Monday, September 16, 2019

ಒಂದು ವಾಯಸದ ಸುತ್ತ ಹುಟ್ಟಿದ ಮರುಕ




                ಕಟಪಾಡಿಯಲ್ಲಿ ಕಾಗೆಯೊಂದು ಸುದ್ದಿ ಮಾಡಿತು! ಪ್ರಶಾಂತ ಚಿಕ್ಕ ಕಾಗೆ (ವಾಯಸ) ಮರಿಯನ್ನು ಆರೈಕೆ ಮಾಡಿ ಬೆಳೆಸಿದರು. ಅಪರಕ್ರಿಯೆ ಪ್ರಕ್ರಿಯೆಯಲ್ಲಿ ಬಲಿಯ ಅನ್ನವನ್ನು ಕಾಗೆ ತಿಂದರೆ ಮೃತರಿಗೆ ಸದ್ಗತಿ ಅಂತ ನಂಬುಗೆ. ಕಾಗೆಯನ್ನು ಅಂತಹ ಕ್ರಿಯೆಗಳಿಗೆ ಬಳಸಬಹುದೆನ್ನುವ ಅಥವಾ ಬಳಸುತ್ತಾರೆನ್ನುವ (ಸತ್ಯವೋ, ಸುಳ್ಳೋ) ಸುದ್ದಿಗಳು ನವಮಾಧ್ಯಮಗಳಲ್ಲಿ ಬಣ್ಣಬಣ್ಣವಾಗಿ ಹರಿದಾಡಿತು. ಅನೇಕರಿಗೆ ಪ್ರಾಣಿ ದಯೆ ಉಕ್ಕಿತು. ಯಥೇಷ್ಟ ಮಾಧ್ಯಮ ಬೆಳಕು ಬಿತ್ತು. ಇಲಾಖೆ ಚುರುಕಾಯಿತು. ದೂರದ ಕಾಡೊಳಗೆ ಕಾಗೆಯನ್ನು ಬಿಡುವಲ್ಲಿಗೆ ಇಲಾಖೆಯ ನಿಟ್ಟುಸಿರು! ಸರಿ, ಪ್ರಾಣಿ, ಪಕ್ಷಿಗಳ ಕುರಿತಾದ ಮೇಲಿನ ಕಾಳಜಿ, ಪ್ರೀತಿ, ದಯೆ ಶ್ಲಾಘ್ಯ. ವರ್ತಮಾನದಲ್ಲಿ ಅನಿವಾರ್ಯವೂ ಕೂಡಾ.
                ಪ್ರಾಣಿ, ಪಕ್ಷಿ ದಯೆಯ ಮನಸ್ಸುಗಳು ಒಂದು ಕ್ಷಣ ಇತ್ತ ಕತ್ತು ತಿರುಗಿಸುತ್ತೀರಾ? ಒಂದು ಕಾಲಘಟ್ಟದಲ್ಲಿ ಕಾಗೆಗಳ ಸಂತತಿ ಎಷ್ಟಿತ್ತು? ಈಗ ಎಷ್ಟಿದೆ? ಕಾಗೆ ಒಂದೇ ಅಲ್ಲ, ಪಕ್ಷಿ ಸಂಕುಲಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಕುಸಿದಿದೆ. ಮನೆಯ ಸೂರಲ್ಲಿ ಗೂಡುಕಟ್ಟಿ. ಮನೆಮಂದಿಯ ಮಧ್ಯೆ ಹಾರಾಡುತ್ತಿದ್ದ ಗುಬ್ಬಚ್ಚಿಗಳೂ ಕಾಣೆಯಾಗಿವೆ. ಮಳೆಗಾಲದಲ್ಲಿ ಕಪ್ಪೆಗಳ ಕೂಗು ಹಿಂದಿನಷ್ಟು ಕೇಳಿಸುತ್ತಿದೆಯಾ? ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಂಡಾಗ ನಿರುತ್ತರಿಗಳಾಗುತ್ತೇವೆ.
                ಬದುಕಿನಲ್ಲಿ ಕೀಟನಾಶಕಗಳ ಬಳಕೆ ವ್ಯಾಪಕವಾಗಿದೆ. ತಿನ್ನುವ ಅನ್ನದಿಂದ ಶುರುವಾಗಿ ಕಳೆ ನಾಶಕದ ತನಕ. ಬೇಕೋ ಬೇಡ್ವೋ ಅವ್ಯಾಹತವಾಗಿ ಸಿಂಪಡಣೆಯಾಗುವ ವಿಷದ ಪರಿಣಾಮ ಅನುಭವಿಸುತ್ತಿದ್ದೇವೆ. ಕೃಷಿಯಲ್ಲಿ ಕೀಟನಾಶಕಗಳ ಬಳಕೆ ಹೊಸತೇನಲ್ಲ. ಹಿಂದೆಲ್ಲಾ ಅನುಭವಿಗಳು ಡೋಸೇಜನ್ನು ನಿಗದಿ ಮಾಡುತ್ತಿದ್ದರು. ಡೋಸೇಜಿನಲ್ಲಿ ಹಾನಿಯಾದ ಉದಾಹರಣೆಗಳು ಕಡಿಮೆ. ಈಗ ಹಾಗಲ್ಲವಲ್ಲ. ಡೋಸೇಜ್ ನಿರ್ಧಾರ ಮಾಡುವವರಿಗೆ ಪರಿಸರ, ಆರೋಗ್ಯದ ಕಾಳಜಿ ಹುಟ್ಟುವುದಿಲ್ಲ.
                ಕೀಟನಾಶಕಗಳ ದುಷ್ಪರಿಣಾಮಗಳಿಂದ ಮನುಷ್ಯನೇ ಸಾಯುತ್ತಿದ್ದಾನೆ. ಆಸ್ಪತ್ರೆಗಳಿಗೆ ಹೋದರೆ ಒಂದು ಯಾಕೆ, ಸಹಸ್ರಾರು ಉದಾಹರಣೆಗಳು ಕಣ್ಣಮುಂದೆ ರಾಚುತ್ತದೆ. ಇನ್ನು ಪ್ರಾಣಿ, ಪಕ್ಷಿ, ಕೀಟಗಳ ಪಾಡು ಹೇಳಬೇಕಾಗಿಲ್ಲ. ಒಂದು ಕಾಗೆಗಾಗಿ ಮಿಡಿಯುವ ಮನಸ್ಸು ಇಡೀ ಸಂಕುಲ ನಾಶದಲ್ಲಿರುವಾಗ ಮಿಡಿಯಬೇಕಾಗಿತ್ತು. ‘ದಯೆಎನ್ನುವುದು ಉಳಿವಿನಹಿನ್ನೆಲೆಯಲ್ಲೂ ಯೋಚಿಸಬೇಕು. ಹಾಗೆ ಯೋಚಿಸದೇ ಇದ್ದರೆದಯಾ ಮನಸ್ಸುಸ್ವ-ಘೋಷಿಸಿಕೊಳ್ಳುವ ಉಪಾಧಿಯಾದೀತಷ್ಟೇ. ಪರಿಸರವನ್ನು ವಿಷದಿಂದ ಮುಕ್ತಿಗೊಳಿಸುವದಯೆನಮ್ಮೊಳಗೆ ಮೂಡಿದಾಗಪ್ರಾಣಿದಯೆಗೆ ಗೌರವ.
                ರಾಜಸ್ಥಾನದ ಲಪೋಡಿಯಾದಲ್ಲಿ ಪ್ರಾಣಿ, ಪಕ್ಷಿಗಳದಯೆಯು ಬದುಕಿನೊಳಗೆ ಮಿಳಿತಗೊಂಡಿದೆ. ಹಕ್ಕಿಗಳಿಗೆ ಕಲ್ಲು ಎಸೆಯಬಾರದು. ಎಸೆದುದು ಗೊತ್ತಾದರೆ ಐನೂರು ರೂಪಾಯಿ ದಂಡ. ಹಕ್ಕಿಗಳ ಹೊಟ್ಟೆತಂಪಿಗಾಗಿ ಅಲ್ಲಲ್ಲಿಧಾನ್ಯ ಬ್ಯಾಂಕ್ಗಳ ಸ್ಥಾಪನೆ. ಜಾನುವಾರು, ಹಕ್ಕಿಗಳಿಗೆ ಸುಲಭದಲ್ಲಿ ನೀರು ಸಿಗುವ ವ್ಯವಸ್ಥೆ. ಅಲ್ಲಿ ಮರ ಕಡಿಯುವುದು ಅಪರಾಧ. ಕಡಿದರೆ ಶಿಕ್ಷೆ ಖಚಿತ. ಒಂದು ಮರ ಕಡಿದರೆ ಎರಡು ಗಿಡ ನೆಟ್ಟು ಸಾಕುವ ಶಿಕ್ಷೆ. ಇವೆಲ್ಲಾದಯೆ ಪ್ರಾಮಾಣಿಕ ಪುಟಗಳು. ಇಲ್ಲಿಫೋಸ್ಇಲ್ಲ, ‘ಫೋಕಸ್ಇಲ್ಲ.
                ಇನ್ನೇನು ಗಣೇಶೋತ್ಸವ ಸಮೀಪಿಸುತ್ತಿದೆ. ಭರ್ಜರಿ ಆಚರಣೆಗೆ ಮನಸ್ಸು ಸಿದ್ಧವಾಗುತ್ತಿದೆ. ಕಳೆದ ವರುಷ  ಧಾರವಾಡದ ಸ್ನೇಹಿತರೊಬ್ಬರು ಸಂದೇಶ ಕಳುಹಿಸಿದ್ದರು. ಅಲ್ಲಿ ಗಣೇಶೋತ್ಸವದ ಮಂಟಪದ ಅಲಂಕಾರಕ್ಕೆ ಗೀಜಗನ ಗೂಡಿಗೆ ಬೇಡಿಕೆ. ಕಾಡೆಲ್ಲಾ ಅಲೆದು ಗೂಡಿನಲ್ಲಿದ್ದ ಮರಿಗಳನ್ನು, ಮೊಟ್ಟೆಗಳನ್ನು ಹೊಸಕಿ ಹಾಕಿ ಗೂಡನ್ನು ಆಯುವ ಒಂದಷ್ಟು ಮಂದಿಯಿದ್ದಾರಂತೆ. ಹೀಗೆ ಸಂಗ್ರಹಿಸಿದ ಗೂಡುಗಳು ದುಬಾರಿ ಕ್ರಯಕ್ಕೆ ಮಾರಿ ಹೋಗುತ್ತವೆ. ಸರಿ, ಇದನ್ನು ನಂಬುಗೆ ಅಂತ ಕರೆಯೋಣ. ಹೊಟ್ಟೆಪಾಡು ಎಂದು ಗ್ರಹಿಸೋಣ. ಆದರೆ ನಾಶವಾದ ಮೊಟ್ಟೆಗಳು, ಚಿಕ್ಕ ಮರಿಗಳಿಗೆ ದನಿ ಕೊಡುವವರು ಯಾರು? ‘ದಯೆಇಂತಹ ಸಂದರ್ಭದಲ್ಲಿ ದನಿಯೆತ್ತಬೇಕು. 
                ಮೂರ್ನಾಲ್ಕು ವರುಷದ ಹಿಂದೆ ಗೋವಾಕ್ಕೆ ಹೋಗಿದ್ದೆ. ತಾಜ್ ಹೋಟೆಲಿನ ಸನಿಹ ಸಹಸ್ರಾರು ಪಾರಿವಾಳಗಳು ಅವರಣದಲ್ಲಿ ಸ್ವಚ್ಛಂದವಾಗಿದ್ದುವು. ಒಂದಿಬ್ಬರು ರಕ್ಷಕ ಭಟರಿದ್ದರೂ ಕೂಡಾ. ಪ್ರವಾಸಿಗರು ಬಂದಾಗ ಅನೇಕರು ಕಾಳನ್ನು ಹಾಕುತ್ತಿದ್ದರು. ಇನ್ನೂ ಕೆಲವು ವಿಕಾರ ಮನಸಿಗರು ದೊಡ್ಡ ಗದ್ದಲ ಎಬ್ಬಿಸಿ, ಪಾರಿವಾಳಗಳಿಗೂ ಭಯ ಹುಟ್ಟಿಸಿ ಅವೆಲ್ಲಾ ಏಕಕಾಲಕ್ಕೆ ಭಯದಿಂದ ಹಾರುವುದನ್ನು ನೋಡಿ ಸಂತೋಷ ಪಡುತ್ತಿದ್ದರು. ಆಗ ಅಲ್ಲಿನ ರಕ್ಷಕ ಭಟ ಏನು ಹೇಳಿರಬಹುದು? “ಇವರಿಗೆಲ್ಲಾ ಹೃದಯ ಇಲ್ಲ. ದಯವಿಲ್ಲ, ದಾಕ್ಷಿಣ್ಯವಿಲ್ಲ. ಪಕ್ಷಿಪ್ರೀತಿ ಇಲ್ಲವೇ ಇಲ್ಲ.” ಹೌದು. ಮನುಷ್ಯರಾದ ನಮ್ಮಲ್ಲಿ ಹೃದಯವೇ ಇಲ್ಲದಿದ್ದ ಮೇಲೆ ಪಕ್ಷಿಗಳ ಕುರಿತಾದ ದಯೆ ಎಲ್ಲಿಂದ ಬಂದೀತು?
                ಸ್ವ-ಆಸಕ್ತಿಗಾಗಿ ಪಕ್ಷಿ, ನಾಯಿ, ಮೊಲ.. ಸಾಕುವವರಿದ್ದಾರೆ. ಮಾರಾಟ ಉದ್ದೇಶ ಅಲ್ಲೋ ಇಲ್ಲೋ ಬಿಟ್ಟರೆ ಮತ್ತೆಲ್ಲಾ ತಂತಮ್ಮ ಸಂತೋಷಕ್ಕಾಗಿ ಸಾಕುತ್ತಾರೆ. ಆಹಾರ, ನೀಡಿ ಸಲಹುತ್ತಾರೆ. ಮನೆಯ ಸದಸ್ಯರಂತೆ ಕಾಪಾಡುತ್ತಾರೆ. ಅವುಗಳು ಮೃತಪಟ್ಟಾಗ ರಕ್ತಸಂಬಂಧಿ ಮರಣಿಸಿದಂತೆ ಕಣ್ಣೀರು ಹಾಕುತ್ತಾರೆ. ಇವೆಲ್ಲಾ ಬಾಯಿಬಾರದ ಪ್ರಾಣಿ, ಪಕ್ಷಿಸಂಕುಲ ಮತ್ತು ಮನುಷ್ಯನ ಮಧ್ಯೆ ಅವ್ಯಕ್ತವಾಗಿ ಉಂಟಾಗುವದಯೆ, ಪ್ರೀತಿಯಅನುಸಂಧಾನ. ‘ದಯೆಎನ್ನುವುದು ಆಚರಣೆಯಲ್ಲಿ ಬಾರದೆ ಅದೊಂದುಸ್ವ-ಸ್ಥಾಪನೆಗಿರುವ ಟೂಲ್ಸ್ ಆಗಬಾರದು. ಒಂದು ಕಾಗೆಯ ಕುರಿತು ಹುಟ್ಟಿದ ಮರುಕ ಇದೆಯಲ್ಲಾ, ಅದು ಪ್ರಾಣಿ, ಪಕ್ಷಿ, ಕೀಟಗಳ ಸಂಸಾರಗಳ ರಕ್ಷಣೆಗೂ ಹಬ್ಬಲಿ.
(ಸಾಂದರ್ಭಿಕ ಚಿತ್ರ : ನೇಪಾಳದ ಪಶುಪತಿನಾಥ ದೇವಳದ ಸನಿಹದ ಪಾರಿವಾಳ ಸಂಸಾರ)

0 comments:

Post a Comment