ಮೂರುವರೆ ದಶಕದ ಹಿಂದಿನ ಕರಾವಳಿಯ ಒಂದು ಚಿತ್ರದತ್ತ ಮಗ್ಗುಲು ಬದಲಿಸೋಣ. 1983ರ ಕಡು ಸುಡು ಬೇಸಿಗೆ. ತಡವಾಗಿ ಆರಂಭವಾದ ಮಳೆಗಾಲ. ಪಶ್ಚಿಮ ಕರಾವಳಿಗೆ ದೊಡ್ಡ ಹೊಡೆತ. ಬಾವಿಗಳೆಲ್ಲಾ ಒಣಗಿದ್ದುವು. ಕುಡಿಯುವ ನೀರಿಗೆ ಹಾಹಾಕಾರ. ತೋಟಗಳೆಲ್ಲಾ ಉಸಿರೆಳೆದುಕೊಳ್ಳುತ್ತಿದ್ದುವು. ಇಷ್ಟೊಂದು ಕೊಳವೆಬಾವಿಗಳ ಭರಾಟೆ ಎದ್ದಿರಲಿಲ್ಲ. ಮಣ್ಣುಮಾಂದಿ ಯಂತ್ರದ (ಜೆಸಿಬಿ) ಹಾರಾಟವಿದ್ದಿರಲಿಲ್ಲ. ಅಂತರ್ಜಲದ ಮಟ್ಟ ಸ್ವಲ್ಪ ಕುಸಿದಿತ್ತೇ ವಿನಾ ಪಾತಾಳಕ್ಕೆ ಸೇರಿರಲಿಲ್ಲ. ಜನರಲ್ಲಿ ನೆಲ, ನೀರಿನ ಕುರಿತು ಕನಿಷ್ಠ ಅರಿವಿದ್ದು ಬರವನ್ನು ನಿಭಾಯಿಸಿದ್ದರು. ಜವಾಬ್ದಾರಿಗಳ ಎಚ್ಚರವಿತ್ತು.
ಎರಡು ವರುಷದ ಹಿಂದಿನ ಚಿತ್ರದ ಹೊರಳು ನೋಟವನ್ನು ನೋಡೋಣ. ಆಗಿನ ಬರಕ್ಕಿಂತ ಭೀಕರವಾಗಿ ಕರಾವಳಿ ತತ್ತರಿಸಿತ್ತು. ಕುಡಿನೀರಿಗೂ ಆತಂಕವಿತ್ತು. ಕರಾವಳಿಯನ್ನು ಮಾತ್ರ ಯಾಕೆ ಉಲ್ಲೇಖಿಸುತ್ತೇನೆಂದರೆ, ಇಲ್ಲಿ ‘ನೀರಿನ ಬರ’ದ ಕಲ್ಪನೆಯೇ ಇಲ್ಲ! ನೀರಿಂಗಿಸುವ, ಜಲಮರುಪೂರಣ, ಮಳೆಕೊಯ್ಲು.. ವಿಚಾರಗಳನ್ನು ಮಾತನಾಡಿದಾಗ ಗೇಲಿ ಮಾಡುತ್ತಾ ಹಣೆಯ ನೆರಿಗೆಗಳನ್ನು ತೋರಿದವರೆಷ್ಟೋ! ‘ಕರಾವಳಿಯಲ್ಲೂ ನೀರಿಂಗಿಸುವ ವ್ಯವಸ್ಥೆ ಬೇಕಾ’ಎಂದು ಕಟುಶಬ್ದಗಳಲ್ಲಿ ದನಿಯೇರಿಸಿದವರ ನೆನಪಿದೆ.
ವರುಷದ ಹಿಂದೆ ಕೊಳವೆ ಬಾವಿಗಳ ವಿಫಲ ಕತೆಗಳಿಗೆ ಕಿವಿಯಾಗಿದ್ದೇವೆ. ನೀರಿನ ಅವಶ್ಯ ಹೆಚ್ಚಾಗುತ್ತಿದೆ. ಬದುಕು ಒತ್ತಡವಾಗಿದೆ. ಬಹುಶಃ ರಾಜಸ್ಥಾನದಲ್ಲೂ ಇಷ್ಟೊಂದು ಟೆನ್ಶನ್ ಇರಲಾರದೇನೋ. ಯಾಕೆ ಹೇಳಿ? ನೀರಿನ ಬವಣೆಯನ್ನು ಅನುಭವಿಸಿದ ಕಾರಣ ಅಲ್ಲಿ ನೀರನ್ನು ತುಪ್ಪದಂತೆ ಬಳಸುತ್ತಾರೆ! ನಮಗೀಗ ತೀರ್ಥದಂತೆ ಬಳಸುವ ದಿನಗಳು ಬಂದಿವೆ. ಮೊದಲು ಹಿರಿಯರು ಮಾಡಿಟ್ಟ ಪರಿಸರ ವ್ಯವಸ್ಥೆಗಳು ಚೆನ್ನಾಗಿದ್ದ ಸಮಯದಲ್ಲಿ ಬರ ಎನ್ನುವ ಶಬ್ದವೇ ಕೇಳಿದ್ದಿಲ್ಲ. ಸರಿ, ಇಷ್ಟೆಲ್ಲಾ ಕಷ್ಟ ಯಾಕೆ ಬಂತು? ಭೂ ಒಡಲಿಂದ ನೀರನ್ನು ಮೊಗೆದು ಸ್ವೇಚ್ಛೆಯಿಂದ ಬಳಸಿದೆವು. ವ್ಯವಸ್ಥಿತವಾಗಿ ಕಾಡು ನಾಶ ಮಾಡಿದೆವು, ಮಾಡಿಸಿದೆವು, ಕಿಸೆ ತುಂಬಿಸಿಕೊಂಡೆವು. ಎಲ್ಲೆಲ್ಲಾ ಪ್ರಕೃತಿಯೇ ನೀರನ್ನಿಳಿಸಿಕೊಳ್ಳುತ್ತದೋ ಅಲ್ಲೆಲ್ಲ ಅಗೆ ಯಂತ್ರಗಳು ನುಗ್ಗಿ ನೀರಿನ ಮನೆಯನ್ನು ಧ್ವಂಸ ಮಾಡಿದಾಗ ಸೋಂಟಕ್ಕೆ ಕೈಯಿಟ್ಟು ನಕ್ಕೆವು, ಇತರರನ್ನು ನಗಿಸಿದೆವು.
ಇಷ್ಟೆಲ್ಲಾ ಋಣಾತ್ಮಕವಾಗಿ ಮಾತನಾಡುತ್ತಿದ್ದಾಗ, ಬರದ ನಡುವೆಯೂ ಬರವನ್ನು ಆಹ್ವಾನಿಸದ ಮಂದಿ ಎಷ್ಟಿಲ್ಲ? ಭೂಮಿಗೆ ನೀರನ್ನು ಕುಡಿಸಿ ಬದುಕಿನಲ್ಲಿ ನಗುವವರತ್ತ ಚಿತ್ತ ಹರಿಸಬೇಕಾಗಿದೆ. ಏನಿಲ್ಲವೆಂದರೂ ಒಂದೊಂದು ತಾಲೂಕಿನಲ್ಲಿ ನಾಲ್ಕೈದು ಮಂದಿಯಾದರೂ ಜಲಮರುಪೂರಣ ಮಾಡಿಕೊಂಡು ನೆಮ್ಮದಿಯಾಗಿದ್ದವರು ಇದ್ದಾರೆ. ಅವರೆಂದೂ ಸದ್ದು ಮಾಡುವುದಿಲ್ಲ. ಇಂತಹ ಯಶೋಗಾಥೆಗಳಿಗೆ ಬೆಳಕು ಹಾಕುವ, ಅವರೊಂದಿಗೆ ಮಾತುಕತೆ ಮಾಡುವ, ಮಾದರಿಗಳ ಪರಿಣಾಮಗಳತ್ತ ನೋಡುವ ಮನಃಸ್ಥಿತಿ ನಿರ್ಮಾಣವಾಗಬೇಕು.
ಪಂಚಾಯತ್ಗಳು, ಯುವಕ ಸಂಘಗಳು, ಹಳೆವಿದ್ಯಾರ್ಥಿ ಸಂಘ, ಭಜನಾ ಸಂಘ, ಕಲಾ ಸಂಘಗಳು ಭೂಒಡಲಿಗೆ ನೀರಿಂಗಿಸುವ ಪ್ರಕ್ರಿಯೆಯನ್ನು ಮುಖ್ಯ ಅಜೆಂಡಾವಾಗಿ ಇಟ್ಟುಕೊಳ್ಳಬೇಕು. ‘ನನ್ನ ಭೂಮಿಗೆ ನೀರು ಇಂಗಿಸಿದರೆ ನನಗೆ ಪ್ರಯೋಜನವಾದೀತೇ?’ ಇಂತಹ ಪ್ರಶ್ನೆಗಳನ್ನು ಸಾಕಷ್ಟು ಬಾರಿ ಕೇಳಿದ್ದೇನೆ. ಇಲ್ಲಿ ‘ನಾನು’ಎನ್ನುವುದರ ಬದಲು ‘ನಾವು’ಎಂದಾದರೆ ನೀರಿನ ಬರವನ್ನು ಓಡಿಸಬಹುದು. ಸಾಮೂಹಿಕ ಜನಜಾಗೃತಿಯಾಗಬೇಕು.
ಗುಡ್ಡದ ನೀರು ಹರಿದುಹೋಗದೆ ಅಲ್ಲಲ್ಲೇ ಇಂಗುವಂತಾದರೆ ಅದರ ಸುತ್ತುಮುತ್ತಲಿನ ಕೆಳ ಪ್ರದೇಶಗಳಲ್ಲಿ ಸಹಜವಾಗಿ ಅಂತರ್ಜಲ, ನೀರಿನ ಒರತೆ ವೃದ್ಧಿಯಾಗುತ್ತದೆ. ಗುಡ್ಡದಲ್ಲಿ ಬಿದ್ದ ನೀರನ್ನು ಹರಿದುಹೋಗದಂತೆ ಮಾಡುವುದು ಮೊದಲಾದ್ಯತೆಯ ಕೆಲಸವಾಗಬೇಕು. ಮೊದಲು ಪ್ರಕೃತಿಯೇ ಈ ಕೆಲಸ ಮಾಡುತ್ತಿತ್ತು. ಗುಡ್ಡದಲ್ಲಿ ನೀರು ಇಂಗದೆ ಆಚೀಚಿಗೆನ ತೋಡು, ನದಿಗಳು ಹೇಗೆ ಹರಿದಾವು? ನದಿಯಲ್ಲಿ ಬೇಸಿಗೆಯಲ್ಲೂ ನೀರಿದೆ ಎಂದಾದರೆ ಅಂತರ್ಜಲ, ಒರತೆಯಿದೆ ಎಂದರ್ಥ. ಗುಡ್ಡದ ನೆತ್ತಿಯಲ್ಲಿ ನೀರಿಂಗಿದರೆ ಅದುವೇ ಕೆಳಗಿನವರಿಗೆ ನೀರಿನ ಸೆಲೆ. ಈ ಸೆಲೆಯನ್ನು ಕೊಳವೆ ಬಾವಿ ಕೊರೆದು ಮುಚ್ಚಿದ್ದೇವೆ. ಮದಕ, ಕಟ್ಟ ಮೊದಲಾದ ಪರಂಪರಿಕ ಜಲ ಸಂರಕ್ಷಣ ವಿಧಾನಗಳಿಗೆ ಮರುಜನ್ಮ ನೀಡಲೇಬೇಕು.
ಮಾಡುವವರಾರು? ನೀರಿಂಗಿಸಿ ಯಶಕಂಡ ಮಾದರಿಗಳು ಎಲ್ಲೆಲ್ಲಿ ಇವೆಯೋ ಅಲ್ಲಿಗೆ ಭೇಟಿ ನೀಡೋಣ. ನಮ್ಮ ನೆಲದಲ್ಲೂ ಅನುಷ್ಠಾನಿಸೋಣ. ಮುಂದೆ ಬರುವ ಮಳೆಯ ನೀರನ್ನು ಹರಿಯಕೊಡದೆ ಭೂಮಿಯಲ್ಲಿ ಇಂಗಿಸುವ ಪ್ರತಿಜ್ಞೆ ಮಾಡೋಣ. ನೀರಿನ ಯೋಧರನ್ನು ಸಿದ್ಧಗೊಳಿಸುವ ಕೆಲಸ ಮಾಡೋಣ. ನೀರಿನ ಬರವನ್ನು ಮುಂದಿನ ವರುಷ ಬಾರದಂತೆ ತಡೆಯೋಣ. ಇದಕ್ಕೆಲ್ಲಾ ವಿಧಾನಸೌಧದತ್ತ ದೀನನೋಟ ಬೀರಬೇಕಾದ್ದಿಲ್ಲ! ಹಕ್ಕುಗಳ ಬಗ್ಗೆ ಬೊಬ್ಬಿಡುತ್ತೇವೆ. ‘ಜವಾಬ್ದಾರಿ’ಗಳಿಗೆ ಯಾಕೆ ಜಾಣ ಕುರುಡು?
ಊರು ಸೂರು
/ 6-1-2019
0 comments:
Post a Comment