Thursday, December 30, 2010

ಮಾತೃಭೂಮಿ, ಮಧುರಾಜ್ ಮತ್ತು ಜೀವನಾಶಿನಿ

















- ಶ್ರೀ ಪಡ್ರೆ
ಚಿತ್ರ ಸೌಜನ್ಯ : ಮಧುರಾಜ್/ಮಾತೃಭೂಮಿ

ಒಂಭತ್ತು ವರ್ಷ ಹಿಂದಿನ ಆ ದಿನ ಈಗಲೂ ಚೆನ್ನಾಗಿ ನೆನಪಿದೆ. ನಾನು, ಮಾತೃಭೂಮಿ ವರದಿಗಾರ ವೇಣುಗೋಪಾಲ್ ಮತ್ತು ಛಾಯಾಗ್ರಾಹಕ ಮಧುರಾಜ್ ಮುಳಿಯಾರಿನ ಆ ಬಡಪಾಯಿಯ ಮನೆ ಹೊಕ್ಕಿದ್ದೆವು. ಎದುರುಗಡೆ ಚಾಪೆಯಲ್ಲಿ ತಲೆ ಊದಿರುವ ಪುಟ್ಟ ಮಗು ಸೈನಬಾ. ಯಾರ ಕರುಳನ್ನೂ ಹಿಂಡುವ ದೃಶ್ಯ. ನಾವಿಬ್ಬರೂ ಜತೆಯಲ್ಲೇ ಕ್ಲಿಕ್ಕಿಸಿದೆವು.

ಮರುದಿನದಿಂದ ಮಾತೃಭೂಮಿ ಮುಖಪುಟದಲ್ಲಿ ಎಂಡೋಸಲ್ಫಾನ್ ದುರಂತದ ಲೇಖನಸರಣಿ ಆರಂಭಿಸಿದ್ದು ಇದೇ ಚಿತ್ರಕತೆಯಿಂದ. ಕೋಝಿಕ್ಕೋಡಿನ ಬೇಬಿ ಆಸ್ಪತ್ರೆ ಉಚಿತವಾಗಿ ಮಗುವಿನ ಶಸ್ತ್ರಚಿಕಿತ್ಸೆ ಮಾಡಲು ಮುಂದೆಬಂತು. ಅದನ್ನು ಮಾಡಿದ್ದೂ ಆಯಿತು. ಶಸ್ತ್ರಚಿಕಿತ್ಸೆ ಫಲಕಾರಿಯಾದರೂ ಸೈನಬಾ ವಾರಗಳೊಳಗೆ ಪರಲೋಕ ಪಯಣಿಸಿದಳು.

ವಾಣಿನಗರದ ಶ್ರುತಿ ಮತ್ತು ಮುಳಿಯಾರಿನ ಸೈನಬಾರ ಚಿತ್ರ ಎಷ್ಟೊಂದು ಮಾಧ್ಯಮಗಳಲ್ಲಿ ಬೆಳಕು ಕಂಡಿತೆಂದರೆ ಇಂದು ಈ ದುರಂತ ಎಂದಾಕ್ಷಣ ಲಕ್ಷಾಂತರ ಮಂದಿಗೆ ನೆನಪಾಗುವುದು ಈ ಬಾಲೆಯರ ಚಿತ್ರಗಳನ್ನು. ಶ್ರುತಿ ‘ಜೈಪುರ ಕೃತಕ’ಕಾಲಿನೊಂದಿಗೆ ನಡೆದಾಡಿ ಹತ್ತನೆ ಕ್ಲಾಸು ಓದುತ್ತಿದ್ದರೆ, ಸೈನಬಾ ನೆನಪು ಮಾತ್ರ.

ಮಧುರಾಜರ ಮನ ಮಿಡಿಯುವ ಚಿತ್ರಗಳು ಅನಂತರ ಇಡೀ ಕೇರಳ ಪ್ರವಾಸ ಮಾಡಿದುವು. ಐನೂರಕ್ಕೂ ಹೆಚ್ಚು ಎಡೆಗಳಲ್ಲಿ ಈ ಚಿತ್ರಗಳ ಪ್ರದರ್ಶನ ನಡೆಯಿತು! ನಂತರ ಅದೆಷ್ಟೋ ಅಸೈನ್ಮೆಂಟುಗಳಿಗಾಗಿ ದೇಶದುದ್ದಗಲ ಓಡಿದರೂ ಮಧುರಾಜ್ಗೆ ಎಂಡೋ ದುರಂತ ಮರೆಯಲು ಆಗಿಯೇ ಇಲ್ಲ.

ಮಾತೃಭೂಮಿ ಆಯ್ಚಪ್ಪದಿಪ್ಪ್ (ವಾರಪತ್ರಿಕೆ) ಈ ದುರಂತದ ಬಗ್ಗೆ ಹಲವು ಕವರ್ ಸ್ಟೋರಿ ಪ್ರಕಟಿಸಿದೆ. ಆದರೆ ಈ ವಾರದ (ದಶಂಬರ 26) ನೂರು ಪುಟದ ವಿಶೇಷ ಸಂಚಿಕೆ ಈ ದುರಂತದ ಚಿತ್ರ-ವಿವರಗಳಿಗೇ ಮೀಸಲು. 'ಜೀವನಾಶಿನಿ - ನಮಗೆ ಕಾಣಲು ಇಷ್ಟವಿಲ್ಲದ ಚಿತ್ರಗಳು. ಮಧುರಾಜ್ ಸೆರೆಹಿಡಿದ ಭಯಾನಕ ಹತ್ತು ವರ್ಷಗಳು' ಎನ್ನುವುದು ಮುಖಪುಟ ಶೀರ್ಷಿಕೆ.
ಕಾಸರಗೋಡು, ಪಾಲಕ್ಕಾಡ್, ಇಡುಕ್ಕಿ ಜಿಲ್ಲೆಗಳಲ್ಲಿ ಓಡಾಡಿದ ಮಧುರಾಜ್ ಈ ದುರಂತದ ಎಳೆಎಳೆಗಳನ್ನು ಹೃದಯ ತಟ್ಟುವಂತೆ ಚಿತ್ರಿಸಿದ್ದಾರೆ. ಸಂಚಿಕೆಯ ಶಬ್ದಗಳನ್ನೂ ಮೀರಿ ಮಧುರಾಜರ ಚಿತ್ರಗಳು ಸಂವಹಿಸುತ್ತವೆ. ದುರಂತದ ಅಧ್ಯಯನಕ್ಕಾಗಿ ಕಾಸರಗೋಡು ಸಂದರ್ಶಿಸಿದ ಒಂದೂವರೆ ಡಜನ್ ಸಮಿತಿಗಳಲ್ಲಿ ಕೆಲವು ಮಾಡಿದ್ದಕ್ಕಿಂತ ಹೆಚ್ಚಿನ ಸತ್ಯಶೋಧನೆಯನ್ನು ಮಧುರಾಜ್ ಅವರ ಕ್ಯಾಮೆರಾ ಮಾಡಿದೆ.

ಈಗಿನ ಚಿತ್ರಗಳ ಜತೆಗೆ 2001ರಲ್ಲಿ ತೆಗೆದವುಗಳನ್ನೂ ಕೊಟ್ಟಿರುವುದು ಒಟ್ಟಾರೆ ಪರಿಣಾಮ ಹೆಚ್ಚಿಸಿದೆ. ಜೀವನಾಶಿನಿಯ ದೂರಪರಿಣಾಮದ ಕಲ್ಪನೆ ಸಿಗಲು.ಚರ್ಮರೋಗದಿಂದ ಕಂಗೆಟ್ಟ ಮುಳಿಯಾರಿನ ಮತ್ತು ಪಾಲಕ್ಕಾಡುಗಳ ಅನುಕ್ರಮವಾಗಿ ಸುಜಿತ್ ಮತ್ತು ಶಕ್ತಿವೇಲು ಅವರ ಎಳೆ ಚರ್ಮ ಬಿರುಕು ಬಿಟ್ಟ ರೀತಿ ನೋಡಿದರೆ ಸಾಕು
.
ತನ್ನ ಛಾಯಾಗ್ರಾಹಕನ ಪ್ರತಿಭೆ ಮತ್ತು ದೇಶದ ಅತಿ ದೊಡ್ಡ ದುರಂತವೊಂದಕ್ಕೇ ಪೂರ್ತಿ ವಿಶೇಷ ಸಂಚಿಕೆ ಮೀಸಲಿಟ್ಟ ಮಾತೃಭೂಮಿ ವಾರಪತ್ರಿಕೆ ಸಂಪಾದಕರು ಮತ್ತು ಆಡಳಿತ ಅಭಿನಂದನೀಯ. ಮಲೆಯಾಳ ಭಾಷೆಯೋ, ಎಂಡೋ ದುರಂತವೋ ಗೊತ್ತಿಲ್ಲದವರಿಗೂ ಈ ಸಂಚಿಕೆ ಸಂಗ್ರಾಹ್ಯ. ದೇಶದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಂತೂ ದೊಡ್ಡದೊಂದು ಪಾಠ.


Tuesday, December 28, 2010

ವಿಷ ಮಳೆಗೆ ಮುರುಟಿದ ಬದುಕು


'ನಮ್ಮ ಧಾರ್ಮಿಕ ವರಿಷ್ಠರು ನೀನ್ಯಾಕೆ ಪ್ರಾರ್ಥನೆಗೆ ಬರುವುದಿಲ್ಲ ಎಂದು ಒತ್ತಾಯಿಸುತ್ತಾರೆ. ನಡೆಯಲಾಗದ, ಮಾತನಾಡಲಾಗದ ಮಗ ಸಂತೋಷನನ್ನು ಬಿಟ್ಟು ಹೇಗೆ ಹೋಗಲಿ. ನನ್ನ ಪಾಲಿಗೆ ಈಗ ಇವನೇ ದೇವರು' ಎನ್ನುತ್ತಾ ಮಗನ ಆರೈಕೆಯಲ್ಲಿ ತೊಡಗುತ್ತಾರೆ ಗ್ರೇಸಿ ಡಿ'ಸೋಜ.

ಗ್ರೇಸಿಯವರ ಮಗ ಸಂತೋಷ್ ಮಿನೆಜಸ್ ಇಪ್ಪತ್ತರ ಹರೆಯದ ಯುವಕ. ದೃಷ್ಟಿ ಮತ್ತು ಶ್ರವಣ ಶಕ್ತಿ ಚೆನ್ನಾಗಿದೆ. ಬಾಲ್ಯಕ್ಕಂಟಿದ ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯತೆಯಿಂದ ಸಂತೋಷ್ ನಡೆದಾಡುವುದು ಬಿಡಿ, ಎದ್ದು ಕುಳಿತುಕೊಳ್ಳಲೂ ಅಮ್ಮನ ಆಸರೆ ಬೇಕು. ಸಂತೋಷನಿಗೆ ತೆಂಡೂಲ್ಕರ್ ಅಂದರೆ ಇಷ್ಟ. ವಿಷ್ಣುವಿರ್ಧನ್ ಫಿಲಂ ಅಂದರೆ ಖುಷಿ. ಆ ಸಂತೋಷವನ್ನು ಹಂಚಿಕೊಳ್ಳಲು ಅವನಿಂದಾಗುತ್ತಿಲ್ಲ. ಭಾವನೆಗಳನ್ನು ವ್ಯಕ್ತಪಡಿಸಲು ಹೊರಡುವಾಗ, ಪಾಪ ಮುಖದ ಮಾಂಸಪೇಶಿಗಳ ಮೇಲೆ ನಿಯಂತ್ರಣವಿಲ್ಲದ ಕಾರಣ ಆತನ ಮುಖ ಹೇಗೆಹೇಗೋ ಆಗುತ್ತದೆ. ನೋಡುವವರಿಗೆ ಅಯ್ಯೋ ಅನಿಸುತ್ತದೆ.

ಸುಬ್ರಹ್ಮಣ್ಯ ಹದಿನಾರರ ಕಟ್ಟುಮಸ್ತಿನ ಯುವಕ. ಬುದ್ಧಿಮಾಂದ್ಯ. ದಿನವಿಡೀ ಟೇಪ್ನಲ್ಲಿ ಹಾಡು ಕೇಳುತ್ತಾ, ಮಾತನಾಡುತ್ತಾ ಅಮ್ಮ, ತಂಗಿಯನ್ನು ಗೋಳಾಡಿಸುತ್ತಾ ಇರುತ್ತಾನೆ. ತಿಂಗಳ ಔಷಧಿಗೆ ಎರಡು ಸಾವಿರ ರೂಪಾಯಿ ಸಾಕಾಗುವುದಿಲ್ಲ. 'ಆತನ ನರದೋಷದಿಂದಾಗಿ ಹೀಗಾಗಿದ್ದಾನೆ' ಎಂದು ದುಃಖಿಸುತ್ತಾರೆ ತಂದೆ ಗಣೇಶ ರಾವ್.

ಇನ್ನೋರ್ವ ದುರದೃಷ್ಟಶಾಲಿ ಹದಿನಾಲ್ಕರ ಬಾಲಕ ಹರೀಶ್ ಏಳನೇ ತಿಂಗಳ ಶಿಶುವಿದ್ದಾಗ ಬಂದ ಜ್ವರದಿಂದ ಚೇತರಿಸಲೇ ಇಲ್ಲ. ನೋಡುನೋಡುತ್ತಿದ್ದಂತೆ ಕೈಕಾಲುಗಳು ಮುರುಟಿದುವು! ನಡೆದಾಡಲೂ ಕಷ್ಟವಾಗುವ ಸ್ಥಿತಿ. ಏನನ್ನಾದರೂ ಆಧರಿಸಿ ಎದ್ದು ನಿಲ್ಲುವುದೇ ಹರಸಾಹಸ. ನಡೆದಾಡಲು ಆಗುವುದಿಲ್ಲ. ಚಲಿಸಬೇಕಾದರೆ ತೆವಳುವುದೊಂದೇ ದಾರಿ.

ಕಾಣುವಾಗ ಅರುವತ್ತು ವರುಷವಾದವರಂತೆ ಕಾಣುವ ಮುವತ್ತೆಂಟರ ಶಾರದಾ ಕಳೆದ ಹತ್ತು ವರುಷಗಳಿಂದ ಬುದ್ಧಿಮಾಂದ್ಯೆ. ತನ್ನಣ್ಣ ಮೂರು ತಿಂಗಳ ಹಿಂದೆ ಮರಣಿಸಿ ಬಳಿಕ, ನಾದಿನಿ ಪ್ರೇಮಾ ಈಗ ಇವರ ರಕ್ಷಕಿ. ತನ್ನ ಆರು ಮಕ್ಕಳೊಂದಿಗೆ ಇವರನ್ನೂ ಪ್ರತ್ಯೇಕ ನಿಗಾದೊಂದಿಗೆ ಇಡಬೇಕಾದ ದುಃಸ್ಥಿತಿ.

ಮುದುಡಿದ ಕುಸುಮಗಳು

ಇವು ವಿಷಮಳೆಯಿಂದ ಜರ್ಝರಿತವಾದ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳ ಕೆಲವು ಉದಾಹರಣೆ ಮಾತ್ರ. ಇಂತಹ ಮಕ್ಕಳು, ಬುದ್ಧಿಮಾಂದ್ಯತೆಯವರು ಜೀವಚ್ಛವವಾಗಿ ಬದುಕು ಸವೆಸುತ್ತಿದ್ದಾರೆ. ಇಲ್ಲಿರುವ ಮುದುಡಿದ ಕುಸುಮಗಳು ನಾಲ್ಕುನೂರಕ್ಕೂ ಹೆಚ್ಚು. ಈ ಕುಟುಂಬಗಳಲ್ಲಿಂದು ನಗುವಿಲ್ಲ, ನೆಮ್ಮದಿಯಿಲ್ಲ. ಇವರಿಗೆ ಸಾಂತ್ವನ ಹೇಳುವವರಿಲ್ಲ. ಇಲ್ಲಿ ಇರುವುದು ಕರುಳು ಹಿಂಡುವ ದೃಶ್ಯ ಮತ್ತು ಭೂತಾಕಾರದ ಪ್ರಶ್ನಾ ಚಿಹ್ನೆ ಮಾತ್ರ.

ಹಾಸಿಗೆ ಹಿಡಿದ ರೋಗಿಯ ಆರೈಕೆಗೆ ಒಬ್ಬರಾದರೂ ಬೇಕೇ ಬೇಕು ಅಂದ ಮೇಲೆ ಆರೈಕೆಗೆ ನಿಂತವರಿಗೂ ಸಂಪಾದನೆ ಇಲ್ಲ. ನಿಕಟ ಬಂಧುಗಳ ಮದುವೆ ಮತ್ತಿತರ ಸಮಾರಂಭಗಳಿಗೂ ಹೋಗಲು ಆಗದ ಸಂಕಟ. ಮನೆಗೆ ಅತಿಥಿಗಳನ್ನು ಬರಮಾಡಿಕೊಳ್ಳುವುದು ಮುಜುಗರ.

ಮಕ್ಕಳ ಆರೈಕೆಗೆ ಸಿಗುವುದು ಅಮ್ಮ ಮಾತ್ರ. ಇವರ ಸ್ಥಾನದಲ್ಲೊಮ್ಮೆ ನಿಂತು ನೋಡಿ. ಕಾಯಿಲೆ ಗುಣವಾಗುವುದಿಲ್ಲ. ಚೇತರಿಸುವುದಿಲ್ಲ ಎಂದು ಗೊತ್ತಿದ್ದರೂ ಆರೈಕೆ ಮಾಡದಿರಲು ಆಗುತ್ತದೆಯೇ? ಹೆತ್ತ ಕಂದಮ್ಮನ ಕುರಿತಾದ ವಿವಿಧ ಕನಸುಗಳನ್ನು ಕಟ್ಟಿದ ಆ ಅಮ್ಮ, ಕನಸು ಭಗ್ನವಾದಾಗ ಪಡುವ ಸಂಕಟ
ಹೊರಪ್ರಪಂಚಕ್ಕೆ ತಿಳಿಸುತ್ತಾಳೆಯೇ? ಎಷ್ಟೇ ಸಾಂತ್ವನ, ಪರಿಹಾರ, ಕೊಡುಗೆಗಳನ್ನು ಕೊಟ್ಟರೂ ಅವಳಿಗದು 'ಕ್ಷಣಿಕ'ವಷ್ಟೇ.
ಮನೆಯ ಯಜಮಾನ ದಿನವಿಡೀ ದುಡಿದು ಅಷ್ಟಿಷ್ಟು ಸಂಪಾದಿಸಿ ಮನೆಗೆ ಬಂದಾಗ ಮನೆಮಕ್ಕಳ ದಾರುಣ ಸ್ಥಿತಿಯು ಅವನನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ. ಈ ಮನೋವ್ಯಥೆಯನ್ನು ಯಾರಲ್ಲೂ ಹೇಳಿಕೊಳ್ಳುವಂತಿಲ್ಲ, ಹೇಳಿಕೊಂಡರೂ ಪ್ರಯೋಜನವಾಗುವಂತಿಲ್ಲ.

ಶಾಲಾಭ್ಯಾಸವನ್ನು ಮೊಟಕುಗೊಳಿಸಿ ತನ್ನ ಸಹೋದರರ ಆರೈಕೆಗೆ ನಿಲ್ಲುವ ಎಷ್ಟು ಮಕ್ಕಳು ಬೇಕು? ಒಂದು ವೇಳೆ ಶಾಲೆಗೆ ಹೋದರೂ ಸರಿಯಾಗಿ ಅಭ್ಯಾಸ ಮಾಡಲಾಗದೆ, ಹೋಂ ವರ್ಕ್ ಮಾಡಲಾಗದೆ ಒದ್ದಾಡುವ ಎಳೆಯ ಮನಸ್ಸುಗಳು ಅರಳುವುದರ ಬದಲು ಮುರುಟುತ್ತವೆ.

ಇದು ಕರ್ನಾಟಕ ಗೇರು ಅಭಿವೃದ್ಧಿ ನಿಗಮವು (ಕೆಸಿಡಿಸಿ) ಎರಡು ದಶಕಕ್ಕೂ ಹೆಚ್ಚು ಕಾಲ ಇಲ್ಲಿ ಹೆಲಿಕಾಪ್ಟರ್ ಮುಖಾಂತರ ಸುರಿಸಿದ ವಿಷಮಳೆಯ ಅನಂತರದ ಫಲ. ಏನಿದು ವಿಷದ ಮಳೆ? ಗೇರು ಮರದ ಹೂಗಳಿಗೆ 'ಚಹ ಸೊಳ್ಳೆ' ಬರುವುದಿದೆ. ಇದರ ನಿಯಂತ್ರಣಕ್ಕೆ ಎಂಡೋಸಲ್ಫಾನ್ ಅಥವಾ ಅದಕ್ಕೆ ಸಮನಾದ ವಿಷವನ್ನು ವೈಮಾನಿಕವಾಗಿ ಸಿಂಪಡಿಸುತ್ತಾರೆ.

ಇಲ್ಲಿರುವುದು ಎಂಟುನೂರು ಹೆಕ್ಟೇರ್ ಗೇರು ತೋಪು. ಯಾರೋ ತಿನ್ನಬೇಕಾದ ಒಂದಷ್ಟು ಟನ್ ಗೋಡಂಬಿ ಉತ್ಪಾದನೆಗಾಗಿ ಈ ಮೂರು ಗ್ರಾಮಗಳು ತೆತ್ತ ಬೆಲೆ ಅಗಾಧ. ಮನೆಮನೆಗಳಲ್ಲಿ ಬುದ್ಧಿಮಾಂದ್ಯತೆ, ಬಂಜೆತನ, ಚರ್ಮರೋಗ, ಮೂರ್ಛೆ ರೋಗ, ಜನ್ಮತಃ ಅಂಗವೈಕಲ್ಯ, ರೋಗನಿರೋಧಕ ಶಕ್ತಿಹರಣ - ಹೀಗೆ ಒಂದಲ್ಲ ಒಂದಲ್ಲ ಸಮಸ್ಯೆಗಳು.

ಇಲ್ಲಿನ ಗೇರು ತೋಪು ಪ್ರತ್ಯೇಕವಾಗಿ ಒತ್ತಟ್ಟಿಗೆ ಇಲ್ಲ. ನಡುನಡುವೆ ಜನವಸತಿ, ಗದ್ದೆ, ಕೆರೆ, ಬಾವಿ, ತೋಟಗಳಿವೆ. ಇಂಥ ಜಾಗಗಳಲ್ಲಿ ವೈಮಾನಿಕ ಸಿಂಪಡಣೆ ಮಾಡಲೇ ಬಾರದು ಎಂಬ ನಿಯಮವಿದೆ. ಅವೆಲ್ಲಾ ಗಾಳಿಗೆ ತೂರಿ ಹೋಗಿವೆ.
ಇಲ್ಲಿರುವವರು ಬಹುತೇಕ ಬಡವರು. ಆರ್ಥಿಕವಾಗಿ ಹಿಂದುಳಿದವರು. ಕೆಲವೊಂದು ರೋಗವು ಔಷಧವನ್ನು ಅಪೇಕ್ಷಿಸಿದರೆ, ಮಿಕ್ಕಂತೆ ಎಲ್ಲವೂ 'ಅನುಭವಿಸಲೇ' ಬೇಕಾದಂತಹ ಕಾಯಿಲೆಗಳು!

ಹೋರಾಟಕ್ಕೆ ನಾಂದಿ

'ಕಳೆದ ದಶಕದೀಚೆಗೆ ಇಲ್ಲಿ ಹತ್ತಕ್ಕೂ ಮಿಕ್ಕಿ ಆತ್ಮಹತ್ಯೆಗಳಾಗಿವೆ, ಬ್ಲಡ್ ಕ್ಯಾನ್ಸರ್ಗಳು ಪತ್ತೆಯಾಗಿವೆ. ಎಂದರೆ ನಂಬ್ತೀರಾ' ಎನ್ನುತ್ತಾರೆ ಎಂಡೋಸಲ್ಫಾನ್ ನಿಷೇಧ ಹೋರಾಟದ ಮುಂಚೂಣಿಯಲ್ಲಿರುವ ಶ್ರೀಧರ ಗೌಡ. ನೇರವಾಗಿ ಎಂಡೋ ವಿಷಕ್ಕೂ ಆತ್ಮಹತ್ಯೆಗೂ ಸಂಬಂಧವಿಲ್ಲದಿರಬಹುದು. ಆದರೆ ಹಿಂದೆ ಬಡತನದ ಕುರಿತಾದ, ರೋಗದ ಕುರಿತಾದ ಮಾನಸಿಕ ಒತ್ತಡಗಳು ಕೆಲಸ ಮಾಡಿವೆ.

ಇಲ್ಲಿ ಎಂಡೋಸಲ್ಪಾನ್ ವಿರೋಧಿ ಹೋರಾಟಕ್ಕೆ ಹರಿದಾಸ್ ಮರ್ಲಜೆ, ಜೋಸೆಫ್ ಪಿರೇರಾ, ಡಾ.ಮೋಹನ್ದಾಸ್ ಗೌಡ.. ಮೊದಲಾದ ಗಣ್ಯರು ಆರಂಭಕಾಲದಲ್ಲಿ ನೇತೃತ್ವ ಕೊಟ್ಟವರು. ಈಗ ಶ್ರೀಧರ್ ಗೌಡ ಹೋರಾಟದ ಮುಂಚೂಣಿಯಲ್ಲಿದ್ದಾರೆ.

ಕರ್ನಾಟಕದ ಈ ದುರಂತ ಒಂದು ದಶಕಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಮಾಧ್ಯಮಗಳು ಈ ದುರಂತದ ಆಳಕ್ಕೆ ಅನುಗುಣವಾದಂತಹ ವರದಿಗಳನ್ನು ಹೊರತರಲಿಲ್ಲ. ಸುದ್ದಿಗಳು ಪ್ರಕಟವಾದರೂ ಅವೆಲ್ಲಾ ಪ್ರಾದೇಶಿಕ ಪುಟಗಳಲ್ಲೇ ಸ್ಥಾನ ಪಡೆದಿತ್ತು. ಜನಪ್ರತಿನಿಧಿ ಮತ್ತು ಸರಕಾರಗಳು ಗೊತ್ತಿಲ್ಲದಂತೆ ನಟಿಸಿದ್ದೇ ಹೆಚ್ಚು.

ಇತ್ತ ಕೇರಳದಿಂದ ಎಂಡೋಸಲ್ಫಾನ್ ದುರಂತ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದುವು. ಅಲ್ಲಿಯ ಕಾಯಿಲೆ ಲಕ್ಷಣಗಳಂತೆ ಇಲ್ಲೂ ಇರುವ ಕಾರಣ ಇದು ವಿಷದ ಮಳೆಯ ಪರಿಣಾಮ ಎಂದರಿಯಲು ಹೆಚ್ಚು ದಿವಸ ಬೇಕಾಗಲಿಲ್ಲ. ಹೋರಾಟಕ್ಕೆ ಅಣಿಯಾದರು. ಊರಿನ ರಸ್ತೆ, ಸೇತುವೆ ಮೊದಲಾದ ಆವಶ್ಯಕ ಸೌಲಭ್ಯಗಳ ಒತ್ತಾಯಕ್ಕೆ ರೂಪುಗೊಂಡ 'ಸಂಯುಕ್ತ ಸಂಘ ಸಂಸ್ಥೆಗಳು, ಉಪ್ಪಾರಪಳಿಕೆ' - ಸಂಸ್ಥೆಯಿಂದ ಎಂಡೋ ಹೋರಾಟಕ್ಕೆ ನಾಂದಿ.

ಎಂಟುನೂರು ಎಕ್ರೆ ಗೇರು ತೋಪನ್ನು ಅರಣ್ಯ ಇಲಾಖೆಯು ಗೇರು ಅಭಿವೃದ್ಧಿ ನಿಗಮಕ್ಕೆ ದೀರ್ಘಾವಧಿಗೆ ಲೀಸ್ಗೆ ವಹಿಸಿಕೊಟ್ಟಿತ್ತು. ಆರಂಭದಲ್ಲಿ ಇಲಾಖೆ ಸ್ಪಂದಿಸಿದರೂ, ನಂತರದ ದಿವಸಗಳಲ್ಲಿ 'ಅದು ನಮ್ಮದಲ್ಲ, ಅರಣ್ಯದವರನ್ನು ಕೇಳಿ ಎಂದಿತು. ಅವರನ್ನು ಕೇಳಿದಾಗ ನಿಗಮದವರನ್ನು ಕೇಳಿ' ಎನ್ನುತ್ತಾ ಜಾರಿಕೊಂಡುದೇ ಹೆಚ್ಚಂತೆ!

ಡಾ.ಅಬ್ದುಲ್ ಕಲಾಂ ಅವರ ರಾಷ್ಟ್ರಪತಿಗಳಾಗಿದ್ದಾಗ ಕೊಕ್ಕಡದ ಎಂಡೋ ಸ್ಥಿತಿಯನ್ನು ಮನವರಿಕೆ ಮಾಡಲಾಗಿತ್ತು. ಜತೆಗೆ ಹತ್ತು ಸಾವಿರಕ್ಕೂ ಮಿಕ್ಕಿ ಕಾರ್ಡು ಚಳುವಳಿಯೂ ನಡೆದಿತ್ತು. ವಿಷಯದ ಗಾಢತೆಯನ್ನರಿತ ಡಾ.ಕಲಾಂ ಅವರು ಸ್ಪಂದಿಸಿ ಜಿಲ್ಲಾಧಿಕಾರಿಗೆ ಆದೇಶಿಸಿದರು. ಜಿಲ್ಲಾಧಿಕಾರಿಗಳಿಂದ ಫೈಲ್ ತಹಶೀಲ್ದಾರ್ ಟೇಬಲಿಗೆ ಬಂತು. ಆದರೆ ರೋಗಿಗಳ ಸಂಖ್ಯೆ ಗೊತ್ತು ಮಾಡುವ ಸಮೀಕ್ಷೆ ನಡೆದುದು ತೀರಾ ಈಚೆಗೆ. 'ಆಗ ಸ್ಪಷ್ಟವಾಗಿ ಗೊತ್ತಾಯಿತು; ಕೊಕ್ಕಡದಲ್ಲಿ 251, ಪಟ್ರಮೆಯಲ್ಲಿ 103 ಮತ್ತು ನಿಡ್ಲೆಯಲ್ಲಿ 75 ಪೀಡಿತರು ಬಳಲುತ್ತಿರುವ ವಿಚಾರ' ಎನ್ನುತ್ತಾರೆ ಶ್ರೀಧರ್.

ಕಳೆದ ವರುಷ ಇಲ್ಲಿನ ಪರಿಸ್ಥಿತಿಯನ್ನು, ಪೀಡಿತರ ಶೋಚನೀಯ ಬದುಕನ್ನು ಚಿತ್ರೀಕರಿಸಿ ಈಗ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಯವರಿಗೆ ನೀಡಲಾಯಿತು. ಈ ವರುಷದ ಆರಂಭದಲ್ಲಿ ಶೋಭಾ ಅವರು ಈ ದುರಂತದ ಹಿಂದೆ ವೈಯಕ್ತಿಕ ಆಸಕ್ತಿ ವಹಿಸಿ ಕೊಕ್ಕಡಕ್ಕೆ ಬಂದರು, ರೋಗಗ್ರಸ್ತರ ಮನೆಗೆ ಭೇಟಿ ನೀಡಿದರು. ಪರಿಸ್ಥಿತಿಯ ಅವಲೋಕನ ಮಾಡಿದರು. ಸಮಸ್ಯೆಯ ಗಾಢತೆಯನ್ನು ಮನದಟ್ಟು ಮಾಡಿಕೊಂಡರು. ಒಟ್ಟೂ ಪರಿಣಾಮವಾಗಿ 211 ಕುಟುಂಬದ 232 ಪೀಡಿತರಿಗೆ ಐವತ್ತು ಸಾವಿರ ರೂಪಾಯಿಯಂತೆ ಪರಿಹಾರ ಸಿಗ್ತು. ಜತೆಗೆ ಶೇ.70ಕ್ಕೂ ಮಿಕ್ಕಿ ಪೀಡಿತರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿಯಂತೆ ಮಾಸಿಕ ಸಹಕಾರವೂ ಮಂಜೂರಾಯಿತು ಎನ್ನುತ್ತಾರೆ ಶ್ರೀಧರ್
.
ಬೇಕು, ದೀರ್ಘಕಾಲಿಕ ವ್ಯವಸ್ಥೆ

ಪರಿಹಾರದ ಬಳಿಕ ಯಾವೊಬ್ಬ ಮಂತ್ರಿಯಾಗಲೀ, ಅಧಿಕಾರಿಯಾಗಲೀ ಇತ್ತ ಕಡೆ ಸುಳಿದಿಲ್ಲ. ಇದು ಕೇವಲ ತಾತ್ಕಾಲಿಕ ಸಾಂತ್ವನ ಮಾತ್ರ. ಈ ಮಂದಿಯ ದೀರ್ಘಕಾಲೀನ ಪುನರ್ವಸತಿಗೆ ಒಂದು ನೀಲ ನಕಾಶೆ ಆಗಬೇಕು. ಸ್ಥಳದಲ್ಲೇ ಚಿಕಿತ್ಸೆ ಕೊಡಿಸುವ, ಈ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಮತ್ತು ಮಕ್ಕಳಿಗೆ ವಿಶೇಷ ರೀತಿಯ ಶಿಕ್ಷಣ ಕೊಡುವ ಶಾಲೆಗಳು ಈ ಪರಿಸರದಲ್ಲಿ ಆರಂಭ ಆಗಬೇಕಿದೆ.

ಮೊನ್ನೆ ಫೆಬ್ರವರಿಯಲ್ಲಿ ಮುಖ್ಯಮಂತ್ರಿಯವರು ಬಂದು ಒಂದಷ್ಟು ಆರ್ಥಿಕ ಸಹಾಯ ಕೊಟ್ಟ ನಂತರ ಮುಂದಿನ ಪರಿಹಾರ ಕ್ರಮಗಳ ಬಗ್ಗೆ ಏನೂ ನಡೆದಂತಿಲ್ಲ. ಈ ಪ್ರದೇಶದಲ್ಲಿನ ವಿಷಾಂಶವನ್ನು ಕುಗ್ಗಿಸುವ ಡಿ-ಟಾಕ್ಸಿಫಿಕೇಶನ್ ಯತ್ನಗಳು ನಡೆಯಬೇಕು. ತಮ್ಮದಲ್ಲದ ತಪ್ಪಿನಿಂದ ಜೀವನವಿಡೀ ನರಳಬೇಕಾದ ಈ ನತದೃಷ್ಟರಿಗೆ ಕೆಸಿಡಿಸಿ, ರಾಜ್ಯ ಮತ್ತು ಕೇಂದ್ರದ ಕೃಷಿ ಇಲಾಖೆಗಳು ಹಾಗೂ ಎಂಡೋಸಲ್ಫಾನ್ ತಯಾರಕ ಕಂಪೆನಿಗಳು ಸೇರಿ ನಷ್ಟ ಪರಿಹಾರ ಕೊಡಬೇಕಿದೆ.

ಇತ್ತ ನೆರೆಯ ಕೇರಳದಲ್ಲಿ ಹಾಸಿಗೆ ಹಿಡಿದ ಎಂಸೋಸಲ್ಫಾನ್ ಪೀಡಿತರಿಗೆ ಸರಕಾರ ಎರಡು ಸಾವಿರ ರೂಪಾಯಿಗಳ ಮಾಸಿಕ ಸಹಾಯ ಘೋಶಿಸಿದೆ. ಕಿಲೋಗೆ ಎರಡು ರೂಪಾಯಿ ಅಕ್ಕಿ, ಭೂಮಿ ಇಲ್ಲದವರಿಗೆ ಭೂಮಿ, ಮನೆ ಇಲ್ಲದವರಿಗೆ ಮನೆ, ಮೊಬೈಲ್ ಚಿಕಿತ್ಸಾ ವ್ಯಾನ್ ಇತ್ಯಾದಿಗಳನ್ನು ಕೊಡಮಾಡಿದೆ. ಕೇಂದ್ರ ಸಹಾಯದಿಂದ ಇಂತಹವರಿಗಾಗಿಯೇ ವಿಶೇಷ ಪ್ಯಾಕೇಜ್ ಒಂದನ್ನು ರೂಪಿಸಹೊರಟಿದೆ. ಸರಕಾರದ ನೆರವು ತಲಪುವ ಮೊದಲೇ ಸೇವಾಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಮತ್ತು ಸ್ವಾಮೀಜಿ ಮೊದಲಾದವರು ತಮ್ಮ ವತಿಯಿಂದ ಸಹಾಯವನ್ನು ತಲಪಿಸಲು ತೊಡಗಿದ್ದಾರೆ.

ಕೇರಳದ ಮೂಲೆ ಮೂಲೆಗೂ ಈ ದುರಂತದ ಎಳೆಎಳೆಗಳನ್ನು ಸಾರಿ ಹೇಳಿದ ಕೇರಳದ ಮಾಧ್ಯಮಗಳ ಜನಪರ ಕಾಳಜಿಯನ್ನು ಶ್ಲಾಘಿಸಲೇಬೇಕು. ಈ ಮೂರು ನತದೃಷ್ಟ ಗ್ರಾಮಗಳ ಕಂಗೆಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವುದರಲ್ಲಿ ನಾವು ಕನ್ನಾಡ ಮಂದಿ, ಮಾಧ್ಯಮಗಳು ಮತ್ತು ಸರಕಾರ ಪೂರ್ತಿ ಹಿಂದೆ ಬಿದ್ದಿದ್ದೇವೆ ಎಂದು ಹೇಳದೆ ವಿಧಿಯಿಲ್ಲ. ಈ ತಪ್ಪನ್ನು ನಾವೆಲ್ಲರೂ ಸೇರಿ ಇನ್ನಾದರೂ ತಿದ್ದಿಕೊಳ್ಳಬೇಕಿದೆ.

ಎಂಡೋ : ಮಾಧ್ಯಮ ಆಕಳಿಕೆ!



(ಚಿತ್ರಗಳು: ಎಂಡೋ ವಿರುದ್ಧ ಕಾರ್ಯಕರ್ತ ಶ್ರೀ ಪಡ್ರೆಯವರ ಸಂದರ್ಶನಕ್ಕಾಗಿ ಅವರ ಮನೆಗೇ ಮೂರು ಕ್ಯಾಮೆರಾ, ಇಪ್ಪತ್ತು ಮಂದಿ ಸಿಬಂದಿಯ ಜತೆ ಬಂದ ಇಂಡಿಯಾವಿಶನ್ ತಂಡದ ಚಟುವಟಿಕೆಗಳು.)

ಕೇರಳದಾದ್ಯಂತ ಈಗ ಎಂಡೋಸಲ್ಫಾನಿನದೇ ಸುದ್ದಿ. ತಿಂಗಳುಗಳ ಕೇವಲ ಕಾಸರಗೋಡು ಜಿಲ್ಲೆಗೆ ಸೀಮಿತವಾದ ಎಂಡೋ ಹೋರಾಟ ರಾಜ್ಯವಿಡೀ ವ್ಯಾಪಿಸಿ, ಜನರ ಮನ-ಕದವನ್ನು ತಟ್ಟಿರುವುದಕ್ಕೆ ಕಾರಣ - ಮಾಧ್ಯಮ. ಅಚ್ಚು ಮಾಧ್ಯಮಗಳಲ್ಲದೆ, ವಾಹಿನಿಗಳ ಮೂಲಕವೂ ನಿರಂತರ ಎಂಡೋ ಹಾನಿಯ ಜಾಗೃತಿ ಮೂಡಿಸುವಂತಹ ಕೆಲಸ ನಡೆಯುತ್ತಿದೆ.

ಇಂಡಿಯಾವಿಷನ್ ವಾಹಿನಿಯಂತೂ ಎಂಡೋ ದುರಂತದ ತಾಜಾ ಚಿತ್ರ, ಜನರ ಸ್ಪಂದನ, ಸಂದರ್ಶನ, ಎಂಡೋ ವಿಷದ ಬಾಧಕಗಳು, ದುಷ್ಪರಿಣಾಮಗಳನ್ನು ಸತತ ಬಿತ್ತರಿಸುತ್ತಲೇ ಇದೆ. ಈ ವಾಹಿನಿಯ ತಂಡಗಳು ಕಾಸರಗೋಡಿಗೆ ಬಂದು ದುರಂತದ ವಿಷಯದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ನಡೆಸಿವೆ. ಮಾಧ್ಯಮದ ಈ ಕೆಲಸ ದುರಂತ ಬಾಧಿತರ ಹೃದಯ ಝಲ್ಲೆನಿಸುವ ಚಿತ್ರಗಳ ಮೂಲಕ ಅಲ್ಲಿನ ಸರಕಾರ ಮತ್ತು ಜನರನ್ನು ಎಚ್ಚರಿಸಿದೆ.

ಜನಪ್ರಿಯ ಮಾತೃಭೂಮಿ ಸಾಪ್ತಾಹಿಕ ಈ ವಾರದ ತನ್ನ ವಿಶೇಷ ಸಂಚಿಕೆಯನ್ನು ಪೂರ್ತಿ ಎಂಡೋ ದುರಂತಕ್ಕೆ ಮೀಸಲಿಟ್ಟಿದೆ. ಬರೆದುಬಿಟ್ಟಿದೆ. ಭಾರತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇದೊಂದು ಸಂಗ್ರಾಹ್ಯ ಸಂಚಿಕೆ.

ಇರಲಿ, ನಮ್ಮ ಕನ್ನಾಡಿನಲ್ಲಿ ಕೇರಳದಂತಹುದೇ ಎಂಡೋ ದುರಂತವು ದ.ಕ.ಜಿಲ್ಲೆಯ ಪಟ್ರಮೆ, ನಿಡ್ಲೆ, ಕೊಕ್ಕಡಗಳಲ್ಲಿ ಕಾಣಿಸಿಕೊಂಡು ದಶಕ ಒಂದು ಸಂದಿದೆ. ಅಲ್ಲಿ ಅಂಗವೈಕಲ್ಯ, ಬುದ್ಧಿಮಾಂದ್ಯ, ಬಂಜೆತನ, ಕಿವುಡುತನದಂತಹ ಕೇಸ್ಗಳು ದಿನದಿನ ಪತ್ತೆಯಾದಾಗಲೂ ಮಾಧ್ಯಮಗಳಿಗೆ ಅದು ಮುಖ್ಯ ಸುದ್ದಿಯಲ್ಲ. ಎಲ್ಲೋ ಒಂದು ಕಾಲಂ ಸುದ್ದಿಯಾಗಿ ಮಾಯವಾಗುತ್ತಿತ್ತು.

ಈ ವರುಷದಾರಂಭದಲ್ಲಿ ಈಗ ಸಚಿವೆಯಾಗಿರುವ ಶೋಭಕ್ಕ ಕೊಕ್ಕಡಕ್ಕೆ ಬಂದರು. ಅಲ್ಲಿನ ಎಂಡೋ ಪೀಡಿತರ ಕಷ್ಟಗಳಿಗೆ ದನಿಯಾದರು. ಒಂದಷ್ಟು ಪ್ರಾಥಮಿಕ ಪರಿಹಾರವನ್ನು ಘೋಷಿಸಿದ್ದು, ಮಾತ್ರವಲ್ಲದೆ ಅದನ್ನು ಅನುಷ್ಠಾನಿಸಿಯೇ ಬಿಟ್ಟರು. ಅವರೊಂದಿಗೆ ಮಾಧ್ಯಮದ ದಂಡು ಕೂಡಾ ಇತ್ತೆನ್ನಿ!

ಪತ್ರಿಕೆಗಳು ಸುದ್ದಿ ಬರೆದುವು. ಶೋಭಕ್ಕ, ಸಿಎಂ ಅವರನ್ನೇ ಹೈಲೈಟ್ ಮಾಡಿದವು. ಪರಿಹಾರದ ಮೊತ್ತವನ್ನು ದೊಡ್ಡ ವಿಚಾರ ಅಂತ ಬಿಂಬಿಸಿದುವು. ಕೆಲವು ಸೀರಿಯಸ್ ಪತ್ರಕರ್ತರು ಎಂಡೋ ದುರಂತದ ಚಿತ್ರಣಗಳನ್ನು ಬರೆದರೂ ಅವೆಲ್ಲಾ ಪ್ರಾದೇಶಿಕ ಪುಟ ಸೇರಿದುವು! ರಾಜಧಾನಿಗೆ ಗೊತ್ತಾಗಲೇ ಇಲ್ಲ.

ಈಚೆಗೆ ಪತ್ರಿಕೆಯೊಳಗಿದ್ದ, ಒಂದಷ್ಟು ಗ್ರಾಮೀಣ ಕಾಳಜಿಯ ಪತ್ರಕರ್ತರು ವಿಷಯವನ್ನು ಹುಡುಕಿ ತಾಜಾ ವರದಿಯನ್ನು ಪ್ರಕಟಿಸಿದರು. ಮುಖ್ಯ ಪುಟಗಳಲ್ಲಿ ಎಂಡೋ ಸುದ್ದಿಗಳು ಬರತೊಡಗಿದುವು. ಸಿಎಂ ಅವರಿಗೂ ವಿಚಾರದ ಗಾಢತೆ ತಿಳಿಯಿತು. ಎಂಡೋ ನಿಷೇಧದ ಆಶ್ವಾಸನೆಯೇನೋ ಸಿಕ್ತು.

ಸಾವಯವ ಮಿಶನ್ ಅಧ್ಯಕ್ಷ ಆ.ಶ್ರೀ.ಆನಂದ್ ಕೊಕ್ಕಡಕ್ಕೆ ಬಂದರು. ಎಂಡೋ ಪೀಡಿತರ ಬದುಕಿಗೆ, ಅವರನ್ನು ಆಧರಿಸುವ ಕುಟುಂಬಕ್ಕೆ ಶಾಶ್ವತವಾದ ವ್ಯವಸ್ಥೆಯನ್ನು ಮಾಡುವ ಕುರಿತು ವರಿಷ್ಠರನ್ನು ಎಚ್ಚರಿಸಲು ಮನಮಾಡಿದ್ದಾರಂತೆ. ಸರಕಾರದ ವೆಚ್ಚದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಎಂಡೋ ಪೀಡಿತರನ್ನು ಪ್ರತ್ಯೇಕವಾದ ಬಸ್ಸಲ್ಲಿ ಕರೆದುಕೊಂಡು ಹೋಗಿ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿಸಲು ನಿರ್ಧರಿಸುವಷ್ಟು ಅವರ ಮನ ಕರಗಿದೆ! ಇದು ಮೀಡಿಯಾ ಇಂಪ್ಯಾಕ್ಟ್.

ಆದರೂ ವಾಹಿನಿಗಳು ಮಾತ್ರ ದಿವ್ಯ ಮೌನ! ಶೋಭಕ್ಕ ಬಂದಾಗ ಸ್ಥಳೀಯ ವರದಿಗಾರರು ಕಳುಹಿಸಿದ ವರದಿಗಳು 'ಸುದ್ದಿಗಳ ಮಧ್ಯೆ' ಮಿಂಚಿ ಮರೆಯಾದುವಷ್ಟೇ! ರಾಜಕೀಯವನ್ನು ಪೋಸ್ಟ್ಮಾರ್ಟಂ ಮಾಡುವ, ಹಗರಣಗಳ ಅಣುಅಣುವನ್ನು ಕೆದಕುವ ವಾಹಿನಿಗಳಿಗೆ ಕೊಕ್ಕಡ, ಪಟ್ರಮೆಗಳ ಎಂಡೋ ಸಮಸ್ಯೆಯು 'ದುರಂತ'ದಂತೆ ಕಾಣಲೇ ಇಲ್ಲ.

ಇರಲಿ, ಇಷ್ಟಾದರೂ ಬಂತಲ್ಲ ಎಂಬುದೇ ಸಮಾಧಾನ. ಎರಡು ರಾಜ್ಯಗಳ ಮಾಧ್ಯಮಗಳ ಸ್ಪಂದನ ರೀತಿಗಳಲ್ಲಿ, ಸಾಮಾಜಿಕ ಕಳಕಳಿಯಲ್ಲಿ ಏಕಿಷ್ಟು ಅಂತರ? . ಕನ್ನಾಡ ಪತ್ರಕರ್ತರು, ಪ್ರಕಟನಾ ಸಂಸ್ಥೆಗಳ ಮುಖ್ಯಸ್ಥರು ಮಾತ್ರೃಭೂಮಿಯ ಈ ವಾರದ ವಿಶೇಷ ಸಂಚಿಕೆಯನ್ನು, 'ಎಂಡೋಸಲ್ಫಾನ್ ನಿಷೇಧಿಸಿ, ಪೀಳಿಗೆಗಳನ್ನು ಉಳಿಸಿ' ಎನ್ನುವ ಇಂಡಿಯಾವಿಶನಿನ ಕ್ಯಾಂಪೈನಿನ ಪರಿಯನ್ನು ಒಮ್ಮೆಯಾದರೂ ನೋಡಬೇಕು.

Tuesday, December 14, 2010

ಕನ್ನಾಡಲ್ಲಿ 'ಹರಿತ ಭಾರತಂ' ತಂಡ




'ಕೃಷಿ ಸಂಬಂಧಿತ ಸೀರಿಯಲ್ಗಳಿಗೆ ವೀಕ್ಷಕರ ಸ್ಪಂದನ ಕಡಿಮೆ. ಇದು ಕಾರ್ಯಕ್ರಮದ ಗುಣಮಟ್ಟದ ಕೊರತೆಯೋ ಅಥವಾ ನಾವು ಚಿತ್ರೀಕರಿಸುವ ವಿಚಾರಗಳು ಜನಗಳಿಗೆ ತಲಪುವುದಿಲ್ಲವೋ. ಏನೂಂತ ಗೊತ್ತಾಗ್ತಾ ಇಲ್ಲ' - ಹೀಗೆಂದವರು ಕೇರಳ ಅಮೃತ ಟೀವಿಯ 'ಹರಿತ ಭಾರತಂ' ಕೃಷಿ ಕಾರ್ಯಕ್ರಮದ ನಿರ್ಮಾಪಕ ಸಾಜ್ ಕುರಿಯನ್.

ರಂಗು ರಂಗಿನ ಸೀರಿಯಲ್ಗಳಿಗೆ ಜನಬೆಂಬಲ ಕಣ್ಣಿಗೆ ರಾಚುತ್ತದೆ. ಸಿನಿಮಾ ಸೀರಿಯಲ್ಗಳನ್ನು ಜನ ಹುಚ್ಚುಕಟ್ಟಿ ನೋಡುತ್ತಾರೆ. ರಿಯಾಲಿಟಿ ಶೋ ಒಂದು ದಿವಸ ಪ್ರಸಾರವಾಗದಿದ್ದರೆ ಟಿವಿ ಕೇಂದ್ರಕ್ಕೆ ದೂರವಾಣಿಗಳ ಸುರಿಮಳೆ. ಆದರೆ ಕೃಷಿ ಕಾರ್ಯಕ್ರಮಕ್ಕೆ ಜನರ ಮೌನ ಯಾಕೆ? ಸನಿಹದಲ್ಲಿದ್ದ ನಿರೂಪಕಿ ದೀಪಾಗೆ ಯಾಕೋ ಈ ಪ್ರಶ್ನೆ ಅಷ್ಟೊಂದು ಸಹ್ಯವಾಗಲಿಲ್ಲ. ಅದೆಲ್ಲಾ ನಮ್ಮ ಭ್ರಮೆ. ನಾವು ಏನೋ ಸಾಧಿಸುತ್ತೇವೆಂಬ 'ಇಗೋ' ಇದೆಯಲ್ಲಾ, ಇದುವೇ ನಿಮ್ಮ ಪ್ರಶ್ನೆಗೆ ಕಾರಣ' ಎನ್ನಬೇಕೇ?

ಹೌದು. ಇದು ಚಿತ್ರ ಮಾಧ್ಯಮದ ಜಗತ್ತಿನ ಮಾತುಕತೆಯಾದರೆ, ಮುದ್ರಣ ಮಾಧ್ಯಮದ ಕತೆಯೂ ಇದಕ್ಕಿಂತ ಹೊರತಿಲ್ಲ. ಓದುಗರಿಗೆ ಅತ್ಯುತ್ತಮ ಹೂರಣದ 'ಎಕ್ಸ್ಕ್ಲೂಸಿವ್' ಯಶೋಗಾಥೆಗಳನ್ನು ಕೊಟ್ಟಾಗಲೂ ಒಂದು ಕಾರ್ಡ್ ಬರೆಯುವಷ್ಟು ಪುರುಸೊತ್ತಿಲ್ಲವಲ್ಲಾ! ಮುಖತಃ ಸಿಕ್ಕಾಗ 'ಚೆನ್ನಾಗಿತ್ತು' ಎನ್ನುವವರೂ ಕಡಿಮೆಯೇ. ಮಾನಸಿಕವಾಗಿ ಈ ಕೊರಗು ಕಾಡುತ್ತಾ ಇದ್ದಾಗ, ಸಾಜ್-ದೀಪಾ ಅವರ ಸಂಭಾಷಣೆ- ಕನ್ನಾಡಲ್ಲಿ ಮಾತ್ರವಲ್ಲ, ದೇವರ ನಾಡಲ್ಲೂ ಇದೇ ಕತೆ - ಎನ್ನುತ್ತಾ ಸಮಾಧಾನ ಪಟ್ಟುಕೊಂಡೆ.

ಸಾಜ್ ಕುರಿಯನ್ ತಂಡ ಕನ್ನಾಡಲ್ಲಿ ದಶಂಬರ 6ರಿಂದ 11ರ ತನಕ ಬೀಡುಬಿಟ್ಟಿತ್ತು. ಪುತ್ತೂರು ಸನಿಹದ ಕಡೆಶ್ವಾಲ್ಯದ ಶ್ಯಾಮ ಶಾಸ್ತ್ರಿಯವರ ಗಂಧದ ಕೃಷಿ, ಅನಂತಾಡಿಯ ಸುರೇಶ್ ಗೌಡರ ಕೃಷಿ, ಹಾಲು ಕರೆಯುವ ಯಂತ್ರಾವಿಷ್ಕಾರದ ಮುರುಳ್ಯದ ಮಿಲ್ಕ್ ಮಾಸ್ಟರ್ ರಾಘವ ಗೌಡ, ಸುಳ್ಯದ ರಾಜಿ ಆರ್.ಕೆ.ಯವರ ಕೊಕೊನಟ್ ಜೆಲ್ಲಿ, ಅಮೈ ಮಹಾಲಿಂಗ ನಾಯ್ಕರ ಬೆವರ ಶ್ರಮ ಮತ್ತು ಮಾಣಿಮೂಲೆ ಅಚ್ಯುತ ಭಟ್ ಅವರ ಇಪ್ಪತ್ತೆರಡು ಸುರಂಗ ಬದುಕಿನ ಯಶೋಗಾಥೆಗಳನ್ನು ತಂಡ ಚಿತ್ರೀಕರಿಸಿತು.

ಸಾಜು, ದೀಪಾ ಜತೆಗೆ ಕ್ಯಾಮೆರಾಮ್ಯಾನ್ ಸಿಜೊ ಮತ್ತು ರಾಜೀವ್ ಸೇರಿದಂತೆ ನಾಲ್ವರ ತಂಡ. 'ಇಪ್ಪತ್ತು ನಿಮಿಷದ ಕಂತಿಗೆ ಕನಿಷ್ಠವೆಂದರೂ ದಿನಪೂರ್ತಿಯ ಶ್ರಮ ಬೇಕು' ಎನ್ನುತ್ತಾರೆ ಸಾಜ್. ನಮ್ಮ ಕನ್ನಾಡಿನ ಕೃಷಿ ಕಾರ್ಯಕ್ರಮಗಳ ಶೂಟರ್ಗೆ ಸಾಜು ಇವರದು ’ಕಿವಿಮಾತು. ತಂಡಕ್ಕೆ 'ಹರಿತ ಭಾರತಂ' ಸಲಹಾ ಮಂಡಳಿ ಸದಸ್ಯ ಶ್ರೀ ಪಡ್ರೆ, ಹಿರಿಯ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ ಸಾಥ್ ನೀಡಿದ್ದರು.

Thursday, December 9, 2010

ಕಾಫಿ ನಾಡಲ್ಲಿ ತಳಮಳ

ದೇವವೃಂದ - ಮೂಡಿಗೆರೆ ಸನಿಹದ ಹಳ್ಳಿ. ಮುಖ್ಯ ಬೆಳೆ ಕಾಫಿ. 300 ಇಂಚು ಮಳೆ ಬೀಳುವ ಪ್ರದೇಶ. ಹೇರಳ ಹಸುರು ವನರಾಜಿ. ಇದು ಏಲಕ್ಕಿ ಕೃಷಿಯ ಕಣಜ. ನಿಧಾನಕ್ಕೆ ಏಲಕ್ಕಿಗೆ ಕಟ್ಟೆರೋಗ ಬಾಧಿಸಿ ನಾಶ. ಜತೆಗೆ ಮಣ್ಣಿನ ಫಲವತ್ತತೆಯ ಕುಸಿತ. ಆಗ ಕಾಫಿ ಬೋರ್ಡ್ ಕಚೇರಿ ಕಾರ್ಯವೆಸಗುತ್ತಿತ್ತು. 'ಕಾಫಿ ಬೆಳೆದ್ರೆ ಮಾತ್ರ ಸಾಲ ಸಿಗುತ್ತೆ. ಸಾಲ ಮಾಡಿಯಾದರೂ ಕಾಫಿ ಬೆಳೆಯೋಣ' ಎಂಬ ನಿರ್ಧಾರಕ್ಕೆ ಕೃಷಿಕರು ಬಂದರು. ಏಲಕ್ಕಿಯ ಸ್ಥಾನವನ್ನು ಕಾಫಿ ಆವರಿಸಿಕೊಂಡಿತು. ಬದುಕಲು ದಾರಿ ಸಿಕ್ತು. ಮುಂದಿನ ಕಾಫಿ ಕೃಷಿಯ ಕತೆ, ಕೃಷಿಕರ ಚಿತ್ರಣ ನಿಮ್ಮ ಮುಂದಿದೆ' - ಕಾಫಿ ಕೃಷಿಕ ಎಂ.ಜೆ.ದಿನೇಶ್ ತನ್ನೂರಿನ 'ಗತ ದೇವವೃಂದ'ದ ಬದುಕನ್ನು ಕೃಷಿ-ಗ್ರಾಮೀಣ ಪತ್ರಕರ್ತರ ಮುಂದಿಟ್ಟರು.

'ಏಲಕ್ಕಿ ಕೃಷಿ ಇದ್ದಾಗ ಹೈನು, ಕೋಳಿ.. ಮುಂತಾದ ಉಪಕಸುಬಿನೊಂದಿಗೆ ಹಳ್ಳಿ ಬದುಕು ನೆಮ್ಮದಿಯನ್ನು ಕಂಡಿತ್ತು. ಏಲಕ್ಕಿ ಕುಸಿದಾಗ ಅವೆಲ್ಲವೂ ಕೈಕೊಟ್ಟಿತು. ಆಗ ಕಾಫಿ ಏನೋ ಪ್ರವೇಶಿಸಿತು. ರೋಬಸ್ಟಾ ಕಾಫಿ ಗಿಡ ಫಸಲು ನೀಡಲು ಏನಿಲ್ಲವೆಂದರೂ 8-10 ವರುಷ ಬೇಕು. ಆ ಸಮಯದಲ್ಲಿ ಬದುಕಲು ಏನಾದರೂ ದಾರಿ ಬೇಕಲ್ವಾ. ಬೇರೆ ಆದಾಯ ಇಲ್ಲ. ಹಾಗಾಗಿ ಹಂತಹಂತವಾಗಿ ಕಾಡಿನಲ್ಲಿರುವ ನಾಟಾಗಳನ್ನು ಕಡಿದು ಮಾರುವಂತಹ ದುಃಸ್ಥಿತಿ ಬಂದಿತ್ತು'

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿ ಶಿಬಿರದ (ಅಕ್ಟೋಬರ್ ೨೭-೩೧) ಸಂದರ್ಭದಲ್ಲಿ ಊರವರ ಕೃಷಿ ದನಿಗೆ ಪತ್ರಕರ್ತರು ಕಿವಿಗೊಟ್ಟರು. 'ಕಾಫಿ ಎಸ್ಟೇಟ್, ಕಾಫಿ ಕೃಷಿಕರು ಅಂದಾಗ ಅಲ್ಲೊಂದು ಶ್ರೀಮಂತ ಲೋಕ ಸೃಷ್ಟಿಯಾಗುತ್ತದೆ, ಸೃಷ್ಟಿಮಾಡಿಕೊಳ್ಳುತ್ತಾರೆ. ಆದರೆ ಬದುಕನ್ನು ಕೆದಕುತ್ತಾ ಸಾಗಿದಂತೆ ಅಲ್ಲೂ ಬಡತನದ ಛಾಯೆ ಗೋಚರಿಸುವಂತಹ ಸನ್ನಿವೇಶಗಳಿವೆ' - ಹೀಗೆ ಅಜ್ಞಾತ ಕಷ್ಟಗಳ ಪೋಸ್ಟ್ಮಾರ್ಟಂ.

ಶಿಬಿರದುದ್ದಕ್ಕೂ ದಿನೇಶ್ ಆಗಾಗ ನೆನಪಿಸಿಕೊಳ್ಳುತ್ತಿರುವ ಈ 'ಶ್ರೀಮಂತಿಕೆ'ಯ ಹಿಂದಿರುವ ಕಹಿಯನ್ನು ಕೆದಕುವುದು ಅಷ್ಟು ಸುಲಭವಾಗಿರಲಿಲ್ಲ. ಕಾಫಿ ಬೆಳೆ ಸಮೃದ್ಧವಾಗಿದ್ದರೂ, ಪ್ರಾಕೃತಿಕ ವಿಕೋಪದಿಂದಾಗಿ ಕೈಗೆ ಬಾರದಂತಹ ಸ್ಥಿತಿ. ಅಕಾಲ ಮಳೆಯು ಕಾಫಿ ಬದುಕನ್ನು ನುಂಗಿ ನೊಣೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಯಾವ ಇಲಾಖೆಗಳೂ ಕೃಷಿಕನ ಆಸರೆಗೆ ಬರುವುದಿಲ್ಲ. 'ನೀವು ಕಾಫಿ ಬೆಳೀಬೇಡ್ರಿ' ಎಂಬ ಅಹಂಕಾರದ ಉತ್ತರ.

ಇತ್ತೀಚೆಗಂತೂ ಕೃಷಿ ಕಾರ್ಮಿಕ ಸಮಸ್ಯೆ. ನಗರದಿಂದ ಕಾರ್ಮಿಕರನ್ನು ಕಾಫಿ ಎಸ್ಟೇಟಿಗೆ ಕರೆತರಲಾಗುತ್ತದೆ. ಅವರಿಗೆ ವಾಹನ ವ್ಯವಸ್ಥೆ, ಐಷರಾಮಿ ಊಟೋಪಚಾರ, ಕೈತುಂಬಾ ವೇತನ ಕೊಟ್ಟರೂ ನಿರೀಕ್ಷಿಸಿದ ಕೆಲಸವಾಗುತ್ತಿಲ್ಲ.

ಈಗ ಶುಂಠಿ ಕೃಷಿಯ ಭರಾಟೆ. ವಿಷ ಸಿಂಪಡಣೆ ಮಾಡಿದಷ್ಟೂ ಇಳುವರಿ ಜಾಸ್ತಿಯೆಂಬ ಭ್ರಮೆ. ಕೃಷಿಕ ಸುಧಾಕರ್ ಹೇಳುತ್ತಾರೆ, 'ನಮ್ಮ ಜನಗಳಿಗೆ ಏನಾಗಿದೋ ಗೊತ್ತಿಲ್ಲಾರಿ. ಬೇಕೋ ಬೇಡ್ವೋ, ವಿಷ ಸುರೀತಾನೆ ಇರ್ತಾರೆ. ಈ ಕುರಿತು ಅವರಲ್ಲಿ ಜ್ಞಾನದ ಕೊರತೆಯಿದೆ'.
ಶುಂಠಿಗೆ ದರ ಏರಿದಾಗ ಎಲ್ಲರೂ ಅದನ್ನೇ ನೆಚ್ಚಿಕೊಳ್ಳುತ್ತಾರೆ. ದರ ಬಿದ್ದಾಗ ಬಿಟ್ಟುಬಿಡುತ್ತಾರೆ. ಒಂದೇ ಪ್ರದೇಶದಲ್ಲಿ ಕನಿಷ್ಠ ಐದು ವರುಷ ಸತತವಾಗಿ ಬೆಳೆದರೆ ಶುಂಠಿ ಕೃಷಿಯಲ್ಲಿ ನಷ್ಟವಿಲ್ಲ ಎಂಬ ಅನುಭವ ಮುಂದಿಟ್ಟರು ಜಯರಾಂ ದೇವವೃಂದ.
ಕಾಫಿಯೊಂದಿಗೆ ಕಾಳುಮೆಣಸು ಕೃಷಿ ಬದುಕನ್ನು ಸ್ವಲ್ಪ ಮಟ್ಟಿಗೆ ಆಧರಿಸುತ್ತ್ತಿದೆ. ಆದರೆ ಇಲ್ಲೂ ಇಲಾಖೆಗಳ ಆಟ ತಪ್ಪಿದ್ದಲ್ಲ. 'ಕಾಳುಮೆಣಸು ಸಂಬಾರ ಮಂಡಳಿಯ ವ್ಯಾಪ್ತಿಗೆ ಬರುವುದಿಲ್ಲ-ಇತ್ತ ತೋಟಗಾರಿಕೆಯ ವ್ಯಾಪ್ತಿಗೂ ಬರುವುದಿಲ್ಲ. ಹೀಂಗಾದರೆ ಕೃಷಿಕರು ಎಲ್ಲೋಗ್ಬೇಕು ಸ್ವಾಮೀ' ಸುಧಾಕರ್ ಪ್ರಶ್ನೆ.
ಮೂವತ್ತೈದು ಜಾತಿಯ ದೇಸಿ ತಳಿ ಭತ್ತಗಳು ದೇವವೃಂದದ ಸಂಪನ್ನತೆ. ಆದರೆ ಈಗ ಉಳಿದಿರುವುದು 'ರಾಜಮುಡಿ ಮತ್ತು ದಪ್ಪಭತ್ತ' ತಳಿಯೆರಡು ಮಾತ್ರ. ಇಳುವರಿ ಅಬ್ಬಬ್ಬಾ ಎಂದರೂ ಎಕರೆಗೆ 10-12 ಕ್ವಿಂಟಾಲ್.
'ಮೂರು ವರುಷದಿಂದ ಮಳೆ ಸಿಕ್ಕಾಪಟ್ಟೆ ಬಂತಲ್ವಾ. ಮುಂದಿನ ಐದು ವರುಷ ಮಳೆ ಕೈಕೊಟ್ಟರೆ?' ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರಿಂದ ಮರುಪ್ರಶ್ನೆ. '2004ರಲ್ಲಿ ನೂರಿಂಚು ಮಳೆ ಬಂತು. ಕಾಫಿ ಬೆಳೆ ಚೆನ್ನಾಗಿತ್ತು. ನಂತರ ಎರಡ್ಮೂರು ವರುಷವೂ ಇದೇ ಪರಸ್ಥಿತಿಯಿತ್ತು. ಬೆಳೆಯಲ್ಲಿ ತೊಂದರೆಯಾಗಲಿಲ್ಲ. ಮಳೆ ಕಡಿಮೆ ಬಂದರೆ ಬೆಳೆ ಚೆನ್ನಾಗಿ ಬರ್ತದೆ ಎಂಬುದು ಗ್ಯಾರಂಟಿ' ಕೃಷಿಕ ದೀಪಕ್ ಸಮಾಧಾನದ ಉತ್ತರ.

ತಮ್ಮೂರಿನ ಹಲವು ಸಮಸ್ಯೆಗಳ ಬಗ್ಗೆ ತಳಸ್ಪರ್ಶಿಯಾಗಿ ಚಿಂತನೆ. ಮೌನದ ಬದುಕಿಗೆ ಮಾತು ಕೊಡುವ ಪ್ರಯತ್ನ. ಪರಿಹಾರ ಹೇಗೆ? 'ಸಮಸ್ಯೆಯಿದೆ. ಇದರೊಳಗೆ ಅವಕಾಶಗಳನ್ನು ನೋಡುವ, ಸೃಷ್ಟಿಸುವ ಅವಕಾಶವಿದೆ' - ದಿನೇಶ್ ಮಾತುಕತೆಗೆ ಹೊಸ ಎಳೆ ತೋರಿದರು.

'ಹೌದ್ರಿ, ದಾರಿಗಳೇನೋ ಇವೆ. ಅದನ್ನು ತೋರಿಸುವವರಾರು? ಯಾವುದನ್ನು ಮಾಡಬೇಕು ಎಂದು ಹೇಳುವವರಾರು? ಸರ್ಕಾರಿ ಗೊಬ್ಬರ ಬಂದಾಗ 'ಸುರಿಯಿರಿ' ಎಂದು ಅಧಿಕಾರಿಗಳು ಹೇಳಿದರು. ಪತ್ರಿಕೆಗಳೂ ಬರೆದುವು. ಗೊಬ್ಬರ ಸುರಿದದ್ದೇ ಬಂತು. ಗಿಡಗಳು ಹಾಂಗೇ ಇವೆ' ಸುಧಾಕರ್ ಹಾಸ್ಯಮಿಶ್ರಿತವಾಗಿ ಹೇಳಿದ್ದರೂ, ಅವರ ನೋವು ಗ್ರಹಿಸಲು ಕಷ್ಟವಾಗಲಿಲ್ಲ.

ಹಲಸು ಅಭಿವೃದ್ದಿ, ಅದರ ಮೌಲ್ಯವರ್ಧನೆ. ಈ ಪ್ರದೇಶಕ್ಕೆ ತಾಳೆ ಸೂಕ್ತವಾಗಬಹುದೋ ಎಂಬ ಕುರಿತು ಅಧ್ಯಯನ. ಅಪ್ಪೆಮಿಡಿ ಕೃಷಿಗೆ ಅವಕಾಶ. ವಾಣಿಜ್ಯ ದೃಷ್ಟಿಯಿಂದ ಲಿಚ್ಚಿ ಹಣ್ಣು ಸೂಕ್ತವಾಗಿದ್ದು, ಅದನ್ನು ಬೆಳೆಯಲು ಪ್ರಚೋದನೆ. ಅಗ್ರಿಟೂರಿಸಂ ಕುರಿತು ಆಲೋಚನೆ, ಇಲ್ಲಿ ಬೆಳೆಯುವ ಭತ್ತ ಯಾ ಅಕ್ಕಿಯನ್ನು 'ದೇವವೃಂದ ಬ್ರಾಂಡ್' ಮಾಡಿಕೊಂಡರೆ ನಗರದಲ್ಲಿ ಒಳ್ಳೆಯ ಮಾರುಕಟ್ಟೆ ಕುದುರಿಸುವತ್ತ ಪ್ರಯತ್ನ.. ಹೀಗೆ ಹಲವಾರು ಪರ್ಯಾಯ ದಾರಿಗಳು ಮಾತುಕತೆಯಲ್ಲಿ ನುಸುಳಿ ಭರವಸೆ ಮೂಡಿಸಿದುವು.
'ಪರ್ಯಾಯ ಕೃಷಿಯ ಕುರಿತು ಚಿಂತನೆ ಮೂಡಿರುವುದು ಆಶಾದಾಯಕ ಬೆಳವಣಿಗೆ. ಹಾಗೆಂತ ಫಕ್ಕನೆ ಬದಲಾವಣೆಯನ್ನು ನಿರೀಕ್ಷಿಸಕೂಡದು. ಭರವಸೆಯನ್ನು, ಆತ್ಮವಿಶ್ವಾಸವನ್ನು ಬೆಳೆಸುವ ಮೋಡೆಲ್ಗಳು ಸೃಷ್ಟಿಯಾಗಬೇಕು. ಅದರ ಫಾಲೋಅಪ್ ಜತೆಜತೆಗೆ ನಡೆಯಬೇಕು' - ಎನ್ನುತ್ತಾ ಮಾತುಕತೆಗೆ ವಿರಾಮ ಹಾಕಿದರು ಹಿರಿಯ ಪತ್ರಕರ್ತ ಶ್ರೀ ಪಡ್ರೆ.
ಕೃಷಿ, ಕೃಷಿ ಬದುಕಿನತ್ತ ಊರವರೇ ಒಂದೇ ಸೂರಿನಡಿ ಮಾತುಕತೆಗೆ ಸಿದ್ಧರಾಗಿರುವುದು ಮತ್ತು ಸಮಸ್ಯೆಯನ್ನು ಹೇಳುತ್ತ ಕೂರುವುದರ ಬದಲು ಅದರ ಪರಿಹರಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ.

Wednesday, December 1, 2010

ಪುಟಾಣಿ ಸಂಶೋಧಕರಿಗೆ ರಾಷ್ಟ್ರೀಯ ಮನ್ನಣೆ


ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಸಿ.ಎಸ್.ಭಾರ್ಗವ ಮತ್ತು ಎನ್.ವಿ.ಪ್ರಮೋದ್ - ತಮ್ಮ ಪಠ್ಯ ಒಂದಂಗವಾಗಿ ಸಿದ್ಧಪಡಿಸಿದ ವಿಜ್ಞಾನ ಪ್ರಾಜೆಕ್ಟ್ ರಾಷ್ಟ್ರೀಯ ಮನ್ನಣೆ ಗಳಿಸಿದೆ. ಅಳಲೆಕಾಯಿ, ಕುಂಕುಮಕಾಯಿ, ಕಾಡುಗೇರು ಮತ್ತು ಶಂಖಪುಷ್ಪದಿಂದ ಶಾಯಿ ಸಿದ್ಧಪಡಿಸುವ ಪಾರ್ಮುಲಾವನ್ನು ಈ ವಿದ್ಯಾರ್ಥಿಗಳಿಬ್ಬರು ಸಿದ್ಧಪಡಿಸಿದ್ದರು.
ಈ ಪ್ರಾಜೆಕ್ಟನ್ನು - ಭಾರತ ಸರಕಾರದ ವಿಜ್ಞಾನ ಮ್ತು ತಂತ್ರಜ್ಞಾನ ಇಲಾಖೆ, ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಹಾಗೂ ಇಂಟೆಲ್ ಕಂಪೆನಿ ಸಹಯೋಗದಲ್ಲಿ - ಮುಂಬಯಿಯ ನೆಹರೂ ಸಯನ್ಸ್ ಸೆಂಟರ್ ನಲ್ಲಿ ಜರುಗಿದ ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಪ್ರದರ್ಶಿಸಿ ಪ್ರಶಸ್ತಿವನ್ನು ಪಡೆದಿದ್ದಾರೆ. ಮುಂದಿನ ಮೇ ತಿಂಗಳಲ್ಲಿ ಅಮೆರಿಕಾದ ಲಾಸ್ ಎಂಜಲೀಸ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಅವಕಾಶ ಪ್ರಾಪ್ತವಾಗಿದೆ.
ವರ್ಲಿಯ ಮೇಳದಲ್ಲಿ ದಶದ ಸುಮಾರು 87 ತಂಡಗಳು ಭಾಗವಹಿಸಿದ್ದುವು. ಇದರಲ್ಲಿ ಅಂತಿಮವಾಗಿ ಎಂಟು ತಂಡಗಳು ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಲಾ ಒಂದು ಮಡಿಲ್ಗಣಕ (ಲ್ಯಾಪ್ ಟಾಪ್), ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ದೊರೆತಿದೆ.

ರಾಮಕೃಷ್ಣ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಎ.ವಸಂತಿ ಅವರ ಮಾರ್ಗದರ್ಶನ ಮತ್ತು ಮುಖ್ಯಗುರು ಎಚ್.ಶ್ರೀಧರ ರೈ ಇವರ ಗರಡಿಯಲ್ಲಿ ಪಳಗಿದ ಪ್ರಶಸ್ತಿ ಪುರಸ್ಕೃತ 'ಪುಟಾಣಿ ವಿಜ್ಞಾನಿ'ಗಳಾದ ಭಾರ್ಗವ ಮತ್ತು ಪ್ರಮೋದ್ಗೆ ಅಭಿನಂದನೆಗಳು

ರಾಜೀವ್ ದೀಕ್ಷಿತ್ ನಿಧನ

ಅಝಾದಿ ಬಚಾವೋ ಆಂದೋಲನದ ಚಳವಳಿಕಾರ, ಸ್ವದೇಶಿ ಚಿಂತನೆಯ ಪ್ರಚಾರಕ ರಾಜೀವ್ ದೀಕ್ಷಿತ್ (44) ಹೃದಯಾಘಾತದಿಂದ ಮಂಗಳವಾರ ಮುಂಜಾನೆ ನಿಧನರಾದರು.

ಉತ್ತರ ಪ್ರದೇಶದ ಆಲಿಗಡದಲ್ಲಿ ಜನನ. ಅಲಹಾಬಾದ್ನಲ್ಲಿ ಶಿಕ್ಷಣ ಪೂರ್ಣ. ಕಂಪ್ಯೂಟರ್ ಸೈನ್ಸ್ನಲ್ಲಿ ಬಿಎಸ್ಸಿ ಪದವಿ. ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ನಲ್ಲಿ ಬಿಟೆಕ್ ಪದವಿ, ಇಷ್ಟೆಲ್ಲಾ ಅಕಾಡಮಿಕ್ ಅರ್ಹತೆ ಇದ್ದರೂ, ದೀಕ್ಷಿತ್ ಉದ್ಯೋಗ ಕೈಬೀಸಿ ಕರೆಯಲಿಲ್ಲ.
ಸ್ವದೇಶಿ ಚಳವಳಿಯಲ್ಲಿ ಪೂರ್ಣಾವಧಿಯಾಗಿ ತೊಡಗಿಸಿಕೊಂಡ್ದಿದರು.
1992ರಲ್ಲಿ ಪ್ರೊ: ಧರ್ಮಪಾಲ್ಮತ್ತು ಡಾ.ಭನ್ವರ್ ಲಾಲ್ ಅವರ ಮಾರ್ಗದರ್ಶನದಲ್ಲಿ ಅಝಾದಿ ಬಚಾವೋ ಆಂದೋಲನ ಆರಂಭ. ಬ್ರಿಟನ್, ಫ್ರಾನ್ಸ್, ಜರ್ಮನಿ, ಹಾಲೆಂಡ್ನಂತಹ ಐರೋಪ್ಯ ರಾಷ್ಟ್ರಗಳಲ್ಲಿ ಸಂಚರಿಸಿ ಜನರ ರಾಷ್ಟ್ರಪ್ರೇಮದ ಅಧ್ಯಯನ. `ನಾವು ಕೂಡ ದೇಶ ಪ್ರೀತಿಸುವುದನ್ನು ಕಲಿಯೋಣ. ನಮ್ಮಲ್ಲಿ ಉತ್ಪಾದನೆಯಾಗುವುದನ್ನೇ ಬಳಸೋಣ. ಆ ಮೂಲಕ ಭಾರತವನ್ನು ಸ್ವಾವಲಂಬಿ ರಾಷ್ಟ್ರ ಮಾಡೋಣ. ಗಾಂಧಿಕನಸಿನ ಗ್ರಾಮರಾಜ್ಯ ಕಟ್ಟೋಣ' ಎಂದು ದೇಶದ ಜನರನ್ನು ತಮ್ಮ ವಾಗ್ಝರಿಯ ಮೂಲಕ ಬಡಿದೆಬ್ಬಿಸುತ್ತಿದ್ದರು.
ರಾಜ್ಯದ ಮಹಾನಗರ, ನಗರ, ಪಟ್ಟಣ ಅಷ್ಟೇ ಏಕೆ ಹಳ್ಳಿ ಹಳ್ಳಿಗಳಲ್ಲಿ ಓಡಾಟ. ಸ್ವದೇಶಿ ವಸ್ತುಗಳ ಬಗ್ಗೆ ಜಾಗೃತಿ. ಯುವಕರಲ್ಲಿ ಕೃಷಿ, ಪರಿಸರ, ಗ್ರಾಮೀಣಾಭಿವೃದ್ಧಿ, ವಾಣಿಜ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾ, ರಾಷ್ಟ್ರಚಿಂತನೆಗೆ ಹಚ್ಚುವ ಕಾಯಕ.
ದೀಕ್ಷಿತ್ ಅವರ ಸ್ವದೇಶಿ ಚಳವಳಿಯ ಹರಿತವಾದ ಮಾತು, ಬಹುರಾಷ್ಟ್ರೀಯ ಕಂಪೆನಿಗಳು ಸಾಮಾನ್ಯ ಜನರಿಗೆ ಮಾಡುತ್ತಿರುವ ಮೋಸದ ವಿಶ್ಲೇಷಣೆಗಳು ಲಕ್ಷಾಂತರ ವಿಡಿಯೊ, ಆಡಿಯೊ ಕ್ಯಾಸೆಟ್ಗಳಾದವು. ಅವರ ಭಾಷಣಗಳು ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಪುಸ್ತಕ ರೂಪ ಪಡೆದಿವೆ.

Saturday, November 27, 2010

'ಸುದ್ದಿ'ಗೆ ಬೆಳ್ಳಿಯ ಮೆರುಗು

ಪೆರಾಜೆಯಲ್ಲಿ ಪೇಪರ್ ವಿತರಿಸುವ ಕೆ.ಸಿ.ಸೀತಾರಾಮ ಅಪ್ಪಟ ಅಕ್ಷರಪ್ರಿಯ. ಆತ ಸೋಮವಾರ ಯಾವಾಗಲೂ ಬ್ಯುಸಿ. ಸರಿಯಾಗಿ ಎಂಟಕ್ಕೆ ಬರುವ ತೊಡಿಕಾನ ಬಸ್. ಅದರೊಳಗಿಂದ ರೊಂಯ್ಯನೆ ತೂರಿ-ಹಾರಿ ಬರುವ ಸುದ್ದಿಯ ಬಂಡ್ಲು. ಸೀತಾರಾಮ ಅದನ್ನು ಬಿಡಿಸುವಷ್ಟು ಪುರುಸೊತ್ತಿಲ್ಲ, ಮುತ್ತಿಕೊಳ್ಳುವ ಸುದ್ದಿ ಪ್ರಿಯರು. 'ನಮ್ಮೂರಿನ ಸುದ್ದಿ ಬಂದಿದೆ ಮಾರಾಯ..', 'ನೋಡಿಲ್ಲಿ, ನನ್ನ ಕವನ ಹಾಕಿದ್ದಾರೆ', 'ವಾಯ್..ನಿನ್ನ ಹೆಸರು ಬಂದುಬಿಟ್ಟಿದೆ'.. ಹೀಗೆ ಒಬ್ಬೊಬ್ಬರದು ವಿಭಿನ್ನ ಪ್ರತಿಕ್ರಿಯೆ. ಎಲ್ಲರನ್ನೂ ಸಂಭಾಳಿಸಿ, ಹಣ ತೆಕ್ಕೊಂಡು ಕಳುಹಿಸುವ ಹೊತ್ತಿಗೆ ಸೀತಾರಾಮರ ಮುಖದಲ್ಲಿ ಬೆವರು. ಇದು ಸುಮಾರು ಒಂದೂವರೆ ದಶಕದ ಹಿಂದಿನ ಸ್ಥಿತಿ.

ಮುಖ್ಯವಾಹಿನಿ ಪತ್ರಿಕೆಗಳು ಬರುವಾಗ ಲೇಟ್ ಆದರೆ ಸಹಿಸಿಕೊಳ್ಳುತ್ತಾರೆ. ಸುದ್ದಿ ಎಲ್ಲಾದರೂ ತಡವಾದರೆ ಗೊಣಗುವ ಅದೆಷ್ಟು ಮಂದಿ! ಅಕ್ಷರ ಅಕ್ಷರವನ್ನು ಒದುವ ಪರಿ. 'ಹಾಗಾಗಬೇಕಿತ್ತು, ಹೀಗಾಗಬಾರದಿತ್ತು' ಎಂಬ ವಿಮರ್ಶೆ. ಪತ್ರಿಕೆಯಲ್ಲಿ ಹೆಸರು ಪ್ರಕಟವಾದಂದು ನಾಚಿ ಮುದ್ದೆಯಾಗುವ, 'ಸುದ್ದಿ ಓದಿದ್ರಾ' ಅಂತ ಮಾತಿಗೆಳೆಯುವ, 'ನಾನು ಬೇಡ ಅಂತ ಹೇಳಿದೆ, ಹಾಕ್ಬಿಟ್ರು' ಅಂತ ಒಣಜಂಭ ಪ್ರದರ್ಶಿಸುವ ಹಲವು ಮುಖಗಳು ಮಿಂಚಿ ಮರೆಯಾಗುತ್ತವೆ.
ಇದು ಸುದ್ದಿ ಪತ್ರಿಕೆಗೆ ಸಿಕ್ಕ ಜನ-ದನಿ. ಸುಳ್ಯದಲ್ಲಿ 'ಸುದ್ದಿ ಬಿಡುಗಡೆ' ಪತ್ರಿಕೆಯು ಸಾಪ್ತಾಹಿಕವಾಗಿ ಪ್ರಕಟವಾಗುತ್ತದೆ. ಸುದ್ದಿ, ಕವನ, ಲೇಖನ ಕಳುಹಿಸಿಕೊಟ್ಟಲ್ಲಿಗೆ ಆರಂಭವಾಗುವ ತುಡಿತಕ್ಕೆ ಮುಂದಿನ ವಾರದ ಪತ್ರಿಕೆ ಕೈಗೆ ಬಂದಾಗ ನಿಲುಗಡೆ! ಕಳುಹಿಸಿದ ಸುದ್ದಿ ಪ್ರಕಟವಾಗದೇ ಇದ್ದಾಗ ತಳಮಳ. ಏನನ್ನೋ ಕಳಕೊಂಡ ಅನುಭವ. ಪತ್ರಿಕಾ ಕಚೇರಿಗೆ ದೂರವಾಣಿ, ಸಂಪಾದಕರಲ್ಲಿ ಅಂಜುತ್ತಲೇ ಮಾತನಾಡಿದ ಬಳಿಕವೇ ವಿಶ್ರಾಂತಿ.

'ನಮ್ಮೂರಲ್ಲಿ ಜರುಗಿದ ಕಾರ್ಯಕ್ರಮಗಳ ವರದಿ ಮೊದಲು ಸುದ್ದಿಯಲ್ಲಿ ಬರ್ಬೇಕು' ಎಂಬ ಹಪಹಪಿಕೆಯು ಎಲ್ಲಾ ಗ್ರಾಮಗಳ ಸುದ್ದಿಪ್ರಿಯರಲ್ಲಿತ್ತು. ಪತ್ರಿಕೆಯ ಸಂಪಾದಕರೂ ಅಷ್ಟೇ, 'ಇದು ಸಣ್ಣ ಸುದ್ದಿ, ದೊಡ್ಡ ಸುದ್ದಿ' ಅಂತ ಭೇದ ಮಾಡದೆ ಎಲ್ಲವನ್ನು ಸಮದರ್ಶಿತ್ವದಿಂದ ಕಂಡದ್ದರಿಂದಲೇ ಅವರಿಗಿಂದು ಗ್ರಾಮೀಣ ಪ್ರದೇಶದ ತಳವನ್ನು ಸ್ಪರ್ಶಿಸಲು, 'ಗ್ರಾಮೀಣ ಭಾರತ'ವನ್ನು ಕಾಣಲು ಸಾಧ್ಯವಾಯಿತು.
'ಸುದ್ದಿಗೆ ಬರೆಯೋದು ಅಂದ್ರೆ ಅದೊಂದು ಹೆಮ್ಮೆ' ಅನ್ನುತ್ತಿದ್ದ ದಿನಗಳು ನನ್ನ ಶಾಲಾ ಸಮಯದಲ್ಲಿದ್ದುವು. ಪೆರಾಜೆಯಲ್ಲಿ ಜರುಗಿದ ಚಿಕ್ಕಪುಟ್ಟ ಕಾರ್ಯಕ್ರಮಗಳ ವರದಿ ಕಳುಹಿಸಿ, ಅದು ಪ್ರಕಟವಾದಾಗ ಐದಾರು ಪ್ರತಿಗಳನ್ನು ಖರೀದಿಸಿ, ಪ್ರಕಟಿತ ವರದಿಗೆ ಮಾರ್ಕ್ ಮಾಡಿ ಸ್ನೇಹಿತರಲ್ಲಿ 'ಹೇಳಿಕೊಳ್ಳುವುದು, ಹಂಚುವುದು' ಎಂದರೆ ಖುಷಿ. ಅದನ್ನು ಜೋಪಾನವಾಗಿಟ್ಟುಕೊಂಡು, ಅದರೊಳಗೆ ಆಗಾಗ್ಗೆ 'ಇಣುಕುವುದು' ಮತ್ತೂ ಸಂತೋಷ.
ಇಂದು ನಮ್ಮೆಲ್ಲಾ ವ್ಯವಸ್ಥೆಗಳನ್ನು ಒಮ್ಮೆ ನಿಂತು ನೋಡಿ. ಎಲ್ಲವೂ ನಗರ ಕೇಂದ್ರಿತವಾದ ವ್ಯವಸ್ಥೆ. ಅಭಿವೃದ್ಧಿಯ ಧಾವಂತದಲ್ಲಿ ಗ್ರಾಮೀಣ ಪ್ರದೇಶವನ್ನು ನಾಡಿನ ದೊರೆಗಳು ಪೂರ್ತಿ ಮರೆತಿದ್ದಾರೆ. ನಗರದ ಹೃದಯವಿರುವುದು ಹಳ್ಳಿಗಳಲ್ಲಿ ತಾನೆ. ಹಳ್ಳಿಗಳನ್ನೇ ಮರೆತರೆ?
ಸುದ್ದಿಯ ಸಂಪಾದಕರಿಗೆ ಆ ಎಚ್ಚರ ಇದೆ. ಅವರಿಗೆ ಹಳ್ಳಿಯೇ ಲಕ್ಷ್ಯ. ಊರಿನ ಸತ್ಯನಾರಾಯಣ ಪೂಜೆ, ಜಾತ್ರೆ, ಭೂತದ ಕೋಲ, ಕೋಳಿಅಂಕ, ಸೊಸೈಟಿಯ ಮಹಾಸಭೆ, ಶಾಲಾ ವಾರ್ಶಿಕೋತ್ಸವ.. ಇವೆಲ್ಲಾ ಎಲ್ಲಿ ಸುದ್ದಿಯಾಗುತ್ತಿತ್ತು? 'ಅದೂ ಸುದ್ದಿಯಾಗಲು ಯೋಗ್ಯ' ಎಂಬುದನ್ನು ಪತ್ರಿಕೆ ತೋರಿಸಿಕೊಟ್ಟಿದೆ. ಹಳ್ಳಿಯ ಮೂಲಭೂತ ಸಮಸ್ಯೆಗಳನ್ನು ಪ್ರಕಟಿಸಿ ಇಲಾಖಾ ವರಿಷ್ಠರ ಗಮನ ಸೆಳೆದಿದೆ. ಪರಿಹಾರ ದೊರಕಿಸಿಕೊಡುವಲ್ಲಿ ಶ್ರಮಿಸಿದೆ.
ಬೆಳಕು ಕಾಣದೆ ಮುದುಡಿದ್ದ ಎಷ್ಟೋ ವಿಚಾರಗಳಿಗೆ ಬೆಳಕು ಒಡ್ಡಿದೆ. ಊರಿನ ಭೂತಸ್ಥಾನ, ದೇವಸ್ಥಾನ, ಮಸೀದಿ, ಚರ್ಚ್ .ಗಳ ಪರಿಚಯವನ್ನು ಪ್ರಕಟಿಸಿದೆ. ಪ್ರತಿಭಾವಂತರನ್ನು ಬೆನ್ನುತಟ್ಟಿದೆ. ಸಮಸಾಮಯಿಕ ವಿಚಾರಗಳಿಗೆ ಸಂವಾದವನ್ನು ನಡೆಸಿದೆ.
ಕೆಲವೊಂದು ಸಲ ನಮ್ಮ ರಾಜಕಾರಣದ ಹೊಲಸು ಹಳ್ಳಿಯನ್ನು ಅಶುಚಿ ಮಾಡುವುದಿದೆ. ಅಂತಹ ಸಂದರ್ಭಗಳಲ್ಲಿ ಪತ್ರಿಕೆಗೆ ಸವಾಲೂ ಆದದ್ದಿದೆ. ಇದನ್ನು ಜಾಣ್ಮೆಯಿಂದ ನಿಭಾಯಿಸಿದ ಕೀರ್ತಿ ಸಂಪಾದಕರದು.
ಎಷ್ಟೋ ಪ್ರತಿಭೆಗಳಿಗೆ ಸುದ್ದಿಯೊಂದು ಮಾಧ್ಯಮ. ಕವನ, ಕಥೆಗಳನ್ನು ಪ್ರಕಟಿಸಿ ಬೆನ್ನುತಟ್ಟಿದೆ. ನನಗೆ ಮೊದಲು ಲೇಖನಿ ಕೊಟ್ಟುದು ಸುದ್ದಿ! 'ಇಂತಹ ಲೇಖನ ಬರೆಯಿರಿ. ನಾಡಿದ್ದೇ ಬೇಕು' ಒತ್ತಾಯಪೂರ್ವಕವಾದ ಕರೆ ಬಂದಾಗ ಉಬ್ಬಿ ಉದ್ದಾದ ದಿನಗಳು ಈಗ ನೆನಪು! ಬರೆಯುವ ತುಡಿತವಿದ್ದ ದಿನಗಳಲ್ಲಿ ಸುದ್ದಿಯು ಲೇಖನವನ್ನೋ, ವರದಿಯನ್ನೋ ಪ್ರಕಟಿಸದಿರುತ್ತಿದ್ದರೆ, ಕಸದ ಬುಟ್ಟಿಗೆ ಸೇರಿಸುತ್ತಿದ್ದರೆ ಬಹುಶಃ ಅಕ್ಷರ ಕುರುಡು ಬರುತ್ತಿತ್ತೇನೋ!
ಪತ್ರಿಕೆಯ ಸಂಪಾದಕರು - ಡಾ. ಯು.ಪಿ.ಶಿವಾನಂದ. ಮಾಹಿತಿಗಳ ಹಸಿವಿದ್ದ ಅಪರೂಪದ ಡೈನಮಿಕ್ ಸಂಪಾದಕರು. ಮಾಹಿತಿ ಕಲೆ ಹಾಕುವ, ಗ್ರಾಮೀಣ ಭಾರತವನ್ನು ತಲುಪುವ, ಅವರಿಗೆ ಪ್ರಯೋಜನಕಾರಿಯದಂತಹ ಯೋಜನೆಗಳನ್ನು ಹಾಕಿಕೊಳ್ಳುವಲ್ಲಿ ಅವರ 'ಮೂಡ್' (MOOD) ಎಂದೂ ಕೆಡುವುದಿಲ್ಲ.
ಸುದ್ದಿ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣ - ಗ್ರಾಮೀಣ ಭಾರತದ ಕುರಿತಾದ ಡಾ.ಶಿವಾನಂದರ ದೂರದೃಷ್ಟಿ ಮತ್ತು ಉತ್ತಮ ಸಾರ್ವಜನಿಕ ಸಂಪರ್ಕವುಳ್ಳ ಅವರ ಸಹಕಾರಿಗಳು, ಸಿಬ್ಬಂದಿಗಳು. ಸುದ್ದಿ ಪತ್ರಿಕೆಯಿಂದ ಯಾವುದೇ ವಿಚಾರಕ್ಕೆ ದೂರವಾಣಿ ಬಂದರೆ ತಕ್ಷಣ 'ಓಕೆ' ಅನ್ನುವ ಮನಸ್ಸು ಬರುವುದು
ಈ ಕಾರಣದಿಂದ.

ಸುದ್ದಿಯು ಸುಳ್ಯ, ಬೆಳ್ತಂಗಡಿಯಲ್ಲಿ ಸಾಪ್ತಾಹಿಕವಾಗಿ ಪ್ರಕಟವಾದರೆ, ಪುತ್ತೂರಿನಲ್ಲದು ದೈನಿಕ. ಇಪ್ಪತ್ತೈದು ವರುಷಗಳ ಹಿಂದೆ ಹಚ್ಚಿದ ಹಣತೆಗೀಗ ಬೆಳ್ಳಿಯ ಮೆರುಗು. ಸುಳ್ಯದಲ್ಲಿ ನವೆಂಬರ್ 27, 28ರಂದು ಬೆಳ್ಳಿ ಸಂಭ್ರಮ. 'ಇದು ಸುದ್ದಿಯ ಸಂಭ್ರಮವಲ್ಲ. ಓದುಗರ ಸಂಭ್ರಮ. ಹಳ್ಳಿ ಸಂಭ್ರಮ' ಎಂದು ವಿನೀತವಾಗಿ ಹೇಳುತ್ತಾರೆ ಸಂಪಾದಕ ಡಾ.ಯು.ಪಿ.ಶಿವಾನಂದ.

Wednesday, November 24, 2010

ಜೆಕೆವಿಕೆ ಕೃಷಿ ಮೇಳ 2010 : ನೆನಪು







ನವೆಂಬರ್ 11ರಿಂದ 14ರ ತನಕ ಬೆಂಗಳೂರು ಜೆಕೆವಿಕೆ ಕೃಷಿ ಮೇಳ ಜರುಗಿತು. ಐನೂರಕ್ಕೂ ಮಿಕ್ಕಿ ಮಳಿಗೆಗಳು.
ಮೂರು ಲಕ್ಷಕ್ಕೂ ಮಿಕ್ಕಿದ ಜನ. ಮಾಮಾಲಿ ಹೂರಣಗಳು.
ಉಪ ಕುಲಪತಿ ಡಾ. ನಾರಾಯಣ ಗೌಡರ ನೇತೃತ್ವದಲ್ಲಿ ವ್ಯವಸ್ಥೆಗಳು ಚೆನ್ನಾಗಿತ್ತು

ಜಾಣ ಅಕ್ಷರ ಕುರುಡು

ಶುಭಕಾರ್ಯವೊಂದರಲ್ಲಿ ಭಾಗಿಯಾಗಲು ಕುಟುಂಬದೊಂದಿಗೆ ಕೇರಳದ ತ್ರಿಶೂರಿಗೆ ರೈಲಲ್ಲಿ ಪ್ರಯಾಣಿಸುತ್ತಿದ್ದೆ. ಏಳೆಂಟು ಗಂಟೆ ಪ್ರಯಾಣ. ಸಮಯ ಕೊಲ್ಲಲು (!) ಐದಾರು ದೈನಿಕಗಳಿದ್ದುವು. ರೈಲಿನಲ್ಲಿ ಪತ್ರಿಕೆ ಓದುತ್ತಾ ಇರುವಾಗ ಪಕ್ಕದಲ್ಲಿದ್ದ ಓರ್ವ ಹಿರಿಯರು ಆಗಾಗ್ಗೆ ಇಣುಕುತ್ತಿದ್ದರು. ತಿರುಗಿ ಮುಖವನ್ನು ನೋಡುವಾಗ ಗಂಭೀರರಾಗುತ್ತಿದ್ದರು. ಪತ್ರಿಕೆಯ ಮಧ್ಯದ ಪುಟವನ್ನು 'ತಮ್ಮ ಹಕ್ಕೆಂಬಂತೆ' ಇವರ್ಯಾಕೆ ಕಸಿಯಲಿಲ್ಲ - ಎಂಬ ಚೋದ್ಯ ಕಾಡುತ್ತಿತ್ತು.

ಹಳೆ ಪೇಪರ್ನಲ್ಲಿ ತಿಂಡಿ ಕಟ್ಟಿಕೊಂಡು ಬಂದಿದ್ದರು. ತಿಂಡಿ ತಿಂದಾದ ಬಳಿಕ ಆ ಪೇಪರನ್ನು ಎಸೆಯದೆ ಓದುತ್ತಿದ್ದರು! ಬಸ್ಸಿನಲ್ಲಿ, ರೈಲಲ್ಲಿ ಪತ್ರಿಕೆಗಳಿಗೆ ಸಾಕಷ್ಟು ಮಂದಿ 'ಹಕ್ಕುದಾರರು' ಹಕ್ಕು ಚಲಾಯಿಸಿದ್ದ ಅನುಭವವಿದ್ದುದರಿಂದ ಆ ವೃದ್ಧರ ಓದಿನ ತುಡಿತ ಢಾಳಾಗಿ ಕಂಡಿತು.

ಸರಿ, ತ್ರಿಶೂರು ಸನಿಹವಾಗುತ್ತಿದ್ದಂತೆ, ಗಂಟುಮೂಟೆಗಳನ್ನು ಪೇರಿಸುತ್ತಿದ್ದೆವು. ನಾವು ಇಳಿಯುವ ಸೂಚನೆ ಸಿಕ್ಕಿದ ಆ ವೃದ್ಧರು ಬಳಿಗೆ ಬಂದು, 'ನಿಮಗೆ ಪೇಪರ್ ಓದಿ ಆಯ್ತಲ್ಲಾ. ಅದನ್ನು ಕೊಡ್ತೀರಾ' ಎಂದು ಇಪ್ಪತ್ತು ರೂಪಾಯಿ ನೋಟನ್ನು ಹಿಡಿದಿದ್ದರು. ಅವರ ಬಗ್ಗೆ ತಪ್ಪಾಗಿ ಅರ್ಥ್ಯೆಸಿಕೊಂಡದ್ದಕ್ಕೆ ನಾಚಿಕೆಯಾಯಿತು. ಕೈಯಲ್ಲಿದ್ದ ಐದಾರು ಪತ್ರಿಕೆಗಳನ್ನು ಅವರ ಕೈಗಿತ್ತು, ಹಣವನ್ನು ನಿರಾಕರಿಸಿದೆ. ಅಗವರ ಮುಖ ಅರಳಿತ್ತು. ಅಷ್ಟೂ ಹೊತ್ತು ಓದಿನ ಹಸಿವೆಯನ್ನು ಅದುಮಿಟ್ಟು ಕೊಂಡ ಆವರ ಬಗ್ಗೆ ಗೌರವ ಮೂಡಿತು.

'ಮನೆಗೆ ಎರಡು ಪೇಪರ್ ಬರುತ್ತೆ. ಟ್ರೈನಿಗೆ ಬರುವ ಗಡಿಬಿಡಿಯಲ್ಲಿ ಓದಲಾಗಲಿಲ್ಲ. ಚೀಲಕ್ಕೆ ಹಾಕಲು ಮೊಮ್ಮಗಳಿಗೆ ಹೇಳಿದ್ದೆ. ಮರೆತಿರಬೇಕು. ಏನೋ, ಪೇಪರ್ ಓದದಿದ್ದರೆ ದಿನ ಪೂರ್ಣವಾಗುವುದಿಲ್ಲ' ಎನ್ನುತ್ತಾ ಬಾಯ್ತುಂಬಾ ನಕ್ಕರು. ಸುಮಾರು ಏಳೆಂಟು ಗಂಟೆ ಒಂದೇ ಬೋಗಿಯಲ್ಲಿದ್ದರೂ ಅವರು ನನ್ನ ಕೈಯಲ್ಲಿದ್ದ ಪೇಪರ್ ಕೇಳಿಲ್ಲ, ಕಸಿಯಲಿಲ್ಲ, ಹಕ್ಕು ಚಲಾಯಿಸಲಿಲ್ಲ.

ಈ ಘಟನೆ ಮೆಲುಕು ಹಾಕುತ್ತಾ ಇದ್ದಾಗ, ಪುತ್ತೂರಿನಿಂದ ರಾಜಧಾನಿಗೆ ರೈಲಲ್ಲಿ ಪ್ರಯಾಣಿಸುತ್ತಿದ್ದಾಗಿನ ಅನುಭವ ಹೇಳಲೇ ಬೇಕು. ಎಂದಿನಂತೆ ಐದಾರು ಪತ್ರಿಕೆ ಖರೀದಿಸಿ, ಓದುತ್ತಾ ಕುಳಿತಿದ್ದೆ. ಒಂದೈದು ನಿಮಿಷ ಆಗಿತ್ತಷ್ಟೇ, ಹತ್ತಿರದಲ್ಲಿ ಕುಳಿತಿದ್ದ ಮಹಾನುಭಾವ ಆಗಾಗ್ಗೆ ಪೇಪರ್ನಲ್ಲಿ ಇಣುಕುತ್ತಾ, ನನ್ನ ಕೈಯಲ್ಲಿದ್ದ ಪತ್ರಿಕೆಯನ್ನು ಆತನ ಬಳಿಗೆ ಎಳೆಯುತ್ತಾ ಹಿಂಸೆ ನೀಡುತ್ತಿದ್ದ. ಅಸಹನೆಯನ್ನು ವ್ಯಕ್ತಪಡಿಸಿದ್ದರೂ ಮಗುಮ್ಮಾಗಿ ಹಲ್ಲು ಕಿರಿದಿದ್ದ!

ಕೊನೆಗೊಮ್ಮೆ 'ಸ್ವಲ್ಪ ಕೊಡಿ' ಎನ್ನುವ ಮೊದಲೇ ಮಧ್ಯದ ಪುಟವನ್ನು ಎಳೆಯಬೇಕೇ. ಸ್ವಲ್ಪ ಹೊತ್ತಾದ ಬಳಿಕ ಇನ್ನೊಬ್ಬನಿಗೂ ಈ ಚಾಳಿ ಅಂಟಿತು. ಒಂದು ಪತ್ರಿಕೆ ಕೈಜಾರಿತಲ್ಲಾ, ತೊಂದರೆಯಿಲ್ಲ. ಇನ್ನೊಂದಿದೆ - ಎನ್ನುತ್ತಾ ಕೈಗೆತ್ತಿಕೊಂಡೆ. ಅದಕ್ಕೂ ಅದೇ ಗತಿ. 'ಒಂದು ಪತ್ರಿಕೆ ಕೊಳ್ಳದಷ್ಟು ದಾರಿದ್ರ್ಯ ಯಾಕೆ ಬಂತಪ್ಪಾ' ಎನ್ನುತ್ತಾ ಇನ್ನೊಂದು ಪತ್ರಿಕೆಯ ಓದು ಆರಂಭಿಸುತ್ತಿದ್ದಂತೆ, ಅದಕ್ಕೂ ವಾರೀಸುದಾರರು ಬರಬೇಕೆ. ಅರ್ಧ ಗಂಟೆಯಲ್ಲಿ ಚೀಲದಲ್ಲಿದ್ದ ಎಲ್ಲಾವೂ ಪರರ ಪಾಲು.

'ಪತ್ರಿಕೆಯಲ್ವಾ. ಓದಿ ಹಿಂತಿರುಗಿಸುವುದಿಲ್ವಾ' ಅಂತ ಊಹಿಸಿದರೆ ತಪ್ಪು. ಅವೆಲ್ಲಾ ಮರಳಿ ಕೈಸೇರುವಾಗ, 'ಕಸದ ಬುಟ್ಟಿಯಿಂದ ತೆಗೆದ ಕಾಗದ'ಗಳಂತಿದ್ದುವು. ಅನ್ನದ ಅಗುಳು, ತಿಂಡಿಯ ಶೇಷ ಅಂಟಿಕೊಂಡಿದ್ದುವು. ಮಾನಸಿಕ ವಿಕಾರಗಳು ಪತ್ರಿಕೆಗಳಲ್ಲಿ ಪಡಿಯಚ್ಚು ಮೂಡಿದ್ದುವು. ಪುನಃ ಚೀಲಕ್ಕೆ ಸೇರಿಸುವ ಎಲ್ಲಾ ಅರ್ಹತೆಗಳನ್ನು ಕಳಕೊಂಡಿದ್ದುವು!

ತ್ರಿಶೂರು ಪ್ರಯಾಣದ ಆ ವೃದ್ಧರೂ ಮತ್ತು ರಾಜಧಾನಿ ಪ್ರಯಾಣದ 'ಪತ್ರಿಕಾ ವಾರಸುದಾರ'ರಿಬ್ಬರನ್ನು ಥಳಕು ಹಾಕಿದರೆ, ಆ ವೃದ್ಧರೇ ಮೇಲು. ಯಾಕೆಂದರೆ 'ಪೇಪರ್ ಕೊಡ್ತೀರಾ' ಅಂತ ಕೇಳುವ ಸೌಜನ್ಯ ಮತ್ತು ಪತ್ರಿಕೆಯ ಮೌಲ್ಯ ಕೊಡಲೂ ಸಿದ್ಧರಾದ ಮನಃಸ್ಥಿತಿ. ಯಾವ್ಯಾವುದಕ್ಕೋ ವೆಚ್ಚ ಮಾಡುತ್ತೇವೆ. ಪತ್ರಿಕೆಗಾಗುವಾಗ ನಮ್ಮಲ್ಲಿ 'ಜಿಪುಣತನ' ಧುತ್ತೆನ್ನುತ್ತದೆ.

ತ್ರಿಶೂರಿನಲ್ಲಿ ನಾವು ಉಳಕೊಂಡಿರುವ ಮನೆಯ ಸನಿಹ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು. ಬೆಳಿಗ್ಗೆ ಸುಮಾರು 8-9 ಗಂಟೆಯ ಸಮಯ. ಏಳೆಂಟು ಮಂದಿ ಕಾರ್ಮಿಕರು ಪತ್ರಿಕೆಯನ್ನು ಓದುತ್ತಿದ್ದರು. ಕೆಲವರ ಕಂಕುಳಲ್ಲಿ ಪೇಪರ್ ಭದ್ರವಾಗಿತ್ತು. ಅಷ್ಟೂ ಮಂದಿ ಒಂದೆಡೆ ಕೆಲಸ ಮಾಡುವವರಾದ್ದರಿಂದ, ಎಲ್ಲರಿಗೂ ಒಂದೇ ಪೇಪರ್ ಸಾಕಿತ್ತಲ್ವಾ! ಖರೀದಿಸಿ ಓದುವ ಜಾಯಮಾನ ಅಲ್ಲಿ ಬದುಕಿಗಂಟಿದೆ. ಒಂದು ಪತ್ರಿಕೆಯನ್ನಾದರೂ ಕೊಂಡು ಓದದಿದ್ದರೆ ಬದುಕಿನ ಬಂಡಿ ಓಡುವುದೇ ಇಲ್ಲ!
ಕನ್ನಾಡಿನಲ್ಲಿ ತದ್ವಿರುದ್ಧ. ಪಕ್ಕದ ಮನೆಗೆ ಯಾವಾಗ ದೈನಿಕ, ಸಾಪ್ತಾಹಿಕ, ಮಾಸಿಕಗಳು ಬರುತ್ತದೆ ಅಂತ ಕಾದು ಕುಳಿತುಕೊಳ್ಳುವ 'ಓದುಪ್ರಿಯ'ರು ಸಾಕಷ್ಟು ಮಂದಿ ಸಿಗ್ತಾರೆ. ಓದಿದ ಬಳಿಕ ಸುರಕ್ಷಿತವಾಗಿ ಮರಳಿಸಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲದ ನಡವಳಿಕೆ. ಹೋಟೇಲಿಗೆ ಹೋಗಿ ಐವತ್ತು, ನೂರರ ನೋಟು ಕಿಸೆ ಜಾರಿದಾಗ ಮುಖ ಅಗಲವಾಗುತ್ತದೆ. ಮೂರೋ, ನಾಲ್ಕೋ ರೂಪಾಯಿ ತೆತ್ತು ಒಂದು ಪತ್ರಿಕೆ ಖರೀದಿಸುವಾಗ ಮುಖ ಕಿವುಚುತ್ತದೆ.

ಈ ಮಧ್ಯೆ ಪತ್ರಿಕೆಯ ಓದನ್ನು ನಿಯಮಿತವಾಗಿ ಮಾಡಿಕೊಂಡ ಅಜ್ಞಾತ ವರ್ಗದವರಿಂದ ಕನ್ನಾಡಿನ ಪತ್ರಿಕೆ ಉಳಿದುಕೊಂಡಿದೆ. ಕೇರಳದಂತೆ ಇಲ್ಲೂ ಪತ್ರಿಕಾ ಓದು ಬದುಕಿನಂಗವಾದರೆ?

ಒಂದೆಡೆ ಕನ್ನಡದ ಕುರಿತು ಹೋರಾಟ. ಮತ್ತೊಂದೆಡೆ ಅಕ್ಷರ ಕುರುಡು. ಅದೂ ಜಾಣ ಕುರುಡು. ಟೆಲಿವಿಶನ್, ಅಂತರ್ಜಾಲಗಳು ಓದನ್ನು ಹಾಳು ಮಾಡಿದುವು - ಅಂತ ಢಾಳಾದ ಅಭಿಪ್ರಾಯಕ್ಕೆ ಬರುತ್ತೇವೆ. 'ಅವುಗಳು ನಮ್ಮನ್ನು ಹಾಳು ಮಾಡಿಲ್ಲ. ನಮಗೆ ಅಕ್ಷರ ಕಂಡಾಗ ಮಯಮಯವಾಗಿ ಕಾಣುವುದಕ್ಕೆ ಯಾರನ್ನು ದೂರಿ ಪ್ರಯೋಜನ' - ಶಿಕ್ಷಣ ತಜ್ಞ ಡಾ.ಸುಕುಮಾರ ಗೌಡರ ಮಾತು ಹೆಚ್ಚು ಸೂಕ್ತವಾಗುತ್ತದೆ.

Wednesday, November 17, 2010

`ಕೃಷಿ ಉಳಿದರೆ ಗ್ರಾಮೀಣ ಸಂಸ್ಕೃತಿ ಉಳಿಯುತ್ತದೆ'



`ಅಧಿಕಾರ ವಿಕೇಂದ್ರೀಕರಣದಂತೆ ಪತ್ರಿಕೋದ್ಯಮದ ವಿಕೇಂದ್ರೀಕರಣವೂ ಅಗತ್ಯ. ಎಲ್ಲಾ (ಕನ್ನಡ) ಪತ್ರಿಕೆಗಳಲ್ಲಿ ಇದೀಗ ಸ್ಥಳೀಯ ಸುದ್ದಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ಮೊದಲಿಗಿಂತ ಹೆಚ್ಚು ಗ್ರಾಮೀಣ ಸ್ದುದಿ ಪ್ರಕಟವಾಗುತ್ತಿವೆ. ಇವ್ಲೆಲವೂ ಸ್ವಾಗತಾರ್ಹ ಬೆಳವಣಿಗೆ. ನಮ್ಮ ಸುದ್ದಿಯನ್ನು ಇನ್ನೊಬ್ಬರು ಬರೆಯುವ ಬದಲು ನಾವೇ ನಮ್ಮ ಬದುಕನ್ನು ಮಾಧ್ಯಮದೆದುರು ತರಬೇಕು. ನಮ್ಮಂತೆ ಇರುವವರ ಬದುಕಿನ ಅಗತ್ಯತೆಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲು ಯತ್ನಿಸಬೇಕು. ಮಾಧ್ಯಮದ ಶಕ್ತಿಯನ್ನು ಬಳಸಿಕೊಳ್ಳಲು ಯತ್ನಿಸಬೇಕು...' - ನೀರಿಂಗಿಸುವ ಪಾಠವನ್ನು ಕಳೆದ ಎರಡು ದಶಕದಿಂದ ಅಚ್ಚುಕಟ್ಟಾಗಿ ಹೇಳುತ್ತಿರುವ ಶ್ರೀ ಪಡ್ರೆಯವರು ಮೂಡಿಗೆರೆ ತ್ಲಾಲೂಕಿನ ದೇವವೃಂದದ್ಲಲಿ ಮಂಡಿಸಿದ ವಿಚಾರಧಾರೆಯಿದು.

ಅ 28ರಿಂದ 31ರವರೆಗೆ ಮೂಡಿಗೆರೆ ತ್ಲಾಲೂಕಿನ ದೇವವೃಂದದ್ಲಲಿ ನಡೆದ `ಗ್ರಾಮೀಣ ಕೃಷಿ ಪತ್ರಿಕೋದ್ಯಮ ಶಿಬಿರ'ದ್ಲಲಿ ಹತ್ತು ಹಲವು ವಿಚಾರಗಳು ವ್ಯಕ್ತವಾದವು. ಕೃಷಿ ಕೇಂದ್ರಿತ ಗ್ರಾಮೀಣ ಬದುಕನ್ನು ಮಾಧ್ಯಮದಲ್ಲಿ ಹೇಗೆ ಬಿಂಬಿಸಬೇಕು? ಮತ್ತು ಏಕೆ ಬಿಂಬಿಸಬೇಕು? ಎಂಬ ಎರಡು ಪ್ರಶ್ನೆಗಳ ಸುತ್ತ 4 ದಿನ ವಿಚಾರ ಮಂಥನ ನಡೆಯಿತು.

ಈ ಶಿಬಿರದ್ಲಲಿ ಪಾಲ್ಗೊಂಡ ಶಿಬಿರಾರ್ಥಿಗಳು ಕೇವಲ ಬರವಣಿಗೆಯ ತಂತ್ರಗಳನ್ನು ಮಾತ್ರವಲ್ಲ ಕೃಷಿ ಜಗತ್ತಿನ ಆಗುಹೋಗುಗಳ ಇಣುಕು ನೋಟವನ್ನೂ ಪಡೆದರು. ಕೃಷಿ ಇಲಾಖೆಯ ಅಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಕೃಷಿಕರು, ಪ್ರಮುಖ ಪತ್ರಿಕೆಗಳಲ್ಲಿ - ಚಾನೆಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸುವ ಹಂಬಲ ಇರುವವರೂ ಇಲ್ಲಿ ಕೃಷಿ ಪತ್ರಿಕೋದ್ಯಮದ ಪಾಠ ಕಲಿತರು.

`ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹುಲಿ ಸಂರಕ್ಷಣೆ ಹೇಗೆ ಒಂದು ಪ್ರತಿಮೆಯಾಗುತ್ತದೆಯೋ ಹಾಗೆ ಕೃಷಿ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಗ್ರಾಮೀಣ ಸಂಸ್ಕೃತಿಯ ಉಳಿವಿಗೇ ಒಂದು ಪ್ರತಿಮೆಯಾಗುತ್ತದೆ' ಎಂದ ಸಂಪನ್ಮೂಲ ವ್ಯಕ್ತಿಗಳ ಮಾತು ಕೃಷಿಯ ಮಹತ್ವವನ್ನು ಸಾರಿ ಹೇಳಿತ್ತು.

ಕೃಷಿಕರ ಸಮಸ್ಯೆಗಳನ್ನು ಬರೆಯಲು ಹೊರಡುವ ಅನೇಕರು ಎಲ್ಲಾ ಸಮಸ್ಯೆಗೂ ಪರಿಹಾರ ಸೂಚಿಸುವ ಅತ್ಯುತ್ಸಾಹದ್ಲಲಿ ಮುನ್ನುಗ್ಗುತ್ತಾರೆ. ಕೆಲವರು ತಾವೇ ಸ್ವತಃ ಕೃಷಿಕರಾಗಿ ತಮ್ಮ ಅನುಭವಕ್ಕೇ ನಿಷ್ಠರಾಗಿ ಬರೆಯಬೇಕು ಎಂದು ಹಂಬಲಿಸುತ್ತಾರೆ. ಇನ್ನೂ ಕೆಲವರು ಉಪದೇಶಾತ್ಮಕವಾಗಿ ತಮ್ಮ ಅಭಿಪ್ರಾಯಗಳನ್ನು ಹೇರಲು ಲೇಖನವನ್ನು ಸಾಧನವನ್ನಾಗಿಸಿಕೊಳ್ಳುತ್ತಾರೆ. ಕೃಷಿ ಪತ್ರಿಕೋದ್ಯಮ ಅನುಭವಿಸುತ್ತಿರುವ ಈ ಭ್ರಮೆಗಳನ್ನು ಕಳಚಲು ದೇವವೃಂದ ಶಿಬಿರ ಸಾಕಷ್ಟು ಶ್ರಮಿಸಿತು.

`ನಿಮ್ಮ ಮಾಹಿತಿ ಮೂಲಗಳನ್ನು ಗೌರವಿಸಿ. ಅವರಿಂದ ಮಾಹಿತಿ ಪಡೆದು ಲೇಖನ ಬರೆದು ಅದು ಪ್ರಕಟಗೊಂಡ ನಂತರ ಮಾಹಿತಿ ಮೂಲವನ್ನು ನಿರ್ಲಕ್ಷಿಸಬೇಡಿ. ರೈತರನ್ನು ಕೇವಲವಾಗಿ ಕಾಣುವ ಧೋರಣೆಯನ್ನು ಕೈಬಿಡಿ. ಕೃಷಿ ವಿಜ್ಞಾನಿಗಳು ವಿಶ್ವವಿದ್ಯಾಲಯಗಳಲ್ಲಿ ಮಾಡುವ ಸಂಶೋಧನೆಯಷ್ಟೇ ಪ್ರಮುಖವಾದ ಸಾಧನೆಯನ್ನು ಹಲವು ರೈತರು ತಮ್ಮ ಹೊಲದಲ್ಲಿಯೇ ಸಾಧಿಸಿರುವ ಹಲವು ಉದಾಹರಣೆಗಳಿವೆ. ಅಂಥವನ್ನು ಹುಡುಕಿ ಬೆಳಕಿಗೆ ತರಬೇಕು. ನಮ್ಮಿಂದ (ಬರಹಗಾರರಿಂದ) ನಿಮಗೆ (ರೈತರಿಗೆ) ಲಾಭ ಎಂಬ ಮನಸ್ಥಿತಿ ನಿಮ್ಮಲ್ಲಿ ಎಂದಿಗೂ ಮೂಡಬಾರದು' ಎಂದ ಅಂಕಣಕಾರ ಶಿವಾನಂದ ಕಳವೆ ಅವರ ಮಾತು ಮನದಲ್ಲಿ ಅಚ್ಚೊಚ್ಚಿ ನಿಂತಿತು.

`ಮಾಧ್ಯಮಗಳು ಗ್ರಾಮೀಣ ಬದುಕಿನ ಸುದ್ದಿ ಪ್ರಕಟಿಸುತ್ತಿಲ್ಲ, ಹೆಚ್ಚು ಆದ್ಯತೆ ನೀಡುತ್ತಿಲ್ಲ ಎಂದು ಗೊಣಗುವ ಬದಲು ನೀವೇ ಲೇಖನಿ ಹಿಡಿದು ಪತ್ರಿಕೆಗಳಿಗೆ ಬರೆಯಿರಿ. ವಾಚಕರವಾಣಿಯ ಮೂಲಕ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಿರಿ. ಜಿಲ್ಲಾ ವರದಿಗಾರರು ಅಥವಾ ಸಂಪಾದಕರಿಗೆ ಸುದ್ದಿಯ ಸುಳಿವು ನೀಡಿ. ಮಾಧ್ಯಮಗಳನ್ನು ಹೀಗಳೆಯುವ ಬದಲು ಅದನ್ನು ನಿಮ್ಮ ಅಭ್ಯುದಯಕ್ಕೆ ಬಳಸಿಕೊಳ್ಳಿ' ಎಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಕಿವಿಮಾತು ಹೇಳಿದರು.

ಕೃಷಿ ಪತ್ರಿಕೋದ್ಯಮದಲ್ಲಿ ಛಾಯಾಚಿತ್ರ ಬಳಕೆಯ ಬಗ್ಗೆ ಸಾಗರದ ಪೂರ್ಣಪ್ರಜ್ಞ ಬೇಳೂರು ಹಲವು ಒಳನೋಟಗಳನ್ನು ನೀಡಿದರು. ಪತ್ರಿಕೋದ್ಯಮದ ಭಾಷೆ ಹಾಗೂ ಲೇಖನ ಬರವಣಿಗೆಯ ಬಗ್ಗೆ ಮತ್ತೊಬ್ಬ ಹಿರಿಯ ಪತ್ರಕರ್ತ ಆನಂದ ತಿಳಿಸಿಕೊಟ್ಟರು. ಕನ್ನಡ ಕೃಷಿ ಪತ್ರಿಕೋದ್ಯಮದ ಸ್ಥಿತಿಗತಿಯ ಬಗ್ಗೆ ದೃಶ್ಯ ರೂಪಕ ಪ್ರದರ್ಶಿಸಿದ ಮ್ಲಲಿಕಾರ್ಜುನ ಹೊಸಪಾಳ್ಯ ಮತ್ತು ನಾ. ಕಾರಂತ ಪೆರಾಜೆ ಶಿಬಿರಾರ್ಥಿಗಳ ಮನ ಗೆದ್ದರು. ಶಿಬಿರಾರ್ಥಿಗಳ ಹಲವು ಸಂಶಯಗಳನ್ನು ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು ಮತ್ತು ಶಿವರಾಮ ಪೈಲೂರು ಪರಿಹರಿಸಿದರು.

ಬರೆಹ - ಎನ್.ಎಂ.ನಟರಾಜ್
(ಚಿತ್ರ-ನೆರವು - ಘನಶ್ಯಾಮ್)

Tuesday, November 16, 2010

ಅಶೋಕ ಫೌಂಡೇಶನ್ ಪ್ರತಿನಿಧಿಗಳ ಭೇಟಿ


ಅಮೆರಿಕದ ಅಶೋಕ ಫೌಂಡೇಶನಿನ ಭಾರತೀಯ ವಿಭಾಗವಾದ ಅಶೋಕ ಇಂಡಿಯಾದ ಮನೋಜ್ ಚಂದ್ರನ್ ಮತ್ತು ಶ್ವೇತಾ ಡಾಗಾ ಇಂದು 'ಅಡಿಕೆ ಪತ್ರಿಕೆ' ಕಚೇರಿಗೆ ಭೇಟಿ ಕೊಟ್ಟಿದ್ದರು. 'ಅಶೋಕ ಫೆಲೋ' ಆಗಿರುವ 'ಶ್ರೀ' ಪಡ್ರೆಯವರ ಈಚೆಗಿನ ಗ್ರಾಮೀಣ ಪತ್ರಿಕೋದ್ಯಮ ಚಟುವಟಿಕೆಗಳ ಬಗ್ಗೆ ತಿಳಕೊಳ್ಳುವುದು ಮತ್ತು ಕೃಷಿ - ಗ್ರಾಮೀಣಾಭಿವೃದ್ಧಿಯ ಈಗಿನ ಸ್ಥಿತಿಗತಿ, ಸಮಸ್ಯೆ, ಪರಿಹಾರ ಸಾಧ್ಯತೆಗಳ ಬಗ್ಗೆ ಅಧ್ಯಯನ ಭೇಟಿಯ ಉದ್ದೇಶ.

ತಂಡ ಅಡಿಕೆ ಕೃಷಿಯಲ್ಲಿ ಗರಿಷ್ಠ ಯಾಂತ್ರೀಕರಣ ಸಾಧಿಸಿ ಒಬ್ಬ ಕಾರ್ಮಿಕನ ಸಹಾಯದಿಂದ ಎಂಟು ಎಕ್ರೆ ಅಡಿಕೆ ಕೃಷಿ ನಿಭಾಯಿಸುತ್ತಿರುವ ಬನಾರಿ ಈಶ್ವರ ಪ್ರಸಾದ್ ಅವರ ತೋಟಕ್ಕೆ ಹೋಗಿ ಅಲ್ಲಿನ ವ್ಯವಸ್ಥೆ ಗಮನಿಸಿ ತುಂಬಾ ಮುಚ್ಚುಗೆ ವ್ಯಕ್ತಪಡಿಸಿತು.

ಬನಾರಿ ಗೋಪಾಲಕೃಷ್ಣ ಭಟ್ ಅವರ ಜತೆ ಕೃಷಿಯ ಆಗುಹೋಗುಗಳ ಬಗ್ಗೆ ತಂಡ ವಿಚಾರ ವಿನಿಮಯ ನಡೆಸಿದ ಅಡಿಕೆ ಪತ್ರಿಕೆಯ ಪ್ರಕಾಶಕ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶೀನಿವಾಸ ಆಚಾರ್ ಮತ್ತು ಅಪ ಸಂಪಾದಕೀಯ ಬಳಗದ ಸದಸ್ಯ, ಕೃಷಿಕ ಮತ್ತು ಲೇಖಕ ಪಡಾರು ರಾಮಕೃಷ್ಣ ಶಾಸ್ತ್ರಿ ಕೃಷಿರಂಗದ ಪ್ರಸಕ್ತ ಸವಾಲು, ಅಪ ಮೌಲ್ಯವರ್ಧನೆ, ಹಲಸಿನ ಅಭಿವೃದ್ಧಿ ಮತ್ತು ಕೃಷಿ ಯಾಂತ್ರೀಕರಣಕ್ಕೆ ಪ್ರೇರಣೆ ಕೊಡುತ್ತಿರುವ ರೀತಿಯನ್ನು ತಂಡಕ್ಕೆ ತಿಳಿಸಿಕೊಟ್ಟರು.
(ಚಿತ್ರ: 'ಶ್ರೀ' ಪಡ್ರೆ)

Wednesday, November 10, 2010

ಸಿಲಿಕಾನ್ ಸಿಟಿ ನಡುವೆ ಬೆಳೆದುಣ್ಣುವ ಹಸಿರು ಉದ್ಯಮಿ



ಪದ್ಮನಾಭ ಕೃಷಿಕ. ಮೂಲತಃ ಸುಳ್ಯದವರು. ಕಾವ್ಯನಾಮ ಪದ್ಮಾ ಕೋಲ್ಚಾರ್. ಬೆಂಗಳೂರಿನ ಹುಳಿಮಾವಿನಲ್ಲಿ ಕೈತುಂಬಾ ಗಳಿಸಿ ಕೊಡುವ ಉದ್ಯಮ. ಇಷ್ಟಿದ್ದೂ ತನ್ನ ಊಟದ ಬಟ್ಟಲಿನ ಅನ್ನವನ್ನು ತಾನೇ ಬೆಳೆಯಬೇಕೆನ್ನುವ ತುಡಿತ.

ಬೆಂಗಳೂರಿನ ಸಿ.ಕೆ.ಪಾಳ್ಯದಲ್ಲಿ ಪದ್ಮನಾಭರ ಸುಪರ್ದಿಯ ಸುಮಾರು ಒಂದೆಕರೆ ಗದ್ದೆಯಿದೆ. ವರುಷಕ್ಕೆ ಮೂರು ಬೆಳೆ. ಏನಿಲ್ಲವೆಂದರೂ ಐವತ್ತು ಕ್ವಿಂಟಾಲ್ ಹತ್ತಿರ ಇಳುವರಿ. ಕಳೆದ ಒಂಭತ್ತು ವರುಷದಿಂದ ಅಂಗಡಿಯಿಂದ ಊಟಕ್ಕಾಗಿ ಅಕ್ಕಿ ತಂದದ್ದಿಲ್ಲ! ತನಗೆ ಬಳಸಿ ಮಿಕ್ಕಿದ್ದನ್ನು ಸ್ನೇಹಿತರಿಗೆ ಹಂಚುತ್ತಾರೆ. ಪೂರ್ತಿ
ರಾಸಾಯನಿಕ ರಹಿತವಾಗಿ ಬೆಳೆದ ಭತ್ತವಾದ್ದರಿಂದ ಕೇಳಿ ಪಡೆದ ಚಿಕ್ಕ ಗ್ರಾಹಕ ವಲಯವಿದೆ.

ಸಿ.ಕೆ.ಪಾಳ್ಯದ ಭತ್ತದ ಹೊಲದ ಸುತ್ತಮುತ್ತಲಿನ ಕೆಲವೇ ರೈತರು ಭತ್ತದ ಬೇಸಾಯ ಮಾಡುತ್ತಾರೆ. ಹತ್ತಿರದಲ್ಲಿ ವಿಶಾಲ ಕೆರೆಯಿದೆ. ಬೇಸಾಯಕ್ಕಿದು ಜಲನಿಧಿ. ಹೊಲ ನೋಡಿಕೊಳ್ಳಲು ಒಂದು ಕೃಷಿ ಕುಟುಂಬವಿದೆ. ಗೊಬ್ಬರ, ಬೀಜ ನೀಡಿದರೆ ಆಯಿತು. ಮಿಕ್ಕದ್ದೆಲ್ಲಾ ಅವರೇ ನೋಡಿಕೊಳ್ಳುತ್ತಾರೆ. ಇಳುವರಿಯಲ್ಲಿ ಅವರಿಗರ್ಧ, ಇವರಿಗರ್ಧ. ವಾರಕ್ಕೆ ಎರಡೋ, ಮೂರೋ ಸಲ ಹೊಲಕ್ಕೆ ಭೇಟಿ ನೀಡುತ್ತಾರೆ. ಸಮಯವಿದ್ದರೆ ಪ್ರತಿದಿನವೂ!

'ಇಲ್ಲಿ ಸುತ್ತ ಮುತ್ತ ಸಾಕಷ್ಟು ಹಡಿಲು ಭೂಮಿ ಇದೆ. ಕೃಷಿ ಮಾಡುವಷ್ಟು ಫಲವತ್ತದೆ ಇದೆ. ಕೃಷಿ ಮಾಡಲು ಮನಸ್ಸು ಬೇಕಲ್ವಾ' ಎನ್ನುತ್ತಾರೆ. ಭತ್ತದ ಮೂರು ಬೆಳೆಯಲ್ಲಿ ಒಂದು ಬೆಳೆಯನ್ನು ದ್ವಿದಳ ಧಾನ್ಯಕ್ಕೆ ಪರಿವರ್ತಿಸುವ ಯೋಚನೆಯಲ್ಲಿದ್ದಾರೆ.
ಕಾರ್ಪೋರೇಶನ್ ತ್ಯಾಜ್ಯ ತಂದು ಕಾಂಪೋಸ್ಟ್ ಮಾಡಿ ಟೊಮೆಟೋ, ಬಾಳೆ ಬೆಳೆದಿದ್ದರು. 'ನಗರದ ತ್ಯಾಜ್ಯ ಕಾಂಪೋಸ್ಟ್ ಮಾಡಿ ರೈತರಿಗೆ ನೀಡಿ. ಅವರು ತಾಜಾ ತರಕಾರಿ ಬೆಳೆದು ಕೊಡೋದಿಲ್ವೇ. ನಮ್ಮ ಸರಕಾರಿ ಯಂತ್ರಕ್ಕೆ ಇದೆಲ್ಲಾ ಹೇಗೆ ತಿಳೀಬೇಕು' ವಿಷಾದಿಸುತ್ತಾರೆ ಪದ್ಮನಾಭ.

ರಾಜಧಾನಿಯಲ್ಲಿದ್ದು ದೂರದ ಸುಳ್ಯದ ತನ್ನ ಇಪ್ಪತ್ತನಾಲ್ಕು ಎಕರೆ ಕೃಷಿ ಭೂಮಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಹುಳಿಮಾವಿನ ಜನನಿಬಿಡ ಪ್ರದೇಶದಲ್ಲಿ ಇವರದು ಹಸಿರು ಮನೆ. ಮನೆ ಸುತ್ತ ಗಿಡ ಬಳ್ಳಿಗಳು. ಔಷಧೀಯ ಸಸ್ಯಗಳು. ನೂರಕ್ಕೂ ಮಿಕ್ಕಿ ಗುಬ್ಬಚ್ಚಿ ಸಂಸಾರ. ತನ್ನ ವಾಸದ ಮನೆಯ ಕೆಳ ಅಂತಸ್ತನ್ನು ಗುಬ್ಬಚ್ಚಿಗಳಿಗೆ ಮೀಸಲಿಟ್ಟಿದ್ದಾರೆ.
ಉತ್ತಮ ಕೃಷಿ ಲೈಬ್ರರಿಯಿದೆ. ಮಾಹಿತಿಯನ್ನು ರೈತರಿಗೆ ಹಂಚುವುದೆಂದರೆ ಪದ್ಮನಾಭರಿಗೆ ಪ್ರೀತಿ. ಅವರ ಕೈಯಲ್ಲಿರುವ ಬ್ಯಾಗ್ ಮಾಹಿತಿಯ ಕಣಜ. ಹೊಸ ಹೊಸ ಕೃಷಿ ಮಾಹಿತಿ ಸಿಕ್ಕರೆ ಸಾಕು, ಜೆರಾಕ್ಸ್ ಮಾಡಿಟ್ಟುಕೊಂಡು ಹಂಚಿಬಿಡುತ್ತಾರೆ. ರಾಜಧಾನಿಯಲ್ಲಿ ಜರುಗುವ ಎಲ್ಲಾ ಕೃಷಿ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
'ನೋಡ್ರಿ, ನನ್ನ ಮನೆಯ ಗುಬ್ಬಚ್ಚಿಗಳಿಗೂ ನನ್ನ ಹೊಲದ ಅಕ್ಕಿಯೇ ಆಗಬೇಕು. ಅವಕ್ಕೆ ಜಾಗ ಫ್ರಿ, ಫುಡ್ ಫ್ರಿ, ವಾಸಿಸಲು ಬಾಡಿಗೆಯಿಲ್ಲ' ಎನ್ನಲು ಅವರಿಗೆ ಖುಷಿ. ರಾಸಾಯನಿಕ ಸಂಪರ್ಕದಿಂದ ದೂರ. ಪ್ರವಾಸ ಹೋದಾಗ, ನೆಂಟರ ಮನೆಗೆ ಹೋದಾಗ ಹೊಸ ಗಿಡಗಳನ್ನು ತಂದು ಮನೆಯಾವರಣದಲ್ಲಿ ನೆಟ್ಟಲ್ಲಿಗೆ ಸಮಾಧಾನ-ಖುಷಿ. ಗಂಡನ ಆಸಕ್ತಿಗೆ ಪತ್ನಿ ವೀಣಾ ಸ್ಪಂದನ.

ಇವರ ಕೃಷಿ ಮತ್ತು ಕೃಷಿ ತುಡಿತದಲ್ಲಿ ನೋಡುವಂತಹದು, ಕೇಳುವಂತಹುದು ಏನಿಲ್ಲದಿರಬಹುದು. ಆದರೆ ತಾನು ಬೆಳೆದು ಉಣ್ಣುವ ಪರಿಕಲ್ಪನೆ. ಪರಿಸ್ನೇಹಿ ಜೀವನ. ಇಂದು ಭತ್ತದ ಗದ್ದೆಗಳಿರುವಲ್ಲಿ ಅಪಾರ್ಟ್ ಮೆಂಟ್ಗಳು ಎದ್ದಿವೆ, ಒತ್ತುವರಿ ಆಗಿದೆ, ಮಾರ್ಗ ಅಗಲೀಕರಣ ನಡೆಯತ್ತಿದೆ. ಊಟದ ಬಟ್ಟಲು ಬರಿದಾಗುವ ದಿವಸಗಳಲ್ಲಿ ಪದ್ಮನಾಭರು ನಗರದ ಮಧ್ಯೆ ಇದ್ದುಕೊಂಡು ಭತ್ತದ ಬೇಸಾಯ ಮಾಡುತ್ತಿರುವುದು ನಿಜಕ್ಕೂ ಬೆನ್ನು ತಟ್ಟಬೇಕಾದ ವಿಚಾರ.

(ಪದ್ಮನಾಭ : 080-26581454)

Saturday, November 6, 2010

ರಾಚಿ ಬರುವ 'ಕಂಗ್ರಾಟ್ಸ್'ಗಳು!

ಸುಳ್ಯ ಸನಿಹದ ಕಲ್ಲುಗುಂಡಿಯಲ್ಲಿ ನಿನ್ನೆ (ನ.6) ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ನೇತೃತ್ವದಲ್ಲಿ 'ವಿಂಶತಿ ಯಕ್ಷೊತ್ಸವ' ಜರುಗಿತು. ಯಕ್ಷಗಾನ ಕಲಾವಿದರಿಗೆ, ವಿದ್ವಾಂಸರಿಗೆ, ವೈದಿಕರಿಗೆ ಪ್ರಶಸ್ತಿ ಪ್ರದಾನ. ಸಂಮಾನ, ಗೌರವಾರ್ಪಣೆ. ವೇದಿಕೆಯಲ್ಲಿ ಪೂಜನೀಯ ಯತಿಗಳ ದಿವ್ಯ ಸಾನ್ನಿಧ್ಯ. ಗಣ್ಯರ ಉಪಸ್ಥಿತಿ. ಇದಕ್ಕೆ ಸಾಕ್ಷಿಯಾದ 'ಕಿಕ್ಕಿರಿದ' ಸಭಾಸದರು.ಬಹಳ ಅರ್ಥಪೂರ್ಣವಾಗಿ, ಅಷ್ಟೇ ಗೌರವಯುತವಾಗಿ ನಡೆದ ಸಮಾರಂಭ.

ಪ್ರಶಸ್ತಿ ಪುರಸ್ಕೃತರಿಗೆ ಪ್ರತ್ಯಪ್ರತ್ಯೇಕವಾದ ಆದರಾತಿಥ್ಯ. ಗೌರವ ಸಮರ್ಪಣೆ. ಶಾಲು, ಹಾರದಿಂದ ತೊಡಗಿ, 'ತುಂಬು ಧನ'ದೊಂದಿಗೆ ಪ್ರಶಸ್ತಿ. ಕಲಾವಿದರಲ್ಲಿ ಸಾರ್ಥಕ ಭಾವ. ವೈದಿಕರಲ್ಲಿ ಕೃತಾರ್ಥ ಭಾವ. ವಿದ್ವಾಂಸರಿಗೆ ಧನ್ಯತಾಭಾವ. ಸಾವಿರಗಟ್ಟಲೆ ಅಭಿಮಾನಿಗಳ ಮುಂದೆ ಪ್ರಶಸ್ತಿ ಸ್ವೀಕರಿಸಿದಾಗಿನ ಕ್ಷಣವನ್ನು ಡಾ.ಎಂ.ಪ್ರಭಾಕರ ಜೋಷಿಯವರು ಕಟ್ಟಿಕೊಟ್ಟದ್ದು ಹೀಗೆ - ಇದೊಂದು ಯಕ್ಷಗಾನಕ್ಕೆ ಹಬ್ಬ. ಈ ಕ್ಷಣವನ್ನು ಮಾತಿನಲ್ಲಿ ಹೇಳುವುದು ಕಷ್ಟ. ಅದು ಅನುಭವಕ್ಕೆ ನಿಲುಕುವಂತಹುದು. ನಿಜಾರ್ಥದ ಪುರಸ್ಕಾರಗಳಿವು'.ಯಕ್ಷಗಾನ ಕಂಡ 'ಮಹೋನ್ನತ' ಸಮಾರಂಭ.

ಇಲ್ಲಿ ಕಲಾವಿದರ ಬಗ್ಗೆ ಆದರವಿದೆ, ಪ್ರೀತಿಯಿದೆ. ಕಲೆಯ ಬಗ್ಗೆ ಆರಾಧನೆಯಿದೆ. ಸಂಘಟಕರು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕಲಾಪಗಳು ನಡೆಯುತ್ತಲೇ ಸಾಗುತ್ತವೆ. ಈ ಯಕ್ಷಗಾನೋತ್ಸವದಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸುತ್ತಾರೆ. ಸಂಘಟಕರ ಸದ್ದುದ್ದೇಶಕ್ಕೆ 'ಮಾನ' ತಂದುಕೊಟ್ಟವರು ಕಲಾಭಿಮಾನಿಗಳು. ಬೆಳಿಗ್ಗೆ ಹತ್ತಕ್ಕೆ ಏನಿಲ್ಲವೆಂದರೂ ಐದು ಸಾವಿರ ಮೀರಿದ ಪ್ರೇಕ್ಷಕರು ವಿಂಶತಿ ಯಕ್ಷೊತ್ಸವಕ್ಕೆ ಸಾಕ್ಷಿಯಾದರು.

ವೇದಿಕೆಯ ನೇಪತ್ಯದಲ್ಲಿ ಯಕ್ಷಗಾನ ವೇಷಗಳ ಭಾವಚಿತ್ರಗಳ ಪ್ರದರ್ಶನ, ಭಾಗವಹಿಸಿದ ಎಲ್ಲರಿಗೂ ಅನ್ನ ದಾಸೋಹ, ಆಸನ ವ್ಯವಸ್ಥೆ.. ಹೀಗೆ ಒಂದೊಂದು ವಿಭಾಗದಲ್ಲಿ ಅಚ್ಚುಕಟ್ಟು. ಇದೊಂದು ಕಲೋತ್ಸವ. ಸಂಘಟಕರ ಸಾಹಸಕ್ಕೆ ಅಭಿನಂದನೆ. ಮುಂದೆಯೂ ಯಕ್ಷಗಾನಕ್ಕೆ ಇಂತಹ ಮಹೋತ್ಸವ ಭಾಗ್ಯ ಸಿಗಲಿ.

ಸ್ವಲ್ಪ ವಿಷಯಾಂತರ ಮಾಡೋಣ. ಕಳೆದ ವಾರ ಮೂಡಿಗೆರೆ ಸನಿಹದ ದೇವವೃಂದ ಎಂಬ 'ಮೊಬೈಲ್ ನೆಟ್ವರ್ಕ್' ಸಿಕ್ಕದ ಹಳ್ಳಿಯಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಕನ್ನಾಡಿನ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ನಗರದ ಮಧ್ಯದಲ್ಲಿ ನಿಂತು ಹಳ್ಳಿಯ ಕುರಿತು ಮಾತನಾಡುವ, ವಿಶ್ಲೇಷಿಸುವ ಈ ದಿನಗಳಲ್ಲಿ; ಹಳ್ಳಿಯಲ್ಲೇ ಒಂದು ವಾರ ನಿಂತು ಹಳ್ಳಿಗಳ ಬಗ್ಗೆ ಬರೆಯಲು ಲೇಖನಿ ಕೊಟ್ಟವರು ಧಾರವಾಡದ ಕೃಷಿ ಮಾಧ್ಯಮ ಕೇಂದ್ರ.

ಈ ಮಧ್ಯೆ ಮರವನ್ನು ಏರಿಯೋ, ಗುಡ್ಡವನ್ನು ಹತ್ತಿಯೋ ನೆಟ್ವರ್ಕ್ ಸಾಹಸ ಮಾಡಿ ಮನೆಯನ್ನು ಸಂಪರ್ಕಿಸುತ್ತಿದ್ದೆ. ಕೊನೆಯ ಎರಡು ದಿನಗಳಲ್ಲಿ ಅದಕ್ಕೂ ಕುತ್ತು! ಸರಿ, ಕಾರ್ಯಾಗಾರ ಮುಗಿಸಿ ಇನ್ನೇನು ನೆಟ್ವರ್ಕ್ ವ್ಯಾಪ್ತಿಯೊಳಗೆ ಬಂದದ್ದೇ ತಡ, ಅಭಿನಂದನೆಗಳ ಎಸ್.ಎಂ.ಎಸ್.ಗಳು! ಆಶ್ಚರ್ಯವಾಯಿತು. ಆಮೇಲೆ ತಿಳಿಯಿತು, ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿವು 'ಗ್ರಾಮೀಣ ಪತ್ರಿಕೋದ್ಯಮ' ವಿಭಾಗದಲ್ಲಿ ನನಗೆ ಪ್ರಶಸ್ತಿ ಘೋಷಿಸಿತ್ತು. ಅನಿರೀಕ್ಷಿತವಾಗಿ ಬಂದ ಪುರಸ್ಕಾರಕ್ಕೆ ಆಶ್ಚರ್ಯವೂ, ಸಂತೋಷವೂ ಆಯಿತು.

ಇತ್ತ ಕನ್ನಾಡಿನ ಘನ ಸರಕಾರವು ರಾಜ್ಯೋತ್ಸವ ಪ್ರಶಸಿಯ ಅಂತಿಮ ಎರಡು ಪಟ್ಟಿಯನ್ನು ಸಿದ್ಧಪಡಿಸುವ ಹೊತ್ತಿಗೆ ರಾಡಿಯಲ್ಲಿ ಮಿಂದೆದ್ದಿತ್ತು! ಮಾಧ್ಯಮಗಳಲ್ಲಿ, ವಾಹಿನಿಗಳಲ್ಲಿ 'ಪ್ರಶಸ್ತಿ ಮಾರಾಟ, ಇದಕ್ಕಾಗಿ ಹುಟ್ಟಿಕೊಂಡ ಮಧ್ಯವರ್ತಿ'ಗಳ ಕರಾಮತ್ತುಗಳ ಬಗ್ಗೆ ಅವಿರತ ಸ್ಟೋರಿಗಳು ಬಿತ್ತರವಾಗುತ್ತಲೇ ಇದ್ದುವು. ಓರ್ವ ಪ್ರಶಸ್ತಿ ಪಡೆಯಲು ಅರ್ಹತೆಯೊಂದಿದ್ದರೆ ಸಾಲದು, ವಶೀಲಿಯೂ ಬೇಕಾಗುತ್ತದೆ ಎಂಬುದನ್ನು ಹಣೆಗೆ ಅಂಟಿಸಿಕೊಳ್ಳುವಷ್ಟು ಬೀದಿರಂಪವಾಗಿತ್ತು.

ಜಿಲ್ಲಾ ಪುರಸ್ಕಾರವು ಬಂದಾಗ ಎಸ್.ಎಂ.ಎಸ್.ಗಳು, ಕೈಕುಲುಕಾಟ, ಪತ್ರ ಮೂಲಕ.. ಹೀಗೆ ವಿವಿಧ ಸ್ತರದಲ್ಲಿ 'ಕಂಗ್ರಾಟ್ಸ್'ಗಳು ವಿನಿಮಯವಾಗುವುದು ಸಹಜ. ಇದರಲ್ಲಿ ಬಹುಪಾಲು 'ರಸಭಾವ ರಹಿತ' ಶುಷ್ಕ ಕಂಗ್ರಾಟ್ಸ್ಗಳೇ ಹೆಚ್ಚು! ಈ ವಿಚಾರವು ವಿನಿಮಯ ಮಾಡಿಕೊಳ್ಳುವವನಿಗೂ ಗೊತ್ತು, ಪಡೆಯುವವನಿಗೂ ಗೊತ್ತಿರುವುದು ಇದರ ಗಮ್ಮತ್ತು!

ನಿನ್ನೆ ಕಲ್ಲುಗುಂಡಿಯ ಯಕ್ಷೊತ್ಸವಕ್ಕೆ ಹೋಗಿದ್ದಾಗಲೂ ಈ 'ಕಂಗ್ರಾಟ್'ಗಳು ರಾಚಿಕೊಂಡು ಬಂದುವು. 'ಖುಷಿಯಾಯಿತು ಮಾರಾಯ್ರೆ. ನೀವು ಇದಕ್ಕೆ ಯಾರನ್ನು ಹಿಡಿದಿರಿ' ಒಬ್ಬರ ಪ್ರಶ್ನೆ. 'ಬಹುಶಃ ನೀವು ವಿ.ಎಸ್.ಆಚಾರ್ಯರರ ಇನ್ಫ್ಲೆನ್ಸ್ ಮಾಡಿದಿರಾ?', 'ನೀವು ಎಷ್ಟು ಕೊಟ್ರಿ?', 'ಮಾರಾಯ್ರೆ, ನಾನು ಎಷ್ಟು ವರ್ಷದಿಂದ ಟ್ರೈ ಮಾಡ್ತೇನೆ ಗೊತ್ತಿತ್ತಾ'.. ಹೀಗೆ ವಿವಿಧ 'ರಸ'ಪ್ರಶ್ನೆಗಳು! ಒಬ್ಬ ಕಲಾವಿದರಂತೂ ಹುಳಿ ಮುಖದಲ್ಲಿ ಬಲವಂತದ ನಗೆಯನ್ನು ಅರಳಿಸುತ್ತಾ, 'ಓ.. ಕಂಗ್ರಾಟ್ಸ್.. ನಿಮಗೆ ಆಗಾಗ ಬರ್ತಾ ಇರ್ತದಲ್ಲಾ. ತೊಂದರೆಯಿಲ್ಲ ಮಾರಾಯ್ರೆ. ನೀವು ಆದೀತು'! ಅನ್ನಬೇಕೆ. ಅವರ ಮನಸ್ಸಿನ ಕೊಳಕಿಗೆ ನನ್ನ ಪುರಸ್ಕಾರ ಬಲಿಯಾಗಿಬಿಟ್ಟಿತು! ತಿಂಗಳ ಹಿಂದೆ ಲೇಖನವೊಂದಕ್ಕೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುವುದು ಪತ್ರಿಕೆಯಲ್ಲಿ ವರದಿಯಾಗಿತ್ತು. ಬಹುಶಃ ಅದನ್ನು ಉಲ್ಲೇಖಿಸಿ ಈ ಕಲಾವಿದ ಮಹಾಶಯರು ಹೇಳಿರಬೇಕು.

ನಾಡಿನ ರಾಜಕೀಯಗಳು ಸೃಷ್ಟಿಸಿದ 'ಕೊಳಕು ಸಾಮಾಜಿಕ ವ್ಯವಸ್ಥೆ'ಯಿಂದಾಗಿ ಪ್ರಶಸ್ತಿಗಳೂ ಮೌಲ್ಯ ಕಳಿದುಕೊಳ್ಳುತ್ತಿವೆ. ಜನರು ಸಂಶಯದಿಂದ ನೋಡುತ್ತಿದ್ದಾರೆ. ಯಾವುದೇ ವಶೀಲಿ ಇಲ್ಲದೆಯೂ ನಿರಾಯಾಸವಾಗಿ ಪುರಸ್ಕಾರವನ್ನು ಸ್ವೀಕರಿಸೋಣವೆಂದರೆ ಇಂತಹ 'ಸಂಶಯ' ಭೂತ. ಯಾವಾಗ ಸಾಮಾಜಿಕವಾಗಿ ಪ್ರಶಸ್ತಿಗಳ ಬಗ್ಗೆ ಜನರ ಭಾವನೆ ಹೀಗಿರುತ್ತೋ, ಆಗ ಕೊಡಲ್ಪಡುವ ಎಲ್ಲಾ ಸರಕಾರಿ ಪ್ರಶಸ್ತಿಗಳ ಹಿಂದೆ 'ಗುಮಾನಿ ಬೀಜ' ಇದ್ದೇ ಇರುತ್ತದೆ.

ಈ ಹಿನ್ನೆಲೆಯಲ್ಲಿ ಲೇಖನಾರಂಭದಲ್ಲಿ ಉಲ್ಲೇಖಿಸಿದ ಸಂಪಾಜೆಯ ಯಕ್ಷೊತ್ಸವದ ಪುರಸ್ಕಾರ ಇದೆಯಲ್ಲಾ, ಅದು ನಿಜಕ್ಕೂ ರಾಜ್ಯವಲ್ಲ, ರಾಷ್ಟ್ರ ಪುರಸ್ಕಾರಕ್ಕಿಂತಲೂ ಹಿರಿದು.

Wednesday, November 3, 2010

ದೇವವೃಂದದಲ್ಲಿ ಕಾಮ್ ದಶಮಾನ ವೈಭವ



`ಕೃಷಿಕನ ಬದುಕಿನಲ್ಲಿ ಸವಾಲು ನಿತ್ಯ ಎದುರಾಗುತ್ತಿದೆ. ಈ ಸವಾಲುಗಳ ಮಧ್ಯೆ ಪರ್ಯಾಯ ಕೃಷಿಯ ಚಿಂತನೆಗಳು, ಯಾಂತ್ರೀಕರಣದತ್ತ ನೋಟ, ಸಮಸ್ಯೆಗಳನ್ನು ಹಗರು ಮಾಡಿಕೊಳ್ಳುವ ಉಪಾಧಿಗಳತ್ತ ನಿತ್ಯ ಹುಡುಕಾಟ ನಡೆಯುತ್ತಲೇ ಇದೆ. ಆದರೆ ಸಮಸ್ಯೆಯಿಂದ ಪಾರಾಗಬಲ್ಲ ಎಲ್ಲಾ ದಾರಿಗಳು ಮುಚ್ಚಿರುವುದು, ನಮ್ಮ ಆಡಳಿತದ ತಪ್ಪು ನೀತಿಗಳಿಂದಾಗಿ. ಕೃಷಿಕನ ಸಮಸ್ಯೆಯನ್ನು ಎತ್ತಿ ಹಿಡಿದು ಪರಿಹಾರ ಕಂಡುಕೊಳ್ಳುವಲ್ಲಿ ಇವುಗಳು ಸೋತಿವೆ. ಯಾವಾಗ ಸರಕಾರಕ್ಕೆ ಕೃಷಿ ಉಳಿಯಬೆಕು ಎಂಬ ಕಾಳಜಿ ದೂರವಾಯಿತೋ, ಆಗ ಮಾಧ್ಯಮ ಎದುರು ನಿಲ್ಲಲೇ ಬೇಕು. ಮಾಧ್ಯಮಗಳಿಗೂ ಇತಿಮಿತಿಗಳಿವೆ. ಹಾಗೆಂತ ಕೈಚೆಲ್ಲಿ ಕೂಡ್ರುವ ಕಾಲವಲ್ಲ' ಎಂದು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಹೇಳಿದರು.
ಅವರು ಮೂಡಿಗೆರೆ ಸನಿಹದ ದೇವವೃಂದದಲ್ಲಿ ಕೃಷಿ ಮಾಧ್ಯಮ ಕೇಂದ್ರದ ದಶಮಾನ ಸಮಾರಂಭದಲ್ಲಿ ಮಾಧ್ಯಮಗಳ ಪಾತ್ರವನ್ನು ಬಿಚ್ಚಿಟ್ಟರು. `ರೈತನ ಬಗ್ಗೆ ಮಾಧ್ಯಮದಲ್ಲಿ ಬೆಳಕು ಕಾಣುವ ಯಶೋಗಾಥೆಗಳು ಅವನ ಬದುಕನ್ನು ಎತ್ತರಕ್ಕೆ ಏರಿಸಲು ಸಹಕಾರಿ' ಎಂದ ಅಥಣಿಯ ಎಸ್.ಎಂ.ಪಾಟೀಲ್, 'ಪ್ರಕೃತ ಕಾಲಮಾನದ ಕೃಷಿಕ, ಕೃಷಿರಂಗವನ್ನು ಗಮನಿಸಿದಾಗ ಭವಿಷ್ಯ ನಿರಾಶದಾಯಕವಾಗಿ ಕಾಣುತ್ತಿದೆ. ಈ ದಿಸೆಯಲ್ಲಿ ಕೃಷಿಕನ ಆಸರೆಗೆ ಮಾಧ್ಯಮಗಳು ಬರಬೇಕು' ಎಂಬ ಆಶಯ ವ್ಯಕ್ತಪಡಿಸಿದರು ಯಡೇಹಳ್ಳಿಯ ಹಿರಿಯ ಕೃಷಿಕ ವೈ.ಸಿ.ರುದ್ರಪ್ಪ. ಊರಿನ ಹಿರಿಯರಾದ ಡಿ.ಬಿ.ಸುಬ್ಬೇಗೌಡರು ಸಭಾಧ್ಯಕ್ಷತೆ ವಹಿಸಿದ್ದರು. 'ರೈತನು ದೇಶದ ಬೆನ್ನೆಲುಬು ಎನ್ನುವ ಸರಕಾರದಿಂದ ರೈತರ ಏಳಿಗೆ ಸಾಧ್ಯವಿಲ್ಲ. ಬೆಳೆದರೆ ಬೆಲೆಯಿಲ್ಲ, ಬೆಲೆಯಿದ್ದರೆ ಬೆಳೆಯಿಲ್ಲ. ವ್ಯತಿರಿಕ್ತವಾದ ಹವಾಮಾನಗಳು ಕೃಷಿಕನ ಬದುಕನ್ನು ಹೈರಾಣ ಮಾಡುತ್ತಿವೆ.' ಎಂದರು.
ಕಾಮ್ ದಶಮಾನೋತ್ಸವ ಪುರಸ್ಕಾರ : ಹೆಚ್.ಜೆ.ಪದ್ಮರಾಜ್, ಎಡ್ವರ್ಡ ರೆಬೆಲ್ಲೋ, ಕೆ.ನಾರಾಯಣ ಸ್ವಾಮಿ, ಮಹೇಶ್ ದೇಶಪಾಂಡೆ, ರೂಪೇಶ್ ಕಾಮತ್ - ಇವರಿಗೆ ದಶಮಾನೋತ್ಸವ ಪುರಸ್ಕಾರ ನೀಡಿ ಸಂಮಾನಿಸಲಾಯಿತು.
ಪುಸ್ತಕ ಬಿಡುಗಡೆ: ವೇದಿಕೆಯಲ್ಲಿ ಕೆಸುವಿನ ಎಲೆಯ ಎರಡು ಚಿಕ್ಕ ರಚನೆಗಳಿದ್ದುವು. ಎಲ್ಲರಲ್ಲೂ ಕುತೂಹಲ. ವೇದಿಕೆಯ ಗಣ್ಯರು ಅದನ್ನು ಬಿಡಿಸಿ, ಅದರೊಳಗೆ ಅವಿತಿದ್ದ ಹೊಸ ಪುಸ್ತಕಗಳನ್ನು ತೆಗೆದು ಅನಾವರಣಗೊಳಿಸಿದರು. * ಅನುಸೂಯ ಶರ್ಮಾ ಇವರು ಬರೆದ 'ಹಿತ್ತಿಲು-ಕೈತೋಟಕ್ಕೊಂದು ಕೈಪಿಡಿ' ಮತ್ತು ಮಲ್ಲಿಕಾರ್ಜುನ ಹೊಸಪಾಳ್ಯ ಅವರ 'ಚೌಳು ನೆಲದ ಬಂಗಾರ: ಮರೆಯಾಗುತ್ತಿರುವ ಬರದ ನಾಡಿನ ಭತ್ತವೈವಿಧ್ಯ' - ಬಿಡುಗಡೆಗೊಂಡ ಕೃತಿಗಳು.
ಸಿರಿಧಾನ್ಯ ಬಹುಮಾನ: ಸಿರಿಧಾನ್ಯಗಳನ್ನು ಕುರಿತು ಕಾಮ್ ಬಳಗದವರು ಬರೆದಿರುವ ಉತ್ತಮ ಕನ್ನಡ ಲೇಖನಗಳಿಗೆ 'ಮಿಲೆಟ್ ನೆಟ್ ವರ್ಕ್ ಆಫ್ ಇಂಡಿಯಾ' (ಮಿನಿ) ನೀಡುತ್ತಿರುವ ಮೂರು ಬಹುಮಾನಗಳ ವಿತರಣೆ. ನಾ. ಕಾರಂತ ಪೆರಾಜೆ (ಪ್ರಥಮ ಪುರಸ್ಕಾರ), ಗಣಪತಿ ಭಟ್ ಹಾರೋಹಳ್ಳಿ (ದ್ವಿತೀಯ) ಮತ್ತು ರವಿ ವಿಶ್ವನಾಥಪುರ (ತೃತೀಯ ಪುರಸ್ಕಾರ)`
ಕಾಮ್ ಫೆಲೋ'ಗಳ ಕೆಲವು ಅನಿಸಿಕೆ (2009-10) :
ರಮಾ ಅರಕಲಗೂಡು - ಕಾಮ್ ತರಬೇತಿ ಪೂರೈಸಲೇಬೇಕೆಂಬ ಹಠವಿತ್ತು. ಗ್ರಾಮೀಣ ಮಹಿಳೆಯರ ಸಾಧನೆ ಕುರಿತು ಹೆಚ್ಚು ಬೆಳಕು ಹಾಕಲು ಕಾಮ್ ನೆರವಾಯಿತು. ಬರೆಹಗಳ ಕುರಿತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದೆ. ನನ್ನೊಳಗಿದ್ದ ಬರೆಹದ ತುಡಿತಕ್ಕೆ ಕಾಮ್ ರೂಪ ಕೊಟ್ಟಿತು.
ಕೆ.ಶಶಿಧರ ಹೆಮ್ಮಣ್ಣ - ನನ್ನೊಳಗೆ ಹುದುಗಿದ್ದ 'ಪತ್ರಕರ್ತನ ವಿಕಾರ'ಗಳನ್ನು ಕಾಮ್ ಹೊಸಕಿ ಹಾಕಿತು.
ಕೆ.ವಿ.ಸರಸ್ವತಿ - ಕೃಷಿ ಮತ್ತು ಬರವಣಿಗೆ ನನಗೆ ಹೊಸತು, ಆಕಸ್ಮಿಕ. ಸರಕಾರಿ ವೃತ್ತಿಯಲ್ಲಿದ್ದ ನಾನು ನಿವೃತ್ತಳಾದ ಬಳಿಕ ಕೃಷಿಕಳಾದೆ. ಕೃಷಿ ಲೇಖನಗಳನ್ನು ಬರೆಯಬೇಕೆಂಬ ಆಸೆಯಿತ್ತು. ಕೃ.ಮಾ.ಕೇಂದ್ರವು ನನ್ನ ಆಸೆಯನ್ನು ಈಡೇರಿಸಿದೆ.
ಸುರೇಶ ನಿ.ಧಾರವಾಡಕರ - ಮಗುವೊಂದನ್ನು ನೋಡಿಕೊಳ್ಳುವಂತೆ ನೋಡಿಕೊಂಡರು. ಅಂಬೆಗಾಲಿಕ್ಕುವಂತೆ, ನಡೆಯುವಂತೆ ಕಲಿಸಿತು. ಲೇಖನಿ ಕೊಟ್ಟು ಬರೆಸಿತು. ಒಂದು ವರುಷದ ತರಬೇತಿಯಲ್ಲಿ ನಾನಿಷ್ಟು ಪರಿವರ್ತನೆಯಾಗುತ್ತೇನೆಂದು ಭಾವಿಸಿರಲಿಲ್ಲ. ನಾನು ಮತ್ತು ನನ್ನ ಕುಟುಂಬದ ಎಲ್ಲಾ ಸದಸ್ಯರು ಕೃ.ಮಾ.ಕೇಂದ್ರಕ್ಕೆ ಆಭಾರಿ.
ಸರವು ಸದಾನಂದ - ಮೊದಲಿದ್ದ ಬರಹಗಾರ ಈಗ ಜಾಗೃತನಾಗಿದ್ದಾನೆ. ತಪ್ಪನ್ನು ತಿದ್ದಿಕೊಂಡಿದ್ದೇನೆ.
ಸುಬ್ರಾಯ ಮ. ಹೆಗಡೆ - ಪತ್ರಿಕೋದ್ಯಮದ ಅ,ಆ,ಇ.ಈ.. ಕಲಿತುಕೊಂಡೆ.
ಮಧುಮತಿ ದೇ.ಪಾಟೀಲ - ಪತ್ರಕರ್ತೆಯಾಗಬೇಕೆಂಬ ಹಂಬಲವಿತ್ತು. ವಾಟರ್ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಯಶೋಗಾಥೆಗಳನ್ನು ಬರೆಯಬೇಕೆಂಬ ನನ್ನ ಆಸೆ ಈಗ ಈಡೇರಿದೆ.
'ಅಡಿಕೆ ಪತ್ರಿಕೆ' ಬಹುಮಾನ
ಈ ಸಂದರ್ಭದಲ್ಲಿ ಜಿ.ಗಣಪತಿ ಭಟ್, ಲೀಲಾ ನಾ. ಕೌಜಗೇರಿ, ಶಶಿಧರ ಸಕ್ಕರೆಮಕ್ಕಿ, ಪ್ರಕಾಶ್ ಭಟ್ ಕರ್ಕಿ, ಕೆ.ಎಸ್.ಪೂರ್ಣಿಮಾ, ರವಿಶಂಕರ ದೊಡ್ಡಮಾಣಿ - ಇವರಿಗೆ 'ಅಡಿಕೆ ಪತ್ರಿಕೆ' ಬಹುಮಾನ ನೀಡಲಾಯಿತು. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಶ್ರೀ ಪಡ್ರೆ ಬಹುಮಾನ ವಿತರಿಸಿದರು.
'ಕೃಷಿಕ' ಪತ್ರಿಕೆಯ ಪ್ರಕಾಶಕ ಎಂ.ಜೆ.ದಿನೇಶ್ ಅವರಿಂದ ಸ್ವಾಗತ. ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು ಅವರಿದ ಪ್ರಾಸ್ತಾವಿಕ ಮಾತು. ಜಿ.ಶಿವಣ್ಣ ವಂದನಾರ್ಪಣೆ. ಕೆ.ಎಸ್.ಪೂರ್ಣಿಮಾ - ನಿರ್ವಹಣೆ.

ಮನದ ಮಾತು:
ಅಡ್ಡೂರು ಕೃಷ್ಣ ರಾವ್ - ಮಾಹಿತಿಗಳು ನನ್ನೊಳಗೆ ಬೆಚ್ಚಗೆ ಕುಳಿತಿರಬಾರದು. ಅದು ಇನ್ನೊಬ್ಬರಿಗೆ ಹಂಚಲ್ಪಡಬೇಕು ಎಂಬ ಉದ್ದೇಶದಿಂದ ಕಾಮ್ ಹಾದಿಯಲ್ಲಿ ಸಾಗಿ ಬಂದಿದ್ದೇನೆ. ನಾನು ನಂಬಿದ್ದನ್ನೇ ನಂಬಿದವರು ಇಲ್ಲಿ ಸಿಗ್ತಾರೆ ಎಂಬ ಉದ್ದೇಶದಿಂದ ಬಂದಿದ್ದೇನೆ. ನನಗೆ ವಯಸ್ಸಾಗ್ತಾ ಇದೆ. ನನಗಿಂತ ಕಿರಿಯರ ಉತ್ಸಾಹ ನೋಡಿ, ನನಗೂ ಉತ್ಸಾಹ ಮೂಡಿಸಿಕೊಳ್ಳುವ ಉದ್ದೇಶದಿಂದ ಬಂದಿದ್ದೇನೆ.
ಪಡಾರು ರಾಮಕೃಷ್ಣ ಶಾಸ್ತ್ರಿ - ಅಡಿಕೆ ಪತ್ರಿಕೆಯು ಕೃಷಿಕರ ಕೈಗೆ ಲೇಖನಿ ನೀಡಿತು. ಅದೇ ದಾರಿಯನ್ನು ವಿಸ್ತರಿಸುತ್ತಿದ್ದಾರೆ ಕಾಮ್ ಮುಖ್ಯಸ್ಥರಾದ ಅನಿತಾ ಪೈಲೂರು ಮತ್ತು ಶಿವರಾಂ ಪೈಲೂರು. ಹಳ್ಳಿ ಮಂದಿಗೆ ಲೇಖನಿ ನೀಡಿ ನಗರವಾಸಿಗಳ ಕಣ್ತೆರೆಸುತ್ತಿದ್ದಾರೆ. ಹೆಚ್.ಎನ್.ಆನಂದ್ : ಓರ್ವ ಯಶಸ್ವೀ ಪುರಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎಂಬ ಮಾತು ಜನಜನಿತ. ಆದರೆ ಇಲ್ಲಿ ಓರ್ವ ಮಹಿಳೆಯ (ಅನಿತಾ ಪೈಲೂರು) ಹಿಂದೆ ಪುರುಷನೊಬ್ಬನ (ಶಿವರಾಂ ಪೈಲೂರು) ಪ್ರೋತ್ಸಾಹವಿದ್ದರೆ ಅದು ಆ ಮಹಿಳೆಯ ಯಶಸ್ಸಿಗೆ ಕಾರಣವಾಗುತ್ತದೆ ಎಂಬುದು ಇಲ್ಲಿ ಕಾಣುವ ಸತ್ಯ.
ಕಾಮ್ ಚಟುವಟಿಕೆಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದೆ, ನೇಪಥ್ಯದಲ್ಲೇ ಕಲಾಪಗಳನ್ನು ಮುನ್ನಡೆಸುತ್ತಿರುವ ಶಿವರಾಂ ದಂಪತಿಗಳನ್ನು ಹೆಚ್.ಎನ್. ಆನಂದ್ ಅವರು ವೇದಿಕೆಯ ಮುಂಭಾಗಕ್ಕೆ ಬಲವಂತದಿಂದ ಆಹ್ವಾನಿಸಿ ಬೆನ್ನುತಟ್ಟಿದ ಆ ಕ್ಷಣದಲ್ಲಿ ಪ್ರೋತ್ಸಾಹದ ಚಪ್ಪಾಳೆ ಬಂದರೂ, ಸಭಾಮಧ್ಯದಲ್ಲಿದ್ದ ಅನಿತಾ ಅವರ ಅಮ್ಮ - ಕರುಳಕುಡಿಯ ಕಾಯಕಕ್ಕೆ ತಲೆದೂಗಿ - ಭಾವುಕರಾದರು. ಅವರಿಗರಿಯದಂತೆ ಒಂದೆರಡು ಕಣ್ಣೀರಹನಿ ಜಾರಿದುದು ಯಾರಿಗೂ ತಿಳಿಯಲೇ ಇಲ್ಲ.
'ಭಾವನೆಗಳಿಗೂ ಭಾಷೆಯಿದೆ' ಎಂಬುದು ಪ್ರತೀ ಕಾಮ್ ಶಿಬಿರಗಳಲ್ಲಿ ಎದ್ದು ಕಾಣುವ ಅಂಶ. ದಿನೇಶ್, ಜಯರಾಂ ದೇವವೃಂದ, ತೀರ್ಥಮಲ್ಲೇಶ್ ಮತ್ತು ಊರಿನ ಸಮಾನ ಮನಸ್ಕರ ನೇಪಥ್ಯ ವ್ಯವಸ್ಥೆಗಳು ಶಿಬಿರ ಯಶಸ್ಸಿನ ಹಿಂದಿನ ಗುಟ್ಟು.