Monday, September 16, 2019

ಜಂಕ್‍ಫುಡ್ ಪ್ರಿಯ ಮಾರ್ಜಾಲ!

        ಹೃದಯಿಗ ಜಯಶಂಕರ್ ಚಿತ್ರವೊಂದನ್ನು ಕಳುಹಿಸಿದರು. ಮೇಜಿನ ಮೇಲೆ ಮತ್ತು ಕೆಳಗೆ ಎರಡು ಬೆಕ್ಕುಗಳು. ಒಂದು ಸಣಕಲು, ಇನ್ನೊಂದು ಆರೋಗ್ಯದ್ದು. ಚಿತ್ರ ನೋಡಿದಾಗ ಯಾಕೆಂದು ಅರ್ಥವಾಗಲಿಲ್ಲ. ಅಳೆದು ಸುರಿದರೂ ಮನದಟ್ಟಾಗಲಿಲ್ಲ. ಅವರಲ್ಲೇ ಕೇಳಿದೆ.
         “ನಾನು ಸ್ನೇಹಿತನ ಮನೆಗೆ ಹೋಗಿದ್ದೆ. ಎರಡು ಬೆಕ್ಕುಗಳು ಗಮನ ಸೆಳೆದುವು. ಸ್ನೇಹಿತನ ಉತ್ತರ ಕೇಳಿ ನಕ್ಕು ಸುಸ್ತಾಗಿದ್ದೆ. ಗ್ರಹಿಸಿದಾಗ ನಗು ಧಾಂಗುಡಿಯಿಡುತ್ತದೆ. ಎರಡೂ ಒಂದೇ ತಾಯಿಯ ಕಂದಮ್ಮಗಳು. ಸಮಾನ ವಯಸ್ಸು. ಮೇಜಿನ ಮೇಲಿನ ಬೆಕ್ಕು ಜಂಕ್ಫುಡ್ ಪ್ರಿಯ. ಅದಿಲ್ಲದೆ ಊಟವಿಲ್ಲ. ಕೊಡದಿದ್ದರೆ ಮುಷ್ಕರ! ಕೆಳಗಿರುವುದಕ್ಕೆ ಜಂಕ್ಫುಡ್ಡಿನ ಪರಿಮಳ ಅಲರ್ಜಿ! ಅದಕ್ಕೆ ಗಂಜಿ, ಹಾಲು ಮಾತ್ರ ಆಹಾರ.” ಎಂದರು.
          ನಗುವ ಸರದಿ ನನ್ನದು. ಹಾಗೆಂತ ನಕ್ಕು ಖುಷಿ ಪಟ್ಟು ಮರೆಯುವ ವಿಚಾರವಲ್ಲ. ತುಂಬಾ ಗಂಭೀರವಾದ ವಿಚಾರ. ಬದಲಾದ ಕಾಲಘಟ್ಟ, ಜೀವನ ಶೈಲಿಯು ಸಿದ್ಧ ಆಹಾರಗಳತ್ತ ವಾಲುತ್ತಿರುವಾಗ ಬೆಕ್ಕಿನ ಉದಾಹರಣೆ ತುಂಬಾ ಹಗುರವಾಗಿ ಕಾಣಬಹುದು. ಆದರೆ ಕಂಪೆನಿ ಪ್ರಣೀತ ಜಂಕ್ಫುಡ್ ಯಾ ಕರಿದ ತಿಂಡಿಗಳು (ಸಿದ್ಧ ಆಹಾರ) ಮನುಷ್ಯನನ್ನು ಬಿಡಿ, ಪ್ರಾಣಿಗಳ ಬದುಕಿಗೂ ಹೇಗೆ ಎರವಾಗುತ್ತದೆ ಎನ್ನುವುದನ್ನು ಚಿತ್ರ ಬಿಂಬಿಸುತ್ತದೆ.
         ಮಕ್ಕಳಿಗೆ ಸಿದ್ಧ ಆಹಾರಗಳು (ಕುರುಕುರೆ, ಲೇಸ್, ಸ್ಮಿಥ್ಸ್, ಕ್ರನ್ಸಿಪ್ಸ್,...) ತುಂಬಾ ಇಷ್ಟ. ಅವುಗಳ ಪೊಟ್ಟಣಗಳು ದೂರದಿಂದಲೇ ಆಕರ್ಷಿಸುತ್ತದೆ. ಒಮ್ಮೆ ತಿಂದರೆ ಮತ್ತಷ್ಟು ತಿನ್ನಬೇಕೆಂಬ ತುಡಿತ. ತಿಂಡಿಗಳಿಗೆ ಬಳಸುವ ಒಳಸುರಿಗಳೆಲ್ಲಾ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವುದು ದೃಢಪಟ್ಟಿವೆ. ಆದರೆ ತಯಾರಿ ಕಂಪೆನಿಗಳು ಮಾತ್ರ ದುಷ್ಪರಿಣಾಮ ಇಲ್ಲ ಎನ್ನುತ್ತಾ ಜಾಹೀರಾತುಗಳ ಮೂಲಕ ಚಿಣ್ಣರನ್ನು ಸೆಳೆಯುತ್ತಿರುವುದನ್ನು ಸ್ವೀಕರಿಸಿದ್ದೇವೆ. ಮೌನ ಸಮ್ಮತಿ ನೀಡಿದ್ದೇವೆ.
           ಎಲ್.ಕೆ.ಜಿ., ಯು.ಕೆ.ಜಿ.ಗೆ ಹೋಗುವ ಕಂದಮ್ಮಗಳ ಬುತ್ತಿಯನ್ನೊಮ್ಮೆ (ಕ್ಷಮಿಸಿ, ಬುತ್ತಿ ಅಂದರೆ ತಪ್ಪಾದಿತೇನೋ... ‘ಟಿಫಿನ್ ಬಾಕ್ಸ್!) ನೋಡಿ. ಬಹುತೇಕರಲ್ಲಿರುವುದು ಜಂಕ್ ಆಹಾರ! ಹಸಿವಿನ ಹೊತ್ತಲ್ಲಿ ಹೊಟ್ಟೆ ಸೇರುವುದು ದೇಹಕ್ಕೆ ಬೇಡದ ಆಹಾರಗಳು! ಜಂಕ್ ಆಹಾರದ ದುಷ್ಪರಿಣಾಮಗಳನ್ನು ಮಾಧ್ಯಮಗಳು ಬಿತ್ತರಿಸುತ್ತಲೇ ಇವೆ. ವೈದ್ಯರುಗಳು ಹೇಳುತ್ತಲೇ ಇದ್ದಾರೆ. ಜಾಲತಾಣದಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ. ಓದಿ ಮರೆತು ಬಿಡುವ ಜಾಣರಾದ ನಮ್ಮನ್ನು ಮತ್ತೆ ಮತ್ತೆ ಸೆಳೆಯುವುದು ಆಕರ್ಷಕ ಪ್ಯಾಕೆಟ್ಗಳು.
             ಈಚೆಗೆ ಸ್ನೇಹಿತರ ಕುಟುಂಬದೊಂದಿಗೆ ಅವರ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಇಬ್ಬರು ಮಕ್ಕಳು ಅಂಗಡಿ ಕಂಡಾಗಲೆಲ್ಲಾಕುರುಕುರೆಗಾಗಿಚೊರೆ (ಹಠ) ಮಾಡುತ್ತಿದ್ದರು. ಪ್ರಯಾಣದುದ್ದಕ್ಕೂ ಗಲಾಟೆಯೋ ಗಲಾಟೆ. ಕೊನೆಗೆ ಮಕ್ಕಳ ಅಪ್ಪ ಐದಾರು ಪ್ಯಾಕೆಟ್ಗಳನ್ನು ಕೈಗೆ ಕುಕ್ಕಿದಾಗ ಗಲಾಟೆಗೆ ವಿರಾಮ! ತಾಯಿಯ ಮಡಿಲಲ್ಲಿದ್ದ ಎಳೆ ಹಸುಗೂಸಿಗೂ ರುಚಿಯ ಸ್ಪರ್ಶ. “ನೋಡಿ ಸರ್, ಯಾವಾಗಲೂ ಹೀಗೆನೇ ಗಲಾಟೆ.” ಎನ್ನುವ ಸಮರ್ಥನೆ. ಹೌದು... ಕಂದಮ್ಮಗಳಿಗೆ ಇದರ ಪರಿಚಯ ಮಾಡಿಕೊಟ್ಟವರಾರು? ರುಚಿಯನ್ನು ಪರಿಚಯಿಸಿದವರಾರು? ಅತ್ತು ರಂಪಾಟ ಮಾಡಿದಾಗಲೆಲ್ಲಾ ಸಿದ್ಧ ಆಹಾರದ ಪ್ಯಾಕೆಟ್ ನೀಡಿದರೆ ನೀವೇನೋ ಬಚಾವ್. ಆದರೆ ಮಕ್ಕಳ ಆರೋಗ್ಯ?
ಮೂಲಿಕಾ ತಜ್ಞ ದಿ.ವೆಂಕಟರಾಮ ದೈತೋಟರೊಮ್ಮೆ ಎಚ್ಚರಿಸಿದ್ದರು, “ನಮ್ಮ ಮಕ್ಕಳ ಆಹಾರ ಪದ್ಧತಿಗಳನ್ನು ನೋಡಿದರೆ ಭಯವಾಗುತ್ತದೆ. ಹಿರಿಯರ ಹಳಿತಪ್ಪಿದ ಆಹಾರ ಅಭ್ಯಾಸದಿಂದ ಹುಟ್ಟಿನಿಂದಲೇ ಮಕ್ಕಳಿಗೆ ಜೀರ್ಣಾಂಗಗಳ ಕೊರತೆ. ಅವರನ್ನು ಪುಷ್ಟೀಕರಿಸಲು ಪೋಷಕ ಆಹಾರ ನೀಡಲು ಯಾಂತ್ರಿಕ ಲೆಕ್ಕಾಚಾರದ ಅಳವಡಿಕೆ. ಕಾರ್ಖಾನೆಯಲ್ಲಿ ತಯಾರಾದ ಯಂತ್ರಗಳಂತೆ ಮಗುವಿನ ತೂಕ (ವಯಸ್ಸು) ನೋಡಿ ಆಹಾರ ನೀಡಿಕೆ. ಆಹಾರ ತಜ್ಞರ ಲೆಕ್ಕಾಚಾರ ಮಗುವಿನ ಜೀರ್ಣಪ್ರಕ್ರಿಯೆಗೆ ಹೊಂದುವುದೇ? ಮಗುವಿನ ಜೀರ್ಣ ಹಾಗೂ ರಸಪ್ರಕ್ರಿಯೆ ಹೊಂದಿ ತಾನೇ ದೇಹದಲ್ಲಿ ಆಹಾರ ವಿನಿಯೋಗ? ಹೆಚ್ಚಿನ ಆಹಾರಕ್ಕೆ ಒತ್ತು ನೀಡಿದರೆ ಮಗುವಿಗೆ ಹೆಚ್ಚಾದ ಆಹಾರ ಅರೆಜೀರ್ಣವಾಗಿ ವಿಷಪ್ರಾಯವಾಗದೇ?”
          ಇನ್ನು ತರಕಾರಿಗಳತ್ತ ಗಮನ ಹರಿಸಿದರೆ ಅಲ್ಲೂ ರಾಸಾಯನಿಕಗಳ ಮೇಲಾಟ. ಮಾರುಕಟ್ಟೆಗೆ ಬರುವ ಬಹುತೇಕ ತರಕಾರಿಗಳು ರಾಸಾಯನಿಕ, ಕೀಟನಾಶಕಗಳಲ್ಲಿ ಮಿಂದೆದ್ದೇ ಬರುತ್ತಿರುವುದು ಸರ್ವವೇದ್ಯ. ಅಲ್ಲೋ ಇಲ್ಲೋ ಸಾವಯವ ಕ್ರಮದಲ್ಲಿ ಬೆಳೆದರೂ ರಾಸಾಯನಿಕಗಳ ಭರಾಟೆಯಲ್ಲಿ ಅವುಗಳನ್ನು ಗಮನಿಸುವವರಿಲ್ಲ! ಆದರೆ ಸಾವಯವ ತರಕಾರಿಯನ್ನೇ ಬಯಸಿ ಬರುವ ಗ್ರಾಹಕರ ಸಂಖ್ಯೆ ತೀರಾ ತೀರಾ ವಿರಳ. ಮಾರುವವರಿಗೂ, ಕೊಳ್ಳುವ ಅಂಗಡಿಯವರಿಗೂ ಉತ್ಪನ್ನ ಬೇಕಷ್ಟೆ. ಅದು ಸಾವಯವವೋ, ರಾಸಾಯನಿಕವೋ ಬೇಕಾಗಿಲ್ಲ!
          ರಖಂ ಆಗಿ ತರಕಾರಿಯನ್ನು ತಾವೇ ಬೆಳೆದು ಮಾರುವ ಕೃಷಿಕರಿದ್ದಾರೆ. ರಾಸಾಯನಿಕ, ಕೀಟನಾಶಕಗಳನ್ನು ಬಳಸಿ ತುಂಬಾ ಚೆನ್ನಾಗಿ, ಶ್ರದ್ಧೆಯಿಂದ ದುಡಿಯುವವರಿದ್ದಾರೆ. ಅವರ ತನುಶ್ರಮಕ್ಕೆ ಸಲಾಂ. ಆದರೆ ತಮ್ಮ ಸ್ವಂತ ಬಳಕೆಗೆ ಪ್ರತ್ಯೇಕವಾಗಿ ವಿಷ ಸಿಂಪಡಣೆಯ ಸ್ಪರ್ಶವಿಲ್ಲದೆ ಅಪ್ಪಟಸಾವಯವದಲ್ಲಿ ಬೆಳೆದು ಬಳಸುವವರನ್ನು ಕಂಡಿದ್ದೇನೆ. ಹಾಗಾದರೆ ಇವರ ತರಕಾರಿಯನ್ನು ಮಾರುಕಟ್ಟೆಯಿಂದ ಖರೀದಿಸಿದ ಗ್ರಾಹಕನ ಗತಿ! ಇಂತಹ ಮನಃಸ್ಥಿತಿಯವರೊಮ್ಮೆ ಸಾವಯವ ವಿಧಾನದಲ್ಲಿ ವರುಷಪೂರ್ತಿ ತರಕಾರಿ ಬೆಳೆದು ಮಾರುಕಟ್ಟೆ ರೂಪಿಸಿದ, ರೂಪಿಸುತ್ತಿರುವ ಕೃಷಿಕರನ್ನೊಮ್ಮೆ ಮಾತನಾಡಿಸಿದರೆ ಒಳ್ಳೆಯದೇನೋ?

0 comments:

Post a Comment