‘ನೀರು ಬೆಲೆ ಕಟ್ಟಲಾಗದ ಜೀವಜಲ. ಅದನ್ನು ಸೃಷ್ಟಿಸಲು ಸಾಧ್ಯವಿಲ್ಲ. ನೀರನ್ನು ಪೋಲು ಮಾಡುವುದು ಸಮಾಜ ದ್ರೋಹ. ಎಚ್ಚರದಿಂದ ಬಳಸುವ ಒಬ್ಬರಿಗೆ ನೂರು ಲೀಟರ್ ನೀರಿದ್ದರೆ ಒಂದು ದಿನದ ಬಳಕೆಗೆ ಸಾಕು. ಮನೆ, ಹೋಟೆಲ್, ಉದ್ಯಮ – ಎಲ್ಲೆಡೆ ಆಗುವ ನೀರಿನ ಪೋಲನ್ನು ನಿಲ್ಲಿಸಲು ಮೊದಲ ಆದ್ಯತೆ ಕೊಡುವುದು ಸಾಮಾಜಿಕ ಬದ್ಧತೆ.’ ಜಲಯೋಧರ ಎಚ್ಚರಿಕೆಯ ಮಾತು.
ಏನಿದು ನೀರಿನ ಪೋಲು? ನೀರು ಪೋಲಾದರೆ ನಷ್ಟ ಯಾರಿಗೆ? ಅದನ್ನು ತುಂಬುವವರು ಯಾರು? ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಹೋಟೆಲುಗಳಲ್ಲಿ ಕೈತೊಳೆಯುವ ನಳ್ಳಿಗಳಲ್ಲಿ ದಿನವಿಡೀ ನೀರು ಸೋರುತ್ತಿರುವುದನ್ನು ನೋಡುತ್ತೇವೆ. ಕೈ ಶುಚಿಯಾದ ಬಳಿಕವೂ ನಳ್ಳಿಯನ್ನು ಆಫ್ ಮಾಡಬೇಕೆಂಬ ಸೌಜನ್ಯವೂ ನಮಗಿರುವುದಿಲ್ಲ. ಯಾಕೆ ಹೇಳಿ? ಊಟಕ್ಕೆ ನಾವು ನಲುವತ್ತೋ, ಐವತ್ತೋ ರೂಪಾಯಿ ಕೊಡುತ್ತೇವಲ್ಲಾ.
ಶೌಚಾಲಯದ ಚಿತ್ರಣವೇ ಬೇರೆ. ಶೌಚ ಕ್ರಿಯ ಮುಗಿದ ಬಳಿಕ ಬೇಕಾದಷ್ಟು ನೀರನ್ನು ಬಳಸಿದರೆ ಅಡ್ಡಿಯಿಲ್ಲ. ಆದರೆ ಶೌಚಾಲಯದಲ್ಲಿ ಇದ್ದಷ್ಟು ಹೊತ್ತು ನಳ್ಳಿಯಲ್ಲಿ ನೀರು ಬೀಳುತ್ತಾ ಇರುತ್ತದೆ. ಒಮ್ಮೆ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಏನಿಲ್ಲವೆಂದರೂ ಮೂರ್ನಾಲ್ಕು ಬಾಲ್ದಿ ನೀರು ವ್ಯಯವಾಗಿರುತ್ತದೆ.
ನೀರಿನ ಸಂಗ್ರಹಕ್ಕೆ ಮನೆಯ ಮೇಲೆ ಟ್ಯಾಂಕಿಗಳನ್ನು ಸ್ಥಾಪಿಸುತ್ತೇವೆ. ಪಂಪ್ ಚಾಲೂ ಮಾಡಿ ನಿಶ್ಚಿಂತೆಯಿಂದಿರುತ್ತೇವೆ. ಟ್ಯಾಂಕ್ ತುಂಬಿ ನೀರು ಹೊರಚೆಲ್ಲುತ್ತಿದ್ದರೂ ಪರಿವೇ ಇರುವುದಿಲ್ಲ. ನೆನಪಾದಾಗ ಸ್ವಿಚ್ ಆಫ್ ಮಾಡುತ್ತೇವೆ. ಹೀಗೆ ನೀರು ದೊಡ್ಡ ಪ್ರಮಾಣದಲ್ಲಿ ಪೋಲಾಗುವುದು ಹೆಚ್ಚು. ಕೆಲವೆಡೆ ಸರಕಾರಿ ಬಾವಿಗೆ ಪಂಪ್ ಸಿಕ್ಕಿಸಿ ನೀರೆತ್ತುವುದುಂಟು. ಆ ನೀರನ್ನು ಹತ್ತು ಜನರಾದರೂ ಬಳಸುತ್ತಾರೆ ಎಂಬ ಪ್ರಜ್ಞೆ ಇಲ್ಲದೆ ಟ್ಯಾಂಕಿ ತುಂಬಿದರೂ ಸ್ವಿಚ್ ಆಫ್ ಮಾಡದಷ್ಟು ಜಾಣ ಮರೆವು.
ಒಮ್ಮೆ ಹೀಗಾಯಿತು. ಕಚೇರಿಗೆ ಹೊರಟಿದ್ದೆ. ಮನೆಯೊಂದರ ಟ್ಯಾಂಕ್ ತುಂಬಿ ನೀರು ಹೊರ ಚೆಲ್ಲುತ್ತಿತ್ತು. ಮನೆಯ ಯಜಮಾನರು ಅಂಗಳದಲ್ಲಿ ‘ಅನ್ಯಕಾರ್ಯ ನಿಮಿತ್ತ’ ಓಡಾಡುತ್ತಿದ್ದರು. ‘ನೀರು ಚೆಲ್ಲುತ್ತಿದೆ. ಆಫ್ ಮಾಡ್ತೀರಾ’ ಎಂದು ವಿನಂತಿಸಿದೆ. ‘ಏನ್ರಿ. ನಮ್ಮನೆಯ ಟ್ಯಾಂಕಿ, ನಮ್ಮದೇ ಬೋರ್ ನೀರು, ನಮ್ಮದೇ ಕರೆಂಟ್. ನಿಮಗೇನು ನಷ್ಟ’ ಎನ್ನಬೇಕೆ?
ಸಭಾಭವನಗಳಲ್ಲಿ ಐನೂರೋ ಸಾವಿರ ಮಂದಿ ಉಂಡು ಕೈ ಶುಚಿಯಾದ ಬಳಿಕವೂ ಅಲ್ಲಿರುವ ನಳ್ಳಿಗಳಲ್ಲಿ ನೀರು ಪೋಲು ನಿಲ್ಲುವುದಿಲ್ಲ. ಕೈತೊಳೆಯುವ ಜಾಗದಲ್ಲಿ ಡ್ರಮ್ಮಿಗೆ ನೀರು ತುಂಬಿಸಲು ಪೈಪ್ ಜೋಡಿಸಿರುತ್ತಾರೆ. ಗಂಟೆಗಟ್ಟಲೆ ನೀರು ಅದರಲ್ಲಿ ಹೋಗುತ್ತಾ ಇರುತ್ತದೆ. ಯಾಕೆಂದರೆ ಬಾವಿಯಲ್ಲಿ ನೀರಿದೆ! ಕೆರೆಯಲ್ಲಿ ನೀರಿದೆ!
ನಗರಾಡಳಿತ ವ್ಯಾಪ್ತಿಯ ನೀರಿನ ಪೈಪುಗಳದ್ದು ಕಣ್ಣೀರ ಕತೆ. ಯಾವುದೋ ಕೆಲಸಗಳಿಗಾಗಿ ಅಗೆಯುತ್ತಿದ್ದಾಗ ನೆಲದಡಿ ಹಾಕಿದ್ದ ಪೈಪ್ ತುಂಡಾಗುತ್ತದೆ. ನೀರು ಕಾರಂಜಿಯಂತೆ ಚಿಮ್ಮುತ್ತದೆ. ಅಗೆಯುವವರು ಅಗೆತದ ಕೆಲಸ ನಿಲ್ಲಿಸಿ ಮರಳುತ್ತಾರೆ. ‘ಛೇ, ನೀರು ಹಾಳಾಗುತ್ತದೆ’ ಎನ್ನುತ್ತಾ ತಂತಮ್ಮ ಪಾಡಿಗೆ ಗೂಡು ಸೇರುತ್ತಾರೆ. ಆದರೆ ಒಬ್ಬನೂ ಕೂಡಾ ನೀರನ್ನು ನಿಲ್ಲಿಸುವತ್ತ ಯೋಚಿಸಿದ್ದಿದೆಯೇ? ಯಾಕೆಂದರೆ ಅದು ಸರಕಾರದ ಕೆಲಸ ಎಂಬ ‘ಭ್ರಮಾಹುಳು’ ತಲೆಯೊಳಗೆ ಸುತ್ತುತ್ತಾ ಇರುತ್ತದೆ. ವಾರಕ್ಕೆ ಬೇಕಾಗುವಷ್ಟು ನೀರು ನಿಷ್ಪ್ರಯೋಜಕವಾಗಿ ಚರಂಡಿ ಸೇರುತ್ತದೆ.
ನೀರಿನ ಪೋಲಿಗೆ ಹತ್ತಾರು ಉದಾಹರಣೆಗಳು ಕಣ್ಣಮುಂದಿವೆ. ಉಸಿರು ನಿಲ್ಲಿಸಲು ಬೇಕಾದಂತಹ ನೀರು ಎಲ್ಲಿಂದ ಬರುತ್ತದೆ? ಜಲಮೂಲಗಳು ಮತ್ತು ಅವುಗಳ ಪರಿಸ್ಥಿತಿ ಹೇಗಿದೆ ಎಂಬ ಅರಿವು ಇಲ್ಲದಿದ್ದರೆ ತಿಳಿಯುವುದು ಕಾಲದ ಆವಶ್ಯಕತೆ. ನೀರಿನ ಸುಸ್ಥಿತಿ ಬಗ್ಗೆ ನಮಗೂ ಜವಾಬ್ದಾರಿಯಿಲ್ವಾ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೊಳವೆ ಬಾವಿಗಳು ಸಾವಿರಾರು ಅಡಿ ಕೆಳಗಿಳಿದರೂ ನೀರಿನ ಪತ್ತೆ ಇಲ್ಲದೆ ಲಕ್ಷಗಟ್ಟಲೆ ರೂಪಾಯಿ ಕಳೆದುಕೊಳ್ಳುತ್ತೇವೆ.
ಸ್ವಲ್ಪ ಪ್ರಯತ್ನ ಮತ್ತು ಮನಸ್ಸು ಮಾಡಿದರೆ ನೀರಿನ ಕುರಿತು ಸಾಕ್ಷರರಾಗಲು ಕಷ್ಟವಲ್ಲ. ನೀರುಳಿಸುವ, ನೀರಿನ ಅರಿವನ್ನು ಹೆಚ್ಚಿಸಲು ಕೋಟಿಗಟ್ಟಲೆ ವ್ಯಯಿಸಬೇಕಾಗಿಲ್ಲ. ‘ನನ್ನದು ಬೋರ್, ನನ್ನದು ವಿದ್ಯುತ್, ನನ್ನದು ಬಾವಿ’ ಅಂತ ಮುಖಸಿಂಡರಿಸಿ ತರ್ಕ ಮಾಡುತ್ತೇವೆ. ಎಲ್ಲಿಯವರೆಗೆ? ಗಂಗೆ ಧರಣಿಯೊಳಗೆ ಅವಿತಿರುವ ತನಕ. ಒಂದೊಂದು ಚಮಚ ನೀರೂ ಕೂಡಾ ತೀರ್ಥ
.
ಊರು ಸೂರು
13-1-2019
0 comments:
Post a Comment