Saturday, July 13, 2019

ನೀರಿನ ಸಮೃದ್ಧಿಯ ಕುರುಡು


ಮಾರ್ಚ್-ಎಪ್ರಿಲ್ ತಿಂಗಳು. ಬಿಸಿಲ ಧಗೆ. ಬಯಲುಸೀಮೆಯ ಹಳ್ಳಿ. ಅಲ್ಲೊಂದು ಚಿಕ್ಕ ಕೊಳ್ಳ. ಸುಮಾರು ಒಂದೂವರೆ ಎರಡು ಅಡಿ ನೀರು. ಮೂರ್ನಾಲ್ಕು ಮಂದಿ ಬಟ್ಟೆ ಮಡಿ ಮಾಡುತ್ತಿದ್ದರೆ, ಇನ್ನಿಬ್ಬರು ಸ್ನಾನಕ್ಕಣಿಯಾಗುತ್ತಿದ್ದರು. ಒಂದಿಬ್ಬರು ಹಸುವನ್ನು ಮೀಯಿಸುತ್ತಿದ್ದರು. ಹೀಗೆ ಏಳೆಂಟು ಮಂದಿ ತಮ್ಮ ಪಾಡಿಗೆ ತಾವಿರುವ ಹೊತ್ತು. ಅವರಲ್ಲೊಬ್ಬರು ತುಳುನಾಡಿನವರು. ಹದಿನೈದು ವರುಷದಿಂದ ಅಲ್ಲೇ ಬದುಕು ರೂಪಿಸಿಕೊಂಡವರು.

 ಒಂಜೇ ತಿಂಗಳೊಡ್ ಅರ್ಧ ಕೋಲು ನೀರು ಜತ್ತಂಡ್, ಇಂಚಾಂಡ ನೀರ್ಗ್ ದೇವೆರೇ ಕಾಪಾಡೊಡಾತೆ,” (ಒಂದು ತಿಂಗಳಲ್ಲಿ ಎರಡಡಿ ನೀರು ಇಳಿದಿದೆ. ಹೀಗಾದರೆ ದೇವರೇ ಕಾಪಾಡಬೇಕಷ್ಟೇ) ಎಂದು ತಮ್ಮಷ್ಟಕ್ಕೇ ಗೊಣಗಾಡುತ್ತಿದ್ದರು. ಇವರ ಭಾಷೆ ಉಳಿದವರಿಗೆ ಸಹವಾಸದಿಂದಾಗಿ ಅರ್ಧಂಬರ್ಧ ಅರ್ಥವಾಗಹುದೇನೋ. ಅವರನ್ನು ಕರೆದು ಮಾತನಾಡಿಸಿದೆ.

ಮಗಳನ್ನು ಊರಿಗೆ ಪಾಣಿಗ್ರಹಣ ಮಾಡಿದ್ದರಿಂದಾಗಿ ಅವರದ್ದೂ ಅಲ್ಲೇ ವಸತಿ. ಕಳೆದೆರಡು ವರುಷದಿಂದ ಮಳೆ ಬಂದಿಲ್ಲ. ಹಾಗಾಗಿ ಕೃಷಿಯೂ ಅಷ್ಟಕ್ಕಷ್ಟೇ. ಹಿಂದಿನ ವರುಷಗಳಲ್ಲಿ ಶೇಂಗಾ, ರಾಗಿ.. ಇವರ ಬದುಕನ್ನು ಆಧರಿಸಿತ್ತು. ಜತೆಗಿದ್ದ ಇನ್ನೋರ್ವ ಕೃಷಿಕರದುದೇವ್ರು ಎಲ್ಲಾ ಕೊಟ್ಟಿದ್ದಾನೆ, ನೀರು ಕೊಟ್ಟಿಲ್ಲ,’ ಎಂಬ ನೋವು.  

ಹಳ್ಳಿ ಪ್ರದೇಶದಲ್ಲೊಮ್ಮೆ ಸುತ್ತಾಡಿ. ಇಂತಹ ದೃಶ್ಯಗಳು ಸಾಮಾನ್ಯ. ದೇವರ ಮೇಲೆ ಭಾರ ಹಾಕಿ ಬದುಕುವ ಪರಿ. ಒಂದೇ ಕೊಳ್ಳದಲ್ಲಿ ವಿವಿಧ ಪ್ರಕ್ರಿಯೆಗಳು ಏಕಕಾಲದಲ್ಲಿ ನಡೆದುಬಿಡುತ್ತವೆ. ಅನಿವಾರ್ಯವಾದರೆ ಅದು ಕೂಡ ಕುಡಿನೀರು! ಪಂಚಾಯತಿನ ನಳ್ಳಿ ಇದೆ, ಅದರಲ್ಲಿ ನೀರಿಲ್ಲಗಾಳಿ ಮಾತ್ರ! ಅಪರೂಪಕ್ಕೊಮ್ಮೆ ಹಾದು ಹೋಗುವ ನೀರಿನ ಟ್ಯಾಂಕರಿಗೆ ನಿಲುಗಡೆಯಿಲ್ಲ! ಅದಕ್ಕೂಆಪರೇಶನ್ ವಾಟರ್ಬಾಧೆ! ನೀರಿನ ವ್ಯವಸ್ಥೆಗಾಗಿ ನೀಡಿದ ಮನವಿಗಳೆಲ್ಲಾ ನಂಬರ್, ದಿನಾಂಕ ನಮೂದಿಸಿ ಫೈಲೊಳಗೆ ಮಲಗಿವೆ. ಅವು ಎಂದೂ ಎಚ್ಚರವಾಗದು. ಆಡಳಿತ ವ್ಯವಸ್ಥೆಗೆ ಅವು ಎಚ್ಚರವಾಗಬೇಕಾಗಿಲ್ಲ.

ಬಡವರನ್ನು ಬಡವರನ್ನಾಗಿಯೇ ನೋಡುವುದು, ಬಡವರ ಹೆಸರಿನಲ್ಲಿ ಮಾತನಾಡುವುದು, ಕೈಕಾಸು ಕೊಟ್ಟು ಲಕ್ಷಗಟ್ಟಲೆ ನೀಡಿದ್ದೇನೆ ಎಂದು ಬೀಗುವುದು, ಓಟು ಬಂದಾಗ ಬಡವರ ಬಂಧುವಾಗುವುದು, ಮತ್ತದೇ ಮುಖಕ್ಕೆ ಮತ ನೀಡುವುದು.. ನಮ್ಮ ಗ್ರಾಮೀಣ ಭಾರತದ ಗುಣವೋ, ಅರ್ಹತೆಯೋ ಗೊತ್ತಿಲ್ಲ

ಹಿಂದೊಮ್ಮೆ ಗುಬ್ಬಿ ತಾಲೂಕಿಗೆ ಹೋಗಿದ್ದೆ. ಕೃಷಿಕರೊಬ್ಬರು ಮಾತಿಗೆ ಸಿಕ್ಕರು - “ಸಾರ್, ಸರಕಾರ ನಮ್ಗೆ ಏನೂ ಕೊಡೋದು ಬೇಡ. ಕುಡಿಯುಲು ನೀರು ಕೊಟ್ರೆ ಸಾಕು.”  ಕುಡಿನೀರಿಗೆ ಬಿಂದಿಗೆ ಅಲ್ಲ, ಬೊಗಸೆ ಹಿಡಿದು ಕಾಯುವ ಜೀವಗಳ ರೋದನಕ್ಕೆ ದನಿಯೇ ಇಲ್ಲ. ಮಳೆ ಬಂದಿಲ್ಲ, ಬೆಳೆ ಇಲ್ಲ, ಮೇವಿಲ್ಲ, ಕುಡಿಯುವ ನೀರಿಗೂ ತತ್ವಾರವಾದಾಗ ಹುಬ್ಬಳ್ಳಿ ಸುತ್ತಮುತ್ತಲಿನ ಹಳ್ಳಿಗಳಿಂದ ಗುಳೆಹೋಗುವ ದೃಶ್ಯ ನೋಡಿದಾಗ ಕಣ್ಣೀರು ಬರುತ್ತದೆ

ದಕ್ಷಿಣ ಕನ್ನಡದಿಂದ ಗುಳೆಹೋಗುವಂತಹ ನೀರಿನ ಸಂಕಟ ಕಾಣಸಿಗುವುದು ಅಪರೂಪ. ಮಳೆಯೇನೋ ಬರುತ್ತದೆ. ‘ಕಳೆದ ವರುಷ ಹೆಚ್ಚು ಬಂದಿತ್ತು. ಹಿಂದಿನ ವರುಷಕ್ಕಿಂತ ವರುಷ ಓಕೆ. ಹೀಗಾದರೆ ಹೇಗಪ್ಪಾ,’ ಹೀಗೆ ಲೆಕ್ಕಾಚಾರದಲ್ಲಿ ಮಳೆಗಾಲವನ್ನು ಕಳೆಯುತ್ತೇವೆ. ಬಿದ್ದ ಮಳೆನೀರು ಏನಾಗಿದೆ? ಮಳೆಯೊಂದು ಕಿರಿಕಿರಿ ಎನ್ನುತ್ತಾ ಹಿಡಿಶಾಪ ಹಾಕುತ್ತಾ, ಬೇಸಿಗೆಯಲ್ಲಿ ಆಗಸ ನೋಡುತ್ತೇವೆ

ಸ್ವಲ್ಪ ಜಾಗವಿದ್ದಲ್ಲಿ ನೀರಿಂಗಿಸುವ ರಚನೆಗಳನ್ನು ಮಾಡುವುದು, ಚಾವಣಿ ನೀರನ್ನು ಬಾವಿಗೆ ಸೇರಿಸುವುದು, ತಮ್ಮ ಆವರಣದ ನೀರನ್ನು ಹೊರಗೆ ಹರಿಯದಂತೆ ಎಚ್ಚರವಹಿಸುವುದು.. ಮೊದಲಾದ ಕಿಸೆಗೆ ಭಾರವಾಗದ ಕೆಲಸಗಳನ್ನು ಮಾಡದಿದ್ದರೆ, ಬಯಲುಸೀಮೆಯಗುಳೆ ಹೋಗುವಸಂಕಟದ ದಿವಸಗಳಿಗೆ ನಾವು ಅಣಿಯಾಗಬೇಕಾಗಬಹುದು

ಹುಬ್ಬಳ್ಳಿ, ಗದಗ, ಬೆಂಗಳೂರು ನಗರದ ತ್ಯಾಜ್ಯಗಳು ಹಳ್ಳಿಗಳನ್ನು ಸೇರುತ್ತವೆ. ಕೊಳಚೆ ನೀರಿನಿಂದ ಕೃಷಿ ಮಾಡುತ್ತಾ ಬದುಕುವ ಎಷ್ಟೊಂದು ಜೀವಗಳು ಬೇಕು? ಮೊದಲು ಕುಡಿಯುವ ನೀರಾಗಿದ್ದ ತೋಡುಗಳಲ್ಲಿ ತ್ಯಾಜ್ಯ ಹರಿಯುತ್ತದೆ. ಅದರೊಳಗೆ ಇಳಿದು, ಕಲ್ಮಶಗಳನ್ನು ಹೊರಗೆಸೆದು, ಪಂಪ್ ಮೂಲಕ ನೀರನ್ನು ಕೃಷಿಗೆ ಬಳಸುವ ಕೃಷಿಕರ ಸಂಕಷ್ಟವನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಅಂತಹ ಸ್ಥಿತಿ ಸದ್ಯ ದಕ್ಷಿಣ ಕನ್ನಾಡಿಗಿಲ್ಲ.

ನೀರಿನ ಸಮೃದ್ಧತೆಯಿದ್ದು ಕುರುಡಾಗಿದ್ದೇವೆ. ಅರಿವನ್ನು ಮೂಡಿಸುವ ಕೆಲಸಗಳು ಆಗುತ್ತಿದ್ದರೂ, ಹೇಳುವಂತಹ ಪರಿಣಾಮವಿಲ್ಲ. ನೀರಿನ ಕನಿಷ್ಠ ಬಳಕೆಯ ಕುರಿತು ಮಕ್ಕಳಿಗಲ್ಲ, ಹಿರಿಯರಿಗೂ ಪಾಠ ಬೇಕು. ನೀರಿನ ಕುರಿತಾಗಿಯೇ ಇರುವ ಇಲಾಖೆಗಳಿವೆ. ಅಧಿಕಾರಿಗಳಿದ್ದಾರೆ. ಅಲ್ಲೋ ಇಲ್ಲೋ ಪ್ರಾಮಾಣಿಕ ಅಧಿಕಾರಿಗಳಿಂದ ಉತ್ತಮ ಕೆಲಸ ನಡೆದಿದೆ

ನೀರಿನ ಅರಿವು, ಬಳಕೆ, ಮರುಪೂರಣ, ಇಂಗಿಸುವಿಕೆಯಂತಹ ಕೆಲಸಗಳು ಪಂಚಾಯತ್ ಮಟ್ಟದಲ್ಲಿ ಮೊದಲಾದ್ಯತೆಯಲ್ಲಿ ಆಗಬೇಕಾಗಿದೆ. ಮಠ ಮಂದಿರಗಳಿಗೆ, ಐಟಿ-ಬಿಟಿಗಳಿಗೆ, ಉದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಕೋಟಿ ಕೋಟಿ ಸುರಿವ ಸರಕಾರವಿರುವಾಗ ಭಯವೇಕೇ ಅಲ್ವಾ! ನೀರಿನ ಕೆಲಸಕ್ಕೆ ಒಂದಷ್ಟು ಕೋಟಿ ನೀಡಲಿ? ಆದರೆ ಕೋಟಿಯನ್ನು ತರುವ ಜನನಾಯಕರು ಬೇಕಾಗಿದ್ದಾರೆ.  

ಇನ್ನೇನು ಮಳೆಗಾಲದ ನಿರೀಕ್ಷೆಯಲ್ಲಿದ್ದೇವೆ. ನೀರಿಂಗಿಸುವ ಕೆಲಸಗಳಿಗೆ ಸಕಾಲ. ಸರಕಾರದತ್ತ ಮತ್ತೆ ಕತ್ತು ತಿರುಗಿಸೋಣ. ನಂನಮ್ಮ ಜಾಗದಲ್ಲಿ ಮಣ್ಣನ್ನು ತಂಪು ಮಾಡೋಣ. ಒಡಲೊಳಗೆ ನೀರಿಳಿಸೋಣ. ಇತರರಿಗೆ ಪ್ರೇರೇಪಿಸೋಣ. ಹಕ್ಕುಗಳ ಕುರಿತು ದೊಡ್ಡ ದನಿಯಲ್ಲಿ ಮಾತನಾಡುತ್ತಾ ತೋಳು ಕುಣಿಸುವ ನಮಗೆ ಜವಾಬ್ದಾರಿಗಳತ್ತ ಅಲಕ್ಷ್ಯ ಎಲ್ಲವೂ ಕಾಂಚಾಣದಿಂದ ನಡೆಯುತ್ತದೆ ಎನ್ನುವ ಹಣ ಮದ! ಕಾಂಚಾಣದಿಂದ ಎಲ್ಲವೂ ಸಿಗಬಹುದು, ಆದರೆ ನೀರು ಸಿಗಲಾರದು

ಊರು ಸೂರು / 26-5-2019


0 comments:

Post a Comment