ಅಂದು ಸುಳ್ಯದ ಸ್ನೇಹ ಶಾಲೆಯಲ್ಲಿ ಶಿಕ್ಷಕ ದಿನಾಚರಣೆ. ಶಾಲೆಗಂದು ರಜೆಯಿಲ್ಲ! ವೇದಿಕೆಯಲ್ಲಿ ಶಿಕ್ಷಕ ವೃಂದದವರು ಆಸೀನರಾಗಿದ್ದಾರೆ. ವಿದ್ಯಾರ್ಥಿನಿಯರು ಆರತಿ ಎತ್ತಿ, ಪುಷ್ಪ ನೀಡಿ, ಅರಸಿನ-ಕುಂಕುಮ ಹಚ್ಚಿ ವಂದಿಸಿದರು. ಹೆತ್ತವರೂ ಕೈಜೋಡಿಸಿದರು. ಶಾಲಾಡಳಿತದಿಂದ ಎಲ್ಲಾ ಶಿಕ್ಷಕರಿಗೂ ಪುಸ್ತಕದ ಉಡುಗೊರೆ. ಅತಿಥಿಗಳಿಂದ ಗುರು-ಶಿಷ್ಯ ಸಂಬಂಧಗಳ ನೆನಪುಗಳು. ಈ ಮಾಹಿತಿಯನ್ನು ವಾಟ್ಸಾಪ್ಪಿನಲ್ಲಿ ಹಂಚಿಕೊಂಡರು, ಶಾಲೆಯ ಅಧ್ಯಕ್ಷರಾದ ಡಾ.ಚಂದ್ರಶೇಖರ ದಾಮ್ಲೆ. ಉತ್ತಮ ಪರಂಪರೆಯನ್ನು ಸ್ನೇಹ ಶಾಲೆಯ ಕಾರ್ಯಕ್ರಮ ನೆನಪಿಸಿತು.
ಪುತ್ತೂರಿನ ವಿವೇಕಾನಂದ ಕಾಲೇಜಿನ ವಿವಿಧ ವಿಭಾಗಗಳು ಗುರುವಂದನೆ ಕಲಾಪಗಳನ್ನು ಆಚರಿಸಿದ್ದುವು. ಸ್ನೇತಕೋತ್ತರ ಪತ್ರಿಕೋದ್ಯಮ ವಿಭಾಗದ ಆಚರಣೆಯಲ್ಲಿ ನಾನೂ ಭಾಗವಹಿಸಿದ್ದೆ. ಅಂದು ವಿದ್ಯಾರ್ಥಿಗಳೇ ಸ್ವಯಂ ಆಗಿ, ಯಾರದ್ದೇ ಒತ್ತಡವಿಲ್ಲದೆ ಶಿಕ್ಷಕರನ್ನು ಗೌರವಿಸಲು ಚಿಕ್ಕ ಸಮಾರಂಭ ಏರ್ಪಡಿಸಿದ್ದರು. ಶಿಕ್ಷಕರಿಗೆ ಉಡುಗೊರೆ ನೀಡಿದರು. ಶಿಕ್ಷಕರು ತಾವು ಸಾಗಿ ಬಂದ ಹಾದಿಯತ್ತ ಒಮ್ಮೆ ಹೊರಳು ನೋಟ ಬೀರಿದರು. ಶಿಕ್ಷಕರಿಗೆ ಪ್ರತ್ಯೇಕವಾಗಿ ಮೂರ್ನಾಲ್ಕು ಸ್ಪರ್ಧೆಗಳನ್ನೂ ಆಯೋಜಿಸಿದ್ದರು. ಅದು ವಿದ್ಯಾರ್ಥಿ, ಶಿಕ್ಷಕ ಎನ್ನುವ ಅಂತರವಿರಲಿಲ್ಲ. ಬದಲಿಗೆ ನಾವೆಲ್ಲಾ ‘ಸುಮನಸಿಗರು’ ಎನ್ನುವ ಭಾವಗಳನ್ನು ಕಟ್ಟಿಕೊಟ್ಟರು.
ಹಿರಿಯರಾದ ಪ್ರೊ. ವಿ.ಬಿ.ಅರ್ತಿಕಜೆಯವರು ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ವಿಭಾಗವಿದ್ದಿರಲಿಲ್ಲ. ಆಗ ಆಸಕ್ತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪತ್ರಿಕೋದ್ಯಮ ತರಗತಿಯನ್ನು ನಡೆಸಿದ ಗುರು. ಅಂದು ತರಬೇತಿ ಪಡೆದವರಲ್ಲಿ ಅನೇಕರು ಗುರುಗಳನ್ನು ನೆನಪಿಸಿಕೊಳ್ಳುವುದನ್ನು ಗಮನಿಸಿದ್ದೇನೆ. ಶಿಷ್ಯನೊಬ್ಬ ಗುರುವನ್ನು ಅಭಿನಂದಿಸುವುದು, ಸಂಮಾನಿಸುವುದು ಸಹಜ. ಆದರೆ ಗುರು ತನ್ನ ಶಿಷ್ಯಂದಿರನ್ನು ಗೌರವಿಸಿದ್ದು ಇದೆಯಾ? ಇದೆ, ಪ್ರೊ.ಅರ್ತಿಕಜೆಯವರು ‘ಶಿಷ್ಯಾಭಿವಂದನ’ ಎನ್ನುವ ಹೊಸ ಕಲ್ಪನೆಯನ್ನು ಹುಟ್ಟು ಹಾಕಿದ್ದರು. ಶಿಷ್ಯರನ್ನು ಅಭಿನಂದಿಸಿ ಖುಷಿ ಪಟ್ಟಿದ್ದರು. ಪತ್ರಿಕೋದ್ಯಮಕ್ಕೆ ಪ್ರವೇಶ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಚಿಕ್ಕ ಪುಸ್ತಿಕೆಯನ್ನು ಪ್ರಕಟಿಸಿದ್ದರು.
ಗುರು-ಶಿಷ್ಯ ಸಂಬಂಧಗಳು ಪಾರಂಪರಿಕ. ಓರ್ವ ಗುರುವಿನ ವರ್ಚಸ್ಸು ಹೇಗಿದೆಯೋ ಹಾಗೆ ಶಿಷ್ಯನೂ ರೂಪುಗೊಳ್ಳುತ್ತಾನೆ. ಗುರುವಿನಲ್ಲಿರುವ ಆಸಕ್ತಿಗಳು ಶಿಷ್ಯರಲ್ಲೂ ಹರಿಯುವುದನ್ನು ಕಾಣುತ್ತೇವೆ. ಶಿಕ್ಷಣ ಸಂಸ್ಥೆಯೊಂದು ಯಶಸ್ವಿಯಾಗಿ ಬೆಳೆಯಲು ಕಾಂಚಾಣ ಒಂದೇ ಉಪಾಧಿಯಲ್ಲ. ಅಲ್ಲಿರುವ ಶಿಕ್ಷಕರು ಹೇಗಿರುತ್ತಾರೆ ಎನ್ನುವುದರ ಮೇಲೆ ವಿದ್ಯೆಯ ಯಶಸ್ಸು. ಐವತ್ತರ ಮೇಲಿನ ವಯೋಮಾನದವರಲ್ಲಿ ಕೇಳಿ, ಅವರ ಪ್ರಾಥಮಿಕ - ಪ್ರೌಢ ಶಾಲೆಯ ಅಧ್ಯಾಪಕರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಗುಣಗಾನವನ್ನು ಮಾಡುತ್ತಾರೆ. ಕಾರಣ, ಆ ಶಿಕ್ಷಕರು ಇವರನ್ನು ಆವರಿಸಿಬಿಟ್ಟಿದ್ದಾರೆ!
ಒಂದು ಘಟನೆ ನೆನಪಾಗುತ್ತದೆ. ನಾನು ಮೂರೋ, ನಾಲ್ಕನೇ ತರಗತಿ ಇದ್ದಿರಬೇಕು. ತುತ್ತಿಗೂ ತತ್ವಾರದ ಕಾಲ. ಸಹಪಾಠಿಗಳು ಚಾಕೊಲೇಟ್ ತಿನ್ನುವಾಗ ಆಸೆಯ ಕಂಗಳಿಂದ ನೋಡಿದ ದಿನಮಾನಗಳು ಮಸುಕುಮಸುಕಾಗಿ ನೆನಪಾಗುತ್ತದೆ. ಇಂತಹ ಹೊತ್ತಿನಲ್ಲಿ ಒಂದು ದಿವಸ ತಂದೆಯವರ ಜೇಬಿನಿಂದ ಐವತ್ತು ಪೈಸೆಯೋ ಒಂದು ರೂಪಾಯಿ ತೆಗೆದಿದ್ದೆ! ಅಂಗಡಿಯಿಂದ ಚಾಕೊಲೇಟ್ ಖರೀದಿಸಿ ಸ್ನೇಹಿತರ ಎದುರೇ ತಿಂದಿದ್ದೆ. ಸಹಪಾಠಿಗಳಿಗೆ ಹಂಚಿದ್ದೆ. ಸರಿ, ಅಪರಾಹ್ಣ ತಂದೆಯವರು ನೇರವಾಗಿ ಶಾಲೆಗೆ ಬಂದರು. ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪ ಮಾಸ್ತರಲ್ಲಿ ವಿಷಯ ತಿಳಿಸಿದರು.
ಅಧ್ಯಾಪಕರಿಂದ ಒಂದೆರಡು ಏಟು ಬಿದ್ದಿತ್ತು. ಆದರೆ ಅಷ್ಟಕ್ಕೆ ಮುಗಿಯಲಿಲ್ಲ. ಕೆಂಪು ದಾಸವಾಳದ ಹೂವನ್ನು ಮಾಲೆ ಮಾಡಿ, ಕೊರಳಿಗೆ ಹಾಕಿ ‘ಇನ್ನು ಮುಂದೆ ನಾನು ಕದಿಯುವುದಿಲ್ಲ’ ಎಂದು ಮಕ್ಕಳ ಎದುರಿಗೆ ಶಪಥ ಮಾಡಿಸಿದ್ದರು. ಶಾಲೆಯ ಕಟ್ಟಡದ ಸುತ್ತ ಐದು ಬಾರಿ ಓಡುವ ಶಿಕ್ಷೆ. ಈ ಘಟನೆಯು ಬದುಕಿನುದ್ದಕ್ಕೂ ನನಗೆ ‘ಗೀತೆ’ ಇದ್ದಂತೆ. ತಂದೆಯವರ ಅಂದಿನ ಒಂದು ರೂಪಾಯಿಯ ದುಡಿತ ಅಂದರೆ ಸುಲಭವಿದ್ದಿರಲಿಲ್ಲ.
ಅಂದು ಅಷ್ಟು ಶಿಕ್ಷೆ ನೀಡಿದ ಕೃಷ್ಣಪ್ಪ ಮಾಸ್ತರ್ ಬಹುಶಃ ಈಗ ಪೂರ್ತಿಯಾಗಿ ವಿಶ್ರಾಂತ. ಈ ಮೊದಲು ಅವರು ಸಿಕ್ಕಾಗಲೆಲ್ಲಾ ತಲೆ ಬಾಗುತ್ತಿತ್ತು. ಒಂದು ರೀತಿಯ ಅವ್ಯಕ್ತ ಭಯ! ಅಂದು ಬೆತ್ತದ ರುಚಿ ತೋರಿಸಿದ, ಜೀವನ ಪರ್ಯಂತ ನೆನಪಿಡುವಂತಹ ಶಿಕ್ಷೆ ಕೊಟ್ರಲ್ಲಾ, ಅದರ ಪರಿಣಾಮ ಈಗ ಒಂದೊಂದು ಪೈಸೆಯ ಬೆಲೆಯೂ ತಿಳಿಯುತ್ತದೆ. ಹತ್ತು ರೂಪಾಯಿ ಕೈತಪ್ಪಿದಾಗ ಮರುಕವಾಗುತ್ತದೆ. ಹಸಿವಿನ ಪರಿಚಯವಾಗುತ್ತಿದೆ. ನನ್ನಂತೆ ಇತರ ಒಂದಿಬ್ಬರಿಗೂ ಇಂತಹ ಶಿಕ್ಷೆಯಾಗಿತ್ತು.
ಇನ್ನೊಬ್ಬರು ನಾರಾಯಣ ಮಾಸ್ತರ್. ಅವರು ಕನ್ನಡ ಪಾಠವನ್ನು ಬಹಳ ಸೊಗಸಾಗಿ ಮಾಡುತ್ತಿದ್ದರು. ಪಠ್ಯದಲ್ಲಿದ್ದ ಪುಣ್ಯಕೋಟಿ, ನಳ ಚರಿತ್ರೆ, ಹರಿಶ್ಚಂದ್ರ ಕಾವ್ಯಗಳ ಅಧ್ಯಾಯಗಳನ್ನು ತರಗತಿಯಲ್ಲಿ ಗಟ್ಟಿಯಾಗಿ ಓದುತ್ತಿದ್ದರು. ಭಾವನಾತ್ಮಕವಾಗಿ ಸ್ಪಂದಿಸುತ್ತಿದ್ದರು. ಅದರ ಅರ್ಥ, ಒಳಅರ್ಥಗಳನ್ನು ತಿಳಿಹೇಳಿದ್ದರು. ಹರಿಶ್ಚಂದ್ರ ಕಾವ್ಯದಲ್ಲಿ ಬರುವ ‘ಚಂದ್ರಮತಿ ವಿಲಾಪ’ವನ್ನು ಹೇಳುತ್ತಾ ಇದ್ದಂತೆ ಮಾಸ್ತರ್ ಕಣ್ಣಲ್ಲಿ ಜಿನುಗಿತ್ತು ಕಣ್ಣೀರು! ಆ ದಿವಸಗಳು ನೆನಪಾಗುತ್ತದೆ. ಈ ಮೂಲಕ ಭಾವ ಅಂದರೇನು, ಕಣ್ಣೀರು ಅಂದರೇನು ಎಂದು ತೋರಿಕೊಟ್ಟ ಪಾಠ ಮರೆಯುವುದಿಲ್ಲ. ಈಚೆಗೆ ಯಕ್ಷಗಾನವೊಂದರಲ್ಲಿ ಚಂದ್ರಮತಿ ಪಾತ್ರವನ್ನು ಮಾಡುತ್ತಿದ್ದಾಗ ರಂಗದಲ್ಲಿ ಒಂದು ಕ್ಷಣ ನಾರಾಯಣ ಮಾಸ್ತರ್ ನೆನಪಿನಲ್ಲಿ ಮಿಂಚಿ ಮರೆಯಾದರು!
ಇವೆಲ್ಲಾ ಗುರುವೊಬ್ಬ ಶಿಷ್ಯರನ್ನು ಬದುಕಿನಲ್ಲಿ ‘ಮನುಷ್ಯ’ನನ್ನಾಗಿ ಮಾಡಲು ಬಳಸುವ ಟೂಲ್ಸ್ಗಳು. ಆ ಕಾಲಘಟ್ಟದಲ್ಲಿ ಬೋಧಿಸಿದ ಬಹುತೇಕ ಶಿಕ್ಷಕರು ಇಂದಿಲ್ಲ. ಆದರೆ ಅವರ ಶಿಷ್ಯತ್ವದಲ್ಲಿ ಬದುಕನ್ನು ಕಟ್ಟಿಕೊಂಡ ಅನೇಕ ಮಂದಿ ಆ ದಿನಮಾನಗಳ ಘಟನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ. ವರ್ತಮಾನದ ಶಿಕ್ಷಣಕ್ರಮದಲ್ಲಿ ಗುರು-ಶಿಷ್ಯ ಸಂಬಂಧಗಳು ಕೇವಲ ಅಂಕಪಟ್ಟಿಗೆ ಸೀಮಿತವಾಗಿರುವುದು ಶಿಕ್ಷಣದ ಭಾಗ್ಯವೋ, ದೌರ್ಭಾಗ್ಯವೋ?