Monday, September 16, 2019

‘ಬಡವರ ಹಣ್ಣು’ ಹಣೆಪಟ್ಟಿ ಶಾಶ್ವತವೇ?



                ಹಲಸಿನ ಮೇಳಗಳಿಗ ದಶಕದ ಸಂಭ್ರಮ. ಕೇರಳ, ಕರ್ನಾಟಕ ಅಲ್ಲದೆ ಗೋವಾ, ಮಹಾರಾಷ್ಟ್ರಗಳಲ್ಲೂ ಹಲಸಿನ ಉತ್ಸವಗಳು ನಡೆದಿವೆ. ಕೇರಳ ರಾಜ್ಯವುರಾಜ್ಯ ಫಲಎಂದು ಅಂಗೀಕರಿಸಿದೆ.
ಬಹುತೇಕ ವೇದಿಕೆಗಳಲ್ಲಿಇದು ಬಡವರ ಹಣ್ಣುಎನ್ನುವ ಸೊಲ್ಲು ಮಾತಿನ ಮಧ್ಯೆ ಹಾದು ಆಗಾಗ್ಗೆ ಹಾದು ಹೋಗುತ್ತಿದೆ. ಸರಿ, ಒಂದು ಕಾಲಘಟ್ಟದಲ್ಲಿ ಬಡವರು ಎಂದಲ್ಲ, ಉಳ್ಳವರಲ್ಲೂ ಆಹಾರ ಧಾನ್ಯಗಳು ಸಿಗದಿದ್ದಾಗ ಹಲಸು ಆಧರಿಸಿತ್ತು. ಹೊತ್ತಲ್ಲಿ ಬಡವರು, ಉಳ್ಳವರೆಂಬ ವ್ಯತ್ಯಾಸವೇ ಇದ್ದಿರಲಿಲ್ಲ. ಹೊಟ್ಟೆ ತುಂಬಬೇಕಷ್ಟೇ.
                ಸುಮಾರು ಮೂರು ಮೂರೂವರೆ ದಶಕದ ಬಳಿಕ ಹಲಸಿಗೆ ಮಾನ ಬಂದಿದೆ.  ಆಂದೋಳನಗಳು ಶುರುವಾಗಿವೆ. ಮಾಧ್ಯಮಗಳು ಬೆಳಕು ಚೆಲ್ಲಿದುವು. ಮೌಲ್ಯವರ್ಧಿತ ಉತ್ಪನ್ನಗಳಾಗುತ್ತಿವೆ. ಮನೆ ಉದ್ದಿಮೆಗಳ ಮೂಲಕ ಅರ್ಥಿಕ ಶಕ್ತಿಯನ್ನು ತುಂಬಿತು. ಕಂಪೆನಿಗಳು ರೂಪುಗೊಂಡುವು. ದೇಶ ಯಾಕೆ ವಿದೇಶಗಳಲ್ಲೂ ಹಲಸು ಸುದ್ದಿ ಮಾಡಿತು. ಹೀಗಿರುತ್ತಾಬಡವರ ಹಣ್ಣುಎನ್ನುವ ಹಣೆಪಟ್ಟಿ ಇನ್ನೂ ಇದೆ. ಹಾಗೆಂತ ಬಡವರು ಇಲ್ಲವೇ ಇಲ್ಲ ಎಂದಲ್ಲ.
                ನಿರ್ಲಕ್ಷಿತ ಹಣ್ಣು ಅಂಗಳದಿಂದ ಚಾವಡಿಗೇರಿದೆ. ಚಾವಡಿಯಿಂದ ಅಡುಗೆ ಮನೆಗೆ ಬಂದು ಪರಿಮಳ ಬೀರುತ್ತಿದೆ. ಚಿಕ್ಕ ಕೃಷಿ ಗುಂಪುಗಳಲ್ಲಿ ಹಲಸಿನ ಮಾತುಕತೆಗಳು ನಡೆಯುತ್ತಿವೆ. ಹಲಸಿನ ತೋಟಗಳು ಎದ್ದಿವೆ. ರುಚಿ ನೋಡಿ, ತಳಿ ಆಯ್ಕೆ ಪ್ರಕ್ರಿಯೆಗಳು ನಡೆದು ಸ್ಥಳೀಯ ಉತ್ತಮ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸಾರ್ವಜನಿಕವಾಗಿ ಹಗುರವಾಗಿ ಪರಿಗಣಿಸಿದ, ಮಾತನಾಡಿದ ಅನೇಕರ ಊಟದ ಬಟ್ಟಲನ್ನು ತುಂಬಿದೆ. ಇಷ್ಟಿದ್ದರೂ ಇದುಬಡವರ ಹಣ್ಣು!
                ಪುತ್ತೂರಿನ ಹಲಸು ಮೇಳದಲ್ಲಿ ಸಮಾರೋಪ ಭಾಷಣ ಮಾಡಿದ ನಿವೃತ್ತ ಅರಣ್ಯಾಧಿಕಾರಿ, ಹಲಸು ಪ್ರೇಮಿ ಗ್ಯಾಬ್ರಿಯಲ್ ವೇಗಸ್ ಹೇಳಿದರು, “ಅದೀಗ ಬಡವರ ಹಣ್ಣಲ್ಲ. ಹಣ್ಣೇ ಬಡತನವನ್ನು ಕಳಚಿಸಿಕೊಂಡಿದೆ ಎನ್ನುವಾಗ ನಾವಿನ್ನೂ ಅಲ್ಲೇ ಯಾಕೆ ಸುತ್ತುವುದು.” ತುಂಬಾ ಅರ್ಥವತ್ತಾದ ಮಾತು. ಬಡತನವನ್ನು ದೂರೀಕರಿಸಿದ, ಹೊಟ್ಟೆ ತಂಪು ಮಾಡಿದ, ಉಸಿರಿಗೆ ಶಕ್ತಿ ತುಂಬಿದ ಹಲಸು ನಿಜಾರ್ಥದಲ್ಲಿ ಕಲ್ಪವೃಕ್ಷ. ಮೊದಲೂ ಈಗಲೂ, ಮುಂದೆಯೂ. 
                ಹಲಸು ಈಗ ಸಂಭ್ರಮಿಸುತ್ತಿದೆ. ಎಲ್ಲಾ ಅಂತಸ್ತಿನ ಮಂದಿ ಭಾಗವಹಿಸುತ್ತಾರೆ. ಖಾದ್ಯಗಳನ್ನು ಸವಿಯುತ್ತಾರೆ. ಮನೆಮಂದಿಗೆ ರುಚಿ ತೋರಿಸಲು ಒಯ್ಯುತ್ತಾರೆ. ಜಾಗ ಇಲ್ಲದಿದ್ದರೂ ಒಂದಾದರೂ ಗಿಡ ಇರಲಿ ಎಂದು ಒಯ್ಯುವವರನ್ನು ನೋಡಿದ್ದೇನೆ. ಅವರೆಲ್ಲರ ಮನಸ್ಸಿನಲ್ಲಿ ಹಲಸು ಗೂಡು ಕಟ್ಟಿದೆ. ಇದು ಆಂದೋಳನ ತಂದಿತ್ತ ಫಲಶ್ರುತಿ. ಮೇಳಗಳು ಮಾಡಿದ ಮೋಡಿ. ಯಾವುದೇ ಆರ್ಥಿಕ ಅಂತಸ್ತು, ಪ್ರತಿಷ್ಠೆ, ಅಹಮಿಕೆಯಿಲ್ಲದೆ  ಮೇಳಗಳಲ್ಲಿ ತಿಂಡಿಗಳನ್ನು ಸವಿಯುತ್ತಾ, ಕೆಲವರು ಮಳಿಗೆ ತೆರೆದು ಉತ್ಪನ್ನಗಳನ್ನು ಹಲಸು ಪ್ರಿಯರ ಕೈಗಿಡುವ ಸುಮನಸರ ಸಂಖ್ಯೆ ವೃದ್ಧಿಸುತ್ತಿರುವುದು ಖುಷಿಯ ಸಂಗತಿ.
                ಹಲಸು ಮೇಳಗಳ ಸಂಭ್ರಮಗಳ ಹಿನ್ನೆಲೆಯಲ್ಲಿ ಹಲಸು ಕೃಷಿಕ ವರ್ಮುಡಿ ಶಿವಪ್ರಸಾದ್ ಬಹಳ ಪ್ರಾಕ್ಟಿಕಲ್ ಆದ ಮಾಹಿತಿಯೊಂದನ್ನು ನೀಡಿದರು. “ನಮ್ಮ ಮಧ್ಯೆ ಇರುವ ಶ್ರದ್ಧಾ ಕೇಂದ್ರಗಳಿಗೆ ಆಯಾಯ ಪ್ರದೇಶದ ಮೇಳಗಳ ಸಂಘಟಕರು ಐದೋ ಹತ್ತೋ ಗಿಡಗಳನ್ನು ನೀಡಿ. ಅವುಗಳನ್ನು ನೆಟ್ಟು ಒಂದಷ್ಟು ಕಾಲ ಆರೈಕೆಯನ್ನೂ ಮಾಡುವತ್ತ ನಿಗಾ ವಹಿಸಿ. ಕೆಲವು ವರುಷಗಳ ನಂತರ ಮರಗಳು ಫಲಗಳನ್ನು ಬಿಡುತ್ತವೆ. ಹೀಗೆ ಮಾಡುವುದರಿಂದ ಪರಸ್ಪರ ಬಂಧುತ್ವ, ಸಾಮರಸ್ಯ ಉಂಟಾಗುತ್ತದೆ. ಹಲಸಿನ ಗಿಡಗಳ ವೃದ್ಧಿಯೂ ಆಗುತ್ತದೆ. ಮೇಳದ ನೆನಪು ಶಾಶ್ವತವಾಗುತ್ತದೆ.”
                ಹದಿನೈದು ದಿವಸದ ಹಿಂದೆ ಮಂಗಳೂರಿನಲ್ಲಿಸಾವಯವ ಕೃಷಿಕರ ಬಳಗಆಯೋಜಿಸಿದ ಹಲಸು ಮೇಳದಲ್ಲಿ ಭಾಗವಹಿಸಿದ್ದೆ. ಹಲಸಿನ ಖಾದ್ಯಗಳಿಗೆ ಕೃತಕ ಬಣ್ಣ, ರಾಸಾಯನಿಕ, ಮೈದಾ ಮೊದಲಾದ ಒಳಸುರಿಗಳನ್ನು ಮಳಿಗೆದಾರರು ಸೇರಿಸದಂತೆ ಎಚ್ಚರ ವಹಿಸಿದ್ದರು. ಇದರಿಂದಾಗಿ ವಿಶ್ವಾಸವೃದ್ಧಿಯಾಗುತ್ತದೆ. ಪಟ್ಟಣಿಗರ ಉತ್ತಮ ಸ್ಪಂದನವಿತ್ತು. ಅಲ್ಲಿನ ಜನಸಂದಣಿಯನ್ನು ನೋಡಿದಾಗಹಲಸು ಹಬ್ಬವೂ ವೀಕೆಂಡ್ ಕಾರ್ಯಕ್ರಮಗಳಾಗುತ್ತವೋಎನ್ನುವ ಗುಮಾನಿ ಮೂಡದಿರಲಿಲ್ಲ. ವೀಕೆಂಡಿಗಾಗಿ ಬರುವವರಿಗೆ ಹಲಸಿನ ಹಬ್ಬವೂ ಒಂದೇ, ಜಾತ್ರೆಯೂ ಒಂದೇ. ಹಲಸನ್ನು ಮನದೊಳಗಿಟ್ಟುಕೊಂಡವರಿಗೆ ಅದು ಹಬ್ಬ.
            ವಿಜ್ಞಾನಿಗಳು ಮತ್ತು ಕೃಷಿಕರು ಜತೆಯಲ್ಲಿ ಕೆಲಸ ಮಾಡಿದರೆ ಮಾತ್ರ ತಳಿ ಸಂರಕ್ಷಣೆ ಸಾಧ್ಯ.” ಎನ್ನುವುದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಹೆಚ್ಆರ್) ನಿರ್ದೇಶಕ ದಿನೇಶ್ ಅವರ ಆಶಯ. ಮುಂದಿನ ವರುಷ ಐಐಹೆಚ್ಆರ್ ಪುತ್ತೂರಿನಲ್ಲಿ ತಾನು ಅಭಿವೃದ್ಧಿಪಡಿಸಿದ ಹಲಸು, ಮಾವು ತಳಿಗಳ ಪ್ರದರ್ಶನವನ್ನು ಏರ್ಪಡಿಸಲು ಆಸಕ್ತಿ ತೋರಿದೆ.
           ಒಂದು ಕೃಷಿಗೆ ಸಂಭ್ರಮದ ಟಚ್ ಸಿಕ್ಕರೆ ಅದು ಕೃಷಿಕರ, ಕೃಷಿಯನ್ನು ಪ್ರೀತಿಸುವವರ ಮನದೊಳಗೆ ಇಳಿಯುತ್ತದೆ ಎನ್ನುವುದಕ್ಕೆ ಮಾವು, ಹಲಸು, ತರಕಾರಿ ಮೇಳಗಳು ಸಾಕ್ಷಿ. ಎಲ್ಲಾ ಹಿನ್ನೆಲೆಯಲ್ಲಿ ಹಲಸನ್ನುಬಡವರ ಹಣ್ಣು ಎಂದು ಹಗುರವಾಗಿ ಹೇಳುವುದನ್ನು ಕಡಿಮೆ ಮಾಡೋಣ. ಆಗದೇ? ಯಾಕೆಂದರೆ ಅದು ಎಲ್ಲರ ಪಾಲಿಗೂ ಕಲ್ಪವೃಕ್ಷ.
(ಸಂದರ್ಭಿಕ ಚಿತ್ರ : ಕುಮಾರಸ್ವಾಮಿ, ಬೆನಕ)

0 comments:

Post a Comment