Monday, September 16, 2019

ಇದು ಕಾಫಿಯಲ್ಲ, ‘ಜಾಫಿ’

       ಹಲಸಿನ ಮೇಳ ಇರುವಲ್ಲೆಲ್ಲಾ ಸಖರಾಯಪಟ್ಟಣದ ಶಿವಣ್ಣ ಇದ್ದೇ ಇರುತ್ತಾರೆ! ಅವರು ತಯಾರಿಸಿದ ಹಲಸಿನ ಬೀಜದಜಾಫಿ ಮಳಿಗೆಯು ಜನವಿಲ್ಲದೆ ಭಣಗುಟ್ಟುವುದಿಲ್ಲ! ಅಕಸ್ಮಾತ್ ಮೇಳಕ್ಕೆ ಬರಲು ಅನನುಕೂಲವಾದರೆ ಸಂಘಟಕರಲ್ಲಿ ವಿನಂತಿಸಿ ತನ್ನ ಉತ್ಪನ್ನವನ್ನು ಕಳುಹಿಸಿಕೊಡುತ್ತಾರೆ.
       ಈಚೆಗೆ ಮೈಸೂರಿನಲ್ಲಿ ಜರುಗಿದ ಹಲಸಿನ ಮೇಳದಲ್ಲೂ ಶಿವಣ್ಣರ ಉತ್ಪನ್ನವಿತ್ತು. ಜಾಫಿಯನ್ನು ಸವಿದ ಮೇಳದ ಸಂಘಟಕ ಕೃಷ್ಣಪ್ರಸಾದ್, “ಚೆನ್ನಾಗಿದೆ, ಹಲಸಿನ ಬೀಜದ್ದು ಅಂತ ಗೊತ್ತಾಗೋದೇ ಇಲ್ಲ ಎಂದರು. ಅನೇಕರುಕಾಫಿ ಕೇಳಿದ್ದೇವೆ, ಸವಿದಿದ್ದೇವೆ, ಜಾಫಿ ಇದೇ ಮೊದಲು.” ಎಂಬಂತಹ ಹಿಮ್ಮಾಹಿತಿ.
          ಪಿಲಿಪೈನ್ಸ್ನಲ್ಲಿ ಜಾಫಿ ಮಾಡಿ ಬಳಸುತ್ತಾರೆಂದು ಶಿವಣ್ಣರಿಗೆ ಗೊತ್ತಿತ್ತು. ನಮಗೂ ಯಾಕೆ ಸಾಧ್ಯವಿಲ್ಲ? ವಿಚಾರ ತಲೆಗೆ ಹೊಕ್ಕಿತ್ತು. ‘ಮಾಡಿ-ಬೇಡಿಗಳ ಅವಿರತ ಶ್ರಮ. ಸಿದ್ಧ ಫಾರ್ಮುಲಾ ಗೊತ್ತಿರಲಿಲ್ಲ. ಮೂರ್ನಾಲ್ಕು ವರುಷಗಳಲ್ಲಿ ಪಾಕ ಕೈವಶ. ಸ್ವತಃ ಬಳಕೆ. ಸ್ನೇಹಿತರಿಗೂ ಪೇಯ ಕುಡಿಸಿದರು.
           ಒಮ್ಮೆ ಸವಿದವರು ಮತ್ತೊಮ್ಮೆ ಸವಿದು, ಜಾಫಿಯ ಪ್ಯಾಕೆಟನ್ನು ಮನೆಗೊಯ್ಯುವಷ್ಟು ಕಾಡುತ್ತದೆ. ಹಲಸಿನ ಬೀಜದಿಂದ ತಯಾರಿಸಿದ ಪೌಷ್ಠಿಕಾಂಶಭರಿತ ಪೇಯ. ಹಾಲಿನೊಂದಿಗೆ ಜಾಫಿ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಬೇಕಾದಷ್ಟು ಸಕ್ಕರೆಯನ್ನು ಕದಡಿಕೊಂಡರೆಜಾಫಿ ರೆಡಿ. ಬಿಸಿಬಿಸಿ ಪೇಯದ ಹೀರುವಿಕೆಯಿಂದ ಇಮ್ಮಡಿ ಉತ್ಸಾಹ!   
          ಹಲಸಿನ ಹಣ್ಣಿನ ಬೀಜಗಳನ್ನು ಒಣಗಿಸಿದ ಬಳಿಕ ಪುಡಿ ಮಾಡುವುದು ಜಾಫಿ ತಯಾರಿಯ ಮುಖ್ಯ ಕೆಲಸ. ಬೀಜಗಳು ಬಿಸಿಲಿನಲ್ಲಿ ಒಣಗಿದರೆ ರುಚಿ ಹೆಚ್ಚು. ಡ್ರೈಯರ್ನಲ್ಲೂ ಓಕೆ. ಕಟ್ಟಿಗೆ ಡ್ರೈಯರಿನಲ್ಲಿ ಕೆಲವೊಮ್ಮೆ ತಾಪ ಹೆಚ್ಚಾಗಿ ಬೀಜಗಳು ಕಪ್ಪಾಗುತ್ತವೆ. ಇಂತಹವನ್ನು ಪುಡಿ ಮಾಡಿದರೆ ರುಚಿ ಕೆಟ್ಟುಹೋಗುತ್ತದೆ. ಬಣ್ಣವೂ ಮಾಸುತ್ತದೆ.
         ಹಲಸಿನ ಮೇಳಗಳಲ್ಲಿ ಶಿವಣ್ಣರ ಜಾಫಿಯನ್ನು ಹುಡುಕಿ ಬರುವ ಗ್ರಾಹಕರು ರೂಪುಗೊಂಡಿದ್ದಾರೆ. “ಬೇಕಾದಾಗ ಕುಡಿಯಬಹುದಾದ ಪೇಯವಿದು. ನಾನು ನಿರಂತರ ಬಳಸುತ್ತಿದ್ದೇನೆ. ಅದರ ರುಚಿಗೆ ಬಾಯಿ ಹೊಂದಿಕೊಂಡಿದೆ,” ಎನ್ನುತ್ತಾ, “ಮಲಬದ್ಧತೆ ಇರುವವರು ಜಾಫಿಯ ಪೇಯವನ್ನು ನಿರಂತರ ಸೇವಿಸಿದರೆ ಪರಿಣಾಮಕಾರಿ,” ಎನ್ನುತ್ತಾರೆ.
ಬಳಸಿದವರಿಂದ ಧನಾತ್ಮಕ ಪ್ರತಿಕ್ರಿಯೆ. ಜಾಫಿಯೊಂದಿಗೆ ಚಿಕೋರಿಯನ್ನೂ ಸೇರಿಸಿದರೆ ರುಚಿ ವರ್ಧಿಸಬಹುದೆನ್ನುವುದು ಕೆಲವರ ಅನುಭವ. ‘ಚಿಕೋರಿ ಸೇರಿಸಿದರೆ ಹಲಸಿನ ಬೀಜದ ರುಚಿ ಸಿಗಲಾರದು ಎನ್ನುವ ಆತಂಕ ಶಿವಣ್ಣರದು. ನೂರು ಗ್ರಾಮ್ ಪ್ಯಾಕೆಟಿಗೆ ಅರುವತ್ತು ರೂಪಾಯಿ, ಇನ್ನೂರು ಗ್ರಾಮಿನದ್ದಕ್ಕೆ ಒಂದುನೂರ ಹದಿನೈದು ಮತ್ತು ಆರ್ಧ ಕಿಲೋಗೆ ಇನ್ನೂರ ಎಪ್ಪತ್ತೈದು ರೂಪಾಯಿ ದರ.
       ಮಾರಾಟ ಮಳಿಗೆಗಳಲ್ಲಿ ಜಾಫಿ ಅಲಭ್ಯ. ಆನ್ ಲೈನ್ ಮತ್ತು ನೇರ ಖರೀದಿ. ಮಾರುಕಟ್ಟೆಗೆ ಉತ್ಪನ್ನವನ್ನು ಇಳಿಸಿದರೆ ಅನಿವಾರ್ಯವಾಗಿ ದರವನ್ನೂ ಏರಿಸಬೇಕಾಗುತ್ತದೆ. ವ್ಯಾಪಾರಿಗಳ ಕಮಿಶನ್, ಸಾಗಾಟ.. ಹೀಗೆ ಖರ್ಚೂ ಏರುತ್ತದೆ. ಕಳೆದ ವರುಷ ಐನೂರು ಕಿಲೋ ಉತ್ಪನ್ನ ತಯಾರಿಸಿದ್ದರು. ಆಕರ್ಷಕ ಪ್ಯಾಕೆಟ್.
ಕಾಫಿಯಲ್ಲಿ ಕೆಫಿನ್, ಚಹದಲ್ಲಿ ಟ್ಯಾನಿನ್ ಇದೆ. ಒಂದು ಮಾಹಿತಿಯಂತೆ -  ನೂರು ಗ್ರಾಮ್ ಹಲಸಿನ ಬೀಜದಲ್ಲಿ ಸುಮಾರು 98 ಕ್ಯಾಲೊರಿ, 0.4 ಗ್ರಾಮ್ ಕೊಬ್ಬು, 6.6 ಗ್ರಾಮ್ ಪ್ರೊಟೀನ್, 38.4 ಗ್ರಾಮ್ ಕಾರ್ಬೋಹೈಡ್ರೇಟ್, 1.5 ಗ್ರಾಮ್ ನಾರು ಇದೆ. ಎಂಟರಿಂದ ಹತ್ತು ಗ್ರಾಮ್ ಅಸ್ಕಾರ್ಬಿಕ್ ಆಮ್ಲ (ಸಿ ಜೀವಾತು) ಮತ್ತು ವಿಟಮಿನ್ ಬಿ1 ಮತ್ತು ಬಿ 12 ಒಳ್ಳೆಯ ಪ್ರಮಾಣದಲ್ಲಿದೆಯಂತೆ. ಹೀಗಾಗಿ ಜಾಫಿ ಪೌಷ್ಠಿಕಾಂಶ ಭರಿತ.
          ಮೇಳಗಳಲ್ಲಿ ಜಾಫಿಯನ್ನು ರುಚಿ ತೋರಿಸಿ ಗ್ರಾಹಕರ ಒಲವನ್ನು ಪಡೆಯುವುದು ಶಿವಣ್ಣರ ಜಾಣ್ಮೆ. ಜಾಫಿಯನ್ನು ಸವಿದ ಮಂಗಳೂರಿನ ಡಾ.ಮನೋಹರ ಉಪಾಧ್ಯ ಅವರ ಅನುಭವ ಚಹ ಕುಡಿದ ನಂತರ ದೇಹದ ಹೆಚ್ಚಿನ ನೀರಿನಂಶ ಹೋಗುವ ಪ್ರಕ್ರಿಯೆಗೆ iuಡಿeiಛಿ eಜಿಜಿeಛಿಣ ಅನ್ನುತ್ತಾರೆ. ಜಾಫಿ ಕುಡಿದ ನಂತರ ದೇಹವು ಬೆವರುವುದನ್ನು ಗಮನಿಸಿದ್ದೇನೆ. ಇದೊಂದು ಧನಾತ್ಮಕ ಗುಣ. ಹಲಸಿನ ಬೀಜದಲ್ಲಿ ದೇಹದ ಸಕ್ಕರೆ ಅಂಶವನ್ನು ನಿಯಂತ್ರಿಸುವ ವಿಲ್ಡಾಗ್ಲಿಪ್ಟಿನ್ (ಗಿiಟಜಚಿgiಠಿಣiಟಿ) ಎಂಬ ಔಷಧೀಯ ಗುಣವಿದೆ.”
         ಹಲಸಿಗೆ ಸಂಬಂಧಿಸಿದ ಸೆಮಿನಾರ್, ಗೋಷ್ಠಿಗಳು, ಮೇಳಗಳು ಎಲ್ಲಿದ್ದರೂ ತಮ್ಮ ತಂಡದೊಂದಿಗೆ ಅಥವಾ ವೈಯಕ್ತಿಕವಾಗಿ ಶಿವಣ್ಣ ಭಾಗಿ. ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ, ಶಿಬಿರಾರ್ಥಿಯಾಗಿಯೂ ಭಾಗವಹಿಸುತ್ತಲೇ ಇರುತ್ತಾರೆ. ಸಂದರ್ಭ ಸಿಕ್ಕಾಗಲೆಲ್ಲಾ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟು ಪ್ರಚಾರ ಮಾಡುತ್ತಾರೆ. ಕೃಷಿಕರ ಫೋನ್ ನಂಬ್ರಗಳನ್ನು ದಾಖಲಿಸಿಟ್ಟು ಸದಾ ಸಂಪರ್ಕದಲ್ಲಿರುತ್ತಾರೆ. ಹಲಸಿಗೆ ಸಂಬಂಧಿಸಿದ ಕೆಲಸಗಳಿಗೆ ಶಿವಣ್ಣರಿಗೆ ವಿಶ್ರಾಂತಿಯಿಲ್ಲ. ಉತ್ಪಾದನೆ ಮತ್ತು ಮಾರುಕಟ್ಟೆಗಾಗಿ ಸಖರಾಯಪಟ್ಟಣದಲ್ಲಿಅಂಕುರ ಆಹಾರ ಸಂಸ್ಕರಣ ಸಂಘ ಹುಟ್ಟುಹಾಕಿದ್ದಾರೆ.
         ಪುತ್ತೂರಿನಲ್ಲಿ ಹಲಸು ಮೇಳದ ವೇದಿಕೆಯಲ್ಲಿಹಲಸಿನ ಬೀಜವನ್ನು ಕೇಳುವವರಿಲ್ಲ, ಅದಕ್ಕೂ ದರವಿಲ್ಲ. ಇದ್ದರೂ ಚಿಕ್ಕಾಸು ಎಂದಾಗ ಶಿವಣ್ಣ ಎಲ್ಲಿದ್ದರೋ ಏನೋ, ‘”ಕಿಲೋಗೆ ನಲವತ್ತು ರೂಪಾಯಿಗೆ ಪರ್ಚೇಸ್ ಮಾಡ್ತೇನೆ. ಎಷ್ಟಿದ್ದರೂ ಬೇಕು.” ಎಂದಾಗ ವೇದಿಕೆಯ ಗಣ್ಯರು ದಂಗು. ಸಭಾಸದರ ಪ್ರಶಂಸೆ!

1 comments:

usha aland said...

where/how can i purchase jaaffee?

Post a Comment