“ರೈತ ಒಬ್ಬ ವಿಜ್ಞಾನಿ. ಆತನ ಸ್ವಾನುಭವದ ಮುಂದೆ ಅಕಾಡೆಮಿಕ್ ಜ್ಞಾನಗಳು ಸೆಕೆಂಡರಿ. ವಿಜ್ಞಾನಿಗಳು ರೈತರೊಂದಿಗೆ ಕೆಲಸ ಮಾಡಿದೆ. ಉತ್ಕøಷ್ಟ ಹಲಸಿನ ತಳಿಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿದ್ದೇವೆ. ತಳಿಗಳಿಗೆ ರೈತರ ಹೆಸರನ್ನೇ ನಾಮಕರಣ ಮಾಡಿದ್ದೇವೆ. ಪ್ರಾದೇಶಿಕವಾಗಿ ನೂರಾರು ಉತ್ತಮ ತಳಿಗಳ ಹಲಸು, ಮಾವುಗಳಿವೆ. ಅವುಗಳನ್ನು ಗುರುತಿಸುವ ಕೆಲಸ ಆಗಬೇಕು.”
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಹೆಚ್ಆರ್)ಯ ನಿರ್ದೇಶಕ ಡಾ.ದಿನೇಶ್ ಅವರನ್ನು ಮಾತಿಗೆಳೆದಾಗ ಅವರು ವಿಜ್ಞಾನಿಯಾಗಿ, ಅಧಿಕಾರಿಯಾಗಿ ಕಾಣಲಿಲ್ಲ. ಅವರೊಬ್ಬ ಕೃಷಿಕನಾಗಿ, ಕೃಷಿಕಪರ ಪ್ರೀತಿಯುಳ್ಳವರಾಗಿ ಕಂಡರು. ಇದು ಉತ್ಪ್ರೇಕ್ಷೆಯಲ್ಲ. ಕಾರಣ ಅವರು ಕೃಷಿಗೆ, ಕೃಷಿಕನಿಗೆ ಮಾನ ನೀಡುವ ದೃಷ್ಟಿಕೋನ. ಹಾಗಾಗಿಯೇ ಪುತ್ತೂರಿನ ಹಲಸಿನ ಮೇಳಕ್ಕೆ ತಾನಲ್ಲದೆ ಇನ್ನಿಬ್ಬರು ವಿಜ್ಞಾನಿಗಳನ್ನು ಕರೆತಂದಿದ್ದರು.
ಐಐಹೆಚ್ಆರ್ ಕೃಷಿಕರಿಗೆ ತೆರೆದ ಬಾಗಿಲು. ಮಾವು, ಹಲಸಿನ ಮೌಲ್ಯಾಧಾರಿತ ಉತ್ಪನ್ನಗಳ ಆಸಕ್ತಿಯಿದ್ದ ಉದ್ಯಮಿಗಳಿಗೆ ಉತ್ತೇಜನ ನೀಡುವ ತರಬೇತಿಗಳನ್ನು ಹಮ್ಮಿಕೊಂಡಿದೆ. ಅಲ್ಲಿನ ತಂತ್ರಜ್ಞಾನದೊಂದಿಗೆ ಆರು ತಿಂಗಳ ಕಲಿಕೆಯ ಸಿಲೆಬಸ್ ಹಾಕಿಕೊಂಡಿದೆ. ಉತ್ಪನ್ನಗಳನ್ನು ತಯಾರಿಸುವುದು ಪಠ್ಯದ ಭಾಗ. ಈ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕೂಡಾ ಸಂಸ್ಥೆಯೇ ಮಾಡುತ್ತದೆ. ನಂತರ ಅವರು ಸ್ವಂತವಾಗಿ ಉದ್ಯಮ ಆರಂಭಿಸಬಹುದು.
ಖಾದ್ಯಗಳ ಪ್ರದರ್ಶನ, ಮಾರಾಟವೇ ಹಲಸು ಮೇಳವಲ್ಲ. ಇಂದು ಸಾರ್ವಜನಿಕವಾಗಿ ತಿನ್ನುವ ವಸ್ತುಗಳಿಗೆ ಮಾರಾಟ ವ್ಯವಸ್ಥೆ ಎಲ್ಲಿ ಮಾಡಿದರೂ ಮಾರಿ ಹೋಗುತ್ತದೆ. ಹಲಸು ಮೇಳವು ಅಕಾಡೆಮಿಕ್ ಜ್ಞಾನವನ್ನು ನೀಡುವ ಉತ್ಸವವಾಗಿ ರೂಪುಗೊಳ್ಳಬೇಕು. “ಐಐಹೆಚ್ಆರ್ ತಿಜೋರಿಯಲ್ಲಿರುವ ಐನೂರು ಮಾವು ಮತ್ತು ನೂರಿಪ್ಪತ್ತು ಹಲಸಿನ ತಳಿಗಳು ಮತ್ತು ಅದರಿಂದ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಪುತ್ತೂರಿನಲ್ಲಿ ಪ್ರದರ್ಶನ ಮಾಡಲು ಉತ್ಸುಕರಾಗಿದ್ದೇವೆ. ಸ್ಥಳೀಯರ ನಾಯಕತ್ವ ಬೇಕು.” ಇದು ದಿನೇಶರ ಮಾತಿನ ಮಧ್ಯೆ ಹಾದು ಹೋದ ವಿಚಾರಗಳು. ಇವೆಲ್ಲಾ ಮುಂದಿನ ಮೇಳಗಳಿಗೆ ದಿಕ್ಸೂಚಿ.
ಐಐಹೆಚ್ಆರ್ ಸಾಧನೆಯನ್ನು ಹೇಳುತ್ತಾ ಇದ್ದಂತೆ ಒಮ್ಮೆ ಕೇರಳದತ್ತ ಕತ್ತು ತಿರುಗಿಸೋಣ. ಒಂದು ಕಾಲಘಟ್ಟದಲ್ಲಿ “ಈ ಮರದಿಂದ ಯಾರೂ ಹಲಸಿನ ಹಣ್ಣನ್ನು ಕೊಯಿದುಕೊಳ್ಳಬಹುದು.” ಎಂದು ಮರದಲ್ಲಿ ಫಲಕ ಹಾಕುತ್ತಿದ್ದರು. ಈಗ ಅದೇ ಊರಿನಲ್ಲಿ ಹಲಸಿನ ಬಗೆಬಗೆಯ ಖಾದ್ಯಗಳ ‘ಚಕ್ಕವಂಡಿ’(ಹಲಸಿನ ಗಾಡಿ)ಯ ಮುಂದೆ ಸರತಿ ಸಾಲು ಕಾಣುತ್ತದೆ. ಕೇರಳದಷ್ಟು ಹಲಸನ್ನು ಅರಿತ ರಾಜ್ಯ ಇನ್ನೊಂದಿಲ್ಲ. ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಕೇರಳದಲ್ಲಿ ಹಲಸು ಮನಸಿನ ಆಹಾರವಾದ ಒಂದು ಉದಾಹರಣೆ ನೆನಪಿಸಿಕೊಳ್ಳುತ್ತಾರೆ, “ಅಲ್ಲಿ ಕಾಯಿಸೊಳೆಯು ಮಧುಮೇಹಿಗಳಿಗೆ ಆಹಾರ ಎಂದು ಸಿದ್ಧವಾಗಿದೆ. ಏನಿಲ್ಲವೆಂದರೂ ಆರುನೂರು ಅಂಗಡಿಗಳಲ್ಲಿ ಕಾಯಿಸೊಳೆಯ ಹುಡಿ ಮಾರಾಟಕ್ಕೆ ಸಿಗುತ್ತಿದೆ. ನಾಲ್ಕು ತಿಂಗಳು ಲಭ್ಯವಿರುವ ಹಲಸಿನ ಸೀಸನ್ನಿನಲ್ಲಿ ಡಯಬಿಟಿಸ್ ಔಷಧಿಯ ಮಾರಾಟ ಪ್ರಮಾಣ ಶೇ.25 ಕುಗ್ಗಿದೆ.”
ಐಐಹೆಚ್ಆರ್ ಸಂಸ್ಥೆಯು ಕೆಂಪುತಳಿಯ ಹಲಸನ್ನು ಅಭಿವೃದ್ಧಿಪಡಿಸಿದೆ. ಉದಾ. ಸಿದ್ದು ಹಲಸು. ಇದು ಪ್ರಥಮ ರೈತ ತಳಿ. ತುಮಕೂರಿನ ಗುಬ್ಬಿ ತಾಲೂಕಿನ ಕೃಷಿಕ ಎಸ್.ಎಸ್.ಪರಮೇಶ್ ಮರದ ಯಜಮಾನ. 2017ರಲ್ಲಿ ರಾಜ್ಯಪಾಲರಿಂದ ‘ಅತ್ಯುತ್ತಮ ಹಲಸು ತಳಿ ಸಂರಕ್ಷಕ’ನೆಂಬ ಪ್ರಶಸ್ತಿಯನ್ನು ಪಡೆದಿದ್ದರು. ಸಿದ್ಧು ಹಲಸು - ರೈತರ ಹೆಸರಿನಲ್ಲಿ ನೋಂದಣಿಯಾದ ಪ್ರಥಮ ತಳಿ. ಐಐಹೆಚ್ಆರ್ ಸಂಸ್ಥೆಯ ಆಸಕ್ತಿ, ಪರಿಶ್ರಮಗಳಿಂದ ಪರಮೇಶ್ ಅವರ ತಂದೆ ಎಸ್.ಕೆ.ಸಿದ್ಧಪ್ಪ ಹೆಸರಿನಲ್ಲಿ ತಳಿ ನೋಂದಾವಣೆಗೊಂಡು ‘ಸಿದ್ಧು ಹಲಸು’ ಎಂದು ನಾಮಕರಣಗೊಂಡಿದೆ. ಈ ಎಲ್ಲಾ ಶ್ರಮದ ಹಿಂದೆ ಡಾ.ಕರುಣಾಕರ್ ಅವರ ಸದ್ದಿಲ್ಲದ ಕೆಲಸವಿದೆ.
ಐಐಹೆಚ್ಆರ್ ಸಂಶೋಧನಾ ಕೇಂದ್ರವಾಗಿದ್ದು ತಳಿ ಆಯ್ಕೆಗೆ ನಿಶ್ಚಿತವಾದ ಮಾನದಂಡಗಳಿವೆ. ಆದರೆ ಸರಕಾರದ ಯಾವುದೇ ಕಟಾಕ್ಷ, ಅನುದಾನಗಳಿಲ್ಲದೆ ಬಂಟ್ವಾಳ ತಾಲೂಕಿನ ಕೇಪು-ಉಬರು ‘ಹಲಸು ಸ್ನೇಹಿ ಕೂಟ’ವು ‘ರುಚಿ ನೋಡಿ ತಳಿ ಆಯ್ಕೆ’ ಮೂಲಕ ತಳಿಗಳನ್ನು ಗೊತ್ತು ಮಾಡಿದೆ. ಎಂಟು ವರುಷದೀಚೆಗೆ ಕೇಪು, ಅಡ್ಯನಡ್ಕ ಸುತ್ತಲಿನ ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೂವತ್ತು-ಮೂವತ್ತೈದು ತಳಿಗಳು ಆಯ್ಕೆಗೊಂಡಿವೆ. ಸಾವಿರಾರು ಕಸಿಗಿಡಗಳು ಅಭಿವೃದ್ಧಿಗೊಂಡಿವೆ.
2011
ಎಪ್ರಿಲ್ 14ರಂದು ಮುಳಿಯ ವೆಂಕಟಕೃಷ್ಣ ಶರ್ಮರಲ್ಲಿ ಜರುಗಿದ ‘ರುಚಿ ನೋಡಿ ತಳಿ ಆಯ್ಕೆ’ ಪ್ರಕ್ರಿಯೆಯಲ್ಲಿ ಮೂವತ್ತೈದರಲ್ಲಿ ನಾಲ್ಕೈದು ತಳಿಗಳು ಆಯ್ಕೆಗೊಂಡುವು. ಸ್ನೇಹಿ ಕೂಟದ ಆಯೋಜನೆಯಲ್ಲಿ ಜರುಗಿದ ಹಲಸು ಕಾರ್ಯಕ್ರಮಗಳಲ್ಲೆಲ್ಲಾ ‘ತಳಿ ಆಯ್ಕೆ’ಗೆ ಪ್ರಥಮಾದ್ಯತೆ. ಕೃಷಿಕರೇ ರುಚಿನೋಡಿ, ಹಣ್ಣಿನ ಗುಣಾವಗುಣಗಳನ್ನು ಗುರುತಿಸಿ, ಯಾವ ತಳಿ ಯಾವ ಖಾದ್ಯಕ್ಕೆ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದು ಆಯ್ಕೆಗೊಂಡ ತಳಿಗಳಿಗೆ ಐಐಹೆಚ್ಆರ್ನಂತೆ ರೈತರ ಹೆಸರನ್ನು ಹೊಸೆಯಲಾಗಿದೆ. ಉದಾ: ಸಾರಡ್ಕ ಮಾಯಿಲ ಬರಿಕ, ಉಬರು ರಾಜರುದ್ರಾಕ್ಷಿ, ಕಡಂಬಿಲ ಗೋಲ್ಡನ್ ಪಲ್ಪ್, ವರ್ಮುಡಿ ಚೆಂಡೆ, ಅನನ್ಯ ಬಿಲ್ಲಂಪದವು, ರಾಜ ರುದ್ರಾಕ್ಷಿ...
ಹಲಸು ಮೇಳಗಳು ತಳಿ ಆಯ್ಕೆ, ಆ ಕುರಿತಾದ ಜ್ಞಾನ, ಯುವಕರನ್ನು ಸೆಳೆಯುವ ಉದ್ಯಮಸ್ನೇಹಿ ವ್ಯವಸ್ಥೆ, ಮಾರುಕಟ್ಟೆ, ಮನೆ ಉದ್ಯಮ.. ಹೀಗೆ ಅನ್ಯಾನ್ಯ ವಿಚಾರಗಳನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ. ಸಂಭ್ರಮಗಳ ಮಧ್ಯೆ ಆಶಯ ಮಸುಕಾಗಕೂಡದಲ್ಲಾ. ಹಲಸು ಸ್ನೇಹ ಸಂಗಮ, ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಜೇಸಿಐ ಪುತ್ತೂರು, ಐಐಹೆಚ್ಆರ್ ಮತ್ತು ಅನ್ಯಾನ್ಯ ಸುಮನಸಿಗ ಹಲಸು ಪ್ರೇಮಿಗಳು ಪುತ್ತೂರಿನಲ್ಲಿ ಆಯೋಜಿಸಿದ ಮೇಳಕ್ಕೆ ಜನಸ್ಪಂದನ ಉತ್ತೇಜಿತ. (ಚಿತ್ರ : ಕುಮಾರಸ್ವಾಮಿ)
ಊರುಸೂರು / 3-6-2019