ಮಾನವ ಶ್ರಮವನ್ನು ಹಗುರ ಮಾಡುವ ಯಂತ್ರಗಳು, ಸಾಧನಗಳು ಕೃಷಿಕರ ಅಂಗಳಕ್ಕೆ ಕಾಲಿಟ್ಟಿವೆ. ಹಲವಾರು ಮಂದಿ ಕೃಷಿಕರು ಬಳಸುತ್ತಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿಯಲ್ಲೂ ಯಾಂತ್ರೀಕರಣ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಯಂತ್ರಗಳು, ತಂತ್ರಗಳು ಸೇರಿಹೋಗಿವೆ. ಅವೆಲ್ಲವನ್ನೂ ಒಂದೇ ಸೂರಿನಡಿ ತರುವ ಯತ್ನದಲ್ಲಿ ಪುತ್ತೂರಿನಲ್ಲಿ ಮೂರು ಕೃಷಿ ಯಂತ್ರಮೇಳಗಳು ಸಂಪನ್ನವಾಗಿದ್ದುವು.
2009,
2012 ಮತ್ತು 2015ರಲ್ಲಿ ಮೇಳಗಳು ಜರುಗಿವೆ. ಯಾಂತ್ರೀಕರಣದ ಹೊಸ ಬೆಳವಣಿಗೆಗಳನ್ನು, ಆವಿಷ್ಕಾರಗಳನ್ನು ಕೃಷಿಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶ ಪಡೆದಿವೆ. ಮೊದಲನೇ ಮೇಳವು ಅಡಿಕೆ ಸುಲಿಯುವ ಯಂತ್ರಗಳಿಗೆ ಪ್ರೋತ್ಸಾಹ ನೀಡಿತ್ತು. ಆ ಕಾಲಘಟ್ಟದಲ್ಲಿ ಕೃಷಿ ಸಹಾಯಕರ ಅಲಭ್ಯತೆಯ ಬಿಸಿಯ ಅನುಭವದಿಂದಾಗಿ ಪರ್ಯಾಯ ಹಾದಿಗಳನ್ನು ಹುಡುಕುವ ಮನಸ್ಥಿತಿ ರೂಪುಗೊಂಡಿತ್ತು. ಅದೇ ಹೊತ್ತಿಗೆ ಅಲ್ಲಿಲ್ಲಿ ಕೃಷಿಕರ ಆವಿಷ್ಕಾರಗಳು ಬೆಳಕಿಗೆ ಬರುತ್ತಿದ್ದುವು. ಇವುಗಳೆಲ್ಲಾ ಒಂದೆಡೆ ಪ್ರದರ್ಶನಕ್ಕೆ ಸಿಗುವಂತೆ ಮತ್ತು ಕೃಷಿಕ ಸಂಶೋಧಕರನ್ನು ಗೌರವಿಸುವ ಹೂರಣವನ್ನು ಮೇಳ ಹೊಂದಿತ್ತು.
ಮೊದಲ ಮೇಳದಲ್ಲಿ ಏನಿಲ್ಲವೆಂದರೂ ಮೂವತ್ತಕ್ಕೂ ಮಿಕ್ಕಿ ಅಡಿಕೆ ಸುಲಿಯುವ ಯಂತ್ರಗಳು ಸದ್ದು ಮಾಡಿದ್ದುವು. ಪ್ರತೀ ಮಳಿಗೆಯಲ್ಲಿ ಕೃಷಿಕರ ಕುತೂಹಲ, ಚೋದ್ಯಗಳು ಮತ್ತು ದೂರದೃಷ್ಟಿಗಳಿದ್ದುವು. ಒಂದಷ್ಟು ಮಂದಿ ಯಂತ್ರಗಳ ಖರೀದಿಗೆ ಮನ ಮಾಡಿದರೆ, ಬಹುತೇಕ ಮಂದಿ ಭವಿಷ್ಯಕ್ಕೆ ಇದೊಂದೇ ಹಾದಿ ಎಂದು ನಿರ್ಧಾರ ಮಾಡಿದುದು ಕಾಣಬಹುದಾಗಿತ್ತು. ಆವಿಷ್ಕಾರದ ಹಂತದಲ್ಲಿ ಚಿಕ್ಕ ಪುಟ್ಟ ತಾಂತ್ರಿಕ ದೋಷಗಳು ಇರುವಂತಾದ್ದೆ. ಪ್ರಾತ್ಯಕ್ಷಿಕೆಯನ್ನು ನೋಡಿದ ಹಲವಾರು ಕೃಷಿಕರು ಯಂತ್ರದತ್ತ ಒಲವು ತೋರಿದ್ದರು. ಅಂದು ಸುಮಾರು ಮೂವತ್ತು ಸಾವಿರಕ್ಕೂ ಮಿಕ್ಕಿ ಕೃಷಿಕರು ಭಾಗವಹಿಸಿದ್ದು ಆ ಕಾಲಘಟ್ಟದ ಚರಿತ್ರೆ.
ಎರಡನೇ ಮೇಳವು ಶ್ರಮ ಉಳಿತಾಯ ಮಾಡುವ ಉಪಕರಣ ಮತ್ತು ಅಂತರ್ಸಾಗಾಟಕ್ಕೆ ಅನುಕೂಲವಾಗುವ ಕೈಚಾಲಿತ, ಯಾಂತ್ರೀಕೃತ ಗಾಡಿಗಳನ್ನು ಕೇಂದ್ರೀಕರಿಸಿತ್ತು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಗಳ ಪ್ರದರ್ಶನವು ಈ ಮೇಳದ ಹೈಲೈಟ್. ಸುಮಾರು ಒಂದೂವರೆ ಲಕ್ಷ ಕೃಷಿಕರು, ಯಂತ್ರ ಪ್ರೇಮಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಆವಿಷ್ಕಾರದಲ್ಲಿ ಸ್ಪರ್ಧಾ ಮನೋಭಾವಗಳಿದ್ದುವು
ಮೂರನೇ ಯಂತ್ರಮೇಳದಲ್ಲಿ ದೇಶ, ವಿದೇಶಗಳ ಯಂತ್ರಗಳು, ಹೊಸ ಹೊಸ ಆವಿಷ್ಕಾರಗಳು, ಬದಲಾವಣೆಗಳು, ವರ್ತಮಾನದ ಸಂಕಟಗಳು.. ಮೊದಲಾದ ವಿಚಾರಗಳ ಕಾರ್ಯಹೂರಣಗಳು. ಸುಮಾರು ಇನ್ನೂರ ಮೂವತ್ತಕ್ಕೂ ಮಿಕ್ಕಿದ ಮಳಿಗೆಗಳು. ಕೃಷಿಯಲ್ಲಿ ಕಾಡುಪ್ರಾಣಿಗಳ ನಿಯಂತ್ರಣ, ತೆಂಗಿನಿಂದ ನೀರಾ ತಯಾರಿ, ಸೌರಶಕ್ತಿ... ವಿಚಾರಗಳ ಮಾತುಕತೆಗಳಿದ್ದುವು. ಎರಡೂವರೆ ಲಕ್ಷ ಮಂದಿ ಭಾಗವಹಿಸಿರಬಹುದು.
ಮೂರೂ ಮೇಳಗಳ ಯಂತ್ರ ಪ್ರದರ್ಶನ, ಕೃಷಿಕರ ಸ್ವೀಕೃತಿ ಮತ್ತು ಕೃಷಿ ಕ್ಷೇತ್ರದ ಅನಿವಾರ್ಯತೆಗಳ ಹಿನ್ನೆಲೆಯಲ್ಲಿ ಯಂತ್ರ ತಯಾರಿ ಉದ್ಯಮಗಳು ಶುರುವಾಗಿವೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳುದ್ದಕ್ಕೂ ಕಣ್ಣು ಹಾಯಿಸಿದರೆ ಕೃಷಿ ಯಂತ್ರ, ಸಲಕರಣೆ, ಸಾಧನಗಳನ್ನು ಮಾಡುವ ಸಂಸ್ಥೆಗಳು ರೂಪುಗೊಂಡಿವೆ. ಯಂತ್ರಗಳ ಬಳಕೆಯಲ್ಲಿ ಕೃಷಿಕರಿಗೆ ವಿಶ್ವಾಸ ವೃದ್ಧಿಸಿದೆ. ಯಂತ್ರಗಳನ್ನು ಖರೀದಿಸಲು ಧೈರ್ಯ ಬಂದಿದೆ. ಹುಲ್ಲು ಕತ್ತರಿಸುವ ಯಂತ್ರ, ಕೈಗಾಡಿ, ಸಿಂಪಡಣಾ ಯಂತ್ರಗಳ ಬಳಕೆ ವ್ಯಾಪಕವಾಗಿದೆ. ಅಲ್ಲಿಲ್ಲಿ ಅಡಿಕೆ ಸುಲಿ, ಹುಲ್ಲು ಕತ್ತರಿಸುವ ಜಾಬ್ವರ್ಕ್ ತಂಡಗಳು ರೂಪೀಕರಣಗೊಂಡಿದೆ. ತಮ್ಮ ಆವಶ್ಯಕತೆಗೆ ಬೇಕಾಗುವಂತಹ ಯಂತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮೇಳವು ಉತ್ತಮ ಅವಕಾಶವನ್ನು ನೀಡಿದೆ.
ನಾಲ್ಕನೇ ಮೇಳವು 2019 ಫೆಬ್ರವರಿ 23 ರಿಂದ 25ರ ತನಕ ಪುತ್ತೂರು ನೆಹರೂ ನಗರದ ವಿವೇಕಾನಂದ ವಿದ್ಯಾಸಂಸ್ಥೆಗಳ ಪ್ರಧಾನ ಕ್ರೀಡಾಂಗಣದಲ್ಲಿ ಸಂಪನ್ನವಾಗಲಿದೆ. ಮಂಗಳೂರಿನ ಕ್ಯಾಂಪ್ಕೋ ಲಿ., ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಮತ್ತು ಮಂಗಳೂರಿನ ಕೆ.ಎಂ.ಎಫ್. ಸಹಭಾಗಿತ್ವದಲ್ಲಿ ಕೃಷಿ ಯಂತ್ರ ಮೇಳವನ್ನು ಆಯೋಜಿಸುತ್ತಿದೆ.
ಕೃಷಿ ತಾಂತ್ರಿಕತೆ, ನಗರದಿಂದ ಮರಳಿ ಮಣ್ಣಿಗೆ, ವರುಷಪೂರ್ತಿ ತರಕಾರಿ, ಮೌಲ್ಯವರ್ಧನೆ, ಗುಣಮಟ್ಟದ ಕಟ್ಟಡ ನಿರ್ಮಾಣ, ವಾಸ್ತು.. ಹೀಗೆ ಅನ್ಯಾನ್ಯ ಕ್ಷೇತ್ರದ ವಿಚಾರಗಳ ಮಾತುಕತೆಗಳು ನಡೆಯಲಿವೆ ಮುಖ್ಯವಾಗಿ ‘ಕನಸಿನ ಮನೆ’ ಎನ್ನುವ ನೂತನ ಪರಿಕಲ್ಪನೆಯನ್ನು ಅಳವಡಿದೆ. ಮೂರು ಮೇಳಗಳ ಯಶದ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ, ಅಧ್ಯಾಪಕರ ವೃಂದ, ವಿದ್ಯಾರ್ಥಿ ಸಮೂಹವು ನಾಲ್ಕನೇ ಮೇಳವನ್ನು ಯಶಗೊಳಿಸಲು ಸಜ್ಜಾಗಿ ನಿಂತಿದ್ದಾರೆ. (ಚಿತ್ರ : ಸಾಂದರ್ಭಿಕ ಕಡತ ಚಿತ್ರ)
ಊರು ಸೂರು / 17-2-2018
0 comments:
Post a Comment