ಮೂಡುಬಿದಿರೆಯ ಡಾ.ಸೋನ್ಸರ ತೋಟದ ಹಲಸಿನ ಮರವೊಂದರಲ್ಲಿ ಆಗಸ್ಟ್ ಅಂತ್ಯಕ್ಕೆ ಬುಡದಿಂದ ತುದಿಯವರೆಗೆ ಗೊಂಚಲು ಕಾಯಿಗಳು. ಹಣ್ಣಿನ ಸೊಳೆಗಳು ಸಿಹಿ, ಸ್ವಾದ. 'ಸಮೃದ್ಧಿಗೆ ಇಪ್ಪತ್ತರ ಪ್ರಾಯವಲ್ವಾ. ಇದಕ್ಕೂ ವಿಂಶತಿಯ ಸಡಗರ' ಎಂದರು. 'ಸಮೃದ್ಧಿ'ಯ ಉದ್ಘಾಟನೆಯನ್ನು ಮಾಡಿದ್ದ ಸೋನ್ಸರಿಗಂದು ಹಲಸಿನ ಗಿಡವೊಂದನ್ನು ನೆನಪಿಗಾಗಿ ನೀಡಲಾಗಿತ್ತು. ಅದನ್ನವರು ಜೋಪಾನವಾಗಿ ಹಿತ್ತಿಲಲ್ಲಿ ಸಲಹಿದ್ದರು. ಈಗದು ಫಲ ನೀಡುತ್ತಿದೆ.
ಗಿಡಗೆಳೆತನ ಹವ್ಯಾಸವಿರುವ ಸಮಾನಾಸಕ್ತರ ಸಂಘಟನೆ - 'ಸಮೃದ್ಧಿ'. ಇದರ ಕಾರ್ಯಕ್ಷೇತ್ರ ಪುತ್ತೂರಾದರೂ ಹತ್ತೂರ ವ್ಯಾಪ್ತಿ. ಗಿಡ, ಬೀಜಗಳನ್ನು ಪರಸ್ಪರ ಹಂಚಿಕೊಳ್ಳುವುದು, ಅವುಗಳ ಸಂರಕ್ಷಣೆ ಅನುಭವಗಳ ವಿನಿಮಯ, ಸಮೃದ್ಧಿಯ ಹೂರಣ. ಫಲವಾಗಿ ಬಹುತೇಕ ತೋಟಗಳಲ್ಲಿ ಹೊಸ ನೆಂಟರು ನೆಲೆಯೂರಿದ್ದಾರೆ.
ಬೆಳ್ಳಿ ಬೆಳಕಿನ ಸಡಗರದಲ್ಲಿರುವ 'ಅಡಿಕೆ ಪತ್ರಿಕೆ'ಯ ಆರಂಭದ ಕಾಲ. ಹಣ್ಣುಗಳ, ತರಕಾರಿಗಳ ಮಾಹಿತಿಗಳು ಪ್ರಕಟ. 'ಅದು ನಮ್ಮಲ್ಲೂ ಇರಬೇಕು' ಎನ್ನುವ ಆಸಕ್ತ ಮಂದಿ. ಕೃಷಿ ಗುಂಗಿನ ಮಾತುಕತೆ, ಚರ್ಚೆ, ಸಮಾಲೋಚನೆ. ಹೊಸ ಸಂಘಟನೆಯನ್ನು ಹುಟ್ಟು ಹಾಕುವ ಯೋಜನೆ, ಯೋಚನೆ. ಫಲವಾಗಿ 'ಸಮೃದ್ಧಿ'ಯ ಜನ್ಮ. ಔಪಚಾರಿಕ ಕಲಾಪಗಳಿಗೆ ಆರಂಭದಲ್ಲೇ ಕೊಕ್. ಏನಿದ್ದರೂ ಗಿಡ, ಗೆಳೆತನದ ಸುತ್ತ ಕಾರ್ಯಸೂಚಿ.
ತಿಂಗಳಿಗೊಂದು ಸಭೆ. ಕಿರು ಮೊತ್ತವನ್ನು ಪಾವತಿಸಿದ ಸದಸ್ಯರು. ಸಭೆಗೆ ಬರುವಾಗ ಗಿಡ, ಬೀಜವನ್ನು ತರಬೇಕೆನ್ನುವುದು ಅಲಿಖಿತ ಶಿಸ್ತು. ಜತೆಗೆ ಮಾಹಿತಿಯೂ ಕೂಡ. 'ತಂತಮ್ಮ ಐಟಂನ್ನು ತೋರಿಸುವಲ್ಲಿ, ಹಂಚುವಲ್ಲಿ ಪೈಪೋಟಿ. ಯಾರು ಯಾವ ಗಿಡ ತಂದರು ಎನ್ನುವುದರಲ್ಲಿ ಆಸಕ್ತಿ, ಕುತೂಹಲ. ಒಂದು ಸಭೆ ಮುಗಿದರೆ ಸಾಕು, ಮುಂದಿನ ಸಭೆಗಾಗಿ ಕಾಯುವಂತಹ ವಾತಾವರಣವಿತ್ತು,' ಎಂದು ನೆನಪಿಸುತ್ತಾರೆ, ಆರಂಭದಿಂದಲೇ ಸಮೃದ್ಧಿಯೊಂದಿಗಿದ್ದ ಎಡಂಬಳೆ ಸತ್ಯನಾರಾಯಣ.
ಮಾವು, ಹಲಸಿಗೆ ಕಸಿ ಕಟ್ಟುವ ದಿನಗಳವು. ಒಂದು ಮಾವಿನ ಮರದಲ್ಲಿ ಹತ್ತಾರು ತಳಿಗಳ ಫಲಗಳು. ಒಂದು ಹಲಸಿನ ಮರದಲ್ಲಿ ಮೂರ್ನಾಲ್ಕು ತಳಿಯ ಹಣ್ಣುಗಳು. ಈ ಸುದ್ದಿ ಕೇಳುವಲ್ಲಿ, ಹೇಳುವಲ್ಲಿ ಧಾವಂತ. ಕಸಿ ಕಟ್ಟುವ ತರಬೇತಿಯ ಆಯೋಜನೆ. ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಂದ ವೈಜ್ಞಾನಿಕ ಮಾಹಿತಿ. ಬೋಧನೆ. ತಂತಮ್ಮ ತೋಟದ ಮರವೇರಿ 'ಟಾಪ್ವರ್ಕಿಂಗ್' ಕಸಿ ವಿಧಾನದ ಪ್ರಯೋಗಕ್ಕೆ ಮುಂದು. ಕುಂಬಾಡಿ ವೆಂಕಟ್ರಮಣ ಭಟ್, ಮಾಪಲತೋಟ ಸುಬ್ರಾಯ ಭಟ್, ಶ್ಯಾಮಸುಂದರ ಗೇರುಕಟ್ಟೆ.. ಮೊದಲಾದ ಅನುಭವಿಗಳ ಕಸಿ ಸಾಥ್.
ಸಮೃದ್ಧಿ ಹುಟ್ಟುವಾಗಲೇ ಜತೆಗಿದ್ದ ಕೀರ್ತಿಶೇಷ ಕಾಂತಿಲ ವೆಂಕಟ್ರಮಣ ಜೋಶಿಯವರ ಜೋಳಿಗೆಯಲ್ಲಂದು ತರಕಾರಿ ಬೀಜಗಳ ಖಜಾನೆ. ಸಭೆಗಳಿಗೆ ಬರುವಾಗಲೆಲ್ಲಾ ಹೊಸ ತರಕಾರಿ ಸುದ್ದಿಗಳು. ಯಥೇಷ್ಟ ತರಕಾರಿ ಬೀಜಗಳು. ಜತೆಗೆ ಬೆಳೆಯುವ ಮಾಹಿತಿ, ಅನುಸರಿಸಬೇಕಾದ ತಂತ್ರಗಳ ನೀಡಿಕೆ. ಮಾಡಬಹುದಾದ ಖಾದ್ಯಗಳ ರಸರುಚಿಗಳು. ಸಮೃದ್ಧಿ ಸದಸ್ಯರ ತೋಟವನ್ನೊಮ್ಮೆ ಸುತ್ತಿ ಬನ್ನಿ. 'ಇದು ಬನಾರಸ್ ನೆಲ್ಲಿ, ಇದು ಹುಣಸೆ, ಇದು ಕಾಂಚಿಕೇಳ ಬಾಳೆ, ಇದು ಪಾಲೂರು - ವನ್ ಹಲಸು' ಎಂಬ ಪರಿಚಯದ ಹಿಂದೆ ಸಮೃದ್ಧಿಯ ಸ್ಮರಣೆಯಿದೆ.
ಬನಾರಸ್ ನೆಲ್ಲಿ ಆಗಷ್ಟೇ ಸುದ್ದಿ ಮಾಡಿತ್ತು. ದೊಡ್ಡ ಗಾತ್ರದ ನೆಲ್ಲಿಕಾಯಿ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿತ್ತು. ಮಾತುಕತೆಗೆ ಸಿಕ್ಕಾಗಲೆಲ್ಲಾ ನೆಲ್ಲಿಯ ಗಾತ್ರ, ರುಚಿಯ ಸುತ್ತ ಗಿರಕಿ. ಆಗ ಸಮೃದ್ಧಿಯ ಕಾರ್ಯದರ್ಶಿ ಕೈಂತಜೆ ಶ್ರೀಧರ ಭಟ್. ಅವರು ಪ್ರವಾಸ ಹೋಗಿದ್ದಾಗ ಉತ್ತರಪ್ರದೇಶದ ಫೈಜಾಬಾದಿನಿಂದ ಎರಡು ಬನಾರಸ್ ನೆಲ್ಲಿ ಗಿಡಗಳನ್ನು ತಮಗಾಗಿ ತಂದಿದ್ದರು.
ಹಲವರಲ್ಲಿ ಆಸಕ್ತಿ ಚಿಗುರಿತು. ಬೇಡಿಕೆಯ ಪಟ್ಟಿ ಉದ್ದವಾಯಿತು. ಕೈಂತಜೆಯವರು ಪುನಃ ರೈಲೇರಿದರು. ಗಿಡಗಳು ಬಂದುವು. ವಿನಿಮಯವಾದುವು. ಗುಡ್ಡದಲ್ಲಿ ಆರೈಕೆ. ಸಮೃದ್ಧಿಯು ಅಂದು ಪ್ರಯತ್ನ ಮಾಡದೇ ಇರುತ್ತಿದ್ದರೆ ಬನಾರಸ್ ನೆಲ್ಲಿ ಜಿಲ್ಲೆಗೆ ಬರಲು ತಡವಾಗುತ್ತಿತ್ತು. ಅಂದು ಬನಾರಸ್ ನೆಲ್ಲಿಯಾದರೆ, ಮೊನ್ನೆಮೊನ್ನೆಯಷ್ಟೇ 'ಸಿಹಿ ನೇರಳೆ' ಗಿಡಗಳೂ ಬಂದುವು. ಅಂದು ರೈಲೇರಿದ ಕೈಂತಜೆಯವರು ಈ ಸಲವೂ ಆರೋಗ್ಯವನ್ನು ಮುಷ್ಠಿಯಲ್ಲಿ ಹಿಡಿದು ಗಿಡಗಳನ್ನು ತಂದಿರುವುದು ಶ್ಲಾಘ್ಯ.
ಮಂತುಹುಳಿ, ಅಮ್ಚಿಕಾಯಿ, ಹನುಮಫಲ, ಭೀಮಫಲ, ಮುಳ್ಳು ಸೀತಾಫಲ, ಹಾವು ಬದನೆ, ಬಂಟಕೇಪುಳು, ರುದ್ರಾಕ್ಷಿ, ಮೊಟ್ಟೆಮುಳ್ಳು ಸೌತೆ, ಕರಿಯಾಲ ಹರಿವೆ, ಸಿಹಿದಾರೆಹುಳಿ.. ಹೀಗೆ ಸಮೃದ್ಧಿಯ ಕಡತದ ಪಟ್ಟಿ ಉದ್ದುದ್ದ. ಬಾಂಗ್ಲಾ ಬಸಳೆ, ಸೆಲೋಶಿಯಾ ಅರ್ಜೆಂಟಿಯಾ ಎಲೆ ತರಕಾರಿ ಗಿಡ, ಸನ್ಸೆಟ್ ಸೋಲೋ ಪಪ್ಪಾಯಿಗಳು ಕಡಲನ್ನು ಹಾರಿ ಬಂದಿವೆ. 'ಹೀಗೆ ಬಂದವುಗಳಲ್ಲಿ ಶೇ. 50ರಷ್ಟು ಉಳಿದಿರಬಹುದಷ್ಟೇ' ಎನ್ನುತ್ತಾರೆ ಹಿರಿಯ ಸದಸ್ಯ ಡಾ.ಕೆ.ಎಸ್.ಕಾಮತ್.
ಸಸ್ಯ ವಿನಿಮಯದ ಜತೆಜತೆಗೆ ಪ್ರವಾಸ. ರೋಗ ಹತೋಟಿ, ಶ್ರಮ ಉಳಿಸಲು ಮಾಡಿದ ಜಾಣ್ಮೆಗಳು, ಸೋಲು ಗೆಲುವುಗಳ ಕಥನ, ನೋಡಿದ- ಕೇಳಿದ ಕೃಷಿ ವಿಚಾರಗಳ ವಿನಿಮಯ. ಹೊಸ ಕೃಷಿಕರ ಪರಿಚಯ. ಯಂತ್ರೋಪಕರಣಗಳ ಮಾಹಿತಿಗಳು. ಎರಡು ವರುಷದ ಹಿಂದೆ ಹವಾಯಿಯ ಹಣ್ಣು ಕೃಷಿಕ, ಪತ್ರಕರ್ತ ಕೆನ್ ಲವ್ ಕರಾವಳಿಗೆ ಬಂದಿದ್ದಾಗ ಅವರ ಅನುಭವ ಪ್ರಸ್ತುತಿಗೆ ವಿಶೇಷ ಸಂವಾದ ಕಾರ್ಯಕ್ರಮ. ಕನ್ನಾಡನ್ನು ಹವಾಯಿಗೆ ಬೆಸೆದ ಅಪರೂಪದ ಕ್ಷಣ.
ನಶಿಸಿಹೋಗುತ್ತಿರುವ ಸ್ಥಳೀಯ ಬೀಜಗಳನ್ನು, ಸಸ್ಯಸಂಪನ್ಮೂಲಗಳನ್ನು ಹುಡುಕಿ, ಸಂಗ್ರಹಿಸಿ ಬೆಳೆಸಿ, ಹಂಚಿ ಅಭಿವೃದ್ಧಿಪಡಿಸಲೋಸುಗ ಹುಟ್ಟಿಕೊಂಡ ಸಮೃದ್ಧಿಯ ಸಹಸಂಸ್ಥೆ 'ಸುಭಿಕ್ಷಾ ಬೀಜ ನಿಧಿ'. ಇದಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಅಡಿಕೆ ಪತ್ರಿಕೆಯ ಬೆಂಬಲ. ನೆಕ್ಕಿಲ ರಾಮಚಂದ್ರರಿಂದ ನಿರ್ವಹಣೆ.
ಹಣ ತರುವ ಬೆಳೆಗಳ ಬಗ್ಗೆ ಸಮೃದ್ಧಿ ಗಮನ ಹರಿಸುವುದಿಲ್ಲ. ಜಿಲ್ಲೆಯ ಹೊರಗಿನ ಗಿಡ, ಬೀಜಗಳನ್ನು ತಂದು ಬೆಳೆಸುವ ಆಸಕ್ತಿ ಹಲವರಲ್ಲಿ ಮೂಡಿದೆ. ಐವತ್ತಕ್ಕೂ ಮಿಕ್ಕಿದ ಸದಸ್ಯರು ಸಮೃದ್ಧಿಯ ಆಸ್ತಿ. ವೆನಿಲ್ಲಾಗೆ ಏರುದರವಿದ್ದಾಗ ನೂರು ಸದಸ್ಯರಾದುದೂ ಇದೆ! ಈಚೆಗೆ ಬೇರೆ ಜಿಲ್ಲೆಗಳ ಕೃಷಿಕರಲ್ಲಿಗೆ ಸಂವಹನ ಬೆಳೆದುಕೊಂಡಿದೆ. ಪ್ರವಾಸ ಹೋದಲ್ಲಿ ಅತಿಥೇಯರಿಗೆ ಹೊರೆಯಾಗದ ವ್ಯವಹಾರ. ಸಭೆಗಳಲ್ಲಿ ಅತಿಥಿಗಳಿಗೆ ಬೀಜ-ಸಸ್ಯಗಳ ಉಡುಗೊರೆ. ಕೆಲವೊಮ್ಮೆ ಸಮೃದ್ಧಿಯ ಗೌರವ ಸದಸ್ಯತನ ನೀಡಿಕೆ. ವರುಷಕ್ಕೊಮ್ಮೆ ದಶಂಬರ-ಜನವರಿಯಲ್ಲಿ ಮಹಾಸಭೆ. ಪ್ರತೀವರುಷವೂ ಪದಾಧಿಕಾರಿಗಳು ಬದಲಾಗುತ್ತಾರೆ. ಹೊಸಬರಿಗೆ ಅವಕಾಶ.
'ಬಹುಕಾಲದಿಂದ ಹುಡುಕುತ್ತಿದ್ದ ನೀರ್ಗುಜ್ಜೆ, ಕೆಂಪು ಅಲಸಂಡೆ ಸಮೃದ್ಧಿಯಿಂದ ಸಿಕ್ಕಿತು. ಹವಾಯಿಯ ಕೆನ್ ಲವ್ ನೀಡಿದ ಹಣ್ಣುಗಳ ಸೈನ್ ಬೋರ್ಡ್ ಜೋಪಾನವಾಗಿಟ್ಟಿದ್ದೇನೆ' ಎಂದು ಕೃಷಿಕ ಎಡ್ವರ್ಡ್ ರೆಬೆಲ್ಲೋ ತಾಕೊಡೆ ನೆನಪಿಸಿಕೊಂಡರೆ; 'ಕೃಷಿ ಕ್ಷೇತ್ರದ ಜ್ಞಾನ ಸಿಕ್ಕಿದೆ. ಕಾನುಕಲ್ಲಟೆ, ಗಾರ್ಸೀನಿಯಾ ಕೋವಾ, ಎಣ್ಣೆತಾಳೆಯಂತಹ ಅಪರೂಪದ ಗಿಡಗಳು ನನ್ನ ಸಂಗ್ರಹ ಸೇರಿವೆ' ಎಂದು ಖುಷಿ ಪಡುತ್ತಾರೆ ಅರುಣ್ ಕುಮಾರ್ ರೈ ಆನಾಜೆ. ಒಬ್ಬೊಬ್ಬ ಸದಸ್ಯನಲ್ಲೂ ಇಂತಹ ಅನುಭವದ ಬುತ್ತಿಯ ಹಿಂದೆ ಸಮೃದ್ಧಿಯ ಬೀಸುಹೆಜ್ಜೆಯಿದೆ.
ಸಮೃದ್ಧಿ ಹುಟ್ಟಿದಾಕ್ಷಣ ಸಾರಥ್ಯ ನೀಡಿದವರು ಸೇಡಿಯಾಪು ಜನಾರ್ದನ ಭಟ್ ಮತ್ತು ಪೆಲಪ್ಪಾರು ವೆಂಕಟ್ರಮಣ ಭಟ್. ಈಗಿನ ಅಧ್ಯಕ್ಷ ಸಿ.ವಿ.ಶಂಕರ್, ಕಾರ್ಯದರ್ಶಿ ಪಿ.ಆರ್.ಯಶೋಚಂದ್ರ. ಇಪ್ಪತ್ತು ವರುಷಗಳ ಕಾಲ ಸದ್ದಿಲ್ಲದೆ ಕೃಷಿ ಮತ್ತು ಕೃಷಿಕನ ಮಧ್ಯೆ ಕೊಂಡಿಯಾಗಿದ್ದ ಸಮೃದ್ಧಿಗೆ ಈಗ ವಿಂಶತಿಯ ಹೊಳಪು.
ಅಕ್ಟೋಬರ್ 12ರಂದು 'ವಿಂಶತಿ ಸಂತಸ'ವನ್ನು ಹಂಚಿಕೊಳ್ಳುವ ದಿವಸ. ಪುತ್ತೂರು ಸನಿಹದ ಸವಣೂರು ಆಶ್ವಿನಿ ಫಾರ್ಮಿನಲ್ಲಿ ಅರ್ಧ ದಿವಸದ ಖುಷಿಯ ಹೊತ್ತು. ಸಮೃದ್ಧಿಯನ್ನು ಉದ್ಘಾಟಿಸಿದ, ಹತ್ತರ ಸಂಭ್ರಮದಲ್ಲೂ ಬೆನ್ನುತಟ್ಟಿದ, ಇಪ್ಪತ್ತರ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಾರೆ, ಡಾ.ಎಲ್.ಸಿ.ಸೋನ್ಸ್.
ಅಂದು ಸ್ಮರಣಿಕೆಯಾಗಿ ನೀಡಿದ ಹಲಸಿನ ಮರವು ಫಲ ನೀಡುವಂತೆ, ಎಷ್ಟೋ ಕೃಷಿಕರ ತೋಟದಲ್ಲಿ ಸಮೃದ್ಧಿಯ ಬೀಜವು ಮೊಳಕೆಯೊಡೆದಿದೆ. ಅದರಲ್ಲಿ ಕೆಲವು ಫಲ ನೀಡುತ್ತಿವೆ. ಮತ್ತೆ ಕೆಲವು ಮಾಯವಾಗಿದೆ. ಅದನ್ನು ಮರಳಿ ತೋಟಕ್ಕೆ ಸೇರಿಸುವುದು ವಿಂಶತಿಯ ಕಾಣ್ಕೆಯಾದರೆ ಒಳ್ಳೆಯದಲ್ವಾ.
ಪ್ರತೀ ಊರಿನಲ್ಲೂ 'ಸಮೃದ್ಧಿ'ಯಂತಹ ಸಂಘಟನೆ ಬೇಕು. ಸಮಾನಾಸಕ್ತರ ದಂಡು ರೂಪುಗೊಳ್ಳಬೇಕು. ಆಗ ಅಲ್ಲಿನ ಸಂಪನ್ಮೂಲಗಳನ್ನು ಉಳಿಸಿ ಬೆಳೆಸಬಹುದು. ಇದಕ್ಕೆ ಸರಕಾರವನ್ನು ನೆಚ್ಚಿಕೊಳ್ಳಬೇಕಾಗಿಲ್ಲ. ನೆರೆಮನೆಯತ್ತ ನೋಡಬೇಕಾಗಿಲ್ಲ. ಬೇಕಾಗಿರುವುದು ಆಸಕ್ತಿ ಮತ್ತು ಒಳ್ಳೆಯ ಮನಸ್ಸು.
(ph: 82774 06558, 90081 22321)