Saturday, July 13, 2019

ಸಾವಯವದೊಳಗಿದೆ, ಕೃಷಿಕ ಮನಸ್ಸು


                ಮೈಸೂರಿನಿಂದ ಕಲ್ಲಂಗಡಿಯ ಲಾರಿ ಲೋಡು ಪುತ್ತೂರು ತಲಪುವಾಗ ರಾತ್ರಿಯಾಗಿತ್ತು. ಕರೆಂಟ್ ಕೈಗೊಟ್ಟಿತ್ತು. ಸುಹಾಸ್ ಚಡಪಡಿಕೆಯಲ್ಲಿದ್ದರು. ಹರಸಾಹಸ ಮಾಡಿ ಕಲ್ಲಂಗಡಿ ಹಣ್ಣನ್ನು ಡೌನ್ಲೋಡ್ ಮಾಡುತ್ತಾ ಸುಹಾಸ್ ಆಯಾಸದಿಂದ ಆಡಿದ ಮಾತುಗಳು ಕಾಡುತ್ತದೆ.

                ಮಣ್ಣನ್ನು ಮೆಟ್ಟದ ಮಂದಿಗೆ ಸಾವಯವ ತುಂಬಾ ರೋಚಕತೆಯನ್ನು ಕಟ್ಟಿಕೊಡುತ್ತದೆ. ಬಣ್ಣ ಬಣ್ಣದ ಮಾತುಗಳನ್ನು ಆಡುತ್ತಾರೆ. ವೇದಿಕೆಗಳಲ್ಲಿ ಅದೊಂದು ಮಾತಿಗೆ ವಸ್ತು. ಸ್ವತಃ ಬೆವರಿಳಿಸಿಕೊಂಡು ಮಾಡಿದ ಸಾವಯವ ಕೃಷಿಯ ಮಹತ್ವ, ಶ್ರಮವನ್ನು ಗ್ರಾಹಕರು ಅರಿತುಕೊಳ್ಳುವ ತನಕ ಸಾವಯವ ಎನ್ನುವುದು ಫ್ಯಾಶನ್ ಆಗುತ್ತದಷ್ಟೇ. ಸಾವಯವ ವಸ್ತುವನ್ನು ಸೇವಿಸುವ ಗ್ರಾಹಕನಲ್ಲಿ ಕನಿಷ್ಠ ತಾನು ರೈತರ ಶ್ರಮದ ಒಂದು ಪಾಲನ್ನು ತಿನ್ನುತ್ತಿದ್ದೇನೆ ಎನ್ನುವ ಅರಿವು ಮೂಡಬೇಕು.”

                ಮೈಸೂರಿನಲ್ಲಿ ಕಲ್ಲಂಗಡಿ ಬೆಳೆದಿದೆ. ಸಾವಯವದಲ್ಲಿ ಬೆಳೆದಿದ್ದಾರೆ. ಲಾರಿಯಲ್ಲಿ ಪುತ್ತೂರಿಗೆ ಬಂದಿದೆ. ಸುಹಾಸ್ ಅನ್ಲೋಡ್ ಮಾಡಿಕೊಂಡಿದ್ದಾರೆ. ತನ್ನ ವಾಟ್ಸಾಪ್ ಗುಂಪಿನಲ್ಲಿ ವಿಚಾರವನ್ನು ಹರಿಯಬಿಟ್ಟಿದ್ದಾರೆ. ಗ್ರಾಹಕರು ಕಲ್ಲಂಗಡಿಯನ್ನು ಒಯ್ದಿದ್ದಾರೆ. ‘ತುಂಬಾ ರುಚಿಯಿದೆಎನ್ನುತ್ತಾ ಮತ್ತಷ್ಟು ಖರೀದಿಸಿದ್ದಾರೆ, ಸೇವಿಸಿದ್ದಾರೆ. ಇಲ್ಲಿಗೆ ಮಾರಾಟಗಾರ-ಗ್ರಾಹಕ ಸಂಬಂಧ ಮುಗಿಯುತ್ತದೆ.

 ಸಾವಯವ ಎನ್ನುವುದು ಮುಗಿಯದ ಸಂಬಂಧ. ಅದು ಅನೂಚಾನ,” ಎನ್ನುವ ಅರಿವಿದ್ದ ಸುಹಾಸರಿಗೆ ಸಂಬಂಧ ಗಟ್ಟಿಯಾಗಬೇಕು ಎನ್ನುವ ಹಪಾಹಪಿ. ‘ಕಲ್ಲಂಗಡಿ ಬೆಳೆದ ಕೃಷಿಕರು ಯಾರು? ಅವರ ವಿಳಾಸ, ಫೋನ್ ನಂಬ್ರ ಕೊಡ್ತೀರಾ. ನಮ್ಮ ಖುಷಿಯನ್ನು ಅವರೊಂದಿಗೆ ಹಂಚಿಕೊಳ್ಳೋಣಎಂದು ಕೇಳುವ ಮನಸ್ಥಿತಿ ಗ್ರಾಹಕರಲ್ಲಿ ಬಂದು ಬಿಟ್ಟರೆ ಸಾವಯವ ಮನಸ್ಸು ರೂಪುಗೊಳ್ಳುತ್ತಿದೆ ಎಂದರ್ಥ

ಆದರೆ ಇಂದು ಹಾಗಾಗುತ್ತಿಲ್ಲ. ಸುಹಾಸ್ ಅವರ ಕಲ್ಲಂಗಡಿ ಒಂದು ಉದಾಹರಣೆ ಮಾತ್ರ. ಕನ್ನಾಡಿನಾದ್ಯಂತ ಒಮ್ಮೆ ಕತ್ತು ಹಾಯಿಸಿ. ಸಾವಯವ ಆಂದೋಳನ ಹಬ್ಬುತ್ತಿದೆ. ಉತ್ಪನ್ನಗಳ ಅಂಗಡಿಗಳು ತಲೆ ಎತ್ತುತ್ತಿವೆ. ಹುಡುಕಿ ಬರುವ ಗ್ರಾಹಕರಿದ್ದಾರೆ. ಬೆಲೆಯನ್ನು ಚರ್ಚೆ ಮಾಡದೆ, ಕೆಲವೊಮ್ಮೆ ವಿಪರೀತ ಚೌಕಾಶಿ ಮಾಡಿ ಉತ್ಪನ್ನವನ್ನು ಒಯ್ಯುತ್ತಾರೆ. ಸರಕಾರವೂ ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದು ವ್ಯಾಪಾರದ ಒಂದು ಮುಖವಷ್ಟೇ

ಸಾವಯವ ಎನ್ನುವುದು ಒಂದು ಕೃಷಿ ವಿಧಾನ ಆಗಿರದೆ ಅದು ಬದುಕಿನ ಅಂಗವಾಗಬೇಕು. ಉತ್ಪನ್ನವನ್ನು ಬೆಳೆದ ರೈತನ ಪರಿಚಯ ಯಾರಿಗಿದೆ? ಉತ್ಪನ್ನವನ್ನು ಬೆಳೆಯುವಲ್ಲಿ ಆತನ ಶ್ರಮ ಎಷ್ಟು? ಆತನ ಕುಟುಂಬ ಹೇಗೆ ತೊಡಗಿಕೊಳ್ಳುತ್ತದೆ. ಸಾವಯವದಲ್ಲಿ ಬೆಳೆಯುವುದೆಂದರೆ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಂತೆ. ಇಂತಹ ಸವಾಲುಗಳನ್ನು ರೈತ ಹೇಗೆ ಪರಿಹರಿಸಿಕೊಂಡ... ಮೊದಲಾದ ಕನಿಷ್ಠ ಪ್ರಶ್ನೆಗಳು ಗ್ರಾಹಕನೊಳಗೆ ಎಂದಾದರೂ ಮೂಡಿವೆಯೇ?

ಕಾಂಚಾಣದ ಲೋಕದಲ್ಲಿ ಹಣಕ್ಕೆ ಬಲ. ಅದು ಭಾರವಾದಷ್ಟೂ ಅಂತಸ್ತು ವೃದ್ಧಿ. ಏನನ್ನಾದರೂ, ಎಷ್ಟನ್ನಾದರೂ ಖರೀದಿಸುವ ತಾಕತ್ತು. ಬೇಕೋ, ಬೇಡ್ವೋ ಖರೀದಿಯ ಖಯಾಲಿಯಿಂದ ವ್ಯಾಪಾರ-ವ್ಯವಹಾರಗಳು ವೃದ್ಧಿಯಾಗುತ್ತವೆ. ಸಾವಯವ ಅಂದರೆ ಇಷ್ಟೇ ಅಲ್ಲವಲ್ಲ. ಖರೀದಿಯ ಬಳಿಕದ ಮಾತುಕತೆಗಳು ಸಾವಯವ ಮನಸ್ಸುಗಳನ್ನು ಒಂದುಗೂಡಿಸುತ್ತವೆ

ಈಗ ಕೀಟನಾಶಕ, ರಸಗೊಬ್ಬರಗಳ ಮೇಲಾಟದ ಕೃಷಿ ಪದ್ಧತಿಗಳು ಮೇಲ್ಮೆ ಸಾಧಿಸುವ ಕಾಲಘಟ್ಟದಲ್ಲಿ ಸಾವಯವದಲ್ಲಿ ಕೃಷಿ ಮಾಡುತ್ತೇನೆ ಎನ್ನುವುದೇ ಇತರರ ದೃಷ್ಟಿಯಲ್ಲಿ ನಗೆಪಾಟಲು. ಸಾವಯವ ಕೃಷಿ ಅಂದರೆ ತಪಸ್ಸು. ಅದೊಂದು ಧ್ಯಾನ. ಗ್ರಾಹಕನಿಗೆ ಧ್ಯಾನ ಕಾಣಿಸದು, ಅರ್ಥವಾಗದು. ಅದರೊಳಗಿನ ಮಾತುಗಳು ಕೇಳಿಸಲಾರವು. ಅದು ಕೇಳಿಸಬೇಕಾದರೆ ಕೃಷಿಕನೊಂದಿಗೆ ಸಂಪರ್ಕ ಬೇಕು. ಆತನ ಬದುಕನ್ನು ಅರ್ಥಮಾಡಿಕೊಳ್ಳಬೇಕು. ಕೀಟನಾಶಕಗಳ ಹೊರತಾದ ವಿಚಾರಗಳತ್ತ ಯೋಚಿಸಬೇಕು

ಉದಾಹರಣೆಗೆ ಸಾವಯವದಲ್ಲಿ ತರಕಾರಿ ಕೃಷಿ ಮಾಡುವ ಕೃಷಿಕನ ಮುಂದಿರುವ ಸವಾಲುಗಳನ್ನು ಎದುರಿಸುವುದೇ ದೊಡ್ಡ ಸವಾಲು! ಕೀಟಗಳಿಂದ ಫಸಲನ್ನು ರಕ್ಷಿಸುವುದು ತಲೆನೋವು. ರಾಸಾಯನಿಕ ಕೃಷಿಯಾದರೆ ಆಗ್ರೋ ಅಂಗಡಿಗೆ ಹೋದರೆ ಆಯಿತು, ಯಾವ ಕೀಟಕ್ಕೆ ಯಾವ ಸಿಂಪಡಣೆ ಅಂತ ಅವರೇ ಡೋಸೇಜ್ ಫಿಕ್ಸ್ ಮಾಡಿ ಹೇಳಿಬಿಡುತ್ತಾರೆ. (ಬಯಲು ಸೀಮೆಯಲ್ಲಿ ಇಂತಹ ವ್ಯವಸ್ಥೆಯಿದೆ) ಸಿಂಪಡಿಸಿದರೆ ಆಯಿತು. ಕೀಟ ಸತ್ತಿತೋ, ಇಲ್ವೋ ಬೇರೆ ಮಾತು.

ಸಾವಯವದಲ್ಲಾದರೆ ಹಾಗಲ್ಲ. ಕೀಟಗಳನ್ನು ಓಡಿಸಲು, ನಿಯಂತ್ರಿಸಲು, ಪ್ರತ್ಯೇಕಾದ ಸಿಂಪಡಣಾ ವ್ಯವಸ್ಥೆಗಳು, ನಿತ್ಯ ತೀವ್ರ ನಿಗಾ, ಫಸಲು ಕೈಗೆ ಬರುವಲ್ಲಿಯ ತನಕ ಆತಂಕದ ಕ್ಷಣಗಳು. ಇವೆಲ್ಲಾ ಹೆಚ್ಚು ಸಮಯ ಮತ್ತು ಶ್ರಮವನ್ನು ಬೇಡುತ್ತವೆ. ಹೆಚ್ಚುವರಿ ಶ್ರಮವು ಕೃಷಿಕರಿಗೆ ಹೇಗೆ ಮರುಭರ್ತಿಯಾಗುತ್ತದೆ? ಅದು ಹೆಚ್ಚುವರಿ ಶ್ರಮ ಎಂದು ಗ್ರಾಹಕನಿಗೆ ತಿಳಿಯಬೇಕಾದರೆ ರೈತರ ಮಣ್ಣನ್ನು ಮೆಟ್ಟಬೇಕು, ಮುಟ್ಟಬೇಕು. ಆಗ ಮಣ್ಣು ಮೃದುವಾಗಿಯೇ, ಗಡಸಾಗಿದೆಯೋ ಎಂದು ತಿಳಿಯುತ್ತದೆ. ಹೀಗೆ ತಿಳಿಯುವುದರಿಂದ ರೈತರ ಕಷ್ಟ-ಸುಖಗಳ ಹತ್ತಿರದ ಪರಿಚಯವಾಗುತ್ತದೆ. ಆಗ ಉತ್ಪನ್ನಗಳಿಗೆ ಚೌಕಾಶಿ ಮಾಡುವ ಮನಃಸ್ಥಿತಿ ದೂರವಾಗುತ್ತದೆ. ಇದುವೇ ಸಾವಯವ ಮನಸ್ಸು.

ನಾಳೆ - ಜೂ.2 - ಬೆಳಗ್ಗಿನಿಂದ ಪುತ್ತೂರಿನ ನಟರಾಜ ವೇದಿಕೆಯ ವಠಾರದಲ್ಲಿ ನಡೆಯುವಸಾವಯವ ತರಕಾರಿ ಸಂತೆ ಆಮಂತ್ರಣವನ್ನು ಸುಹಾಸ್ ಮರಿಕೆ ನೀಡಿದಾಗ ಮೇಲಿನ್ನೆಲ್ಲಾ ವಿಚಾರಗಳು ಮನದಲ್ಲಿ ಹಾದುಹೋದುವು. (ಸಾಂದರ್ಭಿಕ ಚಿತ್ರ)

ಊರುಸೂರು / 2-6-2019  

0 comments:

Post a Comment