Saturday, July 13, 2019

ಹಸಿರು ಮನಸಿನ ನೆರವಿಗ


ಪುತ್ತೂರಿನಲ್ಲೊಂದುಸಮೃದ್ಧಿ ಗಿಡಗೆಳೆತನ ಸಂಘವಿದೆ! ಸಸ್ಯಾಸಕ್ತ ಹಸಿರು ಮನಸಿನ ಸದಸ್ಯರು. ಬೀಜ ಸಸ್ಯಗಳ ವಿನಿಮಯ. ಮಾಹಿತಿಗಳ ಹಸಿವಿನ ತಣಿಕೆ. ಹೊಸ ತಳಿಗಳ ಹುಡುಕಾಟ. ಅಪ್ಡೇಟ್ ಆಗುವಂತಹ ಕೃಷಿ ಸುದ್ದಿಗಳು. ಹೀಗೆ ಕೃಷಿ ಬದುಕಿಗೆ ಪೂರಕವಾದ ಸಂಗತಿಗಳು

ಸಮೃದ್ಧಿಗೆ ಇಪ್ಪತ್ತೈದು ವರುಷ! 2018 ನವೆಂಬರ್ 25ರಂದು ಶಾಂತಿಗೋಡು ಖಂಡಿಗದ ಗೋಪಾಲಕೃಷ್ಣ ಭಟ್ಟರ ಮನೆಯಂಗಳದಲ್ಲಿ ಆಚರಣೆ. ಕಾಲು ಶತಮಾನ ಸಮೃದ್ಧಿಯ ನೆರಳನ್ನು ನೋಡುತ್ತಿದ್ದ ನನಗೆ ಅಂದು ಖುಷಿ ಮತ್ತು ವಿಷಾದದ ಹೊತ್ತು. ಕಣ್ಣೆದುರೇ ಹುಟ್ಟಿದ ಕೂಸು ಜವ್ವನಿಗನಾಗಿ ತಲೆಎತ್ತಿ ನಿಂತ ಖುಷಿ ಒಂದೆಡೆ. ವೈಯಕ್ತಿಕವಾದ ಆಯುಸ್ಸಿನ ಕ್ಷೀಣತೆಯ ವಿಷಾದ ಇನ್ನೊಂದೆಡೆ!

ಸಮೃದ್ಧಿ ಇಲ್ಲದೆ ಇರುತ್ತಿದ್ದರೆ ಕರಾವಳಿಯು ಎಷ್ಟೋ ತಳಿಗಳನ್ನು ಮಿಸ್ ಮಾಡಿಕೊಳ್ಳುತ್ತಿತ್ತು.” ಇದು ಸಮೃದ್ಧಿಯ ಸ್ಥಾಪಕಾಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ಟರ ಮೆಲುಕು. “ಹಸಿರುಪ್ರಿಯ ಸುಮನಸಿಗರಲ್ಲಿ ತಳಿಗಳ ಆಸಕ್ತಿಯನ್ನು ಮೂಡಿಸಿದ್ದು ಸಮೃದ್ಧಿ,” .ಪಿ.ಸದಾಶಿವರು ಖುಷಿಯನ್ನು ಹಂಚಿಕೊಂಡರೆ, ಪೆಲತ್ತಡ್ಕ ಶಿವಸುಬ್ರಹ್ಮಣ್ಯಕೃಷಿಯನ್ನು ನೋಡುವ ನನ್ನ ನೋಟವನ್ನು ಸಮೃದ್ಧಿ ಬದಲಾಯಿಸಿತು.” ಎಂದರು. ಇವೆಲ್ಲಾ ಮನದ ಮಾತು. ಗಂಟಲ ಮೇಲಿನವುಗಳಲ್ಲ. ಸಂಸ್ಥೆಯೊಂದನ್ನು ಹುಟ್ಟು ಹಾಕಿ, ತಾವು ಅದರೊಂದಿಗೆ ಅದರ ಭಾಗವಾದಾಗ ಮಾತ್ರ ಇಂತಹ ಮಾತುಗಳನ್ನು ಕೇಳಬಹುದಷ್ಟೇ

ತೊಂಭತ್ತರ ಕಾಲಘಟ್ಟ. ಅಡಿಕೆಯ ಸಮೃದ್ಧತೆ. ಬೆಲೆಯೂ ಏರುಗತಿ. ತೋಟಗಳ ವಿಸ್ತಾರ. ಬದುಕಿನೊಂದಿಗೆ ಅಂಟಿಕೊಂಡಿದ್ದ ಹಣ್ಣು, ಗಿಡಗಳ ಸಹಜಾಸಕ್ತಿಗೆ ಮಸುಕು. ಮಧ್ಯೆ ತರಕಾರಿ, ಹಣ್ಣು, ಹೂ, ಸಸ್ಯಗಳ ಆಸಕ್ತಿಯ ಕೃಷಿಕರು ಅಲ್ಲಿಲ್ಲಿ ಮಾತನಾಡುತ್ತಿದ್ದರಷ್ಟೇ. ಅವರೊಳಗೆ ಸಂವಹನದ ಕೊಂಡಿ ಬೆಸೆದಿರಲಿಲ್ಲ. ಇವರೆಲ್ಲರನ್ನೂ ಅಡಿಕೆ ಪತ್ರಿಕೆಯು ಒಂದೇ ಸೂರಿನಡಿ ತಂದಿತ್ತು. ಮೂಡುಬಿದಿರೆಯ ಹಣ್ಣು ಕೃಷಿಕ ಡಾ.ಎಲ್.ಸಿ.ಸೋನ್ಸ್ ಸಮೃದ್ಧಿಯನ್ನು ಉದ್ಘಾಟಿಸಿದ್ದರು. ಸಮೃದ್ಧಿಯು ಶ್ರೀ ಪಡ್ರೆಯವರ ಮೆದುಳ ಮರಿ.  

ಅಪೂರ್ವ ತಳಿಗಳ ವಿನಿಮಯವಾಗಿದೆ, ಜ್ಞಾನಗಳ ಹಂಚಿಕೆಯಾಗಿವೆ. ಒಂದು ಕಾಲಘಟ್ಟವನ್ನು ನೆನಪಿಸಿಕೊಳ್ಳಬೇಕು. ಬನಾರಸ್ ನೆಲ್ಲಿಕಾಯಿ ಆಗಷ್ಟೇ ಬಾಯ್ಮಾತಾಗಿತ್ತು. ಅದರ ಗಾತ್ರಕ್ಕೆ ಹಲವರು ಆಸಕ್ತರಾಗಿದ್ದರು. ಮಾತಿಗೆ ಸಿಕ್ಕಾಗಲೆಲ್ಲಾ ಅಡಿಕೆಯೊಂದಿಗೆ ಬನಾರಸ್ ನೆಲ್ಲಿಯದೇ ಗುಂಗು. ಆಗ ಸಮೃದ್ಧಿಯ ಕಾರ್ಯದರ್ಶಿ ಕೈಂತಜೆ ಶ್ರೀಧರ ಭಟ್ಟರು. ಅವರು ತಮಗಾಗಿ ಉತ್ತರಪ್ರದೇಶದ ಫೈಜಾಬಾದಿನಿಂದ ಎರಡು ಬನಾರಸ್ ನೆಲ್ಲಿ ಗಿಡಗಳನ್ನು ತಂದಿದ್ದರು. ಸಮೃದ್ಧಿ ಸದಸ್ಯರ ಒಲವಿಗೆ ಮಾರುಹೋಗಿ ಪುನಃ ಫೈಜಾಬಾದ್ ರೈಲನ್ನು ಏರಿದುದು ಈಗ ಇತಿಹಾಸ. ಇಂತಹ ಹಲವು ಸಾಹಸದ ಕತೆಗಳು ಸಮೃದ್ಧಿ ಬತ್ತಳಿಕೆಯಲ್ಲಿವೆ

                 ಪ್ಲಾಂಟ್ ಫ್ರೆಂಡ್ಶಿಪ್ಗೆ ಗೌರವ ತಂದ ಗುತ್ತಿಗಾರು ಸನಿಹದ ಕಾಂತಿಲ ವೆಂಕಟ್ರಮಣ ಜೋಷಿ (ದಿ.) - ಸಮೃದ್ಧಿಯ ಸ್ಥಾಪನಾ ಅಡಿಗಟ್ಟಿನ ಸ್ಥಂಭ. ಸಂಸ್ಥೆಯ ಹುಟ್ಟಿನಿಂದಲೇ ಜತೆಗಿದ್ದು ಸಸ್ಯಾಸಕ್ತಿಯನ್ನು ಹುಟ್ಟಿಸಿದವರು. ತಲೆತುಂಬಾ ಬೀಜ, ಸಸ್ಯಗಳ ಮಾಹಿತಿ ಜ್ಞಾನಗಳು. ಅದನ್ನು ಹಂಚುವುದರಲ್ಲಿ ಆನಂದ. ಅವರೊಮ್ಮೆ ಹೇಳಿದ್ದರು, “ಇಂಥ ಹವ್ಯಾಸ ಇಟ್ಟುಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿದ್ದೆ ಮಾಡಲು ಮಾತ್ರೆ ತೆಗೆದುಕೊಳ್ಳುವ ಪ್ರಮೇಯವಿಲ್ಲ.”

 ಒಂದು ಮಾವಿನ ಮರದಲ್ಲಿ ಹತ್ತಾರು ತಳಿಗಳು, ಒಂದು ಹಲಸಿನ ಮರದಲ್ಲಿ ಮೂರ್ನಾಲ್ಕು ತಳಿಗಳ ಹಣ್ಣುಗಳು-ಸಮೃದ್ಧಿಯ ಆರಂಭದ ಕಾಲಘಟ್ಟದಲ್ಲಿ ಸುದ್ದಿಯು ಸದ್ದು ಮಾಡಿತ್ತು. ಇದಕ್ಕಾಗಿಯೇ ಕಸಿ ಕಟ್ಟುವ ತರಬೇತಿಯ ಆಯೋಜನೆ ಮಾಡಲಾಗಿತ್ತು. ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಂದ ಮಾಹಿತಿ. ತಂತಮ್ಮ ತೋಟದ ಮರವೇರಿಟಾಪ್ವರ್ಕಿಂಗ್ಕಸಿ ವಿಧಾನದ ಪ್ರಯೋಗವನ್ನು ಮಾಡಿದವರೆಷ್ಟೋ ಮಂದಿ! ಮಾಪಲತೋಟ ಸುಬ್ರಾಯ ಭಟ್, ಶ್ಯಾಮಸುಂದರ ಗೇರುಕಟ್ಟೆ, ಕುಂಬಾಡಿ ವೆಂಕಟ್ರಮಣ ಭಟ್ (ದಿ.).. ಅನುಭವಿಗಳ ಜ್ಞಾನವು ಒಂದೇ ಗಿಡದಲ್ಲಿ ಹಲವು ತಳಿಗಳ ಹಣ್ಣುಗಳನ್ನು ನೀಡುತ್ತಿವೆ!

                ಮಂತುಹುಳಿ, ಅಮ್ಚಿಕಾಯಿ, ಹನುಮಫಲ, ಭೀಮಫಲ, ಮುಳ್ಳುಸೀತಾಫಲ, ಹಾವು ಬದನೆ, ಬಂಟ ಕೇಪುಳು, ರುದ್ರಾಕ್ಷಿ, ಮೊಟ್ಟೆಮುಳ್ಳು, ಕರಿಯಾಲ ಹರಿವೆ, ಸಿಹಿದಾರೆಹುಳಿ.. ಹೀಗೆ ಸಮೃದ್ಧಿ ವ್ಯಾಪ್ತಿಯ ಪಟ್ಟಿ ಚಿಕ್ಕದಲ್ಲ. ಬಂಗ್ಲಾ ಬಸಳೆ, ಸೆಲೋಶಿಯಾ ಅಜೆಂಟಿಯಾ ಎಲೆ ತರಕಾರಿ ಗಿಡ, ಸನ್ಸೆಟ್ ಸೋಲೋ ಪಪ್ಪಾಯಿಗಳು ಕಡಲನ್ನು ಹಾರಿ ಬಂದಿವೆ. ಹೀಗೆ ಬಂದವುಗಳಲ್ಲಿ ಅರ್ಧದಷ್ಟು ಮಾತ್ರ ಉಳಿದಿರಬಹುದಷ್ಟೇ. ಸಮೃದ್ಧಿಗೆ ಬಂದು ಹೋದ ಹಲವು ತಳಿಗಳು ಅಜ್ಞಾತವಾಗಿವೆ.
ಹಸಿರು ಪ್ರಿಯರ ಹೃದಯಕ್ಕಂಟಿದ ಸಮೃದ್ಧಿಯು ಹಸಿರು ಮನಸಿನ ನೆರವಿಗ. ಬೀಜ, ಸಸ್ಯಗಳ ಆಸಕ್ತಿಯು ಬದುಕಿನ ಸುಭಗತೆಯ ಉಪಾಧಿ

ಊರು ಸೂರು /2-12-2018


0 comments:

Post a Comment