‘ಊರಿನ ತರಕಾರಿ ಬಂದಿದೆಯಾ?’ ಬಹುತೇಕ ತರಕಾರಿ ಅಂಗಡಿಗಳಲ್ಲಿ ಗ್ರಾಹಕರು ಕೇಳುವ ಮೊದಲ ಪ್ರಶ್ನೆ. ಕೆಲವು ತರಕಾರಿ ಅಂಗಡಿಗಂತೂ ನಿರ್ದಿಷ್ಟ ತರಕಾರಿಯನ್ನು ಅರಸಿ ಬರುವವರೂ ಇದ್ದಾರೆ. ಊರಿನದ್ದಾದರೆ ದರದಲ್ಲಿ ಚೌಕಾಶಿ ಮಾಡದೆ ತಮಗೆ ಬೇಕಾದ್ದಕ್ಕಿಂತ ಒಂದರ್ಧ ಕಿಲೋ ಹೆಚ್ಚೇ ಒಯ್ಯುತ್ತಾರೆ. ಮುಂದಿನ ವಾರಕ್ಕೆ ಮೊದಲೇ ಒಂದಷ್ಟು ಬುಕ್ ಮಾಡಿಡುವುದೂ ಇಲ್ಲದಿಲ್ಲ.
ರಾಸಾಯನಿಕ ಗೊಬ್ಬರ ಹಾಕದೆ, ವಿಷ ಸಿಂಪಡಿಸದೆ ತರಕಾರಿಯನ್ನು ಬೆಳೆಯಲು ಸಾಧ್ಯವೇ ಇಲ್ಲ ಎನ್ನುವುದು ಒಂದು ಸಮರ್ಥನೆ. ಇವುಗಳ ಮಧ್ಯೆ ಸದ್ದಿಲ್ಲದೆ ಯಾವುದೇ ರಾಸಾಯನಿಕ ಒಳಸುರಿಗಳನ್ನು ಬಳಸದೆ, ದೇಸಿ ಜ್ಞಾನದ ವಿವಿಧ ಸಾವಯವ ಒಳಸುರಿಗಳನ್ನು ಸಿದ್ಧಪಡಿಸಿ ವರುಷಪೂರ್ತಿ ಬೆಳೆಯುವ ಕೃಷಿಕರ ಅನುಭವವೇ ಭಿನ್ನ. ಬೆಳ್ತಂಗಡಿಯ ಅಮೈ ದೇವರಾವ್, ಪೆರ್ಲದ ವರ್ಮುಡಿ ಶಿವಪ್ರಸಾದ್, ಪುತ್ತೂರು ಮರಿಕೆಯ ಎ.ಪಿ.ಸದಾಶಿವ, ಮುಳಿಯ ವೆಂಕಟಕೃಷ್ಣ ಶರ್ಮ, ರಘುರಾಮ ಹಾಸನಡ್ಕ, ಮೋಹನ ರೈ.. ಹೀಗೆ ಹಲವು ಮಂದಿ ಕೃಷಿಕರಿದ್ದಾರೆ.
“ನಾವು ಅಂಗಡಿಯಿಂದ ತರಕಾರಿ ತರುವುದೇ ಇಲ್ಲ. ನಮ್ಮ ಊಟಕ್ಕೆ ನಾವೇ ಬೆಳೆದ ತರಕಾರಿ. ಕೃಷಿಕನಾದವನು ಅಂಗಡಿಯಿಂದ ತರಕಾರಿ ತರುವುದೆಂದರೆ ನಮಗೆ ನಾವೇ ಅವಮಾನ ಮಾಡಿಕೊಂಡ ಹಾಗೆ,” ಹೀಗೆನ್ನುತ್ತಾರೆ ಅಮೈ ದೇವರಾವ್. ತರಕಾರಿ ಕೃಷಿಯಲ್ಲಿ ಇವರದ್ದೇ ಆದ ಕ್ರಮ, ವಿಧಾನ. ವರುಷಪೂರ್ತಿ ಒಂದಲ್ಲ ಒಂದು ತರಕಾರಿ. “ನಮ್ಮಲ್ಲಿ ಸೌತೆ, ಚೀನಿಕಾಯಿ, ಕುಂಬಳಕಾಯಿಗಳನ್ನು ಸ್ಟಾಕ್ ಮಾಡಿಡುತ್ತೇವೆ. ಮಳೆಗಾಲಕ್ಕೆ ಬೇಕಲ್ವಾ. ಆಟಿ ತಿಂಗಳಲ್ಲಿ – ಆಗಸ್ಟ್ - ಹಣ್ಣಾದ ಸೌತೆಕಾಯಿಯನ್ನು ಹೆರೆದು ಬೆಲ್ಲ ಹಾಕಿ ತಿಂದರೆ ಅಮೃತ ಸದೃಶವಾದ ರುಚಿ. ಆರೋಗ್ಯಕ್ಕೂ ಒಳ್ಳೆಯದು. ಸೌತೆ ಬೀಜದ ಸಾರು, ಸೌತೆ ಮತ್ತು ಹಲಸಿನ ಬೀಜ ಸೇರಿಸಿದ ಪಲ್ಯ ಇದ್ದರೆ ಒಂದೆರಡು ತುತ್ತು ಅನ್ನ ಹೆಚ್ಚೇ ಹೊಟ್ಟೆ ಸೇರುತ್ತದೆ” ಎನ್ನುತ್ತಾರೆ.
ಕಾಸರಗೋಡು ಜಿಲ್ಲೆಯ ಪೆರ್ಲ ಸನಿಹದ ವರ್ಮುಡಿ ಶಿವಪ್ರಸಾದ್ ಅವರ ಅನುಭವ ನೋಡಿ - ಮನೆಗೆಂದು ಸೀಮಿತವಾಗಿ ತರಕಾರಿ ಬೆಳೆಸುವ ಬದಲು ಮಾರುಕಟ್ಟೆಯ ಲಕ್ಷ್ಯವೂ ಇದ್ದರೆ ನಿರ್ವಹಣೆ ಸುಲಭ. ತರಕಾರಿಯಲ್ಲಿ ಸ್ವಾವಲಂಬಿಯೂ ಆಗಬಹುದು ಎನ್ನುತ್ತಾರೆ. ಮೂರು ದಶಕದ ಹಿಂದೆ ಇವರ ತೀರ್ಥರೂಪರಿಗೆ ಮಧುಮೇಹ ಬಾಧಿಸಿತು. ವೈದ್ಯರು ‘ಹೆಚ್ಚು ತರಕಾರಿ ತಿನ್ನಿ’ ಎಂದು ಸಲಹೆ ಮಾಡಿದ್ದರು. ಕೊಂಡು ತರುವುದಕ್ಕಿಂತ ತಾವೇ ಬೆಳೆಯುವ ಛಲ.. ಇವರಿಗೆ ವರುಷಪೂರ್ತಿ ತಾಜಾ, ನಿರ್ವಿಷ ಮನೆ ತರಕಾರಿ. “ಮನೆ ತರಕಾರಿ ತಿಂದು ಒಗ್ಗಿಹೋಗಿದೆ. ಹಾಗಾಗಿ ರಾಸಾಯನಿಕ ತರಕಾರಿಯ ಒಂದು ಹೋಳು ಬಾಯಿಗಿಟ್ಟರೂ ಗೊತ್ತಾಗಿಬಿಡುತ್ತದೆ” ಎಂದು ನಗುತ್ತಾರೆ.
ಮಂಗಳೂರಿನ ಹೆಸರಾಂತ ವೈದ್ಯರಾದ ಡಾ.ಕೆ.ಸುಂದರ ಭಟ್ ಕೆಲವು ವರುಷಗಳಿಂದ ಪ್ಲಾಸ್ಟಿಕ್ ಗ್ರೋಬ್ಯಾಗ್ ಮತ್ತಿತರ ಚೀಲಗಳಲ್ಲಿ ತಾರಸಿಯಲ್ಲಿ ತರಕಾರಿ ಕೃಷಿ ಮಾಡುತ್ತಿದ್ದಾರೆ. “ನಾನು ಕೃಷಿ ಕುಟುಂಬದಿಂದ ಬಂದವ. ಚಿಕ್ಕಂದಿನಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದೆ. ಹೀಗೆ ಹವ್ಯಾಸವಾಗಿ ಆರಂಭಿಸಿದ ತರಕಾರಿ ಕೃಷಿಯಲ್ಲಿ ಆಸಕ್ತಿ ಹೆಚ್ಚಾಗುತ್ತಾ ಬಂತು,” ಎನ್ನುತ್ತಾರೆ. ಇನ್ನೋರ್ವ ಸಾಧಕ ಕಲ್ಲಡ್ಕ ಕರಿಂಗಾಣದ ಡಾ.ಕೆ.ಎಸ್.ಕಾಮತ್ ಅನುಭವ, “ತರಕಾರಿ ಕೃಷಿಯು ಅವಲಂಬನಾ ಕೆಲಸವಲ್ಲ. ನಾವೇ ದುಡಿದರೆ ವರುಷಪೂರ್ತಿ ತಾಜಾ ತರಕಾರಿ ಪಡೆಯಬಹುದು.”
ನಿನ್ನೆಯಷ್ಟೇ ಕರಿಯಾಲದ ಕೃಷಿಕ ಶಿವರಾಮ ಭಟ್ಟರಲ್ಲಿಗೆ ಭೇಟಿ ನೀಡಿದ್ದೆ. ಅವರ ಸೊಸೆ ಉಮಾ ಪ್ರಸನ್ನ ತಾವು ಬ್ಯಾಗ್ಗಳಲ್ಲಿ ಬೆಳೆದ ಟೊಮೆಟೋ ಗಿಡಗಳನ್ನು ಖುಷಿಯಿಂದ ತೋರಿಸಿದರು. ಟೊಮೆಟೋ ಗೊಂಚಲಾಗಿ ಗಿಡದಲ್ಲಿ ತೂಗುತ್ತಿತ್ತು. ‘ಬದುಕಿನಲ್ಲಿ ಇದೆಲ್ಲಾ ಚಿಕ್ಕ ಚಿಕ್ಕ ಖುಷಿಗಳು’ ಎಂದು ಖುಷಿ ಪಟ್ಟರು ಉಮಾ. ಇಂದು ತರಕಾರಿ ಕೃಷಿಯ ಒಲವು ಎಲ್ಲೆಡೆ ಹಬ್ಬುತ್ತಿದೆ. ಮಹಾನಗರದಲ್ಲಿ ತಾರಸಿಯಲ್ಲಿ ತರಕಾರಿ, ಹಣ್ಣುಗಳನ್ನು ಬೆಳೆದು ತಾವು ತಿನ್ನುವುದಲ್ಲದೆ, ಆಸಕ್ತರಿಗೆ ಹಂಚುವಷ್ಟು ಆಸಕ್ತಿ ಕುದುರಿದೆ.
ಕೀಟನಾಶಗಳು ಆರೋಗ್ಯದ ಮೇಲೆ ಬೀರುವ ಪರಿಣಾಮದ ಅರಿವು ಮಾಧ್ಯಮಗಳ ಮೂಲಕ, ಅನುಭವಿಗಳ ಮೂಲಕ ತಿಳಿದುಕೊಂಡ ಅದೆಷ್ಟೋ ಮಂದಿ ಸಾವಯವದತ್ತ ವಾಲಿರುವುದು ಗಮನೀಯ, ಗಣನೀಯ. ಈ ಮಧ್ಯೆ ರಾಸಾಯನಿಕ, ಕೀಟನಾಶಕಗಳಿಂದ ಹಾನಿಯಿಲ್ಲ ಎನ್ನುವ ಉಡಾಫೆ ಪ್ರತಿಕ್ರಿಯೆಗಳು ನವಮಾಧ್ಯಮಗಳಲ್ಲಿ ಹರಿದಾಡುತ್ತಾ ಇರುತ್ತದೆ. ಅಂಗೈ ಹುಣ್ಣಿಗೆ ಕನ್ನಡಿ ಯಾಕೆಂದು ಅರ್ಥವಾಗುತ್ತಿಲ್ಲ.
ನಾವು ಬೆಳೆದ ತರಕಾರಿಯನ್ನು ನಾವೇ ತಿನ್ನಬೇಕು ಎನ್ನುವ ಮನಃಸ್ಥಿತಿಗೆ ಒಗ್ಗಿದ, ಅದರಲ್ಲೂ ಸಾವಯವದಲ್ಲೇ ಬೆಳೆದದ್ದಾಗಿರಬೇಕು ಎನ್ನುವ ಅಪ್ಪಟ ವಿಷರಹಿತ ಆಹಾರದ ಮೈಂಡ್ಸೆಟ್ ಹೊಂದಿದವರ ಸಂಖ್ಯೆ ವಿಸ್ತಾರವಾಗುತ್ತಿದೆ.
ಊರು ಸೂರು / 20-1-2019
1 comments:
Nice Artical
Post a Comment