Monday, September 16, 2019

ಇಂಗುಗುಂಡಿಯೊಳಗೆ ಜಿನುಗಿದ ನೀರರಿವು



          ಸುಳ್ಯದ ಸ್ನೇಹ ಶಾಲೆಯ ಸಮಾರಂಭವೊಂದರಲ್ಲಿ ಭಾಗವಹಿಸಿದ್ದೆ. ಗೋಡೆಗೆ ಆನಿಸಿ ದೊಡ್ಡ ಗಾತ್ರದ ಎರಡು ಫ್ಲೆಕ್ಸಿಗಳಿದ್ದುವು. ಅದರಲ್ಲಿ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಚಿತ್ರಗಳು. ತಂತಮ್ಮ ಮನೆಗಳಲ್ಲಿ ಮಾಡಿದ ಇಂಗುಗುಂಡಿಗಳೊಂದಿಗೆ ತೆಗೆದವುಗಳು. “ಇವರೆಲ್ಲಾ ಎಂಟರಿಂದ ಹತ್ತರ ವರೆಗಿನ ವಿದ್ಯಾರ್ಥಿಗಳು. ಸ್ವತಃ ಇಂಗುಗುಂಡಿ ಮಾಡಿ ಚಿತ್ರ ಕಳಿಸಿದ್ದಾರೆ.” ಎಂದರು ಶಾಲೆಯ ಹಳೆ ವಿದ್ಯಾರ್ಥಿ ಅಕ್ಷರ ದಾಮ್ಲೆ.
          ಶೈಕ್ಷಣಿಕ ಶಾಲಾರಂಭದ ದಿವಸ ವಿದ್ಯಾರ್ಥಿಗಳಿಗೆ ಅರಿವಿನ ಒಂದು ಭಾಗವಾಗಿ ಅಕ್ಷರ ಟಾಸ್ಕ್ ನೀಡಿದ್ದರು. ಶಾಲೆಯಲ್ಲಾಗುತ್ತಿದ್ದ ಜಲಮರುಪೂರಣದ ಕೆಲಸಗಳನ್ನು ನೋಡುತ್ತಾ ಬೆಳೆಯುತ್ತಿದ್ದ ವಿದ್ಯಾರ್ಥಿಗಳು ಟಾಸ್ಕನ್ನು ಸವಾಲಾಗಿ ಸ್ವೀಕರಿಸಿದರು. ಹತ್ತು ದಿವಸಗಳಲ್ಲಿ ನೂರಹದಿನೈದು ವಿದ್ಯಾರ್ಥಿಗಳ ಮನೆಗಳಲ್ಲಿ ಇಂಗುಗುಂಡಿಗಳಾದುವು.
           “ಇಂಗುಗುಂಡಿಯೆಂದರೆ ಆಳೆತ್ತರದ ಬೃಹತ್ ಹೊಂಡವಲ್ಲ. ಮಕ್ಕಳ ತನುಶಕ್ತಿಗೆ ಹೊಂದಿಕೊಂಡು ಎರಡು ಅಡಿ ಉದ್ದಗಲ, ಎರಡಡಿ ಆಳದ ಹೊಂಡ. ಫಕ್ಕನೆ ಜಾರಿ ಬಿದ್ದರೂ ತೊಂದರೆಯಾಗಲಾರದು. ಮಳೆಗಾಲದಲ್ಲಿ ನೀರು ತುಂಬಿದಾಗ ಮಕ್ಕಳಿಗೆ ಖುಷಿ. ಹಿಮ್ಮಾಹಿತಿ ಹೇಳುತ್ತಿದ್ದಾರೆ.” ಎಂಬ ಖುಷಿಯನ್ನು ಹಂಚಿಕೊಂಡರು ಸ್ನೇಹ ಶಾಲೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ.
         ಈಚೆಗೆ ಸ್ನೇಹಿತರೊಬ್ಬರು ಮಾತಿಗೆ ಸಿಕ್ಕರು. ‘ಎಲ್ಲಾ ಕಡೆ ಇಂಗುಗುಂಡಿ ಮಾಡ್ತಾರೆ. ನಿಜಕ್ಕೂ ಇದರಿಂದ ಪ್ರಯೋಜನ ಇದೆಯಾಎಂದರು. ಜಲಸಂರಕ್ಷಣೆಯ ಹತ್ತಾರು ವಿಧಾನಗಳಲ್ಲಿ ಇಂಗುಗುಂಡಿಯೂ ಒಂದು. ಇಂಗುಗುಂಡಿಯೇ ಅಂತಿಮವಲ್ಲ. ಹಸಿರೆಬ್ಬಿಸುವುದು, ಜಲಮರುಪೂರಣ, ಕೊಳವೆಬಾವಿ ಮರುಪೂರಣ.. ಮೊದಲಾದ ವಿಧಾನಗಳಿವೆ. ಇಂಗುಗುಂಡಿಗಳು ಮಣ್ಣಿನ ಸವಕಳಿಯನ್ನು ಹೆಚ್ಚು ತಡೆಯುತ್ತದೆ.. ಹೀಗೆ ಹೇಳುತ್ತಿದ್ದಂತೆ ಏನೋ ಸಬೂಬು ಹೇಳಿ ಜಾರಿಕೊಂಡರು. ಅವರಿಗೆ ಉತ್ತರ ಬೇಕಾಗಿಲ್ಲ! ಇಂತಹ ಉತ್ತರ ಬೇಕಾಗಿಲ್ಲದ, ಪ್ರಶ್ನೆಯೇ ಮುಖ್ಯವಾಗುಳ್ಳ ಒಂದಷ್ಟು ಮಂದಿ ಮಾತಿಗೆ ಸಿಗುತ್ತಾರೆ.
          ದಾಮ್ಲೆಯವರು ತಮ್ಮ ಶಾಲೆಯಲ್ಲಿ ಬಹುಕಾಲದಿಂದ ಜಲಮರುಪೂರಣದ ಕೆಲಸಗಳನ್ನು ಮಾಡುತ್ತಾ ಬಂದವರು. ಎರಡು ದಶಕದ ಹಿಂದೆ ಶುರುವಾದ ಕಾಯಕವು ರಜೆ ತೆಗೆದುಕೊಳ್ಳಲಿಲ್ಲ. ಬೇಸಿಗೆಯಲ್ಲಿ ಮಕ್ಕಳು ಇಂಗುಗುಂಡಿಗಳ, ತೊಟ್ಟಿಲುಗುಂಡಿಗಳ ಕಸಗಳನ್ನು ಶುಚಿಗೊಳಿಸುತ್ತಾರೆ. ಮಕ್ಕಳಲ್ಲಿ ಮೂಡಿದ ನೆಲ-ಜಲದ ಚೋದ್ಯದ ಪ್ರಶ್ನೆಗಳಿಗೆ ಅಧ್ಯಾಪಕರು ಸ್ಥಳದಲ್ಲೇ ಉತ್ತರ ಕೊಡುವುದರಿಂದ ಚಿಣ್ಣರ ಮನದೊಳಗೆ ನೀರಿನ ಒರತೆಯ ತೇವ ಆರುವುದಿಲ್ಲ.
             ದಾಮ್ಲೆಯವರ ಯೋಚನೆಯು ತಮ್ಮ ಶಾಲೆಗೆ ಸೀಮಿತವಲ್ಲ. ತಾಲೂಕಿನ ನಲವತ್ತು ಪ್ರೌಢ ಶಾಲೆಗಳಲ್ಲಿ ನೀರಿನ ಅರಿವಿನ ಕಾರ್ಯಕ್ರಮ ನಡೆಸುವ ನೀಲನಕ್ಷೆ. ಈಗಾಗಲೇ ಇಪ್ಪತ್ತರಷ್ಟು ಶಾಲೆಗಳಲ್ಲಿ ಅರಿವಿನ ಕಾರ್ಯಕ್ರಮಗಳಾಗಿವೆ. ಒಂದು ಪಿರೇಡನ್ನು ಇದಕ್ಕಾಗಿ ಬಳಸಿಕೊಂಡು ನೆಲ-ಜಲದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹೇಳುತ್ತಾರೆ. ತಂತಮ್ಮ ಮನೆಗಳಲ್ಲಿ ಇಂಗುಗುಂಡಿ ಮಾಡುವಂತೆ ವಿನಂತಿಸುತ್ತಾರೆ. ಉಪಸ್ಥಿತರಿದ್ದ ಅಧ್ಯಾಪಕರಿಗೆ ಹಿಮ್ಮಾಹಿತಿ ನೀಡುವಂತೆ ಕೋರುತ್ತಾರೆ. ಇದಕ್ಕೆಲ್ಲಾ ಸ್ಫೂರ್ತಿಯಾಗುವಂತೆ ವೇದಿಕೆಯ ಹಿಂದೆ ಸ್ನೇಹ ಶಾಲೆಯ ಇಂಗುಗುಂಡಿ ಅಭಿಯಾನದ ಚಿತ್ರಗಳಿರುವ ಫ್ಲೆಕ್ಸಿಗಳನ್ನು ಹಾಕುತ್ತಾರೆ. ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿಗಳಿಗೆ ನೆಲ-ಜಲ ಸಂರಕ್ಷಣೆಯ ಪ್ರತಿಜ್ಞಾವಿಧಿ.
            “ ಚಿತ್ರಗಳು ಎಳೆಯ ಮನಸ್ಸುಗಳನ್ನು ಪ್ರಚೋದಿಸುತ್ತವೆ. ಬಾರಿಯ ನಿಧಾನ ಮಳೆ, ಮುಂದೆ ನೀರಿಗೆ ಆಗಬಹುದಾದ ಬರದ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲೂ ಜಲ ಸಂರಕ್ಷಣೆಯ ಕುರಿತು ಉತ್ತಮ ವಾತಾವರಣವಿದೆ. ಇನ್ನು ಆಯಾಯ ಶಾಲೆಯ ಅಧ್ಯಾಪಕರು ಸ್ವಲ್ಪ ನಿಗಾ ವಹಿಸಿದರೆ ಇಂಗುಗುಂಡಿಗಳಂತಹ ಚಿಕ್ಕ ಚಿಕ್ಕ ರಚನೆಗಳನ್ನು ಮಕ್ಕಳಿಂದ ಮಾಡಿಸಬಹುದು. ಆಸಕ್ತಿ ಬೇಕಷ್ಟೇ.” ಎನ್ನುತ್ತಾರೆ ಡಾ.ದಾಮ್ಲೆ.
         ಈ ಉದ್ದೇಶಕ್ಕಾಗಿಜಲಾಮೃತವಾಟ್ಸಾಪ್ ಗುಂಪು ರೂಪಿಸಿದ್ದಾರೆ. ಆದ, ಆಗುತ್ತಿರುವ ನೀರಿನ ಕೆಲಸಗಳ ವರದಿಗಳು, ಚಿತ್ರಗಳನ್ನು ಹರಿಯಬಿಡುತ್ತಾರೆ. ಈಗಷ್ಟೇ ಅವರ ಗುಂಪನ್ನು ನೋಡುತ್ತಿದ್ದೆ. ತುಂಬಾ ಆಸಕ್ತಿದಾಯಕ ಮತ್ತು ಪ್ರೇರಣದಾಯಕ ವರದಿಗಳು ಕುತೂಹಲ ಮೂಡಿಸಿತು. - ‘ಅರಂತೋಡಿನ ಎನ್.ಎಂ.ಪಿ.ಯು. ಶಾಲೆಯ ವಿದ್ಯಾರ್ಥಿಗಳು ಅರುವತ್ತಕ್ಕೂ ಹೆಚ್ಚು ಇಂಗುಗುಂಡಿಗಳನ್ನು ಮಾಡಿದ್ದಾರೆ.’ ‘ಇಂಗುಗುಂಡಿಗಳನ್ನು ಮಾಡಿದ್ದರಿಂದ ಮರ್ಕಂಜ ಶಾಲೆಯ ಆರಿದ ಬಾವಿಯು ಮರು ಜೀವ ಹೊಂದಿದೆ. ಇಂತಹ ಯಶದ ಗಾಥೆಗಳು ಉಳಿದವರಿಗೆ ಪ್ರೇರಕ.
          ಈಚೆಗಿನ ಕೆಲವು ವರುಷಗಳಿಂದ ಶಾಲಾ ಮಟ್ಟದಲ್ಲಿ ಪರಿಸರ, ನೆಲ, ಜಲದ ಸುತ್ತ ವಿವಿಧ ಕಾರ್ಯಕ್ರಮಗಳು ಆಗುತ್ತಿರುವುದು ಖುಷಿಯ ಸಂಗತಿ. ಈಚೆಗೆ ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಹಲಸಿನ ಮೇಳ ಸಂಪನ್ನವಾಗಿತ್ತು. ಮಕ್ಕಳು ಗದ್ದೆಗೆ ಇಳಿದು ಸ್ವತಃ ನೇಜಿ ನೆಡುವ ಸುದ್ದಿಗಳನ್ನು ಓದುತ್ತೇವೆ. ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿಗಳನ್ನು ಅಧ್ಯಾಪಕರ ಸಹಕಾರದಿಂದ ಬೆಳೆಸುವ ಶಾಲೆಗಳಿವೆ. ವಿದ್ಯಾರ್ಥಿಗಳಿಗೆ ಕೃಷಿ ಬದುಕನ್ನು ತೋರಿಸುವ ಕಾರ್ಯಕ್ರಮಗಳಾಗುತ್ತಿವೆ. ಕಾಲೇಜು ಹಂತದಲ್ಲಿ ಮಳೆಕೊಯ್ಲು, ಕೊಳವೆಬಾವಿ ಮರುಪೂರಣದಂತಹ ಜಲದರಿವಿನ ಕಲಾಪಗಳು ನಡೆಯುತ್ತಿವೆ.
           ಶೈಕ್ಷಣಿಕ ಸಂಸ್ಥೆಗಳಲ್ಲಿ ಚಿಕ್ಕ ಅರಿವಿನ ಸಂಚಲವಾಗಿದೆ. ಪಠ್ಯೇತರವಾಗಿ ಯೋಚಿಸುವ ಅಲಿಖಿತ ಸಿಲೆಬಸ್ ಕೆಲವೆಡೆ ಸಿದ್ಧವಾಗುತ್ತಿವೆ. ಏನಿದ್ದರೂ ಅಧ್ಯಾಪಕ ವೃಂದಕ್ಕೆ ನೆಲ-ಜಲದ ಗಾಢತೆಯ ಜ್ಞಾನ ಹಬ್ಬಬೇಕು. ಅದು ಮಕ್ಕಳ ಮೂಲಕ ಅನಾವರಣವಾಗುತ್ತದೆ. “ಮೊದಲು ಅಧ್ಯಾಪಕರು ಜಲಮರುಪೂರಣಗಳ ಒಂದು ಮಾದರಿಯನ್ನು ಮಾಡಿದರೆ ಮಕ್ಕಳು ಎರಡು ಮಾಡುತ್ತಾರೆ. ಯಾಕೆಂದರೆ ಅಧ್ಯಾಪಕರನ್ನು ನೋಡುತ್ತಾ ವಿದ್ಯಾರ್ಥಿಗಳು ಬೆಳೆಯುತ್ತಾರೆ. ಹಾಗಾಗಿ ಅಧ್ಯಾಪಕರ ಆಸಕ್ತಿಗಳು ವಿದ್ಯಾರ್ಥಿಗಳನ್ನು ಆವರಿಸುತ್ತದೆ.” ದಾಮ್ಲೆಯವರ ಅನುಭವ.

0 comments:

Post a Comment