Tuesday, December 13, 2011

ಛಾಯಾಗ್ರಾಹಕ ಯಜ್ಞರಿಗೆ 'ಜೀವಮಾನ ಸಾಧನೆ ಪ್ರಶಸ್ತಿ'


ಮಂಗಳೂರಿನ ಹಿರಿಯ ಛಾಯಾಗ್ರಾಹಕ ಯಜ್ಞೇಶ್ವರ ಆಚಾರ್ಯರಿಗೆ (ಯಜ್ಞ, ಮಂಗಳೂರು - Yajna, Mangalore ) ಛಾಯಾಚಿತ್ರ ಕ್ಷೇತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮದ ಸಾಧನೆಗಾಗಿ 'ಜೀವಮಾನ ಸಾಧನೆ ಪ್ರಶಸ್ತಿ' ಪ್ರಾಪ್ತವಾಗಿದೆ. ಬೆಂಗಳೂರಿನ ಟಿ.ಎಸ್.ಸತ್ಯನ್ ಮೆಮೋರಿಯಲ್ ಅವಾರ್ಡ್ ಫಾರ್ ಫೋಟೋಜರ್ನಲಿಸಂ ಸಂಸ್ಥೆಯು ಪ್ರಶಸ್ತಿಯನ್ನು ನೀಡುತ್ತಿದೆ.

ದಶಂಬರ 18ರಂದು ಬೆಳಿಗ್ಗೆ ಗಂಟೆ 11-15ಕ್ಕೆ ಬೆಂಗಳೂರಿನ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಯಜ್ಞರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ಸಂತಸದ ಸಮಯದಲ್ಲಿ ಯಜ್ಞರನ್ನು ಮಾತನಾಡಿಸುವ ಅವಕಾಶ ಪ್ರಾಪ್ತವಾಯಿತು. ಬದುಕಿನ ಹಿನ್ನೋಟವನ್ನು ಅವರೇ ಕಟ್ಟಿಕೊಡುತ್ತಾರೆ : -

ಶಾಲಾದಿನಗಳಿನ್ನೂ ನೆನಪಿದೆ. ಗೀಚುವುದು ನನ್ನ ಬಾಲ್ಯ ಚಟ. ಅದಕ್ಕೆ ರೂಪಕೊಟ್ಟವರು ಮಂಗಳೂರಿನ ಗಣಪತಿ ಹೈಸ್ಕೂಲ್ನ ರಾಧಾಕೃಷ್ಣ ಮಾಸ್ತರ್. ಶಾಲಾಮೆಟ್ಟಿಲು ಇಳಿದಾಗ, 'ನಾನು ದೊಡ್ಡ ಚಿತ್ರಕಲಾವಿದನಾಗಬೇಕು' ಕನಸು ಸೌಧಕಟ್ಟಿತ್ತು.

ಕೊಡಿಯಾಲ್ಬೈಲಿನ ಬಿ.ಜಿ.ಎಂ. ಫೈನ್ ಅಟ್ಸ್ ನ ಮೆಟ್ಟಲೇರಿದೆ. ಬಿ.ಜಿ.ಮಹಮ್ಮದ್ ಮಾಸ್ಟ್ರ ಶಿಷ್ಯನಾದೆ. ನಾಲ್ಕು ವರುಷ ಲಲಿತಕಲಾ ಕಲಿಕೆ. ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ರವರ ರೇಖೆಗಳು ನನ್ನನ್ನು ಸುತ್ತಿಕೊಂಡವು. ವ್ಯಂಗ್ಯಭಾವಚಿತ್ರ ರಚನೆ. ಆ ಕಾಲಕ್ಕೆ ಕನ್ನಾಡಿಗೆ ಅದರಲ್ಲೂ ದಕ್ಷಿಣ ಕನ್ನಡಕ್ಕೆ ಹೊಸತಿದು. ಪ್ರಶಂಸೆಗಳ ಮಹಾಪೂರ. 'ಏನಿದ್ದರೂ ಆರ್.ಕೆ.ಯವರ ದಾರಿ. ಅದರಲ್ಲಿ ನನ್ನದೇನಿದೆ ಕೊಡುಗೆ?' ಒಂದು ಹಂತದಲ್ಲಿ ಬಿಟ್ಟುಬಿಟ್ಟೆ.

ಚಿತ್ರಕಲಾವಿದನಾದರೆ ಹೊಟ್ಟೆ ತುಂಬಲು ಸಾಧ್ಯವಾ? ಕಲಾವಿದನಾಗಿ ಪ್ರಚಾರ ಪಡೆದು, ಜನರು ಚಿತ್ರಗಳನ್ನು ಒಪ್ಪಿ, ನಂತರವಷ್ಟೇ ಬೇಡಿಕೆ ಬಂದೀತು. ಎಷ್ಟೋ ವರುಷಗಳ ಕಾಯುವಿಕೆ ಬೇಡುವಂತಹ ಕೆಲಸ. ತಕ್ಷಣಕ್ಕೆ ಏನು?

ಕಲಿಕೆಯಲ್ಲಿದ್ದಾಗಲೇ ಬಿ.ಜಿ.ಮಾಸ್ಟ್ರು ಕ್ಯಾಮೆರಾದ ಪ್ರಥಮಾಕ್ಷರಗಳನ್ನು ಕಲಿಸಿದ್ದರು. ಇವರ ಮುಖಾಂತರ ಖ್ಯಾತ ಛಾಯಾಚಿತ್ರಗ್ರಾಹಕ ಆರ್.ಜೆ.ಪ್ರಭು ಪರಿಚಯ. ಅವರೊಂದಿಗೆ ನಾಲ್ಕೈದು ವರುಷ ದುಡಿತ. ಇತರರಿಗೆ ಗೌರವ ನೀಡುವ ಅವರ ಕ್ರಮ ನನ್ನಲ್ಲಿ ಮೋಡಿ ಮಾಡಿ, 'ಸ್ವಾಭಿಮಾನ'ದ ಬೀಜ ಬಿತ್ತಿತ್ತು. 'ನನ್ನ ಕಾಲಲ್ಲೇ ನಿಲ್ಲಬೇಕು' ಎಂಬ ಅವ್ಯಕ್ತ ಛಲ ಹುಟ್ಟಿಸಿತು. ಹೊಟ್ಟೆಪಾಡಿಗೆ ದಾರಿ ಸಿಕ್ತು.

1973 - ಕನಸಿನ 'ಸಪ್ನ ಸ್ಟುಡಿಯೋ' ಶುರು. ಐನೂರು ರೂಪಾಯಿ ಸಾಲ ಮಾಡಿ ಕ್ಯಾಮೆರಾ ಖರೀದಿ. ದಿವಸಕ್ಕೆ ಇಪ್ಪತ್ತು ರೂಪಾಯಿ ಬಾಡಿಗೆ ನೀಡಿ ಪ್ಲಾಶ್. ಕಪ್ಪು-ಬಿಳುಪು ಫೋಟೋ. ಸ್ವತಃ ಸಂಸ್ಕರಣೆ.

'ಚಿತ್ರಕಲೆ/ಫೋಟೋಗ್ರಫಿಯಲ್ಲಿ ಎಲ್ಲರಂತೆ ಇರಬಾರದು' - ನನ್ನ ಧ್ಯೇಯ. ಏನಾದರೂ ಪ್ರಯೋಗ ಮಾಡಬೇಕು - ಕಲಿಕೆಯಲ್ಲಿದ್ದಾಗಲೇ ಮನದಲ್ಲಿ ಅಚ್ಚುಮೂಡಿತ್ತು.

ಎಲ್ಲರೂ ಪ್ಲಾಶ್ ಬಳಸಿ ಫೋಟೋ ತೆಗೆಯುತ್ತಿದ್ದರೆ, ಸಿದ್ಧಬೆಳಕಿನಲ್ಲಿ ಚಿತ್ರ ತೆಗೆಯಲು ಶುರು ಮಾಡಿದೆ. ಚಿತ್ರಶಾಲೆಯಲ್ಲಿ ಕಲಿತ ಸೂಕ್ಷ್ಮಗಳು ಕ್ಯಾಮೆರಾ ಮೂಲಕ ಪ್ರಯೋಗಕ್ಕೆ ಒಡ್ಡಿಕೊಂಡವು. ಹೆಚ್ಚು ಶ್ರಮ ಬೇಡುವ ಕೆಲಸ. ಮೂಡುವ ಚಿತ್ರಗಳೆಲ್ಲಾ ಸಹಜ, ನೈಜ.

ಫೋಸ್ ಕೊಡುವ ಫೋಟೋಗಳಲ್ಲಿ ಇಷ್ಟವಿರಲಿಲ್ಲ. ಸಿದ್ಧ ಬೆಳಕಿನಲ್ಲಿ ಚಿತ್ರದ 'ಮೂಡ್' ತೋರಿಸುವುದು ಹೇಗೆ? ಈ ಬಗ್ಗೆ ಅಧ್ಯಯನ, ಆಲೋಚನೆ.

ಆಗ 'ಉದಯವಾಣಿ' ಸಂಪರ್ಕ. 'ಪ್ರೆಸ್ ಫೋಟೋಗ್ರಾಫರ್' ಆಗಿ ನೇಮಕ. ಪತ್ರಿಕೆಯ ಯಜಮಾನರ, ಸಂಪಾದಕ ಮಂಡಳಿಯವರ ಸಹಕಾರ. ನನ್ನ ಪ್ರಯೋಗಗಳಿಗೆ ಇನ್ನಷ್ಟು ಚಾಲನೆ ಸಿಕ್ಕಿತು. 'ಯಜ್ಞ' ಹೆಸರಿನಲ್ಲಿ ದಿನಂಪ್ರತಿ ಒಂದಲ್ಲ ಒಂದು ಚಿತ್ರ ಪ್ರಕಟವಾಗುತ್ತಿತ್ತು. ವಾರಕ್ಕೊಂದು 'ಕಲಾ ಲೇಪವಿದ್ದ ಚಿತ್ರ' ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟವಾಗುತ್ತಿತ್ತು. ಇದರಿಂದಾಗಿ ಓದುಗರಿಗೆ 'ಯಜ್ಞ' ಚಿರಪರಿಚಿತನಾದ!

ಪ್ರ್ರೆಸ್ನವ ತಾನೆ! ಜಿಲ್ಲೆಗೆ ಆಗಮಿಸುವ ಗಣ್ಯಾತಿಗಣ್ಯರನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಪ್ರಾಪ್ತವಾಯಿತು. ಮೊರಾರ್ಜಿ ದೇಸಾಯಿ ಹೊರತುಪಡಿಸಿ, ದೇಶ ಕಂಡ ಪ್ರಧಾನ ಮಂತ್ರಿಗಳನ್ನೆಲ್ಲಾ ಕ್ಯಾಮೆರಾದೊಳಗೆ ತುರುಕಿಸಿದ್ದೇನೆ! ನಿತ್ಯ ಜೀವನದ ಘಟನೆಗಳನ್ನು ಸೆರೆ ಹಿಡಿಯುವುದು ನನ್ನ ಮೆಚ್ಚಿನ ಹವ್ಯಾಸ.

ಅದರಂತೆ ಸಾಹಿತಿಗಳು ಕೂಡಾ. ಕನ್ನಾಡಿನ ಸಾಹಿತಿಗಳು ಫೋಟೋ ತೆಗೆಸಲು ಹುಡುಕಿ ಬರುತ್ತಿದ್ದಾಗ ಮುಜುಗರವಾಗುತ್ತಿತ್ತು! ಡಾ.ಶಿವರಾಮ ಕಾರಂತರ ಬಹುತೇಕ 'ಮೂಡ್'ಗಳನ್ನು ಸೆರೆಹಿಡಿದಿದ್ದೆ. ಒಮ್ಮೆ ಅವರ ಫೋಟೋ ತೆಗೆಯುತ್ತಿದ್ದಾಗ, 'ಅದರಲ್ಲಿ ರೀಲು ಉಂಟಾ ಮಾರಾಯ್ರೆ' ಅಂತ ನಕ್ಕರು. ಆ ನಗೆಯ ಫೋಟೋಗೆ ಕಾರಂತರೇ ಶಹಬ್ಬಾಸ್ ಕೊಟ್ಟರು!

ಆರಂಭದ ಏರು ಉತ್ಸಾಹದಲ್ಲಿ ಕ್ಯಾಮೆರಾ ಹೆಗಲಿಗೇರಿಸಿ, ಸುದ್ದಿಯ ಬೆನ್ನೆತ್ತಿ ತಿರುಗಾಡಿದುದನ್ನು ನೆನೆಸಿಕೊಂಡರೆ 'ಝುಂ' ಆಗುತ್ತದೆ. 'ಭಿನ್ನವಾಗಿ' ಹೇಗೆ ಕ್ಲಿಕ್ಕಿಸಬಹುದೆಂಬ ತುಡಿತಕ್ಕೆ ಪ್ರತೀ ಹಂತವೂ ನನಗೊಂದು ಕಲಿಕೆ. ಅಂದು ಡಾರ್ಕ್ ರೂಂನಲ್ಲಿ ಮಾಡಬಹುದಾದ ಕಪ್ಪುಬಿಳುಪು ಸಂಸ್ಕರಣೆ ಈಗ ಕಂಪ್ಯೂಟರ್ನಲ್ಲಾಗುತ್ತಿದೆ. ತಂತ್ರಜ್ಞಾನವನ್ನು ನಮಗೆ ಬೇಕಾದಂತೆ ದುಡಿಸಿಕೊಳ್ಳುವುದು ಕಾಲದ ಅನಿವಾರ್ಯತೆ.

ಬೇರೆ ಸಮಾರಂಭಗಳಲ್ಲಿ ಚಿತ್ರ ತೆಗೆಯುವಾಗ ಒಂದು ಮಾತು ಕಿವಿಯಲ್ಲಿ ಆಗಾಗ ರಿಂಗಣಿಸುತ್ತಾ ಇರುತ್ತದೆ - 'ಸಮಾರಂಭ ನನಗಾಗಿ ನಡೆಯುವುದಲ್ಲ. ನಡೆಯುತ್ತಿರುವುದನ್ನು ತೆಗೆಯುವುದು ನನ್ನ ಕೆಲಸ'.

ಕ್ಯಾಮೆರಾ ಬದುಕನ್ನು ನೀಡಿದೆ. ಕುಟುಂಬವನ್ನು ಆಧರಿಸಿದೆ. ಹಾಡುಗಾರನಾಗಲು ಸಂಗೀತ ಹೇಗೆ ಸಾಥಿಯೋ, ಫೋಟೋಗ್ರಾಫರ್ನಾಗಲು ಚಿತ್ರಕಲೆಯ ಜ್ಞಾನ ಮುಖ್ಯ. ಅವು ಪರಸ್ಪರ ಪೂರಕ. ಜತೆಗೆ ಪ್ರಯೋಗ, ಸಂಶೋಧನೆ ಕೂಡಾ. 'ಚಿತ್ರಕಲಾವಿನಾಗಬೇಕು' ಎಂದಿದ್ದ ಕನಸು, ಕ್ಯಾಮೆರಾ ಮೂಲಕ ನನಸಾಗಿದೆ.

2 comments:

PaLa said...

good to know...

harini said...

nanna caricature GURU...yajna sir avarige abhinandanegalu....karanthre olleya lekhana moodi bandide.yaava patrikege haakuva yochane ide....

Post a Comment