ ಕಳೆ ಗಿಡಗಳನ್ನು ಕಟ್ ಮಾಡಬೇಕಷ್ಟೇ. ಹಾಗಾಗಿ ಮಾನವ ಶ್ರಮದ ಹುಲ್ಲು ಹೆರೆಯುವ ಶ್ರಮವನ್ನು ಕತ್ತೆಗಳು ಉಳಿಸಿಕೊಟ್ಟಿವೆ ಎನ್ನುವ ಖುಷಿ ಶರ್ಮರದು.
                ಈ 'ಅಂತರ್ಸಾಗಾಟ' ಗಾಡಿಗಳಿಗೆ ಪೆಟ್ರೋಲ್ ಬೇಡ, ಸಾಲ ಬೇಡ, ಮಜೂರಿ ಬೇಡವೇ ಬೇಡ. ಹುಲ್ಲು ಮೇಯಲು ಬಿಡಿ, ಸಾಕು. ಮೇದು ಮೇದು ಇವು ವೀಡಿಂಗ್ ವೆಚ್ಚವನ್ನೂ ಉಳಿಸಿಕೊಡುತ್ತವೆ!




Friday, September 15, 2017

ಮೂಲಿಕಾ ಜ್ಞಾನವನ್ನು ಹಬ್ಬಿಸಿದ ದೈತೋಟ


ಹೊಸದಿಗಂತದ ’ಮಾಂಬಳ’  ಅಂಕಣ / 26-7-2017

                ನಡೆದಾಡುವ ಸಸ್ಯಶಾಸ್ತ್ರೀಯ ಗೂಗಲ್ ಪಾಣಾಜೆಯ ಪಿ.ಎಸ್.ವೆಂಕಟರಾಮ ದೈತೋಟರ ಮರಣದೊಂದಿಗೆ ದೊಡ್ಡ ಜ್ಞಾನವೊಂದರ ನಷ್ಟಕ್ಕೆ ಸಾರಸ್ವತ ಲೋಕ ಒಳಗಾಯಿತು. ಸಾಮಾನ್ಯವಾಗಿ ವ್ಯಕ್ತಿ ದೈವಾಧೀನವಾದಾಗ 'ತುಂಬಲಾರದ ನಷ್ಟ' ಎಂದು ಎರಡು ಪದಗಳನ್ನು ವರದಿ ಜತೆಗೆ ಪೋಣಿಸುತ್ತೇವೆ. ಯಾರಿಗೆ ನಷ್ಟ ಎನ್ನುವುದು ಪೋಸ್ಟ್ ಮಾರ್ಟಂ ಮಾಡಬೇಕಾದ ವಿಚಾರ. ಆದರೆ ವೆಂಕಟರಾಮ ದೈತೋಟರ ಮರಣವು ಕುಟುಂಬಿಕರಿಗೆ ಮಾತ್ರವಲ್ಲ ಸಾಮಾಜಿಕವಾಗಿ ನಿಜಾರ್ಥದ ತುಂಬಲಾರದ ನಷ್ಟ.
                 ಎಪ್ಪತ್ತೇಳು ವರುಷದ ಬದುಕು. ಆರೋಗ್ಯದ ವಿಚಾರವಾಗಿ ನಿತ್ಯ ಯೋಚನೆ. ಕಲಬೆರಕೆ ಮತ್ತು ಆಧುನಿಕ ಆಹಾರಗಳ ಸೇವನೆಯಿಂದ ಆರೋಗ್ಯ ಹಾನಿ ಎಂದು ತಿಳಿದಿದ್ದರೂ ಆರೋಗ್ಯದ ಕುರಿತು ನಿಗಾ ಇಲ್ಲದಿರುವ ಕುರಿತು ದೈತೋಟರಿಗೆ ಖೇದವಿತ್ತು.  ತನ್ನ ಪ್ರಸ್ತುತಿಯಲ್ಲಿ ಏನಾದರೂ ದೋಷವಿದೆಯೋ, ಅಲ್ಲ ಜನರ ಅಸಡ್ಡೆಯೋ ಎನ್ನುವ ಗುಮಾನಿಯಿತ್ತು. 'ಔಷಧವೇ ಆಹಾರವಾಗಬಾರದು. ಆಹಾರ ಔಷಧವಾಗಬೇಕು' ಎನ್ನುವ ಮೌನ ಆಂದೋಳನವನ್ನು ಬದುಕಿನಲ್ಲಿ ಅನುಷ್ಠಾನಿಸಿದ್ದರು, ಹಬ್ಬಿಸಿದ್ದರು.
                    ಸಸ್ಯವೊಂದನ್ನು ವೀಕ್ಷಿಸಿದರೆ ಸಾಕು, ಅದರ ಪೂರ್ಣ ಗುಣಗಳು, ಸಸ್ಯಶಾಸ್ತ್ರೀಯ ವಿಚಾರಗಳು ನಾಲಗೆ ತುದಿಯಲ್ಲಿರುತ್ತಿತ್ತು. ಸಸ್ಯಗಳ ಪರಿಚಯಕ್ಕೆ 'ಪುಸ್ತಕ ನೋಡಿ ಹೇಳ್ತೇನೆ' ಎನ್ನುವ ಜಾಯಮಾನವೇ ಇದ್ದಿರಲಿಲ್ಲ. ಸಂಶಯ ಬಂದಾಗ ಮಾತ್ರ ಆಕರಗಳ ಮೊರೆ ಹೋಗುತ್ತಿದ್ದರು. ಸಸ್ಯಗಳ ವಿಚಾರಗಳಲ್ಲಿ ಇದಮಿತ್ಥಂ ಎನ್ನುವ ಜ್ಞಾನ. ಸಸ್ಯಗಳ ಪರಿಚಯ ಮತ್ತು ಔಷಧೀಯ ವಿಚಾರಗಳಲ್ಲಿ ಸಂಶಯ ಬಂದಾಗ ಅದಕ್ಕೆ ವೆಂಕಟರಾಮರ ತೀರ್ಪು ಅಂತಿಮ.
                  ಒಂದು ಹೊಸ ಮೂಲಿಕೆ ಪತ್ತೆಯಾದರೆ ಅದರ ಗುಣ-ದೋಷ ಮತ್ತು ಔಷಧೀಯ ಗುಣಗಳು ಖಚಿತವಾಗದೆ ಜನರ ಮುಂದಿಡರು. ತಂದೆಯವರು ಔಷಧಿ, ವಿಧಾನಗಳನ್ನು ಜನರಿಗೆ ಲಿಖಿತವಾಗಿ ತಿಳಿಸಿದರು. ಪುಸ್ತಕ ಬರೆದರು. ಅಜ್ಜಿಮದ್ದನ್ನು ಪ್ರಚಾರ ಮಾಡಿದವರೇ ಅವರು. "ಪುಸ್ತಕದಲ್ಲಾದರೂ ಈ ವಿದ್ಯೆ ಉಳಿಯಲಿ ಎಂಬುದು ಅವರ ಆಶಯ. ಆ ದಾರಿಯಲ್ಲಿ ನಾನು ಸಾಗುತ್ತಿದ್ದೇನೆ. ಮೂಲಿಕಾ ಪರಿಚಯದಲ್ಲಿ ನಮ್ಮ ಎಷ್ಟೋ ವೈದ್ಯರು ಗುಟ್ಟು ಮಾಡಿದರು. ಹಾಗಾಗಿ ಅವರ ನಂತರ ಅದು ಉಳಿಯಲಿಲ್ಲ. ಔಷಧಿಗಳ ಬಳಕೆ ಮನೆಮನೆಗಳಲ್ಲಿ ಆಗಬೇಕು. ಬಳಸಿದರಷ್ಟೇ ಅದು ಉಳಿಯುತ್ತದೆ," ಎಂದಿದ್ದರು.
                    ವೆಂಕಟ್ರಾಮರ ಮಡದಿ ಜಯಲಕ್ಷ್ಮೀ. ಮೂಲತ ಸಾಗರ ಸನಿಹದ ಮುಂಡಿಗೇಸರದವರು. ವೈದ್ಯ ಪರಂಪರೆ. ಪ್ರಾಕೃತಿಕ ತಂಬುಳಿ, ಆಹಾರದ ಪದ್ಧತಿಯಲ್ಲಿ ಇವರು ಮನೆತಾಯಿ. ನಮ್ಮ ಕಣ್ಣಿಗೆ ಪರಿಸರದಲ್ಲಿರುವ ಗಿಡ, ಮರಗಳು ಕಳೆಯಾಗಿಯೋ, ಕಾಡಾಗಿಯೋ ಕಾಣುತ್ತದೆ. ಜಯಲಕ್ಷ್ಮೀಯವರಿಗೆ ಅವೆಲ್ಲವೂ ಆಹಾರ ವಸ್ತುವಾಗಿ ಔಷಧೀಯ ವಸ್ತುವಾಗಿ ಕಾಣುತ್ತದೆ. ದೈತೋಟರು ನಿರ್ವಹಿಸುತ್ತಿದ್ದ ಕೆಲವು ತರಬೇತಿ ಶಿಬಿರಗಳಲ್ಲಿ ಜಯಲಕ್ಷ್ಮೀಯವರದು ಸಮಾನ ಪಾಲು. ಮೂಲಿಕಾ ಪರಿಚಯ, ವೈದ್ಯಚಿಕಿತ್ಸಾ ವಿಧಾನಗಳ ವಿವರಣೆಯು ವೆಂಕಟರಾಮರದ್ದಾದರೆ, ಪಾರಂಪರಿಕ ಆಹಾರ ಸಿದ್ಧತೆಯ ಕುರಿತು ಜಯಲಕ್ಷ್ಮೀಯವರು ವಿವರಿಸುತ್ತಾರೆ.
                 "ನಮ್ಮ ಹೊಟ್ಟೆಯೆಂದರೆ ತ್ಯಾಜ್ಯ ತುಂಬುವ ಚೀಲವಲ್ಲ. ಅದು ಶರೀರದ ಅತಿ ಪ್ರಮುಖ ಅಂಗ. ಜಠರದ ಆರೋಗ್ಯ ಸರಿಯಿದ್ದರೆ ಮಾತ್ರ ದೇಹಾರೋಗ್ಯ. ಅದು ಕೊಡುವ ಚೈತನ್ಯದಿಂದ ಆರೋಗ್ಯ, ಭಾಗ್ಯ" ಎನ್ನುತ್ತಿದ್ದರು. ದೈತೋಟ ದಂಪತಿಗಳು ಸಂದರ್ಭ ಬಂದಾಗಲೆಲ್ಲಾ ಕಾರ್ಯಾಗಾರ, ಶಿಬಿರಗಳಲ್ಲಿ ಇಂತಹ ವಿಚಾರಗಳನ್ನು ಪ್ರಸ್ತುತಪಡಿಸುತ್ತಿದ್ದರು. ಆಹಾರ ವಿಚಾರಗಳಲ್ಲಿ ಕಟ್ಟು ನಿಟ್ಟಾದ ಕ್ರಮಗಳನ್ನು ಸೂಚಿಸುತ್ತಿದ್ದರು. ಇಂತಹ ಕಲಾಪಗಳಲ್ಲಿ ಅವರ ಅನುಭವಗಳನ್ನು ಸ್ವೀಕರಿಸಿದ ನೂರಾರು ಮಂದಿ ಸಾತ್ವಿಕ ಆಹಾರದತ್ತ ಒಲವನ್ನು ತೋರಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿರುವುದನ್ನು ಕಾಣಬಹುದು.
                ತಮ್ಮೆಲ್ಲಾ ಮಾತುಗಳಲ್ಲಿ ಅಡುಗೆಯ ಕುರಿತು ಒಂದೆಡೆ ಉಲ್ಲೇಖ ಮಾಡುತ್ತಾರೆ - ತರಕಾರಿಯಲ್ಲಿ ಇತರ ಅವಶ್ಯವುಳ್ಳ ಮಸಾಲೆದ್ರವ್ಯಗಳೊಂದಿಗೆ ಸಂಸ್ಕರಿಸಿ ಪಾಕಗೊಳಿಸುವುದು ಅಡುಗೆ ಎನ್ನಿಸಿದೆ. ಆಹಾರದಲ್ಲಿ ತರಕಾರಿಗಳನ್ನು ಹೇಗೆಂದರೆ ಹಾಗೆ ಸೇರಿಸಿಕೊಂಡರೆ ತೊಂದರೆಗಳು ಹೆಚ್ಚಾಗಬಹುದು. ಅವನ್ನು ಕ್ರಮಬದ್ಧವಾಗಿ ಶುದ್ಧಿಗೊಳಿಸಿ, ಸಂಸ್ಕರಿಸಿ ಉಳಿದ ದ್ರವ್ಯಗಳೊಂದಿಗೆ ಶರೀರ ಮಾತ್ರವಲ್ಲದೆ ಮನಸ್ಸಿಗೂ ಹಿತವೆನ್ನಿಸುವಂತೆ ಅಳವಡಿಸಿಕೊಳ್ಳುವುದು ಅವಶ್ಯ. ತರಕಾರಿಯನ್ನು ಮನೆಯಲ್ಲೇ ಬೆಳೆಸಿ. ಮಾರುಕಟ್ಟೆಯಿಂದ ತಂದರೆ ನೀವು ರೋಗವನ್ನು ತಂದಂತೆ.
                ತನ್ನ ತೀರ್ಥರೂಪರು ನಿರ್ದೇಶಿಸಿದ ಹಾದಿಯಲ್ಲಿ ವೆಂಕಟರಾಮರು ಸಾಗಿದ್ದರು. ಸಿದ್ಧ ಪ್ರಶ್ನೆಗಳುಳ್ಳ ಮಾಹಿತಿ ಪತ್ರವನ್ನು ರೋಗಿ ಭರ್ತಿ ಮಾಡಿಕೊಡಬೇಕಾದುದು ಮೊದಲಾದ್ಯತೆ. ಇದರ ಆಧಾರದಲ್ಲಿ ರೋಗಪತ್ತೆ. ರೋಗಕ್ಕೆ  ಬೇಕಾದ ಮೂಲಿಕೆಗಳನ್ನು ಬರೆದುಕೊಟ್ಟು, ಔಷಧ ತಯಾರಿ ವಿಧಾನವನ್ನು ತಿಳಿಸುತ್ತಿದ್ದರು. ಪಾರಂಪರಿಕವಾಗಿ ಸೇವಾ ಭಾವದಿಂದ ಮೂಲಿಕಾ ಚಿಕಿತ್ಸೆಯನ್ನು ಮಾಡುತ್ತಿದ್ದ ದೈತೋಟರು ಚಿಕಿತ್ಸೆಗೆ ಶುಲ್ಕ ಸ್ವೀಕರಿಸುತ್ತಿದ್ದಿರಲಿಲ್ಲ. ಕಾಣಿಕೆ ಹುಂಡಿಗೆ ಯಥಾಶಕ್ತಿ ಹಾಕಲು ಸೂಚಿಸುತ್ತಿದ್ದರು. ವರುಷದ ಕೊನೆಗೆ ಈ ಮೊತ್ತವೆಲ್ಲವನ್ನೂ ಸೇರಿಸಿ 'ಧನ್ವಂತರಿ ಹವನ' ಮಾಡುತ್ತಿದ್ದರು.
                 ವೆಂಕಟ್ರಾಮರ ಮನೆಯಲ್ಲಿಯೇ ಇದ್ದು, ಚಿಕಿತ್ಸಾ ವಿಧಾನ, ಸಸ್ಯ ಹುಡುಕಾಟ, ರೋಗಿಗಳ ನಿರ್ವಹಣೆಯನ್ನು ಆಭ್ಯಸಿಸಿದ ವೀಣಾ ರಮಾನಂದ ಸಾಗರದಲ್ಲಿ ಮೂಲಿಕಾ ವೈದ್ಯರಾಗಿದ್ದಾರೆ. ಅನ್ನಪೂರ್ಣ ದೈತೋಟ, ಸ್ವರ್ಣಲತಾ ಮುಂಡೂರು, ಲಲಿತಾ ತೆಂಕಿಲ ಪುತ್ತೂರು, ಅನ್ನಪೂರ್ಣ ನೆಲ್ಲಿಕಳೆಯ, ಹೈಮಾವತಿ ಪಾಲೆಪ್ಪಾಡಿ, ತಿರುಮಲೇಶ್ವರೀ ಸೂರ್ವೇಲು, ಅನ್ನಪೂರ್ಣ ಕಾರ್ಮಾರು, ಹರಿದಾಸನ್ ಪೆರ್ಲ - ಇವರೆಲ್ಲಾ ವೆಂಕಟ್ರಾಮರೊಂದಿಗಿದ್ದು ಮೂಲಿಕಾ ಜ್ಞಾನವನ್ನು ಅಭ್ಯಸಿಸಿದವರು.
                 ವೆಂಕಟರಾಮರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸನಿಹದ ಪಾಣಾಜೆಯವರು. ಇವರ ಅಜ್ಜ ವೈದ್ಯ ಶಂಕರನಾರಾಯಣ ಭಟ್ಟ. ಪ್ರಸಿದ್ಧ ಕಿಳಿಂಗಾರು ಮೆನತನ. ವೈದ್ಯ ಭಟ್ಟರೆಂದೇ ಖ್ಯಾತಿ. ಕೇರಳದ ಅಷ್ಟವೈದ್ಯರಲ್ಲೊಬ್ಬರಾಗಿದ್ದ ಪರಮೇಶ್ವರನ್ ಮೂಸ್ಸಾದ್ ಅವರಲ್ಲಿ ಆಯುರ್ವೇದ ಶಾಸ್ತ್ರದ ಕಲಿಕೆ. ಆಯುರ್ವೇದೀಯ ಔಷಧಗಳಲ್ಲಿ ಮೂಲದ್ರವ್ಯಗಳ ಅಭಾವವಿದ್ದಾಗ ಬಳಕೆಯಾಗುವ ಬದಕಲು ದ್ರವ್ಯಗಳ ವಿಚಾರವಾಗಿ ಏಕಾಂಗಿಯಾಗಿ ಸಂಶೋಧನೆ ಮಾಡಿದವರು.
              ತಂದೆ ಪಂಡಿತ ಶಂಕರನಾರಾಯಣ ಭಟ್. ಇವರು ಆಯುರ್ವೇದ ಮತ್ತು ಮೂಲಿಕಾ ತಜ್ಞ. ಜಾನಪದ,  ಪಾರಂಪರಿಕ ರಹಸ್ಯ ಮೂಲಿಕೆಗಳ ಕುರಿತು ವೃದ್ಧ ವೈದ್ಯರಿಂದ, ವೃದ್ಧ ಮಾತೆಯರಿಂದ, ನಾಡ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದರು. ಅಂತಹುಗಳನ್ನು ಪರಿಷ್ಕರಿಸಿ, ಪ್ರಯೋಗಿಸಿ, ಧನಾತ್ಮಕ ಪರಿಣಾಮ ಪಡೆದು ಆಯಾ ವೈದ್ಯರದೇ ಹೆಸರಿನಲ್ಲಿ ಪತ್ರಿಕೆಗಳ ಮೂಲಕ ಪ್ರಚುರಗೊಳಿಸಿದ್ದರು. ಮಗ ವೆಂಕಟರಾಮರಿಗೆ ಇವರದೇ ವ್ಯೆದ್ಯಹಾದಿ.
              ಪಾಣಾಜೆ ಪಂಡಿತ ಶಂಕರನಾರಾಯಣ ಭಟ್ಟರ ಮೂಲಿಕಾ ಜ್ಞಾನವನ್ನು ದಾಖಲಿಸುವ ಉದ್ದೇಶದಿಂದ ಮತ್ತು ಮೂಲಿಕಾ ವೈದ್ಯ ಪ್ರಚಾರಕ್ಕಾಗಿ 'ಆಯುರ್ವೇದ ಪ್ರಕಾಶನ'ವಿದೆ. ಆರೋಗ್ಯದಾನ ಕೈಪಿಡಿ, ಆರೋಗ್ಯ ಸಾಧನ, ಆರೋಗ್ಯ ಜೀವನ, ಗರ್ಭಿಣಿ-ಬಾಣಂತಿ-ಬಾಲೋಪಚಾರ, ಅಜ್ಜಿಮದ್ದು, ಮಧುದೀಪಿಕಾ, ತುಳು ವೈದ್ಯ ರತ್ನಮಾಲೆ ಮುಖ್ಯವಾದವುಗಳು. ಜಯಲಕ್ಷ್ಮೀ ವಿ. ರಾವ್ ಪ್ರಕಾಶನದಲ್ಲಿ 'ಅನ್ನ ಆರೋಗ್ಯ, ಔಷಧ' ಕೃತಿ, ಪುತ್ತೂರಿನ ವಿವೇಕಾನಂದ ಸಂಶೋಧನಾ ಕೇಂದ್ರದಿಂದ ಪ್ರಕಾಶಿತವಾದ 'ಔಷಧೀಯ ಸಸ್ಯ ಸಂಪತ್ತು' ಪ್ರಕಟಣೆಗಳು. ಮೊನ್ನೆಯಷ್ಟೇ ಬಿಡುಗಡೆಯಾದ 'ಅಡಿಕೆ ವಲಯದ ಹಸಿ ಮದ್ದುಗಳು' ಎನ್ನುವ ಪುಸ್ತಕವು ದೈತೋಟರ ಕನಸಿನ ಕೃತಿ. ಕಳೆದ ನಾಲ್ಕೈದು ತಿಂಗಳಿನಿಂದ ಇದರ ತಯಾರಿ ಕೆಲಸದಲ್ಲಿ ಮಗ್ನರಾಗಿದ್ದರು.
               ಮೂಲಿಕಾ ಜ್ಞಾನವು ದೈತೋಟರಿಗೆ ರಕ್ತದಲ್ಲಿ ಬಂದ ಬಳುವಳಿ. ಜತೆಗೆ ಬದ್ಧತೆಯ ಜೀವನದ ಸಂಸ್ಕಾರ. ಸರಳತೆ, ಪ್ರಾಮಾಣಿಕತೆಗಳು ಮಿಳಿತವಾದ ಬದುಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಯಾವುದೇ ಫಲಾಪೇಕ್ಷೆಯನ್ನು ಬಯಸದೆ,  ಮೂಲಿಕಾ ಜ್ಞಾನಪ್ರಸಾರಕ್ಕಾಗಿ ದುಡಿದ ಹಿರಿದೇಹವು ಜುಲೈ 21ರಂದು ಕಾಲದೊಂದಿಗೆ ಲೀನವಾಯಿತು. ಅವರೊಂದಿಗೆ ದಾಖಲಿಸಲಾಗದ ಅನೇಕ ಅಂಶಗಳೂ ಮರೆಯಾದುವು.
                 ಕೃಷಿ ಮಾಸಿಕ 'ಅಡಿಕೆ ಪತ್ರಿಕೆ'ಯಲ್ಲಿ ಇಪ್ಪತ್ತೇಳು ವರುಷದಿಂದ ಅಂಕಣಕಾರರಾಗಿದ್ದರು. ಹೊಸದಿಗಂತ ಪತ್ರಿಕೆಯಲ್ಲೂ ವಿವಿಧ ಲೇಖನಗಳನ್ನು ಬರೆದು ಜ್ಞಾನಪ್ರಸಾರ ಮಾಡುತ್ತಿದ್ದರು. 'ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿ. ರೋಗವನ್ನು ದೂರವಿಡಿ' ಎಂದು ಕಿವಿಹಿಂಡುವ ಹಿರಿಯರ ಕಣ್ಮರೆಯು ಲೇಖನಾರಂಭದಲ್ಲಿ ಉಲ್ಲೇಖಿಸಿದ ನಿಜಾರ್ಥದ 'ತುಂಬಲಾರದ ನಷ್ಟ.

Tuesday, September 12, 2017

ಒಂದೇ ಕ್ಲಿಕ್ಕಿನಲ್ಲಿ ನೆಲದ ಜ್ಞಾನ

ಉದಯವಾಣಿಯ 'ನೆಲದ ನಾಡಿ' ಅಂಕಣ / 23-6-2017

             ದ್ರಾಕ್ಷಿ ಬೆಳೆಯ ಪ್ರಾಥಮಿಕ ಮಾಹಿತಿ ಬೇಕಿತ್ತು. ನೀವು ಸಂಬಂಧಪಟ್ಟ ಕೃಷಿಕರನ್ನು ಹುಡುಕಾಡುತ್ತೀರಿ. ಸಂಪರ್ಕ ಸಾಧ್ಯವಾಗಿಲ್ಲ, ನಿರಾಶರಾಗುತ್ತೀರಿ. ಯಾವುದೋ ಪತ್ರಿಕೆಯಲ್ಲಿ ಓದಿದ ನೆನಪು, ಅದನ್ನು ತೆಗೆದಿಡುತ್ತಿದ್ದರೆ ಸಹಾಯವಾಗುತ್ತಿತ್ತು ಎಂದು ಕೈಕೈ ಹಿಸುಕುತ್ತೀರಿ. ಮಳೆಗಾಲ ಶುರುವಾಯಿತು, ಜಲಮರುಪೂರಣ ವಿಧಾನಗಳ  ಮಾಹಿತಿಗಾಗಿ ಹಳೆಯ ಪತ್ರಿಕೆಗಳನ್ನು ತಿರುವಿ ಹಾಕುತ್ತೀರಿ. ಸಕಾಲಕ್ಕೆ ಮಾಹಿತಿ ಸಿಗದೆ ಚಡಪಡಿಸುತ್ತೀರಿ. 'ಕೃಷಿ ಕನ್ನಡ ಡಾಟ್ ಕಾಮ್' (www.krishikannada.com ) ನಲ್ಲಿ ಈ ಗೊಂದಲಗಳಿಗೆ ಉತ್ತರಗಳಿವೆ. ಒಂದೆರಡು ಕ್ಲಿಕ್ಗಳಲ್ಲಿ ಮಾಹಿತಿಗಳು ಬೆರಳ ತುದಿಯಲ್ಲಿ ಕಾಣಸಿಗುತ್ತವೆ.
              ಈ ಕೃಷಿಸ್ನೇಹಿ ಜಾಲತಾಣವು ಸಾಗರದ ಕೃಷಿ ಕುಟುಂಬದ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಮತ್ತು ಪತ್ನಿ ಸೌಖ್ಯ ಮೋಹನ್ ಅವರ ಪರಿಕಲ್ಪನೆ ಮತ್ತು ಕನಸು. ನೆಲದ ಜ್ಞಾನವನ್ನು ಒಂದು ಕ್ಲಿಕ್ಕಿನಲ್ಲಿ ತೋರಿಸುವ ಯತ್ನ. ಪತ್ರಿಕೆಗಳಲ್ಲಿ ಪ್ರಕಟವಾದ ಕೃಷಿ ಲೇಖನಗಳ ಕಡತಗಳು ಏನಿಲ್ಲವೆಂದರೂ ಇಪ್ಪತ್ತೈದು ಸಾವಿರ ಮೀರಬಹುದು. ಅವೆಲ್ಲವೂ ನಿಕಟಭವಿಷ್ಯದಲ್ಲಿ ಜಾಲತಾಣವನ್ನು ಏರಲಿವೆ. ವಿಷಯ ವೈವಿಧ್ಯವನ್ನು ಹೊಂದಿಕೊಂದು ಈಗಾಗಲೇ ಸಾವಿರದೈನೂರಕ್ಕೂ ಮಿಕ್ಕಿ ಕಡತಗಳು ಏರಿವೆ.
              1995. ರಾಜಧಾನಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಮೋಹನ್ ಪಿಎಚ್ಡಿ ಮಾಡುತ್ತಿದ್ದರು. ಭಾರತೀಯ ಕೃಷಿ ಪರಂಪರೆಯತ್ತ ಯೋಚಿಸುವ ವಿದ್ಯಾರ್ಥಿ ಒಕ್ಕೂಟ 'ಚಿಂತನ ಬಳಗ'ದ ಪರಿಚಯ. ರಾಸಾಯನಿಕ ಕೃಷಿಗೆ ಪರ್ಯಾಾಯವಾಗಿ ಪರಿಸ್ನೇಹಿ ಕೃಷಿ ವಿಧಾನ, ಭಾರತೀಯ ಕೃಷಿ ಪರಂಪರೆಯ ಬಗ್ಗೆ ಚರ್ಚೆ. ಕೃಷಿಕರ, ಕೃಷಿಕಪರ ಪತ್ರಿಕೆಗಳಲ್ಲಿನ ಕೃಷಿ ಮಾಹಿತಿಗಳ ಪರಿಚಯ. ಪಿಎಚ್ಡಿ ನಂತರ ಸಂಶೋಧನಾ ಕೇಂದ್ರವೊಂದರಲ್ಲಿ ಭಾರತೀಯ ಸಸ್ಯವೈವಿಧ್ಯ ಗಣಕೀಕರಣದ ಯೋಜನೆಯ ಸಮನ್ವಯಕಾರರಾಗಿ ನಿಯುಕ್ತಿ. ಕೃಷಿ ಮಾಹಿತಿಗಳನ್ನೂ ಗಣಕೀಕರಿಸಬೇಕೆನ್ನುವ ಕನಸಿಗೆ ಮನಸಾ ಬೀಜಾಂಕುರ.
               ಕೃಷಿಯೇ ಜೀವ ವೈವಿಧ್ಯ ನಾಶಕ್ಕೆ ಬಹುಪಾಲು ಕಾರಣ ಎನ್ನುವ ಅಪವಾದ ಕೃಷಿ ಕ್ಷೇತ್ರಕ್ಕಿದೆ. ನಿಜಕ್ಕೂ ಜೀವ ವೈವಿಧ್ಯವನ್ನು ಉಳಿಸುತ್ತಿರುವುದು ಕೃಷಿಕರು ಎನ್ನುವ ಸ್ಪಷ್ಟ ಅರಿವು ಮೋಹನ್ ತಲೆಯಲ್ಲಿತ್ತು. ಇದಕ್ಕೆ ಬೆಳಕೊಡ್ಡುವುದು ಅನಿವಾರ್ಯ ಅನ್ನುವ ಯೋಚನೆ ಬಂದದ್ದೇ ತಡ, ನೆರವಿಗೆ ಬಂದುದು ಕೃಷಿ ಮಾಸಿಕ 'ಅಡಿಕೆ ಪತ್ರಿಕೆ'ಯ ಸಂಚಿಕೆಗಳು. ಜೀವವೈವಿಧ್ಯಕ್ಕೆ ಪೂರಕವಾಗಿರುವ ಲೇಖನಗಳೆಲ್ಲಾ ಒಂದೇ ಕಡೆ ಲಭ್ಯವಾದರೆ ಕೃಷಿಕರಿಗೆ ಸಹಕಾರಿ. ಅದು ಕಂಪ್ಯೂನಲ್ಲಿದ್ದರೆ ಏನು ಪ್ರಯೋಜನ? ಎಲ್ಲರಿಗೂ ಸಿಗುವಂತಾಗಲು ಜಾಲತಾಣ ರೂಪಿಸಲು ನಿರ್ಧಾರ ಮಾಡಿದೆ. ಹೆಚ್ಚು ಬಂಡವಾಳ ಬೇಡುವ ಕೆಲಸ. ಮೊದಲಿಗೆ ಅದಿತಿ ಆರ್ಗಾನಿಕ್ ಸರ್ಟಿಫಿಕೇಶನ್ ಸಂಸ್ಥೆಯ ಡಾ. ನಾರಾಯಣ ಉಪಾಧ್ಯಾಯರು ಉತ್ತೇಜನ ನೀಡಿದರು. ಒಂದಷ್ಟು ಸ್ನೇಹಿತರು ಸ್ಪಂದಿಸಿದರು ಎಂದು ಜಾಲತಾಣ ಆರಂಭದ ದಿನಮಾನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
             2013ರಲ್ಲಿ ಕೃಷಿ ಕನ್ನಡ ಜಾಲತಾಣ ಲೋಕಾರ್ಪಣೆ. ಚಾಲು ಆಗಲು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ವೆಚ್ಚವಾಗಿತ್ತು. ಆತ್ಮೀಯರ ಸಹಕಾರ, ಜತೆಗೆ ತನ್ನ ಗಳಿಕೆಯನ್ನು ಸೇರಿಸಿದ್ದರು. ಲಾಭೋದ್ದೇಶವಲ್ಲದ ಕಾಯಕ. ಕೃಷಿ ಹಿನ್ನೆಲೆಯವರಾದ್ದರಿಂದ ಕೃಷಿ ಕ್ಷೇತ್ರಕ್ಕೆ ಸೇವಾ ಭಾವದಿಂದ ಈ ಕೆಲಸಕ್ಕೆ ಕೈಯಿಕ್ಕಿದ್ದಾರೆ. ಜಾಲತಾಣ ರೂಪೀಕರಣದ ಮೊದಲು ನಾಲ್ಕೈದು ವರುಷದ ಸಿದ್ಧತೆಯನ್ನು ಮಾಡಿದ್ದರು. ಕನ್ನಡದ ಎಲ್ಲಾ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾದ ಕೃಷಿ ಲೇಖನಗಳನ್ನು ಸಂಗ್ರಹಿಸುತ್ತಾ ಬಂದರು. ಅದನ್ನು ಸ್ಕಾನ್ ಮಾಡಿ ಪಿಡಿಎಫ್ ಕಡತಗಳನ್ನಗಿ ಮಾರ್ಪಡಿಸಿದರು. ಮೋಹನ್ ಕಂಪ್ಯೂನಲ್ಲಿದ್ದ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿದ ಕಡತಗಳು ಜಾಲತಾಣ ಏರಲು ಕಾಯುತ್ತಿವೆ!
              ಅಡಿಕೆ ಪತ್ರಿಕೆ, ಸುಜಾತ, ಹಿತ್ತಲಗಿಡ, ಸಿರಿ ಸಮೃದ್ಧಿ, ಜಲಸಿರಿ, ಸಹಜ ಸಾಗುವಳಿ, ಶ್ರಮಜೀವಿ ಅಗ್ರಿಫಿಲ್ಮ್ಸ್ ಮತ್ತು ಎಲ್ಲಾ ದಿನಪತ್ರಿಕೆಗಳ ಸಂಪಾದಕರು ಜಾಲತಾಣದ ಉದ್ದೇಶವನ್ನು ಅರಿತು ಒಪ್ಪಿಗೆ ನೀಡಿದ್ದಾರೆ. ಸುಮನಸ್ಸಿಂದ ಸಹಕರಿಸಿದ್ದಾರೆ. ಆರ್ಥಿಕ ಲಾಭೋದ್ದೇಶ ಇಲ್ಲದ ಕಾರಣ ಬೆಂಬಲ ನೀಡಿದ್ದಾರೆ. ಎನ್ನುವ ಮೋಹನ್, ನಾಲ್ಕು ವರುಷಗಳಲ್ಲಿ ಸುಮಾರು ಆರು ಲಕ್ಷ ಮಂದಿ ಜಾಲತಾಣವನ್ನು ವೀಕ್ಷಿಸಿದ್ದಾರೆ, ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾರೆ.  ಕೃಷಿ ಕನ್ನಡ ಡಾಟ್ ಕಾಮ್ನಲ್ಲಿ ಹನ್ನೆರಡು ಘಟಕಗಳಿವೆ. ಮಾಹಿತಿ ಹುಡುಕಾಟ, ಪ್ರಶ್ನೋತ್ತರ, ಇ-ಮಾರುಕಟ್ಟೆ, ಚಿತ್ರಗಳ ಸಂಚಿ, ರೋಗ-ಕೀಟ ಪತ್ತೆ, ಕೃಷಿಕರ ಮತ್ತು ಕೃಷಿ ಪತ್ರಕರ್ತರ ವಿಳಾಸ, ಕೃಷಿ ವಿಜ್ಞಾನಿಗಳ ವಿಳಾಸ, ಉಪಯುಕ್ತ ವೆಬ್ಸೈಟ್ಗಳ ಕೊಂಡಿಗಳು, ಕೃಷಿ ಪುಸ್ತಕಗಳು.. ಹೀಗೆ. ಮಾಹಿತಿ ಘಟಕದಲ್ಲಿ ಕೃಷಿ ಲೇಖನವನ್ನು ಏರಿಸುವುದು, ಅದನ್ನು ವರ್ಗೀಕರಣ ಮಾಡುವುದು ಶ್ರಮ ಬೇಡುವ ಕೆಲಸ.
                ಪ್ರಶ್ನೋತ್ತರ ವಿಭಾಗ ಕುತೂಹಲಕರ. ವಿವಿಧ ನಮೂನೆಯ ಪ್ರಶ್ನೆಗಳನ್ನು ಅವಲೋಕಿಸಿದಾಗ ರೈತರ ಸಂಕಟ ಅರ್ಥವಾಗುತ್ತದೆ. ನಾನು ತಳಿ ವಿಭಾಗದಲ್ಲಿ ವಿಶೇಷಾಧ್ಯಯನ ಮಾಡಿದರೂ ಉತ್ತರಿಸಲು ಕಷ್ಟವಾಗುವಂತಹ ಪ್ರಶ್ನೆಗಳಿವೆ. ಅವಕ್ಕೆಲ್ಲಾ ಉತ್ತರ ಕೊಡಲೇ ಬೇಕಲ್ವಾ. ಇಂತಹ ಪ್ರಶ್ನೆಗಳನ್ನು ಬೇರೆ ತಜ್ಞರಿಗೆ ನೀಡಿ ಅವರಿಂದ ಉತ್ತರ ಪಡೆದು ಸಂಬಂಧಪಟ್ಟ ಕೃಷಿಕರಿಗೆ ಉತ್ತರ ರವಾನಿಸಬೇಕಾಗುತ್ತದೆ. ಉದಾ? ದ್ರಾಕ್ಷಿ ನಮಗೆ ಹೊಸತು. ಇದಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಉತ್ತರ ಕಷ್ಟಕರ. ಇಂತಹ ಸಂದರ್ಭದಲ್ಲಿ ದ್ರಾಕ್ಷಿ ಬೆಳೆಗೆ ಸಂಬಂಧಪಟ್ಟ ವಿಷಯ ತಜ್ಞರಲ್ಲಿ ಸಮಾಲೋಚಿಸಿ ಉತ್ತರ ಪಡೆಯುತ್ತೇನೆ. ಮುಖ್ಯವಾಗಿ ರೋಗ-ಕೀಟಗಳ ಕುರಿತು ಪ್ರಶ್ನೆಗಳೇ ಅಧಿಕ. "ನನ್ನ ಸ್ನೇಹ ವಲಯದಲ್ಲಿ ಕೃಷಿಕರಿದ್ದಾರೆ, ಸ್ನೇಹಿತರಿದ್ದಾರೆ, ತಜ್ಞರಿದ್ದಾರೆ. ಕೃಷಿ ತಜ್ಞರಿಂದಲೂ ಉತ್ತರ ಕಷ್ಟವಾದಾಗ ಅನುಭವಿ ಕೃಷಿಕರ ಸಹಕಾರ ಪಡೆಯುತ್ತೇನೆ. ವಿಜ್ಞಾನಿಗಳ ಜ್ಞಾನದೊಂದಿಗೆ ರೈತರ ಜ್ಞಾನವನ್ನು ಮಿಳಿತಗೊಳಿಸುವ ಚಿಕ್ಕ ಯತ್ನವಷ್ಟೇ." ಮೋಹನರ ಈ ಅಭಿಪ್ರಾಯದ ಒಳತೋಟಿಯನ್ನು ಗಮನಿಸಿದಾಗ ಮಾಹಿತಿ ಮತ್ತು ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ವ್ಯವಸ್ಥೆಗಳು ವಿಫಲವಾಗುತ್ತಿರುವ ಸುಳಿವು ಸಿಗುತ್ತಿದೆ.
               ಸಮಸ್ಯೆಗಳಿಗೆ ಪರಿಹಾರ ಕೋರಿದ ಸಾವಿರದಷ್ಟು ಕೃಷಿಕರಿಗೆ ಮಿಂಚಂಚೆಯಲ್ಲಿ ಉತ್ತರ ನೀಡಿದ್ದಾರೆ. ಅದಕ್ಕೆ ಪೂರಕವಾದ ಪ್ರಕಟಿತ ಲೇಖನಗಳ ಕಡತಗಳನ್ನೂ ಕಳಿಸುತ್ತಾರೆ. ಉದಾ: ಹೆಬ್ಬೇವು ಕೃಷಿ ಮಾಹಿತಿಯನ್ನು ಒಬ್ಬರು ಅಪೇಕ್ಷೆ ಪಟ್ಟಿದ್ದಾರೆ ಎನ್ನೋಣ. ಮೋಹನರ ಕಂಪ್ಯೂನಲ್ಲಿರುವ ಕಡತದಿಂದ ಹತ್ತಾರು ಹೆಬ್ಬೇವು ಲೇಖನಗಳನ್ನು ಕಳುಹಿಸಿಕೊಡುತ್ತಾರೆ. ಇಷ್ಟಕ್ಕೂ ಮಾಹಿತಿ ಸಾಲದು ಎಂದಾದರೆ ಕೃಷಿಕರೇ ಫೋನ್ ಮೂಲಕ, ವಾಟ್ಸಪ್ ಮೂಲಕ ಸಂಪರ್ಕಿಸುತ್ತಾರೆ. ಫೇಸ್ಬುಕ್ಕನ್ನು ಬಳಸುವವರಿದ್ದಾರೆ. ಈ ತಾಣಗಳ ಮೂಲಕ ಬಂದ ಪ್ರಶ್ನೆ, ಮಾಹಿತಿಗಳಿಗೆ ಸೌಖ್ಯ ಮೋಹನ್ ಉತ್ತರಿಸುತ್ತಾರೆ.
               ಜಾಲತಾಣದಲ್ಲಿರುವ ಮಾಹಿತಿಗಳು ಕನ್ನಾಡಿಗೆ ಯಾಕೆ ಸೀಮಿತ? "ಆಂಗ್ಲ ಭಾಷೆಯದನ್ನೂ ಸೇರಿಸಬಹುದಲ್ಲಾ? ಕನ್ನಡ  ನಾಡಿನ ರೈತರು ಅನ್ವೇಷಣೆ ಮಾಡಿದ ಜ್ಞಾನವನ್ನು ದಾಖಲಿಸುವ ಮತ್ತು ಕನ್ನಾಡಿನ ಕೃಷಿಕರಿಗೆ ಒದಗಿಸುವ ಉದ್ದೇಶ ನಮ್ಮದು. ಯಾವುದೇ ಅರ್ಥಿಕ ಗಳಿಕೆಯ ಉದ್ದೇಶವಿಲ್ಲ. ಜಾಹೀರಾತಿಗಾಗಿ ವಿಶೇಷ ಶ್ರಮ ಹಾಕಲು ಪುರುಸೊತ್ತಿಲ್ಲ. ಆಸಕ್ತರು ಮುಂದೆ ಬಂದರೆ ಪರಿಶೀಲಿಸಬಹುದೇನೋ. ಪ್ರತೀ ವರುಷ ಮೂವತ್ತು ಸಾವಿರ ರೂಪಾಯಿ ಜಾಲತಾಣ ನಿರ್ವಹಣೆಗೆ ಬೇಕಾಗುತ್ತದೆ," ಎನ್ನುತ್ತಾರೆ ಮೋಹನ್ ತಲಕಾಲುಕೊಪ್ಪ.
                 ಜಾಲತಾಣ ಇನ್ನೂ ಅಭಿವೃದ್ಧಿಯಾಗಬೇಕು. ವಿನ್ಯಾಸ ಸುಧಾರಿಸಬೇಕು. ಮಾಹಿತಿ ತುಂಬುತ್ತಾ ಇರಬೇಕು. ಅದು ಸದೃಢವಾಗಲು ಆರ್ಥಿಕ ಚೈತನ್ಯ ಬೇಕು. ತಾಣದಲ್ಲಿರುವ ಘಟಕಗಳ ಬಳಕೆಯನ್ನು ಹಗುರಗೊಳಿಸಬೇಕು. ಆಡಿಯೋ, ವೀಡಿಯೋ, ಯಂತ್ರೋಪಕರಣಗಳು, ಹೋಮ್ಸ್ಟೇ ಮಾಹಿತಿ.. ಇವನ್ನೆಲ್ಲಾ ಕಾಲ ಕಾಲಕ್ಕೆ ಒದಗಿಸಬೇಕು. ಮೋಹನ್ ಮತ್ತು ಸೌಖ್ಯರ ತಲೆತುಂಬಾ ಇರುವ ಯೋಜನೆಗಳಿವು. ಕೃಷಿ ಪತ್ರಕರ್ತರು ನಮ್ಮ ಯಾದಿಯನ್ನು ಜಾಲತಾಣಕ್ಕೆ ನೀಡಿದ್ದಾರೆ. ಕೃಷಿಕರು ಒದಗಿಸಿದ್ದಾರೆ. ಕೃಷಿ ವಿಜ್ಞಾನಿಗಳು ಅವರಾಗಿಯೇ ಮಾಹಿತಿ ಕೊಟ್ಟಿರುವುದು ಕಡಿಮೆ, ಎನ್ನುತ್ತಾರೆ ಮೋಹನ್.
               ಕೃಷಿ ಕನ್ನಡ ಡಾಟ್ ಕಾಮ್ - ಇದರ ಒಟ್ಟೂ ವ್ಯವಸ್ಥೆಯು ಕೃಷಿ ಸ್ನೇಹಿಯಾಗಿದೆ. ಕೃಷಿ ಹಿನ್ನೆಲೆಯ ಮೋಹನ್, ಕೃಷಿಕರಿಗಾಗಿ ಏನಾದರೂ ಮಾಡಬೇಕೆನ್ನುವ ತುಡಿತವು ಅವರನ್ನು ಜಾಲತಾಣದ ರೂಪೀಕರಣಕ್ಕೆ ಪ್ರೇರಣೆ ನೀಡಿತು. ಅಮೇರಿಕಾದ ನಾಗೇಂದ್ರ, ಶಿರಸಿ ಅರಣ್ಯ ಕಾಲೇಜಿನ ಡಾ.ವಾಸುದೇವ, ಶಿರಸಿಯ ಟಿ.ಎಸ್.ಎಸ್., ಎರಾ ಆರ್ಗಾನಿಕ್ ಇದರ ಜಯರಾಮ್, ಸಹಜ ಸಮೃದ್ಧದ ಕೃಷ್ಣ ಪ್ರಸಾದ್, ಶ್ರೀ ಪಡ್ರೆ.. ಮೊದಲಾದವರ ಉತ್ತೇಜನ ಸಿಗದಿದ್ದರೆ ಜಾಲತಾಣ ಶುರುವಾಗುತ್ತಲೇ ಇರಲಿಲ್ಲ, ಎಂದು ಮೋಹನ್ ವಿನೀತರಾಗುತ್ತಾರೆ.

Sunday, September 10, 2017

ಮಣ್ಣಿಗೆ ದನಿಯಾಗುವ ತುತ್ತಿನ ಕತೆಗಳು

ಉದಯವಾಣಿಯ - ನೆಲದ ನಾಡಿ - ಅಂಕಣ / 6-7-2017

             1863. ಅಮೇರಿಕಾದಲ್ಲಿ ಯುದ್ಧದ ಕಾರ್ಮೋಡ. ಅದೇ ಸಮಯಕ್ಕೆ ಹತ್ತಿಯ ಬೇಡಿಕೆ ಏರಿತ್ತು. ರೈತರು ಆಕರ್ಷಕ ಬೆಲೆಯಿಂದ ಉತ್ತೇಜಿತರಾದರು. ಆಹಾರ ಧಾನ್ಯಗಳನ್ನು ಮರೆತರು. ಹಣದ ಮೋಹದಿಂದ ಹತ್ತಿಯನ್ನು ಬೆಳೆದರು. ಕಿಸೆ ಭರ್ತಿಯಾಯಿತು. ಊಟದ ಬಟ್ಟಲು ಬರಿದಾಯಿತು. ಇತ್ತ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ(ಕಾನಡಾ ಜಿಲ್ಲೆ)ಯ ಕಾಡುಗಳಲ್ಲಿ ಬಿದಿರು ಹೂವರಳಿಸಿತ್ತು! ಬಡವರು ಬಿದಿರಕ್ಕಿ ತಿಂದು ಹೊಟ್ಟೆ ತುಂಬಿಸಿಕೊಂಡರು. ಹಲವಾರು ಮಂದಿ ವಲಸೆ ಬಂದರು.
            1876-77. ಕನ್ನಾಡಿನಲ್ಲಿ ಭೀಕರ ಬರ. ತುತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಹುಣಸೆ ಎಲೆ, ವಳಮುಚ್ಚಗ, ತೊಡಸಿ ಎಲೆ, ಹಿಟಗೋನಿ ಹುಲ್ಲು ಮುಂತಾದ ಕಾಡುತ್ಪನ್ನಗಳು ಆಹಾರವಾದುವು. ಹಳ್ಳಿಗಳಲ್ಲಿ ಗಂಜಿ ಕೇಂದ್ರಗಳು ತೆರೆಯಲ್ಪಟ್ಟವು. ಮಾನಕ್ಕೆ ಅಂಜುತ್ತಿದ್ದ ಕಾಲಘಟ್ಟವದು. ಊಟ ಲಭ್ಯವೆಂದು ಸರಕಾರಿ ಉದ್ಯೋಗಕ್ಕೆ ಸೇರಿಕೊಂಡರೆ ತಮ್ಮ ಮಾನ ಹೋಗುತ್ತದೆಂಬ ನಂಬುಗೆ. ಹಾಗಾಗಿ ಹಲವರು ಮನೆಯಲ್ಲಿ ಉಳಿದು ಹಸಿವೆಯಿಂದ ಸತ್ತರಂತೆ! ಬರವನ್ನು ತಾಳಿಕೊಳ್ಳದೆ ಅನೇಕರು ಗುಳೆ ಹೋದವರು ಮತ್ತೆ ಮರಳಲಿಲ್ಲ. ವಿಜಾಪುರದಲ್ಲಿ ಅಜೂಬಾಜು ಎರಡುಕಾಲು ಲಕ್ಷ ಮತ್ತು ಬೆಳಗಾವಿಯಲ್ಲಿ ಒಂದೂವರೆ ಲಕ್ಷದ ಹತ್ತಿರ ಜನರು ಸಾವನ್ನಪ್ಪಿದ್ದರು. ಆ ಕಾಲದಲ್ಲಿ  ದೇಶದ ಉತ್ತರ ಜಿಲ್ಲೆಗಳಲ್ಲಿ ಆಹಾರ ದಾನ್ಯಗಳ ಸಂಗ್ರಹಗಳಿದ್ದುವು. ಅವನ್ನು ಇಲ್ಲಿಗೆ ಸಾಗಿಸಲು ಸಾರಿಗೆ ಸಮಸ್ಯೆ. ಸೊಲ್ಲಾಪುರದಿಂದ ವಿಜಾಪುರಕ್ಕೆ ತಕ್ಕಡಿಗಳಲ್ಲಿ ಕಾಳುಗಳನ್ನು ಸಾಗಿಸಿದ್ದರು.
           ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದ ಮೇಜರ್ ಸ್ಯಾಂಕಿ ರಾಜ್ಯಗಳ ಕೆರೆಗಳಲ್ಲಿರುವ ಹೂಳು ತೆಗೆಯುವುದು, ಕಾಲುವೆಗಳ ದುರಸ್ತಿ ಸಂಬಂಧ 1866ರಲ್ಲಿ ಅಧ್ಯಯನ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದರು. ನಲವತ್ತೆಂಟು ಲಕ್ಷ ರೂಪಾಯಿಯಲ್ಲಿ 19223 ಕೆರೆಗಳ ಹೂಳು ತೆಗೆಯುವ ಯೋಜನೆಯದು. ನೋಡಿ, ಶುರುವಾಯಿತು ಚರ್ಚೆ! ಹೂಳು ತೆಗೆಯುವ ಕೆಲಸ ಇಂಜಿನಿಯರ್ ಇಲಾಖೆಯದ್ದೋ, ಕಂದಾಯ ಇಲಾಖೆಯದ್ದೋ? ಹತ್ತು ವರುಷವಾದರೂ ಇತ್ಯರ್ಥವಾಗಲಿಲ್ಲ. 1876ರಲ್ಲಿ ಬರಗಾಲ ಒಕ್ಕರಿಸಿತು. ಕೆರೆಗಳ ಹೂಳು ತೆಗೆಯಲು ಯೋಜಿಸಿದ ಮೊತ್ತವೆಲ್ಲ ಗಂಜಿಕೇಂದ್ರಕ್ಕೆ ವೆಚ್ಚವಾಯಿತು. ಹಣದ ಕೊರತೆಯಿಂದ ಸ್ಯಾಂಕಿ ವರದಿ ಫೈಲ್ ಸೇರಿತು. ಇಂದಿಗೂ ಕಾವೇರಿ ಕಣಿವೆಯ ಕೆರೆಗಳ ಹೂಳು ತೆಗೆಯುವ ಯೋಜನೆ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಬರಗಾಲವು ಹೇಗೆ ನೀರಾವರಿ ಸುಧಾರಣೆಗೆ ತಡೆಯುಂಟು ಮಾಡಿತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ.
          ಹೀಗೆ ಪರಿಸರ ಪತ್ರಕರ್ತ ಶಿರಸಿಯ ಶಿವಾನಂದ ಕಳವೆಯವರು ಬರದ ಇತಿಹಾಸವನ್ನು ದಾಖಲಿಸುತ್ತಾರೆ. ಚರಿತ್ರೆಯ ಪುಟ ತೆರೆದರೆ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ತೀವ್ರ ಬರಗಾಲ ಬಂದಿರುವುದು ಕಡಿಮೆ. ಆದರೆ 1805ರ ದಾಖಲೆಯ ಪ್ರಕಾರ ಬರದ ಸೀಮೆಯ ಜನ, ಜಾನುವಾರುಗಳು ಮಲೆನಾಡು ಪ್ರದೇಶಕ್ಕೆ ವಲಸೆ  ಬಂದಿರುವುದರಿಂದ ಇಲ್ಲಿ ಆಹಾರ ಸಮಸ್ಯೆಯಾಗಿತ್ತೆಂದು ವರದಿ ತಿಳಿಸುತ್ತದೆ. ಆ ವರುಷ ಸುಮಾರು ಮೂರು ಸಾವಿರ ಮಂದಿ ಸಾವನ್ನಪ್ಪಿದ್ದರು. ಬಯಲು ಸೀಮೆಗಳಲ್ಲಿ 1803ರಲ್ಲಿ ಪುಂಡುತನ ಮಿತಿಮೀರಿ ಸಿಕ್ಕಿದ್ದನ್ನು ದೋಚುವ ಪರಿಸ್ಥಿತಿ ನಿರ್ಮಾಣವಾಯಿತು. ಇದೇ ಸಂದರ್ಭಕ್ಕೆ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿ ಬರ ಒಕ್ಕರಿಸಿತು. ಮನುಷ್ಯರ ಆಹಾರವಾಗಿ ರಾಗಿ ಮಾತ್ರ ಅಂದು ಉಳಿಯಿತು
            1853-54ರ 'ಡೌಗಿ ಬರ'ವನ್ನು ಶಿವಾನಂದ ಕಳವೆ ದಾಖಲಿಸುತ್ತಾರೆ. ಈ ಅವಧಿಯಲ್ಲಿ ಜಾನುವಾರುಗಳಿಗೆ ಆಹಾರದ ಬರ. ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಸಾವನ್ನಪ್ಪಿದುವು. ಎಲ್ಲೆಂದರಲ್ಲಿ ಎಲುಬುಗಳ ರಾಶಿ! ಗಾಡಿ ಎಳೆಯುವುದಕ್ಕೆ, ಭೂಮಿಯನ್ನು ಉಳುಮೆ ಮಾಡುವುದಕ್ಕೆ ಎತ್ತುಗಳನ್ನು ಜನರು ನಂಬಿದ್ದ ಕಾಲವದು. ಇದಕ್ಕಿಂತಲೂ ಹಿಂದೆ ಹೋದರೆ, 1791ರಲ್ಲಿ ರಾಜ್ಯವನ್ನು ಡೌಗಿ ಬರ ಕಾಡಿತ್ತು. ಡೌಗಿ ಅಂದರೆ ತಲೆಬುರುಡೆ ಎಂದರ್ಥ. ಹನಿ ಮಳೆ ಸುರಿಯಲಿಲ್ಲ. ಹಳ್ಳಕೊಳ್ಳಗಳು ಒಣಗಿದ್ದುವು. ನೀರಿಗೆ ತತ್ವಾರ. ಹಳ್ಳಕೊಳ್ಳಗಳಲ್ಲಿ ಸಾವನ್ನಪ್ಪಿದವರ ತಲೆ ಬುರುಡೆಗಳು ಕಾಣಿಸುತ್ತಿದ್ದುದರಿಂದ ಡೌಗಿ ಬರವೆಂದು ಇದಕ್ಕೆ ಹೆಸರಾಯಿತು.
               ಇಂತಹ ಬರಗಾಲ ಬಂದಾಗ ಜನ ಏನು ತಿನ್ನುತ್ತಿದ್ದರು ಎನ್ನುವ ಮಾಹಿತಿಯನ್ನು ಬ್ರಿಟಿಷ್ ದಾಖಲೆಗಳಿಂದ ಶಿವಾನಂದ ಮೇಲೆತ್ತಿದ್ದಾರೆ. 1893ರ ಮುಂಬೈ ಇಲಾಖೆಗೆ ಸೇರಿದ ಗೆಝೇಟಿಯರಿನಲ್ಲಿ ಬರಗಾಲದ ಆಹಾರದ ದೊಡ್ಡ ಪಟ್ಟಿಯಿದೆ. ಕಾಡಿನ ಎಲೆ, ಚಿಗುರು, ಹಣ್ಣು, ಗೆಡ್ಡೆಗಳನ್ನು ತಿಂದು ಬದುಕಿದ ಮಾಹಿತಿಯಿದೆ. ಈಗಲೂ ಬರ ನಮ್ಮನ್ನು ಕಾಡುವುದಿದೆ. ರಸ್ತೆ, ಸಾರಿಗೆ, ಆರೋಗ್ಯ, ಶಿಕ್ಷಣ ಸೌಲಭ್ಯವಿರುವ ಈ ಕಾಲದಲ್ಲಿ ಬರದ ಕಷ್ಟದ ಅನುಭವ ಕಡಿಮೆ.
ಶಿವಾನಂದ ಕಳವೆ ಪರಿಸರ ಪತ್ರಕರ್ತ. ಕಾಲಿಗೆ ಚಕ್ರ ಕಟ್ಟಿಕೊಂಡು ಕನ್ನಾಡಿನಾದ್ಯಂತ ಓಡಾಡುವವರು. ಕೃಷಿ ಪ್ರವಾಸವನ್ನು ದೀಕ್ಷೆಯ ತರಹ ಅನುಷ್ಠಾನಿಸುವವರು. ಹೊಲ, ಹಳ್ಳಿಗಳಿಗೆ ಭೇಟಿ ನೀಡುತ್ತಾರೆ. ರೈತರ ಜತೆ ಕುಳಿತು ಮಾತನಾಡುವಾಗ ಗಮನಿಸಿದ ಹಲವಾರು ವಿಚಾರಗಳನ್ನು ದಾಖಲಿಸುತ್ತಾರೆ. ಸುಕೊ ಬ್ಯಾಂಕ್ ಪ್ರಾಯೋಜಿಸುತ್ತಿರುವ ಸುಕೃತ ಕೃಷಿ ಪ್ರಶಸ್ತಿ ಸಮಿತಿಯ ಸಂಚಾಲಕ. ಪ್ರಶಸ್ತಿ ಆಯ್ಕೆ ಹಿನ್ನೆಲೆಯಲ್ಲಿ ನಾಡಿನ ಕೃಷಿ ಸಾಧಕರನ್ನು ಭೇಟಿ ಮಾಡುತ್ತಾ, ಅವರ ಬದುಕನ್ನು ದಾಖಲಿಸುವುದರೊಂದಿಗೆ, ಕನ್ನಾಡಿನ ಕೃಷಿ ಬದುಕನ್ನೂ ಅಕ್ಷರಕ್ಕಿಳಿಸುವ ಯತ್ನ. ಅವರ ಎರಡು ಕರ್ನಾಟಕ ಕೃಷಿ ಪ್ರವಾಸ ಕಥನ 'ಮಣ್ಣಿನ ಓದು ಮತ್ತು ಒಂದು ತುತ್ತಿನ ಕತೆ'ಯಲ್ಲಿ ಕೃಷಿ ನೋಟಗಳು, ಕೃಷಿ ಬದುಕಲ್ಲದೆ ತನ್ನ ಸಂಗ್ರಹಿತ ದಾಖಲೆಗಳತ್ತ ನೋಟ ಹರಿಸಿದ್ದಾರೆ. (ಪ್ರಕಾಶನ - ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ) ಕನ್ನಾಡಿನ ನೆಲದ ಇತಿಹಾಸಗಳ ಅಧ್ಯಯನಕ್ಕೆ ಸಹಕಾರಿ.
                 ಶಿವಾನಂದರ ಸಂಗ್ರಹದಲ್ಲಿ ಕೃಷಿ ಕಥನಗಳಲ್ಲದೆ ಕೃಷಿ ಸಂಬಂಧಿ ದಾಖಲೆಗಳಿವೆ. ಅವರ ಬಹುತೇಕ ಲೇಖನಗಳಲ್ಲಿ ಉಲ್ಲೇಖವಾಗುವ ದಾಖಲೆಗಳು ಲೇಖನಗಳಿಗೆ ಪುಷ್ಟಿಯನ್ನು ಕೊಟ್ಟಿವೆ. ಉದಾ: ಕೆನರಾ ಜಿಲ್ಲೆಯ ಕಲೆಕ್ಟರ್ ಎಚ್.ಡಿ.ಭಾಸ್ಕರವಿಲ್ಲೆ 1928ರಲ್ಲಿ ಬರೆದ ಸರ್ವೆ ಸೆಟ್ಲ್ಮೆಂಟ್ ವರದಿ - 'ಕೃಷಿಕರ ಸರ್ವಸಾಧಾರಣ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಬಹುತೇಕ ಮಂದಿ ಸಾಲದಲ್ಲಿದ್ದಾರೆ. ಈ ಸಾಲವೇ ಕೃಷಿಯ ಹೀನಾವಸ್ಥೆಗೆ ಕಾರಣವಾಗಿದೆ. ಸಹಕಾರಿ ಸಂಘಗಳ ಸ್ಥಾಪನೆಯೇ ಇದಕ್ಕಿರುವ ದಾರಿ'. ಖಾಸಗಿ ವ್ಯಾಪಾರಿ, ದಲ್ಲಾಳಿಗಳಿಂದ ಬೆಳೆಗಾರರನ್ನು ರಕ್ಷಿಸುವುದು ಅಂದಿನ ಪ್ರಮುಖ ಸವಾಲಾಗಿತ್ತು.
                ದಾಖಲೆಗಳು ಭೂತಕಾಲದ ಒಂದು ಘಟನೆಯಾಗಿಯೋ, ಸಾಕ್ಷಿಯಾಗಿಯೋ ಒದಗುತ್ತದೆ. ಅದೇ ರೀತಿ ಒಂದು ಹಳ್ಳಿಯ ನೀರಿನ ಚಿತ್ರಣಗಳನ್ನು ಅಂಕಿಅಂಶ ಸಹಿತ ಮುಂದಿಡುತ್ತಾರೆ ಕಳವೆ. ರಾಣಿಬೆನ್ನೂರಿನ ಜೋಯಿಸರ ಹರಳಹಳ್ಳಿಯು ಸುಮಾರು ಐದು ಸಾವಿರ ಜನಸಂಖ್ಯೆ ಇರುವ ಹಳ್ಳಿ. ಏಳುನೂರು ಮನೆಗಳಿವೆ. 1974ರ ಮಾರ್ಚ್ 7ರಂದು ಹಳ್ಳಿಯಲ್ಲಿ ಮೊದಲ ಕೊಳವೆ ಬಾವಿಯ ಕೊರೆತ. ಎಂಭತ್ತೈದು ಅಡಿ ಆಳದ ಬಾವಿಗೆ ಐದು ಸಾವಿರದ ಒಂಭೈನೂರು ರೂಪಾಯಿ ವೆಚ್ಚವಾದ ಬಗ್ಗೆ ಕೃಷಿಕ ಸಂಗಪ್ಪ ಬಣಕಾರ್ ದನಿಯಾಗುತ್ತಾರೆ. ಅದೇ ಜಾಗದಲ್ಲಿ ಇಂದೇನಾದರೂ ಬಾವಿ ಕೊರೆದರೆ ಮೂನ್ನೂರು ಅಡಿಯಲ್ಲಿ ನೀರು ಸಿಗುವುದು ಸಂಶಯ. ಈ ಹಳ್ಳಿಯಲ್ಲಿ ಸುಮಾರು ಆರುನೂರಕ್ಕೂ ಮಿಕ್ಕಿ ಕೊಳವೆ ಬಾವಿಗಳಿವೆ. ಇವುಗಳಲ್ಲಿ ತೊಂಭತ್ತರಲ್ಲಿ ಮಾತ್ರ ನೀರಿದೆ! ಇಪ್ಪತ್ತೈದು ಮೂವತ್ತು ಕೊಳವೆ ಬಾವಿಗಳನ್ನು ಕೊರೆಸಿ ನಿಟ್ಟುಸಿರು ಬಿಟ್ಟವರಿದ್ದಾರೆ.
               1983-86ರಲ್ಲಿ ಈ ಹಳ್ಳಿಯು ನೀರಿನ ಬರವನ್ನು ಎದುರಿಸಿತ್ತು. ಇಲಾಖೆಯು ಸತವಾಗಿ ನಾಲ್ಕು ವರುಷ ಟ್ಯಾಂಕರ್ ನೀರನ್ನು ಪೂರೈಸಿತ್ತು. ಮೂರು ದಶಕಗಳಿಂದ ಬೀಜೋತ್ಪಾದನೆಗೆ ಖ್ಯಾತಿ ಪಡೆದ ರಾಣಿಬೆನ್ನೂರಿನ ಈ ಸೀಮೆಯು ವಿವಿಧ ಕಂಪನಿಗಳ ಆಡುಂಬೊಲ. ಇದೊಂದೇ ಹಳ್ಳಿಯಲ್ಲಿ ಹದಿನೈದಕ್ಕೂ ಮಿಕ್ಕಿ ಗ್ರೀನ್ಹೌಸ್ಗಳಿವೆ. ಟೊಮೆಟೊ, ಹೀರೆ, ಬದನೆ, ತುಪ್ಪದಹೀರೆ, ಹಾಗಲ, ಕುಂಬಳ, ಮೆಣಸು, ಚೆಂಡುಹೂಗಳ ಬೀಜೋತ್ಪಾದನೆ ನಡೆದಿದೆ. ಹತ್ತಿ, ಗೋವಿನ ಜೋಳದ ವಾಣಿಜ್ಯ ಬೆಳೆಗಳು ಪ್ರವೇಶಿಸಿವೆ. ದಾರಿಯಲ್ಲಿ ನೀರಿನ ಒರತೆಯಿರುವ ಈ ಹಳ್ಳಿಗೆ ನೀರಿನ ದುಃಸ್ಥಿತಿ ಹೇಗೆ ಬಂತು ಎನ್ನುವುದಕ್ಕೆ ಅಲ್ಲಿನ ಬೆಳೆಗಳು ದೃಷ್ಟಾಂತವಾಗಿ ಸಿಗುತ್ತದೆ.
            ಶಿವಾನಂದ ಕಳವೆ ಹಳ್ಳಿಯ ಕತೆಗಾಗಿ ಓಡುತ್ತಿದ್ದಾರೆ. ಒಂದೊಂದು ಕತೆಯನ್ನು ಮಾತುಕತೆಯಲ್ಲಿ ಹೆಣೆಯುತ್ತಾರೆ. ಅದರಲ್ಲಿ ಕೃಷಿ ಬದುಕು, ನೋವು, ಸುಖ, ಅಭಿವೃದ್ಧಿ, ಸಾಮಾಜಿಕ ಕಳಕಳಿಗಳಿವೆ. ಮುಖ್ಯವಾಗಿ ಹಳ್ಳಿಗೆ ದನಿಯಾಗುತ್ತಾರೆ. ಊಟದ ಬಟ್ಟಲಿನಿಂದ ಕೃಷಿಯ ವರೆಗೆ ವಿಷಯಗಳನ್ನು ಅರಸಿ, ಅಕ್ಷರ ಕಟ್ಟುವುದು ಅವರಿಗೆ ಸುಲಲಿತ. ಅದು ಮಣ್ಣು ಕಲಿಸಿದ ಜ್ಞಾನ.


Thursday, September 7, 2017

ಈ ದಂಪತಿಗೆಮಳೆ ನೀರಿನ ಮೋಹ


ಹೊಸದಿಗಂತದ - ಮಾಂಬಳ - ಅಂಕಣ / 12-7-2017

               ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶಪಾಲ ಡಾ.ಕೆ.ಎಸ್.ಮೋಹನ್ ನಾರಾಯಣ ನೀರಿನ ಪಾಠಕ್ಕೆ ಸಿದ್ಧರಾಗುತ್ತಿದ್ದಾರೆ! ಈ ವರುಷದ ಕೊನೆಗೆ ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ. ಮತ್ತೆ ಏನಿದ್ದರೂ ನೀರಿನದ್ದೇ ಪಾಠ. ಅವರ ಪತ್ನಿ ಪೂರ್ಣಿಮಾ. ಮನೆಯ ನೀರಾವರಿ ಸಚಿವೆ.
             ಉಜಿರೆ ಸನಿಹದ ಶಿವಾಜಿ ನಗರದಲ್ಲಿ ವಾಸವಿರುವ ಇವರಿಗೆ ಕುಡಿಯುವ ನೀರು ಮತ್ತು ಮನೆವಾರ್ತೆಗೆ ಬಾವಿಯ ನೀರೇ ಆಧಾರ. ಹನ್ನೆರಡು ವರುಷದಿಂದ ಚಾವಣಿಯ ಮೇಲೆ ಬಿದ್ದ ಮಳೆನೀರನ್ನು ಬಾವಿಗೆ ಮರುಪೂರಣ ಮಾಡುತ್ತಿದ್ದಾರೆ. ಈ ವರುಷದ ಮೇ-ಜೂನ್ ತಿಂಗಳಲ್ಲೂ ಬಾವಿಯ ನೀರು ಮೋಹನರ ಕೈ ಬಿಡಲಿಲ್ಲ.   
             ಚಾವಣಿಯ ನಾಲ್ಕನೇ ಮೂರು ಭಾಗದಲ್ಲಿ ಬಿದ್ದ ಮಳೆಯ ನೀರನ್ನು ಬಾವಿಗಿಳಿಸಲು ಪೈಪ್ ಜಾಲಗಳನ್ನು ಜೋಡಿಸಿದ್ದಾರೆ. ಬಾವಿಯ ಮೇಲೆ ತರಗಲೆ ಬೀಳದಂತೆ ಸಹಜವಾಗಿ ಜಾಲರಿ ಹಾಕಿರುತ್ತಾರೆ. ಅದರ ಮೇಲೆ ನೆರಳು ಬಲೆಯ ಹಾಸು. ಚಾವಣಿಯಿಂದ ಇಳಿದು ಬಂದ ಮಳೆಯ ನೀರು ಜಾಲರಿ, ನೆರಳುಬಲೆಯಲ್ಲಿ ಸೋಸಿಕೊಂಡೆ ಬಾವಿಗಿಳಿಯುತ್ತದೆ. ಮೊದಲ ಒಂದೆರಡು ಮಳೆಯ ನೀರನ್ನು ಬಾವಿಗಿಳಿಸುವುದಿಲ್ಲ. ಅದನ್ನು ಹೊರಗೆ ಕಳಿಸಲು ಗೇಟ್ವಾಲ್ವ್ ವ್ಯವಸ್ಥೆ.
               ಚಾವಣಿಗೆ ನಾಲ್ಕಿಂದು ವ್ಯಾಸದ ಪಿವಿಸಿ ಪೈಪನ್ನು ಜೋಡಿಸಿದ್ದಾರೆ. ಎಲ್ಲಾ ಕಡೆ ಎರಡಿಂಚು ಪೈಪನ್ನು ಶಿಫಾರಸು ಮಾಡುತ್ತಾರೆ. ಇವರು ಉದ್ದೇಶ ಪೂರ್ವಕವಾಗಿಯೇ ನಾಲ್ಕಿಂಚು ಪೈಪನ್ನು ಅಳವಡಿಸಿದ್ದಾರೆ. ಒಂದು - ಕಸ, ಕಡ್ಡಿಗಳಿಂದ ಬ್ಲಾಕ್ ಆಗುವುದನ್ನು ತಪ್ಪಿಸಬಹುದು. ಇನ್ನೊಂದು ಮಳೆ ನಿಂತ ಕೂಡಲೇ ಚಾವಣಿಯ ನೀರೆಲ್ಲಾ ಬಾವಿಗೆ ಹರಿಯುತ್ತದೆ.  
              ಈ ವರುಷ ಚಾವಣಿಯ ಇನ್ನೊಂದು ಪಾಶ್ರ್ವಕ್ಕೂ ಪೈಪ್ ಅಳವಡಿಸಿದ್ದಾರೆ. 'ಚಾವಣಿಯ ಎಲ್ಲಾ ಮಳೆ ನೀರು ಬಾವಿ ಸೇರುತ್ತದೆ.' ಪೂರ್ಣಿಮಾ ಖುಷ್.    ಬಾವಿಗೆ ಜಲಮರುಪೂರಣ ಮಾಡಿದ್ದರ ಪರಿಣಾಮವಾಗಿ ಸುತ್ತಲಿನ ಬಾವಿಗಳಲ್ಲಿ ನೀರಿನ ಮಟ್ಟ ಏರಿದುದನ್ನು ಗಮನಿಸಿದ್ದಾರೆ. ಇವರಲ್ಲಿ ಎರಡು ಅಡಿ ಏರಿದರೆ, ಕೆಳಗಿನ ಮನೆಯವರ ಬಾವಿಯಲ್ಲಿ ಒಂದು ಅಡಿ ಏರುತ್ತದೆ ಎನ್ನುವ ಹಿಮ್ಮಾಹಿತಿ ಸಿಕ್ಕಿದೆ.
            ಮನೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಾಶಿಬೆಟ್ಟಿನ ಅಂಬೇಡ್ಕರ್ ನಗರದಲ್ಲಿ ಮೋಹನರಿಗೆ ಜಾಗವಿದೆ. 1.60 ಎಕ್ರೆಯ ಒಂದು ಪ್ಲಾಟ್. ತೀರಾ ಇಳಿಜಾರು. ಸುಮಾರಾಗಿ ತಿರುಗಿದ 'V'' ಯಂತಿದೆ. ಇನ್ನೊಂದು ಮತ್ತೊಂದು ಪಕ್ಕದಲ್ಲೇ ಎರಡು ಎಕ್ರೆ. ಒಂದು ಬದಿಗೆ ಇಳಿಜಾರು. ರಬ್ಬರ್ ಗಿಡ ಹಾಕಿದ್ದಾರೆ. ಎಲ್ಲವೂ ಟ್ಯಾಪಿಂಗಿಗೆ ಬಂದಿವೆ. ಸಹಾಯಕರ ಅಲಭ್ಯದಿಂದಾಗಿ ಈಗ ಟ್ಯಾಪಿಂಗ್ ಮಾಡುತ್ತಿಲ್ಲ. ಒಟ್ಟು 3.60 ಎಕ್ರೆ. ಮಾರ್ಗಕ್ಕೆ ತಾಗಿಕೊಂಡಿರುವ ಜಾಗದಲ್ಲಿ ಮನೆಯಿದೆ. ಹಿಂದಿನ ವರುಷ ಹೊಸತಾಗಿ ಕೊಳವೆ ಬಾವಿ ಕೊರೆದಿದ್ದಾರೆ.
            ತನ್ನ ಮತ್ತು ಪತ್ನಿಯ ಉಳಿತಾಯದ ಹಣವನ್ನು ವಿನಿಯೋಗಿಸಿ 1988ರಲ್ಲಿ ಜಾಗ ಖರೀದಿಸಿದ್ದರು. ಸುತ್ತೆಲ್ಲಾ ದಟ್ಟ ಕಾಡು. ನೀರಿನ ವ್ಯವಸ್ಥೆಯಿಲ್ಲದ ಪ್ರದೇಶ. 'ಇಲ್ಲಿ ಯಾಕೆ ಜಾಗ ಖರೀದಿ ಮಾಡಿದ್ರಿ' ಎಂದು ಅನ್ನುವವರೇ ಅಧಿಕವಾಗಿದ್ದರು.  ತೀರಾ ಇಳಿಜಾರಾಗಿರುವ ಜಾಗದಲ್ಲಿ ಬಿದ್ದ, ಹರಿದು ಬಂದ ನೀರೆಲ್ಲವೂ ಇಂಗುವಂತೆ ಮಾಡಿದ್ದಾರೆ.
             ಒಂದು ಬದಿ ರಸ್ತೆ ಹಾದುಹೋಗುತ್ತದೆ. ರಸ್ತೆಯ ಪಕ್ಕದ ಕಣಿಯಲ್ಲಿ ಹರಿಯುವ ನೀರನ್ನು ತನ್ನ ಜಾಗಕ್ಕೆ ತಿರುಗಿಸಲು ಇವರಿಗೆ ಬೇಸರವಿಲ್ಲ. ಅಲ್ಲಲ್ಲಿ ಇಂಗುಗುಂಡಿಗಳು, ಒಂದೆರಡು ಚಿಕ್ಕ ಕೊಳಗಳಂತಹ ರಚನೆಯಿದೆ. ಮೇಲ್ಭಾಗದ ಒಂದು ಪಾಶ್ರ್ವದಲ್ಲಿ ಕಟ್ಟದಂತಹ ರಚನೆ ಮಾಡಿದ್ದು, ನೀರು ವೇಗವಾಗಿ ಹರಿದು ಬರುವುದನ್ನು ತಡೆಯುತ್ತದೆ. ಮಳೆ ಬಂದಾಗ ಕಟ್ಟದಲ್ಲಿ ನೀರು ಏರಿ ನಿಲ್ಲುತ್ತದೆ.
             ಇಪ್ಪತ್ತೈದು ಅಡಿ ಆಳದ ಬಾವಿಯೊಂದಿದೆ. ಅದರ ಕೆಳಭಾಗದಲ್ಲಿ ಬಂಡೆ ಇರುವ ಕಾರಣ ಮಾರ್ಚ್ ತಿಂಗಳಿಗೆ ನೀರು ಖಾಲಿ. ಮಳೆಗಾಲದಲ್ಲಿ ಈ ಬಾವಿಗೆ ನೀರು ಮರುಪೂರಣ ಆಗುತ್ತಾ ಇರುತ್ತದೆ. ರಬ್ಬರ್ ಗಿಡಗಳ ಪಕ್ಕ ಸ್ವಲ್ಪ ಹೆಚ್ಚೇ ಆಳವಾಗಿ ಸಮತಟ್ಟು ರಚಿಸಿದ್ದಾರೆ. "ಇದೂ ಕೂಡಾ ನೀರಿಂಗುವ ಜಲಗುಂಡಿ. ಇಷ್ಟೆಲ್ಲಾ ಇಂಗಿದ ನೀರು ಕೆಳಭಾಗದ ಜನರಿಗೆ ಪ್ರಯೋಜನವಾಗುವುದಂತೂ ಖಂಡಿತ. ಮೊದಲು ನೀರಿನ ಆಭಾವದ ಪ್ರದೇಶವಾಗಿದ್ದು, ಈಗ ಬಾವಿಗಳಲ್ಲಿ ನೀರಿದೆ ಎಂದು ಜನರಾಡುತ್ತಾರೆ," ಎನ್ನುತ್ತಾರೆ ಮೋಹನ್
                 ಈ ಎರಡೆಕರೆ ಜಾಗದಲ್ಲಿ ಏನಿಲ್ಲವೆಂದರೂ ರಬ್ಬರಿನ ಸಮತಟ್ಟು ಹೊಂಡವಲ್ಲದೆ ನೂರ ಇಪ್ಪತ್ತಕ್ಕೂ ಮಿಕ್ಕಿ ಇಂಗುಗುಂಡಿಗಳಿವೆ. ಈಚೆಗೆ ಜೆಸಿಬಿ ಯಂತ್ರದ ಮೂಲಕ ಹೊಂಡಗಳನ್ನು ಸ್ವಲ್ಪ ಆಳ-ಅಗಲ ಮಾಡಿದ್ದಾರೆ. ಜಾಗದ ಮೇಲಿಂದ ಮಳೆ ನೀರು ಹರಿಯುತ್ತಾ, ಹೊಂಡಗಳು ತುಂಬುತ್ತಾ ಬರುವ ಅಂದವನ್ನು ನೋಡಿ ಅನುಭವಿಸಬೇಕು. ಎಲ್ಲವೂ ಕೆರೆಯಂತೆ ಭಾಸವಾಗುತ್ತದೆ..
                   ಇವರ ಜಾಗದ ಕೆಳಭಾಗದಲ್ಲಿ ಸುಮಾರು ಹದಿನೈದಕ್ಕೂ ಮಿಕ್ಕಿ ಕುಟುಂಬಗಳಿವೆ. ಮಾರ್ಚ್ ಕೊನೆಗೆ ಅವರ ಬಾವಿಗಳೆಲ್ಲಾ ಆರುತ್ತಿದ್ದುವು. ಈಚೆಗೆ ಮೇ ತನಕ ಕುಡಿಯಲು ತೊಂದರೆಯಿಲ್ಲ ಎಂದು ಹಿಮ್ಮಾಹಿತಿ ಕೊಡುತ್ತಾರಂತೆ. ಇವರು ಜಾಗವನ್ನು ಖರೀದಿಸಿದ ಬಳಿಕ ಅನೇಕರು ತೋಟ ಎಬ್ಬಿಸಲು ಕೊಳವೆ ಬಾವಿ ಕೊರೆಸಿದ್ದರಂತೆ. ಅವೆಲ್ಲವೂ ವಿಫಲವಾಗಿ ಜಾಗವನ್ನೇ ಮಾರಿ ಹೋದ್ರು ಎಂದು ನೆನಪು ಮಾಡಿಕೊಳ್ಳುತ್ತಾರೆ. ಈಗ ಇಲ್ಲಿ ಶಿಕ್ಷಣ ಸಂಸ್ಥೆಯೊಂದು ಬೆಳೆಯುತ್ತಿದೆ.
                  ಮೋಹನರು ಹೊಸದಾಗಿ ಕೊಳವೆ ಬಾವಿ ಕೊರೆಯುವಾಗ ನೀರು ಸಿಕ್ಕುತ್ತೋ ಇಲ್ವೋ ಎನ್ನುವ ಆತಂಕ ಇತ್ತು. ಸುಮಾರು ಆರುನೂರ ಮೂವತ್ತೈದು ಅಡಿ ಆಳ. ಈ ಮಳೆಗಾಲದಲ್ಲಿ ಮಳೆನೀರನ್ನು ಮರುಪೂರಣ ಮಾಡುವ ಅಡಿಗಟ್ಟು ಮಾಡಿಕೊಂಡಿದ್ದಾರೆ. ತನ್ನನ್ನ ಜಾಗದಲ್ಲಿ ಬಿದ್ದ ಮಳೆಯ ಒಂದು ಹನಿ ನೀರು ಹೊರಗೆ ಹೋಗಬಾರದು, ಎಲ್ಲವೂ ಇಂಗಬೇಕು ಎನ್ನುವ ಜಲಜಿಪುಣತೆ ಈ ದಂಪತಿಯದ್ದು.
                 ಎರಡೂ ಜಾಗದಲ್ಲಿ ಇಷ್ಟೊಂದು ಮಳೆ ನೀರು ಇಂಗುವ ವ್ಯವಸ್ಥೆಯನ್ನು ಮೂರು ದಶಕದ ಹಿಂದಿನಿಂದಲೇ ಮಾಡುತ್ತಿದ್ದಾರೆ. ಇವರ ಜಾಗದಲ್ಲಿ ಸುಡು ಬಿಸಿಲಲ್ಲೂ ಹಸಿರು ದಟ್ಟವಾಗಿದೆ. ವಾತಾವರಣ ತಂಪಿದೆ. ಸುತ್ತಲಿನ ಬಾವಿಗಳಲ್ಲಿ ನೀರಿನ ಮಟ್ಟ ಏರಿದೆ. 'ನೀರೆನ್ನುವುದು ಅಮೃತಕ್ಕೆ ಸಮಾನ' ಎಂದು ನಂಬಿರುವ ಡಾ.ಮೋಹನ ನಾರಾಯಣ ಮತ್ತು ಪೂರ್ಣಿಮಾ ನೀರಿನ ಅರಿವನ್ನು ಬಿತ್ತುತ್ತಿದ್ದಾರೆ.
                ಬದುಕಿಗೆ ಬೇಕಾದಷ್ಟು ಸಂಪನ್ಮೂಲಗಳಿದ್ದರೂ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಹೊಂದಿರುವುದು ಶ್ಲಾಘ್ಯ. ಮಳೆ ಬಂದಾಗ ನೀರನ್ನು ಮರೆಯುವುದು ಜಾಣತನವಲ್ಲ, ಭೂಮಿಗೆ ನೀರುಣಿಸಿದರೆ ಮಾತ್ರ ಮೇಲೆತ್ತಲು ನಮಗೆ ಅಧಿಕಾರ ಎನ್ನುವ ನೀರಿನ ಸರಳ ಸೂತ್ರವನ್ನು ಅನುಷ್ಠಾನ ಮಾಡಿದ್ದಾರೆ. ಮಳೆ ಬಂದಾಗ ನೀರಿಂಗಿಸುವ ಎಲ್ಲಾ ಮಾತುಕತೆಗಳನ್ನು ಮರೆಯುವ ಮಂದಿಯತ್ತ ವಿಷಾದಿಸುತ್ತಾರೆ ಡಾ.ಮೋಹನ್.

Tuesday, September 5, 2017

ಒಂದೇ ಕ್ಲಿಕ್ಕಿನಲ್ಲಿ ನೆಲದ ಜ್ಞಾನ

ಉದಯವಾಣಿಯ - ನೆಲದ ನಾಡಿ - / 23-6-2017

              ದ್ರಾಕ್ಷಿ ಬೆಳೆಯ ಪ್ರಾಥಮಿಕ ಮಾಹಿತಿ ಬೇಕಿತ್ತು. ನೀವು ಸಂಬಂಧಪಟ್ಟ ಕೃಷಿಕರನ್ನು ಹುಡುಕಾಡುತ್ತೀರಿ. ಸಂಪರ್ಕ ಸಾಧ್ಯವಾಗಿಲ್ಲ, ನಿರಾಶರಾಗುತ್ತೀರಿ. ಯಾವುದೋ ಪತ್ರಿಕೆಯಲ್ಲಿ ಓದಿದ ನೆನಪು, ಅದನ್ನು ತೆಗೆದಿಡುತ್ತಿದ್ದರೆ ಸಹಾಯವಾಗುತ್ತಿತ್ತು ಎಂದು ಕೈಕೈ ಹಿಸುಕುತ್ತೀರಿ. ಮಳೆಗಾಲ ಶುರುವಾಯಿತು, ಜಲಮರುಪೂರಣ ವಿಧಾನಗಳ  ಮಾಹಿತಿಗಾಗಿ ಹಳೆಯ ಪತ್ರಿಕೆಗಳನ್ನು ತಿರುವಿ ಹಾಕುತ್ತೀರಿ. ಸಕಾಲಕ್ಕೆ ಮಾಹಿತಿ ಸಿಗದೆ ಚಡಪಡಿಸುತ್ತೀರಿ. 'ಕೃಷಿ ಕನ್ನಡ ಡಾಟ್ ಕಾಮ್' (www.krishikannada.com ) ನಲ್ಲಿ ಈ ಗೊಂದಲಗಳಿಗೆ ಉತ್ತರಗಳಿವೆ. ಒಂದೆರಡು ಕ್ಲಿಕ್ಗಳಲ್ಲಿ ಮಾಹಿತಿಗಳು ಬೆರಳ ತುದಿಯಲ್ಲಿ ಕಾಣಸಿಗುತ್ತವೆ.
              ಈ ಕೃಷಿಸ್ನೇಹಿ ಜಾಲತಾಣವು ಸಾಗರದ ಕೃಷಿ ಕುಟುಂಬದ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಮತ್ತು ಪತ್ನಿ ಸೌಖ್ಯ ಮೋಹನ್ ಅವರ ಪರಿಕಲ್ಪನೆ ಮತ್ತು ಕನಸು. ನೆಲದ ಜ್ಞಾನವನ್ನು ಒಂದು ಕ್ಲಿಕ್ಕಿನಲ್ಲಿ ತೋರಿಸುವ ಯತ್ನ. ಪತ್ರಿಕೆಗಳಲ್ಲಿ ಪ್ರಕಟವಾದ ಕೃಷಿ ಲೇಖನಗಳ ಕಡತಗಳು ಏನಿಲ್ಲವೆಂದರೂ ಇಪ್ಪತ್ತೈದು ಸಾವಿರ ಮೀರಬಹುದು. ಅವೆಲ್ಲವೂ ನಿಕಟಭವಿಷ್ಯದಲ್ಲಿ ಜಾಲತಾಣವನ್ನು ಏರಲಿವೆ. ವಿಷಯ ವೈವಿಧ್ಯವನ್ನು ಹೊಂದಿಕೊಂದು ಈಗಾಗಲೇ ಸಾವಿರದೈನೂರಕ್ಕೂ ಮಿಕ್ಕಿ ಕಡತಗಳು ಏರಿವೆ.
              1995. ರಾಜಧಾನಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಮೋಹನ್ ಪಿಎಚ್ಡಿ ಮಾಡುತ್ತಿದ್ದರು. ಭಾರತೀಯ ಕೃಷಿ ಪರಂಪರೆಯತ್ತ ಯೋಚಿಸುವ ವಿದ್ಯಾರ್ಥಿ ಒಕ್ಕೂಟ 'ಚಿಂತನ ಬಳಗ'ದ ಪರಿಚಯ. ರಾಸಾಯನಿಕ ಕೃಷಿಗೆ ಪರ್ಯಾಾಯವಾಗಿ ಪರಿಸ್ನೇಹಿ ಕೃಷಿ ವಿಧಾನ, ಭಾರತೀಯ ಕೃಷಿ ಪರಂಪರೆಯ ಬಗ್ಗೆ ಚರ್ಚೆ. ಕೃಷಿಕರ, ಕೃಷಿಕಪರ ಪತ್ರಿಕೆಗಳಲ್ಲಿನ ಕೃಷಿ ಮಾಹಿತಿಗಳ ಪರಿಚಯ. ಪಿಎಚ್ಡಿ ನಂತರ ಸಂಶೋಧನಾ ಕೇಂದ್ರವೊಂದರಲ್ಲಿ ಭಾರತೀಯ ಸಸ್ಯವೈವಿಧ್ಯ ಗಣಕೀಕರಣದ ಯೋಜನೆಯ ಸಮನ್ವಯಕಾರರಾಗಿ ನಿಯುಕ್ತಿ. ಕೃಷಿ ಮಾಹಿತಿಗಳನ್ನೂ ಗಣಕೀಕರಿಸಬೇಕೆನ್ನುವ ಕನಸಿಗೆ ಮನಸಾ ಬೀಜಾಂಕುರ.
              ಕೃಷಿಯೇ ಜೀವ ವೈವಿಧ್ಯ ನಾಶಕ್ಕೆ ಬಹುಪಾಲು ಕಾರಣ ಎನ್ನುವ ಅಪವಾದ ಕೃಷಿ ಕ್ಷೇತ್ರಕ್ಕಿದೆ. ನಿಜಕ್ಕೂ ಜೀವ ವೈವಿಧ್ಯವನ್ನು ಉಳಿಸುತ್ತಿರುವುದು ಕೃಷಿಕರು ಎನ್ನುವ ಸ್ಪಷ್ಟ ಅರಿವು ಮೋಹನ್ ತಲೆಯಲ್ಲಿತ್ತು. ಇದಕ್ಕೆ ಬೆಳಕೊಡ್ಡುವುದು ಅನಿವಾರ್ಯ ಅನ್ನುವ ಯೋಚನೆ ಬಂದದ್ದೇ ತಡ, ನೆರವಿಗೆ ಬಂದುದು ಕೃಷಿ ಮಾಸಿಕ 'ಅಡಿಕೆ ಪತ್ರಿಕೆ'ಯ ಸಂಚಿಕೆಗಳು. ಜೀವವೈವಿಧ್ಯಕ್ಕೆ ಪೂರಕವಾಗಿರುವ ಲೇಖನಗಳೆಲ್ಲಾ ಒಂದೇ ಕಡೆ ಲಭ್ಯವಾದರೆ ಕೃಷಿಕರಿಗೆ ಸಹಕಾರಿ. ಅದು ಕಂಪ್ಯೂನಲ್ಲಿದ್ದರೆ ಏನು ಪ್ರಯೋಜನ? ಎಲ್ಲರಿಗೂ ಸಿಗುವಂತಾಗಲು ಜಾಲತಾಣ ರೂಪಿಸಲು ನಿರ್ಧಾರ ಮಾಡಿದೆ. ಹೆಚ್ಚು ಬಂಡವಾಳ ಬೇಡುವ ಕೆಲಸ. ಮೊದಲಿಗೆ ಅದಿತಿ ಆರ್ಗಾನಿಕ್ ಸರ್ಟಿಫಿಕೇಶನ್ ಸಂಸ್ಥೆಯ ಡಾ. ನಾರಾಯಣ ಉಪಾಧ್ಯಾಯರು ಉತ್ತೇಜನ ನೀಡಿದರು. ಒಂದಷ್ಟು ಸ್ನೇಹಿತರು ಸ್ಪಂದಿಸಿದರು ಎಂದು ಜಾಲತಾಣ ಆರಂಭದ ದಿನಮಾನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
               2013ರಲ್ಲಿ ಕೃಷಿ ಕನ್ನಡ ಜಾಲತಾಣ ಲೋಕಾರ್ಪಣೆ. ಚಾಲು ಆಗಲು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ವೆಚ್ಚವಾಗಿತ್ತು. ಆತ್ಮೀಯರ ಸಹಕಾರ, ಜತೆಗೆ ತನ್ನ ಗಳಿಕೆಯನ್ನು ಸೇರಿಸಿದ್ದರು. ಲಾಭೋದ್ದೇಶವಲ್ಲದ ಕಾಯಕ. ಕೃಷಿ ಹಿನ್ನೆಲೆಯವರಾದ್ದರಿಂದ ಕೃಷಿ ಕ್ಷೇತ್ರಕ್ಕೆ ಸೇವಾ ಭಾವದಿಂದ ಈ ಕೆಲಸಕ್ಕೆ ಕೈಯಿಕ್ಕಿದ್ದಾರೆ. ಜಾಲತಾಣ ರೂಪೀಕರಣದ ಮೊದಲು ನಾಲ್ಕೈದು ವರುಷದ ಸಿದ್ಧತೆಯನ್ನು ಮಾಡಿದ್ದರು. ಕನ್ನಡದ ಎಲ್ಲಾ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾದ ಕೃಷಿ ಲೇಖನಗಳನ್ನು ಸಂಗ್ರಹಿಸುತ್ತಾ ಬಂದರು. ಅದನ್ನು ಸ್ಕಾನ್ ಮಾಡಿ ಪಿಡಿಎಫ್ ಕಡತಗಳನ್ನಗಿ ಮಾರ್ಪಡಿಸಿದರು. ಮೋಹನ್ ಕಂಪ್ಯೂನಲ್ಲಿದ್ದ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿದ ಕಡತಗಳು ಜಾಲತಾಣ ಏರಲು ಕಾಯುತ್ತಿವೆ!
              ಅಡಿಕೆ ಪತ್ರಿಕೆ, ಸುಜಾತ, ಹಿತ್ತಲಗಿಡ, ಸಿರಿ ಸಮೃದ್ಧಿ, ಜಲಸಿರಿ, ಸಹಜ ಸಾಗುವಳಿ, ಶ್ರಮಜೀವಿ ಅಗ್ರಿಫಿಲ್ಮ್ಸ್ ಮತ್ತು ಎಲ್ಲಾ ದಿನಪತ್ರಿಕೆಗಳ ಸಂಪಾದಕರು ಜಾಲತಾಣದ ಉದ್ದೇಶವನ್ನು ಅರಿತು ಒಪ್ಪಿಗೆ ನೀಡಿದ್ದಾರೆ. ಸುಮನಸ್ಸಿಂದ ಸಹಕರಿಸಿದ್ದಾರೆ. ಆರ್ಥಿಕ ಲಾಭೋದ್ದೇಶ ಇಲ್ಲದ ಕಾರಣ ಬೆಂಬಲ ನೀಡಿದ್ದಾರೆ. ಎನ್ನುವ ಮೋಹನ್, ನಾಲ್ಕು ವರುಷಗಳಲ್ಲಿ ಸುಮಾರು ಆರು ಲಕ್ಷ ಮಂದಿ ಜಾಲತಾಣವನ್ನು ವೀಕ್ಷಿಸಿದ್ದಾರೆ, ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾರೆ.  ಕೃಷಿ ಕನ್ನಡ ಡಾಟ್ ಕಾಮ್ನಲ್ಲಿ ಹನ್ನೆರಡು ಘಟಕಗಳಿವೆ. ಮಾಹಿತಿ ಹುಡುಕಾಟ, ಪ್ರಶ್ನೋತ್ತರ, ಇ-ಮಾರುಕಟ್ಟೆ, ಚಿತ್ರಗಳ ಸಂಚಿ, ರೋಗ-ಕೀಟ ಪತ್ತೆ, ಕೃಷಿಕರ ಮತ್ತು ಕೃಷಿ ಪತ್ರಕರ್ತರ ವಿಳಾಸ, ಕೃಷಿ ವಿಜ್ಞಾನಿಗಳ ವಿಳಾಸ, ಉಪಯುಕ್ತ ವೆಬ್ಸೈಟ್ಗಳ ಕೊಂಡಿಗಳು, ಕೃಷಿ ಪುಸ್ತಕಗಳು.. ಹೀಗೆ. ಮಾಹಿತಿ ಘಟಕದಲ್ಲಿ ಕೃಷಿ ಲೇಖನವನ್ನು ಏರಿಸುವುದು, ಅದನ್ನು ವರ್ಗೀಕರಣ ಮಾಡುವುದು ಶ್ರಮ ಬೇಡುವ ಕೆಲಸ.
               ಪ್ರಶ್ನೋತ್ತರ ವಿಭಾಗ ಕುತೂಹಲಕರ. ವಿವಿಧ ನಮೂನೆಯ ಪ್ರಶ್ನೆಗಳನ್ನು ಅವಲೋಕಿಸಿದಾಗ ರೈತರ ಸಂಕಟ ಅರ್ಥವಾಗುತ್ತದೆ. ನಾನು ತಳಿ ವಿಭಾಗದಲ್ಲಿ ವಿಶೇಷಾಧ್ಯಯನ ಮಾಡಿದರೂ ಉತ್ತರಿಸಲು ಕಷ್ಟವಾಗುವಂತಹ ಪ್ರಶ್ನೆಗಳಿವೆ. ಅವಕ್ಕೆಲ್ಲಾ ಉತ್ತರ ಕೊಡಲೇ ಬೇಕಲ್ವಾ. ಇಂತಹ ಪ್ರಶ್ನೆಗಳನ್ನು ಬೇರೆ ತಜ್ಞರಿಗೆ ನೀಡಿ ಅವರಿಂದ ಉತ್ತರ ಪಡೆದು ಸಂಬಂಧಪಟ್ಟ ಕೃಷಿಕರಿಗೆ ಉತ್ತರ ರವಾನಿಸಬೇಕಾಗುತ್ತದೆ. ಉದಾ? ದ್ರಾಕ್ಷಿ ನಮಗೆ ಹೊಸತು. ಇದಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಉತ್ತರ ಕಷ್ಟಕರ. ಇಂತಹ ಸಂದರ್ಭದಲ್ಲಿ ದ್ರಾಕ್ಷಿ ಬೆಳೆಗೆ ಸಂಬಂಧಪಟ್ಟ ವಿಷಯ ತಜ್ಞರಲ್ಲಿ ಸಮಾಲೋಚಿಸಿ ಉತ್ತರ ಪಡೆಯುತ್ತೇನೆ. ಮುಖ್ಯವಾಗಿ ರೋಗ-ಕೀಟಗಳ ಕುರಿತು ಪ್ರಶ್ನೆಗಳೇ ಅಧಿಕ. "ನನ್ನ ಸ್ನೇಹ ವಲಯದಲ್ಲಿ ಕೃಷಿಕರಿದ್ದಾರೆ, ಸ್ನೇಹಿತರಿದ್ದಾರೆ, ತಜ್ಞರಿದ್ದಾರೆ. ಕೃಷಿ ತಜ್ಞರಿಂದಲೂ ಉತ್ತರ ಕಷ್ಟವಾದಾಗ ಅನುಭವಿ ಕೃಷಿಕರ ಸಹಕಾರ ಪಡೆಯುತ್ತೇನೆ. ವಿಜ್ಞಾನಿಗಳ ಜ್ಞಾನದೊಂದಿಗೆ ರೈತರ ಜ್ಞಾನವನ್ನು ಮಿಳಿತಗೊಳಿಸುವ ಚಿಕ್ಕ ಯತ್ನವಷ್ಟೇ." ಮೋಹನರ ಈ ಅಭಿಪ್ರಾಯದ ಒಳತೋಟಿಯನ್ನು ಗಮನಿಸಿದಾಗ ಮಾಹಿತಿ ಮತ್ತು ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ವ್ಯವಸ್ಥೆಗಳು ವಿಫಲವಾಗುತ್ತಿರುವ ಸುಳಿವು ಸಿಗುತ್ತಿದೆ.
               ಸಮಸ್ಯೆಗಳಿಗೆ ಪರಿಹಾರ ಕೋರಿದ ಸಾವಿರದಷ್ಟು ಕೃಷಿಕರಿಗೆ ಮಿಂಚಂಚೆಯಲ್ಲಿ ಉತ್ತರ ನೀಡಿದ್ದಾರೆ. ಅದಕ್ಕೆ ಪೂರಕವಾದ ಪ್ರಕಟಿತ ಲೇಖನಗಳ ಕಡತಗಳನ್ನೂ ಕಳಿಸುತ್ತಾರೆ. ಉದಾ: ಹೆಬ್ಬೇವು ಕೃಷಿ ಮಾಹಿತಿಯನ್ನು ಒಬ್ಬರು ಅಪೇಕ್ಷೆ ಪಟ್ಟಿದ್ದಾರೆ ಎನ್ನೋಣ. ಮೋಹನರ ಕಂಪ್ಯೂನಲ್ಲಿರುವ ಕಡತದಿಂದ ಹತ್ತಾರು ಹೆಬ್ಬೇವು ಲೇಖನಗಳನ್ನು ಕಳುಹಿಸಿಕೊಡುತ್ತಾರೆ. ಇಷ್ಟಕ್ಕೂ ಮಾಹಿತಿ ಸಾಲದು ಎಂದಾದರೆ ಕೃಷಿಕರೇ ಫೋನ್ ಮೂಲಕ, ವಾಟ್ಸಪ್ ಮೂಲಕ ಸಂಪರ್ಕಿಸುತ್ತಾರೆ. ಫೇಸ್ಬುಕ್ಕನ್ನು ಬಳಸುವವರಿದ್ದಾರೆ. ಈ ತಾಣಗಳ ಮೂಲಕ ಬಂದ ಪ್ರಶ್ನೆ, ಮಾಹಿತಿಗಳಿಗೆ ಸೌಖ್ಯ ಮೋಹನ್ ಉತ್ತರಿಸುತ್ತಾರೆ.
              ಜಾಲತಾಣದಲ್ಲಿರುವ ಮಾಹಿತಿಗಳು ಕನ್ನಾಡಿಗೆ ಯಾಕೆ ಸೀಮಿತ? "ಆಂಗ್ಲ ಭಾಷೆಯದನ್ನೂ ಸೇರಿಸಬಹುದಲ್ಲಾ? ಕನ್ನಡ  ನಾಡಿನ ರೈತರು ಅನ್ವೇಷಣೆ ಮಾಡಿದ ಜ್ಞಾನವನ್ನು ದಾಖಲಿಸುವ ಮತ್ತು ಕನ್ನಾಡಿನ ಕೃಷಿಕರಿಗೆ ಒದಗಿಸುವ ಉದ್ದೇಶ ನಮ್ಮದು. ಯಾವುದೇ ಅರ್ಥಿಕ ಗಳಿಕೆಯ ಉದ್ದೇಶವಿಲ್ಲ. ಜಾಹೀರಾತಿಗಾಗಿ ವಿಶೇಷ ಶ್ರಮ ಹಾಕಲು ಪುರುಸೊತ್ತಿಲ್ಲ. ಆಸಕ್ತರು ಮುಂದೆ ಬಂದರೆ ಪರಿಶೀಲಿಸಬಹುದೇನೋ. ಪ್ರತೀ ವರುಷ ಮೂವತ್ತು ಸಾವಿರ ರೂಪಾಯಿ ಜಾಲತಾಣ ನಿರ್ವಹಣೆಗೆ ಬೇಕಾಗುತ್ತದೆ," ಎನ್ನುತ್ತಾರೆ ಮೋಹನ್ ತಲಕಾಲುಕೊಪ್ಪ.
               ಜಾಲತಾಣ ಇನ್ನೂ ಅಭಿವೃದ್ಧಿಯಾಗಬೇಕು. ವಿನ್ಯಾಸ ಸುಧಾರಿಸಬೇಕು. ಮಾಹಿತಿ ತುಂಬುತ್ತಾ ಇರಬೇಕು. ಅದು ಸದೃಢವಾಗಲು ಆರ್ಥಿಕ ಚೈತನ್ಯ ಬೇಕು. ತಾಣದಲ್ಲಿರುವ ಘಟಕಗಳ ಬಳಕೆಯನ್ನು ಹಗುರಗೊಳಿಸಬೇಕು. ಆಡಿಯೋ, ವೀಡಿಯೋ, ಯಂತ್ರೋಪಕರಣಗಳು, ಹೋಮ್ಸ್ಟೇ ಮಾಹಿತಿ.. ಇವನ್ನೆಲ್ಲಾ ಕಾಲ ಕಾಲಕ್ಕೆ ಒದಗಿಸಬೇಕು. ಮೋಹನ್ ಮತ್ತು ಸೌಖ್ಯರ ತಲೆತುಂಬಾ ಇರುವ ಯೋಜನೆಗಳಿವು. ಕೃಷಿ ಪತ್ರಕರ್ತರು ನಮ್ಮ ಯಾದಿಯನ್ನು ಜಾಲತಾಣಕ್ಕೆ ನೀಡಿದ್ದಾರೆ. ಕೃಷಿಕರು ಒದಗಿಸಿದ್ದಾರೆ. ಕೃಷಿ ವಿಜ್ಞಾನಿಗಳು ಅವರಾಗಿಯೇ ಮಾಹಿತಿ ಕೊಟ್ಟಿರುವುದು ಕಡಿಮೆ, ಎನ್ನುತ್ತಾರೆ ಮೋಹನ್.
             ಕೃಷಿ ಕನ್ನಡ ಡಾಟ್ ಕಾಮ್ - ಇದರ ಒಟ್ಟೂ ವ್ಯವಸ್ಥೆಯು ಕೃಷಿ ಸ್ನೇಹಿಯಾಗಿದೆ. ಕೃಷಿ ಹಿನ್ನೆಲೆಯ ಮೋಹನ್, ಕೃಷಿಕರಿಗಾಗಿ ಏನಾದರೂ ಮಾಡಬೇಕೆನ್ನುವ ತುಡಿತವು ಅವರನ್ನು ಜಾಲತಾಣದ ರೂಪೀಕರಣಕ್ಕೆ ಪ್ರೇರಣೆ ನೀಡಿತು. ಅಮೇರಿಕಾದ ನಾಗೇಂದ್ರ, ಶಿರಸಿ ಅರಣ್ಯ ಕಾಲೇಜಿನ ಡಾ.ವಾಸುದೇವ, ಶಿರಸಿಯ ಟಿ.ಎಸ್.ಎಸ್., ಎರಾ ಆರ್ಗಾನಿಕ್ ಇದರ ಜಯರಾಮ್, ಸಹಜ ಸಮೃದ್ಧದ ಕೃಷ್ಣ ಪ್ರಸಾದ್, ಶ್ರೀ ಪಡ್ರೆ.. ಮೊದಲಾದವರ ಉತ್ತೇಜನ ಸಿಗದಿದ್ದರೆ ಜಾಲತಾಣ ಶುರುವಾಗುತ್ತಲೇ ಇರಲಿಲ್ಲ, ಎಂದು ಮೋಹನ್ ವಿನೀತರಾಗುತ್ತಾರೆ.

Sunday, September 3, 2017

ಜಲಸಂರಕ್ಷಣೆಯ ಒಂದು ಮಾದರಿ - ಸೂರಿನ ನೀರಿನ ಬಳಕೆ


ಹೊಸದಿಗಂತದ 'ಮಾಂಬಳ' ಅಂಕಣ / 28-6-2017

               ಬೇಸಿಗೆಯಲ್ಲಿ ನೀರಿನ ಮಾತುಕತೆಗಳು ವೇಗ ಪಡೆಯುತ್ತವೆ. ಮಳೆಕೊಯ್ಲು, ಜಲಮರುಪೂರಣ, ಇಂಗುಗುಂಡಿಗಳು.. ಹೀಗೆ ಹೆಚ್ಚು ಒಲವನ್ನು ಪಡೆಯುತ್ತವೆ. ಕೆಲವು ಭಾಷಣಗಳಿಗೆ ಸೀಮಿತವಾದರೆ, ಇನ್ನೂ ಕೆಲವು ಪತ್ರಿಕಾ ವರದಿಗಳಿಗೆ ಸೀಮಿತ. ನಮ್ಮ ವನಮಹೋತ್ಸವಗಳಂತೆ! ಈ ಮಧ್ಯೆ ನೀರಿನ ಕೊರತೆಯ ಸ್ಪಷ್ಟ ಅರಿವಿದ್ದ ಮಂದಿ ಜಲಸಂರಕ್ಷಣೆಯ ಕಾಯಕಕ್ಕೆ ಮುಂದಾಗಿರುವುದು ಸಂತೋಷ. ಸಿನಿಮಾ ನಟರು ತಮ್ಮ ಗಳಿಕೆಯ ಪಾಲನ್ನು ಸಾಮಾಜಿಕ ಕೆಲಸಗಳಿಗೆ ಬಳಸುತ್ತಿದ್ದಾರೆ. ಖಾಸಗಿಯಾಗಿ ಸದ್ದು ಮಾಡದೆ ನೀರಿನ ಅರಿವು ಮೂಡಿಸುವ ಕೆಲಸಗಳಾಗುತ್ತಿವೆ. ಸಂಘಟಿತ ಗುಂಪುಗಳಲ್ಲಿ ಪರಿಣಾಕಾರಿಯಾದ ಜಲಸಂರಕ್ಷಣೆಯ ಅರಿವು ಮತ್ತು ಅದರ ಅನುಷ್ಠಾನಗಳಾಗುತ್ತವೆ.
               ವೈಯಕ್ತಿಕ ನೆಲೆಯಲ್ಲಿ ಜಲಸಂರಕ್ಷಣೆಯ ಕಾಯಕವನ್ನು ಸದ್ದಿಲ್ಲದೆ ಮಾಡುವವರಿದ್ದಾರೆ. ಅಂತಹವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಡಾ.ಚಂದ್ರಶೇಖರ್ ಅವರ ಮಳೆಕೊಯ್ಲು ಘಟಕದಿಂದ ಅವರ ಕೊಳವೆ ಬಾವಿಗೆ ಕೆಲವು ತಿಂಗಳುಗಳ ರಜೆ! ನೀವು ಮನೆಗೆ ಹೋದರೆ ಸಾಕು, ಕುಡಿಯಲು ರುಚಿಯಾದ ಮಳೆನೀರು ಕೊಡುತ್ತಾರೆ. ಅವರಾಗಿ ಹೇಳದಿದ್ದರೆ ಮಳೆನೀರೆಂದು ನಿಮಗೆ ಗೊತ್ತೇ ಆಗದು. ಆರು ವರುಷಗಳಿಂದ ಇವರು ಕುಡಿಯಲು, ಅಡುಗೆಗೆ ಮತ್ತು ಪಾತ್ರೆ ತೊಳೆಯಲು ಸಂಗ್ರಹಿತ ಮಳೆನೀರನ್ನು ಬಳಸುತ್ತಿದ್ದಾರೆ.
               ಮನೆಯ ಚಾವಣಿಯ ಒಂದು ಪಾಶ್ರ್ವ - ಏಳುನೂರ ಐವತ್ತು ಚದರ ಅಡಿ - ಮಳೆಕೊಯ್ಲಿಗೆ ಮೀಸಲು. ಇಪ್ಪತ್ತಾರು ಸಾವಿರ ಲೀಟರಿನ ಫೆರೋಸಿಮೆಂಟ್ ಟಾಂಕಿಯು ಮಣ್ಣಿನೊಳಗೆ ಅವಿತಿದೆ. ಅದರ ಮುಚ್ಚಳ ನೆಲಮಟ್ಟದಲ್ಲಿದೆ. ಪಕ್ಕದಲ್ಲಿ ಒಂದು ಚಿಕ್ಕ ಸೋಸು ಟಾಂಕಿಯಿದೆ. ದೊಡ್ಡ ಜಲ್ಲಿ, ಇದ್ದಿಲು ಮತ್ತು ಮರಳು; ಪ್ರತಿ ಪದರದ ನಡುವೆ ಜಾಳಿಗೆ ಇರಿಸಿದ್ದಾರೆ. ಚಾವಣಿಯಿಂದ ಸೋಸು ಟ್ಯಾಂಕಿಗೆ ಪೈಪ್ ಸಂಪರ್ಕ. ನೀರು ಸೋಸಿ ಶುದ್ಧವಾಗಿ ಮುಖ್ಯ ಟ್ಯಾಂಕಿಯಲ್ಲಿ ಸಂಗ್ರಹವಾಗುತ್ತದೆ. ಮೊದಲ ಆರೇಳು ದಿನದ ಮಳೆಯನ್ನು ಟಾಂಕಿಗೆ ಸೇರಿಸುವುದಿಲ್ಲ.
              ಜೂನ್ ಮೊದಲ ವಾರ ಸರಿಯಾಗಿ ಮಳೆ ಬಂದರೆ ಹತ್ತರಿಂದ ಹದಿನೈದು ದಿವಸದಲ್ಲೇ ಟಾಂಕಿಯಲ್ಲಿ ನೀರು ತುಂಬುತ್ತದೆ. ನಂತರದ್ದು ಓವರ್ಫ್ಲೋ ಆಗಿ ಹೊರ ಹೋಗುತ್ತದೆ. "ನಾವು ತೆರೆದ ಬಾವಿ ತೋಡಿಲ್ಲ. ಒಂದು ಕೊಳವೆ ಬಾವಿ ಇದೆ. ಕುಡಿಯಲು, ಅಡುಗೆಗೆ, ಪಾತ್ರೆ ತೊಳೆಯಲು ಮಳೆಗಾಲದಲ್ಲೂ ಮಳೆನೀರೇ ಬಳಸುತ್ತೇವೆ. ಅಕ್ಟೋಬರ್ ತನಕ ಮಳೆ ಹೋಗುತ್ತಾ ಬರುತ್ತಾ ಇರುತ್ತದೆ. ಟಾಂಕಿ ಖಾಲಿ ಆಗುವುದಿಲ್ಲ. ತುಂಬುತ್ತಾ ಇರುತ್ತದೆ ಎನ್ನುತ್ತಾರೆ." ಟಾಂಕಿಯನ್ನು ಎರಡು ವರುಷಕ್ಕೊಮ್ಮೆ ಶುಚಿ ಮಾಡುತ್ತಾರೆ.
             "ಕೊಳವೆಬಾವಿಯ ನೀರಿಗಿಂತ ಮಳೆಯ ನೀರು ರುಚಿ. ಮನೆಯವರೆಲ್ಲರೂ ಕುಡಿಯುತ್ತೇವೆ. ಅತಿಥಿಗಳಿಗೂ ಕುಡಿಸುತ್ತೇವೆ! ಬೋರಿನ ನೀರು ಗಡಸು ಮತ್ತು ಲವಣಯುಕ್ತ. ಮಳೆನೀರನ್ನು ಪಾತ್ರೆಯಲ್ಲಿ ಹಾಕಿದಾಗ ತಳದಲ್ಲಿ ಲವಣ ಪದರ ಉಳಿಯುವುದಿಲ್ಲ. ಐದು ದಿನವಾದರೂ ಕುಡಿಯುಲು ಯೋಗ್ಯವಾಗಿರುತ್ತದೆ. ಬೋರ್ ನೀರನ್ನು ಪಾತ್ರೆಯಲ್ಲಿಟ್ಟರೆ ಅರ್ಧ ಗಂಟೆಯಲ್ಲೇ ತಳದಲ್ಲಿ ಬಿಳಿ ಪದರ ಉಂಟಾಗುತ್ತದೆ ಎನ್ನುತ್ತಾರೆ" ಮನೆಯೊಡತಿ ಸವಿತಾ.
                ಇವರ ಕೊಳವೆ ಬಾವಿಯು ಕಾಲು ಶತಮಾನದಷ್ಟು ಹಳೆಯದು. ಸ್ನಾನ, ಶೌಚ, ಬಟ್ಟೆ ತೊಳೆಯಲು, ಉದ್ಯಾನಕ್ಕೆ ಇದರದೇ ನೀರು. ಚಾವಣಿಯ ಮತ್ತೊಂದು ಪಾಶ್ರ್ವದ ನೀರನ್ನು ಈ ಕೊಳವೆ ಬಾವಿಗೆ ತುಂಬುತ್ತಾರೆ. ನೂರು ಲೀಟರಿನ ಡ್ರಮ್ಮಿನಲ್ಲಿ ಸೋಸಿದ ನೀರನ್ನು ಕೊಳವೆ ಬಾವಿಗೆ ಇಳಿಸುತ್ತಾರೆ. "ಹದಿನೈದು ವರುಷಗಳಿಂದ ಕೊಳವೆಬಾವಿ ಮರುಪೂರಣ ಮಾಡುತ್ತಾ ಇದ್ದೇನೆ. ನೂರೈವತ್ತು ಅಡಿಯ ಬಾವಿಯ ತಳದಿಂದ ಇಪ್ಪತೈದು ಅಡಿ ಮೇಲೆ ಪಂಪ್ ಇದೆ. ಇಷ್ಟು ವರುಷವಾದರೂ ಪಂಪ್ ಕೆಳಗಿಳಿಸಬೇಕಾಗಿಲ್ಲ. ಜಲಮಟ್ಟ ಒಂದೇ ರೀತಿ ಇದೆ" ಎನ್ನುತ್ತಾರೆ ಡಾಕ್ಟರ್.
            "ಕಳೆದ ವರುಷ ಮಳೆಗಾಲದಲ್ಲಿ ಮೂರು ತಿಂಗಳು ಕೊಳವೆ ಬಾವಿಗೆ ರಜೆ ಕೊಟ್ಟಿದ್ದಾರೆ! ಪಂಪ್ ಚಾಲೂ ಮಾಡಿಲ್ಲ. ಮಳೆಗಾಲದಲ್ಲಿ ಹೇಗೂ ಮಳೆಕೊಯ್ಲು ಟಾಂಕಿ ತುಂಬಿ ನೀರು ಹೊರಹರಿಯುತ್ತದಲ್ಲಾ. ಸೂರಿನ ಮೇಲಿರುವ ಇನ್ನೊಂದು ಟಾಂಕಿಗೆ ಪಂಪ್ ಮಾಡಿ ಅದರಿಂದ ಇತರ ಮನೆಬಳಕೆಗಳಿಗೆ ಬಳಸಿ ನೋಡಿದೆವು. ಇದರಿಂದಾಗಿ ಮಳೆಗಾಲದಲ್ಲಿ ಬೋರ್ವೆಲ್ ಅಥವಾ ಪಂಪ್ ಕೈಕೊಟ್ಟರೆ ಮಳೆನೀರಿನಿಂದಲೇ ನಿಭಾಯಿಸಬಹುದು ಎನ್ನುವ ಧೈರ್ಯ ಬಂದಿದೆ" ಎನ್ನುತ್ತಾರೆ. ಡಾ.ಚಂದ್ರಶೇಖರರಿಗೆ ಮಳೆಕೊಯ್ಲಿನ ಪ್ರೇರಣೆ ಸಿಕ್ಕಿದ್ದು ಅನಂತಾಡಿಯ ಕೃಷಿಕ ಗೋವಿಂದ ಭಟ್ಟರಿಂದ.
             ಮಳೆಗಾಲದ ಅಬ್ಬರ ಕಡಿಮೆಯಾದ ಕಾಲಮಾನದಲ್ಲಿ ಬಿದ್ದ ಮಳೆ ನೀರನ್ನು ಹಿಡಿದಿಡುವುದು ಕಾಲದ ಅನಿವಾರ್ಯ. ಡಾ.ಚಂದ್ರಶೇಖರ್ ಅವರ ದೂರದೃಷ್ಟಿಯು ಅವರನ್ನು ನೀರಿನ ವಿಚಾರದಲ್ಲಿ ಗೆಲ್ಲಿಸಿದೆ. ಇಂತಹ ಮಾದರಿಗಳು ಕನ್ನಾಡಿನಾದ್ಯಂತ ಹಬ್ಬಬೇಕು. ಕಷ್ಟವೇನಿಲ್ಲ, ಮನಸ್ಸು ಬೇಕಷ್ಟೇ. ವೈಯಕ್ತಿಕ ನೆಲೆಯಲ್ಲಿ ಜಲ ಸಂರಕ್ಷಣೆಯನ್ನು ಮಾಡಿದವರು ಯಾವಾಗಲೂ ನೀರಿನ ಬರಕ್ಕೆ ಹೆದರುವುದಿಲ್ಲ.
            ಉತ್ತರ ಕರ್ನಾಟಕದಲ್ಲಿ ಮಣ್ಣು ಮತ್ತು ನೀರಿನ ಅರಿವು ಮೂಡಿಸಿಕೊಂಡ ಕೃಷಿಕರು ಬರನಿರೋಧಕ ಜಾಣ್ಮೆಯನ್ನು ಬಳಸಿಕೊಂಡಿದ್ದಾರೆ. ತಮ್ಮ ಹೊಲವನ್ನೇ ಪ್ರಯೋಗಕ್ಕೆ ಒಡ್ಡಿಕೊಂಡು ಯಶಸ್ಸಾಗಿದ್ದಾರೆ. ಮಳೆ ನೀರನ್ನು ಹಿಡಿದಿಟ್ಟುಕೊಂಡು ವರುಷಪೂರ್ತಿ ಬಳಕೆ ಮಾಡುವ ಜಲಸಾಕ್ಷರರಿದ್ದಾರೆ. ತಿಪಟೂರಿನ ಬೈಫ್ ಸಂಸ್ಥೆಯಲ್ಲಿ ಮಳೆನೀರ ಕೊಯ್ಲಿನ ದೊಡ್ಡ ಮಾದರಿಯಿದೆ. ಧಾರವಾಡ ಸನಿಹ ಸ್ವಾಮೀಜಿಯೊಬ್ಬರು ಮಳೆನೀರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ನೀರಿನ ಅರಿವನ್ನು ಬಿತ್ತರಿಸುತ್ತಿದ್ದಾರೆ.
             ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲರು ಮನೆಯಂಗಳದ ಬಾವಿಗೆ ಜಲಮರುಪೂರಣ ಮಾಡುತ್ತಿದ್ದಾರೆ. ಸುತ್ತೆಲ್ಲಾ ನೀರು ಪಾತಾಳಕ್ಕಿಳಿದ ಅನುಭವವಾದರೂ ಇವರ ಬಾವಿಯಲ್ಲಿ ಮೇ ಕೊನೆಗೂ ಕುಡಿನೀರಿಗೆ ತತ್ವಾರವಾಗಿಲ್ಲ. ತಮ್ಮ ಜಮೀನಿನಲ್ಲಿ ಇಂಗುಗುಂಡಿಗಳನ್ನು ಮಾಡುವ ಮೂಲಕ ಹನಿ ಮಳೆನೀರೂ ಇಂಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಸರಕಾರದ ನೆರವು, ಸಬ್ಸಿಡಿ, ಪ್ರೋತ್ಸಾಹಗಳನ್ನು ಕಾದು ಕುಳಿತರೆ ಬಾಗೀರಥಿ ಪಾತಾಳಕ್ಕೆ ಜಿಗಿಯುವುದಂತೂ ಖಂಡಿತ. ಆಡಳಿತಕ್ಕೆ ಇದ್ಯಾವುದೂ ಬೇಕಾಗಿಲ್ಲ. ಪಾತಾಳಕ್ಕೂ ಕನ್ನ ಹಾಕುವ ಯೋಜನೆಗೆ ಸಹಿ ಹಾಕಲು ಲೇಖನಿ ಕಾಯುತ್ತಿರುತ್ತದೆ. ಅವರಿಗೆ ಪಾತಾಳವಾದರೇನು? ಸ್ವರ್ಗವಾದರೇನು? ಪೈಲುಗಳಲ್ಲಿ ನಮೂದಾಗಿರುವ ಸಂಖ್ಯೆಗಳು ನಗದಾದರೆ ಸಾಕು!
ಹಾಗಾಗಿ ನಮ್ಮ ಭೂಮಿ, ಸೂರಿನ ಮೇಲೆ ಬಿದ್ದ ನೀರನ್ನು ಹಿಡಿದಿಡುವುದು ಭವಿಷ್ಯದ ನೀರಿನ ಬರಕ್ಕೆ ನಾವೇ ಮಾಡಿಕೊಳ್ಳಬಹುದಾದ ಸರಳ ವಿಧಾನ.

Sunday, August 27, 2017

ಓರ್ವ ಪಶುವೈದ್ಯ ಹೀಗೂ ಇರಲು ಸಾಧ್ಯ!

ಉದಯವಾಣಿಯ - ನೆಲದ ನಾಡಿ - ಅಂಕಣ  / 8-6-2017

               ಪುತ್ತೂರಿನ ಜನವಸತಿ ರಸ್ತೆಗಳಲ್ಲಿ ಬೆಳಿಗ್ಗೆ ಹಾದು ಹೋಗಿ. ಬಹುತೇಕ ಅಮ್ಮಂದಿರು ಹಾಲಿಗಾಗಿ ಕಾಯುತ್ತಿರುತ್ತಾರೆ. ಒಂದೊಂದು ನಿಮಿಷ ಕಳೆವಾಗಲೂ ಒತ್ತಡ ಏರುತ್ತದೆ. ಮಗುವಿಗೆ ಶಾಲೆಗೆ ತಡವಾಗುತ್ತದೆ. ಯಜಮಾನರಿಗೆ ಕಚೇರಿಗೆ ಹೋಗಲು ವೇಳೆ ಮೀರುತ್ತಿದೆ. ಅಷ್ಟು ಹೊತ್ತಿಗೆ ಬೆಲ್ ರಿಂಗಣಿಸುತ್ತದೆ. ಕ್ಯಾರಿಯರ್ನಲ್ಲಿನ ಟ್ರೇಯಲ್ಲಿ ಹಾಲಿನ ಕ್ಯಾನ್ ತುಂಬಿದ ಬೈಸಿಕಲ್ ಅಂಗಳದಲ್ಲಿ ನಿಲ್ಲುತ್ತದೆ. ಅಮ್ಮಂದಿರ ಮುಖ ಅರಳುತ್ತದೆ. ಒತ್ತಡ ನಿರಾಳವಾಗುತ್ತದೆ. ಹಾಲು ನೀಡಿದ ಬಳಿಕ ಸೈಕಲ್ ಮತ್ತೊಂದು ಮನೆಗೆ ತೆರಳುತ್ತದೆ. ಸೈಕಲ್ ನಿರ್ವಾಹಕರಿಗೆ ಬೆವರೊರೆಸಿಕೊಳ್ಳಲೂ ಪುರುಸೊತ್ತಿರುವುದಿಲ್ಲ. ಇದು ಪುತ್ತೂರು ಹೈನು ವ್ಯವಸಾಯಗಾರರ ಸಂಘದ ಸೇವೆ.
                 ಈ ವ್ಯವಸ್ಥೆಯ ಹಿಂದಿನ ಶಕ್ತಿ ಡಾ.ಮಜಿ ಸದಾಶಿವ ಭಟ್ (ಡಾ.ಎಂ.ಎಸ್.ಭಟ್). 1982-83ರ ಆಜೂಬಾಜು. ಆಗಲೇ ಭಟ್ಟರ ಪಶುವೈದ್ಯ ಸೇವೆಗೆ ದಶಕ ಮೀರಿತ್ತು. ಪುತ್ತೂರು ಕಸಬಾದಲ್ಲಿ ಹೈನುಗಾರಿಕೆಯು ಕೃಷಿಯೊಂದಿಗೆ ಮಿಳಿತವಾಗಿದ್ದುವು. ಹಸುಗಳೊಂದಿಗೆ ಎಮ್ಮೆ ಸಾಕಣೆಯೂ ನಡೆದಿತ್ತು.  ಕೃಷಿಕರು ನಗರದ ಹೋಟೆಲುಗಳಿಗೆ, ಮನೆಗಳಿಗೆ ಸ್ವತಃ ಹಾಲು ವಿತರಿಸುತ್ತಿದ್ದರು. ಹೀಗೆ ಹಾಲು ತರುವವರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಖುಷಿಯದ್ದಾಗಿರಲಿಲ್ಲ. ಒಂದು ರೀತಿಯ ಅನಾದರ ಭಾವ. ಗ್ರಾಹಕರ ವರ್ತನೆಗಳು ಡಾಕ್ಟರಿಗೆ ಹಿಡಿಸಲಿಲ್ಲ.  ಹೈನುಗಾರರ ಸಂಘಟಿತ ವ್ಯವಸ್ಥೆಯಿದ್ದರೆ ಕೃಷಿಕರಿಗೂ ಗೌರವ, ಗ್ರಾಹಕರಿಗೂ ಅನುಕೂಲ ಎನ್ನುವ ನೆಲೆಯಲ್ಲಿ ಹೈನುಗಾರರ ಸಂಘವೊಂದರ ಸ್ಥಾಪನೆಗೆ ಶ್ರೀಕಾರ.
                ಆಗಲೇ ಹೈನುಗಾರಿಕೆಯಲ್ಲಿ ತೊಡಗಿ ಅನುಭವವಿದ್ದ ಹಿರಿಯರು (ಮರಿಕೆ, ಬಂಗಾರಡ್ಕ, ಪುಂಡಿತ್ತೂರು, ಮುದ್ಲಾಜೆ ಕುಟುಂಬದವರು) ಡಾಕ್ಟರರ ಯೋಚನೆಗೆ ಹೆಗಲೆಣೆಯಾದರು. ಸಂಘದ ಕಾರ್ಯಾರಂಭದ ಕುರಿತು ಮಾಧ್ಯಮಗಳಲ್ಲಿ ಪ್ರಚಾರ. ಹೈನುಗಾರರು ತಂದ ಹಾಲನ್ನು ತಕ್ಷಣವೇ ಗ್ರಾಹಕರಿಗೆ ವಿತರಣೆ. ಕೃಷಿಕರು ಸಂತೃಪ್ತಿ. ಗ್ರಾಹಕರಿಗೂ ಸ್ವೀಕೃತ. ಆರಂಭದ ದಿವಸಗಳಲ್ಲಿ ಇನ್ನೂರು ಲೀಟರ್ ಹಾಲು ಸಂಘಕ್ಕೆ ಬರುತ್ತಿತ್ತು. ಸಂಘದ ಕಾರ್ಯಸೂಚಿಯಿಂದ ಕೃಷಿಕರು ಉತ್ಸುಕರಾದರು. ಕ್ರಮೇಣ ಹೈನುಗಾರಿಕೆಯು ವಿಸ್ತರಣೆಯಾಯಿತು. ಸಂಘಕ್ಕೆ ಬರುವ ಹಾಲಿನ ಪ್ರಮಾಣ ಐದಾರು ಪಟ್ಟು ಏರಿತು. ಹಾಲನ್ನು ಉಳಿಸಿಕೊಳ್ಳುವ ಹಾಗಿಲ್ಲ. ಹತ್ತು ಗಂಟೆಯೊಳಗೆ ಮುಗಿಸಬೇಕಿತ್ತು, ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ. ಹಾಗಾಗಿ ಮನೆಮನೆಗಳಿಗೆ ಹಾಲನ್ನು ವಿತರಿಸುವ ಪ್ಯಾಕೇಜ್ ಯೋಜನೆಗೆ ಚಿಂತನೆ.
                "ಬೆಳಿಗ್ಗೆ ಸಂಘ(ಡಿಪೋ)ದ ವರೆಗೆ ಬಂದು ಹಾಲು ಒಯ್ಯಲು ಬಹುತೇಕರಿಗೆ ಸಮಯದ ತೊಂದರೆಯಾಗುತ್ತಿತ್ತು. ಇವರೆಲ್ಲಾ ತಾಜಾ ಹಾಲನ್ನೇ ಅಪೇಕ್ಷೆ ಪಡುವವರು. ಏನಾದರು ವ್ಯವಸ್ಥೆ ಮಾಡಿ ಎಂದು ಒತ್ತಡ ಹಾಕಿದ್ದರು. ನಮ್ಮ ಮಗುವಿಗೆ ತಾಜಾ ಹಾಲೇ ಆಗಬೇಕೆನ್ನುವ ಬೇಡಿಕೆ ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ಮನೆಮನೆಗೆ ಹಾಲು ವಿತರಿಸುವ ವ್ಯವಸ್ಥೆ ರೂಪುಗೊಂಡಿತು," ಎಂದು ಡಾ.ಎಂ.ಎಸ್.ಭಟ್ ನೆನಪಿಸಿಕೊಳ್ಳುತ್ತಾರೆ. ಪಟ್ಟಣಿಗರು ಸಂಘದ ಯೋಜನೆಯನ್ನು ಸ್ವೀಕರಿಸಿದರು. ತಪ್ಪು ಒಪ್ಪುಗಳ ಹಿಮ್ಮಾಹಿತಿ ನೀಡುತ್ತಿದ್ದರು. ಇಂತಹ ಹಿಮ್ಮಾಹಿತಿಗಳೇ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಟೂಲ್ಸ್ಗಳಾಗಿದ್ದುವು.
                  ಎಂ.ಎಸ್.ಭಟ್ಟರು ಪಶು ವೈದ್ಯರು. 1970 ಸೆಪ್ಟೆಂಬರ್ 6ರಂದು ಪುತ್ತೂರಿನಲ್ಲಿ ಪಶುವೈದ್ಯಕೀಯ ಕ್ಲಿನಿಕ್ ಆರಂಭ. 2012 ಅಕ್ಟೋಬರ್ 19ರಂದು ನಿವೃತ್ತ. ಹೈನುಗಾರರು ನೆನಪಿಟ್ಟುಕೊಳ್ಳಬೇಕಾದ ನಲವತ್ತೆರಡು ವರುಷದ ಅವರ ಸೇವೆ. ಪಶು ಚಿಕಿತ್ಸೆಯ ಜತೆಗೆ ಹೈನುಗಾರರ ಅಪೇಕ್ಷೆ ಮತ್ತು ಅಗತ್ಯವನ್ನು ಅರಿತ ಡಾಕ್ಟರ್ ಹೈನು ಸಂಘದ ಸ್ಥಾಪನೆಗೆ ಕಾರಣರಾದುದು ಪುತ್ತೂರಿನ ಚರಿತ್ರೆಯು ಮರೆಯದ ಕಾಲಘಟ್ಟ. ಸಂಘದ ಒಂದು ಅಂಗವಾಗಿ ಹೆಗಲು ಕೊಟ್ಟು ಕೃಷಿಕರೆಲ್ಲರ ಒಲವು ಪಡೆದಿದ್ದಾರೆ.
            ಡಾಕ್ಟರ್ ಮುದ್ಲಾಜೆಯ ಕೃಷಿ ಕುಟುಂಬದವರು. ಸಮಾಜಕ್ಕೆ ಋಣಿಯಾಗುವಂತಹ ಉದ್ಯೋಗ ಮಾಡಬೇಕೆಂದು ತಂದೆಯ ಬಯಕೆ. ತಂದೆಯ ಆಸೆಯನ್ನು ಮೀರದ ಮಗ. ಮನೆಯಲ್ಲಿ ಪಶುಸಂಸಾರದೊಂದಿಗೆ ಬದುಕು ಅರಳಿದ್ದರಿಂದ ಸಹಜವಾಗಿಯೇ ಪಶುಪ್ರೀತಿ. ಮನೆಗೆ ಬರುತ್ತಿದ್ದ ಪಶುವೈದ್ಯ ಡಾ.ನಾಗಪ್ಪ ಪೈಯವರ ಪ್ರಚೋದನೆ. ಎಲ್ಲಾ ಬೆಂಬಲಗಳು ಒಟ್ಟುಸೇರಿದ ಫಲವಾಗಿ ಪಶುವೈದ್ಯಕೀಯ ಕಲಿತರು. ಪುತ್ತೂರಿನಲ್ಲಿ ಸ್ವಂತದ್ದಾದ ಕ್ಲಿನಿಕ್ ಆರಂಭಿಸಿದರು. ಖಂಡಿಗೆ ಶಿವಶಂಕರ ಭಟ್ಟರು ಕ್ಲಿನಿಕ್ಕಿಗೆ ಮೊದಲು ಬೋರ್ಡ್ ಹಾಕಿದವರು, ಎಂದು ಜ್ಞಾಪಿಸಿಕೊಳ್ಳುತ್ತಾರೆ.
                ಆಗ ಸರಕಾರಿ ಆಸ್ಪತ್ರೆಯ ಸೇವೆಯು ಹಳ್ಳಿಪ್ರದೇಶಕ್ಕೆ ತಲುಪುತ್ತಿದ್ದುದು ಕಡಿಮೆ. ಪ್ರತಿ ಕೃಷಿಕರಲ್ಲೂ ಜಾನುವಾರುಗಳಿದ್ದುವು. ಕ್ರಮೇಣ ಮಿಶ್ರತಳಿಯ ಪಶುಗಳು ಹಟ್ಟಿಗೆ ಪ್ರವೇಶಿಸಿದ್ದುವು. ಸಹಜವಾಗಿ ಪಶುವೈದ್ಯರ ಅವಲಂಬನೆಯು ಹೆಚ್ಚಾಯಿತು. ಆಗಲೇ ಎಂ.ಎಸ್.ಭಟ್ಟರು ಹೈನುಗಾರರ ಸಂಪರ್ಕದಲ್ಲಿದ್ದರು. ಕರೆದಾಗ ಓಗೊಟ್ಟು ಧಾವಿಸುವ ಸೇವೆಯಿಂದ ವಿಶ್ವಾಸ ವೃದ್ಧಿಯಾಯಿತು. ದಿನದ ಯಾವ ಹೊತ್ತಿಗೆ ಇರಲಿ, ಇವರ ಮೋಟಾರ್ ಬೈಕ್ ಸ್ಟಾರ್ಟ್ ಆಯಿತು ಎಂದಾದರೆ ಎಲ್ಲಿಗೋ ಹಳ್ಳಿಗೆ ಹೊರಟಿದ್ದಾರೆ ಎಂದು ಊಹಿಸಬಹುದಾಗಿತ್ತು! ವೈಯಕ್ತಿಕ ಹಿತಾಸಕ್ತಿಯನ್ನು ಲಕ್ಷಿಸದೆ, ಗಡಿಯಾರ ನೋಡದೆ ಪಶುಗಳ ಕೂಗಿಗೆ ಧಾವಿಸುತ್ತಿದ್ದರು.
             ಕಾಲೇಜಿನಲ್ಲಿ ಕಲಿತ ವಿದ್ಯೆಗಿಂತಲೂ ಹೈನುಗಾರರು ನನ್ನ ಅಕಾಡೆಮಿಕ್ ಜ್ಞಾನವನ್ನು ವಿಸ್ತರಿಸಿದರು., ಎಂದು ವಿನೀತರಾಗುತ್ತಾರೆ. ಚಿಕಿತ್ಸೆಗಿಂತಲೂ ಮುಖ್ಯವಾಗಿ ಪಶುಗಳ ದೇಹಭಾಷೆಯನ್ನು ವೈದ್ಯನಾದವರು ಅರಿಯಬೇಕು. ಮನುಷ್ಯರನ್ನು ಫಕ್ಕನೆ ಪ್ರಾಣಿಗಳು ಸ್ವೀಕರಿಸುವುದಿಲ್ಲ. ಇವುಗಳನ್ನು ಮುಟ್ಟದೆ, ತಟ್ಟದೆ ಚಿಕಿತ್ಸೆ ಸಾಧ್ಯವಿಲ್ಲ. ಒಂದು ಕಾಲಘಟ್ಟದಲ್ಲಿ ಅಸೌಖ್ಯದ ಪಶುಗಳು ಡಾಕ್ಟರರ ಸ್ಪರ್ಶಮಾತ್ರದಿಂದ ಭಾಗಶಃ ಗುಣಹೊಂದುತ್ತಿದ್ದುವು! ಅಷ್ಟೊಂದು ಕೈಗುಣ.
                ಡಾಕ್ಟರಿಗೆ ಮನೆಯ ಗೇಟಿನ ಪರಿಚಯವಿರುವುದಿಲ್ಲ, ಆದರೆ ಹಟ್ಟಿಯ ಗೇಟಿನ ಪರಿಚಯವಿದೆ - ಎಂ.ಎಸ್.ಭಟ್ಟರ ಸೇವೆಗೆ ಈ ವಾಕ್ಯದ ಭಾವಾರ್ಥ ಸಾಕು. ಚಿಕಿತ್ಸೆಗಾಗಿ ಬಂದಾಗ ಆ ಮನೆಯ ಆಗುಹೋಗುಗಳು, ವರ್ತಮಾನದ ಸಂಗತಿಗಳು, ಕೃಷಿ ವಿಚಾರಗಳು, ಮಕ್ಕಳ ಓದು.. ಹೀಗೆಲ್ಲಾ ಮಾತುಕತೆಗಳು ನಡೆಯುತ್ತಿದ್ದುದರಿಂದ ಎಲ್ಲಾ ಹೈನುಗಾರರಿಗೆ ಇವರು ಹಿರಿಯಣ್ಣನಾಗಿದ್ದರು. ಇಂತಹ ಪ್ರೀತಿ, ವಿಶ್ವಾಸ ಗಳಿಸುವುದು ಸುಲಭ ಸಾಧ್ಯವಲ್ಲ.
                  ಕ್ಲಿನಿಕ್ ಆರಂಭಿಸಿದ ಮೂರ್ನಾಲ್ಕು ತಿಂಗಳ ಅನುಭವವನ್ನು ಎಂ.ಎಸ್.ಭಟ್ಟರೇ ಹೇಳಬೇಕು. ಆಗ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧಿ ಲಭ್ಯವಾಗಿರುತ್ತಿತ್ತು. ನಾನು ಕ್ಲಿನಿಕ್ ತೆರೆದಾಗ ಉಚಿತ ಮದ್ದೆಂದು ಗ್ರಹಿಸಿ ಹಣ ನೀಡಿದೆ ಹೋದವರ ಸಂಖ್ಯೆ ಅಗಣಿತ! ಕ್ರಮೇಣ ಸರಿ ಹೋಯಿತು ಬಿಡಿ. ಎನ್ನುತ್ತಾರೆ. ಇವರೊಂದಿಗೆ ಸಂಘದಲ್ಲಿ ಸೇವೆ ಮಾಡುತ್ತಿದ್ದ ಮೋಹನ ಕಲ್ಲೂರಾಯರು ಹೇಳುತ್ತಾರೆ, ಎಲ್ಲರಂತಲ್ಲ, ಕಡಿಮೆ ಚಿಕಿತ್ಸಾ ವೆಚ್ಚ ಪಡೆಯುತ್ತಿದ್ದರು. ಬಡವರು ಎಂದಾದರೆ ಅವರ ಪ್ರಯಾಣ ವೆಚ್ಚವನ್ನು ತಾನೇ ನೀಡಿದ ಉದಾಹರಣೆಯಿದೆ.
                  1976ರಲ್ಲಿ ಎಂ.ಎಸ್.ಭಟ್ಟರು ಜಾನುವಾರು, ಶ್ವಾನ ಪ್ರದರ್ಶನಗಳ ಆಯೋಜನೆಯಲ್ಲಿ ಮುತುವರ್ಜಿ ವಹಿಸಿದ್ದರು. ಬೆಂಗಳೂರಿನಿಂದ ದುಬಾರಿ ಮೊತ್ತ ನೀಡಿ ಶ್ವಾನವನ್ನು ಖರೀದಿಸಿ, ತಂದು ಸಾಕಿದವರೂ ಇದ್ದಾರೆ, ಇದು ಶ್ವಾನ ಪ್ರದರ್ಶನದ ಎಫೆಕ್ಟ್! ನಾಲ್ಕು ದಶಕದ ಹಿಂದೆಯೇ ಇಂತಹ ಸಾಹಸಕ್ಕೆ ಕೈ ಹಾಕಿದ್ದು ಸಣ್ಣ ಸಂಗತಿಯಲ್ಲ. ಇಲ್ಲೆಲ್ಲಾ ಸಮಾಜಮುಖಿಯಾದ ಯೋಚನೆ, ಯೋಜನೆಗಳು ಜೀವಂತವಾಗಿದ್ದುವು. ಸಮಾಜದ ಮಧ್ಯೆ ಬದುಕುವ ನಾನು ಸಮಾಜಕ್ಕಾಗಿ ಏನನ್ನಾದರೂ ಮಾಡಲೇಬೇಕೆನ್ನುವ ತುಡಿತ.
                  ಹೈನು ವ್ಯವಸಾಯಗಾರರ ಸಂಘ ಮತ್ತು ಎಂ.ಎಸ್.ಭಟ್ಟರ ಕ್ಲಿನಿಕ್ - ಇವೆರಡೂ ವ್ಯಾವಹಾರಿಕವಾಗಿ ಬೇರೆ ಬೇರೆ ಆದರೂ ಆಂತರಿಕವಾಗಿ ಮಿಳಿತಗೊಂಡಿದ್ದುವು. ಇವರ ಯೋಚನೆಗಳಿಗ ಸಾಥ್ ಆಗುವ ಪ್ರಾಮಾಣಿಕ ಸಿಬ್ಬಂದಿಗಳಿದ್ದರು. "ಈಗಿನ ಕಾಲಮಾನದಲ್ಲಿ ಹಾಲಿನ ಉತ್ಪಾದನಾ ವೆಚ್ಚವೇ ನಲವತ್ತೇಳು ರೂಪಾಯಿಯಷ್ಟು ಆಗುತ್ತದೆ. ಇದಕ್ಕಿಂತ ಕಡಿಮೆ ಕ್ರಯಕ್ಕೆ ಹಾಲು ವಿತರಿಸುವುದು ಹೇಗೆ? ಉತ್ತೇಜಿತ ದರವು ಹೈನುಗಾರರಿಗೆ ಸಿಕ್ಕರೆ ಈಗಲೂ ಹೈನುಗಾರಿಕೆಗೆ ಒಲವು ತೋರಿಸುವವರು ಇದ್ದಾರೆ. ನಷ್ಟವೆಂದು ಹಟ್ಟಿ ಯಿಂದ ದೂರವಾದವರು ಪುನಃ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ," ಎನ್ನುತ್ತಾರೆ. ಒಳ್ಳೆಯ ಮಾಲಿಗೆ ಒಳ್ಳೆಯ ದರ - ಡಾಕ್ಟರರ ನಿಲುವು. ಹಾಲಿಗೆ ಉತ್ತಮ ದರವು ಹೈನುಗಾರರಿಗೆ ಸಿಗಬೇಕೆನ್ನುವ ಹಪಾಹಪಿ.
                ಭಟ್ಟರದು 'ತಾವಾಯಿತು, ತಮ್ಮ ವೃತ್ತಿಯಾಯಿತು' ಎನ್ನುವ ಜಾಯಮಾನದವರಲ್ಲ. ತೆರೆದುಕೊಳ್ಳುವ ಮನಸ್ಸು. ಹೊಗಳಿಕೆಗೆ ಉಬ್ಬುವವರಲ್ಲ. ಅದು ಅವರಿಗೆ ಮುಜುಗರ ತರುವ ವಿಚಾರ. ಹಾಲಿಗೆ ಬೇಡಿಕೆಯಿಲ್ಲದೆ, ಉತ್ತೇಜಿತ ದರವಿಲ್ಲದೆ ಹೈನುಗಾರರ ಬದುಕು ವಿಷಾದಕ್ಕೆ ಜಾರುತ್ತಿರುವ ಸಂದರ್ಭದಲ್ಲಿ ಸಾಂತ್ವನ ಹೇಳಿದವರು. ಸಂಘವನ್ನು ಸ್ಥಾಪಿಸಿ ಹೈನುಗಾರಿಕೆಗೆ ಮಾನವನ್ನು ತಂದವರು. ಅವರು ನಿವೃತ್ತರಾಗಿ ನಾಲ್ಕು ವರುಷ ಕಳೆದರೂ ಹೈನುಗಾರರು ಎಂ.ಎಸ್.ಭಟ್ಟರನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಓರ್ವ ವ್ಯಕ್ತಿ ಸಮಾಜದಲ್ಲಿ ತನ್ನ ವೃತ್ತಿಯ ಮೂಲಕ ಎಷ್ಟು ದೊಡ್ಡ ಹೆಜ್ಜೆಯನ್ನೂರಬಹುದು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಮುಂದೆ ನಿಲ್ಲುತ್ತಾರೆ.
             ಕಳೆದ ಕೆಲವು ವರುಷಗಳಲ್ಲಿ ಮರಿಕೆಯ ಎ.ಪಿ.ಸದಾಶಿವರು ಸಂಘವನ್ನು ಮುನ್ನಡೆಸಿದ್ದರೆ, ಪ್ರಕೃತ ಪಿ.ಎಸ್.ಕೃಷ್ಣಮೋಹನ್ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ.

Friday, August 25, 2017

ಕನ್ನಾಡಿಗೆ ಗೌರವ ತಂದ ತಳಿ ಸಂರಕ್ಷಕರು

ಉದಯವಾಣಿಯ 'ನೆಲದ ನಾಡಿ' (Nelada Nadi in Udayavani)  / 18-5-2017
(ಚಿತ್ರ : ಶ್ರೀ ಪಡ್ರೆ)

                 'ಜೋಯಿಡಾದ ಮುದ್ಲಿ ಗೆಡ್ಡೆಗೆ ರಾಷ್ಟ್ರ ಪ್ರಶಸ್ತಿ. ಜತೆಗೆ ಹತ್ತು ಲಕ್ಷ ರೂಪಾಯಿಯ ಬಹುಮಾನ'. ಈ ಸುದ್ದಿ ಬಿತ್ತರವಾದಾಗ ಕುಣುಬಿ ಸಮುದಾಯಕ್ಕೆ ಖುಷ್. ಪಾರಂಪರಿಕವಾಗಿ ಸಂರಕ್ಷಿಸಿಕೊಂಡು ಬಂದ ಮುದ್ಲಿ ಗಡ್ಡೆಗೆ ಮಾನ-ಸಂಮಾನ. ರಾಷ್ಟ್ರ ಮಟ್ಟದ ಸುದ್ದಿ. ಊಹಿಸದ ವಿದ್ಯಮಾನ. ಪ್ರಶಸ್ತಿಯು ಕತ್ತಲೆಯ ಬದುಕಿಗೆ ಬೆಳಕಿನ ಕಿರಣ.
 ಬಿಹಾರದ ಚಂಪಾರಣ್ಯದ ಸಮಾರಂಭವೊಂದರಲ್ಲಿ ಪ್ರಶಸ್ತಿ ಪ್ರದಾನ. ಕುಣುಬಿ ಸಮುದಾಯದ ಮುಖಂಡರಿಂದ ಸ್ವೀಕಾರ. ಹಿರಿಯರ ಕಾಲದಿಂದಲೇ ಬದುಕಿಗಾಗಿ ಬೆಳೆಯುತ್ತಿದ್ದ ಈ ಗಡ್ಡೆಗೆ ಪ್ರಶಸ್ತಿ ಬಂದಿರುವುದರಿಂದ ಮಾರುಕಟ್ಟೆ ಸುಲಭವಾಗಬಹುದು, ಎನ್ನುವ ಖುಷಿಯನ್ನು ಹಂಚಿಕೊಂಡರು ಜಯಾನಂದ ಡೇರೇಕರ್. ಇವರು ಕುಣುಬಿ ಸಮುದಾಯದ ಮುಖಂಡರು.
              ಕೇಂದ್ರ ಕೃಷಿ ಸಚಿವಾಲಯದ 'ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ'ವು ಪ್ರಶಸ್ತಿಯನ್ನು ಆಯೋಜಿಸಿತ್ತು. ಸಸ್ಯ ತಳಿಗಳ ರಕ್ಷಣೆಯನ್ನು 2001ರಲ್ಲಿ ಕಾನೂನಿನ ಚೌಕಟ್ಟಿಗೆ ಸರಕಾರವು ಅಳವಡಿಸಿತ್ತು. ಯಾರು ತಳಿಗಳ ಸಂರಕ್ಷಣೆ ಮಾಡುತ್ತಾರೋ ಅದರ ಹಕ್ಕನ್ನು ಅವರಿಗೇ ಪ್ರದಾನಿಸುವ ಅಪರೂಪದ ಮತ್ತು ಅಗತ್ಯದ ಕಾಯಿದೆಯಿದು. ಪ್ರಾಧಿಕಾರವು ರಾಷ್ಟ್ರಮಟ್ಟದಲ್ಲಿ ಇಂತಹ ಪ್ರಶಸ್ತಿಯನ್ನು ನೀಡುವುದರ ಮೂಲಕ ತಳಿ ಸಂರಕ್ಷಕರಿಗೆ ಉತ್ತೇಜನ ನೀಡುತ್ತಿದೆ.
              ಕನ್ನಾಡಿನ ಜೋಯಿಡಾದಲ್ಲಿ ಬಹುಪಾಲು ಕುಣುಬಿ ಸಮುದಾಯದವರೇ ವಾಸ. ಯಾವುದೇ ಮೂಲಸೌಕರ್ಯಗಳು, ಸಾರಿಗೆ ಅನುಕೂಲತೆಗಳಿಂದ ದೂರವಿರುವ ಕುಟುಂಬಗಳ ಮುಖ್ಯ ಕೃಷಿ ಗೆಡ್ಡೆಗೆಣಸು. ಇಲ್ಲಿನ ಮಣ್ಣು, ಹವಾಮಾನದಲ್ಲಿ ಹುಲುಸಾಗಿ ಬೆಳೆಯುವ ಗೆಡ್ಡೆಗಳೇ ಜೀವನಾಧಾರ. 2014ಲ್ಲಿ ಜರುಗಿದ ಗೆಡ್ಡೆ ಮೇಳವು ಕೃಷಿ ಬದುಕಿಗೆ ಹೊಸ ಹಾದಿ ತೋರಿತು. ಜೋಯಿಡಾಕ್ಕೆ ವಿಜ್ಞಾನಿಗಳು ಆಗಮಿಸಿದರು. ಕೃಷಿಕರ ಜತೆ ಸಂವಾದ ಮಾಡಿದರು. ಗೆಡ್ಡೆಗಳ ಇತಿಹಾಸವನ್ನು ದಾಖಲಿಸಿದರು. ಮಾರುಕಟ್ಟೆ ಒದಗಿಸುವತ್ತ ಚಿಂತನೆಗಳು ನಡೆದುವು. ಮೌಲ್ಯವರ್ಧನೆ ಮತ್ತು ಅವುಗಳ ಮಾರಾಟ ಅವಕಾಶಗಳ ರೂಪುರೇಷೆ ಮಾಡಲಾಗಿತ್ತು. ಇವೆಲ್ಲಾ ಅನುಷ್ಠಾನದತ್ತ ಮುಖ ಮಾಡುತ್ತಿರುವಾಗಲೇ - ಮೂರೇ ವರುಷದಲ್ಲಿ - ಜೋಯಿಡಾ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.
            ಮುದ್ಲಿ ಗೆಡ್ಡೆಗೆ ವಿಶೇಷ ಸ್ಥಾನ. ಉದ್ದವಾಗಿ ಬೆಳೆವ ಗಡ್ಡೆಗೆ ಒಂದು ವರುಷ ತಾಳಿಕೆ. ಅತ್ಯಧಿಕ ಪೌಷ್ಟಿಕಾಂಶ. ಇದಕ್ಕೆ ಮುಡ್ಲಿ, ಮುಡಿಯಾ, ದೊಡ್ಡಕೆಸು, (colocasia esculenta) ಎನ್ನುವ ಹೆಸರಿದೆ. ಏಳು ತರಹದ ಖಾದ್ಯಗಳನ್ನು ಇದರಿಂದ ಮಾಡಬಹುದಂತೆ. ಪನ, ಏಟ್, ಕೋಂಬ್, ಸಾಂಬಾರ್, ಚಟ್ನಿ, ಏಡಿಯ ಜತೆ ಕುಲ್ಯಾ ಕಡಿ, ಸಿಗಡಿ ಜತೆ ಸುಂಡಾ ಕಡಿ, ಕಾಪಾ (ಪತ್ರೊಡೆ). ಜತೆಗೆ 'ಕೋನಾ' ಎಂದು ಕರೆಯುವ ಡಯೋಸ್ಕೋರಿಯ ಗಡ್ಡೆಯ ಪಾಯಸ ವಿಶೇಷ. ಮುದ್ಲಿ ಅಲ್ಲದೆ ಹದಿನೈದಕ್ಕೂ ವಿವಿಧ ವೈವಿಧ್ಯ ತಳಿಗಳಿಗಳನ್ನು ಬೆಳೆಸುತ್ತಾರೆ. ತಳಿಯೊಂದನ್ನು ರಕ್ಷಿಸಿಕೊಂಡು ಬಂದ ಕುಣುಬಿ ಸಮುದಾಯಕ್ಕೇ ಈ ಪ್ರಶಸ್ತಿ ಬಂದಂತಾಗಿದೆ.
               ಮೈಸೂರಿನ ಡಾ.ಸಿ.ಎನ್.ಮೃತ್ಯುಂಜಯಪ್ಪ (68) ಅವರಿಗೆ ತಳಿ ಸಂರಕ್ಷಣೆಯ ಕಾಯಕಕ್ಕೆ ಪ್ರಶಸ್ತಿ. ಇವರು ವೃತ್ತಿಯಲ್ಲಿ ವೈದ್ಯರು. ಮೈಸೂರಿನ ಶ್ರೀರಾಂಪುರದಲ್ಲಿ ವಾಸ. ಅವರ ಮನೆ ಹಿತ್ತಿಲಿನಲ್ಲಿ ಎಪ್ಪತ್ತಕ್ಕೂ ಮಿಕ್ಕಿ ವಿವಿಧ ಜಾತಿಯ ತಳಿಗಳನ್ನು ಬೆಳೆಸಿದ್ದಾರೆ. ವಾಣಿಜ್ಯ ವ್ಯವಹಾರಕ್ಕಲ್ಲ, ತಳಿಸಂರಕ್ಷಣೆಯ ಉದ್ದೇಶ.
              ಡಾಕ್ಟರಿಗೆ ಪ್ರವಾಸ ಆಸಕ್ತಿ. ಹೋದೆಡೆ ವಿವಿಧ ನರ್ಸರಿಗಳನ್ನು ಭೇಟಿ ಮಾಡುತ್ತಾರೆ. ಅಪರೂಪದ್ದಾದವುಗಳನ್ನು ತಂದು, ಆರೈಕೆ ಮಾಡಿ ಬೆಳೆಸುತ್ತಾರೆ. ಗಿಡಗಳನ್ನು ತರಲು ಅಸಾಧ್ಯವಾದಾಗ ಕುಡಿಗಳನ್ನು ತಂದು ಕಸಿ ಕಟ್ಟಿ ಅಭಿವೃದ್ಧಿ ಪಡಿಸುತ್ತಾರೆ. ಇವರ ಮನೆಯ ಆವರಣದಲ್ಲಿರುವ ಒಂದೇ ಮಾವಿನ ಮರದಲ್ಲಿ ಹಲವು ಬಗೆಯ ತಳಿಗಳ ಮಾವು ಲಭ್ಯ!
              ನಗರದ ಹಿತ್ತಿಲಿನಲ್ಲಿ ಸ್ಥಳ ತುಂಬಾ ಕಡಿಮೆ. ಮಾವಿನ ಗಿಡ ನೆಡಬೇಕೆಂದರೆ, ಬೇಕಾದ ಜಾತಿಯ ಬಗ್ಗೆ ಮನೆಯಲ್ಲಿ ಒಮ್ಮತವಿಲ್ಲ.   ಗಂಡನಿಗೆ ಅಲ್ಫಾನ್ಸೋ ಇಷ್ಟ. ಹೆಂಡತಿಗೆ ಮಲ್ಲಿಕಾ. ಮಗಳಿಗೆ ಕಾಳಪ್ಪಾಡಿ. ಇಂತಹ ಕುಟುಂಬಗಳು ಚಿಂತಿಸಬೇಕಾಗಿಲ್ಲ. ಎಲ್ಲರಿಗೂ ಸಮಾಧಾನ ಆಗುವ ಫಾರ್ಮುುಲಾ ಅನುಸರಿಸಬಹುದು. ಅದಕ್ಕಿರುವ ಉಪಾಯವೇ ಟಾಪ್ ವರ್ಕಿಂಗ್. ಒಂದೇ ದೇಹಕ್ಕೆ ಹಲವು ತಲೆ. ಒಂದರಲ್ಲಿ ನೂರು! ಒಂದೇ ಮರದಲ್ಲಿ ಅವರವರಿಗೆ ಅಚ್ಚುಮೆಚ್ಚಿನ ಜಾತಿಯ ಹಣ್ಣು, ಡಾ.ಮೃತ್ಯುಂಜಯಪ್ಪ ಸ್ವಾರಸ್ಯವಾಗಿ ಹೇಳುತ್ತಾರೆ.
                 ಡಾಕ್ಟರರ ಹಿತ್ತಿಲಿನ ಮಾವಿನ ಮರದಲ್ಲಿ ನೂರು ತಳಿಗಳ ಶಿರಗಳಿವೆ! ಇದರಲ್ಲಿ ಐವತ್ತು ಬಗೆಯವು ಅಧಿಕೃತ ಹೆಸರಿರುವಂತಹುಗಳು. ಎಲ್ಲಿಂದ ತಳಿಗಳನ್ನು ಸಂಗ್ರಹಿಸಿದ್ದಾರೋ ಆ ಊರಿನ ಹೆಸರನ್ನು ಕೆಲವು ತಳಿಯದ್ದಕ್ಕೆ ನಾಮಕರಣ ಮಾಡಿದ್ದಾರೆ. 'ಒಂದರಲ್ಲಿ ನೂರು ಮಾವು' - ಈ ಮರದಿಂದ ತಿನ್ನಲು ಕಾಯುತ್ತಿರುವ ತಳಿಗಳು ಹಲವು. ವಿಭೂತಿ ಉಂಡೆ, ಹಣ್ಣನ್ನು ತೂತು ಮಾಡಿ ಕುಡಿಯುವಂತಾದ್ದು, ಸೇಬು ಮಾವು, ಅರುಣಾಚಲದ ತಳಿ.. ಇತ್ಯಾದಿ.
               ದಾಸವಾಳ, ಸೇಬು, ಸೀತಾಫಲ, ನಿಂಬೆ ಗಿಡಗಳಿಗೆ ಡಾಕ್ಟರರ ಕಸಿ ಪ್ರಯೋಗ ಯಶಸ್ವಿ. ಅಡಿ ಗಿಡವೊಂದರಲ್ಲಿ  ವಿವಿಧ ತಳಿಗಳ ಫಲಗಳನ್ನು ಪಡೆಯುವ ಯತ್ನ. ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳ ಸಂರಕ್ಷಣೆ ವಿಶೇಷಾಸಕ್ತಿ. ವಿದೇಶಿ ಸಸ್ಯ ಸಂಸಾರಗಳೂ ಇವೆ. ಕೃಷಿ-ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳಿಗೆ ಇವರ ತೋಟ  ಕಲಿಕಾ ಪಠ್ಯ. ಮಡದಿ ಸುಧಾ ಹೆಗಲೆಣೆ.
                  ಎರಡೂ ಪ್ರಶಸ್ತಿಗಳು ತಳಿಸಂರಕ್ಷಣೆಗಾಗಿ ಪ್ರಾಪ್ತವಾದವುಗಳು. ಇಂದು ನಮ್ಮ ಅನೇಕ ಕೃಷಿ ಸಂಶೋಧನಾಲಯಗಳಲ್ಲಿ ತಳಿಗಳು ಸಂಶೋಧನೆಗಳಾಗುತ್ತಿವೆ. ಆ ಸಂಶೋಧನೆಗಳಿಗೆ ಸಿದ್ಧ ವೈಜ್ಞಾನಿಕ ಮಾನದಂಡಗಳಿವೆ. ಆದರೆ ಕೃಷಿಕರೇ ಇಂದು ಸಂಶೋಧಕರಾಗುತ್ತಿದ್ದಾರೆ. ಯಾವುದೇ ಪ್ರಶಸ್ತಿಗಳ ಆಸೆಯಿಂದ ಕುಣುಬಿ ಸಮುದಾಯದವರಾಗಲೀ, ಡಾ.ಮೃತ್ಯುಂಜಯಪ್ಪನವರಾಗಲಿ ತಳಿ ಸಂರಕ್ಷಣೆ ಮಾಡಿದ್ದಲ್ಲ. ಸ್ವಯಂ ಆಸಕ್ತಿಯಿಂದ ಮಾಡಿದ ಸಾಧನೆಗೆ ಪ್ರಶಸ್ತಿ ಅರಸಿ ಬಂದಿರುವುದು ಖುಷಿಯ ಸಂಗತಿ. ಇತರರಿಗೂ ಪ್ರೇರಣೆ. ಹಸಿರಿಗೆ ಸಂದ ಗೌರವ.
                    ತಳಿ ಸಂರಕ್ಷಣೆಯಂತಹ ಕೆಲಸದಲ್ಲಿ ಬಂಟ್ವಾಳ ತಾಲೂಕಿನ ಕೇಪು-ಉಬರು 'ಹಲಸು ಸ್ನೇಹಿ ಕೂಟ'ವು ಐದಾರು ವರುಷದಿಂದ ತೊಡಗಿಸಿಕೊಂಡಿದೆ. ಎಲ್ಲವೂ ಸ್ವಯಂ ಆಸಕ್ತಿಯಿಂದ ಮಾಡಿದವುಗಳು. ಹಲಸು, ಮಾವು ಮೇಳಗಳನ್ನು ಸಂಘಟಿಸುತ್ತಾ, ಲಭ್ಯವಾದ ಹಿಮ್ಮಾಹಿತಿಯ ಜಾಡನ್ನು ಅನುಸರಿಸಿ ಹಲವು ತಳಿಗಳ ಪತ್ತೆ ಮತ್ತು ಸಂರಕ್ಷಣೆಯ ಕೆಲಸಗಳು ಸದ್ದಿಲ್ಲದೆ ನಡೆದಿವೆ. ಸುಮಾರು ಇಪ್ಪತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಏನಿಲ್ಲವೆಂದರೂ ಮೂವತ್ತಕ್ಕೂ ಮಿಕ್ಕಿ ಹಲಸು, ಮಾವಿನ ತಳಿಗಳು ಅಭಿವೃದ್ಧಿಯಾಗಿವೆ.
                 ಅಪರೂಪದ ತಳಿಗಳನ್ನು ಉಳಿಸುವ, ಸಂರಕ್ಷಿಸುವ ನೆಲೆಯಲ್ಲಿ ಹಲಸು ಸ್ನೇಹಿ ಕೂಟವು 'ರುಚಿ ನೋಡಿ-ತಳಿ ಆಯ್ಕೆ' ಎನ್ನುವ ಹೊಸ ಪ್ರಕ್ರಿಯೆಗೆ ಶ್ರೀಕಾರ ಬರೆದಿತ್ತು. ಸಮಾರಂಭದಲ್ಲಿ ಹತ್ತಾರು ತಳಿಯ ಹಲಸಿನ ಹಣ್ಣನ್ನು ಕೃಷಿಕರೇ ರುಚಿ ನೋಡುವುದರ ಮೂಲಕ ತಳಿ ಆಯ್ಕೆಯನ್ನು ಮಾಡಿದೆ. ರುಚಿ, ಬಣ್ಣ, ತಾಳಿಕೆ, ಫಿಲ್ಲಿಂಗ್, ಫಲ ಬಿಡುವ ಸಮಯ.. ಮೊದಲಾದ ಮಾನದಂಡಗಳನ್ನಿಟ್ಟು ತಳಿ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ವೈಜ್ಞಾನಿಕ - ಸಂಶೋಧನಾತ್ಮಕವಾದ ಮಾನದಂಡಗಳಿಲ್ಲದೇ ಇರಬಹುದು. ಆದರೆ ಆ ಊರಿನ ಅಪರೂಪದ್ದಾದ, ಹೆಚ್ಚಾಗಿ ಬೆಳಕಿಗೆ ಬಾರದಿರುವ ಉತ್ಕೃಷ್ಟ ತಳಿಗಳು ಅಭಿವೃದ್ಧಿಯಾಗಿವೆ.
                 ಈಚೆಗೆ ಹಲಸು ಸ್ನೇಹಿ ಕೂಟವು 'ಪುನರ್ಪುಳಿ ಪ್ರಪಂಚದೊಳಕ್ಕೆ' ಎನ್ನುವ ಅಪರೂಪದ, ಖಾಸಗಿ ಸಹಭಾಗಿತ್ವದ ಕಲಾಪವನ್ನು ಹಮ್ಮಿಕೊಂಡಿತ್ತು. ಹದಿನೈದು ವಿವಿಧ ಪುನರ್ಪುಳಿ (ಕೋಕಂ) ತಳಿಗಳನ್ನು 'ತಳಿ ಆಯ್ಕೆ' ಪ್ರಕ್ರಿಯೆಗೆ ಒಡ್ಡಲಾಗಿತ್ತು. ಡಾ.ಕತ್ರಿಬೈಲು ಶ್ರೀಕುಮಾರ್ ಮತ್ತು ಪೇರಡ್ಕ ಜಗನ್ನಾಥ ಶೆಟ್ಟರ ಹಿತ್ತಿಲಿನ ಎರಡು ತಳಿಗಳು ಉತ್ಕೃಷ್ಟವೆಂದು ಆಯ್ಕೆಯಾಗಿವೆ. ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳು ಅಭಿವೃದ್ಧಿ ಪಡಿಸಿದ ತಳಿಗಳಷ್ಟೇ ಉತ್ಕೃಷ್ಟವಾದ ತಳಿಗಳು ನಮ್ಮ ತೋಟದಲ್ಲೋ, ಕಾಡಿನಲ್ಲೋ ಇರಬಹುದು. ಅಂತಹುಗಳನ್ನು ಹುಡುಕಿ ಅಭಿವೃದ್ಧಿ ಪಡಿಸಬೇಕಾಗಿದೆ. ಪುನರ್ಪುಳಿ ಕಾರ್ಯಾಗಾರದಲ್ಲಿ  ಕಸಿ ತಜ್ಞ  ಆತ್ರಾಡಿಯ ಗುರುರಾಜ ಬಾಳ್ತಿಲ್ಲಾಯರು ನಾಲ್ಕು ಪುನರ್ಪುಳಿ ತಳಿಗಳನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸಿದ್ದರು. ಕಲಾಪದಲ್ಲಿ ಅವೆಲ್ಲಾ ಖಾಲಿ! ಕೃಷಿಕರ ಒಲವು ಉತ್ತೇಜಕರ.
                 ತಳಿ ಸಂರಕ್ಷಣೆ ಮತ್ತು ಅಭಿವೃದ್ದಿ ಜತೆಜತೆಗೆ ಆಗುವ ಕೆಲಸಗಳು. ಮನಸ್ಸಿನಿಂದ ಹುಟ್ಟುವ ತಳಿ ಪ್ರೀತಿಯ ಹತ್ತಾರು ತಳಿ ಸಂರಕ್ಷಕರಿಂದಾಗಿ ಇಂದು ವಿವಿಧ ಅಪರೂಪದ ತಳಿಗಳು ಉಳಿದುಕೊಂಡಿವೆ. ತಳಿ ಸಂರಕ್ಷಣೆಗಾಗಿ ಸರಕಾರವು 'ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ'ಯನ್ನು ರೂಪುಗೊಳಿಸಿದೆ. ಇದರ ಕಾರ್ಯವ್ಯಾಪ್ತಿಯಲ್ಲಿ ಕನ್ನಾಡಿನ ಇಬ್ಬರು ಪ್ರಶಸ್ತಿಗೆ ಭಾಜನರಾಗಿರುವುದು ಕನ್ನಾಡಿಗೆ ಗೌರವ.

ಬದಲಾವಣೆಯ ತಂಗಾಳಿ - ತೆಂಗಿನ ಕಾಯಲ್ಲಿ ಫಲದಾಯಕನ ಕಾಯ


ಉದಯವಾಣಿಯ - ನೆಲದ ನಾಡಿ - ಅಂಕಣ / 17-8-2017

                 ಗಣೇಶನ ಹಬ್ಬದ ಸಂಭ್ರಮದ ಕ್ಷಣಕ್ಕೆ ಕನ್ನಾಡು ತೆರೆದುಕೊಳ್ಳುತ್ತಿದೆ. ಮನೆಮನಗಳು ಸಜ್ಜಾಗುತ್ತಿವೆ. ಗಣೇಶನ ವಿಗ್ರಹಗಳಿಗೆ ಕಲಾಗಾರರು ಅಂತಿಮ ಟಚ್ ಕೊಡುತ್ತಿದ್ದಾರೆ. ಇನ್ನೊಂದೇ ವಾರ. ಎಲ್ಲರ ಮನದೊಳಗೆ ಗಣೇಶ ಇಳಿದು ಬಿಡುತ್ತಾನೆ. ಪುಳಕದ ಅನುಭವ, ಅನುಭಾವ.
                ಗಣೇಶ ಕಲ್ಪವೃಕ್ಷ ಫಲಪ್ರಿಯ. ಗಣಹವನಕ್ಕೆ ತೆಂಗಿನಕಾಯಿಯ ಎಲ್ಲಾ ಭಾಗಗಳು ಅವಶ್ಯ. ಹೋಮಿಸಲು ಕೂಡಾ. ಮಂಟಪಕ್ಕೆ ತೆಂಗಿನಗರಿಯಿಂದ ತಯಾರಿಸಿದ ಹೆಣಿಕೆಯು ಪಾರಂಪರಿಕ. ಹೀಗೆ ಸರ್ವತ್ರ ತೆಂಗಿನ ಬಳಕೆಯು ಗಣೇಶನ ಹಬ್ಬದಲ್ಲಿ ಸ್ಥಾನ ಪಡೆದಿದೆ. ಹಬ್ಬಾಚರಣೆಯಲ್ಲಿ ತೆಂಗು ಇಷ್ಟೊಂದು ಪ್ರಭಾವಿಯಾಗಿ ಆವರಿಸಿರಬೇಕಾದರೆ ಗಣೇಶನ ಮೂರ್ತಿಯೂ ತೆಂಗಿನಕಾಯಿಯದ್ದೇ ಆಗಿಬಿಟ್ಟರೆ ಇನ್ನೂ ಶ್ರೇಷ್ಠವಲ್ವಾ!
               ಧಾರವಾಡದಲ್ಲಿ ಸರಕಾರದ ಆದೇಶವೊಂದು ಈ ಯೋಚನೆಗೆ ಬೀಜಾಂಕುರ ಮಾಡಿತು. ನೈಸರ್ಗಿಕವಲ್ಲದ ವಸ್ತುಗಳಿಂದ ತಯಾರಿಸುವ ಗಣಪನ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಬಾರದು ಎನ್ನುವುದು ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶ. ಇದಕ್ಕೆ ಕಾರಣ ಇಲ್ಲದಿಲ್ಲ. ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ವಿವಿಧ ರಾಸಾಯನಿಕ ಬಣ್ಣಗಳನ್ನು ಬಳಸಿ ಮೂರ್ತಿಗಳನ್ನು ರಚಿಸುವುದು ವಾಡಿಕೆ. ಗಣೇಶನ ವಿಸರ್ಜನೆ ಬಳಿಕ ಮೂರ್ತಿಯು ನೀರಿನಲ್ಲಿ ಕರಗುವುದಿಲ್ಲ. ಮೂರ್ತಿಯ ಅಂದಕ್ಕಾಗಿ ಲೇಪಿಸಿದ್ದ ಕೃತಕ ಬಣ್ಣಗಳು ನೀರಿನೊಂದಿಗೆ ಮಿಶ್ರಗೊಂಡು ಕಲುಶಿತವಾಗುತ್ತದೆ. ಇದರಿಂದ ನಾನಾ ತರಹದ ಕಾಯಿಲೆಗಳು ಬರುವುದಲ್ಲದೆ ಜೀವವೈವಿಧ್ಯಕ್ಕೂ ಹಾನಿಯಾಗುತ್ತದೆ.
                 ಮಣ್ಣಿನಿಂದಲೇ ಮೂರ್ತಿಗಳನ್ನು ಮಾಡಿದರೆ ಓಕೆ. ಈಗಾಗಲೇ ಈ ಯತ್ನದಲ್ಲಿ ಯಶ ಸಾಧಿಸಿದವರಿದ್ದಾರೆ. ಮಣ್ಣಿನ ಬದಲಿಗೆ ಗಣಪನಿಗೆ ಪ್ರಿಯವಾದ ತೆಂಗಿನಕಾಯಿಯಿಂದಲೇ ಮೂರ್ತಿ ಸಿದ್ಧವಾದರೆ ಪರಿಸರ ನೈರ್ಮಲ್ಯಕ್ಕೆ ಆತಂಕವಿಲ್ಲ. ಜಿಲ್ಲಾಧಿಕಾರಿಗಳ ಈ ಆದೇಶವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗಂಭೀರವಾಗಿ ಪರಿಗಣಿಸಿತು. ಪ್ಲಾಸ್ಟರ್ ಆಫ್ ಪ್ಯಾರೀಸ್ಗೆ ಪರ್ಯಾಯ ವ್ಯವಸ್ಥೆಯೊಂದನ್ನು ಜನರ ಮುಂದಿಡಲು ಬಹುಕಾಲದಿಂದ ಯೋಚಿಸುತ್ತಲೇ ಇತ್ತು.
ಧಾರವಾಡ ಇಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ಮೇಲ್ವಿಚಾರಕ ಬಾವಿಕಟ್ಟಿಯ ಜಗದೀಶ ಗೌಡ ಮತ್ತು ಅವರ ಸಹೋದರ ವೀರನಗೌಡರು ತೆಂಗಿನಿಂದ ವಿವಿಧ ವಿನ್ಯಾಸಗಳನ್ನು ಸ್ವ-ಆಸಕ್ತಿಗಾಗಿ ಮಾಡುತ್ತಿದ್ದರು. ಆಸಕ್ತರಿಗೆ ಹಂಚುತ್ತಿದ್ದರು. ಮೇಳಗಳಲ್ಲಿ ಪ್ರದರ್ಶನಕ್ಕಿಡುತ್ತಿದ್ದರು. ಅದರಲ್ಲಿ ತೆಂಗಿನಕಾಯಿ ಗಣಪನ ಮೂರ್ತಿಯೂ ಒಂದು. ಗ್ರಾಮಾಭಿವೃದ್ಧಿ ಯೋಜನೆಯ ಯೋಚನೆಗೆ ಜಿಲ್ಲಾಧಿಕಾರಿಗಳ ಆದೇಶವೂ ಬಲ ನೀಡಿತು. ಜಗದೀಶರ ಕಲೆಯನ್ನು ಜನರ ಮುಂದಿಡಲು ಮುಂದಾಯಿತು.
             ಯೋಜನೆಯ 'ಕೌಶಲ್ಯ ಅಭಿವೃದ್ಧಿ ತರಬೇತಿ'ಯಡಿ ಸ್ವ-ಸಹಾಯ ಸಂಘದ ಐವತ್ತು ಮಹಿಳೆಯರಿಗೆ ಜಗದೀಶರು ತರಬೇತಿ ನೀಡಿದರು. ಇಪ್ಪತ್ತೈದು ಮಂದಿಯ ಎರಡು ತಂಡಕ್ಕೆ ಏಳೇಳು ದಿವಸಗಳ ತರಬೇತಿ. ತೆಂಗಿನಕಾಯಿಯ ಆಯ್ಕೆಯಲ್ಲಿಂದ ಅಂತಿಮ ಸ್ಪರ್ಶದ ತನಕದ ಸಿಲೆಬಸ್. ಪರೀಕ್ಷೆಯಲ್ಲಿ ಎಲ್ಲರೂ ಉತ್ತೀರ್ಣ. ಫಲವಾಗಿ ಐನೂರಕ್ಕೂ ಮಿಕ್ಕಿ ತೆಂಗಿನಕಾಯಿಯಲ್ಲಿ ಮೂಡಿದ ಗಣೇಶ ಪೂಜೆಗೆ ಸಿದ್ಧನಾಗಿದ್ದಾನೆ. ಇನ್ನೂ ಐನೂರಕ್ಕೆ ನಕ್ಷೆ ತಯಾರಾಗಿದೆ.
              "ಈ ವರುಷ ಒಂದು ಸಾವಿರ ಮನೆಗಳಲ್ಲಿ ತೆಂಗಿನಕಾಯಿಯಿಂದ ರಚಿತವಾದ ಗಣಪನ ವಿಗ್ರಹಕ್ಕೆ ಪೂಜೆ ಸಲ್ಲಲ್ಪಡುತ್ತದೆ. ಮನೆಮನೆ ಭೇಟಿ ಮೂಲಕ ಅರಿವು ಮೂಡಿಸುವ ಯತ್ನಗಳಾಗುತ್ತಿವೆ. ಗಣೇಶ ಮೂರ್ತಿ ಅಂದಾಗ ನೀರಿನಲ್ಲಿ ವಿಸರ್ಜನೆ ಮಾಡಬೇಕೆನ್ನುವ ಮೈಂಡ್ಸೆಟ್ ಬಹುತೇಕರಲ್ಲಿದೆ. ತೆಂಗಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿ ನಂತರ ಮಣ್ಣಿಗೆ ಸೇರಿಸಿ. ಅದು ಮೊಳಕೆ ಬಂದು ಸಸಿಯಾಗುತ್ತದೆ, ಕಲ್ಪವೃಕ್ಷವಾಗುತ್ತದೆ. ಅದೊಂದು ಪವಿತ್ರ ಮರವಾಗುತ್ತದೆ. ಇಲ್ಲವೇ ಅಂದಕ್ಕಾಗಿ ಶೋಕೇಸಿನಲ್ಲಿಡಿ. ನಮ್ಮ ವಿಚಾರಗಳಿಗೆ ಮಹಿಳೆಯರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎನ್ನುವ ಮಾಹಿತಿ ನೀಡಿದರು ಪ್ರಿಯಾ. ಈ ಉದ್ದೇಶಕ್ಕಾಗಿಯೇ ಧಾರವಾಡದ ಕೆಲ್ಕೇರಿಯಲ್ಲಿ ರೂಪುಗೊಂಡ 'ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ'ಯ ಮುಖ್ಯಸ್ಥರಿವರು.
                  ಐವತ್ತು ಮಂದಿ ತರಬೇತಿಯೇನೋ ಪಡೆದರು. ಪ್ರಾಕ್ಟಿಕಲ್ ವಿಚಾರಕ್ಕೆ ಬಂದಾಗ ಸಹಜವಾಗಿ ಎಡವಿದರು. ಆಕಾರಗಳು ಮೊದಲಿಗೆ ವಿಕಾರವಾದುವು. ಅನುಭವದ ಗಾಢತೆ ವಿಸ್ತಾರವಾಗುತ್ತಾ ಬಂದಂತೆ ಕಲೆ ಕೈವಶವಾಯಿತು. ಒಬ್ಬರು ದಿವಸಕ್ಕೆ ನಾಲ್ಕು ಮೂರ್ತಿಗಳನ್ನು ರಚಿಸುವಷ್ಟು ನಿಷ್ಣಾತರಾದರು. ತೆಂಗಿನಕಾಯಿಯ ಆಯ್ಕೆಗೆ ಮೊದಲಾದ್ಯತೆ. ಉರುಟಾಗಿರುವ ಸುಲಿಯದ ಕಾಯಿಯಾಗಿರಬೇಕು. ಹೆಚ್ಚು ಎಳೆಯದಾಗಿರಬಾರದು, ಕೊಬ್ಬರಿಯ ಹಂತಕ್ಕೂ ತಲುಪಿರಬಾರದು-ಇಂತಹ ಕಾಯಿಗಳನ್ನು ವಿಗ್ರಹ ರಚನೆಗೆ ಆಯ್ಕೆ. ಯಲ್ಲಾಪುರದಿಂದ ಕುಸುರಿಗೆ ಬೇಕಾದ ಆಕಾರಗಳ ಕಾಯಿಗಳ ಖರೀದಿ. ಅದರ ಮೇಲೆ ಸ್ಕೆಚ್ ಹಾಕುವುದು ಮೊದಲ ಕೆಲಸ. ಮತ್ತೆಲ್ಲಾ ಚಾಕುವಿನ ಚಮತ್ಕೃತಿ. ಮನದೊಳಗಿನ ಕಲೆಯು ಚಕಚಕನೆ ತೆಂಗಿಗೆ ಆಕಾರ ಕೊಡುತ್ತದೆ. ಗಣಪನನ್ನು ಕೂರಿಸುವುದಕ್ಕೆ ಚಿಕ್ಕ ಪೀಠ. ಒಂದು ಮೂರ್ತಿಗೆ ನಾಲ್ಕು ನೂರಒಂದು ರೂಪಾಯಿ.
                 ಹೀಗೆ ಸಿದ್ಧವಾದ ವಿಗ್ರಹಕ್ಕೆ ಕಿರೀಟ, ಕಿವಿ ಆಭರಣ, ಕಣ್ಣುಗಳನ್ನು ಪ್ರತ್ಯೇಕವಾಗಿ ಫಿಕ್ಸ್ ಮಾಡುತ್ತಾರೆ. "ಬಹುಕಾಲ ಕೆಡದಿರುವಂತೆ ಟಚ್ವುಡ್ಡಿನ ಲೇಪ. ಹೀಗೆ ಮಾಡಿದ್ದರಿಂದ  ತಾಳಿಕೆ ಹೆಚ್ಚು. ಅಲಂಕಾರಕ್ಕಾಗಿ ಕಾಪಿಡಬಹುದು. ಪರಿಸರಕ್ಕೆ ಹಾನಿಯಿಲ್ಲ. ತೆಂಗು ನೈಸರ್ಗಿಕ ಉತ್ಪನ್ನ. ಬದಲಾದ ಕಾಲಘಟ್ಟದಲ್ಲಿ ಇಂತಹ ಬದಲಾವಣೆಯ ಮನಃಸ್ಥಿತಿಯನ್ನೂ ರೂಢಿಸುವುದು ಅನಿವಾರ್ಯವಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸ್ಥಾಪಿತ  ಮಾರಾಟಗಾರರು ಇದನ್ನು ಪಕ್ಕನೆ ಒಪ್ಪಲಾರರು ಎಂದೂ ಗೊತ್ತಿದೆ. ಆದರೆ ಜನರು ಒಪ್ಪುತ್ತಿದ್ದಾರೆ, ಎನ್ನುವ ಮಾಹಿತಿ ನೀಡುತ್ತಾರೆ," ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಧಾರವಾಡದ ದಿನೇಶ್ ಎಂ.
                 ಹುಬ್ಬಳ್ಳಿ, ಧಾರವಾಡ ಪೇಟೆಯುದ್ದಕ್ಕೂ ಓಡಾಡಿದರೆ ಸಾಕು, ಗಣೇಶನ ಸಾಲು ಸಾಲು ವಿಗ್ರಹಗಳು. ಕೆಲವೆಡೆ 'ಇಲ್ಲಿ ಗಣಪತಿ ಮೂರ್ತಿ ಸಿಗುತ್ತದೆ' ಎನ್ನುವ ಫಲಕವೂ ಗೋಚರವಾಗುತ್ತದೆ. ವ್ಯಾಪಾರವನ್ನು ನೆಚ್ಚಿಕೊಂಡ ಬಹು ಮಂದಿ ಮೂರ್ನಾಲ್ಕು ಹಿಂದೆಯೆ ಗಣೇಶನ ಮೂರ್ತಿಯ ರಚನೆಯಲ್ಲಿ ಬ್ಯುಸಿಯಾಗಿದ್ದರು. ಬಹುಶಃ ಪಿಓಪಿಯಿಂದ ಬಳಸಿ ಮಾಡಿದ ವಿಗ್ರಹಗಳೂ ಸಾಕಷ್ಟು ಇದ್ದಿರಬೇಕು. ಜಿಲ್ಲಾಧಿಕಾರಿಗಳ ಆದೇಶವು ಇವರೆಲ್ಲರ ಮುಖದಲ್ಲಿ ವಿಷಾದದ ಗೆರೆಯನ್ನು ಮೂಡಿಸಿದೆ.
              ಗಣೇಶ ಹಬ್ಬದಂತೆ ಇತರ ಹಬ್ಬಗಳೂ ಇವೆಯಲ್ಲಾ. ಉದಾ. ದೀಪಾವಳಿ, ನವರಾತ್ರಿ. ಇಂತಹ ಸಂದರ್ಭಗಳಲ್ಲಿ ಯಾವ ರೀತಿಯ ಮಾದರಿಯನ್ನು ಕೊಡುತ್ತೀರಿ? ಪ್ರಿಯಾ ಹೇಳುತ್ತಾರೆ, "ಈಗಾಗಲೇ ಸಾವಿರದಷ್ಟು ಗಣೇಶನ ಮೂರ್ತಿಗಳು ಸಿದ್ಧವಾಗಿದೆ. ಅವಕ್ಕೆ ಅಂದವನ್ನು ಕೊಡುವಲ್ಲಿ ಸುಧಾರಣೆಯಾಗುತ್ತಿವೆ. ಯಾವುದೇ ದೇವರ ಮೂರ್ತಿಗಳನ್ನು ತೆಂಗಿನಲ್ಲಿ ಮೂಡಿಬಹುದೆಂಬ ಧೈರ್ಯ ಬಂದಿದೆ. ಕರಕುಶಲ ಮೇಳಗಳಲ್ಲಿ ಇಂತಹ ವಿನ್ಯಾಸಗಳನ್ನು ಪರಿಚಯಿಸಬಹುದು. ದೇವಸ್ಥಾನಗಳ ಪಕ್ಕದ ಮಳಿಗೆಗಳಲ್ಲಿಟ್ಟು ಜನರ ಚಿತ್ತವನ್ನು ಸೆಳೆಯಬಹುದು. ಗುಣಮಟ್ಟವನ್ನು ವೃದ್ಧಿಸಿ ಈ ದಿಸೆಯಲ್ಲಿ ನಮ್ಮ ಸಮಿತಿಯು ಹೆಜ್ಜೆಯೂರಲಿದೆ.
                ಆರಂಭದಲ್ಲಿ ತರಬೇತಿಗೆ ಸದಸ್ಯರನ್ನು ನಿಯುಕ್ತಿ ಮಾಡುವಾಗ ನಿಜಾಸಕ್ತರನ್ನೇ ಆಯ್ಕೆ ಮಾಡಿದ್ದು ದೊಡ್ಡ ಬಲ. ಪ್ರಿಯಾ ಸ್ವತಃ ಕಲಾವಿದೆ. ಚಾಕು ಹಿಡಿದು ತೆಂಗಿನಕಾಯಿಯ ಮೇಲೆ ಸುಲಭದಲ್ಲಿ ಮತ್ತು ಕ್ಷಿಪ್ರವಾಗಿ ಕುಸುರಿ ಮಾಡಬಲ್ಲರು. ಎಲ್ಲಾ ಸದಸ್ಯರ ಆಸಕ್ತಿ, ಹುಮ್ಮಸ್ಸಿನಲ್ಲಿ ಪೈಪೋಟಿ ಇರುವುದರಿಂದ ಅಲ್ಪಕಾಲದಲ್ಲಿ ಐನೂರು ಮೂರ್ತಿಯನ್ನು ಮಾಡಲು ಸಾಧ್ಯವಾಯಿತು. ಸಮಿತಿ ರೂಪೀಕರಣದ ಬಳಿಕ ಆಸಕ್ತರ ಒಲವು ಹೆಚ್ಚಾಗಿ ಸದಸ್ಯರ ಸಂಖೈಯಲ್ಲೂ ಏರಿಕೆಯಾಗುತ್ತಿದೆ. ಈ ಸಮಿತಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕೆನ್ನುವುದು ದೂರದೃಷ್ಠಿ.
                ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತೆಂಗಿನ ಗಣೇಶನ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಮನೆಯಲ್ಲೂ ಅನುಷ್ಠಾನಿಸಲು ನಿರ್ಧಾರ ಮಾಡಿದ್ದಾರಂತೆ. ಜಿಲ್ಲಾಧಿಕಾರಿಯವರು ಮತ್ತು ಇತರ ಅಧಿಕಾರಿ ವರ್ಗದವರನ್ನು ಗ್ರಾಮಾಭಿವೃದ್ದಿ ಯೊಜನೆಯ ವರಿಷ್ಠರು ಭೇಟಿ ಮಾಡಿ ಬೆಂಬಲಿಸಲು ಕೋರಲಿದ್ದಾರೆ. ಪರಿಸರದ ಕಾಳಜಿ ಹೊಂದಿರುವ ಒಂದಿಬ್ಬರು ಮಠಾಧೀಶರು ಕೂಡ ಈಗಾಗಲೇ ಒಲವು ವ್ಯಕ್ತಪಡಿಸಿದ್ದಾರೆ.
               ಧಾರವಾಡದ ಕೆಲಕೇರಿಯ ಮಂಜುನಾಥ ಹಿರೇಮಠ ಮತ್ತು ಅವರ ತಂಡವು ಬಹುಕಾಲದಿಂದ ಇಂತಹ ನೈಸರ್ಗಿಕ ವಿಚಾರಗಳನ್ನು ಜನರ ಮುಂದಿಡುತ್ತ ಬಂದಿದೆ. ಅನುಷ್ಠಾನವನ್ನೂ ಮಾಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಇಡ್ಲಹುಂಡ್ ಹಳ್ಳಿಯ ಮಲ್ಲಪ್ಪ ಶಂಕರಪ್ಪ ಕುಂಬಾರ್ ಕುಟುಂಬ ಸಾವಿರಗಟ್ಟಲೆ ಮಣ್ಣಿನ ಮೂರ್ತಿಗಳನ್ನು ಪಾರಂಪರಿಕವಾಗಿ ರಚಿಸುತ್ತಿದ್ದಾರೆ. ಕುಲಕಸುಬನ್ನು ಉಳಿಸುತ್ತಿದ್ದಾರೆ.
                 ಒಂದು ವ್ಯವಸ್ಥೆಗಳಿಗೆ ಒಪ್ಪಿಕೊಂಡ ಮನಸ್ಸು ತಕ್ಷಣ ಬದಲಾವಣೆಯನ್ನು ಸ್ವೀಕರಿಸುವುದಿಲ್ಲ. ಮನೆಯ ಪದ್ಧತಿ, ನಂಬುಗೆಗಳು ಗಾಢವಾಗಿ ಬದುಕಿನಲ್ಲಿ ಬೇರನ್ನು ಇಳಿಸಿರುತ್ತವೆ ಮಾದರಿಗಳು ಮುಂದಿದ್ದರೆ ಅನುಸರಿಸಲು ಹಾದಿ ಸುಲಭ. ಈ ಹಿನ್ನೆಲೆಯಲ್ಲಿ ತೆಂಗಿನಕಾಯಿಯಿಂದ ರೂಪುಗೊಂಡ ಗಣಪತಿಯ ಮೂರ್ತಿಯು ಪಾರಿಸಾರಿಕವಾಗಿಯೂ ನೈಸರ್ಗಿಕವಾಗಿಯೂ ಜನ ಸ್ವೀಕೃತಿ ಪಡೆಯುತ್ತಿದೆ. ಅವಳಿ ನಗರದಲ್ಲಿ ಬದಲಾವಣೆಯ ತಂಗಾಳಿ ಬೀಸುತ್ತಿದೆ.

Tuesday, August 22, 2017

ಸದ್ದಿಲ್ಲದ ಪರಿಸ್ನೇಹಿ ಆಂದೋಳನ - ಗಣೇಶನ ಪೂಜೆಗೆ 'ಇಷ್ಟಫಲ'ದ ವಿಗ್ರಹ

ತೆಂಗಿನ ಗಣೇಶ ವಿಗ್ರಹ ರಚನಾ ಸೈನ್ಯ
 ಕುಸುರಿ ಕೆಲಸ
 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ
'ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ'ಯ ಮುಖ್ಯಸ್ಥೆ ಪ್ರಿಯಾ ಖೋದನಾಪುರ (ಬಲ)

              "ನೈಸರ್ಗಿಕವಲ್ಲದ ವಸ್ತುಗಳಿಂದ ತಯಾರಿಸುವ ಗಣಪನ ಮೂರ್ತಿಯನ್ನು ಸಾರ್ವಜನಿಕವಾಗಿ ಇಲ್ಲವೇ ಮನೆಗಳಲ್ಲಿ ಪ್ರತಿಷ್ಠಾಪಿಸಬಾರದು" ಧಾರವಾಡ ಜಿಲ್ಲಾಧಿಕಾರಿಗಳ ಆದೇಶ.
            ಗಣೇಶ ಚತುರ್ಥಿ ಸಂದರ್ಭದ ಆರಾಧನೆಯಲ್ಲಿ ಮಣ್ಣಿನ ಮೂರ್ತಿಗಳ ಬಳಕೆ ಅಪೇಕ್ಷಣೀಯ. ಮೂರ್ತಿಗೆ ಬಳಸಿದ ನೈಸರ್ಗಿಕ ಬಣ್ಣವೂ ಸೇರಿ ಎಲ್ಲವೂ ನೀರಿನಲ್ಲಿ ಕರಗುತ್ತದೆ. ಇದರಿಂದ ಪರಿಸರ, ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ.
ನೀರಿನಲ್ಲಿ ಕರಗದ ಪ್ಲಾಸ್ಟರ್ ಆಪ್ ಪ್ಯಾರೀಸ್(ಪಿಒಪಿ)ನಿಂದ ತಯಾರಿಸಿದ ವಿಗ್ರಹಗಳು ಮತ್ತು ರಾಸಾಯನಿಕ ಬಣ್ಣಗಳು ಹಾನಿಕಾರಕ. ಈ ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶವು ವರ್ತಮಾನದ ಅನಿವಾರ್ಯತೆ. ಆರಾಧನೆಯ ಬಳಿಕ ವಿಗ್ರಹವನ್ನು ವಿಸರ್ಜಿಸುವ ಜಲಮೂಲಗಳ ರಕ್ಷಣೆಯ ಕಾಳಜಿಯ ನೋಟವು ಆದೇಶದ ಹಿಂದಿರುವುದು ಗಮನೀಯ.
              ಮೂರ್ತಿ ರಚನೆಯ ಕಾಯಕವನ್ನು ನೆಚ್ಚಿಕೊಂಡ ಅನೇಕರಿಗೆ ಜಿಲ್ಲಾಧಿಕಾರಿಗಳ ಆದೇಶ ಸಂತೋಷ ನೀಡದು. ಅವರೆಲ್ಲರೂ ಅನಿವಾರ್ಯವಾಗಿ ನೈಸರ್ಗಿಕ ಒಳಸುರಿಯತ್ತ ವಾಲಲೇಬೇಕಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಿಒಪಿಗೆ ಪರ್ಯಾಯ ವ್ಯವಸ್ಥೆಯತ್ತ ಯೋಚಿಸಿದೆ.
              ತೆಂಗಿನ ಕಾಯಿಯಿಂದ ಕೆತ್ತಲ್ಪಟ್ಟ ಗಣಪನ ವಿಗ್ರಹಗಳನ್ನು ಜನರ ಮುಂದೆ ಪ್ರಸ್ತುತಪಡಿಸುತ್ತಿದೆ. ಮನೆಮನೆ ಭೇಟಿ ಮಾಡಿ ಜನರಲ್ಲಿ ಅರಿವನ್ನು ಬಿತ್ತುವ ಕೆಲಸ ಮಾಡುತ್ತಿದೆ. ಪಿಒಪಿ, ರಾಸಾಯನಿಕಗಳ ಬಳಕೆಯ ಮಾರಕವನ್ನು ತಿಳಿಸುತ್ತಿದೆ. ಪರಿಣಾಮವಾಗಿ ಈಗಾಗಲೇ ಐನೂರಕ್ಕೂ ಮಿಕ್ಕಿ ಮಂದಿ ತೆಂಗಿನ ಕಾಯಿಯಲ್ಲಿ ಮೂಡಿಸಿದ ಗಣಪನ ವಿಗ್ರಹವನ್ನು ಮನೆ ಆಚರಣೆಗಾಗಿ ಆಯ್ದುಕೊಂಡಿದ್ದಾರೆ. ಇದೊಂದು ಸದ್ದಿಲ್ಲದ ಬದಲಾವಣೆಯ ಮೆಟ್ಟಿಲು.
             ಧಾರವಾಡ ಇಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ಮೇಲ್ವಿಚಾರಕ ಜಗದೀಶ ಗೌಡ ಬಾವಿಕಟ್ಟಿ ಮತ್ತು ಅವರ ಸಹೋದರ ವೀರನಗೌಡರು ತೆಂಗಿನಿಂದ ಕಲಾತ್ಮಕ ಕುಸುರಿಗಳನ್ನು ಮಾಡಿ ಆಸಕ್ತರಿಗೆ, ಸ್ನೇಹಿತರಿಗೆ ಹಂಚುತ್ತಿದ್ದರು. ಅವರ ಸಂಗ್ರಹದ ತೆಂಗಿನ ಗಣಪನ ಕಲಾಕೃತಿಯ ವಿನ್ಯಾಸವನ್ನು ಪಿಒಪಿಗೆ ಪರ್ಯಾಯವಾಗಿ ನೀಡಬಹುದೆಂಬ ಯೋಜನೆಯ ಯೋಚನೆ ಅನುಷ್ಠಾನದ ಹೆಜ್ಜೆಯೂರಿದೆ.
             ಗ್ರಾಮಾಭಿವೃದ್ಧಿ ಯೋಜನೆಯ 'ಕೌಶಲ್ಯ ಅಭಿವೃದ್ಧಿ ತರಬೇತಿ'ಯಡಿ ಸ್ವ-ಸಹಾಯ ಸಂಘದ ಐವತ್ತು ಮಹಿಳೆಯರಿಗೆ ಜಗದೀಶರಿಂದ ತರಬೇತಿ. ಇಪ್ಪತ್ತೈದು ಮಂದಿಯ ಎರಡು ತಂಡಕ್ಕೆ ಏಳೇಳು ದಿವಸಗಳ ಕಲಿಕೆ. ಫಲವಾಗಿ ಐನೂರಕ್ಕೂ ಮಿಕ್ಕಿ ತೆಂಗಿನಕಾಯಿಯಲ್ಲಿ ಮೂಡಿದ ಗಣೇಶ ಪೂಜೆಗೆ ಸಿದ್ಧನಾಗಿದ್ದಾನೆ. ಬೇಡಿಕೆಯಂತೆ ಎಲ್ಲವೂ ನಡೆದುಹೋದರೆ ಚೌತಿಯ ಸಂದಭಕ್ಕೆ ಸಾವಿರದ ದಾಟಿದರೂ ಆಶ್ಚರ್ಯಪಡಬೇಕಿಲ್ಲ.
               "ಗಣೇಶನ ಮೂರ್ತಿ ಅಂದಾಗ ನೀರಿನಲ್ಲಿ ವಿಸರ್ಜಿಸಬೇಕೆನ್ನುವ ಮನಃಸ್ಥಿತಿ ಸಹಜವಾಗಿ ಬದುಕಿಗಂಟಿಕೊಂಡಿದೆ. ತೆಂಗಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿ ನಂತರ ಮಣ್ಣಿಗೆ ಸೇರಿಸಿ. ಅದು ಮೊಳಕೆ ಬಂದು ಸಸಿಯಾಗುತ್ತದೆ, ಕಲ್ಪವೃಕ್ಷವಾಗುತ್ತದೆ. ಅಥವಾ ಅಂದಕ್ಕಾಗಿ ಶೋಕೇಸಿನಲ್ಲಿಡಬಹುದು. ನಮ್ಮ ವಿಚಾರಗಳಿಗೆ ಮಹಿಳೆಯರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎನ್ನುವ ಮಾಹಿತಿ ನೀಡಿದರು ಪ್ರಿಯಾ ಖೋದಾನಪುರ.  ಇವರು ಧಾರವಾಡದ ಕೆಲ್ಕೇರಿಯಲ್ಲಿ ರೂಪುಗೊಂಡ 'ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ'ಯ ಮುಖ್ಯಸ್ಥರು.
                ತರಬೇತಿ ಪಡೆದ ಸಮಿತಿಯ ಸದಸ್ಯೆಯರು ಸಂತೋಷದಿಂದ ಕಾರ್ಯರಂಗಕ್ಕೆ ಧುಮುಕಿದರು. ಆರಂಭದಲ್ಲಿ ಎಡವಿದರೂ, ಮಾಡುತ್ತಾ ಸುಲಭವಾಯಿತು. ಈಗ ಒಬ್ಬರು ದಿವಸಕ್ಕೆ ನಾಲ್ಕು ಮೂರ್ತಿಗಳನ್ನು ರಚಿಸುವಷ್ಟು ಪಳಗಿದ್ದಾರೆ. ಉರುಟಾಗಿರುವ ಸುಲಿಯದ ಕಾಯಿಯು ಹೆಚ್ಚು ಎಳೆಯದಾಗಿರಬಾರದು, ಕೊಬ್ಬರಿಯ ಹಂತಕ್ಕೂ ತಲುಪಿರಬಾರದು - ಇಂತಹ ಕಾಯಿಗಳನ್ನು ಮೂರ್ತಿಯ ರಚನೆಗೆ ಆಯ್ಕೆ ಮಾಡುತ್ತಾರೆ.
                  ಯಲ್ಲಾಪುರದಿಂದ ಕುಸುರಿಗೆ ಬೇಕಾದ ಆಕಾರಗಳ ಕಾಯಿಗಳ ಖರೀದಿ. ಅದರ ಮೇಲೆ ಸ್ಕೆಚ್ ಹಾಕುವುದು ಮೊದಲ ಕೆಲಸ. ಮತ್ತೆಲ್ಲಾ ಚಾಕುವಿನ ಚಮತ್ಕೃತಿ. ಮನದೊಳಗಿನ ಕಲೆಯು ಚಕಚಕನೆ ತೆಂಗಿಗೆ ಆಕಾರ ಕೊಡುತ್ತದೆ. ಗಣಪನನ್ನು ಕೂರಿಸುವುದಕ್ಕೆ ಚಿಕ್ಕ ಪೀಠ. ಒಂದು ಮೂರ್ತಿಗೆ ನಾಲ್ಕು ನೂರಒಂದು ರೂಪಾಯಿ.
               ಹೀಗೆ ಸಿದ್ಧವಾದ ಮೂರ್ತಿಗೆ ಕಿರೀಟ, ಕಿವಿ ಆಭರಣ, ಕಣ್ಣುಗಳನ್ನು ಪ್ರತ್ಯೇಕವಾಗಿ ಫಿಕ್ಸ್ ಮಾಡುತ್ತಾರೆ. ಬಹುಕಾಲ ಕೆಡದಿರುವಂತೆ ಟಚ್ವುಡ್ಡಿನ ಲೇಪ. ಹೀಗೆ ಮಾಡಿದ್ದರಿಂದ  ತಾಳಿಕೆ ಹೆಚ್ಚು. ಅಲಂಕಾರಕ್ಕಾಗಿ ಕಾಪಿಡಬಹುದು. ಪರಿಸರಕ್ಕೆ ಹಾನಿಯಿಲ್ಲ. "ತೆಂಗು ನೈಸರ್ಗಿಕ ಉತ್ಪನ್ನ. ಬದಲಾದ ಕಾಲಘಟ್ಟದಲ್ಲಿ ಇಂತಹ ಬದಲಾವಣೆಯ ಮನಃಸ್ಥಿತಿಯನ್ನೂ ರೂಢಿಸುವುದು ಅನಿವಾರ್ಯವಿದೆ. ಬಹುಕಾಲ ಇದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರು ಪಕ್ಕನೆ ಒಪ್ಪಲಾರರು ಎಂದೂ ಗೊತ್ತಿದೆ. ಗಣೇಶನಿಗೆ ತೆಂಗು ಇಷ್ಟಫಲವಾದ್ದರಿಂದ ಗಣೇಶನಿಗೂ ಪ್ರಿಯವಾದೀತು. ಜನರೂ ಒಪ್ಪುತ್ತಿದ್ದಾರೆ" ಎನ್ನುವ ಮಾಹಿತಿ ನೀಡುತ್ತಾರೆ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ.
              ಈಗಾಗಲೇ ಸಾವಿರದಷ್ಟು ಗಣೇಶನ ಮೂರ್ತಿಗಳು ಸಿದ್ಧವಾಗಿದೆ.  ಅಂದವನ್ನು ಕೊಡುವಲ್ಲಿ ಸುಧಾರಣೆಯಾಗುತ್ತಿವೆ. ಯಾವುದೇ ಮೂರ್ತಿಗಳನ್ನು ತೆಂಗಿನಲ್ಲಿ ಮೂಡಿಸಬಹುದೆಂಬ ಧೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟವನ್ನು ವೃದ್ಧಿಸುವ ಸಂಕಲ್ಪವಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತೆಂಗಿನ ಗಣೇಶನ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದಾರೆ. ಧಾರವಾಡದ ಕೆಲಕೇರಿಯ ಮಂಜುನಾಥ ಹಿರೇಮಠ ಮತ್ತು ಅವರ ತಂಡವು ಬಹುಕಾಲದಿಂದ ಇಂತಹ ನೈಸರ್ಗಿಕ ವಿಚಾರಗಳನ್ನು ಜನರ ಮುಂದಿಡುತ್ತ ಬಂದಿದ್ದಾರೆ.
              ಫಕ್ಕನೆ ಒಂದು ವ್ಯವಸ್ಥೆಯ ಬದಲಾವಣೆಗೆ ಮನಸ್ಸು ಹಿಂಜರಿಯುವುದು ಸಹಜ. ಪರಿಸರ, ಆರೋಗ್ಯ ಮೊದಲಾದ ವಿಚಾರಗಳು ಮುಂದೆ ಬಂದಾಗ ಬದಲಾಗಬೇಕಾದುದು ಅನಿವಾರ್ಯ ಕೂಡಾ. ಗ್ರಾಮಾಭಿವೃದ್ಧಿ ಯೋಜನೆಯು ನೈಸರ್ಗಿಕ ಗಣೇಶ ವಿಗ್ರಹದ ಮಾದರಿಯೊಂದನ್ನು ಜನರ ಮುಂದಿಟ್ಟಿದೆ. ಜನಸ್ವೀಕೃತಿಯೂ ಪಡೆಯುತ್ತಿದೆ. ನಿಜಾರ್ಥದಲ್ಲಿ ಇದೊಂದು ಸದ್ದಿಲ್ಲದ ಪರಿಸ್ನೇಹಿ ಆಂದೋಳನ.
(ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟ -: 22-8-2017 )

ಹಲಸು ಸಾಕ್ಷರತೆಗೆ ಶ್ರೀಕಾರ ಬರೆದ ಪುಟ್ಟಪ್ಪ


ಹೊಸದಿಗಂತ ’ಮಾಂಬಳ’ ಅಂಕಣ / 31-5-2017

             ಶಿಗ್ಗಾಂವ್ ತಾಲೂಕು ಬಯಲು ಸೀಮೆಯ ಅಂಚಿನಲ್ಲಿದೆ. ಇಲ್ಲಿ ಹಲಸಿನ ಬಳಕೆ, ಕೃಷಿ ತೀರಾ ವಿರಳ. ಬಳಕೆಯ ಅರಿವಿಲ್ಲದೆ ಹಲಸಿನ ಹಣ್ಣುಗಳಿಗೆ ಕೊಳೆಯುವ ದೌರ್ಭಾಗ್ಯ! 'ಹಲಸೆಂದರೆ ಹೊಲಸು' ಎನ್ನುವ ಮನಃಸ್ಥಿತಿ.
             ಇಲ್ಲೊಬ್ಬರು ಹಲಸು ಪ್ರಿಯರಿದ್ದಾರೆ. ಅವರ ಜಮೀನಿನಲ್ಲಿ ಸಾಲು ಸಾಲು ಹಲಸಿನ ಮರಗಳು. ಬರಡು ನೆಲವು ಹಲಸಿಗೆ ಒಗ್ಗಿಕೊಂಡಿದೆ. "ನನ್ನ ಹಲಸಿನ ಕೃಷಿ ನೋಡಿದವರು 'ಇವನಿಗೆ ಹುಚ್ಚು' ಎಂದರು. ಟೀಕೆಯನ್ನು ಸವಾಲಾಗಿ ಸ್ವೀಕರಿಸಿದೆ. ಈಗ ನನ್ನ ಹೊಲದಲ್ಲಿ ಸಾಲು ಸಾಲು ಹಲಸಿನ ಮರಗಳು ಬೆಳೆದಿವೆ," ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾರೆ ಪುಟ್ಟಪ್ಪ ಕಲ್ಲಪ್ಪ ಕುಂದಗೋಳ. ಇವರು ಶಿಗ್ಗಾಂವ್ ತಾಲೂಕಿನ ರಾಜೀವ ನಗರ ಗ್ರಾಮದವರು. ಇವರ ಹೊಲದ ಸಸ್ಯ ವೈವಿಧ್ಯಗಳಲ್ಲಿ ಹಲಸಿಗೆ ಮಣೆ.
               ಎರಡು ದಶಕದ ಹಿಂದೆ ಇಪ್ಪತ್ತನಾಲ್ಕು ಎಕ್ರೆ ಕೃಷಿ ಭೂಮಿ ಖರೀದಿ. ಐದಾರು ವರುಷ ಭೂಮಿ ಹಡಿಲು ಬಿದ್ದು ಕೃಷಿ ಕಾಯಕಗಳು ಸೊರಗಿದ್ದುವು. ಹದಿನೈದು ವರುಷದ ಹಿಂದೆ ಜಿ-9 ತಳಿಯ ಬಾಳೆ ಕೃಷಿ ಮೂಲಕ ಕೃಷಿಗೆ ಬೀಸುಹೆಜ್ಜೆ. ಈ ಭಾಗದಲ್ಲಿ 'ಬಾಳೆ ಬೆಳೆದವನ ಬಾಳು ಹಾಳು' ಎನ್ನುವುದು ನಾಣ್ಣುಡಿ. ಈ ಮನಃಸ್ಥಿತಿಯ ಮಧ್ಯೆ ಪುಟ್ಟಪ್ಪ ಎಂಟು ಎಕ್ರೆಯಲ್ಲಿ ಬಾಳೆ ಬೆಳೆದು ಆಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದರು!
                   ಆರಂಭದಲ್ಲಿ ಅನುಭವದ ಕೊರತೆಯಿಂದ ಶ್ರಮ ಕೆಲಸಗಳು ಹಗುರವಾಗಲಿಲ್ಲ. ನಿರ್ವಹಣೆಯ ಸಮಸ್ಯೆಯಿಂದ ನಿರೀಕ್ಷಿತ ಆದಾಯ ಪಡೆಯಲಾಗಲಿಲ್ಲ.  ಬಾವಿಯಿಂದ ಸಣ್ಣ ಕಾಲುವೆಗಳ ಮೂಲಕ ನೀರುಣಿಸುವ ಸಾಂಪ್ರದಾಯಿಕ ಪದ್ಧತಿಯ ರೂಢನೆ. ತುಂಬಾ ನಷ್ಟವಾಗದೆ ಬಾಳೆ ಕೃಷಿ ಸ್ವಲ್ಪ ಮಟ್ಟಿನ ಬದುಕನ್ನು ಆಧರಿಸಿತು.
                  ಹಿಂದೊಮ್ಮೆ ಶಿಗ್ಗಾಂವ್ ಸನಿಹದ ಹಾದಿಮನೆ ಹರಿಕೊಂಡರ ಮನೆಗೆ ಪುಟ್ಟಪ್ಪ ಭೇಟಿ ನೀಡಿದ್ದರು ಅವರ ಜಮೀನಿನಲ್ಲಿ ಮೂರು ದಶಕ ಪ್ರಾಯದ ಹಲಸಿನ ಮರವು ಸೆಳೆಯಿತು. 'ಮೂರಡಿ ವ್ಯಾಸ, ನೂರಡಿ ಎತ್ತರ' ಬೆಳೆದ ಹಲಸು ಪುಟ್ಟಪ್ಪರ ಮನಸ್ಸನ್ನು ಆವರಿಸಿತು. ಮೇಲ್ನೋಟಕ್ಕೆ ಲೆಕ್ಕಹಾಕಿದಾಗ ಮರದ ಬೆಲೆ ಎರಡು ಲಕ್ಷ ರೂಪಾಯಿ! ಅದೇ ಸಮಯಕ್ಕೆ ಹಲಸಿನ ಕುರಿತು ಪತ್ರಿಕೆಯಲ್ಲಿ ಬಂದ ಲೇಖನವು ಪುಟ್ಟಪ್ಪರ ಕೃಷಿ ಬದುಕಿಗೆ ಹೊಸ ತಿರುವು ನೀಡಿತು.
                ಹಲಸಿನ ಗಿಡವನ್ನು ನರ್ಸರಿಯಿಂದ ತಂದು ನೆಡುವುದರಲ್ಲಿ ನನಗೆ ಆಸಕ್ತಿಯಿರಲಿಲ್ಲ. ಹರಿಕೊಂಡರಲ್ಲಿಂದ ಹಣ್ಣನ್ನು ತಂದು ಅದರ ಬೀಜದಿಂದ ನಾಲ್ಕುನೂರ ಐವತ್ತು ಗಿಡಗಳನ್ನು ತಯಾರಿಸಿದೆ. ಗಿಡಳು ಒಂದಡಿ ಎತ್ತರಕ್ಕೆ ಬೆಳೆದಾಗ ನಾಟಿ ಮಾಡಿದೆ. ಎಂದು ನೆನಪು ಮಾಡಿಕೊಂಡರು. ಗಿಡದಿಂದ ಗಿಡಕ್ಕೆ ಮತ್ತು ಸಾಲಿಂದ ಸಾಲಿಗೆ ಮೂವತ್ತಡಿ ಅಂತರದಲ್ಲಿ ಗಿಡಗಳ ನಾಟಿ.
               ಒಂದು ದಿನ ಹಲಸಿನ ಗುಂಗಿನಲ್ಲೇ ಇದ್ದ ಪುಟ್ಟಪ್ಪರಿಗೊಂದು ಆಘಾತದ ಸುದ್ದಿ! ತಾನು ಪ್ರೀತಿಯಿಟ್ಟು ನೆಟ್ಟ ಹಲಸಿನ ಗಿಡಗಳೆಲ್ಲಾ ಬೆಂಕಿ ಆಕಸ್ಮಿಕದಿಂದ ಭಸ್ಮವಾಗಿದ್ದುವು. ಜತೆಗೆ ಹಲಸಿನ ಮಧ್ಯೆ ನಾಟಿ ಮಾಡಿದ ನಾಲ್ಕುನೂರಕ್ಕೂ ಮಿಕ್ಕಿದ ಮಾವಿನ ಗಿಡಗಳು ಕೂಡಾ. "ಕೆಲವು ದಿವಸ ಅಧೀರನಾಗಿದ್ದೆ. ಹತ್ತು ಹಲಸಿನ ಗಿಡಗಳು ಮತ್ತು ಅರುವತ್ತು ಮಾವಿನ ಗಿಡಗಳು ಕರಟಿದರೂ ಮತ್ತೆ ಚಿಗುರಿದ್ದುವು," ಎನ್ನುತ್ತಾರೆ.
                 ಪುನಃ ವಿವಿಧ ತಳಿಯ ಹಲಸು, ಮಾವಿನ ಗಿಡಗಳ ನಾಟಿ. ಅದೃಷ್ಟಕ್ಕೆ ಕೊರೆದ ಕೊಳವೆ ಬಾವಿಯಲ್ಲಿ ಸಮೃದ್ಧ ನೀರು. ಕೃಷಿಗೆ ಹನಿ ನೀರಾವರಿ ಅಳವಡಿಕೆ. ನಾಲ್ಕೇ ವರುಷದಲ್ಲಿ ಹಲಸಿನ ಗಿಡಗಳಲ್ಲಿ ಇಳುವರಿ. ಕಾಯಿಯ ಭಾರಕ್ಕೆ ಎಳೆಯ ಮರಗಳು ಬಿದ್ದು ಮತ್ತೆ ಚಿಗುರಿದ್ದುವು. ’ನಾವು ಅವುಗಳನ್ನು ಪ್ರೀತಿಸಿದರೆ ಅವುಗಳು ಕೂಡಾ ನಮ್ಮನ್ನು ಪ್ರೀತಿಸುತ್ತವೆ” ಎನ್ನುವ ಪುಟ್ಟಪ್ಪ, "ಹಲಸಿನ ಹಣ್ಣಿನ ಮಾರಾಟದಿಂದ ಬಂದ ಆದಾಯವೇ ಅರುವತ್ತು ಸಾವಿರ ರೂಪಾಯಿಯಾಗಬಹುದು" ಎನ್ನುವ ಲೆಕ್ಕಾಚಾರ ಮುಂದಿಡುತ್ತಾರೆ.
                ಹುಬ್ಬಳ್ಳಿಯಲ್ಲಿರುವ ಅಳಿಯನ ಕಿರಾಣಿ ಅಂಗಡಿಯ ಪಕ್ಕದಲ್ಲಿ ಹಲಸಿನ ಹಣ್ಣನ್ನು ಮಾರಾಟ ಮಾಡಿದ್ದರು. ಉತ್ಕೃಷ್ಟ ತಳಿಯ ಹಲಸಿನ ರುಚಿಗೆ ಆಕರ್ಶಿತರಾದವರು ಅಧಿಕ. ತಂದ ಹಲಸಿನ ಹಣ್ಣೆಲ್ಲಾ ಮಾರಿ ಹೋದಾಗ ಸಂತೃಪ್ತಿ. ಅದುವರೆಗೆ ಹಲಸಿನ ಮೋಪಿನ ಕುರಿತು ಯೋಚಿಸುತ್ತಿದ್ದ ಪುಟ್ಟಪ್ಪರ ಮೈಂಡ್ ಸೆಟ್ ಬದಲಾಯಿತು!
               ಮಹಾರಾಷ್ಟ್ರದ ಹಲಸು ಉದ್ದಿಮೆದಾರರಿಂದ ಎಳೆ ಕಾಯಿಗೆ (ಗುಜ್ಜೆ) ಬೇಡಿಕೆ ಬಂದಾಗ ಪುಟ್ಟಪ್ಪ ಖುಷ್. ಆಸುಪಾಸಿನ ರೈತರಿಂದಲೂ ಎಳೆಕಾಯಿ ಖರೀದಿಸಿ ಬೇಡಿಕೆಯನ್ನು ಪೂರೈಸುವ ಯೋಚನೆಯಿದೆ. ಈ ಕುರಿತು ಮಾತುಕತೆ ನಡೆಯುತ್ತಿದೆ. ಎಲ್ಲವೂ ಸರಿಹೋದರೆ ಈ ಸೀಸನ್ನಿನಲ್ಲಿ ಯೋಚನೆಯು ಸಾಕಾರವಾಗಲಿದೆ. "ರೈತರನ್ನು ಹೊಸತನಕ್ಕೆ ಒಡ್ಡುವುದು ಸುಲಭದ ಮಾತಲ್ಲ. ಮನವೊಲಿಸುವ ಕೆಲಸ ದೊಡ್ಡದು," ಎನ್ನುತ್ತಾರೆ. ಎರಡು ವರುಷದ ಹಿಂದೆ ಗಿಡಗಳನ್ನು ಪ್ರೂನಿಂಗ್ ಮಾಡಿದ್ದಾರೆ. ಇದರಿಂದಾಗಿ ಹಿಂದಿನ ವರುಷ ಇಳುವರಿ ಕಡಿಮೆ. ಈ ವರುಷವೂ ನಿರೀಕ್ಷಿತ ಫಸಲು ಬಂದಿಲ್ಲ. ತಾಲೂಕಿನಲ್ಲಿ 'ಹಲಸಿನ ಸಾಕ್ಷರತೆ'ಗೆ ಶ್ರೀಕಾರ.
                 ಕಳೆದ ವರುಷ ಅಡಿಕೆ ಗಿಡಗಳ ಮಧ್ಯೆ ಮತ್ತು ಎರಡು ಸಾವಿರ ಹಲಸಿನ ಗಿಡಗಳ ನಾಟಿ! ನೀರು, ಗೊಬ್ಬರ ಕೊಟ್ಟು ಆರೈಕೆ. ಈ ಬಾರಿ ಬೆಂಗಳೂರಿನ ತೂಬುಗೆರೆ, ಸಖರಾಯಪಟ್ಟಣದಿಂದ ರುಚಿಕರವಾದ ಹಣ್ಣನ್ನು ತಂದು ಅದರ ಬೀಜದಿಂದ ಗಿಡ ತಯಾರಿ. ಬಹುಶಃ ಇನ್ನು ಮೂರೇ ವರುಷದಲ್ಲಿ ಹಣ್ಣು ಸಿಗಬಹುದು. ಹಲಸಿನ ತೋಟ ಮಾಡುವವರು ಹತ್ತಡಿ ಅಂತರದಲ್ಲಿ ನೆಡಬಹುದು, ಎನ್ನುವುದು ಇವರ ಅನುಭವ.
              ಪುಟ್ಟಪ್ಪರದು ಬಹುವಿಧದ ಆಸಕ್ತಿ. ಅಡಿಕೆ, ಹಲಸಿನ ಮಧ್ಯೆ ಶ್ರೀಗಂಧದ ಗಿಡಗಳನ್ನು ನಾಟಿ ಮಾಡಿದ್ದಾರೆ. ಬೇಲಿ ಬದಿಯಲ್ಲಿ ಸಂಪಿಗೆ, ಸುವಾಸಿತ ಕರಿಬೇವಿನ ಗಿಡಗಳು, ನುಗ್ಗೆ ಗಿಡಗಳು, ಚಿಕ್ಕು.. ಹೀಗೆ ವಿವಿಧ ವೈವಿಧ್ಯ ಬೆಳೆಗಳಿವೆ. "ಈ ವರುಷ ಎರಡು ನುಗ್ಗೆಗೆ ಹತ್ತು ರೂಪಾಯಿಯಂತೆ ಮಾರಾಟ ಮಾಡಿದ್ದೇನೆ. ಚಿಕ್ಕಿನ ಹಣ್ಣಿನ ಮಾರಾಟದಿಂದ ಸ್ವಲ್ಪಾಂಶ ಆದಾಯ. ಸಾವಯವ ಗೊಬ್ಬರ ತಯಾರಿಸಲು ಇಪ್ಪತ್ತು ಬರಡು ಎಮ್ಮೆಗಳನ್ನು ಆರೈಕೆ ಮಾಡುತ್ತಿದ್ದೇನೆ. ಜತೆಗೆ ಐವತ್ತು ಕುರಿಗಳಿವೆ,"ಎನ್ನುವ ಮಾಹಿತಿ ನೀಡುವ ಪುಟ್ಟಪ್ಪರಿಗೆ ತನ್ನ ಹೊಲಕ್ಕೆ ತನ್ನದೇ ಗೊಬ್ಬರವಾಗಬೇಕೆನ್ನುವ ಬದ್ಧತೆ.
    .            "ಮಣ್ಣಿನಲ್ಲಿ ಪೊಟೇಶ್ ಅಂಶ ಕಡಿಮೆಯಿದ್ದಲ್ಲಿ ಹಲಸಿನ ಹಣ್ಣಿಗೆ ರುಚಿ ಕಡಿಮೆ. ಬಿಸಿಲು ಚೆನ್ನಾಗಿ ಬೀಳುವಂತಿರಬೇಕು. ಮೊದಲ ವರುಷ ನೀರು ಉಣಿಸಿದರೆ ಸಾಕು," ಎನ್ನುವ ಪುಟ್ಟಪ್ಪರು, ಇನ್ನೆರಡು ವರುಷದಲ್ಲಿ ಸ್ವಂತದ್ದಾದ ಹಲಸು ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಯೋಚನೆಯನ್ನು ಮಾಡಿದ್ದಾರೆ. ಈ ಕುರಿತ ಯೋಜನೆಯು ರೂಪುಗೊಳ್ಳುತ್ತಿದೆ.