ನಾಲ್ಕೇ ದಿವಸದಲ್ಲಿ ಅಧಿಕಾರಿಗಳ ದಂಡು. ಸಂತ್ರಸ್ತರ ಭೇಟಿ. ಹೊಸ ಮನೆ ಕಟ್ಟಿಕೊಳ್ಳಲು ಎತ್ತರದ ಗುಡ್ಡ ಪ್ರದೇಶದಲ್ಲಿ ಐದು ಸೆಂಟ್ಸಿನಂತೆ ಜಾಗ ಪ್ರದಾನ. ಸೊಂಟತ್ರಾಣ, ಕಂಠತ್ರಾಣವುಳ್ಳವರು ತಮಗೆ ಬೇಕಾದಲ್ಲಿ ಜಾಗ ಮಾಡಿಸಿಕೊಂಡರು! ಸರಕಾರದಿಂದ ದೊಡ್ಡ ಡಬ್ಬದ ಹಾಲಿನಪುಡಿ, ದಪ್ಪದ ಬೆಡ್ಶೀಟ್, ಪಾತ್ರೆ-ಪಗಡಿಗಳ ಪರಿಹಾರ. ಮನೆಕಟ್ಟಿಕೊಳ್ಳಲು ಪುಡಿಗಾಸಿನ ಸಹಕಾರ. ಅದು ಸಿಕ್ಕಿದವರಿಗೆ ಸಿಕ್ಕಿತು, ಇಲ್ಲದವರಿಗೆ ಇಲ್ಲ!
ತಹಶೀಲ್ದಾರ್, ಜಿಲ್ಲಾಧಿಕಾರಿ, ಅಧಿಕಾರಿಗಳಿಂದ ವಿಚಾರಣೆ. ಅಪರಾಧಿ ಸ್ಥಾನದಲ್ಲಿದ್ದ ಅಪರಾಧಿಗಳಂತೆ ಅಧಿಕಾರಿಗಳ ಮುಂದೆ ಕೈಕಟ್ಟಿ ನಿಂತ ಹಿರಿಯರ ಚಿತ್ರ ಪೂರ್ಣ ಮಾಸಿಲ್ಲ! ಈಗಿನಂತೆ ವಾಹಿನಿಗಳ ಭರಾಟೆ, ಫೋಟೋ ಸೆಶನ್, ಬ್ರೇಕಿಂಗ್ನ್ಯೂಸಿನ ಧಾವಂತಗಳು ಇದ್ದಿರಲಿಲ್ಲ. ಹಾಗಾಗಿ ಸಂತ್ರಸ್ತರ ಬವಣೆ ಲೋಕಪ್ರಸಿದ್ಧವಾಗಿಲ್ಲ! ಗ್ರಾಮಕ್ಕೆ ಸೀಮಿತವಾಗಿತ್ತು. ಇದು ಆಗಿನ ಸ್ಥಿತಿ – ಗತಿ.
ಈಗಿನ ಪರಿಸ್ಥಿತಿ ತುಂಬಾ ಸುಧಾರಿಸಿದೆ. ಪರಿಹಾರ ಕೇಂದ್ರಗಳು ಆರಂಭವಾಗಿ ಸರಕಾರ, ನಾಗರಿಕರು ಸಂತ್ರಸ್ತರ ನೆರವಿಗೆ ಧಾವಿಸುತ್ತಿರುವುದು ಮಾನವೀಯತೆಗೆ ಸಂದ ಮಾನ. ಈ ವರುಷದ ಮಳೆಯು ಬದುಕನ್ನೇ ಆಪೋಶನಗೊಳಿಸಿದೆ. ಬಡವ, ಬಲ್ಲಿದನೆಂಬ ಅಂತಸ್ತಿನ ಗೆರೆಯನ್ನು ಅಳಿಸಿ ಹಾಕಿದೆ. ಜಾತಿ-ಜಾತಿಗಳ ಮಧ್ಯದ ಕಂದಕವನ್ನು ಮುಚ್ಚಿಹಾಕಿದೆ.
ಸಂತ್ರಸ್ತರ ವಸತಿ ಕೇಂದ್ರವನ್ನು ಸರಕಾರವು ‘ಗಂಜಿ ಕೇಂದ್ರ’ ಎಂದು ಕರೆಯುತ್ತಿದೆ! ಯಾಕೋ ಈ ‘ಗಂಜಿ ಕೇಂದ್ರ, ಗಂಜಿ ಗಿರಾಕಿ’ ಈ ಶಬ್ದಗಳೇ ಅಪಮೌಲ್ಯಗೊಂಡಿವೆ. ಹಾಗಾಗಿ ‘ಪರಿಹಾರ ಕೇಂದ್ರ’ ಎಂದು ಕರೆಯೋಣ. ನನ್ನೂರಿನ ಆ ನೆರೆಗೆ ಊರಿಗೆ ಊರೇ ಪರಿಹಾರ ಕೇಂದ್ರವಾಗಿತ್ತು. ಸರಕಾರ ಅಷ್ಟಿಷ್ಟು ಕೊಡಮಾಡಿದರೆ, ಊರಿನ ಅನೇಕ ಸಹೃದಯರು ಸಂತ್ರಸ್ತರ ಹೊಟ್ಟೆ ತಂಪು ಮಾಡಿರುವುದು ಪುಣ್ಯದ ಕೆಲಸ.
ಮೊನ್ನೆಯಷ್ಟೇ ಮಹಾಮಳೆಯು ಅನೇಕ ಕಡೆ ಬದುಕನ್ನೇ ಕಿತ್ತುಕೊಂಡಿತು. ಊರಿಗೆ ಊರೇ ನಾಶವಾಗಿರುವಾಗ ಯಾರಿಗೆ ಯಾರು ನೆರವಾಗಬಹುದು? ಸಂತ್ರಸ್ತರ ಮುಖಕ್ಕೆ ಮೈಕ್ ಹಿಡಿದು ‘ಯೋಜಿತ ಬೈಟ್’ ಪಡೆಯುವ ವಾಹಿನಿಗಳ ಮನಸ್ಸುಗಳನ್ನು ಗ್ರಹಿಸಿದಾಗ ಮರುಕವಾಗುತ್ತದೆ! ಇವರಿಗೆ ಯಾಕೆ ಮಹಾಮಳೆಗೆ ಜೀವವನ್ನು ಲೆಕ್ಕಿಸದೆ ಪರಿಹಾರ ಕೆಲಸಗಳನ್ನು ಮಾಡುತ್ತಿರುವ ದೃಶ್ಯ ಸಿಗುತ್ತಿಲ್ಲ? ಆಶ್ಚರ್ಯವಾಗುತ್ತದೆ.
ಕೆಲವೆಡೆ ನೆರೆ ನೀರು ಇಳಿದಿದೆ. ಮನೆಯೊಳಗೆ ಅಡಿಗಟ್ಟಲೆ ಮಣ್ಣು, ಮರಳು, ಕಸ-ಕಡ್ಡಿಗಳನ್ನು ರಾಶಿ ರಾಶಿಯಾಗಿ ತಂದು ಹಾಕಿದೆ. ಅವುಗಳನ್ನು ಶುಚಿಗೊಳಿಸುವುದೂ ಒಂದೇ, ಹೊಸತಾಗಿ ಸೂರು ಕಟ್ಟಿಕೊಳ್ಳುವುದೂ ಒಂದೇ ಎನ್ನುವಂತಾಗಿದೆ. ಅದೆಲ್ಲಾ ಸರಿ, ಮೊನ್ನೆಯ ಮಹಾಮಳೆಯ ನೆರೆನೀರನ್ನು ಗಮನಿಸಿದ್ದೀರಾ? ಎಲ್ಲಾ ಕಡೆ ಕೆಂಪು ನೀರು! ಆರಂಭದಲ್ಲಿ ನನ್ನೂರಿನ ನೆರೆಯನ್ನು ಉಲ್ಲೇಖಿಸಿದ್ದೆ. ಆ ಹೊತ್ತಲ್ಲಿ ಹೊಳೆಯ ನೀರು ಗಾಢ ಕೆಂಪು ಇದ್ದಿರಲಿಲ್ಲ ಎನ್ನುವುದನ್ನು ಹೇಳಲು ಮರೆತೆ. ಈಗ್ಯಾಕೆ ಸಣ್ಣ ಮಳೆಗೂ ಹಳ್ಳದಲ್ಲಿ ಹರಿಯುವ ನೀರು ಕೆಂಬಣ್ಣವಾಗುತ್ತದೆ?
ಒಂದೆಡೆ ಗುಡ್ಡ ಜರಿತಗಳು. ಆ ಮಣ್ಣು ಮಳೆನೀರಿನೊಂದಿಗೆ ಕೊಚ್ಚಿ ತೋಡನ್ನೋ, ನದಿಯನ್ನೋ ಸೇರುತ್ತದೆ. ಇನ್ನೊಂದು, ಜೆಸಿಬಿಗಳು ಅಲ್ಲಲ್ಲಿ ಬ್ರೆಡ್ ತುಂಡು ಮಾಡಿದಂತೆ ಗುಡ್ಡಗಳನ್ನು ತುಂಡರಿಸಿರುವುದು. ಮಳೆಯ ನೀರಿಗೆ ಕೆಂಪು ಮಣ್ಣು ಕೊಚ್ಚಿ ಹೋಗುತ್ತಿರುವುದು ಕಣ್ಣಾರೆ ನೋಡುತ್ತಾ, ಮರೆಯುತ್ತಾ ಇರುತ್ತೇವೆ. ಗುಡ್ಡಗಳ ನೀರಿನ ಸಹಜ ಹರಿವಿನ ದಾರಿಗಳೆಲ್ಲಾ ಮುಚ್ಚಿಹೋಗಿವೆ. ಮಳೆನೀರು ಯದ್ವಾತದ್ವಾ ಹರಿಯದೆ ಇನ್ನೇನು ಅಗಲು ಸಾಧ್ಯ?
ಒಂದು ಕಾಲಘಟ್ಟವಿತ್ತು. ದಟ್ಟ ಕಾಡಿನ ಮಧ್ಯೆ ತರಗಲೆಗಳು ಬಿದ್ದು ಮರದಡಿಯಲ್ಲಿ ಉಂಟಾದ ದಪ್ಪನೆಯ ಹಾಸು ಮಳೆನೀರನ್ನು ಓಡಲು ಬಿಡದೆ ಇಂಗಿಸಲು ನೆರವಾಗುತ್ತಿತ್ತು. ಅಲ್ಲಲ್ಲಿ ಕಲ್ಲು, ಬೇರುಗಳು ಹರಡಿರುವುದರಿಂದ ನೀರು ಹುಚ್ಚುಕಟ್ಟಿ ಓಡುತ್ತಿರಲಿಲ್ಲ. ಹೀಗೆ ಹರಿಯುವ ಮಳೆನೀರು ತನ್ನೊಳಗೆ ಸೇರಿಕೊಂಡಿರುವ ಮಣ್ಣನ್ನೆಲ್ಲಾ ಬಿಟ್ಟುಕೊಟ್ಟು ಬಹುತೇಕ ತಿಳಿಯಾಗಿ ತೋಡನ್ನೋ, ಹೊಳೆಯನ್ನೇ ಸೇರುತ್ತಿತ್ತು.
ಈಚೆಗೆ ನವಮಾಧ್ಯಮಗಳಲ್ಲಿ ವೀಡಿಯೋ ತುಣುಕೊಂಡು ಹರಿದಾಡುತ್ತಿತ್ತು. ಅದರಲ್ಲಿ ಸಮುದ್ರದ ತೆರೆಗಳು ತನ್ನೊಳಗೆ ಸೇರಿಕೊಂಡಿದ್ದ ತ್ಯಾಜ್ಯಗಳನ್ನೆಲ್ಲಾ ದಡಕ್ಕೆ ತಂದು ಬಿಸಾಡುತ್ತಿತ್ತು. ತನ್ನೊಳಗೆ ಸೇರಿಕೊಳ್ಳುವ ಅಸಹಜವಾದ ತ್ಯಾಜ್ಯಗಳನ್ನು ‘ಜಲ’ ಸ್ವೀಕರಿಸುವುದಿಲ್ಲ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಈ ಬಾರಿಯ ನೆರೆ. ಕಾಡಿನೊಳಗಿದ್ದ ದೊಡ್ಡ ಗಾತ್ರದ ಮರಗಳು ಆಳವಾಗಿ ಬೇರನ್ನು ಕೆಳಗಿಸಿಕೊಂಡಿರುತ್ತದೆ. ಅಂತಹ ಮರಗಳು ಗರಗಸಕ್ಕೆ ಬಲಿಯಾಗುತ್ತಲೇ ಇರುತ್ತದೆ. ಮಣ್ಣನ್ನು ಗಟ್ಟಿಯಾಗಿ ಹಿಡಿದಿಡುವ ಬೇರುಗಳ ಜಾಲಗಳನ್ನು ಕಾಡಿನಲ್ಲಿ ನೋಡಿದ್ದೀರಾ?
ಮಹಾಮಳೆಯ ಅಬ್ಬರ ಕಡಿಯಾಯಿತು. ನೀರೆಲ್ಲಾ ಹರಿದು ಗಮ್ಯಸ್ಥಾನ ಸೇರಿತು. ಹಲವೆಡೆ ಬದುಕು ಮೂರಾಬಟ್ಟೆಯಾಯಿತು. ಉಟ್ಟ ಬಟ್ಟೆಯಲ್ಲೇ ಬದುಕಿನ ಸ್ಥಿತಿ, ಗತಿ. ಕುಡಿಯುವ ನೀರಿಗೂ ತತ್ವಾರ. ಇಷ್ಟೊಂದು ರಣಮಳೆ ಬಂದು, ಬಿಟ್ಟಾಗ ನಮ್ಮ ತೋಡು, ಹೊಳೆಗಳಲ್ಲಿ ನೀರಿನ ಹರಿವು ಯಾಕೆ ನಿಧಾನವಾಗುತ್ತದೆ? ದಶಂಬರ-ಜನವರಿ ವರೆಗೆ ಹರಿಯುವ ನದಿಗಳು ಸೆಪ್ಟೆಂಬರ್-ಅಕ್ಟೋಬರಿಗೆ ಹರಿವನ್ನು ಯಾಕೆ ನಿಲ್ಲಿಸುತ್ತವೆ? ಈ ಎಲ್ಲಾ ಪ್ರಶ್ನೆಗಳು ಮೂಡುತ್ತಿರುವಾಗಲೇ ನನ್ನ ಕಣ್ಣ ಮುಂದೆ ಮರವೊಂದು ಗರಗಸಕ್ಕೆ ಆಹುತಿಯಾಗುತ್ತಿತ್ತು! ಕಾಂಚಾಣದ ಸದ್ದು ಗರಗಸದ ಸದ್ದಿನೊಂದಿಗೆ ಮಿಳಿತಗೊಂಡಿತ್ತು!
0 comments:
Post a Comment