Monday, September 16, 2019

ಕಾಡೇ ತರಕಾರಿ ತೋಟ!

         ಮೂಲಿಕಾ ತಜ್ಞ ಪಾಣಾಜೆಯ ವೆಂಕಟರಾಮ ದೈತೋಟರು ದಿವಂಗತರಾಗಿ ಎರಡು ವರುಷವಾಯಿತು. ಅವರ ಅಪರಕಾರ್ಯದಂದು ಪತ್ನಿ ಜಯಲಕ್ಷ್ಮಿ ದೈತೋಟರು ತಮ್ಮ ಬಂಧುವೊಬ್ಬರಿಗೆ ಪರಿಚಯ ಮಾಡಿಕೊಡುತ್ತಾ ಮಾತಿನ ಮಧ್ಯೆಯಜಮಾನರಿಗವರು ಹತ್ತಿರ. ಅವರ ಬಗ್ಗೆ ತುಂಬಾ ಬರೆದಿದ್ದಾರೆ. ನನ್ನ ಬಗ್ಗೆ ಬರೆಯುವುದು ಬೇಡ ಆಯಿತಾ, ಅವರಿಲ್ಲದಿದ್ದ ಮೇಲೆ ಯಾರಿಗಾಗಿ ನಾನು ಪರಿಚಯವಾಬೇಕು?” ಎಂದಿದ್ದರು.
        ಮೊನ್ನೆ 2019 ಆಗಸ್ಟ್ 4ರಂದು ಜಯಲಕ್ಷ್ಮೀಯವರು (ಜಯಕ್ಕ) ನಿಧನರಾದರು. ಅಂದು ಅವರಾಡಿದ ಮಾತು ಕಾಡುತ್ತಲೇ ಇತ್ತು. ಮಧ್ಯೆ ಹಿರಿಯರೊಬ್ಬರು, “ನೀವು ವ್ಯಕ್ತಿ ಮರಣಿಸಿದ ಮೇಲೆ ಬರೆಯುತ್ತೀರಿ? ಏನು ಪ್ರಯೋಜನ? ಜೀವ ಇರುವಾಗಲೇ ಬರೆದರೆ ಏನು?” ಎಂದು ಕೊಂಕಿನಿಂದ ಆಡಿದ ಮಾತೂ ನೆನಪಿನಲ್ಲಿತ್ತು. ಸದ್ಯ ಇವೆಲ್ಲವನ್ನೂ ಮರೆತು ಜಯಕ್ಕನಿಗೊಂಡು ಅಕ್ಷರ ನಮನ ಸಲ್ಲಿಸುವುದು ಕರ್ತವ್ಯ. ಹಿನ್ನೆಲೆಯಲ್ಲಿ ನಾಲ್ಕೈದು ವರುಷದ ಹಿಂದಿನ ದಿನವೊಂದನ್ನು ನೆನಪು ಮಾಡಿಕೊಳ್ಳುತ್ತೇನೆ :                                         
       ಅಂದುಉರ್ವರಾದಲ್ಲಿ ಮಧ್ಯಾಹ್ನದೂಟಕ್ಕೆ ಶಿರಸಿಯ ಪತ್ರಕರ್ತ ಶಿವಾನಂದ ಕಳವೆ ಜತೆಗಿದ್ದರು. ಕಾನಕಲ್ಲಟೆ-ಸೌತೆಯ ಕಾಯಿಹುಳಿ, ಕ್ರೋಟಾನ್ ಹರಿವೆಯ ಚಟ್ನಿ, ಕಪ್ಪೆಮೆಣಸು (ನೀರ್ಕಡ್ಡಿ)ಸಾರು, ಪಾಲಿಷ್ ಮಾಡದ ಅಕ್ಕಿಯ ಅನ್ನ. ಇದರಲ್ಲೇನು ವಿಶೇಷ? “ಕಾನಕಲ್ಲಟೆ ಉಷ್ಣಗುಣವುಳ್ಳದ್ದು, ಸೌತೆ ತಂಪು. ಎರಡೂ ಸೇರಿದಾಗಸಮಧಾತು’. ಹಾಗಾಗಿ ಅವರೆಡು ಕಾಂಬಿನೇಶನ್! ಜೀರ್ಣಕ್ರಿಯೆಗೆ ಪಾಕ. ಕ್ರೋಟಾನ್ ಚಟ್ನಿ ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಸಹಕಾರಿ. ನೀರ್ಕಡ್ಡಿ ಕಫಹರ, ಜ್ವರಹರ. ಒಗ್ಗರಣೆಗೆ ಹಾಕುವ ಕರಿಬೇವಿನಸೊಪ್ಪು ಮೂತ್ರದೋಷ ಶಮನಕ್ಕೆ. ಕಾಫಿಯ ಬದಲಿಗೆ ಪುನರ್ಪುಳಿ ಶರಬತ್ತು. ಇದು ಕೂಡಾ ಹಿಮೋಗ್ಲೋಬಿನ್ ಹೆಚ್ಚಳಕ್ಕೆ.” ಇದು ಜಯಕ್ಕ ಉವಾಚ.
       ಮಧ್ಯಾಹ್ನ ಊಟಕ್ಕೆ ನೆಂಟರು ಬಂದಾಗ ನಾವೇನು ಮಾಡುತ್ತೇವೆ? ಅಂಗಡಿಗೆ ಹೋಗುತ್ತೇವೆ: ರೆಡಿಮೇಟ್ ಹಪ್ಪಳ, ಟೊಮ್ಯಾಟೋ, ಶ್ಯಾವಿಗೆ...ಜತೆಗೆ ಕುರುಕುರು ತಿಂಡಿ ಸ್ವಲ್ಪ....ಇನ್ನು ಏನೇನೋ... ತರುತ್ತೇವೆ. ಆದರೆ ಜಯಕ್ಕ ಹಾಗಲ್ಲ, ನೆಂಟರು ಬಂದರೆ, ‘ಈಗ ಬಂದೆ...ಎನ್ನುತ್ತಾ ಹಿತ್ತಿಲಿಗೆ ಹೋಗುತ್ತಿದ್ದರು.. ಬರುವಾಗ ಕೈಯಲ್ಲೊಂದಷ್ಟು ಸಸ್ಯದ ಚಿಗುರುಗಳು, ಹೂಮಿಡಿಗಳು!’ ‘ನೋಡಿ....ಇದು ನುಗ್ಗೆ ಸೊಪ್ಪು. ಹಾಗೆ ಬಾಯಲ್ಲಿ ಹಾಕಿ ಜಗಿಯಿರಿ. ಇದರಲ್ಲಿರುವಷ್ಟು ಕಬ್ಬಿಣದಂಶ ಮತ್ತು ಕ್ಯಾಲ್ಸಿಯಂ ಬೇರ್ಯಾವ ಸೊಪ್ಪಿನಲ್ಲೂ ಇಲ್ಲ. ದೊಡ್ಡವರಿಗೆ ಎಂಟೆಲೆ, ಮಕ್ಕಳಿಗೆ ಮೂರೆಲೆ ಸಾಕುಎಂದು ಜಗಿಯಲು ಕೊಟ್ಟಿದ್ದರು. 
       ಅಷ್ಟರಲ್ಲಿ ಪತಿ ವೆಂಕಟ್ರಾಮರು ಪೇಟೆಗೆ ಹೋದವರು ಪತ್ರಿಕೆಯಲ್ಲಿದ್ದ ಒಂದು ಸುದ್ದಿಯನ್ನು ಓದಿದರು - ‘ಆಹಾರಗಳೆಲ್ಲಾ ವಿಷಮಯವಾಗುತ್ತಿದೆ. ಹೀಗೆ ಮುಂದುವರಿದರೆ ನಿಕಟ ಭವಿಷ್ಯದಲ್ಲಿ ಭಾರತದ ಜನಸಂಖ್ಯೆ ಕ್ಷೀಣವಾಗುತ್ತದಂತೆ.’ ಉರ್ವರಾದ ಅಡುಗೆ ಮನೆ ಯಾಕೆಹಸಿರಾಗಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತು!
       ಋತುಮಾನಕ್ಕನುಸಾರವಾಗಿ ಪ್ರಕೃತಿಯಲ್ಲಿ ಸಿಗುವ ಚಿಗುರು, ಹೂ, ಮಿಡಿ, ಕೆತ್ತೆ, ಬೇರು ಬಳಸಿ - ಸಾರು, ಚಟ್ನಿ, ತಂಬುಳಿ, ಕಷಾಯ ಮಾಡಿ ಆರೋಗ್ಯವನ್ನು ಕಾಪಾಡುವ ಮುನ್ನೂರಕ್ಕೂ ಮಿಕ್ಕಿ ಅಡವಿ ಸಸ್ಯಗಳ ಆಹಾರ ಅವರ ಬೊಗಸೆಯಲ್ಲಿದ್ದುವು. ಯಾವ ಸಸ್ಯದಲ್ಲಿ ಯಾವ ಗುಣವಿದೆ, ಅವಗುಣವಿದೆ; ಅದನ್ನು ಸರಿದೂಗಿಸುವ ಬಗೆ ಹೇಗೆ - ಇವೆಲ್ಲಾ ಅವರಿಗೆ ರಕ್ತದಲ್ಲೇ ಬಂದಿದೆ.
       ಪ್ರಕೃತಿಯೊಂದಿಗೆ ಬದುಕಬೇಕು. ಪ್ರಕೃತಿಯನ್ನು ಬಿಟ್ಟಾಗ ಅದು ನಮ್ಮ ಕೈಬಿಡುತ್ತದೆ.  ರೋಗ ಅಟ್ಟಿಸಿಕೊಂಡು ಬರುತ್ತದೆ - ಜಯಕ್ಕ ಆಗಾಗ್ಗೆ ಹೇಳುವ ಮಾತನ್ನು ಅಕ್ಷರಶಃ ಪಾಲಿಸಿದ್ದಾರೆ. ‘ಹಿಂದೆಲ್ಲಾ ತಂಬುಳಿ-ಕಷಾಯಗಳು ಬದುಕಿನಂಗ. ಈಗ ಅದಕ್ಕೂ ಕ್ಲಾಸ್ ಬೇಕಾಗಿದೆ. ಅತ್ತೆಯಿಂದ ಸೊಸೆಗೆ, ಅಮ್ಮನಿಂದ ಮಗಳಿಗೆ ಪಾರಂಪರಿಕ ಜ್ಞಾನ ಬಾರದೇ ಇರುವುದೂ ಒಂದು ಕಾರಣ - ಅವರ ಮಾತು ಒಗಟಾಗಿ ಕಂಡಿರಬಹುದು, ಅದರೆ ಸತ್ಯ ಅಲ್ವಾ.
       ಬಾಣಂತಿ ಔಷಧಿಯಲ್ಲಿ ಜಯಕ್ಕ ಸ್ಟ್ಪೆಷಲಿಸ್ಟ್ ಆಗಿದ್ದರು. ಕಷಾಯದ ಹುಡಿ, ಸಾರು-ಸಾಂಬಾರು ಹುಡಿ, ತಲೆಹೊಟ್ಟಿಗೆ ಎಣ್ಣೆ, ಬಾಣಂತಿಗೆ ಮೈಗೆ ಹಚ್ಚಲು ಎಣ್ಣೆ, ಮಕ್ಕಳ ಆಹಾರಮಣ್ಣಿಹುಡಿ, ಮಕ್ಕಳ ಮೈಗೆ ಹಚ್ಚುವ ಎಣ್ಣೆ, ಮೆಂತೆ ಹಿಟ್ಟು, ಪುಳಿಯೋಗರೆ, ಮಾಲ್ಟ್ ಹುಡಿ, ಚಟ್ನಿ ಹುಡಿ - ತಾವೇ ಸ್ವತಃ ಮಾಡಿ, ಆಸಕ್ತರಿಗೆ ನೀಡುತ್ತಾರೆ. ‘ಆರೋಗ್ಯ ಹದಗೆಡುತ್ತಿದೆ. ಇನ್ನಿನ್ನು ತಯಾರಿಸಲು ಕಷ್ಟ. ಎಷ್ಟೋ ಮಂದಿ ಕೇಳುತ್ತಾರೆ. ಇಲ್ಲವೆನ್ನಲಾಗುವುದಿಲ್ಲ ಅಂದಿನ ಜಯಕ್ಕನ ಮಾತಿನಲ್ಲಿ ವಿಷಾದವಿತ್ತು. ವಿಷಾದದ ಹಿಂದೆತಾಯಿ ಮನಸ್ಸು ಇದ್ದಿರುವುದನ್ನು ಗಮನಿಸಿದ್ದೇನೆ. 
       ಹೊರಡುವಾಗ ಜಯಕ್ಕ ಅವರ ತಮ್ಮ ಗೋಪಾಲಕೃಷ್ಣ ಕೈಗೆ ನೆಲಗಡಲೆ ಸುರುವಿ, ‘ತಿನ್ನುತ್ತಾ ಹೋಗಿ ಎಂದರೆ, ಜಯಕ್ಕಜತೆಗೆ ಬೆಲ್ಲ ಸೇರಿಸಿಕೊಳ್ಳಿ. ಕಡಲೆಯ ಪಿತ್ಥವನ್ನು ಬೆಲ್ಲ ಸರಿದೂಗಿಸುತ್ತದೆ ಎನ್ನುತ್ತಾ ಬೆಲ್ಲ ನೀಡಿದರು. ದೈತೋಟ ಕುಟುಂಬದ ಅಡವಿ ಪ್ರೀತಿ-ಆರೋಗ್ಯ ಕಾಳಜಿಯ ಮುಂದೆ ಮಾತು ಮೌನವಾಗಿತ್ತು.
       ತಾವು ಕಹಿಯುಂಡರೂ, ಇತರರ ಬಾಯಿ ಸಿಹಿಯಾಗಿರಬೇಕೆಂದು ಬಯಸುವ ಮನಸ್ಸು ಇದೆಯಲ್ಲಾ.....ಇದು ಎಲ್ಲರಿಗೂ ಬರುವುದಿಲ್ಲ! ಊಟದ ಬಟ್ಟಲಿನಲ್ಲಿ ಅಡವಿ ಪ್ರೀತಿ ಮತ್ತು ಆರೋಗ್ಯವನ್ನು ಕಂಡ ಇವರÀ ಕೈಗುಣದಿಂದ ನಗುನಗುತ್ತಾ ಬಾಳುವೆ ಮಾಡುವ ಕುಟುಂಬಗಳು ಅಸಂಖ್ಯ.
       ವೆಂಕಟರಾಮ ದೈತೋಟ ಜಯಲಕ್ಷ್ಮೀ ಇಬ್ಬರೂ ದೂರವಾಗಿದ್ದಾರೆ. ಮೂಲಿಕಾ ಜ್ಞಾನದ ವಿಶ್ವಕೋಶವು ಮೌನವಾಯಿತು.

(ಚಿತ್ರ ವಿವರ : ಆಹಾರ-ಆರೋಗ್ಯದ ಅರಿವಿನ ಬಿತ್ತನೆ ಮಾಡುತ್ತಿದ್ದ ದೈತೋಟ ದಂಪತಿ)

0 comments:

Post a Comment