ಮಂಗಳೂರಿನ ದಿನೇಶ ಹೊಳ್ಳರು ಮೊನ್ನೆ ವಿಶ್ವ ಜಲ ದಿನದಂದು ಸಂದೇಶ ಕಳುಹಿಸಿದರು - ‘ವಿಶ್ವ ಜಲ ದಿನ.. ಇರಲಿ ಹೀಗೆ ಪ್ರತಿದಿನ’ - ತುಂಬಾ ಅರ್ಥಪೂರ್ಣ ಸಾಲುಗಳು.
ಅಲ್ಲಿಲ್ಲಿ ಕೆಲವೆಡೆ ಜಲ ದಿನದಂದು ನೀರಿನ ಅರಿವಿನ ಕಾರ್ಯಕ್ರಮಗಳಾಗಿವೆ. ವರದಿಗಳು ಬಂದಿವೆ. ಇನ್ನು ಮುಂದಿನ ವರುಷ! ವನಮಹೋತ್ಸವದಂತೆ..! ಹೊಳ್ಳರ ಸಂದೇಶದಂತೆ ಅದು ಒಂದು ದಿನದ ಸಂಭ್ರಮವಲ್ಲ. ದಿನ ದಿನ ಸಂಭ್ರಮಿಸಲ್ಪಡಬೇಕು.
ನೆಲ, ಜಲವನ್ನು ಪ್ರೀತಿಸದೆ ಎಲ್ಲಿಯ ಸಂಭ್ರಮ? ಸುಡು ಬಿಸಿಲಿಗೆ ಇದ್ದ ನೀರಿನ ತೇವವೂ ಆರುವ ದಿನಮಾನದಲ್ಲಿದ್ದೇವೆ. ಒಂದೊಂದು ಚಮಚ ನೀರು ಕೂಡಾ ಅಮೃತಕ್ಕೆ ಸಮಾನ. ನೀರೇ ಇಲ್ಲದಿದ್ದರೆ ಬದುಕಿನ ಸ್ಥಿತಿ.. ಊಹಿಸಿ. ಎರಡು ದಶಕಗಳಿಂದ ನೀರಿನ ಮಾತುಕತೆಗಳು ದೇಶಾದ್ಯಂತ ನಡೆಯುತ್ತಿವೆ. ಇಂತಹ ಮಾತುಕತೆಗಳಿಗೆ ಆಸಕ್ತರಾಗಿ ಮತ್ತೆ ಮರೆತುಬಿಡುವುದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ. ದುರಂತಕ್ಕೆ ಹಾದಿ.
ನಮ್ಮ ಹಿರಿಯರಿಂದ ನೆಲ, ಜಲದಂತಹ ಸಂಪನ್ಮೂಲಗಳು ಹರಿದು ಬಂದಿವೆ. ನಮ್ಮ ಕೈಗೆ ಬಂದಾಗ ಉತ್ತಮ ಸಂಪನ್ಮೂಲಗಳಿದ್ದುವು. ಇದನ್ನು ಮುಂದಿನ ತಲೆಮಾರಿಗೆ ದಾಟಿಸುವಾಗ ಸಂಪನ್ಮೂಲಗಳು ವೈಭವ ಕಳೆದುಕೊಂಡಿರುತ್ತವೆ. ನಮ್ಮ ಕಾಲಮಾನದಲ್ಲಿ ಅದನ್ನು ಸಂರಕ್ಷಿಸುವ ಕನಿಷ್ಠ ಜವಾಬ್ದಾರಿಯನ್ನಾದರೂ ನಾವು ಹೊರಬೇಕಾಗಿತ್ತು.
ನೆಲ ಹರಿದು ಹಂಚಾಗುತ್ತಿದೆ. ಜಲ ಪಾತಾಳಕ್ಕೆ ಇಳಿದಿದೆ. ಕೊರೆಯಂತ್ರಗಳಿಗೆ ಬಿಡುವಿಲ್ಲ. ಸಾವಿರಗಟ್ಟಲೆ ಅಡಿಗೆ ಯಂತ್ರದ ಹಲ್ಲುಗಳು ಇಳಿದರೂ ಚಮಚಗಟ್ಟಲೆ ನೀರು ಸಿಗುತ್ತಿದೆ ಎಂದಾದರೆ ನೀರು ಎಲ್ಲಿ ಮಾಯವಾಯಿತು. ನೈಸರ್ಗಿಕವಾಗಿ ಭೂಮಿಗಿಳಿಯಬೇಕಾದ ನೀರಿನ ಕಣ್ಣುಗಳು ನಮ್ಮ ಸ್ವಾರ್ಥಕ್ಕೆ ಬಲಿಯಾಗಿವೆ. ಜಲಮರುಪೂರಣದಂತಹ ವ್ಯವಸ್ಥೆಗಳು ‘ಜಲದಿನ’ದಂದು ಮಾತ್ರವಲ್ಲ, ವರುಷಪೂರ್ತಿ ನಡೆಯುವಂತಾದರೆ ಮುಂದಿನ ದಿನಗಳಲ್ಲಿ ಕುಡಿನೀರಿಗೆ ಬೇಡುವ ಸ್ಥಿತಿ ಬಾರದು.
ರಾಜಸ್ಥಾನದ ಲಾಪೋಡಿಯಾದಲ್ಲಿ ಲಕ್ಷ್ಮಣ ಸಿಂಗ್ ಎನ್ನುವ ಪುಣ್ಯಾತ್ಮ ಕಟ್ಟಿಕೊಟ್ಟ ನೀರಿನ ಅರಿವಿನಿಂದ ಈಗದು ನೀರಿನ ಊರಾಗಿರುವುದು ಇತಿಹಾಸ. ಮೂವತ್ತೊಂದು ಕೆರೆಗಳನ್ನು ಪರಸ್ಪರ ಜೋಡಿಸಿದ್ದಾರೆ. ಒಂದೂರಿನಲ್ಲಿ ಹೊರ ಹರಿಯುವ ನೀರು ನೆರೆ ಊರಿನವರಿಗೆ ಪ್ರಯೋಜನಕಾರಿ. ಪಾದಯಾತ್ರೆ ಮೂಲಕ ಮರಗಳಿಗೆ ರಾಖಿ ಕಟ್ಟುವ, ಗಿಡ ನೆಡುವ, ಕೆರೆಗೆ ಪೂಜೆ ಸಲ್ಲಿಸುವ ಅಪರೂಪದ ಆಚರಣೆಯು ಜಲಸಂರಕ್ಷಣೆಯ ಶಕ್ತಿ. ಈ ಸಂದರ್ಭದಲ್ಲಿ ಅಗತ್ಯಬಿದ್ದರೆ ಕೆರೆಗಳ ರಿಪೇರಿ, ಹೂಳೆತ್ತುವ ಕಾರ್ಯವೂ ನಡೆಯುತ್ತದೆ. ಇದು ನೆಲ, ಜಲ, ಮರ, ಹಕ್ಕಿ, ಪ್ರಾಣಿಗಳ ಕುರಿತು ಅರಿವನ್ನು ಮತ್ತು ಕಳಕಳಿಯನ್ನು ಎಳೆಯರಲ್ಲಿ ಮೂಡಿಸುವ ಟೂಲ್ಸ್.
ಲಾಪೋಡಿಯಾದಲ್ಲಿ ಮರಗಳನ್ನು ಕಡಿಯುವುದು ಅಪರಾಧ! ಯಾರಾದರೂ ಕಡಿದರೆ ಕಠಿಣ ಶಿಕ್ಷೆ! ಒಂದು ಕಡಿದುದಕ್ಕೆ ಎರಡು ಗಿಡ ನೆಟ್ಟು ಸಾಕುವ ಶಿಕ್ಷೆ! ಹಕ್ಕಿಗಳತ್ತ ಯಾರೂ ಕಲ್ಲು ಎಸೆಯಬಾರದು. ಎಸೆದುದು ಗೊತ್ತಾದರೆ ಐನೂರು ರೂಪಾಯಿ ದಂಡ! ಹಕ್ಕಿಗಳಿಗಾಗಿ ಅಲ್ಲಲ್ಲಿ ‘ಧಾನ್ಯ ಬ್ಯಾಂಕ್’ ಸ್ಥಾಪಿಸಿದ್ದಾರೆ. ಜಾನುವಾರು, ಹಕ್ಕಿಗಳಿಗೆ ಸುಲಭದಲ್ಲಿ ನೀರು ಸಿಗುವ ವ್ಯವಸ್ಥೆಗಳಿವೆ.
ಒಮ್ಮೆ ಇನ್ನೂರ ಎಂಭತ್ತೊಂಭತ್ತು ಮಿ.ಮೀ. ಮಳೆ ಬಂದಿತ್ತು. ಕೆರೆಗಳು ತುಂಬಲೇ ಇಲ್ಲ. ಅಂತಹ ಸಂದರ್ಭದಲ್ಲಿ ಲಾಪೋಡಿಯಾದ ರೈತರು ತಮ್ಮ ಹೊಲದ ಅರ್ಧ ಭಾಗದಲ್ಲಿ ಮಾತ್ರ ಬೇಸಾಯ ಮಾಡಿದ್ದರು!
ಲಕ್ಷ್ಮಣ ಸಿಂಗ್ ಒಂದೆಡೆ ಹೇಳುತ್ತಾರೆ, “ಬೇರೆ ಊರುಗಳಿಗೆ ಹೋಗಿ ನೋಡಿದಾಗ ಅಲ್ಲಿ ಒಳ್ಳೊಳ್ಳೆಯ ಕೆರೆಗಳಿದ್ದುವು; ಕೃಷಿಯೂ ಚೆನ್ನಾಗಿ ನಡೆಯುತ್ತಿತ್ತು. ಅನುಪಮ್ ಮಿಶ್ರಾ ಅವರಂತಹ ಜಲ ದಾರ್ಶನಿಕರ ಸಂಪರ್ಕ ಸಿಕ್ಕಿತು. ಅವರ ಸ್ಲೈಡ್ಗಳನ್ನು ನೋಡಿದೆ, ಬಾಡ್ಮೆರ್, ಜೈಪುರ ಮತ್ತಿತರ ಸ್ಥಳಗಳಿಗೆ ಹೋಗಿ ನೀರಿನ ವ್ಯವಸ್ಥೆ ನೋಡಿದೆ. ಈ ಜ್ಞಾನದಿಂದ ನಮ್ಮ ಸೋಲಿನ ಮೂಲ ಎಲ್ಲಿದೆ ಎನ್ನುವುದು ಸ್ಪಷ್ಟವಾಯಿತು.”
ಲಾಪೋಡಿಯಾದ ಅಭಿವೃದ್ಧಿಯ ಗಾಥೆಗೆ ಕನ್ನಡಿ ಹಿಡಿದವರು ಹಿರಿಯ ಪತ್ರಕರ್ತ ಶ್ರೀ ಪಡ್ರೆ. ಅವರೆನ್ನುತ್ತಾರೆ, “ತನ್ನ ಊರಿಗೆ ಏನು ಬೇಕು, ಏನು ಬೇಡ ಎಂಬ ಸ್ಪಷ್ಟ ದರ್ಶನ ಲಕ್ಷ್ಮಣ್ ಸಿಂಗ್ ಅವರಲ್ಲಿತ್ತು. ಇಲಾಖೆ ಶಿಫಾರಸು ಮಾಡುವ ಪಠ್ಯ ಪುಸ್ತಕದ ನೆಲಜಲ ಸಂರಕ್ಷಣಾ ಕ್ರಮ ತಮ್ಮಲ್ಲಿಗೆ ಹೊಂದುವುದಿಲ್ಲ ಎಂದು ಹೊಸತೊಂದನ್ನು ಅಭಿವೃದ್ಧಿ ಪಡಿಸಿದಂತಹ ಜಾಣ್ಮೆ ಬಹುಶಃ ದೇಶದಲ್ಲೇ ಏಕೈಕ.”
ಲಕ್ಷ್ಮಣ ಸಿಂಗ್ ಲಾಪೋಡಿಯಾಕ್ಕೆ ಸೂಕ್ತವಾಗುವ ‘ಚೌಕ ವಿಧಾನ’ ಎಂದೇ ಜನಪ್ರಿಯವಾಗಿರುವ ನೆಲಜಲ ಸಂರಕ್ಷಣೆಯ ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿನ ವಾರ್ಷಿಕ ಸರಾಸರಿ ಮಳೆ ಸುಮಾರು 330 ಮಿ.ಮೀ. ಇನ್ನೂರು ಕುಟುಂಬಗಳು. ಆಜೂಬಾಜು ಎರಡೂಕಾಲು ಸಾವಿರ ಜನಸಂಖ್ಯೆ. ನಾಲ್ಕು ದಶಕದ ಹಿಂದೆ ಆದ ಜಲಸಂರಕ್ಷಣೆಯ ಕಾಯಕವು ಬರಕ್ಕೊಂದು ಸವಾಲು. ಸೌಲಭ್ಯವಂಚಿತ ಊರಿಗೆ ದನಿಯಾಗಿ, ಹಸಿರ ಚಾದರದ ಸಮೃದ್ಧಿಗೆ ಕಾರಣರಾದ ಲಕ್ಷ್ಮಣ ಸಿಂಗ್ ಅವರ ಕನಸು ನನಸಾಗಿದೆ. ಲಾಪೋಡಿಯಾದಂತಹ ಹಳ್ಳಿಯ ಜಲಸಂರಕ್ಷಣೆಯ ಮಾದರಿಯು ದೇಶ ಅಲ್ಲ, ವಿದೇಶದಲ್ಲೂ ಸುದ್ದಿ.
ಊರು ಸೂರು / 24-3-2019
0 comments:
Post a Comment